Tuesday, May 19, 2009

ಬಿಟಿಎಸ್-ಬಸ್ಸಿನಲ್ಲೊಮ್ಮೆ

ಸ್ನೇಹಿತರೇ,
ನನ್ನ ಭಾವ ಮಂಥನ ಬ್ಲಾಗಿನಲ್ಲಿ ಇದನ್ನ ಪೋಸ್ಟ್ ಮಾಡಿದ್ದೆ...ನನಗೆ ಯಾವುದೇ ಪ್ರತಿಕ್ರಿಯೆ ಸಿಗಲಿಲ್ಲ, ಅರ್ಥವಾಗಲಿಲ್ಲ...ನನ್ನ ಲೇಖನದಲ್ಲಿ ಉಲ್ಲೇಖಿಸಿದ ವಿಷಯದ ಸಾಕ್ಷಾತ್ಕಾರ ಆಯ್ತೇ..??! ಒಂದು ಕ್ಷಣ ಚಿಂತೆ, ಮತ್ತೊಂದು ದಿನ ಆತಂಕ, ಹೀಗೇ..ಮುಂದುವರಿದು..ನನಗೆ ಏನೇನೋ ಅನುಮಾನಗಳು...ಮನಸ್ಸು ಒಪ್ಪಲಿಲ್ಲ..
ಈಗ ನನಗೆ ಕಾರಣ ಅರ್ಥವಾಗುತ್ತಿದೆ..ನನ್ನ ಈ ಬ್ಲಾಗನ್ನು ನೋಡಿದವರು ಬಹುಶಃ ಭಾವಮಂಥನವನ್ನು ನೋಡಿರಲಿಕ್ಕಿಲ್ಲ ..ಅಥ್ವಾ ನೋಡಿದ್ದರೂ...ಹಿಂದಕ್ಕೆ ಹೋಗಿರಲಿಕ್ಕಿಲ್ಲ ಅಂತ...ಅಥವಾ
ಹಾಗಂತ ಸಮಾಧಾನ ಮಾಡ್ಕೊಂಡು..ಇಲ್ಲಿ ಅದನ್ನೇ ಮತ್ತೆ ..ಗುಜರಾಯಿಸ್ತಾ ಇದ್ದೇನೆ...ಓದಿ..ಪ್ರತಿಕ್ರಿಯೆ ನೀಡಿದರೆ..ಬೆಂಗಳೂರಿನ ರೈಲ್ವೇ ನಿಲ್ದಾಣದಲ್ಲಿ ಕನ್ನಡ ಪದಗಳನ್ನು ಕೇಳಿದಷ್ಟೇ ಆನಂದ ಆಗುತ್ತೆ ನನಗೆ....


ಬಹಳ ವರ್ಷಗಳ ನಂತರ ಬಿ.T.ಎಸ್ ನಲ್ಲಿ ಪ್ರಯಾಣ ಮಾಡೋ ಅವಕಾಶ ಕೂಡಿಬಂದಿತ್ತು. ಹಾಗೇ..ಈ ವರೆಗೆ ನನ್ನ ಸ್ನೇಹಿತರು ಹೇಳಿತ್ತಿದ್ದುದು ಅಕ್ಷರಶಃ ಸತ್ಯ ಅನ್ನೋದನ್ನು ತಿಳಿಯೋ ಅವಕಾಶ ಸಹಾ ಸಿಕ್ಕಿತ್ತು.
ಹತ್ತು ವರ್ಷಗಳಿಂದ ದೇಶದ ಪೂರ್ವೋತ್ತರ ಪ್ರಾಂತ್ಯದಲ್ಲಿ ಕೇಂದ್ರ ಸರ್ಕಾರದ ಸೇವೆಯಲ್ಲಿದ್ದು ಈಗ ಒಂದು ವಾರದ ಹಿಂದೆ ಮದ್ರಾಸಿಗೆ ವರ್ಗವಾಗಿತ್ತು. ಆ ದಿವಸ ನನ್ನ ಸ್ಕೂಟರ್ ನನ್ನ ಗೆಳೆಯನೊಬ್ಬ ಕೆಲಸನಿಮಿತ್ತ ತೆಗೆದುಕೊಂಡು ಹೋಗಿದ್ದ, ಹಾಗಾಗಿ ಬಿ.ಟಿ.ಎಸ್ ನಲ್ಲಿ ಪ್ರಯಾಣಿಸುವ ಸದವಕಾಶ. ಸರಿ ಮೆಜೆಸ್ಟಿಕ್ಕಿಗೆ ಬಸ್ ಹತ್ತಿದೆ. ವಿಲ್ಸನ್ ಗಾರ್ಡನ್ ಬಳಿ ಬಂದಾಗ ಕಂಡಕ್ಟರಿಗೆ "ಮೆಜೆಸ್ಟಿಕ್" ಅಂತ ಹೇಳಿ ಹತ್ತರ ನೋಟು ಕೊಟ್ಟೆ. ಚಿಲ್ಲರೆ ಜೊತೆ ಟಿಕೆಟ್ ಕೊಟ್ಟರು ಕಂಡಕ್ಟರ್. ನನ್ನ ಮುಂದೆ ನಿಂತಿದ್ದ ಸಹ ಪ್ರಯಾಣಿಕನಿಗೆ ಕೇಳಿದೆ.."ಹಲೋ ಸರ್..ಈ ಬಸ್ಸು ಮಾರ್ಕೆಟ್ ಮಾರ್ಗ ಹೋಗುತ್ತಾ?"...ಆತ ಪಿಳಿ ಪಿಳಿ ಕಣ್ಣು ಬಿಟ್ಟ..ಬಹುಶಃ ಸರಿಯಾಗಿ ಕೇಳ್ಸಿರಲಿಕ್ಕಿಲ್ಲ ಅಂತ ಮತ್ತೆ ಕೇಳಿದೆ, ಮತ್ತದೇ ನಿರ್ಲಿಪ್ತ ಭಾವ...ಮತ್ತೆ..ಇಂಗ್ಲೀಷಿನಲ್ಲಿ ಕೇಳಿದೆ...ತಕ್ಷಣ.."ಯಾ..ಯಾ..ದಿಸ್ ಗೋಸ್ ವಯ ಮಾರ್ಕೆಟ್ ..ಬಟ್ ಯು ನೋ..ಐ ಡೋನ್ಟ್ ನೋ ಕನ್ನಡ" ಎಂದ..ನನಗೆ ಸ್ವಲ್ಪ ರೇಗಿತು..ಅಲ್ಲ ಇಂಗ್ಲೀಷಿನಲ್ಲಿ ಉತ್ತರ ಕೊಟ್ಟ..ಸರಿ..ಆದರೆ ನನಗೆ ಕನ್ನಡ ಬರೋದಿಲ್ಲ ಅಂತ..ರಾಜಾ ರೋಷವಾಗಿ ಅದೇ ಒಂದು qualification ಅನ್ನೋ ತರಹ ಹೇಳ್ತಿದ್ದಾನಲ್ಲ ಅಂತ. "ಮತ್ತೇನು ನೀವು ಇಂಗ್ಲೀಷಿನವರೇ...??" ಕೇಳಿದೆ..."pardon me..??" ನಾನು ಕೇಳಿದ ರೀತಿ ಮತ್ತು ನನ್ನ ಧಾಟಿಯಿಂದ ಅವನಿಗೆ ಅರ್ಥವಾದ್ರೂ ಆಗದವನಂತೆ..ಏನು ಹೇಳಿದ್ರಿ..? ಅನ್ನೋ ತರಹ ಕೇಳಿದ...ನನಗೂ ನನ್ನ ವರ್ತನೆ ಸರಿಯಿಲ್ಲ ಎನ್ನಿಸಿ.."I mean are you from north India..?" ಎಂದೆ. "ನೋ ಐಯಾಮ ಫ್ರಂ ಆಂಧ್ರ" ಎಂದ. "ಓ ಹಾಗೋ...ಎಷ್ಟು ವರ್ಷ ಆಯ್ತು ನೀವು ಬೆಂಗಳೂರಿಗೆ ಬಂದು..?" ಎಂದೆ. ಮತ್ತೆ ಪಿಳಿ..ಪಿಳಿ..ನಾನು ಮತ್ತೆ.."how long you are in Bangalore..?" ಅಂತ ಇಂಗ್ಲಾಂತರಿಸಿದೆ...ಅದಕ್ಕೆ ಆ ಮಹಾಶಯ.." last six years" ಎಂದ. "ಮತ್ತೆ ಅಲ್ಪ ಸ್ವಲ್ಪ ಕನ್ನಡ ಕಲಿತಿರಬೇಕಲ್ವಾ..?"..ಅವ ನನ್ನ ಮುಖ ನೋಡ್ದಾಗ ನನ್ನ ತಪ್ಪಿನ ಅರಿವಾಗಿ.."by now you must have learnt a little bit of Kannada.." ಎಂದೆ. " no..I dont feel it is necessary..every one here speaks English or Hindi" ಎಂದ. "ಎಲಾ ಇವನ..!! ಕನ್ನಡ ನಾಡಿನಲ್ಲಿ ಕನ್ನಡ ಕಲಿಯೋ ಅವಶ್ಯಕತೆ ಇಲ್ಲ ಅಂತ ಎಷ್ಟು ಧೀಟಾಗಿ ಹೇಳ್ತಾ ಇದ್ದಾನೆ..?"...ಎನ್ನಿಸಿ ನಾನು ಇನ್ನೇನೋ ಕೇಳೋ ಮೊದಲೇ..ಅವನ ಪಕ್ಕದಲ್ಲಿದ್ದಾತ (ಅವನ ಸ್ನೇಹಿತ ಅಂತ ಕಾಣುತ್ತೆ) .."ಇತನಿಕೇಮಂಟ ಮನಮು ಕನ್ನಡಂಲೋ ಮಾಟಲಾಡಲೇದನಿ ಕೋಪಮಾ..?"..ಅಂದ...ನನಗೆ ಪಿತ್ತ ನೆತ್ತಿಗೇರಿತ್ತು..."ಕಾದಂಡಿ..ಕರ್ನಾಟಕಮುಲೋ ವಾಸಿಂಚಿ..ಇಕ್ಕಡ ಉದ್ಯೋಗಂ ಚೇಸೇ ಮೀಕು..ಕನ್ನಡಂ ನೇರ್ಚುಕೋವಾಲಿ ಅನಿ ಅನಿಪಿಂಚಲೇದ..?" (ಆಲ್ರೀ..ಕರ್ನಾಟಕದಲ್ಲಿ ವಾಸಿಸಿ ಇಲ್ಲಿ ಉದ್ಯೋಗದಲ್ಲಿರೋ ನಿಮಗೆ ಕನ್ನಡ ಕಲಿಯಬೇಕು ಎನಿಸಿಲ್ಲವೇ..?) ಎಂದೆ. ನನ್ನ ತೆಲಗನ್ನು ಕೇಳಿ ಆತ ದಂಗಾದ ಅಂತ ಕಾಣುತ್ತೆ.." ಮೀಕು ಇಂತ ಬಾಗಾ ತೆಲುಗು ವಸ್ತುಂದೇ,,?? (ನಿಮಗೆ ಇಷ್ಟು ಚನ್ನಾಗಿ ತೆಲುಗು ಬರುತ್ತದಲ್ಲಾ)" ಅಂತ ಹುಬ್ಬೇರಿಸಿದ. ನಾನು ಕನ್ನಡದಲ್ಲೇ "ನಿಮ್ಮ ವಿಜಯವಾಡ ದಲ್ಲಿ ಕೆಲಸದ ಮೇಲೆ ಆರು ತಿಂಗಳು ಇರಬೇಕಾದಾಗ ಕಲಿತಿದ್ದೆ" ಎಂದೆ. ಅವನಿಗೆ ಆಶ್ಚರ್ಯ ವೆಂಬತೆ ಈ ಗ ನಾನು ಹೇಳಿದ್ದು ಅರ್ಥವಾಗಿತ್ತು. ನಮ್ಮ ಮಾತು ಆಲಿಸುತ್ತಿದ್ದ ಇನ್ನೊಬ್ಬ ಹಿರಿಯ ವಯಸ್ಸಿನವರು.."ಅದೇ ಸಾರ್ ನಾವು ಕನ್ನಡಿಗರು ಮಾಡೋ ತಪ್ಪು...ನಾವು ಬೇರೆಡೆ ಹೋದಾಗ ಅಲ್ಲಿನವರ ಜೊತೆ ವ್ಯವಹರಿಸಬೇಕಲ್ಲಾ ಅಂತ ಅವರ ಭಾಷೇನ ಕಲೀತೀವಿ..ಅದೇ ನಮ್ಮ ನಾಡಗೆ ಬರುವ ಬೇರೆ ಭಾಷಿಗರಿಗೆ ಆ ಭಾವನೆ ಬರುವಂತೆ ಮಾಡುವುದರಲ್ಲಿ ವಿಫಲರಾಗುತ್ತೇವೆ...ಈಗ ನಿಮ್ಮನ್ನೇ ತೆಗೆದುಕೊಳ್ಳಿ ...ಆತನಿಗೆ ಬರಲಿಲ್ಲ ಅಂತ ತೆಲಗಲ್ಲಿ ಸಂಭಾಷಿಸಿದಿರಿ...ಇವರಿಗೆ ಕನ್ನಡದ ಅವಶ್ಯಕತೆ ಎಲ್ಲಿ ಬರಬೇಕು ಹೇಳಿ ?..ಹೀಗೇನೇ ನಾವು ಪಂಚಭಾಷಿಗಳಾಗುತ್ತೇವೆ...ಬಹುತೇಕ ಕನ್ನಡಿಗರಿಗೆ ಹೊರಗಿನವನ ಜೊತೆ ಆಗಂತುಕ ಭಾಷೆಯಲ್ಲಿ ಮಾತನಾಡಿಸಿದರೆ ಆತ ಖುಷಿಪಡುತ್ತಾನೆ ಅಂತ ಅವರ ಭಾಷೆಯಲ್ಲೇ ವ್ಯವಹರಿಸುತ್ತೇವೆ, ಕನ್ನಡಿಗರೆಲ್ಲಾ ಹೀಗೇನೇ ಎಂದುಕೊಳ್ಳುವ ಹೊರಗಿನವರೂ ಇಲ್ಲಿಗೆ ಬರುವುದಕ್ಕೆ, ನೆಲಸುವುದಕ್ಕೆ, ವ್ಯವಹರಿಸುವುದಕ್ಕೆ ಹಿಂಜರಿಕೆಯಿರುವುದಿಲ್ಲ ಇದು ಒಂದು ರೀತಿ ಅಂತ್ಯ-ಹೀನ ವರ್ತುಲವಾಗುತ್ತೆ ..ಆ ವರ್ತುಲದಲ್ಲಿ ಕಳೆದು ಹೋಗುವುದು ಕನ್ನಡ...!!! ಇಂತಹ ವಾತಾವರಣದಲ್ಲಿ ಇಲ್ಲದಂತಾಗುವುದು ಕನ್ನಡಿಗರು...!! ಈ ದಿನ ಬೆಂಗಳೂರಿನಲ್ಲಿ ಕನ್ನಡಿಗರು ಶೇ. ೫೦-೬೦ ಮಾತ್ರ, ಅದರಲ್ಲಿ ಕನ್ನಡದಲ್ಲಿ ವ್ಯವಹರಿಸುವುದು ಶೇ. ೪೦-೫೦ ಮಾತ್ರ. ಯಾತಕ್ಕೆ ಹೇಳಿ..? ನಿಮ್ಮಂತಹ ಕನ್ನಡಿಗರೂ ವ್ಯವಹಾರದಲ್ಲಿ, ತಮ್ಮ ಮುಂದಿರುವವನಿಗೆ ಅನುಕೂಲವಾಗಲಿ ಅಂತ ಇತರ ಭಾಷೆನೇ ಬಳಸೋದರಿಂದ.. ಹಾಗಂತ ನಾವು ಕೆಲವು ಇತರ ಭಾಷಿಗರ ತರಹ ದುರಭಿಮಾನಿಗಳಗಬೇಕು ಎನ್ನುತ್ತಿಲ್ಲ.. ಆದರೆ ನಮ್ಮ ಭಾಷೆಯನ್ನು ಇತರರ ಮನಸೊಪ್ಪುವ ರೀತಿ ಅವರಿಗೆ ತೊಂದರೆಯಾಗದಂತೆ ಬೆಳೆಸುವುದರಲ್ಲಿ ತಪ್ಪೇನಿದೆ..? ನಾವು ಇತರ ದೇಶಕ್ಕೆ ಹೋದರೆ ಅಲ್ಲಿ ಅವರ ಭಾಷೆಯ ಪ್ರಾಥಮಿಕ ಹಂತದ ಪರಿಣಿತಿಯನ್ನು ಹೊಂದಬೇಕಂತೆ...ಇಲ್ಲಿ ..ಕಡೇ ಪಕ್ಷ ಕನ್ನಡದಲ್ಲಿ ಸಂಭಾಷಿಸಿದರೆ ಏನು ತಪ್ಪು..? ನಮ್ಮಲ್ಲೇ ಹುಳುಕಿದ್ದು..ಸರ್ಕಾರ..ಮತ್ತು ಇತರ ಭಾಷಿಗರನ್ನು ದೂರುವುದು ನಮಗೆ ಸಲ್ಲದು. ಕನ್ನಡಿಗರು ತಮ್ಮ ತಮ್ಮಲ್ಲಿಯೇ ಕನ್ನಡದಲ್ಲಿ ಮಾತನಾಡಿಕೊಳ್ಳುವರೇ..ಎಂದು ನನಗೆ ಸಂಶಯವಾಗುತ್ತದೆ..ಇನ್ನು ಬೇರೆಯವರನ್ನು ದೂರುವುದು ಸರಿಯಲ್ಲ.." ಹಿರಿಯರ ಈ ಸುದಿರ್ಘ ವಿಮರ್ಷೆ ಹಲವರಿಗೆ ಹಿಡಿಸಿತು..ಚಪ್ಪಾಳೆ ಸದ್ದು ಕೇಳಿ..ಅರೆರೆ..ಅಂದರೆ ಸುಮಾರು ಇಲ್ಲಿರುವ ಎಲ್ಲರಿಗೂ ಕನ್ನಡ ಬರುತ್ತೆ...ಮತ್ತೆ...ನಾನು ನನ್ನ ಸಹ ಪ್ರಯಾಣಿಕನೊಡನೆ ಮಾತನಾಡುವಾಗ ಇವರೆಲ್ಲ ಸುಮ್ಮನೆ ಮೂಕ ಪ್ರೇಕ್ಷಕರಾಗಿ ನೋಡುತ್ತಿದ್ದರಲ್ಲಾ..? ಅರ್ಥವಾಗಲಿಲ್ಲ!!!..ಏಕೆ ಕನ್ನಡಿಗರಿಗೆ ಈ ಕೀಳರಿಮೆ...ಎಂದು ಇವರಲ್ಲಿ ಭಾಷಾಭಿಮಾನ ಜಾಗೃತಗೊಳ್ಳುವುದು? ಕೆಲವೊಮ್ಮೆ ಪರಸ್ಪರ ಕನ್ನಡದವರೇ ಎಂದು ಗೊತ್ತಿದ್ದರೂ..ಬೇರೆಯವರ ಎದುರಲ್ಲಿ..ಮೂರನೇ ಭಾಷೆಯಲ್ಲಿ ವ್ಯವಹರಿಸುವುದಕ್ಕೆ ಕನ್ನಡಿಗರ ಈ ಕೀಳರಿಮೆ ಅಥವಾ ಸಂಕೋಚವೇ ಕಾರಣ ಎನ್ನಿಸುತ್ತದೆ. ನಮ್ಮನಮ್ಮಲ್ಲಿ ಹೆಮ್ಮೆಯಿಂದ ಕನ್ನಡದಲ್ಲಿ ವ್ಯವಹರಿಸುವ ಮೊದಲ ಪಾಠವನ್ನು ಕನ್ನಡಿಗರು ಮನನ ಮಾಡಿಕೊಳ್ಳಬೇಕು, ಇತರರೊಡನೆ ಮೊದಲಿಗೆ ಕನ್ನಡದಲ್ಲಿ ವ್ಯವಹರಿಸಿ, ಯಾರಿಗೆ ಗೊತ್ತು ಮುಂದಿರುವವರಿಗೆ ಕನ್ನಡ ಬರಬಹುದೇನೋ?..ಎಲ್ಲರೂ ಇದನ್ನು ಪರಿಪಾಲಿಸಿದರೆ ಬಹುಶಃ ಬೇರೆಭಾಷಿಗರು ಕನ್ನಡ ಕಲಿಯಲು ಮುಂದಾಗಬಹುದು..ಭಾಷೆ ಬೆಳೆಯುವುದು ಹೀಗೆ....