Monday, August 2, 2010

ನನ್ನವಳು ನನಗೆ ತಲ್ಲಾಖ್ ಎನ್ನೋ ಸ್ಥಿತಿಗೆ ನನ್ನನ್ನು ತಂದಿದ್ದು ಯಾರು?

"ಟ್ರಿನ್..ಟ್ರಿನ್...ಟ್ರಿನ್..ಟ್ರಿನ್..ಟ್ರಿನ್..ಟ್ರಿನ್.."ಯಾವ್ದೋ ಲೋಕಲ್ ಫೋನು...ಮಹೇಶ್, ಇಲ್ಲ ಸುಗುಣಾವ್ರೇ ಸಾಮಾನ್ಯವಾಗಿ ಕಾಲ್ ಮಾಡೋದು...ಆದ್ರೆ ಅವ್ರು ನನ್ನ ಲ್ಯಾಂಡ್ ಲೈನಿಗೆ ..ಮಾಡೊಲ್ಲವಲ್ಲ..??..ಅಂತ ಸುಮ್ಮನಾದೆ...ಅಷ್ಟರಲ್ಲಿ ನಿಂತಿತ್ತು ಟಿನ್ ಟ್ರಿನ್,,..ಸರಿ ನಾನು ನನ್ನ ಕೆಲಸ್ದಲ್ಲಿ.......ಅಲ್ಲಲ್ಲ...ಚಾಟ್ ಗೆ ಎಲ್ಲಿದೆ ಸಮಯ...?? ಅಡುಗೆ ಮನೆಯಲ್ಲಿ..!! ಯಾಕೆ ? ಈ ಕೆಲ್ಸ ಯಾವಾಗ್ಲಿಂದ ಅಂದ್ರ...?? ಅಯ್ಯೋ ..ರಜಗಳು ಇಲ್ಲಿ ಜೂನ್ ನಿಂದ, ಫ್ಯಾಮಿಲಿನ ಮದನಪಲ್ಲಿಗೆ ಬಿಟ್ಟು ಬಂದಿದ್ದೆ..... ಇನ್ನು ಕೂಳಿಗೆ ಈ ಮರಳುಗಾಡಿನಲ್ಲಿ?? ಮಾಡಿದ್ದುಣ್ಣೋ ಮಹರಾಯ ಅಂತ ನಾನು ಮಾಡಿದ್ದನ್ನ ನಾನೇ ತಿನ್ನಬೇಕಲ್ಲ? ಅದಕ್ಕೆ..ಈಗ ಹೆಚ್ಚು ಸಮಯ ಕೇರಾಫ್ ಕಿಚನ್.ಮತ್ತೆ "ಟ್ರಿನ್..ಟ್ರಿನ್.....ಟ್ರಿನ್..ಟ್ರಿನ್......ಟ್ರೀನ್,,ಟ್ರೀನ್..." ಯಾಕೋ ಫೋನಿಗೂ ಕೋಪ ಬಂತಾ ಅನ್ನಿಸ್ತು ಇಲ್ಲ ಅಂದ್ರೆ ಟ್ರಿನ್ ಅನ್ನೋದು ಹೋಗಿ ಟ್ರೀನ್ ಅಂತ ಕಿರ್ಚೋದು ಯಾಕೆ...? ಸರಿ ಹೊಸ ಹ್ಯಾಂಡ್ಸ್-ಫ್ರೀ ತಂದಿದ್ದು ಮತ್ತೆ ಕೋಪ ಮಾಡ್ಕೊಂಡ್ ಕೆಳ್ಗೆ ಬಿದ್ರೆ ಕಷ್ಟ ಅಂತ ಬೇಗ ಬಂದು ಫೋನ್ ಎತ್ತಿದೆ."ಹಲೋ..." ಕ್ಯಾ ಕರ್ ರ್ರೈ..?" no doubtಉ ಅಬಿದಾದೇ ಫೋನು...!! ಬಹುಶಃ ನನ್ನ ಮಗಳು- ಸುರು "ಅಬ್ಬ" ಬರೋದ್ರೊಳಗೆ ಬೆಂಗಳೂರಿಗೆ ಹೋಗೋಣ ಅಂತ ಅವ್ರಮ್ಮನ ಹತ್ರ ಹೇಳಿರ್ಬೇಕು ಅದಕ್ಕೆ ಅಬಿದಾ ನನಗೆ ಎಮರ್ಜೆನ್ಸಿ ಕಾಲ್ ....ಹೌದು ..ಅವಳೇ ...ನನ್ನನ್ನ ಮೊದಲಿಗೆ ನೋಡಿದ್ರೆ/ಫೋನಾಯಿಸಿದ್ರೆ "ಸಲಾಂ ಅಲೇಕುಮ್" ಅನ್ತಾ ಇದ್ಲು...??!! ಯಾಕೆ.. ? ಮತ್ತೆ "ಹಲೋ..." ಕ್ಯಾ ಕರ್ ರ್ರೈ..?" ಅಂತ ಕೇಳಿದ್ರಲ್ಲಿ ಕಾಳಜಿಗಿಂತ...ಏನೋ ...ಮಾಡಬಾರದ್ದು ಮಾಡ್ತಿದ್ದೀನಿ ಅನ್ನೋ ಹೆಂಡತಿರಿಗೆ ಇರಬೇಕಾದ ದರ್ಪದಲ್ಲಿ ಕೇಳಿದ್ಲು...."ಕಿಚನ್ ನಲ್ಲಿದ್ದೀನಿ ಉಪ್ಪಿಟ್ಟು ಮಾಡ್ತಿದೀನಿ.... ಶುಕ್ರವಾರ ಅಲ್ವಾ..ನಮಾಜ್ ಗೆ ಮುಂಚೆ ಮನೆ ಸ್ವಲ್ಪ ಕ್ಲೀನ್ ಮಾಡೋಣ ಅಂತ ಸ್ವಲ್ಪ ಬೇಗಾನೇ ತಿಂಡಿ ರೆಡಿ ಮಾಡ್ತಿದ್ದೀನಿ..." ಅಂದೆ.."ಯಾಕೆ ಮೋಹಿನಿ ಬರ್ಲಿಲ್ಲವಾ..??"ಅರೆ..ಇದೇನಪ್ಪಾ...??!! ನನ್ನವಳು ಹೋಗೋಕೆ ಮುಂಚೆ ಯಾರಿಗಾದ್ರೂ ಕೆಲಸದವಳಿಗೆ ಹೇಳಿದ್ಲಾ...ಕೈ ಜಿಗುಟಿಕೊಂಡೆ.."ಆಹ್" ನೋವಾಯ್ತು...ಅಂದ್ರೆ not a dream !! ಎಲ್ಲದಕ್ಕೂ ನನ್ನನ್ನೇ ಕೇಳುತ್ತಾ ತಾನೇ ಯಾವುದೇ ನಿರ್ಧಾರ ತಗೊಳ್ಳದ ಇವ್ಳು..ಕೆಲ್ಸದವಳಿಗೆ ಹೇಳೋದಾ..??!! ಹೇಗೆ ಸಾಧ್ಯ..?? no way..!! ಆದ್ರೂ...ಆಶ್ಚರ್ಯ..ಸಂತೋಷ ಎರಡೂ ಒಟ್ಟಿಗೆ.."ಯಾವ ಮೋಹಿನಿ..? ನೀನು ಯಾರ್ಗಾದ್ರೂ ಹೇಳಿದ್ಯಾ.."...ಕೇಳಿದೆ"ನೀವೇ ಹೇಳಿದ್ದೀರಲ್ಲಾ ಯಾವ್ದೋ ಮಿಟಕಲಾಡೀಗೆ...ಅದಕ್ಕೇನೇನೋ ಕೆಲ್ಸ ಇದೆ... ಬೇಗ ಕುವೈತ್ ಗೆ ಹೋಗಬೇಕು ಅಂತ ....ನಮ್ಮಮಗಳು ’ಸುರು..’ಅಬ್ಬ’ ಇನ್ನೊಂದೆರಡು ದಿನ ಇರಿ” ಅಂದ್ರೂ "ಇಲ್ಲ ಬೇಟ ಕೆಲ್ಸ ಇದೆ ಮತ್ತೆ ಆಗಸ್ಟ್ ನಲ್ಲಿ ಬೇಗ ಬರ್ತೀನಲ್ಲಾ" ..ಅಂತ ಸಬೂಬು ಹೇಳಿ ಬಂದಿದ್ದು..?? ಎಷ್ಟು ದಿನದಿಂದ ನಡೀತಿದೆ ಎಲ್ಲಾ..?? ಇಲ್ಲಾಂದ್ರೆ ಎರಡು ದಿನಕ್ಕೆ ಒಂದು ಸರ್ತಿ..ಫೋನ್ ಮಾಡಿ ಅಬಿದಾ ಆ ಅಡುಗೆ ಹೇಗೆ ಮಾಡೋದು ?..ಈ ಅಡುಗೆ ಹೇಗೆ ಮಾಡೋದು? ಅಂತ ಕೇಳ್ತಿದ್ರಿ...ಈಗ.. ನಾಲ್ಕು ದಿನ ಆದ್ರೂ ಫೋನ್ ಇಲ್ಲ..ಸರಿ ಕೆಲ್ಸದ ಒತ್ತಡ ಮಾಡ್ತಾರೆ ಅಂದ್ಕೊಂಡಿದ್ದೆ.....ಇಂಥಾ ಘನಾಂದಾರಿ ಕೆಲ್ಸ ಅಂತ ಅಂದ್ಕೊಂಡಿರ್ಲಿಲ್ಲ!!."ಕೋಪ ಅಳು ಎಲ್ಲ ಒಟ್ಟಿಗೆ ಇತ್ತು..ಅವಳ ಧ್ವನಿಯಲ್ಲಿ...ಸಿಕ್ಕಾ ಪಟ್ಟೆ ರಬ್ಬರ್ ಬ್ಯಾಂಡ್ ಚ್ಯೂವಿಂಗ ಗಮ್ ಥರ ಎಳೆಯೋ ಟಿ.ವಿ. ಸೀರಿಯಲ್ ಕಥೆ ಒಂದೇ ಎಪಿಸೋಡಲ್ಲಿ ಮುಗಿಸುವ ಚಾಕ ಚಕ್ಯತೆ ಇತ್ತು ಅವಳ ಆರೋಪದಲ್ಲಿ...ಎಲ್ಲವನ್ನೂ ಸಾರಾ ಸಗಟಾಗಿ ಎಂಥವರ ಕಣ್ಣಿಗೂ (ಕಿವಿಗೇ ಏನು?) ನಾಟುವಂತೆ ಹೇಳಿ..ಬುಸುಗುಡ್ತಾ ಇದ್ಲು..ನನಗೋ.. ಏಸಿಯಲ್ಲೂ –ಬಿಸಿ ಬೆವರು ಶುರು..!!!"ಅಲ್ಲ ಮಾರಾಯ್ತೀ...ಯಾವ ಮೋಹಿನಿ...." ನನ್ನ ಮಾತನ್ನ ತುಂಡರಿಸ್ತಾ..."ಹೆಸರೆತ್ತಬೇಡಿ..,, ಮೋಹಿನಿ ಅಂತೆ..ಮೋಹಿನಿ..!! ಅದೂ ಎಂಥ ಹೆಸ್ರು... ನಿಮಗೇನ್ರೀ ನಾನು ಕಡಿಮೆ ಮಾಡಿದ್ದೆ.?..ಅದೂ ನನ್ನ ಎತ್ತರಕ್ಕೆ ಬೆಳೆದು ನಿಂತಿರೋ ಮಗಳಿರೋವಾಗ...."ಅವಳ ಮುಸು ಮುಸಿ ಅಳು ಜಾಸ್ತಿಯಾಯ್ತು....ಆ ಕಡೆ ನನ್ನ ಅಕ್ಕ ಮತ್ತೆ ಅಮ್ಮ ಅವಳನ್ನ ಸಮಾಧಾನ ಮಾಡ್ತಿದ್ದದ್ದು ಸ್ಪಷ್ಟವಾಗಿ ಕೇಳ್ತಿತ್ತು..“ಬೇಟಾ..ಆಜಾದು ಚಿನ್ನದಂತ ಹುಡುಗ ಏನೋ ಗಲತ್ ಆಗಿದೆ" ಅಂತ ನನ್ನಮ್ಮ  "ನಾವು ನಿಧಾನಕ್ಕೆ ಮಾತ್ನಾಡ್ತೀವಿ...ಈಗ ಸುಮ್ಮನಾಗು.....ನನಗೆ ಕೊಡು ಫೋನ್”ಅಂತ ಅಕ್ಕ ಫೋನ್ ತಗೊಂಡದ್ದು ಗೊತ್ತಾಯಿತು."ಅಕ್ಕ ..ಏನಕ್ಕ ಇವಳು ಹೇಳ್ತಿರೋದು...ಯಾರದು ಮೋಹಿನಿ...?" ನನ್ನ ಆತಂಕ ತೋಡಿಕೊಂಡೆ ನನ್ನಕ್ಕನ ಹತ್ರ..."ನೋಡು ಆಜಾದು, ಈಗ ಮಾತ್ನಾಡೊದು ಬೇಡ..ಅಬಿದಾ ಅಪ್-ಸೆಟ್ ಆಗಿದ್ದಾಳೆ..ನಾನು ಸಮಜಾಯಿಶ್ ಹೇಳ್ತೀನಿ...ನಿನ್ನ ಮಗಳು-ಸುರೂನ ಅವಳ ಚಿಕ್ಕಪ್ಪ ತೋಟಕ್ಕೆ ಕರ್ಕೊಂಡು ಹೋಗಿದ್ದಾನೆ ಅವಳು ಇದ್ದಿದ್ದ್ರೆ ಮಗಳೇ ಸಮಾಧಾನ ಮಾಡ್ತಿದ್ಳು....ನೀನು ವರಿ ಮಾಡ್ಕೋ ಬೇಡ....., ಅಲ್ವೋ, ನೀನು ಕೆಲ್ಸದವಳನ್ನ ಮನೆ ಕೆಲಸಕ್ಕೆ ಹೇಳ್ತೀನಿ ಅಂತ ಅಬಿದಾಗೆ ಒಂದು ಮಾತು ಹೇಳಬಾರ್ದ..?? ಅದೂ..ಎಂಥ ಹೆಸರಿನವಳಿಗೆ ಹೇಳಿದ್ದೀಯಾ ನೋಡು...ಛೀ..ಮೋಹಿನಿ..ಅಂತೆ,,ಮೋಹಿನಿ...""ಅಲ್ಲಕ್ಕ ಅದು..." ನಾನು ಮಾತನಾಡೋದಕೂ ಬಿಡ್ಲಿಲ್ಲ...ಅಕ್ಕ"ನೋಡೋ ಈಗ ಮೊದಲು ಆ ಮೋಹಿನೀನ ಕೆಲಸದಿಂದ ಬಿಡ್ಸು...ನಾನು ಅಬಿದಾ ಹತ್ರ ಮಾತನಾಡ್ತೀನಿ..ಮತ್ತೆ ಎರಡು ದಿನ ಬಿಟ್ಟು ಅವಳಿಗೆ ಫೋನ್ ಮಾಡಿ ಹೇಳು ಯಾರೂ ಇಲ್ಲ..ಅವಳನ್ನ ಕೆಲಸದಿಂದ ಬಿಡಿಸಿದೆ ಅಂತ......ಆಯ್ತಾ..? ಈಗ ನಾನು ಫೋನ್ ಇಡ್ತೀನಿ..."ಇದೇನಪ್ಪಾ ಇದು...ಬೆಳ್ ಬೆಳಿಗ್ಗೆ....ಉಪ್ಪಿಟ್ಟು ಮಾಡೋಣ ಅಂತ ಇದ್ರೆ ಎಲ್ಲಾ ಚಿತ್ರಾನ್ನ ಆಗಿ ಕೂತಿದೆ...ಹೌದು ಏನಿದು..? ಮೋಹಿನಿ..ಯಾರಿದು ಮೋಹಿನಿ...??.. ತಲೆ ಚಿಟ್ಟು ಹಿಡೀತಿತ್ತು..ಸ್ಟೌವ್ ಆಫ್ ಮಾಡಿ ಬಿಸಿ ಬಿಸಿ ಇನ್ಸ್ಟಾಂಟ್ ಕಾಫಿ ಮಾಡಿ ಹೀರುತ್ತ ಸೋಫಾದಲ್ಲಿ ಧೊಪ್ಪೆಂದು ಕುಂತೆ...ಯೋಚನೆ ನಿಲ್ಲಲಿಲ್ಲ...."ಅರೆ..!! ಹೌದಲ್ಲಾ..!! ಮೂರು-ನಾಲ್ಕು ದಿನದ ಹಿಂದೆ ಬಜ್ ನಲ್ಲಿ ಹೀಗೇ ತಮಾಶೆ ಮಾಡ್ತಾ.."ಏನ್ರೀ ಆಜಾದ್ರೇ..ಒಬ್ರೇ ಮನೇಲಿ ಅಂತೀರಾ..ಭಾಭಿನಾ ಬಿಟ್ಟು ಬಂದು.., ರಾತ್ರಿ ಹೆದ್ರಿಕೆ ಆಗೊಲ್ಲವಾ..." ಅಂತ ಯಾರೋ ಕೇಳಿದ್ರು..?"ಅದಕ್ಕೆ ನಾನು..."ಬರ್ತಾಳಲ್ಲ ಮೋಹಿನಿ"...ಅಂದಿದ್ದೆ..ಅವರು..."ದಿನವೂ ಬರ್ತಾಳಾ..?""ಹೌದು..ಆ ಗೆಜ್ಜೆ ಆ ಮಧುರ ಕೂಗು...ಬಾ..ರಾ...ಬಾ..ರಾ..." ಅಂತ ನಾನಂದಿದ್ದೆ..."ಹಾಗಾದ್ರೆ ಅಬಿದಾಗೆ ಫೋನ್ ಮಾಡಿ ಹೇಳ್ತೇನೆ ತಡೀರಿ..." ಅವರು ಹೇಳಿದ್ರು"ಅವಳಿಗೂ ಗೊತ್ತು ಹೇಳಿ ಪರ್ವಾಗಿಲ್ಲ" ಅಂದಿದ್ದೆ......ಓಹ್...ಇದು ಇವ್ರದ್ದೇ ಕೆಲ್ಸ....ನನ್ನ ಬಜ್ ನಲ್ಲಿ ನನ್ನ ಇಂಡಿಯಾ ನಂಬರ್ ನೋಡಿ ಫೋನ್ ಮಾಡಿ ತಮಾಶೆ ಮಾಡಿರ್ತಾರೆ..ನಾನು ಆ ಸಿಮ್ ಕಾರ್ಡ್ ಇದ್ದ ಫೋನ್ ಅಬಿದಾಗೆ ಕೊಟ್ಟಿದ್ದೆ..ನಾನು ಸಂಪರ್ಕ ಮಾಡೋಕೆ.....ಹಾಂ.. ಹೀಗೇ ಆಗಿದೆ..., ಇವರು ವಿಷಯ ಪೂರ್ತಿ ಹೇಳೋಕೆ ಆಗಿಲ್ಲವೋ ಅಥವಾ ಏನೋ ಎಡವಟ್ಟು ಆಗಿದೆ... ನನಗೆ ಎಲ್ಲಾ ಅರ್ಥವಾಗತೊಡಗಿತ್ತು....ತಕ್ಷಣ ನೆಟ್ ಓಪನ್ ಮಾಡಿ ಆ ದಿನದ ಬಜ್ ನ ಎಲ್ಲ ಸಂಭಾಷಣೇನಾ ವರ್ಡ್ ನಲ್ಲಿ ಪೇಸ್ಟ್ ಮಾಡಿ ಸುರುಗೆ ಮೈಲ್ ಮಾಡಿದೆ.  ಎಡವಟ್ಟು ಏನು ಅಂತ ವಿವರಿಸಿ ನನ್ನ ತಮ್ಮನಿಗೂ ಒಂದು ಕಾಪಿ ಹಾಕಿ...ಸುರುಗೆ ಸಂಜೆ ಫೋನ್ ಮಾಡ್ತೇನೆ ಅಂತ ಮೈಲ್ ನಲ್ಲಿ ತಿಳಿಸಿ ಮೈಲ್ ಮಾಡಿ...ಅರ್ಧ ಸಮಾಧಾನದ ನಿಟ್ಟುಸಿರು ಬಿಟ್ಟೆ...ಆ ಸಂಜೆ ಮೂರು ಇಪ್ಪತ್ತಾಗಿತ್ತು, ಸಂಜೆ ನಾಲ್ಕೂವರೆಗೆ ಫೋನ ಮಾಡೋಣ ಅಂತ ಚಪಾತಿಗೆ ಹಿಟ್ಟು ಕಲಸಿಡಲು ಕಿಚನ್ ಗೆ ಹೋದೆ..."ಟ್ರಿನ್ ಟ್ರಿನ್..ಟ್ರಿನ್.."ಏನಿದು ಅಬಿದಾಳದ್ದೇ ಫೋನು...ಹೆದರುತ್ತಾ ಫೋನು ಎತ್ತಿದೆ"ಅಸ್ಸಲಾಮು ಅಲೇಕುಮ್" ಅಬಿದಾಳ ದ್ವನಿ ..ಮೆದುವಾಗಿತ್ತು... ಧೈರ್ಯ ಬಂತು.."ವಾಲೈಕುಮ್ ಅಸ್ಸಲಾಮ್ ಡಿಯರ್..." ನಾನು ಇನ್ನೂ ಮುಂದಿನ ಶಬ್ದ ಹೇಳುವುದಕ್ಕೆ ಮುಂಚೆ..."ಮಾಫ್ ಕರೋ ಡಿಯರ್, ನಾನು ನಿಮ್ಮನ್ನ ತಪ್ಪು ತಿಳಿದೆ...ಯಾರೋ ಹೇಳಿದ್ರು ಅಂತ... ನನ್ನದೂ ತಪ್ಪಿದೆ..
ಆ ದಿನ ನಿಮ್ಮ ಫ್ರೆಂಡ್ ಇರ್ಬೇಕು ಅವರು ಫೋನು ಮಾಡಿ "ಭಾಭಿ ತಮಾಷೆ ಗೊತ್ತಾ...? ನಿಮ್ಮವ್ರು ಕುವೈತಲ್ಲಿ ಮೋಹಿನಿ ಅನ್ನೋಳನ್ನ ಕೆಲ್ಸಕ್ಕೆ ಇಟ್ಕೊಂಡಿದ್ದಾರೆ..." ಅನ್ನೋದ್ರಲ್ಲಿ ಫೋನ್ ಕಟ್ ಆಗಿತ್ತು...ನನಗೆ ಹೆಂಗಸಿನ ದ್ವನಿ, ಹೇಳಿದ್ದು ನಿಮ್ಮ ಬಗ್ಗೆ...ಮೋಹಿನಿ ಅನ್ನೋಳನ್ನ ಇಟ್ಕೊಂಡಿದ್ದಾರೆ ... ಇಷ್ಟೇ ಕಿವಿಗೆ ಹೋಗಿದ್ದು....ಕೆಲಸದವಳು ಅನ್ನೋದನ್ನ ಗಮನಿಸಲೇ ಇಲ್ಲ....I am very very sorry..."ಅಬ್ಬಾ...ಎಂಥ ಹಾಲು ಕುಡಿದ ಅನುಭವ...!! ನಾನೆಂದೆ.."its Ok dear...misunderstand ಆಗುತ್ತೆ ...ಹೌದೂ.... ನಿನಗೆ ಇದೆಲ್ಲಾ...ಹೇಗೆ ??"."ಸುರುಗೆ ನೀವು ಕಳ್ಸಿದ ಮೈಲ್ ಸಿಕ್ತು ಅವಳು ಅವಳ ಅತ್ತೆ ಏನೇನೋ ಮಾತನಾಡ್ತಾ ಇದ್ರು..ಆ ಮೇಲೆ ನಿಮ್ಮ ತಮ್ಮನ ಫೋನ್ ಬಂತು...ಮತ್ತೆ ಸುರು ನನ್ನ ಕರೆದು...ನಿಮ್ಮ ಮೈಲ್ ತೋರಿಸಿದಳು....ನನಗೆ ಆಗ್ಲೆ ಅರ್ಥ ಆಗಿದ್ದು ಎಂಥ ಮೂರ್ಖಳು ನಾನು ನಿಮ್ಮನ್ನು ಅಪಾರ್ಥ ಮಾಡ್ಕೊಂಡೆ...sorry" ಎಂದಳು ನಗುತ್ತಾ...ಅಬ್ಬಾ...ಶುಕ್ರವಾರದ ನಮಾಜ್ ನಲ್ಲಿ ನನ್ನ ಪ್ರಾರ್ಥನೆ ದೇವರಿಗೆ ಮುಟ್ಟಿತು ಎಂದುಕೊಂಡು...ಕೀಟಲೆ ಮಾಡಿದೆ ನನ್ನವಳಿಗೆ.."ಹಾಗಾದ್ರೆ ಮೋಹಿನೀನ ನಾಳೆಯಿಂದ ಬರೋಕೆ ಹೇಳ್ಲಾ ಮನೇಗೆ..?"ನಗುತ್ತಾ ಅವಳು.." ಯಾಕೆ? ಈಗ್ಲೇ ಹೇಳಿ.... ರಂಜಾನ್ ಬರ್ತಿದೆ ನಿಮ್ಮ ಉಪವಾಸದ ೭-೮ ದಿನಗಳ ಅಡುಗೆನಾದ್ರು ಮಾಡಿ ಹಾಕ್ತಾಳೆ....ಹಹಹ..."ಇದು ಒಂದು ಬಜ್.ಚಾಟ್ ಎರಡರ ..ಕಪೋಲ ಕಲ್ಪಿತ..ಇದನ್ನೇ ನೆವಮಾಡಿ ನನ್ನವಳಿಗೆ ಫೋನ್ ಮಾಡೋರಿಗೆ ಎಚ್ಚರಿಕೆ......