Wednesday, December 21, 2011

ಚಿತ್ರ: ಹಿಂದೂಸ್ತಾನ್ ಟೈಮ್ಸ್ (Fotos: Hindustan Times)

ಗೊತ್ತಿಲ್ಲ ಮಗು... ಆದರೆ ಬರುತ್ತೆ ಆ ದಿನ...

ತಾತಾ ಭಾರತದ ನಾಗರೀಕತೆ ಅದ್ವಿತೀಯ ಅಂತೆ
ಹೌದು ಪುಟ್ಟಿ
ನಮ್ಮ ರಾಜ ಮಹರಾಜರು ಪ್ರಜಾಹಿತಚಿಂತಕರಾಗಿದ್ದರಂತೆ
ಹೌದು ಪುಟ್ಟಿ ಕೆಲವರು ಹೆಚ್ಚು ಮತ್ತೆ ಕೆಲವರು ಕಡಿಮೆ
ಆದರೆ ಈಗಿನ ನಮ್ಮ ಆಳುವವರು ಯಾಕಜ್ಜಾ ತುಂಬಾ ಹೆಚ್ಚು ಕಮ್ಮಿ..
ನನಗೆ ಗೊತ್ತಿಲ್ಲ ಮಗು... ಅದಕ್ಕೇ ನಾನು ಕೂತೀನಿ....

ಅಜ್ಜಾ..
ಹೇಳು ಪುಟ್ಟೀ..
ಭ್ರಷ್ಠಾಚಾರ ನಿನಗೊಬ್ಬನಿಗೇ ಕೆಟ್ಟದ್ದು ಯಾಕೆ?
ಇಲ್ಲಾ ಪುಟ್ಟಿ..ನಿನಗೂ ಕೆಟ್ಟದ್ದೇ ಅಲ್ವಾ ಅದಕ್ಕೇ..
ಇಲ್ಲಿ ಕುಂತಿರೋರೆಲ್ಲರಿಗೂ ಕೆಟ್ಟದ್ದು ಅದಕ್ಕೇ..
ಬರಲು ಆಗದೆ, ದಿನದ ಹೊಟ್ಟೆಪಾಡಿಗೆ ಹೋಗುವವರಿಗೂ
ಕಡೆಗೆ ನಿನ್ನಪ್ಪ ನಿನ್ನ ಅಣ್ಣನ ಕೆಲ್ಸಕ್ಕೆ ಲಂಚ ಕೊಡ್ಲಿಲ್ವಾ ಅದಕ್ಕೇ..
ಎಲ್ಲಾರಿಗೂ ಕೆಟ್ಟದ್ದೇ.....
ಮತ್ತೆ ಮಂತ್ರಿಗಳಿಗೆ ಅಧಿಕಾರಿಗಳಿಗೆ ..??
ನನಗೆ ಗೊತ್ತಿಲ್ಲ ಮಗೂ.. ಅದಕ್ಕೇ ಕೂತೀನಿ..

ನಂಗೊಂದ್ ಮಾತ್ ಹೇಳಜ್ಜಾ
ಏನ್ ಪುಟ್ಟಿ.?
ನಮ್ಮ ಆಳೋರನ್ನ ನಾವು ಆರಿಸೋದಲ್ವಾ?
ಹೌದು ಪುಟ್ಟಿ ನಿಜ ನಿನ್ ಮಾತು..
ಮತ್ತೆ ಅವರು ನಾವು ಹೇಳೋದನ್ನ..ಮತ್ತೆ
ನಮಗೆ ಒಳ್ಳೆದಾಗೊದನ್ನ ಮಾಡ್ಬೇಕಲ್ವಾ,,?
ಹೌದು ನೂರಕ್ಕೆ ನೂರು ನಿಜ ಪುಟ್ಟಕ್ಕ...
ಮತ್ತೆ ಕೋಟ್ಯಾಂತರ ಜನದ ಒಳಿತ್ಗೆ...
ಭ್ರಷ್ಠಾಚಾರ ತಡೆಗೆ ಕಾನೂನು ಮಾಡೋಕೆ ಮೀನ ಮೇಷ ಯಾಕೆ..?
ಗೊತ್ತಿಲ್ಲ ನನ್ ಕಂದಾ... ಅದಕ್ಕೆ ಕೂತೀನಿ..
ನಿನ್ನನ್ನೂ ಕೂರ್ಸೀನಿ.. ಎಷ್ಟೋ ಕೋಟ್ಯಾಂತರ ಜನ್ರನ್ನ ಕೂರ್ಸೀನಿ...
ಒಂದೇ ನಿರೀಕ್ಷೆಲಿ..... ಬರುತ್ತೆ ಆ ದಿನ ಅಂತ....

Saturday, December 10, 2011

ಭಾವ ಕಲಕಿದ ಛಾಯಾಚಿತ್ತಾರ ಮತ್ತೊಂದು.....

Foto: Prakash Hegde

ಓಹ್..ನಿನ್ನ ನೋಡಿದರೆ...!!!

ಹಳ್ಳಿಯ ಕೆರೆ,
ಹುಲ್ಲಿನ ಹೊರೆ,
ಕೆರೆಸೇರು ತೊರೆ
ಎಲ್ಲಾ ನೆನಪಾಗುತ್ತೆ.
ಸ್ನೇಹಿತ ಅಮ್ಮನ ವ್ಯಥೆ
ಕೆರೆಹೊಕ್ಕ ಎಮ್ಮೆ ಕಥೆ
ಹೂಳೆತ್ತೋ ಕಂಬಾರ
ಮೀನಕದ್ದೋಡಿದ ಚೋರ
ಚಿತ್ರ ಹಾದು ಹೋಗುತ್ತೆ.

ಓಹ್ ನಿನ್ನ ನೋಡಿದರೆ....!!!
ಚೇರ್ಮನ್ನರ ಭೂಕಬಳಿಕೆ
ಮರೆಯಾದ ಕೃಷಿಗಳಿಕೆ
ಬತ್ತಿ ಮಾಯವಾದ ತೊರೆ
ಗುಳೇ ಹೊರಟ ರೈತ ನೆರೆ

ತಲೆ ಎತ್ತುವ ಮಹಲುಗಳು
ರೆಸಾರ್ಟ್ ರಾಜಕೀಯಗಳು
ಅಲ್ಲಿಯೇ ಕೂಲಿಯಾದ ರೈತಗಳು
ಎಲ್ಲಾ ಎಲ್ಲಾ ನೆನಪಾಗುತ್ತೆ...
ಕಣ್ಣೆವೆ ಹೀಗೇ ಅನಾಯಾಸ
ಒರಸಿಕೊಂಡರೂ ನಿಲ್ಲದೇ
ಮತ್ತೆ ಮತ್ತೆ ತೇವವಾಗುತ್ತೆ.

Saturday, December 3, 2011

ಹೀಗೂ ಒಮ್ಮೆ ಎಡವಟ್ಟಾಗೋದ್ರೆ ಆಶ್ಚರ್ಯ ಇಲ್ಲ


ಹೀಗೂ ಒಮ್ಮೆ ಎಡವಟ್ಟಾಗೋದ್ರೆ ಆಶ್ಚರ್ಯ ಇಲ್ಲ

(foto: Emirates web site)

ಬಹಳ ಅಲ್ಪಾವಧಿಯ ತಾಯ್ನಾಡ ಪ್ರವಾಸಕ್ಕೆ ತುರಾತುರಿಯಲ್ಲಿ ನಿರ್ಧರಿಸಲು ಕಾರಣಗಳು ಹಲವಾರಾಗಿದ್ದವು. ಮಂಗಳೂರಿನಲ್ಲಿ ನಡೆಯಲಿದ್ದ ಏಶಿಯಾ ಮಟ್ಟದ ಮತ್ಸ್ಯಾರೋಗ್ಯ ವಿಚಾರಗೋಷ್ಠಿಯಲ್ಲಿ ಪಾಲ್ಗೊಳ್ಳುವುದರ ಜೊತೆಗೆ ಅಪ್ಪ-ಅಮ್ಮ ಹಾಗೂ ನೆಂಟರನ್ನು ಮತ್ತು ಸ್ನೇಹಿತರನ್ನು ನೋಡುವ ಸ್ವಾರ್ಥವೂ ಇತ್ತು. ಅಲ್ಲದೇ ಬೆಂಗಳೂರು ಮಾಯಾನಗರಿಯಲ್ಲಿ ಹೊಸದಾಗಿ ಕಟ್ಟಲು ಪ್ರಾರಂಭಿಸಿರುವ ಮನೆಯ ಪ್ರಸ್ತುತ ಸ್ಥಿತಿಯನ್ನು ನಿರೀಕ್ಷಿಸುವುದೂ ಸೇರಿತ್ತು. ಕುವೈತಿನಲ್ಲಿ ನಮ್ಮ ಕನ್ನಡ ಕೂಟದ ರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಅದೇ ದಿನ ಅಂದರೆ ಡಿಸೆಂಬರ್ ೧೮ರ ಮಧ್ಯರಾತ್ರಿ ಮನೆಯಿಂದ ಹೊರಟು, ಕುವೈತ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಸೇರಬೇಕಿತ್ತು. ಬೇಗ ಕಾರ್ಯಕ್ರಮದಿಂದ ಬಂದು ಬಟ್ಟೆ ಬರೆ (ಒಂದು ವಾರದ ಪ್ರವಾಸಕ್ಕೆ ಬೇಕಾಗುವ ಹಾಗೆ) ಪ್ಯಾಕ್ ಮಾಡಿ ತಯಾರಾಗೋದು ಕಷ್ಟವಾಗಲಾರದೆಂದು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಹೊರಟೆ. ಕಾರ್ಯಕ್ರಮನಂತರ ಊಟಕ್ಕೂ ನಿಲ್ಲದೇ ಮನೆಗೆ ವಾಪಸ್ಸಾಗಿ ಸೂಟ್ ಕೇಸ್ ರೆಡಿ ಮಾಡಿ ೧.೩೦ ಕ್ಕೆ ಮನೆಯಿಂದ ಏರ್ಪೋರ್ಟಿಗೆ ಹೊರಟೆ. ಚೆಕ್ ಇನ್ ಶಾಸ್ತ್ರ ಮುಗಿಸಿ ಸ್ವಲ್ಪ ಪೇಟ್-ಪೂಜೆಗೆ ಡಿಪಾರ್ಚರ್ ಟರ್ಮಿನಲ್ ನಲ್ಲಿದ್ದ ಫಾಸ್ಟ್ ಫುಡ್ ಕೌಂಟರಲ್ಲಿ ಬರ್ಗರ್ ತಿಂದು ಕಾಫಿ ಕುಡಿದು ಡಿಪಾರ್ಚರ್ ಗೆ ಬಂದಾಗ ಆಗಲೇ ಬೋರ್ಡಿಂಗ್ ಪ್ರಾರಂಭವಾಗಿತ್ತು. ಹಿಂದಿನ ರಾತ್ರಿಯೂ ಮಲಗಿದ್ದು ತಡವಾಗಿದ್ದರಿಂದ ನಿದ್ದೆ ಕಾರಣ ಕಣ್ಣೆವೆ ಭಾರವಾಗಿದ್ದವು. ವಿಮಾನ ಹತ್ತಿ ಸೀಟಲ್ಲಿ ಕುಳಿತು ಬೆಲ್ಟ್ ಬಿಗಿದು ಮಲಗೋ ತಯಾರಿ ಮಾಡೋಕೆ ಮುಂಚೆಯೇ ನಿದ್ದೆ ಬಂದಿತ್ತು.., ನಾನು ನಿದ್ದೆ ಮಾಡಿದೆ ಅನ್ನೋದಕ್ಕಿಂತಾ ನಿದ್ದೆ ನನ್ನ ಆವರಿಸಿತ್ತು ಎನ್ನಬಹುದು.
      
ವಿಮಾನ ನೆಲಬಿಟ್ಟೇಳುವ (ಟೇಕ್ ಆಫ್) ಸಮಯವಾಗಿತ್ತೆನಿಸುತ್ತದೆ, ನನ್ನ ಅಕ್ಕ ಪಕ್ಕ ಸ್ವಲ್ಪ ಗಲಿಬಿಲಿ ಆಗ್ತಿದ್ದದ್ದು ಭಾಸವಾದ್ರೂ ಕಣ್ಣು ತೆರೆಯಲಿಲ್ಲ.
“ಎಕ್ಸ್ ಕ್ಯೂಸ್ ಮಿ, ಆರ್ ಯೂ ಮಿ. ಸಾಹಬ್ (ಕ್ಷಮಿಸಿ ನೀವಾ ಮಿಸ್ಟರ್ ಸಾಹೇಬ್)?”
ಕಿವಿಯಲ್ಲಿ ಕೋಗಿಲೆ ಉಲಿದ ಭಾಸವಾಯ್ತು...ಕಣ್ಣು ತಂತಾನೆ ತೆರೆಯಿತು, ಸುಂದರ ಗಗನ ಸಖಿ ನನ್ನ ಮುಂದೆ!!,
ಸಾವರಿಸಿಕೊಂಡು...
“ಎಸ್, ಐ ಯಾಮ್ ಆಜಾದ್ ಇಸ್ಮಾಯಿಲ್ ಸಾಹೇಬ್” (ಹೌದು ನಾನೇ ಆಜಾದ್ ಇಸ್ಮಾಯಿಲ್ ಸಾಹೇಬ್) ಎಂದೆ...ಅಕಸ್ಮಾತ್ ಆಕೆ ಬೇರೆ ಸಾಹೆಬ್ ಬಗ್ಗೆ ಕೇಳ್ತಿದ್ರೆ ಅಂತ ಅನುಮಾನ ಬಂದು.
“ಡೂ ಯೂ ನೋ ಹಿಂದಿ.. ಆಪ್ ದಕ್ಕನಿ ಹಿಂದಿ ಜಾನ್ತೇ ಹೋ??” (ನಿಮಗೆ ಹಿಂದಿ, ದಕ್ಕನಿ ಹಿಂದಿ ಬರುತ್ತಾ?)
ಎಂದು ಕೇಳಿದಳು ಸಖಿ.
“ಹಾಂ ಜಾನ್ತಾ ಹೂಂ, ಕ್ಯೂ ಕ್ಯಾ ಬಾತ್ ಹೈ?”
ನಿದ್ದೆ ಹಾರಲಾರಂಬಿಸಿತ್ತು. ಕುತೂಹಲದಿಂದ ಕೇಳಿದೆ ನಾನು.
“ಜಸ್ಟ್ ಎ ಲಿಟ್ಲ್ ಹೆಲ್ಪ್ ಸರ್.ಥೋಡಾ ಆಪ್ ಮದದ್ ಕರೇಂಗೆ..??” ಸುಂದರಿಯ ಕೋರಿಕೆಗೆ ’ಇಲ್ಲ’ ಎನ್ನೋದು ಹೇಗೆ..??
“ಎಸ್ ಟೆಲ್ ಮಿ, ಕಹಿಯೇ ಕ್ಯಾ ಕರ್ನಾ ಹೈ?” ಎಂದೆ.
“ದೇರ್ ಇಸ್ ಒನ್ ಲೇಡಿ, ಸೀಮ್ಸ್ ಟು ಬಿ ಫ್ರಂ ಹೈದರಾಬಾದ್, ಥೋಡಾ ಉಸ್ ಸೆ ಬಾತ್ ಕರೇಂಗೆ..? ಕ್ಯಾ ತಕಲೀಫ್ ಹೈ ಉಸ್ಕೋ ಪೂಛಿಯೇ...ಮೆರಿ ಹಿಂದಿ ಒಹ್ ಸಮಝ್ ನಹೀಂ ಪಾ ರಹೀ ಹೈ” (ಅಲ್ಲೊಬ್ಬ ಹೆಂಗಸಿದ್ದಾಳೆ, ಬಹುಶಃ ಹೈದರಾಬಾದಿನವಳಿರಬೇಕು, ನನ್ನ ಹಿಂದಿ ಅವಳಿಗೆ ಅರ್ಥವಾಗ್ತಿಲ್ಲ ಅನ್ಸುತ್ತೆ).. ಎಂದಳು ಸುಂದರಿ.
ಅಲ್ಲಿಗಾಗ್ಲೇ ವಿಮಾನ ಗಗನದ ತನ್ನ ಪ್ರಯಾಣದ ಎತ್ತರ ತಲುಪಿತ್ತು. ಸೀಟ್ ಬೆಲ್ಟ್ ಸೈನ್ ತೆಗೆಯಲಾಗಿತ್ತು. ನಾನು ನನ್ನ ಸೀಟ್ ಬೆಲ್ಟ್ ತೆಗೆದು ಗಗನ ಸಖಿಯ ಹಿಂದೆ ಹೋದೆ. ನಾಲ್ಕೈದು ಹಿಂದಿನ ಸಾಲಿನ ಸೀಟಿನಲ್ಲಿ ಕಣ್ಣುಮುಚ್ಚಿ ಮಲಗಿದ್ದ ಸುಮಾರು ೩೨-೩೫ ವರ್ಷದ ಹೆಂಗಸನ್ನು ಆ ಗಗನ ಸಖಿ ಎಬ್ಬಿಸುತ್ತಾ...
“ಮೇಡಂ...ಬೋಲಿಯೇ..ಆಪ್ ಕೋ ಕ್ಯಾ ತಕಲೀಫ್ ಹೈ..???” (ನಿಮಗೇನು ತೊಂದರೆ ಹೇಳಿ)
ಎನ್ನುತ್ತಾ ನನ್ನ ಕಡೆ ತಿರುಗಿ,
“ಆಸ್ಕ್ ಹರ್ ವಾಟ್ ಈಸ್ ದಿ ಪ್ರಾಬ್ಲಂ, ಎಹ್ ಔರತ್ ಏಕ್ ಜಗಹ್ ಬೈಟ್ ನಹೀಂ ರಹೀ, ಇಧರ್ಸೆ ಉಧರ್ ಜಾತಿ ಹೈ, ಕಹೀಂ ಖಾಲಿ ಜಗಹ್ ಮೆ ಬೈಟ್ತೀ ಹೈ ಫಿರ್ ಖಡೀ ಹೋ ಜಾತೀ ಹೈ...ಟೇಕ್ ಆಫ್ ಪರ್ ಭೀ ಬಹುತ್ ಪರೇಶಾನ್ ಕರ್ ದಿಯಾ ಇಸ್ನೆ” (ಕೇಳಿ ಈಕೆಯನ್ನ ಏನು ಸಮಸ್ಯೆ ಇವಳದ್ದು, ವಿಮಾನ ನೆಲ ಬಿಟ್ಟೇಳುವಾಗಲೂ ಆ ಕಡೆ ಈ ಕಡೆ ಓಡಾಡುತ್ತ ಒಂದೆಡೆ ಕೂರದೇ ನಮ್ಮನ್ನು ಗೋಳು ಹುಯ್ಕೋತಾ ಇದ್ದಾಳೆ) ಎಂದಳು.
ಆ ಮಹಿಳೆಯನ್ನು “ ಸುನಿಯೇ,..ಕ್ಯಾ ತಕಲೀಫ್ ಹೈ ಆಪ್ಕೋ..ಹಲೋ...ಹಲೋ...”
ಅರಬಿಯಲ್ಲಿ ಬಡಬಡಿಸಿದಳು ..”ಅನಾ ಅನಾ ಕುಮಾರಿ...ಆನಾ ಸಾಫಿರ್ ಹೈದ್ರಾಬಾದ್...” (ನಾನು ನಾನು ಕುಮಾರಿ..ನಾನು ಹೈದರಾಬಾದಿಗೆ ಹೋಗ್ತಿದ್ದೇನೆ)... ಇಷ್ಟು ಹೇಳಿ ಮತ್ತೆ ಕಣ್ಣು ಮುಚ್ಚಿದಳು.
ಅಷ್ಟರಲ್ಲಿ ಇನ್ನೂ ಮೂವರು ಗಗನ ಸಖಿಯರು ಜಮಾಯಿಸಿದರು. ಎಲ್ಲರೂ..
”ಪ್ಲೀಸ್ ಆಸ್ಕ್ ಹರ್ ಟು ಟೇಕ್ ಸಮ್ ಥಿಂಗ್, ಜ್ಯೂಸ್ ಆರ್ ಸಮ್ ಬ್ರೆಡ್...ಸೀಮ್ಸ್ ಶಿ ಈಸ್ ವೀಕ್..” (ಕೇಳಿ ಆಕೆನ ಏನಾದ್ರೂ ತಿನ್ತಾಳಾ ಅಥವಾ ಜ್ಯೂಸ್, ಇಲ್ಲ ಬೆಡ್.. ತುಂಬಾ ನಿಶ್ಯಕ್ತಳಾಗಿದ್ದಾಳೆ..) ಎನ್ನುತ್ತಾ ತಮ್ಮ ಕಾಳಜಿ ತೋರಿದರು ಅಸಹಾಯಕಾರಾಗಿ ನನ್ನತ್ತ ನೋಡಿ.
ನನಗೆ ಆ ಮಹಿಳೆ ಆಂಧ್ರದ ಹಳ್ಳಿಯೊಂದರ ಮಹಿಳೆ ಎನ್ನಿಸತೊಡಗಿತು. ಬಹುಶಃ ತೆಲುಗಲ್ಲಿ ಕೇಳಿದ್ರೆ ಸಹಾಯಕವಾಗಬಹುದು ಎನಿಸಿ...
“ಏಮ್ಮಾ...ಕುಮಾರಿ...ಏಮೈನಾ ತಿಂಟಾವಾ..? ಜ್ಯೂಸ್ ತಾಗು ಶಕ್ತಿ ಲೇದು ನೀಕು...ಕೊಂಚಂ ಶಕ್ತಿ ವಸ್ತೂಂದಿ..” (ಏನಾದ್ರೂ ತಿನ್ನು ಅಥವಾ ಜ್ಯೂಸ್ ಕುಡಿ, ಶಕ್ತಿ ಇಲ್ಲ ನಿನ್ನಲ್ಲಿ ಶಕ್ತಿ ಬರುತ್ತೆ)
ಇಷ್ಟು ಕೇಳಿದ್ದೆ...!!! ಇಷ್ಟಗಳ ಕಣ್ಣು ಬಿಟ್ಟ “ಕುಮಾರಿ”...
“ನೂವು ಇಕ್ಕಡೇ ನಾ ಪಕ್ಕ ಕುಚ್ಚೋ...ಈಳ್ಳು ನನ್ನೆಕ್ಕೆಡೋ ತೀಸ್ಕೆಳ್ತಾರು...ನೇನು ಹೈದರಾಬಾದುಕ್ಕೆಳ್ಳಾಲಿ..” (ನೀನು ಇಲ್ಲೇ ನನ್ನ ಪಕ್ಕ ಕೂತ್ಕೋ ಇವರು ನನ್ನ ಎಲ್ಲೋ ತಗೊಂಡು ಹೋಗ್ತಿದ್ದಾರೆ, ನಾನು ಹೈದರಾಬಾದಿಗೆ ಹೋಗಬೇಕು) ಎನ್ನುತ್ತಾ ನನ್ನ ಕೈ ಹಿಡಿದೆಳೆದು ತನ್ನ ಪಕ್ಕದ ಖಾಲಿ ಸೀಟಿನಲ್ಲಿ ಕೂರಿಸಿದಳು... ನನಗೆ ಮುಜುಗರ, ಆದ್ರೆ ಆಕೆಯ ಸ್ಥಿತಿ ನೋಡಿ ಅಯ್ಯೋ ಎನಿಸಿತು, ಕೈಗಳು ತಣ್ಣಗಿದ್ದು ನವಿರು ನಡುಕ ಇದ್ದು ಭಯಗೊಂಡಿದ್ದಾಳೆನ್ನುವುದು ಗೊತ್ತಾಯಿತು. ಕೂತೆ, ಏನಾದ್ರೂ ಕುಡಿ ಅಥವಾ ತಿನ್ನು ಎನ್ನುತ್ತಾ ಗಗನ ಸಖಿಯರು ಕೊಟ್ಟ ಜ್ಯೂಸನ್ನು ಕುಡಿಯಲು ಹೇಳಿದೆ..ತಿನ್ನಲು ಕೊಟ್ಟ ಬ್ರೆಡ್-ಬನ್ ತಿನ್ನಲು ಹೇಳಿದೆ...ಎರಡನ್ನೂ ಸ್ವಲ್ಪ ಸ್ವಲ್ಪ ಸವಿದು ಮತ್ತೆ ಬಡಬಡಿಕೆ ಪ್ರಾರಂಭಿಸಿ,
“ನಾನು ಹೋಗಬೇಕು..ಎಲ್ಲಿಗೆ ನನ್ನ ಕರ್ಕೊಂಡು ಹೋಗ್ತಿರೋದು..ನನ್ನ ಕೊಲ್ಲಬೇಡಿ..” ಎಂದೆಲ್ಲಾ ಗೊಣಗಿದಾಗ ನನಗೆ ನಿಜಕ್ಕೂ ಗಾಬರಿ ಆಯಿತು. ಇವಳು ಮತಿಗೆಟ್ಟವಳಾ ಹೇಗೆ..? !!! ಅಲ್ಲಿ ಆಗಲೇ ಗಗನ ಸಖಿಯರು, ಕ್ಯಾಬಿನ್ ಚೀಫ್ ಸಹಾ ಬಂದಾಯ್ತು... ಅವಳನ್ನು ಏಳಲು ಬಿಡಬೇಡಿ...ದಯಮಾಡಿ ಅವಳನ್ನು ಏನಾದ್ರೂ ತಿನ್ನಲು ಹೇಳಿ... ದುಬಾಯ್ ವರೆಗೂ ಸಂಭಾಳಿಸಿ, ನಿಮ್ಮ ಮಾತು ಕೇಳ್ತಿದ್ದಾಳೆ..ಒಂದೇ ಇಷ್ಟು ಹೊತ್ತು ಕೂತಿದ್ದೇ ಹೆಚ್ಚು...ಎಂದು ನನ್ನ ರಿಕ್ವೆಸ್ಟ್ ಮಾಡಿಕೊಂಡರು...
ಅವಳೋ,....
ನೀನು ಎಲ್ಲೂ ಹೋಗಬೇಡ ಇಲ್ಲೇ ಕೂತ್ಕೋ..ನನ್ನ ಹೈದರಾಬಾದಿಗೆ ಬಿಟ್ಟು ಹೋಗು...ಎಲ್ಲಿ ಹೋಗಬೇಕೋ ನೀನು ನನಗೆ ಗೊತ್ತಿಲ್ಲ...ಇವರು ನನ್ನ ಸಾಯಿಸ್ತಾರೆ... ಎನ್ನುತ್ತ ಬಡಬಡಿಸೋದು ನಡೆದೇ ಇತ್ತು, ನನ್ನ ಹೆಗಲಿಗೆ ತಲೆ ಇಟ್ಟು ಮಲಗಲು ನನ್ನ ಕೊಸರುವಿಕೆಯ ಮಧ್ಯೆಯೂ ಪ್ರಯತ್ನಿಸಿದಳು...ಗಗನ ಸಖಿಯರು
“ಪ್ಲೀಸ್ ಸರ್ ಲೆಟ್ ಹರ್ ಸ್ಲೀಪ್, ಇಫ್ ಶಿ ಟೇಕ್ಸ್ ಸಮ್ ರೆಸ್ಟ್ ಇಟ್ ವಿಲ್ ಬಿ ಗುಡ್ ವಿ ವಿಲ್ ಬಿ ಇನ್ ದುಬಾಇ ಬೈ ದೆನ್” (ಸರ್ ಆಕೆಯನ್ನು ಮಲಗಲು ಬಿಡಿ ಸ್ವಲ್ಪ ರೆಸ್ಟ್ ತಗೊಳ್ಳಲಿ..ಅಷ್ತರಲ್ಲಿ ದುಬೈ ತಲುಪುತ್ತೇವೆ.).. ನನ್ನ ಪೀಕಲಾಟ ಹೆಚ್ಚಾಗಿತ್ತು. ನನ್ನ ನಿದ್ದೆ ಎಲ್ಲಿಗೆ ಹಾರಿ ಹೋಯ್ತೋ...!!!!
ಅಷ್ಟರಲ್ಲಿ ಗಗನ ಸಖಿ (ಹಿಂದಿಯವಳು) ದುಬ್ಬೈ ಗ್ರೌಂಡ್ ಸಂಪರ್ಕ ಮಾಡಿ ವಿಮಾನ ನಿಲ್ದಾಣದ ಕ್ಲಿನಿಕ್ ನ ಸಹಾಯ ಕೇಳಿದಳು. ಪರಿಚಾರಕರನ್ನು ಕಳುಹಿಸಿ ತೆಲುಗು ಬರುವವರ ವ್ಯವಸ್ಥೆ ಮಾಡಿ ಆಕೆಯ ಪ್ರಾಥಮಿಲ ವೈದ್ಯಕೀಯ ಪರೀಕ್ಷೆ ಮಾಡಿ ಹೈದರಾಬಾದ್ ವಿಮಾನ ಹತ್ತಿಸುವ ಏರ್ಪಾಡು ಮಾಡಬೇಕೆಂದು ಕೋರಿಕೆ ಕಳುಹಿಸಿದಳು. ನಂತರ ನನಗೆ... ಸರ್ ಈಕೆ ನಿಮ್ಮ ಮಾತೇ ಕೇಳೋದು ಇವಳನ್ನು ಕ್ಲಿನಿಕವರೆಗೂ ತಲುಪಿಸಿ ನೀವು ಬೆಂಗಳೂರು ವಿಮಾನ ಹತ್ತಿ, ದಯಮಾಡಿ ಇಷ್ಟು ಸಹಾಯ ಮಾಡಿ, ಎಂದಳು ಇಂಗ್ಲೀಷಲ್ಲಿ. ನಾನು ಇಲ್ಲ ಎನ್ನುವ ಮನಸಾಗದೇ ಆಗಲಿ ಎಂದೆ.
ದುಬೈ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ಗಗನ ಸಖಿಯರು ಆಕೆಯನ್ನು...
“ ಅಬ್ ಆಪ್ ಇಧರ್ ಉತರ್ ಜಾವೋ ಬಾದ್ ಮೆ ಹೈದರಾಬದ್ ಕಾ ಪ್ಲೈನ್ ಹಮಾರಾ  ಸ್ಟಾಫ್ ಚಢಾಯೆಗಾ, ಆಪ್ಕೋ ಥೋಡಾ ತಾಖತ್ ಕೆ ಲಿಯೆ ಕ್ಲಿನಿಕ್ ಮೆ ಕುಚ್ ದವಾ ದೇಂಗೆ ಬಾದ್ ಮೆ ಆಪ್ ಕೋ ಹೈದರಾಬಾದ್ ಪ್ಲೈನ್ ಮೆ ಬಿಠಾಯೇಂಗೆ” (ಈಗ ಇಲ್ಲಿ ಇಳಿಯಿರಿ, ಆಮೇಲೆ ನಿಮ್ಮನ್ನು ಹೈದರಾಬದ್ ಪ್ಲೈನ್ ಗೆ ಹತ್ತಲು ನಮ್ಮ ಸಿಬ್ಬಮ್ದಿ ಸಹಾಯ ಮಾಡುತ್ತೆ, ಸ್ವಲ್ಪ ಶಕ್ತಿಗಾಗಿ ಕ್ಲಿನಿಕಲ್ಲಿ ಔಷಧಿ ಕೊಡ್ತಾರೆ)
ಆಕೆಯನ್ನು
“ಕುಮಾರಿ ..ಇಕ್ಕಡ ದಿಗಿ ಹೈದರಾಬಾದ್ ಪ್ಲೈನ್ ಎಕ್ಕಾಲಿ ..ದಿಗು..ನೀಕು ಕ್ಲಿನಿಕ್ ಲೊ ಶಕ್ತಿ ಕೋಸಂ ಮಂದು ಇಸ್ತಾರು” (ಕುಮಾರಿ ನೀನು ಇಲ್ಲಿ ಇಳಿ ಮತ್ತೆ ಹೈದರಾಬಾದ್ ಪ್ಲೈನ್ ಹತ್ತಿಸ್ತಾರೆ, ನಿನಗೆ ಶಕ್ತಿಗಾಗಿ ಕ್ಲಿನಿಕ್ಕಲ್ಲಿ ಸ್ವಲ್ಪ ಅಷಧಿ ಕೊಡ್ತಾರೆ.) ಎನ್ನುತ್ತಾ ಹೊರನೆಡೆಸಿಕೊಂಡು ಬಂದೆ. ಹೊರನಡೆದು ಬಂದು ವಿಮಾನ ನಿಲ್ದಾಣ ಕ್ಕೆ ಬರುತ್ತಿದ್ದವಳು...
“ಎಕ್ಕಡಿಕಿ ಪಿಲಿಸ್ಕೆಳ್ತಾ ಉನ್ನಾರು ಈಳ್ಳು..... ನೇನು ಹೈದರಾಬಾದ್ ತಪ್ಪಾ ಎಕ್ಕಡೂ ದಿಗನು” (ಎಲ್ಲಿಗೆ ಕರೆದೊಯ್ತಾ ಇದ್ದರೆ ಇವರು..? ನಾನು ಹೈದರಾಬಾದ್ ಅಲ್ಲದೇ ಬೇರೆಲ್ಲೂ ಇಳಿಯೊಲ್ಲ)..
ಎನ್ನುತ್ತಾ ಅಳುತ್ತಾ ವಾಪಸ್ ವಿಮಾನದೊಳಕ್ಕೆ ಹೋಗಲಾರಂಭಿಸಿದಳು.. ಅಲ್ಲಿಗೆ ಬಂದ ನಿಲ್ದಾಣದ ಪರಿಚಾರಕರು ಅವಳನ್ನು ಬಲವಂತವಾಗಿ ಏರ್ಪೋರ್ಟ್ ಓಪನ್ ಕಾರಲ್ಲಿ ಕುಳ್ಳಿರಿಸಲು ಪ್ರಯತ್ನಿಸಿದಾಗ ನಾನೂ ಬರಬೇಕು ಅಂತ ಒತ್ತಾಯ ಮಾಡುತ್ತಾ ನನ್ನ ಕೈಯನ್ನು ಬಲವಾಗಿ ಹಿಡಿದುಕೊಂಡಳು.. . ನಾನೂ ಕುಳಿತುಕೊಂಡು ಅವಳನ್ನು ಕ್ಲಿನಿಕ್ ಗೆ ತಲುಪಿಸುವ ಒತ್ತಾಯ ಮಾಡಿದರು ನಿಲ್ದಾಣ ಪರಿಚಾರಕರು. ಸರಿ!! ವಿಧಿಯಿರಲಿಲ್ಲ. ನಾನೂ ಕೂತೆ, ಇವಳು ಅಳಲಾರಂಭಿಸಿದಳು...ನನ್ನ ಗಂಡನ ಬಳಿಗೆ ನನ್ನ ಕರೆದುಕೊಂಡು ಹೋಗಿ...ನನ್ನ ಕೊಲ್ಲ ಬೇಡಿ...ಎಂದೆಲ್ಲಾ ಬಡಬಡಿಸತೊಡಗಿದಳು. ಓಪನ್ ಕಾರಲ್ಲಿದ್ದ ನನಗೋ ಮುಜುಗರ, ಎಲ್ಲಾ ನನ್ನನ್ನು ಮತ್ತು ಅಳುತ್ತಿದ್ದ ಕುಮಾರಿಯನ್ನು ನೋಡಿ..ಇವನೇನೋ ಮಾಡಿದ್ದಾನೆ ..! ಪಾಪ ಅಳ್ತಾ ಇದ್ದಾಳೆ...ಅದಕ್ಕೇ ಪೋಲೀಸ್ ಇವನನ್ನ ಎಳೆದು ಕೊಂಡು ಹೋಗ್ತಿದ್ದಾರೆ...!!! ಎನ್ನುವಂತೆ ನನ್ನ ಯಾವುದೋ ಖೈದಿನ ನೋಡೋ ತರಹ  ಎಲ್ಲಾ ನೋಡ್ತಾ ಇದ್ದದ್ದು ಗಮನಕ್ಕೆ ಬಂತು...ಮೆತ್ತಗೆ ಅವಳಿಗೆ..ಅಳಬೇಡ ಎಂದಷ್ಟೂ ಅವಳ ಅಳು ಜಾಸ್ತಿ ಆಗಿತ್ತು. ಅಲ್ಲಿ ಪರಿಚಾರಕ ಬದಲಿ ಪೋಲಿಸ್ ಪೇದೆಗಳು ಇನ್ನೊಂದು ತೆರೆದ ಕಾರಿನಲ್ಲಿ ಬರ್ತಿದ್ದದ್ದು ನನಗೆ ನಂತರವೇ ಗೊತ್ತಾಗಿದ್ದು. ನಂತರ ಪೇಚಿಗೆ ಅದೂ ಒಂದು ಕಾರಣವಾಗಿತ್ತು.
ಕ್ಲಿನಿಕ್ ಗೆ ತಲುಪಿದ ಮೇಲೆ ನರ್ಸ್ ಮತ್ತು ಅರಬಿ ಲೇಡಿ ಡಾಕ್ಟರ್ ಆಕೆಯನ್ನು ಸಮಾಧಾನಿಸುವಾಗ ಪೋಲಿಸ್ ಅಲ್ಲೇ ಇದ್ದರೇನೋ, ಸ್ವಲ್ಪ ಸಮಯದ ನಂತರ ಹೊರಗಡೆ ಕುಳಿತಿದ್ದ ನನ್ನನ್ನು ಪೋಲೀಸರು ನೀವು ಈದಿನ ಇಲ್ಲೆ ಇರಬೇಕಾಗುತ್ತೆ, ಆಕೆ ನೀವು ತೊಂದರೆ ಕೊಡ್ತಿದ್ದೀರ ಅಂತ ಹೇಳ್ತಿದ್ದಾಳೆ... ಎಂದಾಗ ನನ್ನ ಧೈರ್ಯವೇ ಉಡುಗಿಹೋಗಿತ್ತು.. ಸಾವರಿಸಿಕೊಂಡು ನಡೆದ ಕಥೆ ವಿವರಿಸಿದೆ, ಪೋಲೀಸರಿಗೆ ಸಮಾಧಾನವಾದಂತೆ ಕಾಣ್ಲಿಲ್ಲ. ನನ್ನ ಕುಳಿತುಕೊಳ್ಳಲು ಹೇಳಿದರು. ಆ ಹೊತ್ತಿಗೆ ಬೆಳಿಗ್ಗೆ ೧೦ ಘಂಟೆ ಆಗುತ್ತಿತ್ತು. ನನ್ನ ಬೆಂಗಳೂರ ವಿಮಾನ ೧.೫೦ ಕ್ಕೆ ಇದ್ದಿದ್ರಿಂದ ನನ್ನ ಆತಂಕ ಜಾಸ್ತಿಯಾಯಿತು. ಕುಮಾರಿ ತನ್ನ ಅರ್ಧಂಬರ್ಧ ಅರಬಿ ಪಾಂಡಿತ್ಯ ಮೆರೆದಿದ್ದೇ ಇದಕ್ಕೆ ಕಾರಣವಾಗಿತ್ತು. ಅಷ್ಟರಲ್ಲಿ ಉತ್ತರಭಾರತದವರಾದ ಕ್ಲಿನಿಕ್ ಡಾಕ್ಟರ್ ಮತ್ತು ಅದೇ ವಿಮಾನ (ಹಿಂದಿ) ಗಗನ ಸಖಿ ಬಂದು ವಿವರಣೆ ಕೊಟ್ಟಕಾರಣ, ಪೋಲೀಸರು ನನ್ನಲ್ಲಿ ಕ್ಷಮೆ ಕೋರಿ ನನ್ನನ್ನು ಹೋಗುವಂತೆ ಹೇಳಿದಾಗ..ಬದುಕಿದೆಯಾ ಬಡಜೀವವೇ ಎನಿಸಿ ಡಿಪಾರ್ಚರ್ ಟರ್ಮಿನಲ್ನತ್ತ ದೌಡಾಯಿಸಿದೆ.
ಬೆಂಗಳೂರಿನ ವಿಮಾನ ಹತ್ತಿ ಕುಳಿತು ವಿಮಾನ ದುಬೈ ಬಿಟ್ಟಾಗ ಒಂದು ಉದ್ದನೆಯ ನಿಟ್ಟುಸಿರು ಬಿಟ್ಟೆ... ಅಬ್ಬಾ ...ಎಡವಟ್ಟು ಅಂದ್ರೆ ಹೀಗೂನಾ...? ಅನ್ನಿಸಿ ಮೈ ಝುಂ ಎಂದಿತು.   

Sunday, November 6, 2011

ಈದ್ ಅಲ್- ಅದ್ಹಾ


ಮುಸ್ಲಿಂ ಜನಾಂಗದ ಹಿರಿ ಹಬ್ಬ: ಈದ್ ಅಲ್- ಅದ್ಹಾ 

ಇಸ್ಲಾಮ್ ಪಂಚಾಂಗ ಚಂದ್ರಮಾನ ಮೂಲದ್ದಾಗಿದ್ದು ಗ್ರಿಗರಿಯನ್ ಅಥವಾ ಸೂರ್ಯಮಾನ ಪಂಚಾಂಗದಿಂದ ಸ್ವಲ್ಪ ವಿಭಿನ್ನ. ಅಂದರೆ ಪ್ರತಿವರ್ಷ ಸುಮಾರು ೧೨ ದಿನದ ವ್ಯತ್ಯಯ ಕಂಡು ಬರುತ್ತದೆ. ಸೌರ್ಯಮಾನದಲ್ಲಿ ಒಂದು ವರ್ಷಕ್ಕೆ ೩೬೫.೨೫ ದಿನ ಆಗಿರುವ ಕಾರಣ ಅದನ್ನು ೩೬೫ ದಿನಕ್ಕೆ ಸೀಮಿತಗೊಳಿಸಿ, ನಾಲ್ಕನೇ ವರ್ಷದಲ್ಲಿ ಹೆಚ್ಚುವರಿ ೦.೨೫ ದಿನಗಳನ್ನು ಸೇರಿಸಿ ಒಂದು ದಿನ ಅಧಿಕಮಾಡಿ, ಅದನ್ನು ಫೆಬ್ರವರಿ (ಅತಿ ಕಡಿಮೆ ದಿನ ಇರುವ ತಿಂಗಳು) ಗೆ ಸೇರಿಸಿ ಅಧಿಕ ಮಾಸ (ಅಧಿಕ ವರ್ಷ) ಮಾಡಲಾಗುತ್ತೆ. ಆದರೆ ಇಸ್ಲಾಂ ಪ್ರಕಾರ ೩೫೪ ಅಥವಾ ೩೫೫ ದಿನಗಳ ವರ್ಷ, ಹಾಗಾಗಿ ೧೦-೧೨ ದಿನದ ವ್ಯತ್ಯಯ ಬರುತ್ತದೆ. ಇಂತಹ ಚಂದ್ರಮಾನ ಪಂಚಾಂಗದ ಜಿಲ್-ಹಜ್ (ಹನ್ನೆರಡನೇ) ತಿಂಗಳ ೧೦ ನೇ ದಿವಸ ಮತ್ತು ಹಜ್-ಪವಿತ್ರ ಯಾತ್ರೆಯ ಕಡೆಯ ದಿವಸ ಈದ್ ಅಲ್ ಅಧ್ಹಾ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬವನ್ನು ಹಿರಿ ಹಬ್ಬ ಎನ್ನಲಾಗುತ್ತದೆ. ಈ ಹಬ್ಬದ ವಿಶೇಷತೆಯೆಂದರೆ ಹಜ್ ಯಾತ್ರೆ ಮಾಡುವುದು, ಇದನ್ನು ಆಚರಿಸಲು ಸಾಧ್ಯವಾಗದವರು ಅದೇ ಕ್ರಿಯೆಯ ಪ್ರತಿರೂಪದಂತೆ ಈದ್-ಪ್ರಾರ್ಥನೆ ಜೊತೆಗೆ ಮಾಂಸ ದಾನ (ಖುರ್ಬಾನಿ) ನೀಡುವುದು ನಡೆಯುತ್ತದೆ. ಈ ಹಬ್ಬಕ್ಕೆ ಸುಮಾರು ನಾಲ್ಕು ಸಾವಿರ ವರ್ಷದ ಹಿನ್ನೆಲೆಯಿದೆ. 


ಇಬ್ರಾಹಿಂ (ಅಬ್ರಹಾಂ) ಇಂದಿನ ಸೌದಿ ಅರೇಬಿಯಾದ ಮೆಕ್ಕಾ ಬಳಿ ವಾಸವಾಗಿದ್ದ ಒಬ್ಬ ದೈವ ಭಕ್ತ. ಆತನಿಗೆ ಹಾಜರಾ (ಈಗಿನ ಈಜಿಪ್ತ್ ದೇಶದವಳು) ಎಂಬಾಕೆ ಹೆಂಡತಿ. ಇವರ ಒಬ್ಬನೇ ಮಗ ಇಸ್ಮಾಯಿಲ್. ಇವರ ಜೀವನದಲ್ಲಿ ದೈವ ಭಕ್ತರಿಗೆ ಸಾಮಾನ್ಯ ಎನ್ನುವಂತಹ ಸತ್ವ ಪರೀಕ್ಷೆಗಳು ಬಹಳ ಆದವು. ಅವುಗಳಲ್ಲಿ ಒಂದರ ಪ್ರಕಾರ ಇಬ್ರಾಹಿಮರಿಗೆ ತನ್ನ ಹೆಂಡತಿ ಮಕ್ಕಳನ್ನು ಮರಳು ಬೆಂಗಾಡಿನಲ್ಲಿ ಬಿಡುವ ದೈವಾಣತಿಯಾಗುತ್ತದೆ. ಅವರನ್ನು ಬಿಡಲು ನಿರ್ಧರಿಸಿದಾಗ ಅವರಿಗೆ ಮೋಹ ಮಾಯೆಯ ಜಾಲಕ್ಕೆ ಸಿಕ್ಕಿಸಲು ದಾನವ (ಸೈತಾನ್) ಪ್ರಯತ್ನಿಸಿತ್ತಾನೆ, ಅವನನ್ನು ಹಿಮ್ಮೆಟ್ಟಿಸುವ ಇಬ್ರಾಹಿಮರ ಕ್ರಿಯೆಯನ್ನು ಪ್ರತಿನಿಧಿಸುವುದೇ ಈಗಿನ “ಹಜ್” ಯಾತ್ರೆಯಲ್ಲಿ ಯಾತ್ರಾರ್ಥಿಗಳು ಸಣ್ಣ ಕಲ್ಲು ಹೊಡೆಯುವ ಪ್ರಚಲನೆಯಲ್ಲಿರುವ ಶಾಸ್ತ್ರ. ಆ ನಂತರ ಇಬ್ರಾಹಿಮರು ಹೆಂಡತಿ ಮತ್ತು ಹಸುಗೂಸು ಇಸ್ಮಾಯಿಲರನ್ನು ಬೆಂಗಾಡಲ್ಲಿ (ಈಗಿರುವ ಕಾಬಾ ಸ್ಥಾನದಲ್ಲಿ) ಬಿಟ್ಟು ಹೊರಟು ಹೋಗುತ್ತಾರೆ. ಹೆಂಡತಿಯು ತನ್ನವರಿಗೆ ದೈವಾಣತಿಯಾಗಿದೆಯೆಂದು ತಿಳಿದು ಸುಮ್ಮನಾಗುತ್ತಾಳೆ. ಮಗುವಿಗೆ ನೀರಡಿಕೆಯಾಗಿ ದಾಹದಿಂದ ವಿಲವಿಲಿಸುವಾಗ ತಾಯಿ “ಹಾಜರಾ” ಮಗುವಿನ ಸುತ್ತ ಮುತ್ತ ಏಳೆಂಟು ಬಾರಿ ನೀರಿಗಾಗಿ ಸುತ್ತಿ ಪರದಾಡುತ್ತಾಳೆ, ನಂತರ ಮಗುವನ್ನು ಒಂದೆಡೆ ಬಿಟ್ಟು ಪಕ್ಕದಲ್ಲಿದ್ದ “ಸಫಾ” ಮತ್ತು “ಮರ್ವಾ” ಗುಡ್ಡಗಳನ್ನು ದಿಕ್ಕುಕಾಣದೇ ಹತಾಶಳಾಗಿ ನೀರಿಗಾಗಿ ಏಳು ಬಾರಿ ಹತ್ತಿಳಿಯುತ್ತಾಳೆ. ಆಗ ದೈವಾನುಗ್ರಹವಾಗಿ ಮಗು ಒದ್ದಾಟದಲ್ಲಿ ಕಾಲು ಬಡಿದಾಗ ಅದರ ಪಾದದ ಬಳಿ ಸಿಹಿ ನೀರಿನ ಚಿಲುಮೆ ಉಕ್ಕುತ್ತದೆ. ಅದೇ ಈಗಿನ “ಜಮ್ ಜಮ್” ಪವಿತ್ರ ನೀರಿನ ಕೊಳ.  ಈ ಘಟನೆಯಿಂದ ಪ್ರೇರಿತವಾದುದೇ ಈಗ ಮಾಡುವ “ಹಜ್ ಯಾತ್ರಾ ಪರಿಕ್ರಮ (ತವಾಫ್)”. ಮತ್ತೆ ತಾಯಿ-ಮಗು ಇಬ್ರಾಹಿಮರ ಪುನಃ ಮಿಲನವಾಗುತ್ತದೆ. ಹೀಗೇ ಇರುವಾಗ ಇಸ್ಮಾಯಿಲ್ ಸುಮಾರು ೧೩ ವರ್ಷದ ಬಾಲಕನಾಗಿರುವಾಗ ಸತ್ವ ಪರೀಕ್ಷೆಯ ಮಹತ್ವಪೂರ್ಣ ಘಟ್ಟ ಬರುತ್ತದೆ. ಪ್ರತಿ ರಾತ್ರಿ ಪದೇ ಪದೇ ಇಬ್ರಾಹಿಂ ತನ್ನ ಮಗ ಇಸ್ಮಾಯಿಲರನ್ನು ದೇವಾಣತಿಯ ಪ್ರಕಾರ ಬಲಿ ಕೊಡುವ ಕನಸು ಬೀಳುತ್ತದೆ. ಇದನ್ನು ದೇವರ ಇಚ್ಛೆಯೆಂದರಿತ ಇಬ್ರಾಹಿಂ ತನ್ನ ಮಗನಿಗೆ ವಿಷಯ ತಿಳಿಸುತ್ತಾರೆ, ಇಸ್ಮಾಯಿಲ್ ತಂದೆಗೆ ತಕ್ಕ ಮಗನಾಗಿದ್ದು “ಅಪ್ಪ ದೇವರ ಇಚ್ಛೆಯಂತೆ ನೀವು ನಡೆದುಕೊಳ್ಳಿ ನನ್ನ ಅಭ್ಯಂತರವಿಲ್ಲ” ಎನ್ನುತ್ತಾನೆ, ಇಬ್ರಾಹಿಂ ತನ್ನ ಮಗನ ಕೊರಳನ್ನು ಕಡಿಯಲು ಪ್ರಯತ್ನಿಸಿದಾಗ ಕತ್ತಿ ಮಾಯವಾಗಿ ದೇವರ ಅನುಗ್ರಹವಾಗುತ್ತದೆ. ಈ ಅಪ್ರತಿಮ ಬಲಿದಾನದ ಪ್ರತೀಕವೇ ಕುರಿ, ಒಂಟೆ, ದನ ಇತ್ಯಾದಿಯ ಬಲಿದಾನ ಅಥವಾ ಖುರ್ಬಾನಿ ನೀಡುವ ಪರಂಪರೆ. “ಜಮ್-ಜಮ್” ಚಿಲುಮೆಯ ಬಳಿಯ ಸ್ಥಾನವನ್ನು ದೈವಾನುಗ್ರವಾದ ಸ್ಥಾನವೆಂದು ಪರಿಗಣಿಸಿ ಅಲ್ಲಿಗೆ ಬಂದು ಪ್ರಾರ್ಥನೆ ಸಲ್ಲಿಸಿದರೆ ಸನ್ಮಂಗಳವಾಗುತ್ತದೆಂಬ ಪ್ರತೀತಿಯ ಹಿನ್ನೆಲೆಯಲ್ಲಿ “ಹಜ್” ಯಾತ್ರೆಯ ಸಂಪ್ರದಾಯ ಪ್ರಾರಂಭವಾಯಿತು. ಈ ಜಾಗದಲ್ಲಿ ಘನಾಕೃತಿಯ ಕೇಂದ್ರ ಗೃಹವನ್ನು ಕಟ್ಟಲಾಯಿತು, ಅಲ್ಲಿ ಕಪ್ಪು ಕಲ್ಲು- ಅಥವಾ “ಹಜ್ರ್ ಅಲ್ ಅಸ್ವದ್” ಒಂದೆಡೆ ಪ್ರತಿಷ್ಠಾಪಿಸಿ ಪರಿಕ್ರಮದ ಪ್ರಾರಂಭಕ್ಕೆ ಒಂದು ಗುರುತಾಗಿ ಇಡಲಾಯಿತು, ಆ ಕಾರಣಕ್ಕೆ ಕಪ್ಪು ಕಲ್ಲಿಗೆ ಒಂದು ಮಹತ್ವ ದೊರೆಯಿತು. ಇದನ್ನೂ ಮುಸ್ಲಿಮರು ಆರಾಧಿಸುತ್ತಾರೆನ್ನುವ ತಪ್ಪು ಕಲ್ಪನೆ ಹಲವರಲ್ಲಿದೆ, ಆದರೆ ಇದು ಕೇವಲ ಪರಿಕ್ರಮದ ಗುರುತಾಗಿ ಅಂದು ಇಟ್ಟ ಕಲ್ಲಾಗಿದೆ. ಅಂದು “ಹಾಜರಾ” ಮಗುವಿನ ನೀರಿಗಾಗಿ ಏಳು ಬಾರಿ “ಸಫಾ” ಮತ್ತು “ಮರ್ವಾ” ಗುಡ್ಡಗಳನ್ನು ಹತ್ತಿ ಇಳಿದ ಕಾರಣ ಈಗಲೂ ಯಾತ್ರಾರ್ಥಿಗಳು ಸಫಾ ಮರ್ವಾ ಮಧ್ಯೆ ಏಳುಬಾರಿ ಪರಿಕ್ರಮಿಸುವುದು ಕಡ್ಡಾಯ. 
ಚಿತ್ರ ಪವಿತ್ರ ಕಾಬಾ (ಮಕ್ಕಾ ಪಟ್ಟಣ) (ಕೃಪೆ: ಅಂತರ್ಜಾಲ)

ಎಲ್ಲ ಧರ್ಮಗಳ ಸಾರ ಒಂದೇ, ಒಬ್ಬ ಸಕಲಮಾನ್ಯನು ಅರಾಧ್ಯನೂ ಇರುವನು ಅವನ ನಾಮ ಹಲವಿರಬಹುದು, ಅವನು ನಮ್ಮಲ್ಲಿನ ಒಳ್ಳೆತನವನ್ನು ಒರೆಹಚ್ಚುತ್ತಾನೆ, ನಮ್ಮ ಬಲಹೀನತೆಯನ್ನು ತೊಡೆಯಲು ಪ್ರಯತ್ನಿಸುತ್ತಾನೆ, ಅದಕ್ಕೆ ದೈವಾನುಗ್ರಹವಾದವರು, ಪ್ರವಾದಿಗಳೂ ಹೊರತಲ್ಲ. ತಮ್ಮ ಮಕ್ಕಳನ್ನು ಬಲಿಕೊಟ್ಟ ಸತ್ವ ಪರೀಕ್ಷೆಯ ಘಟನೆಗಳ ಪುರಾಣ ಕಥೆಗಳೂ ಹಿಂದೂ ಧರ್ಮದಲ್ಲಿ ಹಲವಾರಿವೆ. ಖುರ್ಬಾನಿ  ತಮ್ಮಲ್ಲಿನ ಅಮೂಲ್ಯವನ್ನು ಹೇಗೆ ಸಮಾಜದ ಒಳಿತಿಗೆ ಧಾರೆಯೆರೆಯುವ ನಿಸ್ವಾರ್ಥತೆಯನ್ನು ಕಲಿಸುತ್ತದೆಯೋ ಹಾಗೆಯೇ “ಹಜ್” ಯಾತ್ರೆ ಧರ್ಮಾವಲಂಬಿಗಳಲ್ಲಿ ದೇವರ ಮೇಲಿನ ವಿಶ್ವಾಸ ಮತ್ತು ಭಕ್ತಿಗೆ ಪೂರಕವಾಗಿ ಸಮನ್ವಯತೆ ಮತ್ತು ಮಾನವತೆಯನ್ನು ಕಾಯ್ದುಕೊಳ್ಳಬೇಕಾದ ಪರಂಪರೆಯಾಗಬೇಕಿದೆ.

Sunday, October 30, 2011

ಕಿರಣ......

ಚಿತ್ರ: ದಿಗ್ವಾಸ್ ಹೆಗಡೆ

ಕಿರಣ
ಮರೆಯಾಗಹೊರಟ ಸೂರ್ಯ
ಅಡಗಿ ದಿಗಂತದಿ, ಆಯ್ತು ದಿನವೆಲ್ಲವೂ
ಧರಿತ್ರಿಯ ಒಂದೆಡೆಯ ಕಾರ್ಯ
ನಿರಂತರ ಅವಗೆ, 
ಇಲ್ಲ ರಾತ್ರಿ, ಇಲ್ಲ ನೆಳಲು, 
ಇಲ್ಲ ತಂಪು, ಇಲ್ಲ ಕಡಲು.
ಒಡಲೊಳಗಿಹ ಕೆಂಡದುಂಡೆ
ಹೊರ ಉಗುಳುವ ಜೀವ ಕಿರಣ
ಆವಿಯಾಗಿಸಿ ಮಾಡಿ ನೀರಹರಣ
ಜಲವುಂಡ ಸಾಗರವೇ ಹಂಡೆ
ಒಬ್ಬ ಸೂರ್ಯ ಬ್ರಹ್ಮಾಂಡದಿ
ಎಷ್ಟೋ ಭೂಮಿಗಳ ಬೆಳಗಿಹ
ಎಷ್ಟೋ ಸಾಗರಗಳ ತೊಯ್ದಿಹ
ಆದರೂ, ಸುಮ್ಮನೆ ಮರೆಯಾಗುವ
ದಿಗಂತದಿ ಚಿನ್ನದೋಕುಳಿಯಾಡಿ
ಒಂದೆಡೆ ತಂಪಿಗೆ ಒಂದೆಡೆ ಕಂಪಿಗೆ
ಒಂದೆಡೆ ಚುಮುಚುಮು ಛಳಿಯಪ್ಪುಗೆ
ಭ್ರಮರ ಹಾತೊರೆವ ಹೂ ಕಂಪಿಗೆ
ಜೀವ ಜಾಲದ ಹೂರಣ ಅವನಲ್ಲಿ
ಮರಗಿಡ ಚರಾಚರ ಇವೆ ಬಳಿಯಲ್ಲಿ
ಬೆಳಕೂ ಅವನೇ ಕತ್ತಲೂ ಅವನೇ
ಶಕ್ತಿಸಾರದ ಮೂಲವೂ ಅವನೇ

Wednesday, October 12, 2011

ತ್ರಿವಳಿ ----THREE More for the PIC


ಆಗಲಿ ಸಾರ್ಥಕ

ಕನಸಲ್ಲಿ ವಿಹರಿಸಿದ್ದಿಲ್ಲಿ
ಮನಸ-ಮನಸು ಬೆಸೆದು
ಕೈ-ಕೈ ಹಿಡಿದು, ಸಂಜೆ
ಕತ್ತಲಾದದ್ದೂ ಅರಿಯದ
ಮನ ಮುದಗೊಂಡದ್ದೂ ಇಲ್ಲಿ.
ಅದೇ ಈ ಒಂಟಿ ಮರ
ಈ ಒಂಟಿ ಬೆಂಚು
ನಮ್ಮಿಬ್ಬರನು ಜಂಟಿಮಾಡಿ
ಹಿತ ನೆಳಲ ನೀಡಿ
ಬಿಡಿಸದ ಬಂಧ ಬೆಸೆದದ್ದೂ ಇಲ್ಲಿ.
ನಮ್ಮಂತೆ ಎಷ್ಟು ಮನ
ಮಿಡಿದಿವೆಯೋ ಇಲ್ಲಿ..?
ಎಷ್ಟು ಒಂಟಿಗಳು ಸೇರಿ
ಜಂಟಿಯಾಗಿವೆಯೋ ಇಲ್ಲಿ..?
ಟೊಂಗೆ ನೀಡಿವೆ ಎಲೆ-ಹಸಿರು
ಕೆಳ-ಮೇಲ್ ನೆಲಸಿದವಗೆ ಉಸಿರು
ಬೇರು ಹಿಡಿದಿವೆ ಮಣ್ಣ ಕೊರೆತ
ನೆಳಲು ತಣ್ಣನೆ ತಂಪು.
ಸಾರ್ಥಕವಾದರೆ ಸಾಕು ನಮ್ಮೀ ಬಾಳು
ಈ ಒಂಟಿ ಮರದಂತೆ,
ಅದರ ಹಸಿರೆಲೆಯಂತೆ,
ಬೇರಂತೆ ನೆಳಲಂತೆ..
ಕಡೇ ಪಕ್ಷ ಈ ಬೆಂಚಂತೆ..
Destiny

Oh the light!
Sunny and so bright
to see the twinkle
the magic of magnets
and hope so up right,
I could see in your
Sparkling sight…
No wonder, we sat
With hand-in hand
Under the lonely tree
With green and shadow
Like the magic wand.
I still feel the virgin
Warmth of our breath
On that lonely bench
Where we longed to sit
The day’s gone and
 So the sunny light
But the souls and feelings
We hold and nurtured
Are always verdant
Like the tree, the Sun,
The shadow and the
Lonely Bench

पेड् तलॆ-प्यार् पलॆ

वॊह् शीतल् सी साया
झुलस्तॆ किर्णोंकॊ रोकॆ
फैलाकॆ बाहे दूर् तक्
ममता की आंचल् सा मॆह्कॆ
अकेले थे दोनों,
मैं तुम् और् अकॆला था बॆंच्
बना हसीं मिलन का ऎह् मंच्
अकॆलोंका साथ्,
पिया का ऎह् हाथ्,
मौसम् की बात्
टहल्ना यूं साथ्..
पंची जानॆ कितने पर्देस् गयॆ
अप्नॆ बच्चोंकॆ भी घर् बस् गयॆ
पर् हम् सॆ न छूठा
न पेढ् हम् सॆ रूठा
न बना बॆंच् कभी झूठा
वही साया, वही पेढ्,
वही बॆंच् ऎक् बंधन् सा अनूठा.Saturday, October 8, 2011

ಭಾನುವಾರದ - ಕಚಗುಳಿ

ಜಯತು ಜಯ - ಎಂಕ್ಟೇಸಾ
"ಇದೇನಪ್ಪಾ ಮೀನಿನ ರೋಗ ನಿವಾರಣೆಗೆ ಮೀನಿನ ಡಾಕ್ಟರು ವೆಂಕಟೇಶನ ಜಪ ಹೊರಡಿಸ್ತಾ ಇದ್ದಾರಾ ಮೀನಿನ ಬಾಯಿಂದ...!!!" ಅಂದ್ಕೊಂಡ್ರಾ..?? ಅಯ್ಯೋ ಇಲ್ಲಾರೀ... ನಮ್ಮ ಪಕ್ಕು ಮಾಮನ ಪ್ರಭಾವ ಇದು..., ಎಂಕ್ಟೇಸಾ!?...ಪಕ್ಕೂ ಮಾಮಾ??.....
ಬ್ಯಾಡ್ವೇ ಬ್ಯಾಡ ಕನ್ ಪೂಸನ್ನು....ಹಹಹ. 
ಬಂದೇ ಬಿಡ್ತೀನಿ ವಿಷಯಕ್ಕೆ.

ಶುಕ್ರವಾರ ನನಗೆ ರಜಾ...ಹಾಗಾಗಿ ನಮಾಜ್ ಗೆ ಮುಂಚೆ ಚಾಟಲ್ಲಿ ನಮ್ಮ ಪಕ್ಕು ಮಾಮನ ಭೇಟಿ ಆಯ್ತು, ಪ್ರೇಯರ್ ಗೆ ಮುಂಚೆ. ಹಾಗೇ ಲೋಕಾಭಿರಾಮ ಚಾಟ್ ಆಗ್ತಿದ್ದಾಗ...ನನಗೆ ಅನಾಯಾಸವಾಗಿ ನೆನಪಿಗೆ ಬಂದಿದ್ದು ಈ ಸುಲಲಿತ, ಮಧುರ, ಭಕ್ತಿಭಾವಪೂರಿತ ಆಲ್ ಟೈಮ್ ಹಿಟ್ ಹಾಡು "ಜಯತು ಜಯ ವಿಠಲ..ನಿನ್ನ ನಾಮವು ಶಾಂತಿ ಧಾಮವು ಸೌಖ್ಯದಾರಾಮಾ...”


ಈ ಹಾಡನ್ನ ಹಾಕಿದೆ ಚಾಟ್ ಬಾಕ್ಸಲ್ಲಿ....“ಇದೇನೋ..ಶುಕ್ರವಾರ ನಮಾಜ್ ಅಂತ ಹೇಳಿ ದೇವರನಾಮ ಶುರು ಮಾಡಿದ್ದೀಯಾ..??” ಅಂತ ಪ್ರಕಾಶನ ಚಾಟ್ ಉತ್ತರ.
ಅದಕ್ಕೆ ನಾನು..
 “ಒಂದು ಸ್ವಾರಸ್ಯಕರ ಘಟನೆ ನಮ್ಮ ಸ್ಕೂಲಲ್ಲಿ ನಡೆದದ್ದು” ಅಂತ ಚಾಟಲ್ಲೇ ಸಂಕ್ಷಿಪ್ತವಾಗಿ ಹಾಕ್ದೆ...
ಅವನಿಗೆ ಏನನ್ನಿಸ್ತೋ..
 “ಬ್ಲಾಗಲ್ಲಿ ಹಾಕೋ ಮಾರಾಯಾ”.....
ನಾನು “ಎಸ್ ಬಾಸ್” ಎಂದವನೇ ಟೈಪಿಸೋದಕ್ಕೆ ಸುರು ಅಚ್ಕಂಡೆ.... ಅದರ ಫಲವೇ ಈ ಭಾನುವಾರದ ಕಚಗುಳಿ....
ಅದು ಹಳ್ಳಿ ಹೈಯರ್ ಪ್ರೈಮರಿ ಸ್ಕೂಲ್ ನ ಏಳನೇ ತರಗತಿ ಕ್ಲಾಸ್ ರೂಮು, ಹಳ್ಳಿ ಸ್ಕೂಲು ಅಂದ್ರೆ ಗೊತ್ತಲ್ಲ...?? ಕೆಳಗಡೆ ಮಣೆಗಳು.. ಸುಮಾರು ೬ ಅಡಿ ಉದ್ದ ಒಂದೊಂದೂ...ಹೆಚ್ಚು ಅಂದ್ರೆ ಅರ್ಧ ಅಡಿ ಎತ್ತರ...!!! ಹೂಂ...
ನೆಲದ ಮೇಲೆ ಕೂತಿಲ್ಲ.... ಅಥವಾ ಪಟ್ಟಣದ ಸ್ಸೂಕ್ಲೂಲಿನಲ್ಲಿರುವಂತೆ ಬೆಂಚಿನ ಎತ್ತರದಲ್ಲೂ ಕೂತಿಲ್ಲ... ಅನ್ನೋ ರೀತಿಯ ಎಡಬಿಡಂಗಿ ಸೀಟಿಂಗ್... ಈಗ್ಲೂ ಇದೆಯೇನೋ ಆ ಸಿಸ್ಟಮ್ ಗೊತ್ತಿಲ್ಲ....
ಓಕೆ...ಬಂದೆ..ಪ್ರಸಂಗಕ್ಕೆ...

ಕ್ಲಾಸಿನಲ್ಲಿ ಆ ದಿನ ಏನೋ ಕಾತರ ಮತ್ತೆ ಆಸಕ್ತಿ ಎಲ್ಲಾರಿಗೂ... ಯಾಕಂದ್ರೆ ಆ ದಿನ ನಮ್ಮ  ಹಳ್ಳಿಗಿಂತಾ ಹಳ್ಳಿ ಅನ್ನೋ ಸ್ಕೂಲಿಗೆ ಹತ್ತಿರದ ಪಟ್ಟಣಾಂತ ಅನ್ನಲಾಗದ ಪಟ್ಟಣದ ಹೊಸಾ ಮೇಡಂ ವರ್ಗವಾಗಿ ಬರ್ತಿದ್ದುದು.
ಸರಿ.. ಮೂರನೇ ಪಿರಿಯಡ್ಡು ಗಣಿತದ್ದು.  ಪ್ರವೇಶ ಆಯ್ತು ಮೇಡಂ ದು...

“ಗೂಡ್ ಮಾರ್ನಿಂಗ್ ಸಾ....”
ಎಲ್ಲಾ ಒಕ್ಕೊರಲಲ್ಲಿ ಹೇಳ್ತಿದ್ದುದು ಬೆಳಿಗ್ಗೆ ಇದನ್ನು ಮಾತ್ರ. ಗಂಡಸಾಗಲೀ...ಹೆಂಗಸಾಗಲೀ...ಹೇಳ್ತಿದ್ದುದು “ಸಾ” ಅಂತಲೇ...

“Attention... please...ಇಲ್ಲಿ ಕೇಳಿ...” ಅಂತ ಮೇಡಂ ಕೋಮಲ ದನಿ ಕೇಳಿ ಎಲ್ಲರೂ ಗಪ್-ಚಿಪ್.
“ನನ್ನ ಹೆಸರು- ಸುವರ್ಣ ನಾನು ಪಕ್ಕದ ವಿಜಯಪುರ ಪಟ್ಟಣದವಳು...ಇಂದಿನಿಂದ ನಿಮಗೆ ಗಣಿತ ಪಾಠ ನಾನೇ ಮಾಡುವುದು... ಓಕೆ...” ಹೊಸ ಮೇಡಂ ತನ್ನ ಬಗ್ಗೆ ಪರಿಚಯಕೊಟ್ಟರು.
“ಎಸ್ಸಾ” ಮತ್ತೆ ಎಲ್ಲರ ಒಕ್ಕೊರಲು...
“ನಾನು ಸರ್ ಅಲ್ಲ... ಮಿಸ್ ಅನ್ನಿ ಇಲ್ಲಾ ಮ್ಯಾಮ ಅನ್ನಿ” ಎನ್ನುತ್ತಾ
“ಸರಿ ಈಗ ಎಲ್ಲ ನಿಮ್ಮ ನಿಮ್ಮ ಪರಿಚಯ ಮಾಡ್ಕೊಳ್ಳಿ... ಹಾಂ...”
ಮೊದಲ ಸಾಲಿನ ಹುಡುಗಿಯರಲ್ಲಿ ಮೊದಲಿನ ಹುಡುಗಿಯನ್ನ ನೋಡಿ..


“ನೀನು ಹೇಳಮ್ಮ... ನಿನ್ನ ಹೆಸರು ಯಾವ ಊರು..ಅಂತ”...ಹೀಗೇ...ಒಬ್ಬೊಬ್ಬರಾಗಿ ಎಲ್ಲರ ಪರಿಚಯ ಆದಮೇಲೆ.. ಮೇಡಂ ...
“ನಿಮ್ಮ ಕ್ಲಾಸಿನಲ್ಲಿ ಯಾರು ಚನ್ನಾಗಿ ಹಾಡು ಹಾಡ್ತಾರೆ..?” ಎಂದು ಕೇಳಿದರು. ಒಡನೆಯೇ ಮತ್ತೆ ಒಕ್ಕೊರಲಲ್ಲಿ.... “ಎಂಕ್ಟೇಸಾ”....ಎಂದರು ಎಲ್ಲರೂ...
“ಏನಿದು...?? ಏನು..?? ಎಂಕ್ಟೇಸಾ!! ..ಅಂದ್ರೆ??” ಕೇಳಿದ್ರು ಮೇಡಂ ಏನೂ ಗೊತ್ತಾಗದೇ.
ಶೈಲಜಾ ಎದ್ದು ನಿಂತು... “ಮ್ಯಾಮ್ ವೆಂಕಟೇಶ್ ..ಅದೇ ಮೂರನೇ ಬೆಂಚಲ್ಲಿ ಕುಳಿತಿದ್ದಾನಲ್ಲಾ.....ಹಾಂ..ಅಲ್ಲಿ...,  ಅವನು ಚನ್ನಾಗಿ ಹಾಡ್ತಾನೆ” ಎಂದಳು.
“ಬನ್ರೀ ವೆಂಕಟೇಶ್.....” ಎಂದರು ಮೇಡಂ....  ಒಡನೇ ಹುಡುಗರೆಲ್ಲಾ...
“ಓ ಓ.. ಏನು ಮರ್ವಾದೆ,,??!!! ಎಂಕ್ಟೇಸನ್ಗೆ..” ಎಂದರು ಉದ್ಗಾರ ತೆಗೆಯುತ್ತಾ,,,,
“ಓಗೋ ಎಂಕ್ಟೇಸಾ..” ಎನ್ನುತ್ತ ಮೆಲ್ಲಗೆ ತಳ್ಳಿದ ಅವನ ಬೆನ್ನ ಮೇಲೆ ಕೈಯಿಟ್ಟು ಅವನ ಸ್ನೇಹಿತ ಪಕ್ಕದಲ್ಲೇ ಕುಳಿತಿದ್ದ ಸುಲೇಮಾನ್. "ಓಗೋ..ಓಗೋ..." ಎಂದರು ಎಲ್ಲಾ ಹುಡುಗರು.
ಆದರೆ....
ಯಾಕೋ ..ಬೆಳಿಗ್ಗೆಯಿಂದ ಒಂಥರಾ ಮುಖ ಮಾಡಿದ್ದ ವೆಂಕಟೇಶ... ಮೂಡಲ್ಲಿ ಇರ್ಲಿಲ್ಲ..... ಇಲ್ಲಾಂದ್ರೆ..ಸಿಳ್ಳೆ ಸೀನ, ಎಂಕ್ಟೇಸ ಇಬ್ರದ್ದು ಆರ್ಕೆಸ್ಟ್ರಾನೇ ಶುರು ಆಗ್ತಿತ್ತು. ಅದಕ್ಕೆ ತಕ್ಕ ಹಾಗೆ ಸಿಲ್ವರ್ ಸುಲೇಮಾನ್ ಬೆಂಚನ್ನೇ ತಬಲ ಮಾಡ್ತಿದ್ದ.


ಮೇಡಂ ಮೂರ್ನ್ಲಾಲ್ಕು ಬಾರಿ ಹೇಳಿ .. ಅವನ ಸ್ನೇಹಿತ್ರು..ಬಲವಂತ ಮಾಡಿದ ಮೇಲೆ...ವೆಂಕಟೇಶ ಬೋರ್ಡ್ ಬಳಿ ಹೋಗಿ ಕೈ ಕಟ್ಟಿ ನಿಂತ. ಮಕ್ಕಳೆಲ್ಲಾ ಅವನ ಹಾಡನ್ನು ಕೇಳಲು ನಿಶ್ಶಬ್ದರಾಗಿ ಕುಳಿತರು.
ವೆಂಕಟೇಶ ಪ್ರಾರಂಭಿಸಿದ...
“ಜಯತು... ಜಯ... ವಿಠಲಾ... ನಿನ್ನ ನಾಮವು..ಶಾಂತಿ..........."
ಎಲ್ಲರೂ ಮೌನ.... ಹುಡುಗ ಹುಡುಗಿಯರ ಮುಖದ ಮೇಲೆ ಅತ್ಯಾಶ್ಚರ್ಯದ ಮುಖಭಾವ.... ಮೇಡಂ ಸಹಾ...ಸ್ಟನ್....!!!!
ಸುಶ್ರಾವ್ಯ ಹಾಡು ಬಯಸಿದವರಿಗೆ!!! 
ಪಾಠವನ್ನು ಒಪ್ಪಿಸೋ ಎರಡನೇ ತರಗತಿ ಹುಡುಗ... “ಶಾಲೆ” ಪಾಠವನ್ನು ಓದಿದಂತಿತ್ತು ವೆಂಕಟೇಶನ ಹಾಡು....
“ಜಯತು ಜಯ ವಿಠಲ (ಇದು ನನ್ನ ಶಾಲೆ). ನಿನ್ನ ನಾಮವು ಶಾಂತಿಧಾಮವು (ನನ್ನ ಶಾಲೆ ನಮ್ಮ ಅಕ್ಕ ಪಕ್ಕದ ಊರುಗಳಿಗೆಲ್ಲಾ ಮಾದರಿ ಶಾಲೆ). ಸೌಖ್ಯದಾರಾಮಾ (ನನ್ನ ಶಾಲೆಯಲ್ಲಿ ಹದಿನಾಲ್ಕು ಕೊಠಡಿಗಳಿವೆ)” ಇತ್ಯಾದಿ...... 
ಕ್ಲಾಸೆಲ್ಲಾ ನಗುವಿನ ಗುಲ್ಲೋ ಗುಲ್ಲು...
ಮೇಡಂ...ಸಹನೆ ಕಟ್ಟೆ ಒಡೆಯಿತು....
“ಏಯ್... ಏಯ್.ಏಯ್.....ಸಾಕು ನಿಲ್ಲಿಸಿ...” ಎನ್ನುತ್ತಾ ಎಲ್ಲರನ್ನು ಗದರಿಸಿ, ವೆಂಕಟೇಶನ್ನ ನೋಡುತ್ತಾ
“ನಿಲ್ಲಿಸ್ರೀ ...ವೆಂಕಟೇಶ್!!....ನಾನು ಪಾಠ ಓದಿ ಅಂತ ಅಲ್ಲಾ ಹೇಳಿದ್ದು!!!,...ಹಾಡು ಹಾಡಿ ಅಂತಾ....!!” ಎಂದರು ಬೇಸರದಿಂದ
“ಹಾಡೋಕೆ ಬರೋಲ್ಲಾ ಅಂದ್ರೆ ಮುಂಚೆನೇ ಹೇಳ್ಬೇಕಪ್ಪಾ.... ಏನಮ್ಮ ಶೈಲಜಾ ನಿಮ್ಮ ಕ್ಲಾಸಿನ ಗಾನ ಗಂಧರ್ವ ಇವರೇನಾ??!!... ಬಹಳ ಚನ್ನಾಗಿದೆ....!!!!” ಎಂದರು ಬೇಸರದಿಂದ.
ಎಲ್ಲರೂ.. “ ಇಲ್ಲಾ ಮೇಡಂ ಚನ್ನಾಗಿ ಹಾಡ್ತಾನೆ ಇವನು....ಯಾಕೋ ಈವೊತ್ತು...ಗೊತ್ತಿಲ್ಲ....”
ಮೇಡಂ ಗೆ ರೇಗಿತ್ತು...
“ಸಾಕು ನಿಲ್ಲಿಸ್ರೀ ನಿಮ್ಮ ರೆಕಮೆಂಡೇಶನ್ನು... ಅಲ್ಲಾ ಹಾಡಿನ ಗಂಧಾನೇ ಗೊತ್ತಿಲ್ಲ ಇವರಿಗೆ...ಹಾಡ್ತಾರಂತೆ..ಹಾಡು...!!!”
ಎಂದು.. ಮುಖ ಗಂಟಿಕ್ಕಿ...
“ಆಯ್ತು ಬಿಡಿ.. ನಾಳೆಯಿಂದ ಪಾಠ ಪ್ರಾರಂಭಿಸ್ತೇನೆ... ಈ ದಿನ ನೀವು ಕೊಟ್ಟಿರೋ ಶಾಕೇ ಸಾಕು...” ಎನ್ನುತ್ತಾ...ತಮ್ಮ ಪುಸ್ತಕಗಳನ್ನು ಕೈಲಿ ಹಿಡಿದು ಹೊರನಡೆದರು.

ತಿಂಗಳಲ್ಲಿ ಒಮ್ಮೆ ನಡೆಯುವ ’ಶಾರದಾ” ಪೂಜೆಯೂ ಮೂರುದಿನಗಳಲ್ಲಿ ನಡೆಯುವುದಿತ್ತು.. ಆ ದಿನದ ಬೆಳಿಗ್ಗೆ ಪ್ರಾರ್ಥನೆ ನಂತರ HM ಘೋಷಣೆ ಮಾಡಿದರು...
“ನಿಮಗೆಲ್ಲಾ ಗೊತ್ತಿರೋ ಹಾಗೆ ತಿಂಗಳ ಶಾರದಾ ಪೂಜೆ ಶುಕ್ರವಾರ ಸಂಜೆ ೩.೦ ಗಂಟೆಗೆ ಎಲ್ಲಾ ಕ್ಲಾಸು ಮುಗಿದ ನಂತರ ಸ್ಕೂಲಿನ ಸಭಾಂಗಳದಲ್ಲಿ ಆಗುತ್ತೆ... ಸುಲೇಮಾನ್ ನೀನು ಪೂಜೆ ಮೆಮೋ ಪುಸ್ತಕಾನ ಊರಿನ ಹಿರಿಯರಿಗೆ ತೋರಿಸಿ ಅವರನ್ನ ಆಹ್ವಾನಿಸಿ ಬಾ... ಇನ್ನು ಪೂಜೆಯ ಸಮಯದ ಪ್ರಾರ್ಥನೆ ಜವಾಬ್ದಾರಿ... ವೆಂಕಟೇಶನದ್ದು” ಎಂದರು... 
ತಕ್ಷಣ ಹೊಸ ಮೇಡಂ ಸುವರ್ಣ...
"ಸರ್ ಸರ್.. ವೆಂಕಟೇಶಾನಾ??... ಏಳನೇ ಕ್ಲಾಸಿನ ವೆಂಕಟೇಶಾನಾ..???. ಅಯ್ಯೋ ಅವನು ಮಾತ್ರ ಬೇಡ ಸರ್..ಎಷ್ಟು ಕೆಟ್ಟದಾಗಿರುತ್ತೆ ಗೊತ್ತಾ ಅವನು ಹಾಡೋದು ..?? ಅವನು ಹಾಡೋದೂಂದ್ರೆ ಏನು..??!!!” 
ಎನ್ನುತ್ತಾ ತಮ್ಮ ಆತಂಕ ತೋಡಿಕೊಂಡರು..
ಅವರ ಮಾತನ್ನು ಕೇಳಿ HM  ಮತ್ತೆ ಇತರ ಉಪಾದ್ಯಾಯರು ಚಕಿತರಾದರು. ..ಆದ್ರೆ...
ಮಕ್ಕಳೆಲ್ಲಾ...ಅದರಲ್ಲೂ ಏಳನೇ ತರಗತಿ ಮಕ್ಕಳು ನಗಲು ಪ್ರಾರಂಭಿಸಿದರು.
“ಸೈಲೆನ್ಸ್.... ಯಾಕೆ ..ಯಾಕೆ ಎಲ್ಲಾರೂ ನಗೋದು...??” ಎನ್ನುತ್ತಾ HM ರವರು ಹೊಸ ಮೇಡಂ ಕಡೆ ನೋಡಿ... 
“ಯಾಕಮ್ಮಾ ..ಯಾಕೆ ಹಾಗೆ ಹೇಳಿದ್ರಿ?... ವೆಂಕಟೇಶ್ ನಮ್ಮ ಶಾಲೆಯ ಒಳ್ಳೆಯ ಗಾಯಕ...” ಎಂದಾಗ ಶಾಕ್ ಆಗೋ ಸರದಿ ಹೊಸ ಮೇಡಂದು....
“ಅಲ್ಲ ಸರ್..ಮೊನ್ನೆ ಇವರ ಕ್ಲಾಸಿಗೆ ಹೋಗಿ..........................” ಎಂದು ಪೂರ್ತಿ ವಿಷಯ ತಿಳಿಸಿದಾಗ ....
ಉಪಾದ್ಯಾಯರೂ ಸೇರಿಕೊಂಡರು ಈಗಾಗಲೇ ನಗಲು ಪ್ರಾರಂಭಿಸಿದ್ದ ಮಕ್ಕಳ ಜೊತೆ.


ಆ ನಂತರವೇ ಗೊತ್ತಾಗಿದ್ದು.... ಆ ದಿನ ಗೌಡರ ತೋಟದ ಸೀಬೇ ಕಾಯಿ ಕದ್ದು ಬಂದಿದ್ದರಿಂದ ಅವನ ಅಪ್ಪನ ಬೈಗುಳ ತಿಂದು ಬಂದಿದ್ದೂ ಅಲ್ಲದೇ ಆ ದಿನದ ಖರ್ಚಿನ ಎಂಟಾಣೆಗೂ ಖೋತಾ ಮಾಡ್ಕೊಂಡಿದ್ದ ಎಂಕ್ಟೇಸಾ ಅಂತ!!. ಹಾಡೋಕೆ ಆಗೊಲ್ಲ ಅಂತ ಸುಲೇಮಾನ್ ಗೆ ಹೇಳಿದ್ನಂತೆ...
ಅದಕ್ಕೆ ಸುಮೇಮಾನ್ “ಲೇ ಎಂಕ್ಟೇಸಾ ..ಮ್ಯಾಡಮ್ಮು ಮ್ಯಾತ್ಸ್ ಪಾಠ ಮಾಡೋದು ಆಮ್ಯಾಕೆ ಇನ್ನೂ ಟಫ್ ಮಾಡ್ಬಿಡ್ತಾರೆ ಹೋಗಿ ಹಾಡೋ” ಅಂತ ಹೆದರ್ಸಿದ್ದನಂತೆ. 
ಹೊಸ ಮೇಡಂ ಗೆ ಬೇಸರ ತರಿಸೋದು ಬೇಡ ಅಂತ ತೋರಿಸಿದ್ದು ಈ ವರಸೆ...!!! ಆಗ್ಲಿಂದ ಸ್ಕೂಲ್ ಮಕ್ಕಳೆಲ್ಲಾ... ಎಂಕ್ಟೇಸಾ ಅಂದ್ರೆ .... "ಓ..ಜಯತು ಜಯ ಎಂಕ್ಟೇಸಾ ನಾ" ಅಂತ ಹೇಳ್ತಿದ್ದರಂತೆ. 

Saturday, October 1, 2011

ಪ್ರಕಾಶನ- ಕಥೆಯ ಇನ್ನೊಂದು ..ಸಾಧ್ಯ ...ಮುಕ್ತಾಯ.....

ಪ್ರಕಾಶನ ಕಥೆ.....ಹೀಗೆ.....ಹೀಗೂ ಆಗಬಹುದು.....

ನನ್ನ ಕೆನ್ನೆಯ ಕಪ್ಪು ಮಚ್ಚೆಯ ಬಗೆಗೆ ನನಗೆ ಹೆಮ್ಮೆಯಾಯಿತು...


" ನೀನು..
ನಿನ್ನ ಕೆನ್ನೆ... ಈ ಮಚ್ಚೆ ನನಗೆ ಬಲು ಇಷ್ಟ.. ಕಣೆ..."


ಹುಡುಗ ಕಿವಿಯಲ್ಲಿ ಉಸುರಿದ...
ಮೈ ಬಿಸಿಯಾಗ ತೊಡಗಿತು.................

ಇಲ್ಲಿಂದ......ಜಲನಯನದ.....ಪುಟ್ಟ ..ಮುಕ್ತಾಯ....ಯಾಕಂದ್ರೆ ಸುಂದರ ಕ್ಷಣಗಳು ಎಷ್ಟು ಪುಟ್ಟದ್ದು ಎನಿಸುತ್ತವೆಯೋ ಅಷ್ಟೇ ದೀರ್ಘ ಮತ್ತು ಮಧುರವಾಗಿರುತ್ತವೆ....ಅವರವರ ಭಾವಕ್ಕೆ ....ಅಲ್ವಾ...??.....ಸರಿ...ಕಥೆಗೆ ಬರ್ತೀನಿ..............ಮುಂದಕ್ಕೆ.....

ನನ್ನ ಕೆನ್ನೆಯನ್ನು ಅವನೆದೆಗೆ ಒತ್ತುವಂತೆ ಅವನೆದೆಯಲ್ಲಿ ಮುಖ
ಹುದುಗಿಸಿದೆ...ಅವನು ತನ್ನ ಬಲಿಷ್ಠ ಬಾಹುಗಳಿಂದ ನನ್ನ ಬಂಧಿಸಿದ...
ತೋಳ್ತೆಕ್ಕೆಯಲಿ ಅವನ ಬಿಸಿಯುಸಿರಲಿ...ಕಣ್ಮುಚ್ಚಿ ....ಮೈ ಮರೆತೆ....
ಆಹಾ ಎಂಥ ಹಿತವಾಗಿತ್ತು..! ಅವನ ತೋಳ್ಬಿಗಿತ....!!!ಎಲ್ಲೋ ತೇಲಿದ ಹಾಗೆ.....

..............................................................................

ಒಂದು ವಿಷಯ ಕೇಳಲು ಮರೆತು ಬಿಟ್ಟಿದ್ದೆ...
ನಡುಗುವ ಧ್ವನಿಯಲ್ಲಿ..

" ಒಂದು ವಿಷಯ ಕೇಳಲಾ...?"

"ಕೇಳು..ಪುಟ್ಟಣ್ಣಿ.."

ಅವನು ಪುಟ್ಟಣ್ಣಿ.. ಅಂತ ಕರೆದದ್ದು ಇಷ್ಟವಾಯಿತು...
ಅಪ್ಯಾಯಮಾನವಾಯಿತು...
"ನೋಡಿ..
ನೀವೂ ಕೂಡ ತುಂಬಾ ಚಂದವಿದ್ದಿರಿ..
ಮದುವೆಗೆ ಮುನ್ನ ಯಾವುದಾದರೂ ಗೆಳತಿ ಇದ್ದಳಾ...?"

"ಛೇ.. ಛೇ... ನಾನು ಅಂಥವನಲ್ಲ..."

"ನಿಮ್ಮ ಕಾಲೇಜಿನಲ್ಲಿ..."

"ನಾನು ನಾಚಿಕೆ ಸ್ವಭಾವದವನು..
ಕಾಲೇಜಿನ ದಿನಗಳಲ್ಲಂತೂ ಪುಸ್ತಕದ ಹುಳುವಾಗಿದ್ದೆ..

ರಾಜ್ಯಕ್ಕೆ ನಾನು ಎರಡನೆ Rank ಗೊತ್ತಾ...?"


ನೀಲಿ ಕಣ್ಣಿನ ಹುಡುಗನ ಧ್ವನಿ ಕೇಳಲು ಇಷ್ಟ...

"ನಿಮ್ಮ ಆಫೀಸಿನಲ್ಲಿ ಚಂದದ ಹುಡುಗಿಯರು ಇಲ್ವಾ?"

"ಇದ್ದಾರೆ..
ಆದರೆ ನನ್ನ ಕೆಲಸ ನನಗೆ ಬಹಳ ಮುಖ್ಯ...
ಆಫೀಸಿನಲ್ಲಿ ನಾನು ಬಹಳ ಕಠಿಣವಾಗಿರುತ್ತೇನೆ"

"ನಿಮ್ಮ ಸಂಬಂಧಿಕರಲ್ಲಿ.. ಅಂದದ ಹುಡುಗಿಯರು ಇಲ್ವಾ?"

"ಹಾಂ...
ಒಬ್ಬಳಿದ್ದಾಳೆ..
ನನ್ನ ಅತ್ತಿಗೆಯ ತಂಗಿ.."

ನನಗೆ ಕುತೂಹಲ... !!

" ಹೇಗಿದ್ದಾಳೆ..??"

" ಚಂದ ಇದ್ದಾಳೆ...
ಒಂದು ವಿಷಯ ಹೇಳಿ ಬಿಡುತ್ತೇನೆ...
ಅವಳಿಗೂ ನಿನ್ನ ಹಾಗೆಯೇ..
ಕೆನ್ನೆ ಮೇಲೆ ಮಚ್ಚೆಯಿದೆ..
ನನ್ನ ಅದೃಷ್ಟ.. ಕೆನ್ನೆ ಮಚ್ಚೆಯ ಹುಡುಗಿಯೇ ನನಗೆ ಸಿಕ್ಕಿದ್ದಾಳೆ..."

ಹೌದಾ... !!
ಅಬ್ಭಾ ಗಂಡಸೆ.. !!
ನನಗೆ ಅನುಮಾನ ಬರತೊಡಗಿತು...!

"ಅವಳು ಮದುವೆಗೆ ಮುನ್ನ ನಿಮ್ಮನೆಗೆ ಬರುತ್ತಿದ್ದಳಾ?"

"ಬರುತ್ತಿದ್ದಳು..."

"ನೀವಿಬ್ಬರೇ ಏಕಾಂತದಲ್ಲಿ ಭೇಟಿಯಾಗಲಿಲ್ವಾ?"

"ಛೇ.. ಛೇ.. ಹಾಗೇನಿಲ್ಲ"

"ಅದು ಹೇಗೆ ಸಾಧ್ಯ..?
ಸಂಬಂಧಿಕರೆಂದ ಮೇಲೆ ಭೇಟಿಯಾಗಿರಬೇಕಲ್ಲವೆ?"

"ಅವಳಿಗೆ ...
ಅತ್ತಿಗೆಯ ಮದುವೆಯಾಗುವ ಮೊದಲೆ ನಿಶ್ಚಯವಾಗಿತ್ತು...
ನನ್ನ ಅತ್ತಿಗೆಯ ಮದುವೆಯಾಗಿ ಆರು ತಿಂಗಳಲ್ಲಿಯೇ ಅವಳ ಮದುವೆಯೂ ಆಯಿತು.."

"ಅವಳಿಗ ಎಲ್ಲಿದ್ದಾಳೆ...? ಏನು ಮಾಡುತ್ತಾಳೆ...?"

" ಅವಳೂ ಕೆಲಸ ಮಾಡುತ್ತಾಳೆ..
ನಮ್ಮ ಆಫೀಸಿನ ಪಕ್ಕದ ಬಿಲ್ಡಿಂಗಿನಲ್ಲಿ ಅವಳ ಆಫೀಸಿದೆ.."

ನನಗೆ ಕೋಪ ಬರತೊಡಗಿತು...

ಇವರಿಬ್ಬರೂ ದಿನಾಲೂ ಭೇಟಿಯಾಗ ಬಹುದಲ್ವಾ?..

ಛೇ..!!

"ಇದನ್ನೆಲ್ಲ.... ನೀವು ಮೊದಲೇ ಯಾಕೆ ಹೇಳಲಿಲ್ಲ..?"
"ಇದರಲ್ಲಿ ಮುಚ್ಚಿಡುವ ಸಂಗತಿ ಏನಿದೆ..?
ಅವಳ ಚಂದ ಇಷ್ಟಪಟ್ಟೆ ಅಷ್ಟೆ...
ಬಯಸಲಿಲ್ಲ..
ನಾನು ಇಷ್ಟಪಟ್ಟು ಬಯಸಿದ್ದು ನಿನ್ನನ್ನು...
ಪ್ರೀತಿಸ್ತಾ ಇರೋದು ನಿನ್ನನ್ನು..."

" ಇದನ್ನು ನಾನು ಹೇಗೆ ನಂಬಲಿ...? "
ನನ್ನನ್ನು ಹಿಡಿದುಕೊಂಡಿದ್ದ ಕೈಗಳು ಸಡಿಲವಾಗತೊಡಗಿತು..
ಹುಡುಗನ ಧ್ವನಿ ಗಡುಸಾಯಿತು...
ಬಹಳ ಕಠಿಣವಾಗಿ ಹೇಳಿದ...

"ನಾನು ಮೊದಲೇ ಹೇಳಿದ್ದೇನೆ..
ನಂಬಿಕೆ..
ವಿಶ್ವಾಸ ಇರಬೇಕು ಅಂತ...
ನನಗೆ ಇದೆಲ್ಲ ಇಷ್ಟವಾಗೊಲ್ಲ..."

ಆತ ...
ಮುಖತಿರುಗಿಸಿ ಮತ್ತೊಂದು ಕಡೆ ಮುಖ ಮಾಡಿ ಮಲಗಿದ...

ನನಗೂ.. ಅಸಾಧ್ಯ ಕೋಪ ಬಂತು....
ನಾನು .....
ಇನ್ನೊಂದು ಕಡೆ ಮುಖ ಮಾಡಿ ಮಲಗಿದೆ...

ಇಲ್ಲಿಂದ ಮತ್ತೆ.....ಜಲನಯನದ ಪಯಣ...........

........ಕಿವಿಯಲ್ಲಿ..ಯಾರೋ ಪಿಸುಗುಟ್ಟಿದಂತೆ...... “ಏಯ್ ಚಿನ್ನಾ.... ಪುಟ್ಟಣ್ಣಿ....
ಏನು ...? ಇಷ್ಟೊಂದು ಗಾಢ ನಿದ್ದೇನಾ...?? ನಿಂತಲ್ಲೇ ನನ್ನ ಅಪ್ಪಿದವಳು...
ಹಾಗೇ...ಕಣ್ಮುಚ್ಚಿ ನಿಂತದ್ದು... ನಿನ್ನ ಈ ಮುಚ್ಚಿದ ಸುಂದರ ಗುಲಾಬಿ ದಳದಂತಹ
ಕಣ್ರೆಪ್ಪೆ..ನಿನ್ನ ಈ ಸುಂದರ ಮಚ್ಚೆ..., ನಿನ್ನ ಮಧುರ ತುಟಿಗಳು...ನೋಡುತ್ತಾ ನಾನೂ
ಮೈ ಮರೆತೆ.... ನಿನ್ನನ್ನು ಅನಾಮತ್ ಎತ್ತಿ.. ಹಾಗೇ ...ಕೋಮಲ ಹೂವಿನ
ಮಾಲೆಯನ್ನು ಇಡುವ ಹಾಗೆ ಹಾಸಿಗೆಮೇಲಿಟ್ಟು.....ನಾನೂ ಮಲಗಿದೆ. ಮದುವೆಯ
ಓಡಾಟ ತಡ ರಾತ್ರಿಯವರೆಗೂ ನಡೆದ ರಿಸಿಪ್ಷನ್..... ನೀನೂ ನನ್ನಂತೆ
ಆಯಾಸಗೊಂಡು ಮುಗುಳ್ನಗೆಯ ಸುಖ ನಿದ್ದೆಯಲ್ಲಿದ್ದೆ.. ನಿನ್ನ ಆ ಮುದ್ದುಮುಖವನ್ನು
 ನೋಡುತ್ತಾ ನಾನೂ ನಿದ್ರಿಸಿದ್ದು ನನಗೂ ಅರಿವಾಗಿರಲಿಲ್ಲ..... ಈಗಷ್ಟೆ.. ಅಮ್ಮ
ಬಾಗಿಲು ಬಡಿದಂತಾಗಿ ಎಚ್ಚರ ಆಯ್ತು.....”

“ಹೌದಾ....ಅಯ್ಯೋ..... ನನ್ನ ಎತ್ತಿ ಮಲಗಿಸಿದ್ರಾ...??!!”
ಕೇಳಿದೆ ನಾಚಿಕೊಂಡೇ

ಹಾಗಾದ್ರೆ.....ಹಾಗಾದ್ರೆ....ಇವರ ಅತ್ತಿಗೆ ತಂಗಿ..? ಸ್ವೀಟ್ ಹಾರ್ಟು....???!!!

ಅಯ್ಯೋ ಬರೀ ನನ್ನ ಹುಚ್ಚು ಕನಸು.........

ಅವರ ಮುಖ ನೋಡಿದೆ.... ಮಗುವಿನ ಮುಗ್ಧತೆ ..ಮತ್ತು ತನ್ನ ಮುದ್ದು ಮಡದಿಯನ್ನೇ
ಮೆಚ್ಚುಗೆಯಿಂದ ನೋಡುತ್ತಿದ್ದ ಅವರ ಧನ್ಯತಾಭಾವ.... ನನ್ನೆಲ್ಲ ಕನಸಿನ ಕಲ್ಪನೆಗಳಿಗೆ
ತೆರೆಯೆಳೆಯಿತು.... ಛೇ...ಇಂತಹವರ ಬಗ್ಗೆ ನನ್ನ ಹುಚ್ಚು ಮನಸು ಏಕೆ ಅಂತಹಾ
ಯೋಚನೆ ಮಾಡಿತು..?? ...ತಲೆಕೊಡವಿದೆ..

ಹಾಸಿಗೆ ಬಿಟ್ಟೇಳುವ ನನ್ನನ್ನು ಹಾಗೇ ತನ್ನತ್ತ ಎಳೆದುಕೊಂಡು
ಅಪ್ಪಿಕೊಂಡರು....ಮತ್ತದೇ ಸುಖ ...!! ಅವರ ತೆಕ್ಕೆಯಲ್ಲಿ ಮತ್ತೆ
ಕರಗಿಹೋದೆ.....!!!!!!!!!!!