Wednesday, October 28, 2009

ಭೂಮಿಯ ಅಂತ್ಯ..!! 2012 ಡಿಸೆಂಬರ್ 21 ಕ್ಕೆ !!! ..ಕಿವೀಗೆ ಹೂವಾ??!!
ಮನುಯುಗ-ಪ್ರಳಯ ವೇದಗಳು
(www.bhavamanthana.blogspot.com
)
‘ರೀ ಗೋಪಾಲ್ ನಿಮ್ಮ ಮಗಳ ಮದುವೆ 2011 ಕ್ಕೆ ಮಾಡ್ಬೇಕು ಅಂದ್ಕೊಂಡಿದ್ದರಲ್ಲವಾ? ಈ ವರ್ಷನೇ ಮಾಡ್ಬಿಡಿ...ಪ್ರಳಯ ಆಗುತ್ತಂತ್ರೀ...2012 ಡಿಸೆಂಬರ್ 21ಕ್ಕೆ...!!?? ಮೊಮ್ಮಗೂನಾದರೂ ನೋಡ್ಕೊಂಡು ಹೋಗಬಹುದು ನೀವು..‘ ಎಲ್ಲೋ ಊರಿಗೆ ಹೋಗೋರಿಗೆ..ಮಧ್ಯಾನ್ಹದ ಊಟ ಮಾಡ್ಕೊಂಡು ಹೋಗಿ ಅನ್ನೋರೀತಿ... ಹೇಳ್ದ ನಿಂಗಣ್ಣ ..ತನ್ನ ಎದುರು ಮನೆ ಗೋಪಾಲ್..ಗೆ ಇದ್ದ ಬದ್ದ ಎರಡು ಕೂದಲನ್ನ ಕೆರೀತಾ ....
‘ರೆಡ್ಡಿ ರಂಪಾಟ - ಎಡ್ಡಿ ಎಗರಾಟ‘ ಅನ್ನೋ ಸ್ವಾರಸ್ಯಕರ ತಲೆಬರಹ ನೋಡಿ ಆ ದಿನದ ದಿನಪತ್ರಿಕೆ ಹಿಡಿದು ತನ್ನ ಪೋರ್ಟಿಕೋದಲ್ಲಿ ಈಸೀ ಛೇರಿನಲ್ಲಿ ಆಸೀನನಾಗಿ..ಬೆಳಗಿನ ಹಬೆಯಾಡುವ ಕಾಫಿಯನ್ನು ಗುಟುಕಿಸುತ್ತಾ ಕೂತಿದ್ದ ಗೋಪಾಲ್ ಗೆ ಒಂದು ಬಾಂಬೆಸೆದ....
ಎಡ್ಡಿ-ರೆಡ್ಡಿ ವಿಷಯ ಹಾರೇ ಹೋಯ್ತು..ಗೋಪಾಲ್ ತಲೆಯಿಂದ ನಿಂಗಣ್ಣ ಸಿಡಿಸಿದ ಬಾಂಬು ಕೇಳಿ...ಏನು..?? ಏನು ನಿಂಗಣ್ಣ ನೀನು ಹೇಳಿದ್ದು?..ಪ್ರಳಯ ಆಗುತ್ತಂತಾ?? ಯಾವ ನ್ಯೂಸ್ನಲ್ಲೂ ಬರ್ಲಿಲ್ಲವೇ?? ನಿನಗ್ಯಾರು ಹೇಳಿದ್ದು..?? ಇದೇನಪ್ಪ ಇದ್ದಕ್ಕಿದ್ದಂಗೆ ಪ್ರಳಯ ಗಿಳಯ ಅಂತೀಯ?? ಆಗೋಂದ್ಸಾರಿ..ಸ್ಕೈಲ್ಯಾಬ್ ಬೆಂಗಳೂರ್ ಮೇಲೆ ಬೀಳ್ಸೋಕೆ ಅಮೇರಿಕಾದವ್ರು ಪ್ಲಾನ್ ಮಾಡವ್ರಂತೆ ಅಂತ ನೀನೇ ಅಲ್ವಾ ಗುಲ್ಲೆಬ್ಬಿಸಿದ್ದು..!!?? ಹಂಗೇನಾ ಇದೂನೂ..??
ಯೇ..ಬಿಡ್ರಪ್ಪಾ ನೀವು..ಉಪಕಾರ ಮಾಡೊರ ಬುಡಕ್ಕೇ ಈಡ್ತೀರ ನೀವು ಬತ್ತೀನಾ..!! ಇದು ನಿಜ ಕಣಪ್ಪಾ..ವಿಜ್ಜಾನಿಗಳೂ ಹೇಳವರಂತೆ..ಅದೇನೋ ಆಕಾಶ ಕಾಯ ಅನ್ನೋದು ಭೂಮಿಗೆ ಬಡಿತದಂತೆ.. ಯಾರೂ ಉಳಿಯಲ್ಲವಂತೆ..ಅದನ್ನೇ ಮಾಯಾ ಜನಾಂಗದ ಕ್ಯಾಲಂಡರೂ ಹೇಳೋದಂತೆ..ಆ ಕ್ಯಾಲಂಡರ್ ನಲ್ಲಿ ೨೦೧೨, ಡಿ. ೨೧ ನಂತರ ಯಾವುದೇ ದಿನ ಇಲ್ಲಂತೆ..ಅಲ್ಲೀಗೇ ಮುಗೀತದಂತೆ ಎಲ್ಲಾ??....
ಒಂದೇ ಉಸಿರಿಗೆ ತನಗೆ ಗೊತ್ತಿದ್ದನ್ನ ಒದರಿದ ನಿಂಗಣ್ಣ.
ಈಗ ನಿಜವಾಗೂ ಯೋಚನೆಗೆ ಬಿದ್ದ ಗೋಪಾಲ...ತಕ್ಷಣ ಅವನಿಗೆ ssಛಿieಟಿಣisಣ ರಾಮಣ್ಣ ನೆನಪಿಗೆ ಬಂದ. ತನ್ನ ಬಾಲ್ಯದ ಗೆಳೆಯ, ಮೊನ್ನೆ ಮೊನ್ನೆವರೆಗೂ ಅಮೇರಿಕಾದಲ್ಲಿದ್ದು ಈಗ ಕರ್ನಾಟಕ ಸರ್ಕಾರದ ವಿಶೇಷ ಆಹ್ವಾನದ ಮೇರೆಗೆ ವಾತಾವರಣ ಶಾಸ್ತ್ರದ ಎಕ್ಸ್ಪರ್ಟ್ ಆಗಿ ಬೆಂಗಳೂರಿಗೆ ಬಂದಿದ್ದ. ಪಕ್ಕದ ಬೀದೀಲೇ ಅವನ ಮನೆ, ಭಾನುವಾರ ಆಗಿದ್ದರಿಂದ ಮನೇಲೇ ಇರ್ತಾನೆ ಅಂತ ರಾಮಣ್ಣನ ಮನೆಕಡೆ ಹೆಜ್ಜೆ ಹಾಕ್ದ.
ಗಾಬರಿ ಗಾಬರಿಯಾಗೇ ಮನೆಗೆ ಬಂದ ಗೋಪಾಲನ್ನ ನೋಡಿ ರಾಮಣ್ಣ..ಏನೋ ಗೋಪಾಲ ಗಾಬರಿ...ಎಲ್ಲಾ ಆರಾಮ ಹೌದಲ್ಲೋ? ಎನ್ನುತ್ತ ಗೆಳೆಯನನ್ನ ಬರಮಾಡಿಕೊಂಡ.
ಏ..ಏನಿಲ್ಲೋ ರಾಮು...ಎನ್ನುತ್ತಾ ತನ್ನ ಗಾಬರಿಯನ್ನು ಇಲ್ಲವೆನ್ನುವಂತೆ...ಅದೇ..ನಿಂಗಣ್ಣ ...ಏನೋ ೨೦೧೨......
ಓ ಅದಾ..ನಿನ್ಗೂ ಬಿಟ್ಟವನೆ ಭೂತಾನ..?? ಹಹಹ..ಎಂದ ರಾಮಣ್ಣ ಎಲ್ಲ ಗೊತ್ತಿರುವಂತೆ.
ನಿನಗೆ ಗೊತ್ತಾ.. ರಾಮು..? ಕೇಳಿದ ಗೆಳೆಯನ್ನ ಆಶ್ಚರ್ಯದಿಂದ ಗೋಪಾಲ.
ಊಂ ನಪ್ಪಾ..ಎಲ್ಲ ಕಡೆ ಇದೇ ಡಿಸ್ಕಶನ್ನು...ಮಾಡೋಕೆ ಕೇಮೆಯಿಲ್ಲ...ಎಂದ ಉದಾಸೀನತೆಯಿಂದ..
ಅಲ್ಲೋ ಏನೂ ಇಲ್ಲ ಅನ್ನೋ ತರಹ ಹೇಳ್ತಿದ್ದೀಯಾ ನೀನು..ಎಂದ ಗೋಪಾಲ ಈಗ ಸ್ವಲ್ಪ ಸಮಾಧಾನ ಮಾಡಿಕೊಳ್ಳುತ್ತಾ
ಗೆಳೆಯನ್ನ ತನ್ನ ಪಕ್ಕದ ಸೋಫಾದಲ್ಲಿ ಕೂರಿಸಿಕೊಳ್ಳುತ್ತಾ...ಕೂತ್ಕೋ ಹೇಳ್ತೀನಿ ನಾನು..ಎಂದ ರಾಮಣ್ಣ. ನೋಡು ಗೋಪಾಲ..ಎಲ್ಲಾ ಪ್ರಾರಂಭ ಆಗಿದ್ದು ಮಾಯನ್ ಪಂಚಾಂಗ ಅಥವಾ ಕ್ಯಾಲಂಡರ್ ನಿಂದ.
ಮಾಯಾನ್ ಜನಾಂಗ ಆಕಾಶಕಾಯ, ಸೂರ್ಯ ಚಂದ್ರ ಹೀಗೆ ಹಲವು ವಿಷಯ ಅರಿತ ಹಗೂ ಗಣಿತವನ್ನೂ ಅರಿತ ನಾಗರಿಕ ಜನಾಂಗ..ಅದು ಈಗಲೂ ಮಾಯನ್ ಕ್ಯಾಲಂಡರ್ ಅನ್ನು ಬಳಸುತ್ತೆ. ಅದರ ಪ್ರಕಾರ ೨೧ ದಿಸೆಂಬರ್ ೨೦೧೨ ರ ನಂತರ ದಿನವಿಲ್ಲ, ದಿನಾಂಕವಿಲ್ಲ..ನಿನ್ನ ಕಾರಿನ ಸ್ಪೀಡಾ ಮೀಟರ್ ೯೯,೯೯೯ಕ್ಕೆ ಬಂದ ನಂತರ ಓಡೋದನ್ನ ನಿಲ್ಲುಸುತ್ತಾ ಹೇಳು??..
ಏನೋ ರಾಮು ಹೀಗ್ ಕೇಳ್ತೀಯಾ..ಮತ್ತೆ ೦೦೦೦೧ಕ್ಕೆ ಬರುತ್ತೆ...ಅಲ್ಲವಾ...ಅದರಲ್ಲಿ ನಿಲ್ಲೋದು ಏನು?
ನೋಡಿದ್ಯಾ..ಇಲ್ಲೇ ಇದೆ ಉತ್ತರ..ಮಾಯನ್ ಕ್ಯಾಲಂಡರ್ ತನ್ನ ಮೂಲ ಸಂಖ್ಯೆಗಳಾದ ೧೩ ಮತ್ತು ೧೯ ನು ಉಪಯೋಗಿಸಿ ೦.೦.೦.೦.೦. ಉದ್ದ ಎಣಿಕೆ- ಎಂದು‌, ಕರೆಯುತ್ತೆ, ಅಂದರೆ ಅವರ ೦.೦.೦.೦.೦ ರೂಪದ ಕಡೆಯ ಸಂಖ್ಯೆ ೧೩.೦.೦.೦.೦. ಹಾಗಾದ್ರೆ ಈ ಸಂಖ್ಯೆ ಬಂದ ನಂತರ ನಿಂತರೆ ಭೂಮಿ ನಾಶ ಆದಂತೆ ಆಗುತ್ತಾ..?
ಇಲ್ಲಿ ಮಾಯನ್ ಕ್ಯಾಲಂಡರ್ ಬಗ್ಗೆ ತಿಳಿಯೋಣ. ಅವರ ಕ್ಯಾಲಂಡರ್ ನಲ್ಲಿ.. ೦.೦.೦.೦.೦ ..ಹೀಗೆ ಐದು ಸೊನ್ನೆಗಳು..ಪ್ರತಿಸೊನ್ನೆ (ಮೂಲದ ಮೊದಲ ಸೊನ್ನೆ ೧೩ಕ್ಕೆ ನಿಲ್ಲುತ್ತೆ) ೧ರಿಂದ ೧೯ ರವರೆಗೆ ಹೋಗುತ್ತೆ...ಅಂದರೆ ಮೊದಲದಿನ ೦.೦.೦.೦.೧ ಹಾಗೇ ೧೯ನೇ ದಿನ ೦.೦.೦.೦.೧೯, ಅದೇ ೨೦ನೇ ದಿನ ೦.೦.೦.೧.೦ ಆಗುತ್ತೆ ...ಹಾಗೆಯೇ..ಒಂದು ವರ್ಷಕ್ಕೆ -೦.೦.೧.೦.೦, ಇಪ್ಪತ್ತು ವರ್ಷಕ್ಕೆ ೦.೧.೦.೦.೦. ಇದನ್ನೇ ಮುಂದುವರೆಸಿದರೆ .. ೧.೦.೦.೦.೦ ಅಂದರೆ ೪೦೦ ವರ್ಷ (೨೦ *೨೦). ಇದೇ ರೀತಿ ಕ್ಯಾಲಂಡರಿನ ಕೊನೆಯ ಸಂಖ್ಯೆ...೧೩.೦.೦.೦.೦ ಇದನ್ನು ನಮ್ಮ
ಸೌರ್ಯ ಮಾನದಲ್ಲಿ ಹೇಳಿದರೆ ೫೧೨೬ ವರ್ಷ. ಮಾಯನ್ ಕ್ಯಾಲಂಡರ್ ನ ೦.೦.೦.೦.೧ ರ ನಮ್ಮ ಲೆಕ್ಕದ ದಿನಾಂಕ ಕ್ರಿ,ಪೂ. ೩೧೧೪ರ ಆಗಸ್ಟ್ ೧೧. ಅಲ್ಲಿಂದ ೫೧೨೬ ವರ್ಷ ಅಂದರೆ ೨೦೧೨ ಡಿಸೆಂಬರ್ ೨೧..!!!! ಅಂದ್ರೆ ನಿನ್ನ ಕಾರು ನಿಲ್ಲುತ್ತಾ..? ಹೇಳು..?
ಓ... ಅದ್ಕಾ ಇವರು ಹೇಳೋದು ಡಿ.೨೧ ೨೦೧೨ ಕ್ಕೆ ಪ್ರಳಯ ಅಂತಾ..??!! ..ಅಲ್ಲಪ್ಪ ನಮ್ಮ ಕ್ಯಾಲಂಡರ್ ಡಿ.೩೧ಕ್ಕೆ ಪ್ರತಿವರ್ಷ ನಿಲ್ಲುತ್ತಲ್ಲಾ..ಮತ್ತೆ ಜನವರಿ ೧ಕ್ಕೆ ಹೊಸವರ್ಷ ಆಚರಿಸೊಲ್ಲವೇ ನಾವು?...!!! ಸರಿ..ಸರಿ..ಬಿಡು ಅರ್ಥ ಆಯ್ತು..
ನೋಡು ಗೋಪಾಲ..ಇನ್ನೊಂದೆರಡು ವಿಷಯಾನೂ ಇದೆ..ಅವ್ರು ಹೇಳೋದು...
ಆ ದಿನಕ್ಕೆ ಭೂಮಿಯ ಗುರುತ್ವ ಮತ್ತು ಕಾಂತಗುಣ ಅದಲು ಬದಲಾಗುತ್ತೆ ಅಂತ...ಅಂದರೆ..ಉತ್ತರ ದೃವ ದಕ್ಷಿಣ ದೃವಗಳಲ್ಲಿ ವ್ಯತ್ಯಯ ಆಗುತ್ತೆ ಅಂತ...ಇದರಿಂದ ಸಮುದ್ರ ಅಲ್ಲೋಲಕಲ್ಲೋಲ ಆಗುತ್ತೆ, ಜೀವಿಗಳ ಮೇಲೆ ಅಪಾರ ಪ್ರಭಾವ ಬೀಳುತ್ತೆ ಅಂತ... ಇದೂ..ಅಸಾಧ್ಯ ಅಂತ ನಾನು ಹೇಳ್ತೀನಿ...
ಯಾಕೆ ಗೊತ್ತಾ? ಕಾಂತಗುಣ ಬದಲಾವಣೆ ಹೊಸದೇನಲ್ಲ. ಇದು ನಿಯಮಿತವಲ್ಲ ಹಾಗೂ ಇದ್ದಕ್ಕಿದ್ದಂತೆ..ನೀನು ಮಲಗಿದ್ದು ಬೆಳಿಗ್ಗೆ ಏಳುವಾಗ ಬದಲಾಗುವಂತಹುದೂ ಅಲ್ಲ... ಕ್ರಮೇಣ ಆಗುವುದು.. ಲೆಕ್ಕದ ಪ್ರಕಾರ ೩೦೦,೦೦೦ ವರ್ಷಕ್ಕೆ ಒಮ್ಮೆ ಆಗುತ್ತದಂತೆ. ಹೀಗೆ ಆಗಿ ೭೮೦,೦೦೦ ವರ್ಷ ಆಗಿದೆಯಂತೆ..ಅಂದರೆ ಆಗಬೇಕಿತ್ತು ಆಗಿಲ್ಲ..ಯಾವಾಗ ಬೇಕಾದರೂ ಆಗಬಹುದು...ಮತ್ತು ಇದು ಕ್ರಮೇಣ ಆಗುವುದಾದ್ದರಿಂದ ಮತ್ತು ಇದು ಪೂರ್ಣವಾಗಲು ಸುಮಾರು ೫೦೦೦ ವರ್ಷಗಳೇ ತಗಲಬಹುದು ಎನ್ನುವುದರಿಂದ....ನಮ್ಮ ಇಡೀ ನಾಗರೀಕತೆಯೂ ಇಷ್ಟು ಸಮಯವನ್ನು ನೋಡಿಲ್ಲ ಇನ್ನು ಆ ಸಮಯದ ಅವಧಿಯ ತೃಣಸಮಾನವೂ ಇಲ್ಲ ನಮ್ಮ ಜೀವಿತಾವಧಿ...ಇದರ ಬಗ್ಗೆ ಯೋಚಿಸುವ ಅಗತ್ಯವಾದರೂ ಏನು...?? ಹಾಗೆಯೇ ನಮ್ಮ ಭೂಮಿಯ ಕಾಂತೀಯ ಗುಣ ಶೂನ್ಯವಾಗುವುದು ಎನ್ನುವ ಮಾತೂ ಅಸಾಧ್ಯವಾದದ್ದು...ಕಾಂತ ಕ್ಷೇತ್ರ..ಏರುಪೇರಾದರೂ ಅದರ ಒಟ್ಟಾರೆ ರಕ್ಷಕಗುಣ ಹಾಗೆಯೇ ಇರುತ್ತೆ..ಹೀಗಾಗಿ..ಸೂರ್ಯ ಅಥವಾ ಇನ್ನಿತರ ಆಕಾಶಕಾಯದ ಕ್ಷಕಿರಣ ಬೆಂಕಿ ನಮ್ಮನ್ನು ತಟ್ಟುತ್ತೆ ಎನ್ನುವುದೂ ಬರೀ ಬುರುಡೆ...ಇದಕ್ಕೆ ಅಮೇರಿಕೆಯ ನಾಸಾ ಸ್ಸಿನೆತಿಸ್ತ್ಸ್ ಸಹಾ ಪೂರಕ ತರ್ಕ ಒದಗಿಸಿ ಭೂಕಾಂತತೆ ಹೇಗೆ ಸೂರ್ಯನ ಕಿರಣಗಳಿಂದ ನಮ್ಮನ್ನು ರಕ್ಷಿಸುತ್ತದೆ ಎಂದು ತಿಳಿಸಿದ್ದಾರೆ.
ಇನ್ನು ಮೂರನೇ ಸಾಧ್ಯತೆ...ಇದು ಎಲ್ಲದಕ್ಕಿಂತ ಅತಿ ಬಾಲಿಶ ಮತ್ತು ಮೂರ್ಖ ತರ್ಕದ ಸಾಧ್ಯತೆ... ಯಾವುದೋ ಎಕ್ಸ್ ಎನ್ನುವ ಆಕಾಶಕಾಯ ಭೂಮಿಯತ್ತ ಬರುತ್ತಿದ್ದು ೨೦೧೨ ಡಿ.೨೧ಕ್ಕೆ ಭೂಮಿಯನ್ನು ಬಲವಾಗಿ ಹೊಡೆಯುತ್ತೆ,....!! ಅದೂ ..ಡಿ.೨೧ಕ್ಕೇ ಏಕೆ? ಅದರ ಗಾತ್ರ ಏನು? ಮೂರುದಿನ ಭೂಮಿಯ ಚಲನೆಯನ್ನೇ ನಿಲ್ಲಿಸುವಷ್ಟು ಶಕ್ತಿಯುತವಾಗಿದ್ದರೆ ಅದರ ಗಾತ್ರ ಬೃಹದಾಕಾರದ್ದಾಗಿ‌ಅರಬೇಕು...ನಮ್ಮಲ್ಲಿ ಲಕ್ಷಾಂತರ ಖಗೋಳ ಶಾಸ್ತ್ರಿಗಳು ಅಕಾಶ ವೀಕ್ಷಕರು ಇದ್ದು ಇಷ್ಟು ದೊಡ್ದ ಆಕಾಶಕಾಯವನ್ನು ಗಮನಿಸಿಲ್ಲವೇ..?? ಅದರ ಗಾತ್ರದ ಬಗ್ಗೆ ಗೊತ್ತಿಲ್ಲ ಎಂದರೆ...ಅದರ ವೇಗ ಹೇಗೆ ತಿಳಿಯಿತು? ವೇಗ ಗೊತ್ತಿಲ್ಲ ಎಂದರೆ ಅದು ಡಿ,೨೧ಕ್ಕೇ ಢೀ ಹೊಡೆಯುತ್ತೆ ಎನ್ನುವುದು ಯಾವ ತರ್ಕ..??!! ಇದರ ಸುತ್ತ ಸಂಶಯಗಳೇ ಹೆಚ್ಚು...ಅಸಲು ಹೀಗೊಂದು ಆಕಾಶ ಕಾಯ ಇರುವುದೇ ಯಾವ ದೇಶದ ಖಗೋಳಜ್ನ ನಿಗೂ ಗೊತ್ತಾಗಿಲ್ಲ..!!! ಇದಕ್ಕೆ ಇನ್ನೊಂದು ಹಾಗಲಕ್ಕೆ ಬೇವು ಸಾಕ್ಷಿ ತರಹ...ಸರ್ಕಾರಗಳು ವಿಷಯವನ್ನು ತಿಳಿದಿದ್ದೂ ಬಯಲು ಮಾಡುತ್ತಿಲ್ಲ...!!! ಇದು ಸಣ್ಣ ಪುಟ್ಟದ್ದಲ್ಲ...ಇಡೀ ಭೂಮಿಯೇ ಇಲ್ಲವಾಗುತ್ತೆ ಎನ್ನುವುದಾದರೆ...ಯಾವುದೇ ಕುರುಹೇ ಇರುವುದಿಲ್ಲವೇ..??!! ಭೂಮಿ, ಸೂರ್ಯ, ಆಕಾಶಕಾಯ ಎಲ್ಲ ಚಾಲನೆಯ ನಿಯಮಕ್ಕೆ ಬದ್ಧ ಎನ್ನುವುದಾದರೆ ...ಅತಿಘೋರ ಒಮ್ಮೆಗೇ ಆಗುತ್ತೆ ಎನ್ನುವುದನ್ನು ನಂಬುವುದಾದರೂ ಹೇಗೆ..??
ಇದಕ್ಕೆಲ್ಲ ಒಂದೇ ಉತ್ತರ ಸಾಧ್ಯ...ಇದು ಮೂಲತಃ ಮಾಯನ್ ಹುಟ್ಟುಹಾಕಿದ ಜನಗೊಂದಲ್ಕ್ಕೀಡುಮಾಡುವುದು...ತಮ್ಮ ಸ್ಪೀಡಾ ಮೀಟರ್ ಕೊನೆಯಾದ್ದರಿಂದ ಜಗತ್ತೂ ಕೊನೆಯೆನ್ನುವುದು...ಹೇಗೆಂದರೆ...ಅಜ್ಜಿ ಹುಂಜ ಕೂಗದಿದ್ದರೆ ಸೂರ್ಯ ಮೂಡುವುದಿಲ್ಲ ಬೆಳಕಾಗುವುದಿಲ್ಲ ಎನ್ನುವಂತೆ...
ಏನಂತೀಯ ಗೋಪಾಲ???
ಏಯ್ ಬಿಡು ಮಾರಾಯಾ..ಒಳ್ಳೆ ಮಾಹಿತಿ ಕೊಟ್ಟೆ ನೀನು..., ಬರ್ಲಿ ಆ ನಿಂಗಣ್ಣ ನನ್ನ ಹತ್ರ ಹೇಳ್ತೀನಿ ಅವನಿಗೆ ಸರಿಯಾಗಿ...ಬರ್ಲಾ...ಅಂದಹಾಗೆ ...ನನ್ನ ಕಾರಿನ ಸ್ಪೀಡಾ ಮೀಟರು ನಿಜಕ್ಕೂ ಕೆಟ್ಟೈತೆ ೫೦೦೦ ಕಿ.ಮೀ ಓಡಿದೆ ಕಾರು..೦೦೦೦೦ ತೋರಿಸ್ತಾ ಇದೆ....ಬರ್ಲಾ...


ಸ್ನೇಹಿತರೇ ಇಲ್ಲಿ ನಿಮಗೆ ಮಾಯನ್ ಕ್ಯಾಲೆಂಡರ್ ಲಿಂಕ್ ಕಳುಹಿಸುತ್ತಿದ್ದೇನೆ...ಇದರಲ್ಲಿ ನಮ್ಮ ಕ್ಯಾಲಂಡರ್ ನಲ್ಲಿ ಡಿಸೆಂಬರ್ ೨೧, ೨೦೧೨ ಟೈಪ್ ಮಾಡಿ.....ನೀವೇ ನೋಡಿ ಇದು...ಮ್ಯಾಯನ್ ಕ್ಯಾಲಂಡರ್ ನ ಮೂಲ ಸೊನ್ನೆಯ ಗರಿಷ್ಟ್ ಸಂಖ್ಯೆ ೧೩ ಕ್ಕೆ ನಿಲ್ಲುತ್ತೆ ಮತ್ತು ..ಕ್ಯಾಲಂಡರ್....೧೩.೦.೦.೦.೦ ಗೆ ನಿಲ್ಲಿತ್ತೆ..!!!!
http://www.diagnosis2012.co.uk/mlink.htm