Monday, February 14, 2011


(ಚಿತ್ರ ಕೃಪೆ: ಅಂತರ್ಜಾಲ, web foto)

ಪ್ರೀತಿಯೋ ಪ್ರೇಮವೋ.?
ಬಿಟ್ಟ ಕಣ್ಣ ಹೊಳಪ
ನಕ್ಕು ಬಾಯಲಿ ಬಳಪ
ಚೊಕ್ಕ ಚೋಲಿಯ ಸೆಳೆತ
ಆಗಿದ್ದು ನಮ್ಮ ಕಣ್ಣ ಮಿಳಿತ
ಅದು ಮುಗ್ಧ ಬಾಲ್ಯದ ಭಾವ
ಪ್ರೀತಿಯೋ ಪ್ರೇಮವೋ ಯಾವುದು..?

ಬೆಳೆದಂತೆ ಮಗದೊಂದು ಮಿಡಿತ
ಅವಳತ್ತಳು ಬಿದ್ದರೆ ನನಗೆ ಹೊಡೆತ
ಕಾಣದಾಗೆ ಒಂದಿನ ಏನೋ ತುಡಿತ
ಹೀಗೂ ನಡೆದಿದ್ದು ಕಿಶೋರ ದಿನ
ಅರ್ಥವಿತ್ತೇ ಅದಕ್ಕೂ ಆದಿನ
ಪ್ರೀತಿಯೋ ಪ್ರೇಮವೋ ಅದು..?

ನಮಗೆ ಮರೆಯದ ಅದೊಂದು ಘಟ್ಟ
ಇಬ್ಬರೂ ಬೆಳೆದು ನಿಂತು ಎದೆಮಟ್ಟ
ಸಫಲಿಸದೆ ವಿದ್ಯೆ, ಇದ್ದಲ್ಲೇ ನಿಂತಳು
ಗೆದ್ದರೂ ತೇವಗೊಂಡವು ನನ್ನ ಕಂಗಳು
ಅನಿಸತೊಡಗಿತ್ತು ಅರ್ಥವಾಗದ್ದು ಏಕೆ ಹೀಗೆ?
ಪ್ರೀತಿಯೋ ಪ್ರೇಮವೋ ಇದು..?

ಕಳೆದು ಹತ್ತಾರು ವರುಷ, ಸಿಕ್ಕಳಂದು ಷಮಾ
ಕಣ್ಣು ಸೇರಿದ್ದು, ಗುರುತಿಸಿದ್ದು ನೆನಪುಗಳ ಜಮಾ
ಯಾವುದೋ ಹೊಲದ, ಎಲ್ಲೋ ಹೊಸೆದ, ಬತ್ತಿಯ ಹೊತ್ತು
ಅಪ್ಪ-ಅಮ್ಮನ ಮಾಡಿದ ಗಾಜ ಬುರುಡೆಯ ಸುತ್ತು
ಷಮಾಳ ಆಸೆಗಳಿಗೆ ಕಿಡಿ, ನೆನಪಿಗೆ ಹತ್ತಿ ಧೂಳು
ಆಗಿ ಬಾಲ, ಕಿಶೋರ, ಪ್ರೌಢ ಮನಸುಗಳ ಹೋಳು
ಪ್ರೀತಿಯೋ, ಪ್ರೇಮವೋ ..ಅಂದು...?

ಧಾರೆ ಜೀವನದಿ ಹಿರಿಯರಾಣತಿ ಹರಿವಿನೊಂದಿಗೆ ತಾನು
ಅರಿಯದ, ಅರಿವಾದ ಅರಿತರೇನೂ ಮಾಡಲಾಗದ ನಾನು
ಮಾಲ್ ನ ಜಂಗುಳಿಯಲಿ ನಿಂತಂತೆ ಮರುಕಳಿಸಿ ನೆನಪು
ಬಂದರು ಷಮಾಳ ಅವರು, ಜೊತೆಗೆ ಬೆಳೆದ ಮಕ್ಕಳಿಬ್ಬರು
ನನ್ನವಳು ತನ್ನೆತ್ತರಕೆ ಬೆಳೆದ ಮಗಳ ಜತೆಗೆ ನಾವು ಮೂವರು
ಇದಲ್ಲವೇ ಜೀವನ? ವಿರೋಧಗಳ ನಡುವೆಯೂ ಬಾಳು ?
ಸಹನಾತೀತ ಕ್ಷಣ, ಕಳೆದರೆ- ಅನಿಸದು ಹಿಂದಿನದು ಗೋಳು.
ಇದಲ್ಲವೇ ಪ್ರೀತಿ ಪ್ರೇಮ ಎಂದೂ ಎಂದೆಂದೂ..?