Wednesday, April 2, 2014

ರಾಧಾಲಾಪ

ಚಿತ್ರ ಕೃಪೆ: ಅಂತರ್ಜಾಲ

ರಾಧಾಲಾಪ
*********
ನಿಲ್ಲಿಸು ಕೊಳಲ ನಾ
ತಾಳಲಾರೆ ನಿನ್ನ ತುಟಿಯ
ತಾಕ ತಾಪವಿದೆ ಈ
ತುಟಿಗೆ, ನುಡಿಸು
ನಡೆಸು-ಬೆರಳಾಟದಿ
ಬಿರಿಯರಿವೆ ಸಡಲಿಸು
ತಣಿಸೆನ್ನ ಮನದಣಿಯೆ
ಸವತಿಯ ನಾ ಸಹಿಸೆ
ಕಣ್ಮುಚ್ಚಿ ಕನಸಲೂ..

ಪನಘಟದಿ ಕಾದೆ
ನಿನ ಹಟದಿ ನೊಂದೆ
ಕರೆ ಕೊರಳೆತ್ತಿ ಒಮ್ಮೆ
ಕೊಳಲೆತ್ತಿದೆ ಬರಿದೆ,
ದೂರುವುದಿಲ್ಲ ಎಂದೂ
ಕದ್ದೆಯೆಂದು, ಮೆದ್ದೆಯೆಂದು
ಅರಿವಿದೆ ನಿನ್ನಾಟ ಕಾಟ
ನನ್ನುರಿಗೆ ಹಚ್ಚುವೆ
ಕೊಳಲದನಿಗೆ ಬೆಚ್ಚುವೆ
ಬಿಡು ಕಣ್ಣ ಮುಚ್ಚಾಲೆ
ಬಂದರೆ ಘನಶ್ಯಾಮ

ದಿಟ ನನಗೆ ಸೋಲೇ.