Saturday, May 16, 2009

ನಂಗೊತ್ತಿಲ್ಲ ಮಗು ಕನ್ನಡ-ನುಡಿ ನಮ್ಮದು


(Source: Web)
ಕನ್ನಡ-ನುಡಿ ನಮ್ಮದು
ನುಡಿ ನನ್ನದು .. ನುಡಿ ನಿಮ್ಮದು
ಕರುನಾಡೆಲ್ಲೆಡೆ ಆಡು ಭಾಷೆ ನಮ್ಮದು
ಪಂಪನ ಬನವಾಸಿಯ ಕಂಪು—ಕನ್ನಡ
ರನ್ನನ ಗಧಾಯುದ್ಧದ ಗುಡುಗು-ಕನ್ನಡ,
ಪುಲಿಕೇಶಿ, ವಿಜಯನಗರ, ಮೈಸೂರರಸರ ಸಿರಿ
ನೃಪತುಂಗ, ಹರಿ-ಹರ ರಾಘವಾಂಕರ ರಗಳೆಯ ಗರಿ,
ಮುದ್ದಣ-ಮನೋರಮೆಯರ ಸಲ್ಲಾಪ
ಹರಿಶ್ಚಂದ್ರ ಕಾವ್ಯದ ಚಂದ್ರಮತಿಯ ಪ್ರಲಾಪ
ಸರ್ವಜ್ಞನ ತ್ರಿಪದಿಗಳು, ಶಿಶುನಾಳರ ಉಕ್ತಿಗಳು
ಅಕ್ಕ-ಅಲ್ಲಮ-ಬಸವಣ್ಣರ ವಚನಗಳು
ಕುವೆಂಪು, ಬೇಂದ್ರೆ, ಕಾರಂತ, ಮಾಸ್ತಿ
ಇವರಲ್ಲವೇ ಕನ್ನಡಿಗರ ಅಮೂಲ್ಯ ಆಸ್ತಿ ?!
ಗೋಕಾಕ್, ಕಾರ್ನಾಡ್, ಜೀಎಸ್ಸೆಸ್, ಕಂಬಾರ್,
ಅನಕೃ, ತ್ರಿವೇಣಿ, ಭೈರಪ್ಪರ ಜತೆಗೂಡಿದ ನಿಸಾರ್
ಕಥೆ, ಕವನ, ಕಾದಂಬರಿಗಳ ಸರದಾರರು
ಜ್ಞಾನಪೀಠಗಳ ಹೊಳೆಯನ್ನೇ ಹರಿಸಿದರು
ನಾಟಕಕ್ಕೆ ಕೈಲಾಸಂ ಪರ್ಯಾಯವಾದರೆ
ರಾಜ್ ರಜತ ಪರದೆ ಮರೆಯದ ಧೃವತಾರೆ
ಭಾಷೆ ನಮ್ಮದೆಂಬ ಅಭಿಮಾನವಿರಲಿ
ನವಂಬರ್ ಮಾತ್ರವೇ ಏಕೆ? ವರ್ಷವಿಡೀ ಇರಲಿ
ಉಕ್ಕಲಿ ಭಾಷಾಭಿಮಾನ..ಕಿತ್ತೊಗೆದು ..ಕಳೆ
ಮೊಳಗಲಿ..ಭೋರ್ಗರೆದು ಕನ್ನಡದ ಕಹಳೆ.

ನಂಗೊತ್ತಿಲ್ಲ ಮಗು
ಅಪ್ಪಾ..
ಹೇಳು ಮಗು..
ನವಂಬರ್ ಬಂದ್ರೆ
ಕನ್ನಡದಲ್ಲೇ ಮಾತಾಡೋಣ
ಅಂತಾರಲ್ಲಾ..ನಾಯಕರು?
ಹೌದು ಮಗು..
ಹಂಗಂದ್ರೆ ಬೇರೆ ಹೊತ್ನಲ್ಲಿ ಕನ್ನಡದಲ್ಲಿ
ಮಾತಾಡೊಲ್ಲವೇ ಇವರು?
...ಹ್ಞಾಂ...!! ಗೊತ್ತಿಲ್ಲ ಮಗು.
ಅಪ್ಪಾ....
ಹೇಳು ಮಗು....
ಮುಂಗಾರು ಮಳೆ...ಗಾಳಿಪಟ..
ದಾಖಲೆಗಳ ಧೂಳೀಪಟ..ಅಂತಾರಲ್ಲಾ...??
ಹೌದು ಮಗು..
ಕನ್ನಡದವರೇ..ಒಳ್ಳೊಳ್ಳೆ ಗಾಯಕರಿದ್ರೂ..
ಹಿಂದಿಯವರನ್ನ ಕರಿಸಿ ಹಾಡ್ಸಿದ್ದಕ್ಕಾ???!!
...ಹ್ಞಾಂ...!! ಗೊತ್ತಿಲ್ಲ ಮಗು
ಅಪ್ಪಾ..
ಏನು ಮಗು..?
ಕರ್ನಾಟಕದ ಮಹಿಳಾ ವಿಶ್ವವಿದ್ಯಾಲಯಕ್ಕೆ
ಆಂಧ್ರದ ಮಹಿಳೆಯನ್ನ ಉಪಕುಲಪತಿಗಳನ್ನಾಗಿ
ನೇಮಿಸಿದ್ರಲ್ಲಾ...
ಹೌದುಮಗು....ಗಂಡಸರನ್ನ ಮಾಡ್ಬೇಕಿತ್ತಾ..??
ಹೇ..ಹಂಗಲ್ಲಪ್ಪ..ಕರ್ನಾಟಕದಲ್ಲಿ ಯೋಗ್ಯ ಮಹಿಳೇರೇ
ಇರಲಿಲ್ಲವೇ??
ನಂಗೊತ್ತಿಲ್ಲ ಮಗು