Tuesday, March 17, 2009

ನಮ್ಮ ನಾಯಕರು, ರಾಜಕಾರಣಿಗಳು ಜನಸಾಮಾನ್ಯರನ್ನು ದಾಳಗಳಂತೆ ಉಪಯೋಗಿಸಿಕೊಂಡುತಮ್ಮ ರಾಜಕೀಯಬೇಳೆ ಬೇಯಿಸಿಕೊಳ್ಳುತ್ತಿರುವದನ್ನು ನೋಡಿದರೆ ಬೇಸರವಾಗುತ್ತದೆ...ಎಲ್ಲರ ಬಗ್ಗೆ ಕಾಳಜಿ ಇವರಿಗೆ ಚುನಾವಣೆಯ ಸಂದರ್ಭದಲ್ಲೇ ಏಕೆ ಬರುತ್ತೆ?? ದೇವರಮೇಲೆ ಪ್ರಮಾಣಮಾಡಿ ಮತ್ತೆ ನೆನೆಪು ಹಸಿರಾಗಿರುವಾಗಲೇ ಅದಕ್ಕೆ ವಿರುದ್ಧವಾಗಿರುತ್ತವೆ ಇವರ ನಡವಳಿಕೆ...ಏಕೆ..?? ಜನಸಾಮಾನ್ಯ..ಮೂರ್ಖನೆಂದೇ..? ಇವರ ಅನ್ನಿಸಿಕೆ...ನಮ್ಮ ಬೆಳವಣಿಗೆ, ನಾಡಿನ ಏಳಿಗೆ ಯಾವಾಗ ಇವರ ಪ್ರಥಮ ಆದ್ಯತೆಯಾಗುವುದೋ...ಕಾಯಬೇಕಾದ ಅನಿವಾರ್ಯತೆ ನಮ್ಮದಾಗಿದೆ...
ಒಂದು ಸಣ್ಣ ಪ್ರಹಸನ...ಓದಿ..ವಸ್ತುಸ್ಥಿತಿಯ ನಿಮ್ಮ ವಿಶ್ಲೇಷಣೆ ಕೊಡಿ....


ಆಜಾದ್..

ಹೇಳೋದೊಂದು-ಮಾಡೋದೊಂದು

"ಏನ್ರಿ ವನಜಮ್ಮ ಪುರಸೊತ್ತಾಗಿ ..ಕೂತ್ಬಿಟ್ರಿ ಜಗ್ಲಿಮೇಲೆ..??"
"ಹೌದ್ರಿ ಸರಸಮ್ಮ ನಮ್ಮೆಜಮಾನ್ರು ಟೂರ್ ಅಂತ.. ಡೆಲ್ಲಿಗೆ ಹೋಗಿದ್ದಾರೆ..ಮಗಳನ್ನ ಅವಳ ಅಕ್ಕ-ಭಾವ ಬಂದು ಕರ್ಕೊಂಡೋದ್ರು..ಏನೋ ಒಂದ್ಸೊಲ್ಪ ಅಡ್ಗೆ ಅಂತ ಬೇಯ್ಸ್ಕೊಂಡ್ರೆ...ದಿನಾಯಿಡೀ ಆಗುತ್ತೆ.... ಟೀವಿ ನೋಡೋಣ ಅಂದ್ರೆ ಘಳಿಗೇಗೊಂದ್ಸರ್ತಿ ಕರೆಂಟು ಪುಸ್ ಅನ್ನುತ್ತೆ..."
ಎಂದಿನಂತೆ...ಶತಾಬ್ದಿ-ಬೃಂದಾವನ ಎಕ್ಸ್ ಪ್ರೆಸ್ ಕೂಡುವ ಸಮಯ ಅದು...ಅಂದ್ರೆ...ಈ ಇಬ್ಬರು ಮಹಿಳಾಮಣಿಗಳ ಭೇಟಿಯ ಸಮಯ!!! ಶತಾಬ್ದಿ ಹೆಸರಿಗೆ ಮಾತ್ರ ಶತಾಬ್ದಿ...ಅದೇ ನಾಲ್ಕುವರೆ ಐದು ಘಂಟೆ ತಗೋಳುತ್ತೆ ಅದೂ..ಬೆಂಗಳೂರಿಂದ ಮದ್ರಾಸ್ ಗೆ ತಲುಪೋಕೆ.
ವಠಾರದ ಸ್ತ್ರೀ ಮಣಿಗಳಿಬ್ಬರು (ಅದರಲ್ಲೂ ಈ ಇಬ್ಬರು) ಸೇರಿದ್ರೆ ಏನು ಆಗಬೇಕೋ ಅದೇ ಆಗ್ತಾ ಇತ್ತು.ವಠಾರದ ಹೆಂಗಸರೆಲ್ಲಾ ಹೇಳೋ ಪ್ರಕಾರ.. ವನಜಮ್ಮ ಬೃಂದಾವನ್ ಆದ್ರೆ...ಸರಸಮ್ಮ ಶತಾಬ್ದಿ!!...ರೈಲು ಬಿಡೋದ್ರಲ್ಲಿ ಅಂತೆ!!!. ಅಷ್ಟರಲ್ಲಿ .."ಒಂದ್ ಬಟ್ಲು ಸಕ್ಕರೆ ಇದ್ರೆ ಕೊಡ್ರಿ..ಸರಸಮ್ಮ...ಶನಿವಾರ ಸಂತೆಯಿಂದ ನಮ್ಮೆಜಮಾನ್ರು ಸರಕು ತಂದಮೇಲೆ ಕೊಟ್ ಬಿಡ್ತೀನಿ" ಎನ್ನುತ್ತಾ ರುಕ್ಮಣಮ್ಮ ಸೇರಿಕೊಂಡರು ಸಂಭಾಷಣೇಗೆ....
(ಇವರನ್ನ..ಕೆ,ಕೆ, ಎಕ್ಸ್ ಪ್ರೆಸ್ ಅಂತಾನೇ ವಠಾರದ ಮಹಿಳಾಮಣೀಗಳು ಚುಡಾಯಿಸುವುದು). ಅಂದಹಾಗೆ...ರುಕ್ಮಣಮ್ಮನವರ ಎಜಮಾನ್ರು ..ಅಂದ್ರೆ..ಲಕ್ಷ್ಮಣಪ್ಪ ..ಮೊನ್ನೆ ಮೊನ್ನೆನೇ ಸಬ್-ರೆಗಿಸ್ಟ್ರಾರ್ ಆಫೀಸಿನಲ್ಲಿ ಹಿರಿಯ ಗುಮಾಸ್ತನ ಕಿರಿಯ ಸಹಾಯಕನಾಗಿ ಸೇರಿದ್ದು, ಮೂಲೆ ಮನೆ Dr. ಮಸ್ತಾನ್ ಸಾಯೇಬ್ರ ಬೇಗಂ ಮಮ್ತಾಜಳ ಪ್ರಕಾರ ಇವರಿಬ್ಬರ ಮದುವೆ ಆಗಿ ಹಪ್ತ-ಹಪ್ತ ಹತ್ತು ತಿಂಗಳೇ ಅಗಿದ್ದು.. ಮಮ್ತಾಜ್ ವಠಾರದ ರೇಡಿಯೋ ಸ್ಟೇಶನ್ ಎಂದೇ ಸುಪರಿಚಿತಳು. ವಠಾರ ಮಾತ್ರವಲ್ಲದೇ ಮೊಹಲ್ಲಾದ ಸುದ್ದಿ, ಸಮಾಚಾರ ಬೇಕು ಅಂದ್ರೆ ಮಮ್ತಾಜಳನ್ನೇ ಭೇಟಿಮಾಡಬೇಕು. ಮಮ್ತಾಜ್ ಕನ್ನಡದಲ್ಲಿ ಎಮ್. ಎ. ಮಾಡಿ ಮನೆ ಹೆಂಡತಿ...ಯಾಗಿದ್ದು...(ಏನು,,?? ಇನ್ನೇನು ಬೀದಿ ಹೆಂಡ್ತಿ ಬೇರೆ ಇರ್ತಾರೇನು..?? ಅಂತ ಕೇಳ್ತೀರ..?..ಅಲ್ಲಾ ಸ್ವಾಮಿ..house wife ಅನ್ನೋದನ್ನ ಕನ್ನಡೀಕರಿಸಿ ಹೇಳಿದೆ ಅಷ್ಠೆ!!..ನಿಮಗೆ ಮುಜುಗರ ಆಗೋದಾದ್ರೆ..house wife ಅಂತಾನೇ ಅನ್ನಿ).. ಮಮ್ತಾಜ್ ಎಲ್ಲಾ ಸಮಾಚಾರವನ್ನು ಸಾಭಿನಯ ಸಾದರ ಪಡಿಸುತ್ತಿದ್ದುದರಿಂದಲೇ..ಇಡೀ ವಠಾರದಲ್ಲೇ..world famous. ಇನ್ನು ಮಮ್ತಾಜ್ಳ "ಉನೋ" (ತನ್ನ ಗಂಡನ ಬಗ್ಗೆ ಪ್ರಸ್ತಾಪ ಬಂದಾಗ ಮಹಿಳಾ ಮಂಡಳಿಯಲ್ಲಿ ಮಮ್ತಾಜ್..ನಮ್ಮ "ಉನೋ" ಕ್ಲಿನಿಕ್ಕಿಗೆ ಹೋಗಿದ್ದಾರೆ..ನಮ್ಮ "ಉನೋ" ಪೇಶೆಂಟ್ ನ ನೋಡ್ತಿದ್ದಾರೆ..ಅಂತೇ ಹೇಳುತ್ತಿದ್ದುದು). ಡಾ. ಮಸ್ತಾನ್ (ಹೆಸರು ಅಷ್ಟೇ ಆದರೂ...ಮುಸ್ಲಿಮರಾದ್ದರಿಂದ ಎಲ್ಲ ಮುಸ್ಲಿಮರಿಗೆ ಅನಾಯಾಸವಾಗಿ ನಮ್ಮ ಹಿಂದೂ ಸ್ನೇಹಿತರು ಕೊಡೋ ಉಪಾಧಿ ಅಂದರೆ.. . "ಸಾಹೇಬ್" ಅನ್ನೋದು...ಅದಕ್ಕೇ ಸುಮಾರು ಎಲ್ಲ ಮುಸ್ಲಿಮರ ಹೆಸರು ಸಾಬ್ ಅಥವಾ ಸಾಯೇಬ್ ಇಲ್ಲವೇ ಸಾಹೆಬ್ ಅನ್ನೊ ಕೊನೆಯ ಹೆಸರನ್ನು ಹೊಂದಿರುತ್ತದೆ.. ನಮ್ಮ ಕರ್ನಾಟಕದ ಪೂರ್ವ ಸಚಿವರಾದ ನಜೀರ್ ಸಾಹೇಬರನ್ನು ನೀರ್ ಸಾಹೇಬ್ರು ಅಂತ ಕರೀತಿದ್ದುದು ಎಲ್ಲರಿಗೂ ತಿಳಿದದ್ದೇ.
"ಅಲ್ರೀ ವನಜಮ್ಮನವರೇ..ನಿಮ್ಮೆಜಮಾನ್ರು..ಬಾಲಕಲ್ಯಾಣ ಮಂಡಳಿ ಅಧ್ಯಕ್ಷರಾದಮೇಲೆ ಮೊದಲನೇ ಸರ್ತಿ ಅಲ್ಲ್ವಾ ಡೆಲ್ಲಿಗೆ ಹೋಗ್ತಿರೋದು..?? ಒಳ್ಳೆ timeನಲ್ಲಿ ರೂಲಿಂಗ್ ಪಾರ್ಟಿಗೆ ಸೇರ್ಕೊಂಡ್ರು ಬಿಡಿ ನಿಮ್ಮೆಜಮಾನ್ರು..!!" ಎನ್ನುತ್ತಾ ...ಹೊಗಳೋ ಹಾಗೂ ಇರ್ಬೇಕು..ರಾಜಕಾರಣಿಗಳು ಪಕ್ಷಗಳಿಗಿಂತ powerಗೇ ಹೆಚ್ಚು ನಿಷ್ಠೆ ತೋರಿಸುತ್ತಾರೆ ಅಂತ ಹೇಳೋ ಹಾಗೂ ಇರ್ಬೇಕು ಅನ್ನೋ ಹಾಗೆ..ಒಂದು daialogue ಹೊಡೆದೇ ಬಿಟ್ರು...
“ಹೌದ್ರೀ..ಇವ್ರಿಗೆ ಮಿನಿಸ್ಟರ್ ಹುದ್ದೇನೇ ಕೊಡ್ತಿದ್ದರು..ಆದರೆ ಇವರೇ ಬೇಡ.. ತಕ್ಷಣ ಮಿನಿಸ್ಟರ್ ಆದ್ರೆ..ಪದವಿ ಆಸೆಗೆ ಪಕ್ಷ ಸೇರಿದ್ದು ಇವನು ಅನ್ನೋ ಅಪವಾದ ಬರುತ್ತೆ ಅಂತ ಹೇಳಿ ಈ ಮಂಡಳಿ ಅಧ್ಯಕ್ಷಗಿರಿಗೆ ಒಪ್ಕೊಂಡರು” ಎಂದರು ವನಜಮ್ಮ ಬೀಗುತ್ತಾ. “ಅಮ್ಮಾ...ಮುಸುರೆ ತಿಕ್ಕಿ ಆಯಿತು ಬಟ್ಟೆ ನೆನೆಹಾಕಿದ್ದೀನಿ....ಇಷ್ಟರೊಳಗೆ ಮನೆ ಕಸ ತೆಗೆದು ಒರೆಸಿಬಿಡ್ಲಾ??” ಎನ್ನುತ್ತಾ ಸುಮಾರು 12-13 ವರ್ಷದ ಹೆಣ್ಣುಮಗಳೊಂದು ಬಂದು ವನಜಮ್ಮ ನವರನ್ನು ಕೇಳಿತು. “ಆಂ..ಹಾಗೇ ಮಾಡು..ನಂತರ ಬಟ್ಟೆ ಒಗೆದು ಮಹಡೀ ಮೇಲೆ ಒಣಹಾಕು” ಎಂದರು ವನಜಮ್ಮ. "ಲೇ ರಾಮಿ..ಹಾಗೇ..ಆಡಿಗೆ ಮನೆಯಿಂದ ಒಂದು ಬಟ್ಟಲು ಸಕ್ರೆ ತಂದು ರುಕ್ಮಣಮ್ಮನವರಿಗೆ ಕೊಡು" ಎಂದರು ವನಜಮ್ಮ ಒಳಹೋಗುತ್ತಿದ್ದ ರಾಮಿಯನ್ನು ಕರೆದು. ರಾಮಿ...ಅರ್ಥಾತ್...ರಮ..ಹೊಸದಾಗಿ ವನಜಮ್ಮನವರ ಮನೆ ಕೆಲಸಕ್ಕೆ ಬಂದಿದ್ದಳು. ಅವಳ ಅಪ್ಪ ಚಿನ್ನಪ್ಪ ವನಜಮ್ಮನವರ ಪತಿರಾಯ ಪ್ರಸಾದಪ್ಪನವರಲ್ಲಿ ರಮಾಳ ಅಕ್ಕನ ಮದುವೆಗೆ ಅಂತ 10 ಸಾವಿರ ಸಾಲ ಅಂತ ತೆಗೆದುಕೊಂಡಿದ್ದ, ಸಾಲ ತೀರಿಸಲು ತಡ ಮಾಡಿದ ಅಂತ ಪ್ರಸಾದಪ್ಪ ಪೀಡಿಸಿ..ಮನೆ ಕೆಲಸಕ್ಕೆ ಒಂದು ಆಳನ್ನು ಕಳುಹಿಸಿದರೆ ಸ್ವಲ್ಪ ಕಾಲಾವಧಿ ಕೊಡಬಹುದು ಅಂತ ಹೇಳಿದಾಗ.. ಈ ವರ್ಷ ಏಳನೇ ಕ್ಲಾಸಿಗೆ ಹೋಗಿದ್ದ ರಮಾಳನ್ನು ಸ್ಕೂಲಿಂದ ಬಿಡಿಸಿ ಮನೆ ಕೆಲಸಕ್ಕೆ ಹಚ್ಚಿದ್ದರು ಚಿನ್ನಪ್ಪ. ಮಮ್ತಾಜ್ ಳಿಗೆ ಇದು ಒಂದು ಒಳ್ಳೆಯ ಸಮಾಚಾರ ಆಗಿತ್ತು ಪ್ರಸಾರ ಮಾಡೋದಿಕ್ಕೆ. ಮೊಹಲ್ಲಾದಲ್ಲೆಲ್ಲ ಗುಲ್ಲೋ-ಗುಲ್ಲು, ಬಾಲಕಲ್ಯಾಣ ಮಂಡಳಿ ಅಧ್ಯಕ್ಷರ ಮನೆ ಕೆಲಸಕ್ಕೆ ಸ್ಕೂಲಿಗೆ ಹೋಗುತ್ತಿದ್ದ ಹೆಣ್ಣುಮಗುವೊಂದನ್ನು ನೇಮಕವಾಗಿದೆ ಅಂತ. ಆಡಿಗೆ ಮನೆಕಡೆ ಹೋಗುತ್ತಿದ್ದ ರಮಾಳನ್ನು ನೋಡುತ್ತಾ ಸರಸಮ್ಮ ಹೇಳೇಬಿಟ್ರು.."ಅಲ್ರೀ ..ವನಜಮ್ಮ..ರಮಾಳು ಏಳನೇ ಕ್ಲಾಸಿನಲ್ಲಿದ್ದಳಲ್ಲವೇ..ಬಾಲಕಾರ್ಮಿಕ ತಡೆ ಕಾಯಿದೆ ಪ್ರಕಾರ ಇಷ್ಟು ಚಿಕ್ಕ ವಯಸ್ಸಿನ ಮಕ್ಕಳು ಅದರಲ್ಲೂ ಹೆಣ್ಣು ಮಕ್ಕಳನ್ನು ಕೆಲಸಕ್ಕೆ ಇಟ್ಟುಕೊಳ್ಳೋದು ಅಪರಾಧ ಅಲ್ಲವೇ?"
"ಅಯ್ಯೋ ರೀ ಸರಸಮ್ಮ ...ಇವಳು ಐದು-ಆರನೇ ಕ್ಲಾಸಿನಲ್ಲೇ ಎರಡು-ಮೂರು ಸರ್ತಿ ಡುಮ್ಕಿಹೊಡ್ದಿದ್ದಾಳೆ..ಹಾಗೆ ನೋಡಿದ್ರೆ.. ಎಸ್ಸೆಸ್ಸೆಲ್ಸಿಯಲ್ಲಿರಬೇಕಾಗಿತ್ತು ಈ ಹೊತ್ತಿಗೆ ಇವಳು" ಅಂತ ತಮ್ಮದೇ ಸಮಜಾಯಿಷಿ ಕೊಟ್ರು ವನಜಮ್ಮ. ನಿಜ ಸಂಗತಿಯೆಂದರೆ ರಮಾ ತನ್ನ ಆರನೇ ಕ್ಲಾಸಿನಲ್ಲಿ ಮೊದಲ ಸ್ಥಾನ ಪಡೆದಾಗ ಸ್ಕೂಲಿನ ಸಮಾರಂಭದಲ್ಲಿ ಪ್ರಸಾದಪ್ಪನ ಕೈಲೇ ಪ್ರಶಸ್ತಿ ಸಿಕ್ಕಿತ್ತು. ಇದು ಎಲ್ಲರಿಗೂ ಗೊತ್ತಿತ್ತು...ವನಜಮ್ಮನವರ ಬಾಯಿಗೆ ಹೆದರಿ..ಎಲ್ಲಾ ವಿಷಯವನ್ನ ಅಲ್ಲಿಗೇ ಮುಕ್ತಾಯ ಮಾಡಿದರು. ಮಮ್ತಾಜ್ ಳ ಪ್ರಚಾರವೇ ಬೇರೆ ಆಗಿತ್ತು. "ಬಾಲಕಲ್ಯಾಣ ಮಂಡಳಿ ಅಧ್ಯಕ್ಷರ ಮನೆಯಲ್ಲಿಯೇ ಬಾಲಕಾರ್ಮಿಕ - ಹೇಳೋದು ಶಾಸ್ತ್ರಕ್ಕೆ, ಬದನೇ ಕಾಯಿ ತಿನ್ನೋಕೆ" ಅಂತ ಮೊಹಲ್ಲಾದ ಪ್ರಸಿದ್ಧ ಪತ್ರಿಕೆ "ಕಹಳೆ-ರಗಳೆ" ಯಲ್ಲಿ ಬಂದೇ ಬಿಡ್ತು ಮಮ್ತಾಜಳ ಲೇಖನ!!. ಮೊಹಲ್ಲಾದಲ್ಲಿ ಮಾತ್ರವಲ್ಲ ಈಗ..ಮಂತ್ರಿಮಂಡಲ..ವಿರೋಧಪಕ್ಷ ಎಲ್ಲಾ ಕಡೆ...ಅಧ್ಯಕ್ಷ ಪ್ರಸಾದಪ್ಪನವರ ಸಮಾಜದ ಬಗ್ಗೆ ಅವರಿಗಿರುವ ಕಳಕಳಿಯ ಬಗ್ಗೆ ಚ-ಕಾರ ಶುರುವಾದವು. "ಕಹಳೆ-ರಗಳೆ"ಯ "ಎಲ್ಲೆಲ್ಲೂ ಗುಲ್ಲು" ಅಂಕಣದಲ್ಲಿ -ತನ್ನ ಚರ್ಮ-ಉಳಿಸಿಕೊಳ್ಳಲು ಮು.ಮಂ. ಗಳು ಪ್ರಸಾದಪ್ಪನನ್ನು ಬಾ.ಕ.ಮಂ. ದಿಂದ ಎತ್ತಂಗಡಿ ಮಾಡಿದರು ಅಂತ ಪ್ರಕಟ ಆಯ್ತು, ಇದಾದ ಮೂರನೇ ದಿನವೇ ಅದೇ ಪತ್ರಿಕೆಯ ಇನ್ನೊಂದು ಅಂಕಣ "ಅಲ್ಲೋಯ್ತು ಇಲ್ಬಂತು" ನಲ್ಲಿ ಬಂದ ಸುದ್ದಿ -ಪ್ರಸಾದಪ್ಪನಿಗೆ ಚರ್ಮ ನಿಗಮದ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಮು.ಮಂ. ಕಾರ್ಯಾಲಯದ ಪ್ರಕಟಣೆ.