Monday, March 8, 2010

ಮಾ ತುಝೆ ಸಲಾಂ
(ಪ್ರಕಾಶ್ ನ ಇಟ್ಟಿಗೆ ಸಿಮೆಂಟಿಗೂ ಸಲಾಂ)


ಅಣುವಾಗಿ, ಕಣವಾಗಿ ಬೆಳೆವೆ ಜೀವವಾಗಿ
ಅವಳೊಡಲಲಿ ಅವಳ ಕರುಳ ಕುಡಿಯಾಗಿ
ಮಮ್ಮಲತೆಯ ಮರುಗುಡಿಯ ಮರಿಯಾಗಿ
ತಾಯಋಣಕೆಣೆಯಿಲ್ಲ ತೀರಿಸಲಾದೀತೇ
ಪಡೆದು ಬಂದರೂ ಎಷ್ಟೇ ಮರುಜನ್ಮ?

 

ಅಲ್ಲಿ ಅವಳ ರಕ್ತವೇ ಜೀವ - ನನಗೆ ಜನ್ಮ
ನೋವಿನಲೂ ನಲಿವಳು ಪಡೆದು ಮರುಜನ್ಮ
ಬಸಿರಲಿ ರಕ್ತ ಉಸಿರಲಿ ಮೊಲೆಯೂಡುವಳು
ತಾಯಋಣಕೆಣೆಯಿಲ್ಲ ತೀರಿಸಲಾದೀತೇ
ಪಡೆದು ಬಂದರೂ ಎಷ್ಟೇ ಮರುಜನ್ಮ?

 

ನೀಡಿ ಸೆರಗಾಸರೆ ತಾ ನೆನೆದರೂ ಮಳೆಯಲಿ
ಮಡಿಲ ಬಿಸಿ ತಾ ಸೊರಗಿದರೂ ಛಳಿಯಲಿ
ಮೊಲೆಯುಣಿಕೆಗೆ ದಣಿವಿಲ್ಲ ಹಸಿವಿದ್ದರೂ ಒಡಲಲಿ
ತಾಯಋಣಕೆಣೆಯಿಲ್ಲ ತೀರಿಸಲಾದೀತೇ
ಪಡೆದು ಬಂದರೂ ಎಷ್ಟೇ ಮರುಜನ್ಮ?

 

ಕೇಳುವಳು ಕಂದಾ ಹಸಿವೆಯೇ ಹೇಳು?
ಬಿದ್ದೆಯಾ ಪುಟ್ಟಾ ಆಯಿತೇ ಗಾಯ ಹೇಳು?
ಅಲ್ಲಿ ಗಾಜಿನ ಚೂರಿದೆ ನಾ ಬರುವೆ ತಾಳು
ತಾಯಋಣಕೆಣೆಯಿಲ್ಲ ತೀರಿಸಲಾದೀತೇ
ಪಡೆದು ಬಂದರೂ ಎಷ್ಟೇ ಮರುಜನ್ಮ?

 

ನೋಯಿಸಿದರೂ ಅವಳ ಮನ ಹಲವೊಮ್ಮೆ
ಅಮ್ಮ ಎಂದೊಡನೆ ನಕ್ಕು ಬಿಡುವಳು ಎಲ್ಲಮರೆತು
ಮುತ್ತಿಗಾಗಿ ಹೆತ್ತವಳ ರಕ್ತ ಕಣ್ಣೀರಿಗೆ ಕಾರಣವಾದರೂ
ಅಮ್ಮಾ ತಪ್ಪಾಯ್ತು ಎಂದೊಡನೆ ಅಪ್ಪಿಕೊಂಡುಬಿಡುವಳು
ತಾಯಋಣಕೆಣೆಯಿಲ್ಲ ತೀರಿಸಲಾದೀತೇ
ಪಡೆದು ಬಂದರೂ ಎಷ್ಟೇ ಮರುಜನ್ಮ?