Friday, August 13, 2010

ಜಲನಯನ – ಸಾಫ್ಟಿಂದ ಹಾರ್ಡಿಗೆ,


ಮೀನು - ಜಲಜಾಕ್ಷಿ, ಮೀನಾಕ್ಷಿ ಚಂಚಲಾಕ್ಷಿ ಎಲ್ಲಾ...ಅದರ ಜೊತೆಗೆ ಪ್ರವೃತ್ತಿ ಜೊತೆ ವೃತ್ತಿಯ ಬೆಸುಗೆ..ಇದಕೆ ಸೂಕ್ತ ವೆನಿಸಿದ ಹೆಸರೇ – ಜಲನಯನ. ಮೊದಲಿಗೆ ಬ್ಲಾಗಿನಲ್ಲಿ ಹಲವರು “ಜಲಾನಯನ” ಎಂದೇ ಕಾಮೆಂತಿಸಿದರು...ಕೆಲವರು "ಜಲನಯನ” ಮೇಡಂ ಎಂದರು..ಒಂದು ರೀತಿ ಲಿಂಗ ಪರಿವರ್ತನೆಯನ್ನೂ ಮಾಡಿದರು ಎಂದರೂ ತಪ್ಪಲ್ಲ...!!!ಕವನ – ನೀಳ್ಗವನ, ಇಡಿಗವನ, ಮಿಡಿಗವನ, ಹನಿಗವನ, ಚುಟುಕ, ನ್ಯಾನೋ ಹೀಗೆ..ಏನೇನೊ ತರ್ಲೆ ಸಹಾ ಮಾಡಿದ್ದುಂಟು ಈ –ಜಲನಯನ. ಅದನ್ನು ಸಾಫ್ಟಲ್ಲಿ ನೋಡಿ..ಬೆನ್ನು ತಟ್ಟಿ ಈಜು ಇನ್ನೂ ದೂರ ದೂರಕೆ ಬೆಳೆಯಲಿ ನಿನ್ನ ಪಯಣ ಎಂದಿರಿ, ಬೆನ್ತಟ್ಟಿದಿರಿ...ಪ್ರೋತ್ಸಾಹಿಸಿದಿರಿ...ಅನಿಸಿದ್ದೂ ಉಂಟು “ಓಹ್ ಕಂಡಿಲ್ಲ ನೋಡಿಲ್ಲ ..ಏನಿದು ನಂಟು..?”ನನ್ನ ಬ್ಲಾಗ್ ಲೋಕಕ್ಕೆ ವಸ್ತುತಃ ಕೊಂಡು ಬಂದ ಶ್ರೇಯ ಸುಗುಣಾ ಮಹೇಶ್ ಗೆ ಸೇರಬೇಕು.. ಇದು ಒಬ್ಬರೇ..ಇಬ್ಬರೇ..ಇಬ್ಬರಾದ ಒಬ್ಬರೇ..? ಒಬ್ಬರಾದ ಇಬ್ಬರೇ...ಓಫ್ ..ಏನಿದು ಕಂಫ್ಯೂಶನ್?!! ಎನ್ನಬೇಡಿ..ನನಗೂ ಹಾಗೇ ಅನಿಸಿತ್ತು ಆಗ. ಬ್ಲಾಗಲ್ಲಿ ಬ್ಲಾಗಿಸುತ್ತಾ ಸಾಗಿದ ಜಲನಯನಕ್ಕೆ ಜೊತೆಯಾದದ್ದು “ಭಾವಮಂಥನ” ಮತ್ತು “Science & share” ಬ್ಲಾಗ್ ಸೋದರಿಯರು. ಬ್ಲಾಗ್ ಪೋಸ್ಟ್ ಗಳ ಶತಕ ಬಾರಿಸಿದ ’ಜಲನಯನ’ ವನ್ನು ಸಾಫ್ಟ್ ನಿಂದ ಹಾರ್ಡ್ ಗೆ ತರುವ ಯೋಚನೆ ನನಗೆ ಬರಲು ಕಾರಣ ನಮ್ಮ ಮಿತ್ರರಾದ ಪ್ರಕಾಶ್ ಮತ್ತು ಶಿವು. ಅವರ ಪುಸ್ತಕಗಳ ಬಿಡುಗಡೆಯಿಂದ ಪ್ರೇರಿತನಾಗಿ...ಅವರ ಮಟ್ಟದ ಲೇಖಕ-ಬ್ಲಾಗಿ ಅಲ್ಲದಿದ್ದರೂ ಅವರ ಪ್ರೋತ್ಸಾಹದಿಂದ ಜಲನಯನದ ಕವನಗಳ ಸಂಕಲನವನ್ನು ಮುದ್ರಿತ ರೂಪದಲ್ಲಿ ತರಬೇಕೆಂಬ ಹಂಬಲ ಬಲಿಯಿತು. ಪರಿಣಾಮ....ಇದೇ ಆಗಸ್ಟ್ ೨೨ ರಂದು ಕನ್ನಡ ಭವನ (ರವೀಂದ್ರ ಕಲಾಕ್ಷೇತ್ರದ ಬಳಿ) ದಲ್ಲಿ ನನ್ನ ಚೊಚ್ಚಲ ಕವನ ಸಂಕಲನ “ಜಲನಯನ” ಹೆಸರಾಂತ ಸಾಹಿತಿ ಚುಟುಕ ಸಾಮ್ರಾಟ್, ಕೃಷಿ ತಜ್ಞ (ಬೆಂಗಳೂರು ಕೃ.ವಿ.ವಿ. ಯಲ್ಲಿ ೩-೪ ವರ್ಷ ನನಗಿಂತ ಹಿರಿಯ ವಿದ್ಯಾರ್ಥಿಯಾಗಿದ್ದವರು) ಎಚ್.ಡುಂಡಿರಾಜ್ ರವರ ಅಮೃತಹಸ್ತದಿಂದ ಬಿಡುಗಡೆಗೊಳ್ಳುತ್ತಿದೆ. ಈ ಮೂಲಕ ನಾನು ಶ್ರೀಎಚ್.ಡುಂಡಿಯವರಿಗೆ ನನ್ನ ಆಭಾರಗಳನ್ನು ವ್ಯಕ್ತಪಡಿಸಿ.. ತಮ್ಮೆಲ್ಲರನ್ನೂ ಈ ಸಮಾರಂಭಕ್ಕೆ ಆಮಂತ್ರಿಸುತ್ತೇನೆ. ನನ್ನ ಜೊತೆಗೆ ನಮ್ಮೆಲ್ಲರ ಮಿತ್ರ ಕೆ.ಶಿವು ಸಹಾ ತಮ್ಮ “ಗುಬ್ಬಿ-ಎಂಜಲು” ಪುಸ್ತಕವನ್ನೂ ಬಿಡುಗಡೆ ಮಾಡುತ್ತಿದ್ದಾರೆ..ಹಾಗಾಗಿ ಜೋಡಿ ಕಾರ್ಯಕ್ರಮಕ್ಕೆ ನಿಮ್ಮೆಲ್ಲರ ಹಾಜರಿ ಮತ್ತು ಪ್ರೋತ್ಸಾಹದ ಬೆಂಬಲ ಕೋರುತ್ತೇವೆ.ಜಲನಯನಕ್ಕೆ ನಯನ ಮನೋಹರ ಮುಖಪುಟದ ವಿನ್ಯಾಸ ಮಾಡಿಕೊಟ್ಟ ಶ್ರೀಮತಿ ಸುಗುಣಾ ಮಹೇಶ್ (ಕುವೈತ್ ನ ನಮ್ಮ ಕನ್ನಡ ಕೂಟದ ಸಹ ಸದಸ್ಯರು) ರವರಿಗೆ ನನ್ನ ಕೃತಜ್ಞತೆಗಳು. ನಮ್ಮ ಹಸ್ತ ಪ್ರತಿಯನ್ನು ಹಸನುಗೊಳಿಸಿ ಭಾಷೆಯನ್ನು ಸರಿಪಡಿಸಿ..ಕರಡು ಮತ್ತು ಮದ್ರಣ-ಸಿದ್ಧಗೊಳಿಸಿದ್ದೇ ಅಲ್ಲದೇ ಆಕರ್ಷಕ ಬೆನ್ನುಡಿಯನ್ನೂ ಬರೆದ ನಮ್ಮೆಲ್ಲರ ಬ್ಲಾಗ್ ಮಿತ್ರ ಬೆಂಗಳೂರಿನ ಡಾ. ಬಿ.ಆರ್.ಸತ್ಯನಾರಾಣರವರ ಸಹಾಯ ಸಹಕಾರಗಳು ಸ್ತುತ್ಯಾರ್ಹ. ಈ ಪುಸ್ತಕಗಳು ಕೆ.ಶಿವುರವರ “ತುಂತುರು” ಪ್ರಕಾಶನದಡಿ ಪ್ರಕಾಶಿತಗೊಳ್ಳುತ್ತಿರುವಿದು ಇನ್ನೊಂದು ವಿಶೇಷ. ಮುಂದೆ ತಮ್ಮ ಕೃತಿಗಳನ್ನು ಮುದ್ರಿಸಿ ಪ್ರಕಾಶಿಸಲು ಇಚ್ಛಿಸುವ ನಮ್ಮ ಮಿತ್ರರಿಗೆ ಶಿವುರವರ ತುಂತುರು ಪ್ರಕಾಶನ ಸಹಾಯಕವಾಗುವುದರಲ್ಲಿ ಸಂಶಯವಿಲ್ಲ.

ವಿಶೇಷ ಸೂಚನೆ: ನಮ್ಮ ಕಾರ್ಯಕ್ರಮದ ನಂತರ ನಾವು ಕೈಗೊಳ್ಳಬೇಕೆಂದುಕೊಂಡಿದ್ದ ಬ್ಲಾಗಿಗರ ಸಮಾವೇಶದ ಬಗ್ಗೆ ಹಿರಿಯ ಬ್ಲಾಗಿಗರ ಜೊತೆ ನಾವೆಲ್ಲ ಸೇರಿ ಒಂದು ವಿಚಾರ ಮಂಥನದ ಕಾರ್ಯಕ್ರಮದ ಯೋಚನೆಯನ್ನೂ ನಮ್ಮ ಹಿರಿಯ ಬ್ಲಾಗಿಗಳು ಹೊಂದಿದ್ದಾರೆ. ಇದನ್ನು ಗಮನದಲ್ಲಿಟ್ಟು ಹೆಚ್ಚು ಹೆಚ್ಚು ಬ್ಲಾಗಿಗರು ಕಾರ್ಯಕ್ರಮಕ್ಕೆ ಆಗಮಿಸಬೇಕಾಗಿ ಕೋರಿಕೆ.