Friday, April 11, 2014

ಆ ಅಮಾವಾಸ್ಯೆ ರಾತ್ರಿ –ಸ್ಮಶಾನ ಭಯ


Foto Courtesy: Web Pages (Internet)


ಆ ಅಮಾವಾಸ್ಯೆ ರಾತ್ರಿ –ಸ್ಮಶಾನ ಭಯ

ರಜೆಯಲ್ಲಿ ರೇಷ್ಮೆ ಬೇಸಾಯದ ಹುಳ ಸಾಕಣೆಯ ಉಸ್ತುವಾರಿ ಜವಾಬ್ದಾರಿ ಹೊತ್ತಿದ್ದ ನಾನು, ತೋಟದಲ್ಲಿ ಹಿಪ್ಪನೇರಳೆ ಎಲೆಕಡ್ಡಿ ಕುಯ್ದು ಮೂಟೆ ಮಾಡಲು ಸಿದ್ದನಾಗುತ್ತಿದೆ. ಒಂದೆರಡು ವಾರಕ್ಕೆ ಹಿಂದೆ ಬೇಸಿಗೆಯ ಬಿಸಿಲ ಝಳ ಮತ್ತು ಮಳೆಯ ಅಭಾವ ಕಂಡಿದ್ದ ಊರ ಜನ ಮಂಡ್ರಾಯನ್ನ ಮೆರವಣಿಗೆ ಮಾಡ್ಸಿ ಅಗಸ ತಿಮ್ಮನ ಕತ್ತೆಗಳಿಗೆ ಮದುವೆ ಮಾಡಿಸಿದ್ದರ ಫಲ - ಧೋ ಎಂದು ಸುರಿದಿದ್ದ ಮಳೆಗೆ ಊರ ಕೆರೆ ತುಂಬಿ ಕೋಡಿಯೂ ಹರಿದಿತ್ತು. ಕೆರೆಯ ಆಚೆ ಬದಿಯಿದ್ದ ತೋಟಕ್ಕೆ ಸೈಕಲ್ ಹತ್ತಿ ಕರೆಯ ಏರಿಯಮೇಲೆ ಹೊರಟಿದ್ದೆ, ಆದರೆ ಆಗೊಮ್ಮೆ ಈಗೊಮ್ಮೆ ಬಿದ್ದ ಮಳೆಯಿಂದಾಗಿ ಏರಿಯ ಮೇಲೆ ಸೈಕಲ್ ಹೊಡೆಯುವುದು ದುಸ್ಸಹಸವಾಗುತ್ತದೆ ಎನ್ನುವುದು, ಏರಿ ಹತ್ತಿ ಸ್ವಲ್ಪದೂರ ಸೈಕಲ್ ಹೊಡೆದಾಗಲೇರಿವಾಗಿದ್ದು. ಸೈಕಲ್ ತಳ್ಳಿಕೊಂಡೇ ಹೋಗಿ, ಕಷ್ಟಪಟ್ಟು ಕೋಡಿ ದಾಟಿ ತೋಟ ಮುಟ್ಟಿದ್ದೆ. ಅಲ್ಲೇ ಇದ್ದ ಮಿಶೀನ್ ಮನೆಯಲ್ಲಿ (ಬಾವಿಯ ಪಂಪ್ ಸೆಟ್ ಅಳವಡಿಸಲು, ತೋಟದ ಸಲಕರಣೆ ಇಡಲು ಮತ್ತು ಅವಶ್ಯಕತೆ ಇದ್ದಾಗ ತಂಗಲು ಸಹಾಯವಾಗಲೆಂದು ಕಟ್ಟಿದ್ದ ಒಂದು ಕೊಠಡಿ) ಸೈಕಲ್ ಇಟ್ಟು ಹಿಪ್ಪನೇರಳೆ ಮೂಟೆಯನ್ನು ತಲೆಯಮೇಲೆ ಹೊತ್ತು ಮನೆಗೆ ಹೋಗುವುದೆಂದು ನಿರ್ಧರಿಸಿದೆ. ಆ ವೇಳೆಗಾಗಲೇ ಸಂಜೆ ಸೂರ್ಯ ಏರಿಯ ಮೇಲಿನ ಸಾಲು ಮರಗಳ ಹಿಂದೆ ಮರೆಯಾಗಿ ಕತ್ತಲು ಆವರಿಸಲಾರಂಭಿಸಿತ್ತು. ಹಿಪ್ಪನೇರಳೆ ಸೊಪ್ಪಿನ ಕಡ್ಡಿಯನ್ನು ಕಡಿದು ಸೊಪ್ಪನ್ನು ಗೋಣಿ ಮೂಟೆಯಲ್ಲಿ ಹೊತ್ತು ನಡೆಯಬೇಕಿತ್ತು. ಬೇಗ ಬೇಗ ಸೊಪ್ಪನ್ನು ಕಡಿದು ಮೂಟೆ ಕಟ್ಟುವ ವೇಳೆಗೆ ಸುಮಾರು ೨೦೦ ಮೀಟರ್ ದೂರವಿದ್ದ ಕಟ್ಟೆ ಕಾಣದಷ್ಟು ಕತ್ತಲಾಗತೊಡಗಿತ್ತು. ಬೇಗ ಬೇಗ ಮೂಟೆ ಹೊತ್ತು ಕೋಡಿ ದಾಟಿ ಕೆರೆಕಟ್ಟೆಯನ್ನು ಏರಿ ಊರಿನ ಕಡೆಗೆ ಬಿರಬಿರನೆ ಹೆಜ್ಜೆ ಹಾಕತೊಡಗಿದೆ. ಕತ್ತಲು, ಏರಿ ಮೇಲಿನ ಜಾಲಿ, ನೇರಳೆ ಮತ್ತು ಹುಣಿಸೆ ಮರಗಳ ಸಾಲು, ಆವರಿಸುತ್ತಿದ್ದ ಕತ್ತಲು.. ಕಾಣದಾದ ಚಂದ್ರ..ಆಗಲೇ ಅರಿವಾದದ್ದು ಅದು ಅಮಾವಾಸ್ಯೆಯ ಕತ್ತಲೆಂದು. ಹಾಳಾದ್ದು ಒಂಟಿಯಿರುವಾಗ, ಕತ್ತಲಾದಾಗ ಮರ ಗಿಡಗಳ ಜೀಂಯ್ಗುಡುವಿಕೆ ಮಧ್ಯೆ ಕೀಟಗಳ ಕಿರಕಿರ...ಆಗೊಮ್ಮೆ ಈಗೊಮ್ಮೆ ಗುಕ್ಕೆನ್ನುವ ಗೂಬೆ ಸದ್ದು... ಇದ್ದಕ್ಕಿಂದ್ದಂತೆ...ಭರ್ರ್..ಭರಕ್ ಎಂದು ಹಾರುವ ಬಾವಲಿಗಳು...ಅಬ್ಬಾ...!! ಸಾಕಲ್ಲವೇ ಹೆದರಿಸಲು??!!!. ಇದೆಲ್ಲಾ ಸಾಲದೆಂಬಂತೆ, ನಮ್ಮ ತೋಟದ ಆಚೆ ಬದಿಯಿದ್ದ ಶೆಟ್ಟಿಹಳ್ಳಿಯ ಸುಬ್ರಾಯಪ್ಪ ಮನೆಗೆ ಹೋಗುತ್ತಿದ್ದಾಗ ನನ್ನ ಕಂಡು ಬದುವಿನ ಮೇಲೆ ಸ್ವಲ್ಪ ಹೊತ್ತು ಕೂತು, ಶೆಟ್ಟಿಹಳ್ಳಿಯ ಮುನಿತಾಯಿ ಅಲ್ಲಿಯೇ ಇದ್ದ ಬಾವಿಗೆ ಬಿದ್ದು ಸತ್ತದ್ದು, ಅವಳ ಸಾವಿನ ನಂತರ ಪ್ರತಿ ರಾತ್ರಿ ೧೦ರಿಂದ ನಡುರಾತ್ರಿವರೆಗೆ ಶೆಟ್ಟಿ ಹಳ್ಳಿ ಗಸ್ತು ಹಾಕುತ್ತಾಳೆಂದು ಹೇಳಿ,,,ನಾನು ಭಯದಲ್ಲಿ ನಗುವಂತೆ ಮಾಡಿದ್ದು...ನೆನಪಾಗುವುದೇ...>?? ಆಗಾಗ್ಗೆ ಹಿಂದೆ ತಿರುಗಿ ಶೆಟ್ಟಿಹಳ್ಳಿ ಕಡೆ ನೋಡಿದ್ದೆ,,,!! ಸದ್ಯ ಕತ್ತಲಲ್ಲಿ ಹಳ್ಳಿ ಕಾಣಲಿಲ್ಲ... ಮುನಿತಾಯಿ ಭೂತ ಇದ್ದರೂ ಕಾಣೊಲ್ಲ ಎನ್ನುವ ಮೋಂಡು ಧೈರ್ಯ....!!! ಏನೇ ಆದರೂ ನನ್ನ ಡವ ಡವ ನಿಮಿಷಕ್ಕೆ ೯೦ ಕ್ಕಿಂತಾ ಹೆಚ್ಚಿತ್ತು ಎನ್ನುವುದು ಈಗಲೂ ಖಂಡಿತವಾಗಿ ಹೇಳಬಲ್ಲೆ.  
          ಏರಿ ಸುಮಾರು ೨ ಕಿ ಮೀ ಉದ್ದದ್ದು. ಏರಿಯ ಆಚೆ ಬದಿಯ ನೀರಾವರಿ ಭೂಮಿಯನ್ನು ನಾವು ದೊಡ್ದಕಾನೆ ಮತ್ತು ಚಿಕ್ಕ ಕಾನೆ ಎನ್ನುತ್ತಿದ್ದೆವು. ದೊಡ್ಡ ಕಾನೆ ನಮ್ಮ ಊರಿನ ರೈತರಿಗೆ ಸೇರಿದ್ದು ಚಿಕ್ಕಕಾನೆಯಲ್ಲಿ ನಮ್ಮ ಊರಿನವರ ಅರ್ಧ ಮತ್ತು ಶೆಟ್ಟಿಹಳ್ಳಿಯ ರೈತರ ಅರ್ಧ ಭಾಗವಿತ್ತು. ನನ್ನ ತಾತನ ತೆಂಗಿನ ತೋಟವಿದ್ದ ಸುಮಾರು ೧೦ ಎಕರೆ ತೋಟ ದೊಡ್ಡ ಕಾನೆಯಲ್ಲಿತ್ತು, ಇನ್ನೊಂದು ಚಿಕ್ಕ ತೋಟ ದೊಡ್ಡಕಾನೆಯ ನಂತರ ಬರುವ ಚಿಕ್ಕ ಕಾನೆಯಲ್ಲಿತ್ತು. ದೊಡ್ಡ ಕಾನೆಯ ತೊಟ ಊರಿನ ಭಾಗದ ಏರಿಯ ಅರ್ಧ ಕಿಲೋಮೀಟರ್ ದೂರದಲ್ಲಿದ್ದರೆ ಚಿಕ್ಕ ಕಾನೆಯ ತೋಟ ನಮ್ಮ ಊರು ಮತ್ತು ಶೆಟ್ಟಿಹಳ್ಳಿಯ ದಾರಿಯ ಮಧ್ಯಮಾರ್ಗದಲ್ಲಿತ್ತು. ಏರಿಯ ಮತ್ತು ನಮ್ಮ ದೊಡ್ಡಕಾನೆ ತೋಟದ ಮಧ್ಯೆ ಇದ್ದುದೇ ನಮ್ಮ ಊರಿನ ಸ್ಮಶಾನ. ನಾನು ಅರ್ಧ ದಾರಿ ನಮ್ಮ ಚಿಕ್ಕ ಕಾನೆ ತೋಟದ ನೇರಕ್ಕೆ ಏರಿಯ ಮೇಲೆ ನಡೆವಾಗ ...ಈ ಸ್ಮಶಾನದ ನೆನಪಾಯಿತು...!!! ಬೇಸಿಗೆ ಸಮಯದಲ್ಲಿ ಏರಿಯ ಪ್ರಾರಂಭದಲ್ಲಿದ್ದ ಗೌಡರ ತೋಟದ ಬಾವಿಯಲ್ಲಿ ಊರ ಪಡ್ಡೆ ಹುಡುಗರು ಈಜಲು ಹೋಗುತ್ತಿದ್ದುದು ಸರ್ವೆ ಸಾಮಾನ್ಯ. ಇದೇ ಬೇಸಿಗೆಯ ಕಾಲದಲ್ಲಿ  (ನಮ್ಮ ಪರೀಕ್ಷೆಗಳು ನಡೆವಾಗ) ತಳಾರ್ ನಾಗ (೭ ನೇ ತರಗತಿ ಹುಡುಗ) ಆ ಬಾವಿಯಲ್ಲಿ ಈಜಲು ಹೋಗಿ ಮುಳುಗಿ ಸತ್ತಿದ್ದನಂತೆ...!!! ಅವನನ್ನು ಹೂಳಲಾಗಿದ್ದ ಜಾಗ ಏರಿಗೆ ಹತ್ತಿರವೇ ಇದ್ದು ... ತೋಟಗಳಿಗೆ ಕಾವಲಿದ್ದ ಊರಿನ ರಂಗತೋಟಿಗ ಪ್ರತಿ ದಿನ ರಾತ್ರಿ ೯-೧೦ ಗಂಟೆಗೆ ಗೌಡರ ತೋಟದ ಬಾವಿಗೆ ಯಾರೋ ಧುಮುಕುವ ಸದ್ದು ಕೇಳಿಸುತ್ತೆ ಎಂದೂ..ಅಲ್ಲಿ ಹೋಗಿ ನೋಡಿದಾಗ ಯಾರೂ ಇರುವುದಿಲ್ಲವೆಂದೂ...ಅದು ತಳಾರ್ ನಾಗನ ಈಜು ಕಲಿಯುವ ಸದ್ದೆಂದೂ ಹೆಳುತ್ತಿದ್ದುದೂ....ನೆನಪಾಗಿ...ನಾಲಿಗೆ ಒಣಗತೊಡಗಿತು,,, ಆ ವೇಳೆಗೆ ನಮ್ಮ ದೊಡ್ದಕಾನೆ ತೊಟ ಮತ್ತು ಸ್ಮಶಾನದ ಸಮೀಪಕ್ಕೆ ಬಂದಿದ್ದೆನಾದ್ದರಿಂದ ಮೈಯೆಲ್ಲಾ ಬೆವರಲು ಪ್ರಾರಂಭವಾಯಿತು,,, ಮರಗಳ ಎಲೆಗಳ ಅಲುಗುವಿಕೆಯೂ ಭಯಾನಕ ಭಾವವನ್ನು ಹುಟ್ಟಿಸುತ್ತಿದ್ದವು. ಊರಿನಲ್ಲಿ ಹರಟೆ ಕಟ್ಟೆಗಳ ಮೇಲೆ ರೈತರು ಹೇಳಿಕೊಳ್ಳುವ ಪಂಜು ದೆವ್ವ, ರಕ್ತ ಕಾಟೇರಿ..ಮತ್ತು ಸ್ಮಶಾನದ ಅತೃಪ್ತ ಆತ್ಮಗಳ ಕಥೆಗಳೂ.. ನನ್ನ ಮನದಲ್ಲಿ ಪ್ರತಿಧ್ವನಿಸತೊಡಗಿದ್ದವು... ಇದ್ದ ಬದ್ದ ಧೈರ್ಯ ಒಟ್ಟುಗೂಡಿಸಿ ನಡೆಯುತ್ತಾ ಬೇಗ ಬೇಗ ಸ್ಮಶಾನ ದಾಟಿ ಹೋಗುವ ಮನಸಿಂದ ದೇವರನ್ನು ನೆನೆಯುತ್ತಾ ಹೆಜ್ಜೆ ಹಾಕುತ್ತಿದ್ದೆ,... ಸ್ಮಶಾನದ ಆಚೆ ಬದಿ ಕಾಲು ಹಾದಿಯಲ್ಲಿ ದೀಪವೊಂದು ನಡೆಯುತ್ತಿತ್ತು...!!!!!
ಇದ್ದಕ್ಕಿಂದ್ದಂತೆ ಒಂದು ಸಪ್ಪಳ ಹಿಂದೆ ಆದಂತೆ ಭಾಸವಾಗಿ ಹಿಂತಿರುಗಿ ನೋಡಬೇಕು ಎಂದು ಧೈರ್ಯ ಒಗ್ಗೂಡಿಸುವಾಗ ತಲೆಯ ಮೇಲೆ ಹೊತ್ತಿದ್ದ ಹಿಪ್ಪನೇರಳೆ ಮೂಳೆಯನ್ನು ಎಳೆದಂತಾಯಿತು..,!!! ಅಯ್ಯೋ!  –ಉದ್ಗಾರ ಕೀರಲು ದನಿಯಲ್ಲಿ ಹೊರಟು, ಗಟ್ಟಿಯಾಗಿ ಮೂಟೆ ಹಿಡಿದು ಮುಂದೆ ಹೋಗಲು ಪ್ರಯತ್ನಿಸಿದೆ...ಆದರೆ ಹೆಜ್ಜೆ ಮುಂದೆ ಇಡಲಾಗುತ್ತಿಲ್ಲ...!!!! ಮತ್ತೆ ಮೂಟೆಯನ್ನು ಎಳೆದಂತಾಯಿತು..!!!!????. ಈ ವೇಳೆಗೆ ನನ್ನ ಶರ್ಟು ಬೆವರಿಂದ ಒದ್ದೆಯಾಗಿತ್ತು.....ಇದ್ದ ಬದ್ದ ಧೈರ್ಯ ಒಟ್ಟುಗೂಡಿಸಿ ಕೊನೆಯ ಪ್ರಯತ್ನವೆಂದು ಮೂಟೆಯನ್ನು ಗಟ್ಟಿಯಾಗಿ ಹಿಡಿದು ಮುಂದೆ ಹೆಜ್ಜೆ ಹಾಕಿದೆ...ಊಂಹೂಂ...!!! ಹೆಜ್ಜೆ ಇಡಲಾಗಲಿಲ್ಲ... ಇನ್ನು ಏನೂ ಮಾಡಲಾಗದು.... ಮೂಟೆಯನ್ನು ಬೀಳಿಸಿ ಓಡೋಣ ಎಂದುಕೊಳ್ಳುತ್ತಿದ್ದಂತೆ...ಮೂಟೆ ಮೇಲಿನ ಸೆಳೆತ ಕಡಿಮೆಯಾದಂತಾಯಿತು...
ಆಗ....
ಹಿಂದಿನಿಂದ....
“ಅಣ್ಣಾ....”
ಎಂಬ ಸದ್ದು..., ತಳಾರ್ ನಾಗ ನನ್ನನ್ನು ಅಣ್ಣಾ ಎಂದೇ ಕರೆಯುತ್ತಿದ್ದುದು... !!! ಇದು ನಾಗನ ಭೂತವೇ ಎನ್ನುವ ಭ್ರಮೆ ಕ್ಷಣಕ್ಕೆ ಬಂದರೂ...ಮನುಷ್ಯ ಕಂಠ...!!??
“ಯಾರೋ ಅದು ಎಂದೆ..” ಧೈರ್ಯಕ್ಕಿಂತಾ ಮೊಂಡಾಟದಲ್ಲಿ.
“ನಾನಣ್ಣ ..ಶೌಕತ್,,,ನಿನ್ನ ತಮ್ಮ...”
ಹಿಂತಿರುಗಿದೆ,,,ಹೌದು ಅದು ನನ್ನ ತಮ್ಮ ಶೌಕತ್...!!!!
“ಅಯ್ಯೋ ಶೈತಾನ್, ಮೊದಲೇ ಹೇಳೋದಲ್ವೇನೋ...?? ಸುಮ್ಮನೆ ಮೂಟೆ ಎಳೆದರೆ..ಮೂಟೆ ಬೀಳೊಲ್ವೇ..??”  ಮೂಟೆ ಬೀಳುವ ಕಾಳಜಿ ನನ್ನಲ್ಲಿ ಇರಲಿಲ್ಲ ಎನ್ನುವುದು ನನಗೆ ಗೊತ್ತಿತ್ತು ಅವನಿಗಲ್ಲವಲ್ಲ. !!!
“ಏನೋ ಒಬ್ಬನೇ,,?? ಯಾಕೆ ಬಂದೆ ಇಷ್ಟು ಹೊತ್ತಿಗೆ..??
“ಅಲ್ಲಿ ನೋಡು, ತಾತ, ಚಿಕ್ಕಪ್ಪ, ಮಾವ, ಬೆಂಗಳೂರು ಚಿಕ್ಕ ಮಾಮ ಎಲ್ಲಾ ಬಂದಿದ್ದಾರೆ, ಚಿಕ್ಕ ಮಾಮನಿಗೆ ಎಳನೀರು ಬೇಕಿತ್ತಂತೆ ಅದಕ್ಕೆ ತಾತ ಎಲ್ಲಾ ಬಂದ್ರು, ನಾನೂ ಬಂದೆ,,,” ಎಂದ... ಹಿಂದೆ ಎಲ್ಲರೂ ಬರುತ್ತಿದರು ಅವರ ಕೈಯಲ್ಲಿ ಲಟೀನೂ ಇತ್ತು... ಓಹ್...ಅದೇ ನಡೆಯುತ್ತಿದ್ದ ದೀಪ...!!!!
“ನೀನು ಬರ್ತಾ ಇದ್ದದ್ದು ನೋಡಿ ನಾನು ಬೇಗ ಏರಿ ಹತ್ತಿ ನಿನ್ನ ಜೊತೆ ಮನೆಗೆ ಬರಬೇಕೆಂದು ಬಂದಿದ್ದು” ಎಂದ.
ಅಷ್ಟರಲ್ಲಿ ಅಲ್ಲಿಗೆ ಬಂದ ನಮ್ಮ ದೊಡ್ಡ ತೋಟದ ಕಾವಲುಗಾರ ಮಾದ.. ಕೊಡಣ್ಣೋ ನಾನು ತರ್ತೀನಿ ಮೂಟೆ...ಅಂತ ನನ್ನಿಂದ ಮೂಟೆ ತೆಗೆದುಕೊಂಡ....
ನಾನು ನನ್ನ ತಮ್ಮನ ಕೈಯಲ್ಲಿದ್ದ ಚಿಕ್ಕ ಟವಲಿನಲ್ಲಿ ಬೆವರೊರೆಸಿಕೊಳ್ಳುತ್ತಾ... ಸಮಾಧಾನದ ನಿಟ್ಟುಸಿರೆಳೆದೆ.

ಕ್ಷಣ ಅಧೀರರಾದರೆ ಮನಸ್ಸು ಏನೆಲ್ಲಾ ಯೋಚಿಸುತ್ತೆ..!!?? ನಡೆಯುವ ದೀಪ, ಕೊಳ್ಳಿ ದೆವ್ವ ಎಲ್ಲಾ ಹೀಗೇ ಏನೋ ಎನಿಸಿದ್ದು ನಿಜ.