Tuesday, July 28, 2009

ಗುಂಗಲ್ಲಿ ನುಂಗಣ್ಣ ಹೇಳಿದ್ದೇನು????

(ವೆಬ್ ನ ಚಿತ್ರಕ್ಕೆ ಬಬಲ್ ಶೀರ್ಷಿಕೆ ಕನ್ನಡೀಕರಿಸಿ ಕೊಟ್ಟಿದ್ದೇನೆ)


ನಮಸ್ಕಾರ ...ನಾನು ನುಂಗಣ್ಣ...ಗೊತ್ತಾಗ್ಲಿಲ್ವ...?? ನಿಮ್ಮನೇಲಿದ್ದೇ..ನೀವು ಕೊಟ್ಟ್ರೂ ಕೊಡದೇ ಇದ್ರೂ ..ನನ್ಗೆ ಬೇಕಾದಷ್ಟೇನು ತಲೆಮಾರುಗಳಿಗೆ ಆಗೊಸ್ಟನ್ನ ಗುಡ್ಡೆ ಹಾಕ್ತಾ ನುಂಗ್ತಾ ಇದ್ದೀನಿ...??!! ಗೊಅತ್ತಾಗ್ಲಿಲ್ಲ್ವ?? ಅಲ್ರೀ ..ಏನೋ ಒಂದ್ಸ್ವಲ್ಪ ತಿಂದಿದ್ದಕ್ಕೆ ಗುಂಜಣ್ನನ್ನ ತಿಂದ..ತಿಂದ..ಅಂತ ಗೋಳಾಡ್ಸಿದ್ರಿ..ಪತ್ರಿಕೇಲಿ ಬರೆಸಿದ್ರಿ..?? ಅದ್ಯಾರೋ ಲೋಕಕ್ಕೇ ಆಯುಕ್ತರಂತೆ...(ಮನೇಲಿ ಮಂಚದಲ್ಲಿ ವರ್ಷಗಳಿಂದ ಸೇರ್ಕೋಂಡು ಸ್ವಲ್ಪ..ಸ್ವಲ್ಪ..ತಿಳಿದೂ.ಏನೋ ಬಿಡು ಹೋಗ್ಲಿ ಅಂತ ಅನ್ಕೊಳ್ಳೋಹಾಗೆ ರಕ್ತ ಕುಡೀತಿರೋ ತಿಗಣೇನೇ ಏನೂ ಮಾಡಾಕಾಗ್ದೇ ಇರೋರು ಎಂಥ ಲೋಕಕ್ಕೆ..ಎಂಥ ಆಯುಕ್ತರು...!!!???) ಅವರನ್ನ ಬಿಟ್ಟು ಆಯ್ಕಂಡ್ ತಿನ್ನೋ ಕೋಳೀ ಮೇಲೆ ಬ್ರಹ್ಮಾಸ್ತ್ರ ಬಿಟ್ಟು ..ಪಾಪ...ಗುಂಜಣ್ನ..ಎನೋ ವ್ಯವಸ್ಥೆಗೆ ಕಟ್ಟುಬಿದ್ದು..ಬೇಕಂತಲೋ...ಬೇಡ ಅಂತಲೋ..ಏನೋ ...ಸ್ವಲ್ಪ ತಿಂದದ್ದಕ್ಕೆ..ಇದ್ದ ಬದ್ದ ಮಾನ ಹೋಯ್ತು..ಅಂತ ಅಷ್ಟು ವರ್ಷ ಕೆಲಸ ಮಾಡ್ತಿದ್ದ ಕಛೇರಿಯಲ್ಲೇ ಹಗ್ಗಕ್ಕೆ ಕೊರಳ್ಕೊಟ್ಟು ಜೋತು ಬಿದ್ದ....ನಿಮಗೆ ತಾಕತ್ತಿದ್ದರೆ ನಮ್ಮಂಥ ನುಂಗಣ್ನಗಳ ಮೇಲೆ ಬಿಡ್ರಿ ನಿಮ್ಮ ಬ್ರಹ್ಮಾಸ್ತ್ರ..??!! ಅದ್ಕ್ಕೂ ತಾಕತ್ತು ..ಕಿಮ್ಮತ್ತು...ದಿಲ್ಲು...ದಮ್ಮು ಎಲ್ಲ ಬೇಕು. ಅಷ್ಟೆಲ್ಲಾ ಯಾಕೆ...ಐದು ವರ್ಷಕ್ಕೊಂದಾವರ್ತಿ ನಿಮ್ಮ ಹತ್ರ ಬಂದು..ಗೆದ್ದರೆ ನಿಮ್ಮ ಮಗನಿಗೆ ಆ ಕೆಲಸ ಕೊಡಿಸುತ್ತೀವಿ...ನಿಮ್ಮ ತಮ್ಮನಿಗೆ ಏಜೆನ್ಸಿ ಕೊಡಿಸ್ತೀವಿ..ನಿಮ್ಮ ಅಕ್ರಮ ಸೈಟನ್ನ ಸಕ್ರಮ ಮಾಡ್ತೀವಿ ಅಂತ ಬಂದು ನಿಮ್ಮ ಓಟು ಗಿಟ್ಟಿಸ್ಕೊಂಡು..ಮೆರೆಯೋ ಮಿನಿಸ್ಟ್ರು ಅವರಿಗೆ ಸಪೋರ್ಟ್ ಕೊಡೋ ಬಿಜಿನೆಸ್ ಟೈಕೂನುಗಳು..ಅವರಿಗೆ ಕುಮ್ಮಕ್ಕು ಕೊಡೋ ಆಫೀಸರುಗಳು..ಇವ್ರಿಗೆ ಎಂದಾದ್ರೂ ತಿಂದ ತಿಂದ ಅಂತ ಹೇಳಿದ್ದೀರಾ..?? ಗುಂಜಣ್ಣನ್ನ ಯಾಕ್ರೀ ಹೇಳ್ತೀರಾ..ತಿಂದ..ಗುಡ್ದೆ ಹಾಕ್ದ ಅಂತ..?? ಅವನೇನ್ರೀ ಗುಡ್ಡೆ ಹಾಕ್ದ..?? ಅಸಲು ಗುಡ್ಡೆ ಅಂದ್ರೆ ಏನು ಅಂತ್ಲೇ ಗೊತ್ತಿಲ್ಲ ಅವನಿಗೆ.
ನಾನು ಹೇಳ್ತೀನಿ ಕೇಳಿ...ಹಣ ಇದೆ ಅಂತ ರೈತ ಬೆಳೆದದ್ದನ್ನ ಆರು ಕಾಸಿಂದು ಮೂರ್ಕಾಸಿಗೆ ಕೊಂಡ್ಕೊಂಡು, ಅದ್ದಕ್ಕೆ ಕುಮ್ಮಕ್ಕು ಕೊಡೋಕೆ ಫುಡ್ ಇನ್ಸ್ ಪೆಕ್ಟರಿಗೆ ತಿನ್ಸಿ, ದೊಡ್ಡ ದೊಡ್ಡ ಗೋಡೌನು ಕಟ್ಸಿ ಅದನ್ನ ಕಟ್ಟೋದಕ್ಕೆ ಕಾರ್ಪೊರೇಶನ್ ಅಧಿಕಾರಿಗಳಿಗೆ ತಿನ್ಸಿ, ಸವಲತ್ತು ಅಂತ ವಿದ್ಯುತ್ ಇಲಾಖೆ ಆಫೀಸರಿಗೆ ತಿನ್ಸಿ, ಲಕ್ಷ ಲಕ್ಷ ಟನ್ ದವಸ ಗೋದಾಮುಗಳಲ್ಲಿ ತುಂಬಿಟ್ಟು..ಕೃತಕ ಅಭಾವ ಸೃಷ್ಠಿಸಿ ಒಪ್ಪೊತ್ತಿನ ಊಟಕ್ಕೇ ಪರದಾಡೋ ಎಷ್ಟೋ ಬಡವರು ಹಸಿವಿಂದ ಸಾಯೋ ಸ್ಥಿತಿಗೆ ತರ್ತಾರಲ್ಲ...ಭಾರಿ ಕಳ್ಳ ವರ್ತಕರು ಅವ್ರು ನಿಜವಾದ ನುಂಗಣ್ಣಗಳು...
ಸಾವಿರಾರು ವಾಹನ ಓಡಾಡೋ ಸೇತುವೆಗಳು, ಬೆಳೆಗೆ ಹನಿಸೋ- ದಾಹ ತಣಿಸೋ ನೀರು ಹರಿಸೋ ಕಾಲುವೆಗಳು, ಸಾರ್ವಜನಿಕ ಕಟ್ಟಡಗಳು, ರಸ್ತೆಗಳು ಹೀಗೆ ಎಲ್ಲದರಲ್ಲೂ ಗೋಲ್ ಮಾಲ್ ಮಾಡಿ ಗುಡ್ಡೆ ಹಾಕೋ ದೊಡ್ಡ ದೊಡ್ಡ ಖದೀಮ ಕಂಟ್ರ‍ಾಕ್ಟರುಗಳು ..ಅವ್ರು ನಿಜವಾದ ನುಂಗಣ್ಣಗಳು.
ಮಕ್ಕಳ ಊಟದಲ್ಲಿ ಅಕ್ರಮ, ರೋಗಿಗೆ ಕೊಡೋ ಔಷದಿಯಲ್ಲಿ ಕಲಬೆರಕೆ, ಸ್ವಾತಂತ್ರ್ಯ ಹೋರಾಟಗಾರರ. ವಯೋವೃದ್ಧರ ಮಾಶಾಸನದಲ್ಲಿ ಗೋಲ್ ಮಾಲ್, ಕಿಡ್ನಿ ಕದ್ದು ಮಾರೋ ಕಾಂಡ, ಹೆಣ್ಣುಮಕ್ಕಳ ಮಾರಾಟ, ಹೆಣ್ಣಿನ ಅಸಹಯಾಕತೆಯನ್ನ ಕ್ಯಾಶ್ ಮಾಡಿಕೊಳ್ಳೋ ಬಿಚೌಲಿಗಳ ಬಾಸುಗಳು ಇವ್ರು ನಿಜವಾದ ನುಂಗಣ್ಣಗಳು......
ಇವ್ರೆಲ್ಲರಿಗೆ...ಸುಪ್ರೀಂ..ನಾನು...ಸರ್ಕಾರದ ಭಾಗವಾಗಿದ್ದು ನಾನು ಮಾಡಿದ್ದೇ ಶಾಸನ, ನಾನು ಹೇಳಿದ್ದೇ ವೇದ ವಾಕ್ಯ...ನಿಮ್ಮ ಕೈಗೆ ಬಿಲ್ಲು ಕೊಡೋನೂ ನಾನೆ, ಬ್ರಹ್ಮಾಸ್ತ್ರ ದಯಪಾಲಿಸೋನೂ ನಾನೇ..ಇವೆಲ್ಲವುಗಳ ಸೂತ್ರ ನನ್ನ ಕೈಲಿ..ಒಂದು ಬಾರಿ ನಿಮ್ಮ ಭಿಕ್ಷೆ ಪಡೆದರೆ..ಐದು ವರ್ಷ ನನ್ನ ನೀವಲ್ಲ ...ನಿಮ್ಮಪ್ಪ ಅಲ್ಲ ..ಆ ಬ್ರಹ್ಮ ಬಂದ್ರೂ ಅಲುಗಾಡಿಸೋಕಾಗಲ್ಲ...
ಅಂಥ ಪರಮ ಮಹಾ ನುಂಗಣ್ಣ ...ನಾನು. ಗೊತ್ತಾಯ್ತೇ..??
ಈಗ್ಲೂ ಸಮಯ ಇದೆ ಎಚ್ಚೆತ್ತುಕೋ..... ಮನುಷ್ಯ ಸ್ವಭಾವ ಸದಭಿರುಚಿ ಸಂಸ್ಕಾರವಂತ ಆಗಿದ್ದು ನಿಜಕಾಳಜಿ ಮಾನವತೆಯಿದ್ದರೆ ಅವನಿಗೆ ಅಂಜಿಕೆಯಿರುತ್ತೆ..ಒಳಗೊಂದು ಹೊರಗೊಂದು ಇರದವರು ನಂಬಿಕಾರ್ಹರು. ವಿವೇಚನೆಯಿಂದ ಮತ ಯಾಚಿಸುವವರ ಮತ್ತು ಮತಕ್ಕಾಗಿ ಅಂಗಲಾಚುವವರ ನಡುವಿನ ಅಂತರ ತಿಳಿದುಕೋ.....ಯಾಕೆ ಗೊತ್ತೆ.?? ಹಾಗೊಮ್ಮೆ ನಿನ್ನ ಚುನಾಯಿತ ದೂರ್ಥನಾಗಿದ್ದು ಗೆದ್ದರೆ...ನಿನ್ನ ಮೇಲೆ ಸವಾರಿ ಮಾಡ್ತಾನೆ...ಅದೇ ನಿನ್ನ ಆಯ್ಕೆ ಅರ್ಹ ಅಭ್ಯರ್ಥಿ ಗೆಲುವಿಗೆ ಕಾರಣವಾದರೆ ನಿನ್ನ ಅಭಿಲಾಶೆಗಳ ಸವಾರಿ ನೀನು ಮಾಡಬಹುದು.