Monday, May 16, 2016

ಫಲಿತಾಂಶ.... ಪರೀಕ್ಷೆಗಳದ್ದು ..ಜೀವನದ್ದಲ್ಲ


ಫಲಿತಾಂಶ.... ಪರೀಕ್ಷೆಗಳದ್ದು ..ಜೀವನದ್ದಲ್ಲ

ಸ್ಕೂಲಿಗೆ ಹೊರಡುವನಿದ್ದೆ... ಮನೆ ಬಾಗಿಲಬಳಿ ನಮ್ಮ ಊರಿನ ಚೇರ್ಮನ್ ರ ಮುತ್ಯಾ (ಮನೆ ಆಳಾದ್ರೂ ಅವನನ್ನ ಮನೆ ಮಗನಷ್ಟೇ ಚನ್ನಾಗಿ ನೋಡ್ಕೋತಿದ್ರು ಚೇರ್ಮನ್ರ ಮನೆಯವರು) ನಿಂತಿದ್ದ..
"ಏನು ಮುತ್ಯಣ್ಣ?" ಅಂದೆ
"ಆಜಾದಪ್ಪ ನೀನು ಇಸ್ಕೂಲ್ ತಾಕ್ಕೆ ಓಗ್ತೀಯಲ್ಲಾ.. ನಮ್ ಚಂದ್ರವ್ವನ ರಿಸಲ್ಟೂ ನೋಡ್ಕಂಬರ್ಬೇಕಂತೆ, ಅವ್ವಾರು ಯೋಳಿದ್ದು" ಅಂದ
"ಯಾಕೆ ಚಂದ್ರಿ ಬರೊಲ್ವಂತಾ..?" ಅಂದೆ
"ಏನೋ ಗೊತ್ತಿಲ್ಲ, ನೀವೇ ನೋಡ್ಕಂಬರ್ಬೇಕಂತೆ"... ಅಂದ.
ಸರಿ, ಸೈಕಲ್ ಹತ್ತಿ, ಅಮ್ಮ ಅಪ್ಪಂಗೆ ಹೇಳಿ.. ನಾಲಕ್ಕು ಕಿ.ಮೀ ದೂರದ ಸಿಂಗೂರಿಗೆ ಹೊರಟೆ... ಅರ್ಧ ದಾರಿ ಹೋಗಿರಬೇಕು... ಕೇರಿ ನಿಂಗ..ಆ ಕಡೆಯಿಂದ ಬರ್ತಿದ್ದ, ನನ್ನ ಕಂಡು ಸೈಕಲ್ ನಿಲ್ಲಿಸ್ದ... ಖುಷ್ ಖುಷಿಯಾಗಿದ್ದದ್ದು ನೋಡಿ...ಪಾಸಾಗಿದ್ದಾನೆ ಅಂದ್ಕೊಂಡೆ...ಅಷ್ಟರಲ್ಲೇ ನಿಂಗ..
"ಆಜಾದೂ ..ಪಾಸ್ ಕಣೋ ನಾನು 48% ಪರ್ಸೆಂಟು...!!" ಎಂದ ಸಂಭ್ರಮದಲ್ಲೇ...
ನನಗೂ ಖುಷಿ ಆಯ್ತು...ಹೆದ್ರಿದ್ದ ,..ಎಲ್ಲಿ ಫೈಲ್ ಆಗಿಬಿಡ್ತೀನೋ ಅಂತ..
"ಅದ್ಸರಿ ಕಣೋ, ಇಷ್ಟ್ ಬೆಳಗ್ಗೆನೇ ಹೋಗ್ ಬಂದ್ಯಾ..?? ಯಾಕೆ..ನನ್ನನ್ನ ಕರೀತೀನಿ ಅಂದಿದ್ದೆ..?" ಅಂದೆ
"ಇಲ್ಲ ಕಣೋ, ಎದ್ರಿಕೆ ಇತ್ತು, ಫೇಲಾದ್ರೆ ಮುಖ ಎಲ್ಲಾರ್ಗೂ ಹೆಂಗೆ ತೋರ್ಸೋದು ಅಂತ ಯಾರೂ ಬರೋಕೆ ಮುಂಚೇನೇ ನೋಡಾನ ಅಂತ ಬಂದ್ಬಿಟ್ಟೆ" ಅಂದ...ಸದ್ಯ ಎನ್ನುವಂತೆ
“ಮತ್ತೆ ಇನ್ನೂ ಯಾರು ಯಾರು ಪಾಸು…? ಯಾರು ಫೈಲು..?” ಕೇಳಿದೆ.
“ಈ ಸಲ ಸ್ಕೂಲಿಂದು ತುಂಬಾ ಕಮ್ಮಿ ರಿಸಲ್ಟು ಕಣೋ, 65% ಉಡುಗ್ರು (ಅವನ ಮಾತಲ್ಲಿ ವಿದ್ಯಾರ್ಥಿಗಳು ಅಂತ) ಪಾಸಂತೆ… ಕಳ್ದ ಸಲಕ್ಕಿಂತ 15% ಕಮ್ಮಿ, …
“ಇನ್ನೊಂದ್ ಇಸ್ಯ ಗೊತ್ತಾ..?” ಕುತೂಹಲದಿಂದ ನನ್ನ ಕೇಳಿದ..
ಏನು? ಎನ್ನುವಂತೆ ಹುಬ್ಬೇರಿಸಿದೆ…
“ನಮ್ಮ… ವಿವೇಕ…ಅದೇ ಕಣೋ… ಊರಬಾಕ್ಲು ರಾಮಣ್ಣನ್ ಮಗ,.. ಫೇಲಂತೆ… ನಮ್ ಸ್ಕೂಲ್ ಪೀಯೋನು ಯೋಳ್ತಿದ್ದ, ಒತ್ತಾರೆ ಬಂದು ನೋಡ್ಕೊಂಡು ಓದ್ನಂತೆ, ಬಲೇ ಅತ್ನಂತೆ…. ಪಾಪ..!! ಸೆಕೆಂಡ್ ಕ್ಲಾಸು ಕಂಡಿತಾ ಬತ್ತದೆ ಅಂತಿದ್ದ” ಎಂದ, ಇವನೇ ಫೇಲಾದ ಹಾಗೆ ಬೇಸರ ಪಟ್ಕೊಂಡು…
“ಹೌದೇನೋ…?? “ ನನಗೂ ಆಶ್ಚರ್ಯ ಆಗಿತ್ತು, ವಿನಯ ಓದೋ ಹುಡುಗ ಅಂತ ಹೇಳ್ತಿದ್ದ ಮೇಷ್ಟರುಗಳಿಗೂ ನಂಬಿಕೆ ಆಗ್ಲಿಲ್ವಂತೆ…  
“ಅದ್ಸರಿ, ನಂದು, ನಾಗೇಶಂದು ಚಂದ್ರಿದು…ರಿಸಲ್ಟು ನೋಡಿದ್ಯಾ..??”
“ಅಯ್ಯೋ ಇಲ್ಲ ಆಜಾದು…, ಈ ಸಲ ಬರೀ ರೋಲ್ ನಂಬರ್ ಆಕಿದ್ರು, ಎಸ್ರು ಇಲ್ಲ…” ಅಂದ..
“ಒಳ್ಲೇದೇ ಬಿಡೋ, ಇಲ್ಲಾಂದ್ರೆ ಕೆಲವ್ರು ಅಪ್ಪಾಪೋಲಿಗಳು, ಹೆಸರು ನೋಡಿ, ಫೇಲಾಗಿದ್ರೆ ಊರಲ್ಲೆಲ್ಲಾ ಡಂಗೂರ ಹೊಡೀತಾರೆ..,.. ಸರಿ ನೀನು ಹೊರಡು, ನಾನು ರಿಸಲ್ಟ್ ನೋಡ್ಕೊಂಡು ಬರ್ತೀನಿ” ಅಂತ ಅವನಿಗೆ ಬೈ ಹೇಳಿ ಸ್ಕೂಲಿಗೆ ಹೊರಟೆ…
ಸ್ಕೂಲಿನ ಹತ್ತಿರ ಬರ್ತಿದ್ದ ಹಾಗೇ, ಕನ್ನಡದ ಮೇಷ್ಟರು ಕೆ.ಎಸ್.ಆರ್. “ಏನಪ್ಪಾ ಆಜಾದೂ ಕನ್ನಡದಲ್ಲಿ ಪ್ರಥಮ ನೀನು.. ಅಭಿನಂದನೆ ಕಣಯ್ಯಾ..” ಅಂತ ಹೇಳಿ ಆಫೀಸಿನೊಳಕ್ಕೆ ಹೋದರು… ಅವರವರ ವಿಷಯ ಅವರವರಿಗೆ ಮುಖ್ಯ ಅಲ್ವೇ,, ಧನ್ಯವಾದ ಸರ್..ಅಂತ, ನೋಟೀಸ್ ಬೋರ್ಡ್ ಕಡೆಗೆ ಹೊರಟೆ..
ಹೆಚ್.ಎಮ್. ನರಸಿಂಹಾಚಾರ್ ಸಿಕ್ರು… ಏನಯ್ಯಾ ಆಜಾದು.. ಹೀಂಗಾ ಮಾಡೋದು…?? ಅಂದರು ಹುಬ್ಬು ಗಂಟಿಕ್ಕಿ
ನನಗೆ ಗಾಬರಿಯಾಯ್ತು…”ಏನ್ಸರ್, ಏನಾಯ್ತು..ಅಂದೆ,?”
“ಅಲ್ಲ ಕಣಯ್ಯಾ ನನ್ನ ಸಬ್ಜೆಕ್ಟು, ಮ್ಯಾತ್ಸು.. ಅದ್ರ ಮೊದಲ ಸ್ಥಾನಾನ ನಾಗೇಶನಿಗೆ ಬಿಟ್ಕೊಟಿದ್ದೀಯಲ್ಲಯ್ಯಾ?” ಅಂದರು.. ಎರಡು ಮಾರ್ಕ್ಸ್ ಹೆಚ್ಚು ತೆಗೆಯೋಕೆ ಏನಾಗಿತ್ತು…? ಆ ಮೇಲೆ ಬಾ ಆಫೀಸ್ ರೂಮಿಗೆ ” ಹೀಗೆಂದು ಹೇಳುತ್ತಾ.. ಆಫೀಸ್ ರೂಮಿನೆಡೆಗೆ ಹೊರಟರು…
“ಅಲ್ಲ…ಅವರವರ ಸಬ್ಜೆಕ್ಟ್ ಬಗ್ಗೆನೇ ಹೇಳ್ತಿದ್ದಾರಲ್ಲ… ನನ್ನ ಒಟ್ಟಾರೆ ಹಣೆಬರಹ ..??” ಎಂದುಕೊಂಡು ನೋಟೀಸ್ ಬೋರ್ಡ್ ಕಡೆ ಹೊರಟೆ.
ಸೀನ, ನಾಗೇಶ, ಇಸ್ಮಾಯೀಲ, ಜೋಸೆಫ್, ಎಲ್ಲಾ ಅಲ್ಲೇ ಇದ್ರು..ಎಲ್ಲಾ ಖುಷಿಯಾಗಿದ್ದದ್ದು ನೋಡಿ…ಪರವಾಗಿಲ್ಲ ಎಲ್ಲಾ ಪಾಸಾಗಿದ್ದಾರೆ..!! ಅಂದ್ಕೊಂಡು ಸಮಾಧಾನದಿಂದ ನೋಟೀಸ್ ಬೋರ್ಡಿನ ಲಿಸ್ಟ್ ನೋಡಿದೆ…
ಒಮ್ಮೆ ನೋಡಿದೆ…
ಮತ್ತೊಮ್ಮೆ ನೋಡಿದೆ…!!!>???
ಅರೆ…!! ನನ್ನ ನಂಬರ್ ಇಲ್ಲ..!!!!
ಅಯ್ಯೋ ..ಆ 35% ವಿದ್ಯಾರ್ಥಿಗಳಲ್ಲಿ ನಾನೂ ಸೇರ್ಕೊಂಡ್ನಾ..?? ಏನ್ ಮಾಡ್ಲಿ..ಅಪ್ಪಂಗೆ, ಸ್ನೇಹಿತ್ರಿಗೆ ಹ್ಯಾಗೆ ಮುಖ ತೋರಿಸ್ಲಿ??
ಬೆವರು ಶುರು ಆಯ್ತು..ನನ್ನ ಗಾಬರಿ ಮುಖ ನೋಡಿ.. ಪಕ್ಕದಲ್ಲಿದ್ದ ರಾಘಣ್ಣ (ನಮ್ಮ ಶಾಲಾ ಹೆಡ್ ಗುಮಾಸ್ತ) …
“ಈ ಕಡೆ ಒಂದು ಲಿಸ್ಟ್ ಐತೆ ನೋಡಪ್ಪಾ ಆಜಾದೂ..” ಎಂದ ನಗುತ್ತಾ..
ಪಕ್ಕದಲ್ಲೇ ಒಂದು ಪುಟ್ಟ ಲಿಸ್ಟ್ ಇತ್ತು…
“ಮೊದಲ ಮತ್ತು ಎರಡನೇ ದರ್ಜೆಯಲ್ಲಿ ಉತ್ತೀರ್ಣರಾದವರ ಪಟ್ಟಿ” ಅಂತ ಇತ್ತು…
ಮೇಲಿಂದ ನೋಡಿದೆ…10 ಮಂದಿಯ ನಂಬರಿನಲ್ಲಿ ನನ್ನ ನಂಬರ್ ಇರಲಿಲ್ಲ… ಅರೆ…!!! ಪಕ್ಕದಲ್ಲಿ ಗೆರೆ ಹಾಕಿ ಉದ್ದಕ್ಕೆ – ಎರಡನೇ ದರ್ಜೆ ಎಂದಿತ್ತು
ಸರಿ, ಅದರ ಪಕ್ಕದ ಲಿಸ್ಟ್ – 6 ಜನದ್ದು…
ಈ ಸಲ ಕೊನೆಯ ನಂಬರ್ ಮೇಲೆ ಅನಾಯಾಸವಾಗಿ ಕಣ್ಣು ಬಿತ್ತು… ಅದು ನನ್ನದೇ..!!!!
“ಅಬ್ಬಾ..!! ಬದುಕಿದೆಯಾ ಬಡ ಜೀವವೇ..!! ಎಂದುಕೊಂಡು ನಗುತ್ತಾ ರಾಘಣ್ಣನ ಕಡೆ ನೋಡಿದೆ… ರಾಘಣ್ಣ ನಗ್ತಿದ್ದ..ನಂತರ ಹೇಳಿದ…
“ಅಯ್ಯೋ ಆಜಾದು, ನೀನು ಫೈಲ್ ಆಗೋದು ಅಂದ್ರೇನು…?? ಫಸ್ಟ್ ಕ್ಲಾಸಲ್ಲಿ ಪಾಸಾಗಿದ್ದೀಯ… ಕೊನೆಲಿದೆ ಅಂದ್ಕೊಂಡಿದ್ದೀಯಾ.. ಅದನ್ನ ಹೋಗಿ ಹೆಚ ಮ್ ನ ಕೇಳು… ಅದೇನೋ ಕನ್ನಡ ಮೀಡಿಯಂ ಮೊದಲು ಆಮೇಲೆ ನಿಮ್ಮ ಇಂಗ್ಲೀಷ್ ಮೀಡಿಯಂ ನಂಬರು ಅಂತ ಹೇಳ್ತಿದ್ರು ಹೆಚ್.ಎಮ್ಮೂ ಎಂದ ನಗುತ್ತಾ.
ಆಫೀಸ್ ರೂಮಿನಲ್ಲಿ ಆಗಲೇ ಇಬ್ಬರು ಕನ್ನಡ ಮೀಡಿಯಂ ನವರು ಮೂವರು ಇಂಗ್ಲೀಷ್ ಮೀಡಿಯಮ್ಮಿನವರು ಹೆಚ್ ಎಮ್ ಹತ್ರ ಮಾತನಾಡ್ತಿದ್ರು.
ನನ್ನ ನೋಡಿ… ಹೆಚ್ ಎಮ್… “ಬಾರಪ್ಪಾ, ಸ್ಕೂಲಿಗೆ ಕನ್ನಡ ಮೀಡಿಯಮ್ಮೇ ಫಸ್ಟೂ…, ಎಂದರು ನನ್ನ ಮುಖ ನೋಡ್ತಾ.., ಆದರೆ ಮಿಕ್ಕ ನಂತರದ ನಾಲಕ್ಕೂ ಇಂಗ್ಲೀಷ್ ಮೀಡಿಯಮ್ ನವ್ರದ್ದು.. ನಿನ್ನದು ಓವರ್ ಆಲ್ ಮೂರನೇ ಸ್ಥಾನ .ಅಂದ್ರು…”
ಮನಸಿಗೆ ಸಮಾಧಾನ ಆಯ್ತು… ಪಕ್ಕದಲ್ಲೇ ಇದ್ದ, ಬಸ್ಯ, ಸೀನರನ್ನ ತಬ್ಬಿಕೊಳ್ಳುತ್ತಾ ಕಂಗ್ರಾಟ್ಸ್ ಕಣ್ರೋ ಅಂದೆ…
ಹೆಚ್. ಎಮ್.. ಅಲ್ಲ ಕಣೋ ಬಸ್ಯ ಕನ್ನಡ ಮೀಡಿಯಮ್ಮು ನಿನಗೆ ಗೊತ್ತಾಗೋಯ್ತು, ಸೀನ ಸೆಕೆಂಡ್ ಅಂತ ಹ್ಯಾಗ್ ಗೊತ್ತಾಯ್ತು..? ಅಂದರು…
ಪೈಪೋಟಿ ಮೊದ್ಲಿಂದ್ಲೂ ನನಗೂ ಅವನಿಗೂ ಅಲ್ವೇ ಸರ್ ಇದ್ದದ್ದು ಎಂದೆ…
“ಹೌದು ನೋಡು, ನೀನು ಸ್ಕೂಲ್ ಯೂನಿಯನ್ನು, ಡಿಬೇಟು, ನಾಟಕ ಅಂತ ಹೋಗದೇ ಇದ್ದಿದ್ರೆ, ಫಸ್ಟ್ ನೀನೇ ಆಗ್ತಿದ್ದೆ.., ಏನಾದರೂ ಪಡೀಬೇಕು ಅಂದ್ರೆ ಏನಾದರೂ ಕಳ್ಕೊಳ್ಳಲೇ ಬೇಕು. ಅಲ್ವಾ?? ಎಂದರು.
ಹೌದು ಸರ್ ಎನ್ನುತ್ತಾ ರಿಸಲ್ಟ್ ನ ಪೂರ್ತಿ ವಿವರಗಳನ್ನು ಚರ್ಚಿಸಿ ಆಫೀಸ್ ರೂಮಿಂದ ಹೊರಬರುತ್ತಿದ್ದಂತೆ, ಸಿಬ್ಭಂದಿ ಸಿಹಿ ಕೊಡಿಸಿ ಅಂತ ಎರಡನೇ ಲಿಸ್ಟ್ ನ ನಮ್ಮೆಲ್ಲರನ್ನ ಸುತ್ತುವರೆದರು.. ಅಲ್ಲಿಯೇ ಇದ್ದ ಶಾಮ್ ಸ್ವೀಟ್ಸ್ ನಿಂದ ಬೂಂದಿ ಲಡ್ಡು, ಖಾರಸೇವೆ ತರಿಸಿ ಹಂಚಿದೆವು, ಹಾಗೆಯೇ ಸ್ವಲ್ಪ ಹೊತ್ತು ಮಾತನಾಡಿ ಊರ ಕಡೆ ಹೊರಟೆವು.
ಸಿಂಗೂರಿನ ಎಲ್ಲೆ ದಾಟಿರಲಿಲ್ಲ, ಚಂದ್ರಿ ರಿಸಲ್ಟ್ ವಿಷಯ ನೆನಪಾಯ್ತು… ಅರೆ ನೋಡಲೇ ಇಲ್ವಲ್ಲಾ…!!
ವಾಪಸ್ಸಾದೆ ಸ್ಕೂಲಿಗೆ ಮತ್ತೆ, ಹೊರಟೆ ನೋಟೀಸ್ ಬೋರ್ಡಿನತ್ತ..  ಪುಟ್ಟ ಲಿಸ್ಟಲ್ಲಿ ಅವಳ ಹೆಸರಿಲ್ಲ ಎನ್ನುವುದು ಈಗಾಗಲೇ ಖಚಿತ ಆಗಿತ್ತು. ಹಾಗಾಗಿ ಉದ್ದನೆಯ ಲಿಸ್ಟ್ ನೋಡಿದೆ.. ನನ್ನ ನಂಬರಿನ ನಂತರದ ಮೂರನೇ ನಂಬರೇ ಚಂದ್ರಿದು…
ಇಲ್ಲ.. ಮತ್ತೆ ನೋಡಿದೆ…ಇಲ್ಲ…!!!
ಖಾತರಿ ಮಾಡಿಕೊಳ್ಳಬೇಕು ಅಂತ ಜೇಬಿನಲ್ಲಿದ್ದ ಸುಂದರಕ್ಕ (ಚಂದ್ರಿ ಅಮ್ಮ) ಕೊಟ್ಟ ಚೀಟಿಯನ್ನ ನೋಡಿದೆ.. ಹೌದು ಅದೇ ನಂಬರ್.. ಆದರೆ ನೋಟೀಸ್ ಬೋರ್ಡಿನ ಮೇಲೆ ಇಲ್ಲ…!!!
ಹೆಚ್ ಎಮ್ ಹತ್ರ ಹೋದೆ, ಕೇಳೋಣ ಅಂತ..
ನನ್ನ ನೋಡಿದ ಕೂಡಲೇ ಅವರೇ ಹೇಳಿದರು..”ಆಜಾದ್,  ಚಂದ್ರಮುಖಿ ಫೇಲಾಗಿದ್ದಾಳೆ..ಹೇಗೆ ತಿಳಿಸುತ್ತೀಯೋ ನೋಡು” ಎಂದರು ನನಗೆ ಸವಾಲನ್ನು ವರ್ಗಾಯಿಸುತ್ತಾ. ಚೇರ್ಮನ್ನರೇ ಹೇಳಿದ್ದರಂತೆ ಹಾಗಾಗಿ ಹೆಚ್ ಎಮ್ ಖುದ್ದಾಗಿ ರಿಸಲ್ಟ್ ನೋಡಿದ್ದರು.
ಪೆಚ್ಚಾದೆ, ನಾನೇ ಫೇಲಾದಂತೆ, ಅದರಲ್ಲೂ ಈ ವಿಷಯ ಹೇಗೆ ತಿಳಿಸೋದು…?? ಚಿಂತಿತನಾದೆ..
ಇದೇ ಯೋಚನೆಯಲ್ಲೇ ಊರಕಡೆ ಹೊರಟೆ. ಊರಿನ ಹತ್ತಿರ ಬರುತ್ತಿದ್ದಂತೆ ರಾಮಣ್ಣನ ತೋಟದ ಬಾವಿ ಹತ್ತಿರ ಜನಜಾತ್ರೆ ಸೇರಿತ್ತು.. ವಿಚಾರಿಸಿದೆ, ವಿವೇಕ ಬಾವಿಗೆ ಹಾರ್ಕೊಂಡಿದ್ನಂತೆ… ಈಗಷ್ಟೇ ಊರ ಕಡೆ ಎತ್ಕೊಂಡು ಹೋದ್ರು ಎಂದರು ಅಲ್ಲಿದ್ದವರು.
ನನ್ನ ಚಿಂತೆ ಇನ್ನೂ ಹೆಚ್ಚಾಯ್ತು…ಚಂದ್ರಿ ತುಂಬಾ ಸೂಕ್ಷ್ಮ, ಮೃದು ಮನಸಿನವಳು…ಹೇಗೆ ಹೇಳುವುದು…?? ಬಾವಿ ಹತ್ತಿರ ಸೈಕಲ್ ಇಳಿದವ, ಸೈಕಲ್ ತಳ್ಳಿಕೊಂಡೇ ಯೋಚಿಸುತ್ತಾ ಹೊರಟಿದ್ದೆ…
“ಏನೋ ಆಜಾದು… ಫಸ್ಟ್ ಕ್ಲಾಸಂತೆ…?? ಆಹಾ..ಮಳ್ಳ…ಸ್ವೀಟ್ಸ್ ಕೊಡ್ಸೊಲ್ವಾ..??”
ಅವಳೇ… ತಲೆ ಎತ್ತಿದೆ..ಚಂದ್ರಿ…
ಅಲ್ಲ ಕಣೇ, ನೀನೆಲ್ಲಿಂದ ಬರ್ತಿದ್ದೀಯಾ,..? ಯಾಕೆ ರಿಸಲ್ಟ್ ನೋಡೋಕೆ ಬರ್ಲಿಲ್ಲ…?? ಅಂದೆ, ಅವಳ ನಗುಮುಖ ನೋಡಿ ಧೈರ್ಯ ಬಂದಿತ್ತು…ಅದೇ ಧೈರ್ಯದಲ್ಲೇ..ನಿನ್ನ ರಿಸಲ್ಟು ಡಮಾರ್ ಗೊತ್ತಾ..??” ಅಂದೆ… ಅಯ್ಯೋ..ನೇರವಾಗಿ ಹೇಳಿಬಿಟ್ನಲ್ಲಾ ..!! ಎಂದುಕೊಳ್ಳುತ್ತಿದ್ದಂತೆ… ಅವಳೇ..
“ಅಯ್ಯೋ ನನಗೆ ಗೊತ್ತಿತ್ತು ಕಣೋ.. ಎಕ್ಸಾಮ್ ಟಫ್ ಆಗಿದ್ದು ನೋಡೀನೇ ನನಗೆ ಡೌಟಾಯ್ತು..ಅದರ ಮೇಲೆ ಕಳೆದ ಸಲಕ್ಕಿಂತ ನಮ್ಮ ಸ್ಕೂಲಿನ ರಿಸಲ್ಟ್ 15% ಕಡಿಮೆ ಅಂತ ಅಪ್ಪ ಹೇಳ್ತಿದ್ದ..ಅಲ್ಲಿಗೆ ನನ್ನ ಹಣೆ ಬರಹ ಏನಿರಬಹುದು ಅಂತ ಗೆಸ್ ಮಾಡಿದೆ…ನಿನ್ನ ಡಲ್ ಮುಖ ನೋಡಿ ಕನ್ಫರ್ಮ್ ಆಯ್ತು” ಅಂದಳು…ಏನೂ ಆಗಿಲ್ಲವೇನೋ ಎನ್ನುವಂತೆ..
“ಆ ವಿವೇಕನ  ವಿವೇಕ ಎಲ್ಲಿ ಹೋಗಿತ್ತು, ಅಲ್ಲ ಫೇಲಾದ ಅಂತ ಬಾವಿಗೆ ಹಾರೋದಾ..?” ಎಲ್ಲಾ ಸಬ್ಜೆಕ್ಟಲ್ಲೂ 50-60 ತಗಂಡವನು ಮ್ಯಾತ್ಸಲ್ಲಿ ಮಾತ್ರ 26ಅಂತೆ…ಅಲ್ಲ, ಅಷ್ಟೂ ಯೋಚನೆ ಮಾಡೋದು ಬೇಡ್ವಾ? ಅವನು ಮ್ಯಾತ್ಸಲ್ಲೇ ಸ್ಟ್ರಾಂಗೂ.. ಹಾಗಿದ್ದೂ 26 ಅಂದ್ರೆ ಏನೋ ಎಡವಟ್ ಇರ್ಬೇಕೂ ಅಂತ….” ಎಂದಳು..ಅವಳ ಮುಖದಲ್ಲಿ ವಿವೇಕನ ಅವಿವೇಕಕ್ಕೆ ಬೇಸರವಿತ್ತೇ ಹೊರತು ತಾನು ಫೇಲಾದ ಬಗ್ಗೆ ಎಳ್ಳಷ್ಟೂ ಚಿಂತೆ ಇರಲಿಲ್ಲ. ಭೇಷ್ ಚಂದ್ರಿ ಎಂದುಕೊಂಡೆ…
“ಆಯ್ತು ಕಣೋ ..ಮತ್ತೆ ಮನೆ ಹತ್ರ ಬಾ… ಸ್ವೀಟ್ ತಗೊಂಡು… ಮರೀಬೇಡ..” ಎನ್ನುತ್ತಾ ತನ್ನ ಮನೆಯ ಹಿತ್ತಲ ಹಾದಿ ಹಿಡಿದಳು.
ರಜೆಯ ಸಮಯದಲ್ಲಿ ಅಕ್ಕನ ಊರಿಗೆ ಹೋಗಿ ಬಂದಾಗ ವಿವೇಕ ಸಿಕ್ಕ, ಅವನ ಅವಿವೇಕದ ಬಗ್ಗೆ ಬೈಯ್ತಾ..”ಥೂ ನಿನ್ನ ಫೇಲಾದ್ರೆ ಜೀವನವನ್ನೇ ಫೇಲ್ಮಾಡದಕೊಳ್ಳೋಕೆ ಹೋಗೋದಾ… ಅದು ಕೇವಲ ಪರೀಕ್ಷೆ ಫಲಿತಾಂಶ ಕಣೋ, ಜೀವನದ್ದಲ್ಲ” ಎಂದೆ.

ನಗುತ್ತಾ ವಿವೇಕ, “ಸಾರಿ ಕಣೋ ಆಜಾದು, ಆ ಸಮಯದಲ್ಲಿ ಧೈರ್ಯ ಕಳಕೊಂಡೆ… ಆ ಮೇಲೆ ರೀ ಟೋಟಲಿಂಗ್ ಮಾಡಿದಾಗ ಟೈಪಿಂಗ್ ಮಿಸ್ಟೇಕ್ ನಿಂದ 62 ಎಂದು ಇದ್ದದ್ದು 26 ಆಗಿತ್ತು ಅಂತ ರಿಪೋರ್ಟ್ ಬಂದಿದೆ, ಈಗ ನಾನೂ ಕಾಲೇಜ್ ಸೇರ್ತೀನಿ”  ಎಂದ.