Friday, December 11, 2020

“ಓದು”- ಒಂದು ವಿಶ್ಲೇಷಣೆ

 

 

“ಓದು”- ಒಂದು ವಿಶ್ಲೇಷಣೆ

                                                                                               

ಓದು – ಒಂದು ಪದ ಹೌದು, ಕ್ರಿಯಾಪದವಾಗಿ ಹೆಚ್ಚು ಬಳಕೆಯಲ್ಲಿದ್ದರೂ ಇದೊಂದು ಹೆಸ್ರು ಪದವೂ ಹೌದು. ಹೆಸರು ಪದ – ಅಂದರೆ ನಾಮ ಪದ.

ಓದು – ಎಂದರೆ ವಿದ್ಯೆ, ಜ್ಞಾನ, ಬುದ್ಧಿ, .. ಕ್ರಿಯಾಪದವಾಗಿ ಓದು ಎಂದರೆ ಅಕ್ಷರಗಳ ಬಂಧದ ಪದಗಳನ್ನು ಉಚ್ಚರಿಸು ಎಂದು.

ಓದು ಅವನಿಗೆ ಹತ್ತಲಿಲ್ಲ ಎಂದರೆ ಅವನು ವಿದ್ಯಾವಂತನಾಗಲಿಲ್ಲ. ಹಾಗೆಂದ ಮಾತ್ರಕ್ಕೆ ಅವನಿಗೆ ಓದಲು ಬರುವುದಿಲ್ಲ ಎಂದೂ ಅಲ್ಲ. ಓದು ಬರಹ ತಿಳಿಯದ ಗಮಾರ..ಎನ್ನುತ್ತಾರೆ ಇಲ್ಲಿ ಅಕ್ಷರ ಗುರುತಿಸಿ ಉಚ್ಚರಿಸಬಲ್ಲ ಕಲಿಯುವಿಕೆಯಿಂದ ವಂಚಿತ ಎಂದಷ್ಟೇ ಹೇಳಬಹುದು. ಗುಂಡ..ಎಲ್ಲಿ ಇದನ್ನು ಓದು..ಎಂದು – ಒಂದು ಕಷ್ಟದ ಅಕ್ಷರಬಂಧದ ಪದಗಣವನ್ನು ತೋರಿಸಿದರೆ ಅಕ್ಷರ ಗುರುತಿಸುವ ಕಲಿಯುವಿಕೆ ತಲೆಗೆ ಹತ್ತಿದ್ದರೆ..ಅಕ್ಷರಗಳನ್ನು ಅಕ್ಷರಗಳನ್ನು ಓದಬಲ್ಲ... ಆದರೆ ಅದರ ವಿನ್ಯಾಸದ ಸಂಪೂರ್ಣತೆಯನ್ನು ಉಚ್ಚಾರದಲ್ಲಿ ತರಲಾರ.

ಬುಟ್ಬುಟ್ಬಂದ್ರೇನ್ತೊಂದ್ರೆ – ಈ ಪದವನ್ನು ಒಮ್ಮೆಗೇ ನಮಗೂ ಉಚ್ಚರಿಸಲಾಗದು..ಅಂದ್ರೆ ನಾವು ಓದುಬರಲಾರದವರು ಎನ್ನಬಹುದೇ. ಓದಿನ ಕ್ಲಿಷ್ಟತೆಗಳ ಆಯಾಮಗಳ ಹಂತವನ್ನು ಸುಲಭವಾಗಿ ದಾಟಲಾರೆವು ಎಂದೇ ಅರ್ಥ. ಹಾಗೆಯೇ ಓದು – ಹಲವಾರು ಮಜಲುಗಳನ್ನು ಹೊಂದಿದೆ. ಇಲ್ಲಿ ಕಣ್ಣು - ಮಿದುಳು – ನಾಲಗೆ ಮತ್ತು ಉಚ್ಚಾರ ಸ್ಪಷ್ಟತೆ ಇಷ್ಟೂ ಗಣನೆಗೆ ಬರುತ್ತವೆ. ಬರವಣಿಗೆಯನ್ನು ನೋಡಿ, ಅಕ್ಷರ ವಿನ್ಯಾಸವನ್ನು ಮಿದುಳಿಗೆ ತಲುಪಿಸಿ, ಅದರ ಪರಿಚಯ ಮೊದಲೇ ದಾಖಲಾಗಿದ್ದರೆ ಉಚ್ಚರಿಸುವ ಮೊದಲು ಸಂಕೇತಗಳನ್ನು ನಾಲಿಗೆಗೆ ತಲುಪಿಸಿ ಅದರಂತೆ ಉಚ್ಚರಿಸಲು ಸಹಕರಿಸುವ ಧ್ವನಿಪೆಟ್ಟಿಗೆಯನ್ನು ಅಣಿಗೊಳಿಸಿ ಹೊರಡಿಸುವ ಶಬ್ದವೇ ಅಕ್ಷರ-ಪದಗಳ ಇರುವಿಕೆಯನ್ನು ಕೇಳುಗರಿಗೆ ತಲುಪಿಸುತ್ತದೆ. ಇನ್ನು ಅಕ್ಷರಗಳಿದ್ದೇ ಓದಬಹುದು ಎನ್ನುವುದೂ ಸಾಧ್ಯ ದೃಶ್ಯಮಾಧ್ಯಮದ ಓದು (ಮೂಕ/ಕಿವುಡ ರ ಟಿವಿ ವಾರ್ತೆಗಳನ್ನು ನೀವೂ ನೋಡಿರುತ್ತೀರಿ...ಆದರೆ ಓದಲಾರಿರಿ!!), ನೋಡದೇ ಓದಬಹುದು ಎನ್ನುವುದು ಸ್ಪರ್ಶಮಾಧ್ಯಮದ ಓದು (ಬ್ರೈಲ್ ಲಿಪಿಯನ್ನು ಓದಬಲ್ಲ ದೃಷ್ಟಿವಂಚಿತರು, ಆದರೆ ಅದನ್ನು ನೋಡಿ ಓದಬಲ್ಲ ನಾವು ಕಣ್ಮುಚ್ಚಿ ಸ್ಪರ್ಷದಿಂದ ಓದಲಾರೆವು!!). ದೃಶ್ಯಮಾಧ್ಯಮದ ಓದು..ಗುಂಡನೂ ಬಲ್ಲ..!! ಮೇಷ್ಟ್ರು ಬೆತ್ತವನ್ನು ಎತ್ತಿಕೊಂಡೊಡನೆಯೇ...”ಸಾ.ಸಾ..ಬ್ಯಾಡ..ಸಾ...ಇನ್ನೊಂದ್ಕಿತ ಓಮ್ವರ್ಕ್ ಮಾಡ್ಕಬತ್ತೀನ್ಸಾ..ಒಡೀಬ್ಯಾಡೀ ಸಾ...ಅಂತಾನೆ”... ಎಂಕ್ಟ..ಏನ್ ಕಮ್ಮೀನಾ...”ಲೋ ಗುಂಡ ,,ನನ್ನುಡ್ಗೀ ಕರೀತಾವ್ಳೇ..  ಓಗ್ಬತ್ತೀನಿ ..ನನ್ ಅಟೆಂಡೆನ್ಸ್ ಕೂಗುದ್ರೆ ನೀನೇ ..ಎಸ್ಸಾ...ಅಂದ್ಬುಡು”...ಅಂತಾನೆ. ತನ್ನ ಹುಡುಗಿ ಏನೂ ಹೇಳಿರುವುದಿಲ್ಲ ..ಅವಳ ಕಣ್ಣೋಟವನ್ನೇ ಓದಿರ್ತಾನೆ!!

ಇನ್ನೊಂದು ಪ್ರಕಾರದ ಓದು... “ಮದುವೆಯಲ್ಲಿ ನಿನ್ ಮಗಂಗೆ ಓದು ಏನೇನು ಬಿತ್ತು?” ಅಂದರೆ ಇಲ್ಲಿ ಓದು ಅಂದರೆ – ಉಡುಗೊರೆಗಳು.

“ಮದ್ವೆಲಿ ಏನಪ್ಪಾ ಓದಿಸ್ದೆ ನೀನು?”

ಒಂದ್ ಮಂಚ, ಒಂದು ಆಸ್ಗೆ, ಒಂದು ಫ್ಯಾನೂ.... ಒಸ ಮದ್ವೆ ಮಕ್ಳು...ಸೆಕೆ ಜಾಸ್ತಿ ಆಯ್ತದಲ್ವಾ?

ಕೇಳಿದವ ಮುಸಿ ಮುಸಿ ನಗ್ತಾನೆ... ಇಲ್ಲಿ ಹೇಳಿದ ಪದ ಒಂದು ಅವನು ಅರ್ಥೈಸಿಕೊಂಡು ಮನದಲ್ಲಿ ಓದಿಕೊಳ್ಳುವ ಪದ/ಪದಗಳು/ ಕಥೆ ನೇ ಬೇರೆ..

ಇನ್ನು..ಸಾಲುಗಳ್ನಡ್ವೆ ಓದೋದನ್ನ – ರಾಜ್ಕಾರಣಿಗಳಿಗೆ, ಪತ್ರಕರ್ತರಿಗೆ ಹೇಳಿಕೊಡಬೇಕಿಲ್ಲ...ಅಂತಾರೆ..

ಇದ್ಯಾವ್ದು..? ಸಾಲುಗಳ ನಡುವೆ ಓದೂ..? ಸಾಲುಗಳ ನಡುವೆ ಖಾಲಿ ಜಾಗ ಇರುತ್ತಪ್ಪಾ...

ಇದೇ ನೋಡಿ...ಕಲ್ಪಿತ ಕಥನ/ಪದ/ವಾಕ್ಯ. ಹೆಚ್ಚು ಬಾರಿ ಇದು ಕಥನವೇ ಆಗಿರುತ್ತೆ.

ಓದಿನ ವ್ಯಾಪ್ತಿ ಓದಿಗೇ ಗೊತ್ತು

ಓದಿದರೆ ಓದು ಬರಿ ಅಕ್ಷರ

ಅಕ್ಷರವೊಂದು, ಅರ್ಥ ನೂರು

ಅದು ಓದಿನ ಪಕ್ವತೆಯ ಸೂರು.