Wednesday, September 4, 2013

ಹಳ್ಳಿ-ದಿಲ್ಲಿ

ಹಳ್ಳಿ-ದಿಲ್ಲಿ

ಹಳ್ಳಿಯಲೀಗ
ಆ ಕಸುವಿಲ್ಲ
ಬಾವಿ ಕಟ್ಟೆಯೇ
ಬತ್ತಿದೆ, ನೀರಿಲ್ಲ..
ನೀರಿಗೆ ಬರುವ
ನೀರೆಯರ ಆ
ಮನ ಮೋಹಕ
ಸಾಲುಗಳಿಲ್ಲ..
ಗಿಲ್ಲಿಗೆ ಸಿಗುವ
ಮಣ್ಕೊಡವಿಲ್ಲ
ಕೊಡವಲು ಧೂಳಿಲ್ಲ
ಚಾವಡಿಗಳಿಲ್ಲ
ಕಳ್ಳಿ ಬೇಲಿಗಳಿಲ್ಲ
ಕದ್ದೋಡಲು
ಹಿತ್ತಲ ಸೀಬೆಯಿಲ್ಲ
ಕಿತ್ತಳೆ ಮಾವಿಲ್ಲ
ಚಡ್ಡಿಗಳಿಲ್ಲ
ಜೋಬಿಗೆ ಅಂಟು
ಜಾಮೂನು ನಂಟು
ಬೆಲ್ಲದ ಜಿಗಟಿಲ್ಲ
ಬೀದಿ ಜಗುಲಿಗಳಿಲ್ಲ
ಓಣಿ ಗುಂಟಗಳಿಲ್ಲ
ಕೆಸರಾಗುವ
ಎರಚಾಡುವ
ಎಮ್ಮೆಗಳಿಲ್ಲ
ಹೆಮ್ಮೆ ತೋಟಗಳಿಲ್ಲ
ಭಜನೆ ಜಾಗಟೆಯಿಲ್ಲ
ಮಂಡ್ರಾಯನೆತ್ತೋ
ಗೊಣ್ಣೆಸಿರ್ಕನಿಲ್ಲ
ಎಲ್ಲರೊಂದಾಗಿ
ಈದ್-ಗಣೇಶನೆತ್ತುವ
ಸಾಬಿ-ತುರ್ಕನಿಲ್ಲ
ಹರ್ಕು ಕೇರಿಯಿಲ್ಲ
ಮುರ್ಕು ಮೋರಿಯಿಲ್ಲ
ತಿರುಕನಿಲ್ಲ
ಶಾನುಭೋಗ
ತೋಟಿ-ತಳವಾರ
ಗೌಡ-ಗೌಡ್ತಿಯರ
ಗರಿ ಗರಿ ದೌಲತ್ತಿಲ್ಲ
ನವಮಿ ರಥವಿಲ್ಲ
ಬಾಬಯ್ಯನ
ಅಬ್ಬರವಿಲ್ಲ.....
ಏನೆಲ್ಲಾ ಇತ್ತು..!!
ಈಗ ಏನೇನೂ ಇಲ್ಲ
ಕೋಟಿಗೆ ಮಾರಿದ
ತೋಟಿ ತನ್ನೆಲವ
ಅಲ್ಲೇ ನಿರ್ಮಿತ
ಫ್ಯಾಕ್ಟರಿಯಲಿ
ದಿನಗೂಲಿಯಲ್ಲಾ...!!
ಕೆರೆಬತ್ತಿ ಅಲ್ಲೇ
ಅಗರ ಬತ್ತಿ
ಉತ್ಪತ್ತಿ, ತ್ಯಾಜ್ಯ
ಬಣ್ಣದ ಕೆಸರ ಕುಂಟೆ
ಕೇರಿ ಹೈಕಳು
ಸಂಜೆಯಾದರೆ
ಒಪ್ಪೊತ್ತು ತಿಂದು
ಮೂರೊತ್ತು ಕುಡ್ದು
ತೂರಾಡುವರಲ್ಲಾ..!!
ಕಾಲ್ ಸೆಂಟರ್ಗೆ 
ಹುಡ್ಗೀರ ದಂಡು
ಸೊಂಟಕೆ ವ್ಯಾನಿಟಿ
ಕೊಡವೇನು..?
ಸೊಂಟವೇ ಇಲ್ಲಾ..
ಅಕ್ಕಂದಿರೀಗ 
ಶೋಕಿ ಆಂಟಿಯರು
ಕಿಟ್ಟಿ ಪಾರ್ಟಿಗಂಟಿ
ಸೋಬಾನೆ ಗೀಗಿ
ಟೀವಿಗೆ ಮೀಸಲು
ನವಮಿ ನಾಟಕ
ಬಯಲಾಟ ಮೋಹಕ
ಉಳಿದಿಲ್ಲ ಈಗ ಇಲ್ಲಿ..
ಅದಕೇ ಏನೋ..
ಮಳೆಯೂ ಅತಿಥಿ
ಬಂದು ಹೋಗುತ್ತೆ
ಬಂದದ್ದೂ ಮರೆಯುತ್ತೆ
ಹಸಿರು ಗದ್ದೆ-ಹೊಲ?
ಅವರೇ ಕೇಳ್ತಾರೆ
ಏನಿವುಗಳೆಲ್ಲಾ??
ಹಳ್ಳಿ- ಹಳ್ಳಿ-ಹಳ್ಳಿ
ಎಲ್ಲಿವೆ ಎಲ್ಲಾ ಆಗಿವೆ
ದಿಲ್ಲಿ ದಿಲ್ಲಿ ದಿಲ್ಲಿ