Thursday, May 14, 2009

ನವಿರು..ಕಚಗುಳಿ

ರಾತ್ರಿ ಕಂಡ ಬಾವಿ
ಬೆರೆತಾಗ ಕಣ್ಣು
ಕರಗುವುದು ಹೆಣ್ಣು.??!!
ಬೆಪ್ಪೇ, ಅದೊಂದು ಹುಣ್ಣು
ಕೆರೆದುಕೊಂಡರೆ ಏನೋ ಹಿತ
ಮರುಳಾಗಬೇಡ
ರಾತ್ರಿಕಂಡ ಬಾವಿಗೆ
ಹಗಲೇ ಬೀಳಬೇಡ

ಪ್ರೀತಿ
ತುಟಿ ಬಿಚ್ಚಲಿಲ್ಲ
ಕಣ್ಣು-ಕಣ್ಣು ಸೇರಿದ್ದವು
ಕಣ್ಣು ಮುಚ್ಚಲಿಲ್ಲ
ಮನಗಳು ಮಾತನಾಡಿದ್ದವು
ಮನ ಹಾಡಿತಲ್ಲ
ಕಣ್ಣು-ತುಟಿ ಸೇರಿರಲು

ವಿಚಿತ್ರ
ಕಣ್ಣು ಮುಚ್ಚಿದರೆ
ಚಿತ್ರ
ಮನಸಕಾಡಿದಳು
ಚಿತ್ರ
ಮನಗೆದ್ದು ಮೂಡಿದ
ಚಿತ್ರ
ಆಗದಾಯಿತು ಇದು ಹತ್ರ
ಅದಕೇ ಇದು ವಿ-
ಚಿತ್ರ

ಕರ್ತವ್ಯ

ನೆನೆಪುಮಾತ್ರದಿ
‘ಚುರ್‘ ಎಂದು ಸುಟ್ಟಾವು
ಅಂಗಾಲು
ಮರಳುಗಾಡೆಂದರೆ
ಸ್ಮೃತಿಯಲಿ ಹಾಯುವುವು
ಒಂಟೆ, ಪಾಪಾಸು ಕಳ್ಳಿ,
ದಳ್ಳುರಿಬಿಸಿಲ ಮರಳ
ಮೇಲಿನ ಬಳ್ಳಿ.
ಆದ್ರೂ ಇಲ್ಲಿ
ತೇಲಾಡುವರು
ಹಣದ ಹೊಳೆಯಲ್ಲಿ
ನೆರಳಿಲ್ಲ ಮರಳಲ್ಲಿ
ಆದರೂ...
ನೋಟುಗಳ ಚಾ-ಮರ
ಕುಡಿನೀರಿಗೆ,
ವಿದ್ಯುತ್ತಿಗೆ, ಸವಲತ್ತಿಗೆ
ಇಲ್ಲ ಬರ ಇಲ್ಲಿ.
ನಮ್ಮಲ್ಲಿ....
ಎಲ್ಲ ಇದೆ
ಪ್ರತಿಭೆ, ರವಿಪ್ರಭೆ
ಹಸಿರು, ಅನ್ನನೀಡೋ ಬಸಿರು,
ಅಗಾಧ ಜಲ
ನಿಧಿಯದಿರಿನ ನೆಲ
ಆದರೂ ಏಕೆ??
ರೈತ ಸುಣ್ಣವಾಗಿರುವ ಸೋತು
ನಿರುದ್ಯೋಗಿ-ಉದ್ಯೋಗಿ
ಬೀಳುವುದು ಕೊಟ್ಟು
ಹಗ್ಗಕೆ ಕೊರಳ ಜೋತು
ದಿನಗಳೆವ-ಕೊಳ್ಳೆ ಹೊಡೆದು
ತುಂಬಿಕೊಳುವ
ಬರಿ ಅಶ್ವಾಸನೆಯ ಪುಢಾರಿಯದು
ಕೇವಲ ಮಾತು.
ಬರಬೇಕು......
ಹೊಣೆಗಾರಿಕೆ
ಮೊದಲು ನಾಡು
ದೇಶದ ಹೆಗ್ಗಳಿಕೆ
ಎಚ್ಚೆತ್ತುಕೋ ಗೆಳೆಯ
ತೆಗೆದು ಹೊರಹಾಕು
ನೊಣವ ಹಾಲಿಂದ
ವಿಷಮಿಸುವವರ
ಬೆರೆಸಿ ಹಾಲಾಹಲವ
ಮೀಸಲಿಸಿ ಧರ್ಮವ
ಮನ, ಮನೆಗಳ ಬೆಳಕಿಗೆ
ಪಸರಿಸಿ ನಿಜ ಕರ್ಮವ
ನಾಡು-ರಾಷ್ಟ್ರದ
ಏಳಿಗೆಗೆ.