Monday, March 7, 2011

ಕೋರಿಕೆ ಸಾವು ಅಥವಾ ಇಚ್ಛಾಮರಣ (ಯೂಥನೇಸಿಯಾ)

ಮಾರ್ಚ್ ೭ ರಂದು ಸರ್ವೋಚ್ಛ ನ್ಯಾಯಾಲಯದ ಮಹತ್ತರ ತೀರ್ಪು: ಅರುಣಾ ಶಾನ್ ಭಾಗ್ ರವರ ದಯಾಮರಣದ ಕೋರಿಕೆ ಅರ್ಜಿ ತಿರಸ್ಕೃತ.
ಈ ವಿಷಯ ಹಲವರ ಮನದಲ್ಲಿ ವಿಷಯಗಳ ಗೊಂದಲ ಮೂಡಿಸಿರಬೇಕು, ಅದರಲ್ಲೂ ಜನಸಾಮಾನ್ಯನಿಗೆ ಇದು ಏನು..??!! ಎಂಬ ಸೋಜಿಗ.
ಅರುಣಾ ಶಾನ್ ಭಾಗ್ ಸುಮಾರು ೩೫ ವರ್ಷಗಳಿಂದ ಬದುಕಿಯೂ ಸತ್ತಂತಿರುವ ಸ್ಥಿತಿಯಲ್ಲಿ ಮುಂಬೈನ ಕೆ,ಇ.ಎಮ್. ಆಸ್ಪತ್ರೆಯಲ್ಲಿ ೬೪ ವರ್ಷ ವಯಸ್ಸಿನ ಅರುಣಾ ನರಳುತ್ತಾ ಹಾಸಿಗೆಯಲ್ಲಿ ಬಿದ್ದಿರುವ ಸ್ಥಿತಿ ಎಂತಹವರಿಗೂ ಅಯ್ಯೋ ಅನಿಸದಿರುವುದು ಅಸಾಧ್ಯ. ಸುಮಾರು ೨೯-೩೦ ವಯಸ್ಸಿನ ದಾಯಿ (ನರ್ಸ್) ಆಗಿ ಕೆಲಸ ಮಾಡುತ್ತಿದ್ದ ರೋಗಿಗಗಳ ಸೇವೆಯಲ್ಲಿ ನಿರತಳಾಗಿದ್ದ ಕರ್ನಾಟಕ ಉತ್ತರಕನ್ನಡ ಜಿಲ್ಲೆಯ ಈ ಹೆಣ್ಣುಮಗಳನ್ನು ಕಾಮ ಪೀಪಾಸು ವಾರ್ಡ್ ಬಾಯ್ ಒಬ್ಬ ಅತ್ಯಾಚಾರವೆಸಗುವ ಪೈಶಾಚಿಕ ಕೃತ್ಯದಲ್ಲಿ ಆಕೆಯ ಕೊರಳನ್ನು ನಾಯಿ ಸರಪಳಿಯಿಂದ ಬಿಗಿದ ಕಾರಣ ಆಕೆ ಮಿದುಳಿಂದ ಸಂವೇದನಾ ಸಂಪರ್ಕ ಕಳೆದುಕೊಂಡುದಲ್ಲದೇ ಮಾತೂ ಹೊರಡದಾಯಿತು. ಆಕೆಯ ಮೇಲೆ ಅತ್ಯಾಚಾರ ನಡೆದ ಮಾನಸಿಕ ಆಘಾತ ಆಕೆಯನ್ನು ಮಾತನಾಡದಂತೆ ತಡೆದಿರಬಹುದು ಎಂದು ತಿಳಿಯಲಾಗಿತ್ತು..ಆದರೆ ಅದು ಮಿದುಳಿನಿಂದ ಯಾವುದೇ ಪ್ರತಿಸ್ಪಂದನಾ ಕ್ರಿಯೆಗಳು ನಡೆಯದಾದಾಗ ಇದು ಕೊರಳ ಬಿಗಿತದಿಂದ ಮಿದುಳಿಗೆ ಆಮ್ಲಕನಕ ದೊರೆಯದೇ ಆದ ವೈದ್ಯಕೀಯ ಸಮಸ್ಯೆಯೆಂದು ತಿಳಿಯಿತು. ಡಾಕ್ಟರೊಬ್ಬರನ್ನು ಮದುವೆಯಾಗುವ ಸಂಭ್ರಮದಲ್ಲಿದ್ದ ಹೆಣ್ಣು ನಿರ್ಜೀವಕೊರಡಿನಂತೆ ೩೫ ವರ್ಷಗಳಿಂದ ಆಸ್ಪತ್ರೆಯ ಹಾಸಿಗೆಯಲ್ಲಿ ಬಿದ್ದಿದೆ. ಈ ಹೆಣ್ಣಿನ ಅನಿರ್ವಚನೀಯ ವೇದನೆಯನ್ನು ಮನಗಂಡ ಅರುಣಾಳ ಸ್ನೇಹಿತೆ ಮತ್ತು ಪತ್ರಕರ್ತೆ ಪಿಂಕಿ ವಿನಾನಿ ಅರುಣಾಳ ದಯಾಮರಣ ಕೋರಿ ಸುಪ್ರೀಂ ಕೋರ್ಟಿಗೆ ಮನವಿ ಸಲ್ಲಿಸಿದಳು. ಕಾನೂನಿನ ತೊಡಕುಗಳು ಅಥವಾ ಪೂರ್ಣ ವಿಶ್ಲೇಷಿತ ಕಾನೂನು ನಿಯಮಾವಳಿಗಳ ಅಭಾವದಿಂದ ಮತ್ತು ಇಂತಹ ತೀರ್ಪಿನ ದುರುಪಯೋಗಗಳ ಸಾಧ್ಯತೆಯನ್ನು ತಡೆಯಲು ಈ ಮನವಿಯನ್ನು ತಿರಸ್ಕರಿಸಲಾಯಿತು.
ದಯಾಮರಣ ಈಗ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಪ್ರಚಲನೆಯಲ್ಲಿದೆ. ದಯಾಮರಣ, ಕೋರಿಕೆ ಸಾವು ಅಥವಾ ಯೂಥನೇಸಿಯಾ ಎಲ್ಲಾ ಇದೇ ಪ್ರಕಾರದ ಅಪ್ರಾಕೃತಿಕ ಮರಣಕ್ಕೆ ಹೆಸರು. ಅಪಘಾತಗಳು, ಆಘಾತಗಳು ಮುಂತಾದುವು ಮನುಷ್ಯನ ಬಲು ವೇದನೆಯ ಮಿದುಳು ನಿಷ್ಕ್ರಿಯತೆಯಿಂದ ಕೂಡಿದ ಹಲವು ಅಂಗವೈಕಲ್ಯ ಅಥವಾ ನಿರುಪಯೋಗಿಯಾಗುವ ಸ್ಥಿತಿಯನ್ನು ಅನಾರೋಗ್ಯದ ಅಂತಿಮ ಸ್ಥಿತಿ (terminal illess) ಎನ್ನುತ್ತಾರೆ. ಇಂತಹ ಅವಸ್ಥೆಯಲ್ಲಿ ರೋಗಿಗೆ ಇಹದ ಯಾವುದೇ ಸ್ಪಂದನೆಯಿರುವುದಿಲ್ಲ ಹಲವರಿಗೆ ಯಾರನ್ನೂ ಗುರುತಿಸುವ ಶಕ್ತಿಯೂ ಇರುವುದಿಲ್ಲ, ಉಸಿರಾಟ ಆಮ್ಲಜನಕದ ಬಾಹ್ಯಪೂರೈಕೆಯಿಂದ ನಡೆಯುತ್ತದೆ. ಹಲವಾರು ಅಂಗಗಳು ಸರಿಯಾಗಿ ಕೆಲಸ ಮಾಡದೇ ಅದಮ್ಯ ವೇದನೆ ಅನುಭವಿಸುತ್ತಾರೆಯಾದರೂ ಅದನ್ನು ಹೇಳಿಕೊಳ್ಳುವ ಸ್ಥಿಯಲ್ಲಿರುವುದಿಲ್ಲ. ಅವರ ಹಿಂಸೆಯನ್ನು ನೋಡಲಾಗದೇ, ಅವರಿಗೆ ಮತ್ತೆ ಆರೋಗ್ಯಪ್ರದಾನ ಮಾಡಬಲ್ಲ ಎಲ್ಲಾ ಸಾಧ್ಯತೆಗಳೂ ಶೂನ್ಯವಾದಾಗ ಅವರಿಗೆ ಶಾಂತ ಮರಣ ಮತ್ತು ಹಿಂಸೆಯಿಂದ ಬಿಡುಗಡೆ ನೀಡಲು ದಯಾಮರಣ ಎಂಬ ಸಿಧ್ಹಾಂತ ಹುಟ್ಟಿಕೊಂಡಿತು. ಈ ಎಲ್ಲ ವಿಷಯ ಗಮನಿಸಿದರೆ ನನಗೆ ಭೀಷ್ಮ ಪಿತಾಮಹರ ಇಚ್ಛಾಮರಣದ ಪೌರಾಣಿಕ ಘಟನೆ ನೆನಪಾಗುತ್ತದೆ.

ನಿಜವಾಗಿಯೂ ವೇದನೆಯಿಂದ ಯಾತನೆಯಿಂದ ಒಂದು ಜೀವಕ್ಕೆ ಮುಕ್ತಿ ನೀಡುವುದಾದರೆ ದಯಾಮರಣ ಯಾಕಾಗಬಾರದು....?

ಏನಂತೀರಿ...?

ಯೂಥನೇಸಿಯಾ ಬಗ್ಗೆ ಹೆಚ್ಚಿನ ಮಾಹಿತಿಗೆ ಈ ಕೊಂಡಿಯನ್ನು ಕ್ಲಿಕ್ಕಿಸಿ......
http://www.euthanasia.com/index.html