Monday, June 1, 2009

ಹಾಡು..ವಿತ್ ಮ್ಯೂಜ಼ಿಕ್

ತರಬೇತಿ ಶಿಬಿರದ ಕ್ಲಾಸಿನ ಎರಡು ಪಿರಿಯಡ್ ನಂತರ practicalsನ ಒಂದು experiemntಗೆ ತಯಾರಿಯಾಯ್ತು ಸತತ ಮೂರು ಘಂಟೆಯ ಕಾರ್ಯಕ್ರಮದ ನಂತರ ಚಹಾ ಬಂತು lab ಗೆ. ಎಲ್ಲರೂ ಚಹಾ ಮತ್ತು ಬಿಸ್ಕತ್ ಸವಿಯನ್ನು ಸವಿಯುತ್ತಾ ಹರಟೆಗೆ ಕುಂತೆವು. ಶಶಿ, ರಾಜ್, ಮುನೀರ್, ಜೋಸೆಫ್, ಸುಧಾ, ರಮ್ಯಾ, ಶರ್ಮಿಲಾ ಎಲ್ಲ ಉದ್ದನೆಯ lab ಟೇಬಲ್ಲಿನ ಎರಡೂ ಬದಿಯಲ್ಲಿ ಹರಟಲು ಕುಂತೆವು.
“ರಮ್ಯಾ, ರೋಸಿ ಎಲ್ಲೇ..?? ಆಮೇಲೆ ಬಂದು practicals ನಲ್ಲಿ ಏನ್ಮಾಡಿದ್ರಿ?? ಅಂತ ತಲೆ ತಿನ್ತಾಳೆ..ಅವಳಿದ್ದಳಲ್ಲಾ.. ನಮ್ಮ experiemnt preparatory ಯಲ್ಲಿ ??” ಸುಧಾ ಕೇಳಿದಳು ತನ್ನ ರೂಂ ಮೇಟ್ ಬಗ್ಗೆ ರಮ್ಯಾನ ವಿಚಾರಿಸುತ್ತಾ.
“ಇಲ್ಲೇ ಇದ್ದಳಲ್ಲಾ...ಏನೋ ಲಿಬ್ರರೀಲಿ ಕೆಲಸ ಇದೆ ಅಂತ ಹೇಳ್ತಿದ್ದಳು..ಹೋಗಿದ್ದಾಳೆ ಅನ್ಸುತ್ತೆ..”.ಎಂದಳು.
“ಲೋ ಮುನೀರ್ ಸಂಗೀತದ ಜೋಕ್ ಹೇಳ್ದಂತಲ್ಲಾ ರಾತ್ರಿ ರೂಂನಲ್ಲಿ...ಆ ಜೋಕು ಹೇಳೋ..” ಗೋಗರೆದ ಶಶಿ.
ಸುಧಾ, ಶರ್ಮಿಲಾ, ರಾಜ್, ಜೋಸೆಫ್ ಎಲ್ಲ...”ಹೇಳೋ..ಹೇಳೋ..please “ ಅಂತ ಗೋಗರೆದರು.
“ಸ್ವಲ್ಪ ಇರ್ರೋ..ರೋಸೀನೂ ಬರ್ಲಿ...” ಸ್ನೇಹಿತೆ ಪರ ರಮ್ಯಾ ಕೇಳಿಕೊಂಡಳು.
“ನೋಡ್ರೋ..ಜೋಕೊಳಗೆ ಜೋಕು ಬೇಕಂದ್ರೆ...ಅವಳು ಬರೋದಕ್ಕೆ ಮುಂಚೇನೇ ಹೇಳ್ತೀನಿ...ನೀವೇ ನೋಡೀರಂತೆ ಮಜಾನ...” ಅಂತ ಮುನೀರ್ ಜೋಕ್ ಹೇಳೋಕೆ ಶುರು ಮಾಡ್ದ
(ಅವನು ಹೇಳಿದ್ದು ಹೀಗೆ)
ಯಾವುದೋ important ವಿಷಯವನ್ನು ತನ್ನ ಅಣ್ಣನ ಹತ್ರ ಚರ್ಚಿಸೋವಾಗ, ಪಾಪು ತನ್ನ ಅಮ್ಮನಿಗೆ- “ಅಮ್ಮ ನಾನು ಸುಸು ಮಾಡ್ಬೇಕು...ಅಮ್ಮ ನಾನು ಸುಸು ಮಾಡ್ಬೇಕು” ಅಂತ ಒಂದೇ ರಂಪ ಶುರು ಹಚ್ಕೊಂಡ...
“ಲೋ..ಬಂಟಿ ಎಸ್ಟು ಸಲ ಹೇಳಿಲ್ಲ? ನೀನು ದೊಡ್ಡವನಾಗ್ತ ಇದ್ದೀಯ..ಎಲ್ಲರ ಮುಂದೆ ಹಾಗೆ ಸುಸು..ಸುಸು ಅಂತ ಹೇಳ್ಬಾರ್ದು ಅಂತ...” ಗದರಿದಳು ಬಂಟಿ ಅಮ್ಮ
“ಥೂ ಹೋಗಮ್ಮ...ನನಗೆ ಅವಸ್ರ ಆಗಿದೆ..ನೀನು..ನೋಡಿದ್ರೆ ಹಾಗೆ ಹೇಳ್ಬೇಡ ಹೀಗೆ ಹೇಳ್ಬೇಡ ಅಂತೀಯ..ಮೊದಲು ಈ ಚಡ್ಡಿ ಬಿಚ್ಚು ನಾನು ಸುಸು ಮಾಡಿ ಬರ್ತೀನಿ” ಅಂದ..
ಅವನ ಅಮ್ಮ ಚಡ್ಡಿ ಹುಕ್ಸ್ ತೆಗೆದು – “ಹೋಗೋ.ಅವಸ್ರ ಇವನಿಗೆ ..ಎನ್ನುತ್ತಾ ಅವನ ಕುಂಡಿಗೆ ಪ್ರೀತಿಯಿಂದ ತಟ್ಟಿ..”
ಸುಸು ಮಾಡಿ ಬಂದ ಬಂಟಿ “ಈಗ ಹೇಳಮ್ಮಾ” ಎಂದ ವಿಧೇಯನಂತೆ..
“ನೋಡು..ಸುಸು..ಸುಸು ಅಂತ ಎಲ್ಲರ ಎದುರು ಹೇಳ್ಬಾರ್ದು..”
“ಮತ್ತೆ ನನ್ಗೆ ಅವಸ್ರ ಆದ್ರೆ...” ಹುಬ್ಬೇರಿಸಿದ ತನ್ನ ಆತಂಕ ತೋಡಿಕೊಳ್ತಾ..
“ಆಗ ನನಗೆ ಮಾತ್ರ ಗೊತ್ತಗೋ ಹಾಗೆ...’ನಾನು ಹಾಡ್ಬೇಕು..ನಾನು ಹಾಡ್ಬೇಕು’ ಅಂತ ಹೇಳು..” ಎಂದಳು.

ಹೀಗಿರಬೇಕಾದರೆ ಒಂದ್ಸರ್ತಿ ಬಂಟಿಯ ದೂರದ ಚಿಕ್ಕಪ್ಪ ಚಿಕ್ಕಮ್ಮ ಅಜ್ಜ ಅಜ್ಜಿ ಎಲ್ಲರೂ ಮನೆಗೆ ಬಂದಿದ್ದರು. ಎಲ್ಲ ಗಹನವಾದ ವಿಷಯವೊಂದರ ಬಗ್ಗೆ ಮಾತು-ಕತೆಯಲ್ಲಿದ್ದಾಗ ಶುರುವಾಯ್ತು ಬಂಟಿ ಬಡ-ಬಡಿಕೆ...”ಅಮ್ಮಾ..ನಾನು ಹಾಡ್ಬೇಕು..ಅಮ್ಮಾ ನಾನು ಹಾಡ್ಬೇಕು..” ಅಂತ..
“ಲೋ ಸ್ವಲ್ಪ ಇರೋ ಏನೋ ಮಾತ್ನಾಡ್ತಾ ಇದ್ದೀವಿ ನಾವು..” ಅವನ ಅಮ್ಮ ಗದರಿದಳು..
ಬಂಟಿ.. “ಥೂ ಹೋಗಮ್ಮ ನಾನು ಹಾಡ್ಲೇ ಬೇಕು...” ಎನ್ನತೊಡಗಿದ
ಇದನ್ನೇ ಗಮನಿಸುತ್ತಿದ್ದ ಅಜ್ಜ... “ಬಾರಪ್ಪಾ ಪುಟ್ಟ..ನೀನು ನಿಧಾನವಾಗಿ..ನನ್ನ ಕಿವೀಲಿ ಹೇಳು ಬಾ ಹಾಡು...” ಎಲ್ಲ ನಗತೊಡಗಿದಾಗ ರಮ್ಯಾ ನಗುತ್ತಾ..ಹೇಳಿದಳು.. “ಬಂಟಿ ಹಾಡು ಅಜ್ಜನಿಗೆ ಹೇಗನ್ನಿಸ್ತಂತೆ..??”
ಜೋಕನ್ನು ಬೇಕಂತಲೇ ನಿಧಾನವಾಗಿ ಹೇಳಿದ ಮುನೀರ್..ಅದು ಮುಗಿಯುವ ಹೊತ್ತಿಗೆ ರೋಸಿ ಲ್ಯಾಬಿನೊಳಕ್ಕೆ ಬಂದಳು..
ಎಲ್ಲರೂ ನಕ್ಕರು...ನಗುತ್ತಾ ಸುಧಾ ಕೇಳಿದಳು.. “ಲೇ ರೋಸಿ ಎಲ್ಲೇ ಹೋಗಿದ್ದೇ ??”

ಶರ್ಮಿಲಾ ಹೇಳಿದಳು - “ಲೇ..ಅವಳು ಹಾಡು ಹೇಳಿ ಬರ್ತಿದ್ದಾಳೆ....” ಘೊಳ್ ಎಂದು ಎಲ್ಲ ನಗತೊಡಗಿದಾಗ ರೋಸಿಗೆ ರೇಗಿತ್ತು..
“ಯಾಕ್ರೇ..ನನಗೆ ಹಾಡೋಕೆ ಬರೊಲ್ಲ ಅಂದ್ಕೊಂಡಿದ್ದೀರಾ...??”
ಮತ್ತೆ ಜೋರಾಗಿ ನಕ್ಕರು ಎಲ್ಲ...
“ಯಾಕ್ರೋ ..? ಇದ್ರಲ್ಲಿ ನಗೋದೇನಿದೆ..?? ಹಾಡಿ ತೋರಿಸಲಾ ನಾನು...ಎಷ್ಟು ಇಂಪಾಗಿ ಹಾಡ್ತೀನಿ ಗೊತ್ತಾ..ನಮ್ಮೂರ್ನಲ್ಲಿ ಗಣೇಶನ ಹಬ್ಬದಲ್ಲಿ ಸ್ಕೂಲಿನ ಎಲ್ಲ ಸಮಾರಂಭದಲ್ಲಿ ಹಾಡೀದೀನಿ ಗೊತ್ತಾ...??”
ಮತ್ತೆ ಜೋರಾಗಿ ನಗು..
ಮುನೀರ್ ಕೇಳ್ದ ನಗ್ತಾನೇ.. “ರೋಸೀ..ನೀನು ಸೋಲೋ ಹಾಡ್ತಿಯೋ..ಡ್ಯೂಯೆಟ್ಟೋ..??” ಎಲ್ಲರೂ ಮತ್ತೆ ನಗಲಾರಂಭಿಸಿದರು..
“ಯಾಕ್ರೋ ನಗ್ತೀರ ..ನನಗೆ ಸೋಲೋನೇ ಇಷ್ಟ.. ಆದ್ರೆ ಡೂಯೆಟ್ಟ್ಗೆ ಒಳ್ಳೆ ಪಾರ್ಟ್ನರ್ ಸಿಕ್ರೆ ..ಖಂಡಿತಾ ಹಾಡ್ತೇನೆ...” ಮತ್ತೆ ಎಲ್ಲರೂ ಜೋರಾಗಿ ನಗಲಾರಂಭಿಸಿದರು..
“..ಆಗೊಲ್ಲ ಅಂದ್ಕೊಂಡಿದ್ದೀರಾ..?? ನೀವೆಲ್ಲಾ ಬನ್ನಿ ಬೇಕಾದ್ರೆ..ಎಲ್ಲರ ಒಟ್ಟಿಗೂ ಹಾಡಿ ತೋರಿಸ್ತೀನಿ...”
ಹೊಟ್ಟೆ ಹಿಡಿದು ಎಲ್ಲರೂ ನಗಲಾರಂಭಿಸಿದರು...
ಶಶಿ ಹೇಳ್ದ..ನಗ್ತಾ.. “ರೋಸಿ..ಸ್ಟೇಜ್ ಮೇಲೆ ಹಾಡ್ತೀಯಾ..?? Training course closing functionನಲ್ಲಿ ಚಾನ್ಸ್ ಕೊಡ್ಸೋಣ...” ಎಲ್ಲರ ನಗು ನಿಲ್ಲಲೇ ಇಲ್ಲ..ರೋಸಿ ಏನು ಹೇಳಬಹುದೆಂದು ಯೋಚಿಸುತ್ತಾ..
ರೋಸಿ ಹೇಳಿದಳು.. “ಕೊಡ್ಸಿ ಚಾನ್ಸ್ ಹಾಗಾದ್ರೆ..ಆರ್ಕೆಸ್ಟ್ರಾ ..ಮ್ಯೂಜಿಕ್ ಜೊತೆಗೇ ಹಾಡ್ತೀನಿ.. ನಾನು ಹಾಡೊದನ್ನ ನೋಡ್ತಾ ಎಲ್ಲಾ ದಂಗಾಗಬೇಕು..ಹಾಗೆ ಹಾಡ್ತೇನೆ...”.
ಅವಳ ಮಾತು ಸರಿಯಾಗಿ ಕೇಳಿಸಲೂ ಇಲ್ಲ ಅಷ್ಟೊಂದು ನಗು ತುಂಬಿ ಹೋಯ್ತು ಲ್ಯಾಬ್ ತುಂಬಾ...
ರೋಸಿಗೆ ..ಅರ್ಥವಾಗಲಿಲ್ಲ ಎಲ್ಲರೂ ಏಕೆ ಇಷ್ಟೊಂದು ನಗ್ತಾ ಇದ್ದಾರೆ ಅನ್ನೋದು. ಕಡೆಗೆ ಕೋರ್ಸ್ ಮುಗಿದು ಎಲ್ಲ ಹೊರಡುವ ಸಮಯ ಹತ್ತಿರವಾದಾಗ ರೋಸಿಗೆ ರಮ್ಯಾನೇ ಹೇಳಿರಬೇಕು..ಮುನೀರ್ ಹತ್ರ ಬಂದು ರೋಸಿ ಹೇಳಿದಳು ಹುಸಿ ಮುನಿಸು ತೋರಿಸುತ್ತಾ.. ಮುನೀರ್ ಬೆನ್ನಿಗೆ ಗುದ್ದುತ್ತಾ.... “ಮುನೀರ್ ತುಂಬಾ ಘಾಟಿ ಕಣೋ ನೀನು..ಎಲ್ಲ ಸೇರಿ ಫೂಲ್ ಮಾಡಿದ್ರಲ್ಲ ನನ್ನ..ಇರ್ಲಿ ನನಗೂ ಸಿಗುತ್ತೆ ಚಾನ್ಸು...”
“ಖಂಡಿತಾ ಕೊಡಿಸ್ತೀವಮ್ಮಾ ನಿನಗೆ ಹಾಡೋಕೆ ..” ಎಂದ ಮುನೀರ್ ಈಗ ಎಲ್ಲರ ಜೊತೆ ರೋಸೀನೂ ಮನತುಂಬಿ ನಕ್ಕಳು.