Tuesday, July 7, 2009

ನನ್ನವರು


(ವೆಬ್ ಚಿತ್ರ)
ನನ್ನ ಕಣ್ಣಲ್ಲಿ ಉಕ್ಕಿರಲಿಲ್ಲ
ಇನ್ನೂ ನೀರು...
ಕಕ್ಕುಲತೆಯಿಂದ ಅಮ್ಮನೆಂದಳು
ಯಾಕೆ ಕಂದ..? ಏನುಬಿತ್ತು
ಕಣ್ಣಿಗೆ ಕಣ ಚೂರು..??
ತನ್ನ ಸೆರಗನ್ನು ಬಾಯಿಗಿಟ್ಟು
ಕಾವುಕೊಟ್ಟು ನನ್ನ ಕಣ್ಣಿಗೆ
ಒತ್ತಿ ಹಿತವಾಗಿ ಸವರಿದಳು
ಕಣ್ಣಗಲಿಸಿ ಊದಿದಳು...!!
ತಣ್ಣೀರಲಿ ತೊಳೆಯಲೇ ಎಂದೆಲ್ಲಾ
ಹುಲುಬಿದಳು..ತನ್ನ ಕಣ್ಣಿಗೇ
ಎನೋ ಬಿದ್ದಂತೆ
ನನ್ನ ಕಣ್ಣು
ತೇವವಾಗುವುದಕ್ಕೆ ಮೊದಲೇ
ಹನಿಗೂಡಿತ್ತು ಅವಳ ಕಣ್ಣು.
ಅವಳು ಮಮತೆಯ ಮಾತೆ.
ಅಪ್ಪ
ಕಂಡ ಇದನೆಲ್ಲ...
ಏನು ಮಾಡ್ಕೊಂಡ್ಯೋ..?
ಗಮನ ಇಟ್ಟು ಕೆಲ್ಸಮಾಡು
ಎಷ್ಟು ಸರ್ತಿ ಹೇಳಿಲ್ಲ ನಿನಗೆ??
ಸ್ವಲ್ಪ ನೀರು ಚಿಮುಕಿಸಿ
ಕನ್ನಡಿ ಒರೆಸೋದು ಬಿಟ್ಟು
ಊದಿದರೆ ಕಣ ಚೂರು
ಬರದೇ ಇರುತ್ಯೇ ಕಣ್ಣೀರು..?
ಏನು, ಹೇಗೆ ಯಾವಾಗ
ಮಾಡಬೇಕೆಂದು ಬದುಕ
ಕಲಿಸುವನೀತ
ನನ್ನ ಜನ್ಮದಾತ.
ಅಣ್ಣನೆಂದ
ಆತ್ರ ಇವನಿಗೆ, ನಾನೆಲ್ಲಿ
ಮೊದಲು ಕನ್ನಡಿ ತಗೋತೀನೋಂತ
ಯಾವುದನ್ನೂ ಸರಿಯಾಗಿ
ಮಾಡೊಲ್ಲಾಂತಾನೆ..
ಕೊಡು ನಾನು ಒರೆಸ್ಕೊಡ್ತೀನಿ
ಬಯ್ದು ಕಾಳಜಿ-ಪ್ರೀತಿ ತೋರಿಸಿದ್ದ
ನನ್ನ ಅಗ್ರಜ.
ಯಾಕೋ ಅಣ್ಣ
ನನ್ಗೆ ಹೇಳಿದ್ರೆ ಒರೆಸ್ಕೊಡ್ತಿರ್ಲಿಲ್ಲವೇ?
ಅಮ್ಮ ಬಿಡಮ್ಮ, ನಾನ್ನೋಡ್ತೀನಿ
ಅಣ್ಣನ ಕಣ್ಣಿಗೆ ನೀರ್ ಹಾಕ್ತೀನಿ..
ಅಂತಾಳೆ ಪ್ರೀತಿಯ ತಂಗಿ
ಮನೆಯಲ್ಲಿ ಎಲ್ಲರೂ ಪ್ರೀತಿಸುವವರೇ
ಆದರೆ ಒಬ್ಬೊಬ್ಬರದೂ
ಒಂದೊಂದು ತೆರನಾದ ಭಂಗಿ