Saturday, August 29, 2009

ಕ್ಲಿಪ್ಪಿಂಗ್ ಪೂರಕ ಪೋಸ್ಟ್

ಸುನಾಥ್ ಸರ್ ರವರ ಕ್ಲಿಪ್ ಗೆ ಪ್ರತಿಕ್ರಿಯೆ ನನ್ನ ಈ ಪೂರಕ ಪೋಸ್ಟ್ ಗೆ ಕಾರಣ.
ಮನಸ್ಸಿನ, ಮಿದುಳಿನ ಮತ್ತು ಆರೋಗ್ಯದ ಅಗೋಚರ ಸಂಬಂಧಗಳನ್ನು ಹಲವರು ನಂಬುವುದಿಲ್ಲ. ಅಂತಹವರಿಗೆ ನನ್ನ ನೇರ ಪ್ರಶ್ನೆ...ಹುಚ್ಚು ಏಕೆ ಹಿಡಿಯುತ್ತೆ?? ಇದು ಕೇವಲ ಮನಸ್ಸು, ಮಿದುಳಿಗೆ ಸಂಬಂಧಿಸಿದ್ದು ಅದೇ ರೋಗ ಎನ್ನುತ್ತೇವೆ ನಾವು...ಈ ಕ್ಲಿಪ್ಪಿಂಗ್ ನಲ್ಲಿ ಹೇಳಿದಂತಹ ಪ್ರೋಟಿನ್ ಪೆಪ್ಟೈಡುಗಳು ನೇರ ಪ್ರಭಾವ ಬೀರುವ ಖಾಯಿಲೆ ಇದು. ದುಃಖವಾದಾಗ ಕಣ್ಣೀರೇಕೆ? ಇನ್ನೊಂದು ಪ್ರಶ್ನೆ? ಇಲ್ಲಿಯೂ ಭಾವನೆ (ಮನಸು) ಸ್ರಾವಕ ಪ್ರೋಟಿನುಗಳ ಮೂಲಕ ಮಿದುಳಿಗೆ ಸಂದೇಶ ತಲುಪಿಸಿ ಕಣ್ಣಿರನ್ನು ಸುರಿಸುವಂತೆ ಮಾಡುತ್ತದೆ. ಆದ್ದರಿಂದ ಸುಖೀ ಮನಸು, ಆಹ್ಲಾದಕತೆ ಲಾಭಕರ ಪ್ರೋಟೀನುಗಳನ್ನು ಉತ್ಪಾದಿಸಬಹುದಲ್ಲ .? ಇವು ರೋಗ ಕಾರಕಗಳನ್ನು ತಡೆಯಬಹುದಲ್ಲ...?? ಇದೇ ವಿಷಯವನ್ನು ಈ ವೀಡಿಯೋದಲ್ಲಿ ಪ್ರತಿಪಾದಿಸಲಾಗಿದೆ. ಎಲ್ಲದಕ್ಕೂ ಸಮತೋಲನಾಸ್ಥಿತಿ ಎಂಬುದು ನಿರ್ಣಾಯಕ. ಅತೀ ಮಾರಕಗಳು ಈ ಸಮತೋಲನಾಸ್ಥಿತಿಯ ರೇಖೆಗಿಂತ ಮೀರಿ ಪ್ರಭಾವ ಬೀರುವುದರಿಂದ ಶಿಘ್ರ ನಷ್ಟಕ್ಕೆ ಕಾರಣವಾಗುತ್ತವೆ. ರೋಗಕಾರಕಗಳ ಪ್ರಭಾವ ಈ ದೇಹ ಸಮತೋಲನಾಸ್ಥಿತಿ ರೇಖೆಯನ್ನು ದಾಟಿದಾಗಲೇ ರೋಗ ತಲೆದೋರುವುದು. ಆರೋಗ್ಯ ಸಮತೋಲನಾ ಮಟ್ಟ ಪ್ರತಿಜೀವಿಯಲ್ಲೂ ಒಂದೊಂದು ಮಟ್ಟದ್ದಾಗಿರುತ್ತೆ, ಇದಕ್ಕೆ ಕೆಲವು ವಿಷಯಗಳು ಪೂರಕ ಶಕ್ತಿ ಕೊಟ್ಟರೆ ಮತ್ತೆ ಕೆಲವು ವಿರುದ್ಧವಾಗಿ ಆ ಮಟ್ಟವನ್ನು ಕ್ಷೀಣಗೊಳಿಸಿ ದೇಹ ರೋಗಕ್ಕೆ ಸುಲಭದ ತುತ್ತಾಗುವಂತೆ ಮಾಡುತ್ತವೆ. ಪ್ರತಿ ರೋಗದ ನಿರ್ವಹಣೆಯಲ್ಲಿ ಇದೇ ಅಂಶಗಳನ್ನು ಪರಿಗಣಿಸಲಾಗುತ್ತದೆ. ಉತ್ತಮ ಆಹಾರ, ಶುದ್ಧ ಪರಿಸರ, ಉತ್ತಮ ಆಚಾರ ಮತ್ತು ಆಹ್ಲಾದಕರ ಮನಸ್ಥಿತಿ ಎಲ್ಲವೂ ದೇಹಾರೋಗ್ಯ ಸಮತೋಲನಾ ಸ್ಥಿತಿಯನ್ನು ಉನ್ನತ ಮಟ್ಟಕೇರಿಸಿ ರೋಗಕಾರಕಗಳು ಬಹುಶ್ರಮ ಪಡುವಂತೆ ಮಾಡುವುದಲ್ಲದೇ ರೋಗತಲೆದೋರುವಿಕೆಗೆ ವಿಳಂಬವನ್ನುಂಟು ಮಾಡುತ್ತವೆ. ಈ ಹೆಚ್ಚಿದ ಸಮಯಾವಕಾಶದಲ್ಲಿ ದೇಹ ತನ್ನ ನಿರ್ದಿಷ್ಟ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತದೆ ಹೀಗಾಗಿ ರೋಗವನ್ನು ತಡೆಯಲಾಗುತ್ತದೆ.