Saturday, August 25, 2018

ನಮ್ಮೂರಿನ ಬೀದಿಗೆ ಅರ್ಪಿತ..ಕವಿತೆ
*****************************
ಉದಯಗಳೆಷ್ಟೋ ಕಳೆದವಿಲ್ಲಿ
"ಶುಭೋದಯ"ಗಳ ಹಂಗಿಲ್ಲದೇ
ಓಣಿ ಬೀದಿಗಳ, ಮಣ್ಣು ಕೆಸರುಗಳ
ಅಣ್ಣ ತಮ್ಮ ಅಕ್ತಂಗೀರ ಒಡನಾಡಿ
ಮಂದಹಾಸಗಳೇ ಹಾರೈಕೆಗಳಾಗ
ಹಬ್ಬಹರಿಗಳ ಸಹಭೋಜನಗಳಲಿ
ರಂಜಾ಼ನಿಗೆ ರಂಜಿಸಿ, ದೀಪಾವಳಿ
ಗಣೇಶೋತ್ಸವಗಳಲಿ ಉಲ್ಲಸಿಸಿ
ಇರಲಿಲ್ಲ ಗೋಡೆಗಳು ನಡುವೆ
ಪರಸ್ಪರ ಬಾಂಧವ್ಯಗಳಾಗ ಒಡವೆ
ಯಾರಿಟ್ಟರೋ ಮೆಲ್ಲನೆ ಬೆಂಕಿ..
ಮನಗಳ ನಡುವೆಯ ಕಿಡಿಯನು
ಸದಾ ಉಜ್ವಲಿಸೋ ತುಪ್ಪವ ನೂಕಿ
ಬರಬೇಕಿದೆ ಹೊರ ಹೊರಟು ಇಂದು
ನವ ಸಂತತಿಯ ಮನಬೆಳಗೋ ಬಂಧು
ಮಾನವಪ್ರೀತಿ ನಿರಂತರ ಹರಿವನದಿ
ಹರಿವುದು ಅಡ್ಡತೊಡೆದು ಬೇರೆಬದಿ
ಶಾಶ್ವತವಲ್ಲ ಅಡೆತಡೆಗಳು, ನಮ್ಮಲಿ
ಮಾಯವಾಗದೇ ಇದ್ದರೆ ಅಪರೂಪದ
ಒಳ ಮಾನವತೆಯ ಆತ್ಮೀಯ ಉಲಿ.

Friday, August 10, 2018

ಬ್ಲಾಗುವನದ ಖಳರು- ಫೇಸ್ಬುಕ್ಕಣ್ಣ ಮತ್ತು ವಾಟ್ಸಪ್ಪನ್



ಶತವಿಕ್ರಮನ ವಿಕ್ರಮಗಳು ಕ್ರಮಿಸುವ ದೂರಗಳು ಈಗ ಗೋಜಲು ಗೋಜಲು! ಆದರೂ ಛಲವೆಂದರೆ ವಿಕ್ರಮನದೇ, ಎರಡು ಮಾತಿಲ್ಲ. ಎಲ್ಲರಂತೆ ಫೇಸ್ಬುಕ್ಕಣ್ಣ, ವಾಟ್ಸಪ್ಪನ್ ಗಳು ನೀಡುವ ಗೋಳು ಛಲದಂಕಮಲ್ಲನನ್ನೂ ಬಿಡಲಿಲ್ಲ... ಎಷ್ಟೋ ಸಮಯದ ನಂತರ ಅವನ ಛಲ ಮತ್ತೆ ಗರಿಗೆದರಿತು. ಹೊರಟೇಬಿಟ್ಟ...ಬ್ಲಾಗ್ ವನದ ಖೂಳರನ್ನು ಹತ್ತಿಕ್ಕಲು.
ಮತ್ತದೇ ಸಮಸ್ಯೆ, ಮೊದಲಿಗೆ ಎಲ್ಲಿಯೋ ನೇತು ಬಿದ್ದಿರುವ ಭೇತಾಳನ ಹುಡುಕಿ ಅವನಿಗೊಂದು ಗತಿಕಾಣಿಸಿದರೇನೇ ಈ ಫೇಸ್ಬುಕ್ಕಣ್ಣ, ವಾಟ್ಸಪ್ಪನ್ ಗಳನ್ನು ಹುಡುಕಲು ಸಾಧ್ಯ. ಅದೇನೋ ಹೇಳ್ತಾರಲ್ಲ.. ’ಹಾಗಲಕಾಯಿಗೆ ಬೇವಿನ ಕಾಯಿ ಸಾಕ್ಷಿ’ ಅಂತ. ಹಾಗೆ.
ಒಮ್ಮೆ ಫಲಪುಷ್ಪ ಹೆಮ್ಮರಗಳಿಂದ ನಳನಳಿಸುತ್ತಿದ್ದ ಬ್ಲಾಗ್ ವನಕ್ಕೆ ಹೊಕ್ಕ ಶತವಿಕ್ರಮನಿಗೆ ಹೆಜ್ಜೆ ಹೆಜ್ಜೆಗೆ ಲೈಕ್ ಮುಳ್ಳುಗಳು, ವಾಟ್ಸಪ್ಪನ್ ಸಮೂಹ ಪೊದೆಗಳು, ಕಾಮೆಂಟೆಂಬ ಕುರುಚುಲುಗಳು...ಅಪರೂಪಕ್ಕೆ ದೂರ ದೂರಕ್ಕೆ ಕಾಣುವ ಸುಗಂಧಿತ "ಪದಾರ್ಥ ಚಿಂತಾಮಣಿ, ವಾಗರ್ಥ, ಕಾಜಾಣ, 3-K, ಕೃಷಿಲೋಕ, ಸ್ನೇಹಲೋಕ"ಗಳು...ಗಬ್ಬೆಬ್ಬಿಸುವ ಆ ಕುಲಗೆಡುತ್ತಿದ್ದ ಬ್ಲಾಗ್ ವನದ ಗತವೈಭವಕ್ಕೆ ಸಾಕ್ಷಿಯಾಗಿ ನಿಂತದ್ದು ಸ್ವಲ್ಪಮಟ್ಟಿಗೆ ಅವನ ಚಿಂತೆಗ ಮರಳುಗಾಡಿನ ಓಯಸಿಸ್ ಆಗಿದ್ದು ನಿಜ. ಆದರೂ ಫೂರ್ತಿ ಕುಲಗೆಟ್ಟಿಲ್ಲ ಎನ್ನಲು ಬ್ಲಾಗ್ ವನದ ಕೆಲ ಪರಿಚಿತ ಮುಖದ ಆಲದ ಮರಗಳು ಇನ್ನೂ ತಮ್ಮ ಛಾಪನ್ನುಇಟ್ಟುಕೊಂಡಿರುವುದನ್ನು ಕಂಡು ಶತವಿಕ್ರಮನ ಛಲಕ್ಕೆ ಬಲ ಬಂತು. ಹೀಗೇ ಹುಡುಕುತ್ತಾ ಹೊರಟವನಿಗೆ ..ಒಂದು ಫೇಸ್ಬುಕ್ಕಣ್ಣನ  ಕಾಮೆಂಟ್ ಗಳ ಪೊದೆಯಲ್ಲಿ... ಯಾರದೋ ಸಂಬಂಧಪಡದವರ ರಾಜಕೀಯ, ಧರ್ಮಗಳ ಮನೋಭಾವಗಳನ್ನು ಕೆರಳಿಸುವ ಪೋಸ್ಟ್ ಗೆ ಕಾಮೆಂಟುಗಳೆಂಬ ಮುಳ್ಳುಗಳಲ್ಲಿ ತನ್ನನ್ನು ಹುದುಗಿಸಿಕೊಂಡು...ಅನಾಮಧೇಯ "ಫೇಕ್ ಐಡಿ" ಯೊಂದಿಗೆ ಇದ್ದ ಭೇತಾಳ ಹದ್ದಿನ ಕಣ್ಣಿನ ಶತವಿಕ್ರಮನ ಕಣ್ಣಿಗೆ ಬಿದ್ದ...
ಸರಿ ಪೊದೆಗಳನ್ನು ಕಡಿದು, ಭೇತಾಳನನ್ನು ಬಿಡಿಸಿ ಹೆಗಲಿಗೇರಿಸಿ ನಡೆಯತೊಡಗಿದ.
ಮೊದಲೇ ಫೇಸ್ಬುಕ್ಕಣ್ಣ, ವಾಟ್ಸಪ್ಪನ್ ಗಳ ತಾಲೀಮಿನಲ್ಲಿ ಪಳಗಿದ್ದ ಭೇತಾಳನಿಗೆ ಹೇಳಬೇಕೇ..? ಪಲುಕತೊಡಗಿದ.
"ಮೂರ್ಖ ಶತವಿಕ್ರಮನೇ..  ಅಧರ್ಮಗಳ, ಅನ್ಯಾಯಗಳ ಅಕ್ರಮಗಳ ಸುತ್ತ ಬೆಳೆಯುವ ವನದಲ್ಲಿ ಸೃಜನಸಿರಿಯ ಬ್ಲಾಗ್ ವನವ ಹುಡುಕಲು ಬಂದಿರುವೆಯಲ್ಲಾ ನಿನ್ನ ಬುದ್ಧಿಗೆ ಏನು ಹೇಳಲಿ...ಸರಿಬಿಡು, ನಿನ್ನ ಛಲ ನೀನು ಬಿಡಲೊಲ್ಲೆ, ನನ್ನ ಪರಾಕು ನಾನು ಬಿಡೆ...ಎಂದಿನಂತೆ ನಾನು ಕಥೆ ಗಿತೆ ಹೇಳುವುದಿಲ್ಲ... ಒಂದು ಪ್ರಶ್ನೆ ಕೇಳುವೆ...ಅದಕ್ಕೆ ನಿನ್ನ ಸಮಾಧಾನ ಹೇಳು" ಎಂದಿತು.
ಈಗ ತಾನೇ ನನ್ನ ಫ್ರೆಂಡಿನ ಬೇರೊಬ್ಬ ಫ್ರೆಂಡ್ ನ  ಪೋಸ್ಟ್ ಗೆ ಯಾರೋ ಅವನ ಫ್ರೆಂಡ್ ಅಲ್ಲದವ ಕಾಮೆಂಟು ಹಾಕಿ ನನ್ನ ಹಾಗೆ ಕಿಚ್ಚು ಹಚ್ಚಿದ್ದಾನೆ, ಅದು ಯಾವ ಪೋಸ್ಟ್...?
ಶತವಿಕ್ರಮನೆಂದ, ಎಲವೋ ತಲೆಯಲ್ಲಿ ಬುರುಡೆಮಾತ್ರ ನಿನಗೆ ಬುದ್ಧಿ ಎಲ್ಲಿಂದ ಬರಬೇಕು..? ನಿಮ್ಮಂಥ ಖೂಳರನ್ನು ಹತ್ತಿಕ್ಕಲು ಬ್ಲಾಗ್ ವನವನ್ನು ಸುತ್ತಿರುವ ನನಗೆ ನಿನ್ನ ಪ್ರಶ್ನೆ ನೀರುಕುಡಿದಂತೆ.
ಆ ಪ್ರಶ್ನೆ ಖಂಡಿತಾ ಯಾವುದೋ ರಾಜಕೀಯ ಹಿತಾಸಕ್ತಿಯ ಇತರ ಧಾರ್ಮಿಕ ನೆಲೆಯ ನಂಬಿಕೆಗೆ ಸವಾಲಾಗುವ ಅಂಚೆಯಾಗಿರಬೇಕು... ನೀನು ಬೇರೆ..ಸೃಜನಾತಕ ಸಮಾಜಪರ ಅಪರೂಪದ ಮರಗಳಲ್ಲಿ ಕಂಡುಬರಲು ಹೇಗೆ ಸಾಧ್ಯ,,,??  ಎಂದ
ಹಿಹಿಹಿ...ನೋಡಿದೆಯಾ ಮೌನ ಮುರಿದೆ..ನಿನ್ನ ಉತ್ತರ ಸರಿಯಾದರೂ .. ನನ್ನದೇ ಸರಿ ಎನ್ನುವ ಫೇಸ್ಬುಕ್ ನ ಕೆಲ ಅಕೌಂಟುಗಳಂತೆ ನಾನೂ ಇದನ್ನು ಒಪ್ಪದೇ ಇದೋ ಹೊರಟೆ... ಅಲ್ಲೊಂದು ಅತ್ಯಾಚಾರದ ಪೋಸ್ಟ್ ಕಾಣ್ತಿದೆ....ಹಚ್ಚಿಡಲು ಒಳ್ಳೆಯ ಅವಕಾಶ ಎನ್ನುತ್ತಾ....ಮತ್ತೆ ಯಾವುದೋ ..ಕಾಮೆಂಟುಗಳ ಪೊದೆಯಲ್ಲಿ ಅಡಗಿ..ಕಾಮೆಂಟನ್ನು ಗೀಚತೊಡಗಿತು.
ಛೇ.. ಇಂತಹ ಫೇಸ್ಬುಕ್ಕಣ್ಣ...ವಾಟ್ಸಪ್ಪನ್ ಖೂಳರನ್ನು ಹೇಗಪ್ಪಾ ತಹಬದಿಗೆ ತರುವುದು..? ಇವುಗಳ ಮೇಲೆ ಹಿಡಿತ ಹೆಚ್ಚಿಸಲು ಸರ್ಕಾರ ಏನೋ ಕಾನೂನನ್ನು ಮಾಡುತ್ತಿದೆ ಎಂಬ ಸುದ್ದಿ ಕೇಳಿದೆ...ಅದಾದರೂ ಬಂದೀತೆಂಬ ನಂಬಿಕೆ ನನಗಿಲ್ಲ...ಆದರೂ ...ಕಛೇರಿ, ಶಾಲೆ ಮುಂತಾದವುಗಳ ಕೆಲಸದ ವೇಳೆಯಾದರೂ ಅವುಗಳನ್ನು ನಿಷ್ಕ್ರಿಯಗೊಳಿಸಿದರೆ... ಕವಿಗಳಾದರೂ ಈ ಅಣ್ಣಗಳ ಹಿಡಿತದಿಂದ ಹೊರಬಂದು ಬ್ಲಾಗ್ ವನಕ್ಕಾಗಿ ತಮ್ಮ ಕೊಡುಗೆ ನೀಡುವರೇನೋ ಆಗ ನನ್ನ ಶ್ರಮ ಸಾರ್ಥಕವಾದೀತು..ಎನ್ನುತ್ತಾ ಸ್ವಲ್ಪ ಪದಸುಮಗಳ ಘಮವನ್ನಾದರೂ ಪಡೆಯೋಣ ಎನ್ನುತ್ತಾ ಶತವಿಕ್ರಮ..ಪದಾರ್ಥ ಚಿಂತಾಮಣಿಯೆಂಬ ಹೂವನಕ್ಕೆ ಕಾಲಿಟ್ಟ.
"