Thursday, September 23, 2010

ಅಬ್ಬಬ್ಬಾ ಖಾರ.!!!...ಕಣ್ಣು ಮೂಗಲ್ಲಿ ನೀರು ಸುರಿಸೊಷ್ಟು...!!!!


ಚಿತ್ರ ಕೃಪೆ: 4.bp.blogspot.com

.
.ಸ್.ಸ್....ಅಸ್ಸೋ....ಅಬ್ಬಬ್ಬಾ...ಖಾರ..ಖಾರ.....!!!

ಯಾವುದಾದ್ರೂ ತಿಂಡಿ ಖಾರವಾಗಿದ್ರೆ ಅದು ಸಹಿಸೋಕೂ ಆಗದಷ್ಟು ಅಂದ್ರೆ.....ಮೇಲಿನ ಉದ್ಗಾರ ನಿಮಗೆ ಹೊಸದೇನಲ್ಲ...ನೀವೂ ಅನುಭವಿಸಿರ್ತೀರಾ, ಇಲ್ಲ ಅಪ್ಪಿ ತಪ್ಪಿ ಉಪ್ಪಿಟಿನಲ್ಲೋ ಮತ್ಯಾವುದೋ ತಿಂಡಿಯಲ್ಲೋ ಹಸಿರು ಬಟಾಣಿ ಅಥವಾ ಹಸಿರು ಹುರುಳಿಕಾಯಿ ಅಂತ ಅಂದ್ಕೊಂಡು ಹಚ್ಚಿದ ಮೆಣಸಿನಕಾಯಿಯನ ತಿಂದು ಬಾಯ್ಬಾಬಿ ಬಿಟ್ಟು ನೀರು ಕುಡಿದಿರ್ತೀರ...ಕಣ್ಣೊರೆಸಿರ್ತೀರ...ಮೂಗಲ್ಲಿನ ನೀರು ಬೀಳ್ಸಿರ್ತೀರ...ಅಲ್ವಾ...?!!

ಹೌದು.., ಖಾರ ಅಂದ್ರೆ ತಕ್ಷಣ ಕಣ್ಣಿನ ಮುಂದೆ ನಿಲ್ಲೋದು ಮೆಣಸಿನಕಾಯಿಯ ಚಿತ್ರ.

ಖಾರ...?? ಏನಿದು...?? ಇಂಗ್ಲೀಷರಿಗೆ ಇದನ್ನ ವರ್ಣಿಸೋಕೆ ಆಗದೆ ’ಹಾಟ್’ ಅಂತಾರೆ..!!

ಅಯ್ಯೋ..ಮೂದೇವಿ ಬಿಸಿ ಎಂತದ್ದು..??!! ಖಾರ ಅನ್ನೋಕಾಗಲ್ವಾ ಅಂತ ಊರಿಗೆ ಬಂದಿದ್ದ ನನ್ನ ವಿಲಾಯಿತಿ ಸ್ನೇಹಿತ ಚೋಟು ಮೆಣಸಿನ ಕಾಯಿ ಚೂರನ್ನು ತಪ್ಪಿ ತಿಂದು ಕೆಂಪು ಕೆಂಪು..ಆಗಿ ಬಾಯಿ..ಬಾಯಿ...ಆಂ...ಎನ್ನುತ್ತಾ ಹಾಟ್ ಹಾಟ್ ಎಂದಾಗ ಅಜ್ಜಿ ಎಂತ ಹೇಳುತ್ತೆ ಅದು ? ಎಂದಿದ್ದಕ್ಕೆ ಬಿಸಿ..ಬಿಸಿ ಅಂತ ಯಥಾವತ್ ತರ್ಜುಮೆ ಮಾಡಿದ್ದೆ ...ಆಗ ಹೇಳಿದ್ದು ಅಜ್ಜಿ...

ಹಾಂ ವಿಷಯಕ್ಕೆ ಬರೋಣ...,

ಖಾರ..ಎಲ್ಲಿಂದ ಬರುತ್ತೆ?

ಖಾರ, ಎಲ್ಲರೂ ತಿಳಿದ ಹಾಗೆ ಒಂದು ಸ್ವಾದವಲ್ಲ...ಇದನ್ನು ಟೇಸ್ಟ್ ಎನ್ನಲಾಗದು ...ಕಪ್ಪು ಹೇಗೆ ಒಂದು ವರ್ಣ ಅಲ್ಲವೋ ಹಾಗೆ. ಖಾರದಾಯಕ ಗುಣ “ಕ್ಯಾಪ್ಸಾಸಿನ್” ಎಂಬ ರಾಸಾಯನಿಕ ತತ್ವದಿಂದ ಬರುತ್ತದೆ. ಚರ್ಮ ಮತ್ತು ವಿಶೇಷತಃ ನಾಲಿಗೆಯ ಮೇಲಿನ ’ಶಾಖ’ಕ್ಕೆ ಸ್ಪಂದಿಸುವ ಕೋಶಿಕೆಗಳನ್ನು ಕೆಣಕುವ ಗುಣ ಈ ರಾಸಾಯನಿಕ ಅಂಶಕ್ಕೆ ಇರುತ್ತದೆ ಇದು ಅಂತಹ ಕೋಶಿಕೆ ಮತ್ತು ನರತಂತುಗಳ ಮೂಲಕ ಮಿದುಳಿಗೆ ತಪ್ಪು-ಕಲ್ಪಿತ ಸಂದೇಶವನ್ನು ರವಾನೆ ಮಾಡುವುದರಿಂದ “ಖಾರ” ದ ಸ್ವಾದಾನುಭವವಾಗುತ್ತದೆ. ಇದು ಬೆವರುವಿಕೆ (ಶಾಖದ ಪರಿಣಾಮ)ಯನ್ನು ಪ್ರಚೋದಿಸುತ್ತದೆ ಈ ಕ್ರಿಯೆಗೆ ’ಎಂಡಾರ್ಫಿನ್’ ಎಂಬ ಸ್ರಾವಕ ಕಾರಣವಾಗಿರುತ್ತದೆ. ಹಾಗಾಗಿ ಖಾರ ಉರಿಯನ್ನು ಉಂಟುಮಾಡುವುದಲ್ಲದೇ ಎಂಡಾರ್ಫಿನ್ ಉತ್ಪತ್ತಿ ಮತ್ತು ಬೆವರುವಿಕೆಗೆ ದಾರಿ ಮಾಡುತ್ತದೆ.

ಹಿಂದಿನ ದಿನಗಳಲ್ಲಿ ಖಾರತ್ವ ಅಳೆಯೋಕೆ ಆಸ್ವಾದಕರನ್ನು ಅಥವಾ ಸ್ವಾದ ವಿಶೇಷಜ್ಞರನ್ನ ನೇಮಿಸಿ ಅವರು ಸ್ವಾದ ನೋಡಿ ಎಷ್ಟು ಖಾರ ಎನ್ನುವುದನ್ನು ಅಳತೆಪಟ್ಟಿಯ ಆಧಾರದಲ್ಲಿ, ಅಂದರೆ ಹೋಲಿಕೆ ಆಧಾರ, ಖಾರವಿಲ್ಲ, ಕಡಿಮೆ ಖಾರ, ಸ್ವಲ್ಪ ಖಾರ, ಮಧ್ಯಮ ಖಾರ, ಹೆಚ್ಚು ಖಾರ ಅತಿ ಹೆಚ್ಚು ಖಾರ, ಅಸಹ್ಯ ಖಾರ ಹೀಗೆ ವರ್ಗೀಕರಣದ ಮೂಲಕ ಅಳತೆಪಟ್ಟಿ ತಯಾರಿಸಲಾಗುತ್ತಿತ್ತು. ಕ್ರಿ.ಶ.1912 ರಲ್ಲಿ ವಿಲ್ಬರ್ ಸ್ಕೋವಿಲೆ ಎಂಬ ಅಮೆರಿಕಾ ತಜ್ಞ ಖಾರದಾಯಕ ಗುಣ ’ಕ್ಯಾಪ್ಸಾಸಿನಾಯ್ಡ್ಸ’ ಎಂಬ ಅಂಶ/ಘಟಕದ ಪ್ರಮಾಣದ ಮೇಲೆ ಅವಲಂಬಿಸಿರುತ್ತದೆಂದು ಸಾಧಿಸಿದ. ಆ ನಂತರ ಯಾವುದೇ ಸಸ್ಯಜನ್ಯ ಅಥವಾ ’ಕ್ಯಾಪ್ಸಾಸಿನಾಯ್ಡ್ಸ’ ಅಂಶವುಳ್ಳ ತಿಂಡಿ, ಆಹಾರ ಪದಾರ್ಥ, ತರಕಾರಿ ಇತ್ಯಾದಿಗಳ ಖಾರತ್ವವನ್ನು ’ಕ್ಯಾಪ್ಸಾಸಿನಾಯ್ಡ್ಸ’ ಪ್ರಮಾಣದ ಅಧಾರದ ಮೇಲೆ ಸ್ಕೋವಿಲೆ ಖಾರಾಂಶ (ಸ್ಕೋವಿಲೆ ಹೀಟ್ ಯೂನಿಟ್ಸ್, SHU) ಗಳು ಎಂದು ಹೇಳಲಾಗುತ್ತದೆ.

ಇನ್ನು ಮೆಣಸಿನಕಾಯಿ, ಖಾರ ಅಂದ್ರೆ ಮೆಣಸಿನಕಾಯಿಯೇ ಅಲ್ಲವೇ...? ಇದರಲ್ಲಿ ಹಲವಾರು ವಿಧಗಳು, ಬಣ್ಣಗಳು, ರೂಪಗಳು,,,, ಹಸಿಕಾಯಿ, ಒಣಕಾಯಿ, ಬೀಜ, ಇತ್ಯಾದಿ.

ಪ್ರಪಂಚದಲ್ಲಿ ಅತಿ ಖಾರವಾದ ಮೆನಸಿನಕಾಯಿ ಭಾರತದಲ್ಲಿ ಸಿಗುತ್ತದೆಂದರೆ ನಂಬುತ್ತೀರಲ್ಲವೇ...ಆದ್ರೆ ಅದು ಬಿಸಿಲ ತಾಪದ ರಾಜಸ್ಥಾನದಲ್ಲಿಯೋ ಅಥವಾ ಖಾರ ತಿನ್ನೊದಕ್ಕೇ ಹೆಸರಾದ ಕರ್ನಾಟಕದ ಬಳ್ಳಾರಿ, ಬ್ಯಾಡಗಿಯಿಂದಲೋ ದೊರೆಯುವಂಥದಲ್ಲ....ಹಸಿರುಸಿರಾಡುವ ಪೂರ್ವೋತ್ತರ ರಾಜ್ಯಗಳಾದ ನಾಗಾಲ್ಯಾಂಡ್, ಮಣಿಪುರ, ಅಸ್ಸಾಂ ಗಳಲ್ಲಿ ದೊರೆಯುತ್ತವೆ. ಇವುಗಳನ್ನು “ನಾಗಾ ಜೋಲಾಕಿಯ” ಮೆಣಸಿನ ಕಾಯಿ ಎನ್ನುತ್ತಾರೆ. “ಗಿನ್ನೆಸ್ ದಾಖಲೆ ಪುಸ್ತಕ” ದಲ್ಲಿ ಈ ಮೆಣಸಿನಕಾಯನ್ನು ವಿಶ್ವದಲ್ಲೇ ಅತಿ ಹೆಚ್ಚು ಖಾರದ ಮೆಣಸಿನಕಾಯಿ ಎಂದು ಮಾನ್ಯತೆ ನೀಡಲಾಗಿದೆ. ಮಾರುಕಟ್ಟೆಯಲ್ಲಿ ತರಕಾರಿ ಮಾರುವ ’ಇಮಾ’ ಗಳು ಹಿಕ್ಕಳದ ಸಹಾಯದಿಂದ ಅವನ್ನು ಹಿಡಿದು ತೂಕಕ್ಕೆ ಹಾಕುತ್ತಾರೆ. ಅತಿ ಖಾರವನ್ನು ಇಷ್ಟಪಡದ ಮಂದಿ “ನಾಗಾ ಜೋಲಾಕಿಯ” ಮೆಣಸಿನ ಕಾಯಿತೊಟ್ಟಿಗೆ ದಾರಕಟ್ಟಿ ಒಲೆಯ ಮೇಲ್ಭಾಗದಲ್ಲಿ ತೂಗುಬಿಟ್ಟು ಸಾಂಬಾರೊಳಕ್ಕೆ ಕೇವಲ ಮುಳುಗಿಸಿ ಎತ್ತುವುದರಿಂದ ಸಾಕಷ್ಟು ಖಾರ ಸಾಂಬಾರಿಗೆ ಹಾಕಿದಂತಾಗುತ್ತದಂತೆ !!!

ಈಗ ನಮ್ಮ “ನಾಗಾ ಜೋಲಾಕಿಯಾ” ದ ಖಾರತ್ವದ ಸ್ಕೋರು ಎಷ್ಟು ನೋಡೋಣವೇ...???

ಕ್ಯಾಪ್ಸಾಸಿನ್ ಶುದ್ಧ ಪುಡಿ                                            15-16 ದಶ ಲಕ್ಷ ಎಸ್.ಎಚ್.ಯು.

ನಾಗಾ ಬಿಹು ಜೊಲೊಕಿಯಾ                                       0.85 – 1.07 ದಶ ಲಕ್ಷ ಎಸ್.ಎಚ್.ಯು.

ಗುಂಟೂರು, ಜಮೈಕನ್ ಹಾಟ್ ಮೆಣಸಿನಕಾಯಿ              0.10 – 0.35 ದಶ ಲಕ್ಷ ಎಸ್.ಎಚ್.ಯು

ಭಾರತದ ಮತ್ತು ಥಾಯ್ ಮೆಣಸಿನಕಾಯಿ                      0.05 – 0.10 ದಶ ಲಕ್ಷ ಎಸ್.ಎಚ್.ಯು

ಪೆಮಿಂಟೋ ಅಥವಾ ಚೆರ್ರಿ ಮೆಣಸಿನಕಾಯಿ                           100 – 500 ಎಸ್.ಎಚ್.ಯು.

ಕ್ಯಾಪ್ಸಿಕಂ ದಪ್ಪ (ಬೆಲ್) ಮೆಣಸಿನಕಾಯಿ                                  0  ಎಸ್.ಎಚ್.ಯು

Sunday, September 19, 2010

ಮಗು-ಕೊಡು ನಿನ್ನಗು ನಮಗೂ

(ಚಿತ್ರ ಕೃಪೆ : ಪ್ರಕಾಶ -ಇಟ್ಟಿಗೆ ಸಿಮೆಂಟು  

ಕೇವಲ ಒಮ್ಮೆ ನೀ ನಗು

ನೀನಾಗಿಯಲ್ಲ, ಆಗಿ ಮಗು

ತೊಡೆ ಗೆರೆ-ಮುಖದ ಬಿಗು

ಮನತುಂಬಿ ನೀನೊಮ್ಮೆ ನಗು.

ಮತ್ತೆ ಬಂದರೇನು? ಎರಗಿ ಆಪದ

ಗುನುಗುನಿಸು ನಗುವಿನಾಪದ

ಕಣ್ಣಲಿ ಮಿಂಚು ಸುಳಿವಿಗಾಸ್ಪದ

ನಕ್ಕರೆ ಅದೇ ನಿಜ ಸಂಪದ.


ನೀನಕ್ಕರೆ ಮಗು ನಗುವುದು
ಮನ ಅರಳಿ ಕೊಡುವುದಾಮುದು

ಸಂಕಟ ನೂರು ಬರಬಹುದು

ಮಾಡಿಕೋ ನಗು ಆಮದು.


ನಕ್ಕರೆಂದರು ಅದೇ ಸ್ವರ್ಗ
ಈ ನೀಮಕೆ ಬದ್ಧರೆಲ್ಲ ವರ್ಗ

ಮುದಗೊಂಡ ಮನದ ಮಾರ್ಗ

ಕೊಳ್ಳಬೇಕಿಲ್ಲ ದತ್ತ ನಿಸರ್ಗ.

Thursday, September 16, 2010

ಜಲನಯನ - ಗುಬ್ಬಿ ಎಂಜಲಿಗೆ


(ಚಿತ್ರ ನಮ್ಮೊಳಗೊಬ್ಬ ಬಾಲು ಕೃಪೆ)
ನಯನದಾಳಕ್ಕೆ ನಲಿವಿತ್ತ
ಮನದಾಳಕ್ಕೆ ಮುದವಿತ್ತ
ಬ್ಲಾಗ್-ಬ್ಲಾಗೇತರ ಮಿತ್ರರಿಗೆ ಸಲಾಂ.
ತುಂತುರಾಗಿ ಹನಿಸಿ
ಎಲ್ಲವನೂ ನಿರ್ವಹಿಸಿ
ಕನಸ ನನಸಾಗಿಸಿದ ಶಿವುಗೆ ಸಲಾಂ.
ಜೊತೆಬಂದು ಜೊತೆಯಾದ
ಹಿತಮಾತು ಸಹಕಾರ ಎಲ್ಲದಕೂ
ಪರ್ಯಾಯವಾದ
ಸುಗುಣ, ಮಹೇಶ್, ಪ್ರವೀಣ್
ನಿಮ್ಮೆಲ್ಲರಿಗೆ ಆತ್ಮೀಯ ಸಲಾಂ.
ಎಲ್ಲರ ನಗಿಸು ಪ್ರಕಾಶ
ಯುವಸ್ನೇಹಿ ಸಾವಕಾಶ
ಅನಿರಾಘುಶಿಪ್ರನವೀನ್ನಾಗ್ ಗೆ ಸಲಾಂ.
ದೂರದಿಂದ ಬಂದು ಪ್ರೋತ್ಸಾಹಿಸಿದ
ಉದಯ್, ಚೇತು, ಟಿ.ಡಿ.ಕೆ, ಸೀತಾರಾಂ.
ಎಳವತ್ತಿ, ಬಾಲು, ದಿನಕರ್ ಎಲ್ಲರಿಗೂ ಸಲಾಂ
ಪಕ್ಕು, ಶಶಿ, ಸುಮನ, ಶ್ಯಾಮಲ, ನಿಶ,
ಎಸ್ಸೆಸ್ಕೆ, ದಿವ್ಯಾ, ವಿಆರ್ಬಿ, ದಿಲೀಪ್ರಗತಿ
ಗುರು, ಪರಾಂಜಪೆ, ಉಮೇಶ್, ಜಯಕ್ಕ, ಸುಧಿ,
ಸುಘೋಶ್, ಗುಬ್ಬಚ್ಚಿ, ಅಶೋಕ್ ಮತ್ತೆಲ್ಲರ
ಮನದಾಳದ ಪ್ರೋತ್ಸಾಹಕೆ ಸಲಾಂ
ಎಲ್ಲರ ತುಂಬು ಪ್ರೋತ್ಸಾಹಕೆ
ಜಲನಯನದ ಜೊತೆ
ಗುಬ್ಬಿ ಎಂಜಲ ಕಥೆ..
ಮತ್ತೊಮ್ಮೆ ಮಗದೊಮ್ಮೆ
ಸಲಾಂ ...ಸಲಾಂ.