Friday, October 22, 2010

ಶತ ವಿಕ್ರಮನ – ಅಸಹಾಯಕತೆ ಯೋ ಅಪ್ರಬುಧ್ಧತೆಯೋ

(ಚಿತ್ರ ಕೃಪೆ: ಚಂದಮಾಮ ಅಂತರ್ಜಾಲ) 

ಕಪಿಲಾಪುರದ ಕಥೆಯಾಕೋ ಈ ಮಧ್ಯೆ ಇಡೀ ಭೂಭಾಗದಲ್ಲಿ ನಗೆಪಾಟಲಾಗತೊಡಗಿತ್ತು...ಪ್ರಜೆಗಳು ಕಪಿಲಾಪುರ ಏಕೆ ಹೀಗೆ ದಿಕ್ಕಿಲ್ಲದೆ ನಡೆಯುತ್ತಿದೆ ? ತಿಳಿಯದಾಗಿತ್ತು. ಭೇತಾಳನ ಬೆನ್ನಹಿಂದೆ ಬಿದ್ದಿದ್ದ ಶತವಿಕ್ರಮ ಯಾಕೋ ಕಿಂಕರ್ತವ್ಯ ಮೂಢನಾಗಿದ್ದಾನೆ...ಪುರಕ್ಕೆ ಹಿಡಿದ ಭೂತವನ್ನು ಬಿಡಿಸೋದೋ..ಪುರವನ್ನು ಕಾಡುತ್ತಿದ್ದ ಪಾಳೆಯಗಾರರನ್ನು ನಿಗ್ರಹಿಸೋದೋ..ಹದಗೆಟ್ಟ ರಸ್ತೆಗಳಲ್ಲಿ ನಾರುವ ಕೊಳೆಯ ಬಗ್ಗೆ ತಲೆ ಕೆಡಿಸಿಕೊಳ್ಳುವುದೋ..ತನ್ನ ಕೋಟೆಯನ್ನು ಕಾಯುವ ಕೊತ್ವಾಲರ ಸ್ವಯಂಘೋಷಿತ ಸ್ವಾಯತ್ವಕ್ಕೆ ಸವಾಲಾಗಿ ಅವರನ್ನು ನಿಯಂತ್ರಿಸುವುದೋ,,,,ಹೋ,,,!!!  confusionnoo…
ಆದ್ರೂ ಶತ ವಿಕ್ರಮ ಭೇತಾಳನ್ನು ಹುಡುಕಲು ಹೊರಟೇಬಿಟ್ಟ.... ಮರಗಳೇ ಇಲ್ಲವಾಗಿವೆ...ಸರಿಯಾಗಿ ಮಳೆಕಾಣದೆ..ಬೀಡು ಮರಳುಗಾಡಾಗಿದೆ....ಭೂಮಿ ಅಗೆದು ಧೂಳೆಬ್ಬಿಸಿದ ಬಂಡವಾಳಶಾಹಿ ಭೂ ಕೊರೆತ ಧಣಿಗಳು ನಿರಂಕುಶರಾಗಿದ್ದಾರೆ...ಹೆಚ್ಚು ಹೇಳಿದ್ರೆ.. “ಲೋ ದಾಸಯ್ಯ ನಿನ್ನ ಹರಿಕಥೆ ಸುಮ್ನೆ ಮುಂದುವರೆಸ್ತೀಯೋ ಇಲ್ಲ ನಿನ್ನ ಕಾಲಕೆಳಗಿರೋ ಕಂಬಳೀನ ನಿನಗೆ ಕೊಟ್ಟದ್ದನ್ನ ಮತ್ತೆ ಪರಿಶೀಲಿಸಿ ಅದನ್ನ ಎಳೀಯೋದೋ ಹೇಳು” ಅಂತ ಧಮ್ಕಿ ಹಾಕ್ತಾರೆ....

ಶತವಿಕ್ರಮನಿಗೆ ಈಗ ಪೀಕಲಾಟಕ್ಕೆ ಇಟ್ಕೊಳ್ತು...ಅವನ ರಾಜ್ಯದ ಮರಗಳೆಲ್ಲ ಬೋಳಾಗೋಕೆ ಶುರುಹಚ್ಚಿದ್ವು, ಭೂಮಿ ಟೊಳ್ಳಾಗುತ್ತಿತ್ತು, ಬಿಟ್ರೆ ಭೇತಾಳ ಬಂದು ಸಿಂಹಾಸನಾನ ಆವ್ರಿಸ್ಕೊಂಡು ಮುಂದಿನ ಶತವಿಕ್ರಮನಾಗಿಬಿಡ್ತಾನೆ...ಏನು ಮಾಡೋದು..? ಎಲ್ಲಿ ಈ ಭೇತಾಳ....?

ತಾನು ಆಸೆ ಆಮಿಷ ಒಡ್ಡಿ, ಜನರು ತಮ್ಮಲ್ಲೇ ಹೊಡೆದಾಡಿ ಪ್ರಾಣಹಾನಿ ಮಾಡಿಕೊಂಡು ಚುನಾಯಿಸಿ ಕಳುಹಿಸಿದ ವಿರೋಧಪಕ್ಷದವರನ್ನ ರಾಜಿನಾಮೆ ಕೊಡಿಸಿ.....ಅಲ್ಲಿ ಅವನನ್ನೋ ಅಥವಾ ಇನ್ನೊಬ್ಬನ್ನನ್ನೋ ಹಣ ಚೆಲ್ಲಿ ಮತ್ತೆ ಗೆಲ್ಲಿಸಿ ತನ್ನ ಪಕ್ಷದ ಬಲ ಹೆಚ್ಚಿಸ್ಕೊಂಡ್ರೆ......ಈಗ ಪಕ್ಷದವರೇ ಗುಂಪಾಗಿ ಗುಳೆ ಹೋಗಿದ್ದಾರೆ...ನನ್ನ ಆಸ್ಥಾನ ಸೌಧದ ಸುತ್ತ ಮಾಟ ಮಂತ್ರ ನಡೆದಿದೆ...ಇದು ಆ ಭೇತಾಳನ ತಂತ್ರಾನೇ ಇರ್ಬೇಕು...ಎಲ್ಲಿ ಹುಡ್ಕೋದು ಇವನನ್ನ,,,?? ಛೇ...

ಕೊನೆಗೆ, ಲೋಕಪಾಲರ ಅಫೀಸಿನ ಹಳೆಯ ಹಗರಣಗಳ ಧೂಳು ತಿನ್ನುತ್ತಾ ಬಿದ್ದಿದ್ದ ಕಡತಗಳ ಒಂದು ಕೊಠಡಿಯ ಸೀಲಿಂಗ್ ಫ್ಯಾನಿಗೆ ಜೋತು ಬಿದ್ದಿದೆ ಅಂತ ನಂಬಲರ್ಹ ಮೂಲಗಳಿಂದ ತಿಳಿದು ಅಲ್ಲಿಗೆ ಹೋಗಿ ಲೋಕಪಾಲರು ಬರೋಕೆ ಮುಂಚೆ ಅಲ್ಲಿಂದ ಭೇತಾಳನ್ನ ಎತ್ತಿ ಹೆಗಲಿಗೇರಿಸಿ .. ಶಾಶಕರ ಭವನದ ಹಿಂದಿನ ಶವಾಗಾರಕ್ಕೆ ಹೊರಟ....

ರಾಜ್ಯದಲ್ಲಿ ಏನೇ ನಡೆದರೂ ಜಪ್ಪಯ್ಯ ಎನ್ನದ, ಗಣಿ-ಧಣಿ ಎಂಬ ಜೋಡಿ-ಪದ ಕೇಳಿದೊಡನೇ ಕೆರಳಿ ಕೇರಳದ ಸಿಂಹ (ಹಹಹ ಕೇರಳದಲ್ಲಿ...ಸಿಂಹ...ಎಂಥಾ ವಿರೋಧಾಭಾಸ ಎನ್ನಬೇಡಿ...!!) ಆಗುವ ವಿರೋಧ ಪಕ್ಷಗಳಂತೆ ಅಲ್ಲಿವರೆಗೂ ಸುಮ್ಮನಿದ್ದ ಭೇತಾಳ ಮಾತನಾಡತೊಡಗಿತು.

“ಎಲೈ ಶತ ವಿಕ್ರಮ, ...ನಿದ್ದೆ ಮಾಡುತ್ತಿದ್ದ ನಿನಗೆ ಹಾಗೋ ಹೀಗೋ .... ಸಿಂಹಾಸನ ಸಿಕ್ಕಿ ಬಿಡ್ತು....ನಿನ್ನ ಮುತ್ತಜ್ಜ ಇಮ್ಮಡಿ ವಿಕ್ರಮ ಬಹು ಮೇಧಾವಿ ಅವನ ಹೆಸರಿನಿಂದಲೇ ನಿನಗೆ ಈ ಪಟ್ಟವೂ ಹೇಗೋ ಸಿಕ್ತು ..ಆದ್ರೆ ಇದನ್ನು ಉಳಿಸಿಕೊಳ್ಳಲು ಉಳುವವನ ಮನೆ ಬಗ್ಗೆ ಮಾತನಾಡಿ ಈಗ ಅವನ ಬುಡಕ್ಕೇ ನೇಗಿಲು ಹರಿಸಿದ್ದೀಯಾ...ನಿನಗೆ ತರವಲ್ಲ..., ಅಲ್ಲಯ್ಯ ..ರೈತನಿಗೆ ಉಳುವ ಭೂಮಿ ಕೊಡಬೇಕಾದ ನೀನು ಕೊರೆದ ಭೂಮಿ ಕೊಡೋದ್ರಲ್ಲೇ ಇಡೀ ವ್ಯವಸ್ಥೆಯನ್ನ ದಿಕ್ಕಾಪಾಲು ಮಾಡ್ತಿದ್ದೀಯಲ್ಲ ತರವೇ..? ನನಗೆ ಕಥೆ-ಗಿಥೆ ಹೇಳೋ ಮೂಡಿಲ್ಲ... ನಿನ್ನದೇ ಕಥೆಯಿಂದ ಆಯ್ದ ಭಾಗಗಳ ನನ್ನ ಸಂಶಯಗಳ ಕಂತೆಯನ್ನು ನೀನು ನೂರು ಜನ್ಮ ಎತ್ತಿದರೂ ಬಿಡಿಸಲಾರೆ...ಆದ್ರೂ ಕಂತು ಕಂತಿನಲ್ಲೇ ..ಕೇಳು.., ಪ್ರಯತ್ನಿಸು ಉತ್ತರಿಸೋಕೆ....."
ಭೇತಾಳ ವಿರೋಧ ಪಕ್ಷದವರಂತೆ ಸಮಸ್ಯೆ ಬಗೆ ಹರಿಸುವುದರ ಬಗ್ಗೆ ಸಲಹೆ ಕೊಡುವುದನ್ನು ಬಿಟ್ಟು ಪುಃಖಾನು ಪುಃಖ ಪ್ರಶ್ನೆಗಳ ಬಾಣಬಿಡಲಾರಂಭಿಸಿದ.

"ನಿನ್ನ ಕಪಿಲಾಪುರದ ಸಿಂಹಾಸನಾರೂಢನಾಗುವ ಸಮಯದ ನಿನ್ನ ದುಡಿವ ಅನ್ನದಾತನ ಉದ್ಧಾರದ ದೀಕ್ಷೆಗೇಕೆ ತಿಲಾಂಜಲಿ ಕೊಟ್ಟೆ..? ಕಪಿಲಾಪುರದ ಅವ್ಯವಹಾರ ಬಯಲಿಗೆ ತರೋ ಲೋಕಪಾಲನಿಗೆ ಕೇವಲ ಇಲಿ, ಬೆಕ್ಕುಗಳನ್ನು ಹಿಡಿಯುವ ಅಧಿಕಾರ ಕೊಟ್ಟು ತೋಳ ಮತ್ತು ಕಪಟ ನರಿಗಳ ದಂಡಿಸುವ ಹಕ್ಕನ್ನು ಏಕೆ ಕೊಡಲಿಲ್ಲ..? "

"ವಿರೋಧಪಕ್ಷದವರನ್ನು ಆಮಿಷವೊಡ್ಡಿ ನೀನು ಸೆಳೆದದ್ದು ಲೋಕ ನೋಡಿದೆ.., ಅದೇ ಕೆಲಸದ ಕೇವಲ ಒಂದಂಶ ವಿರೋಧಿಗಳು ಮಾಡಿದಾಗ ಏಕೆ ಸಿಡಿಮಿಡಿಯಾದೆ..? ಎಲ್ಲ ದೇವಾನು ದೇವತೆಗಳೂ ಮೀಟಿಂಗ್ ಮಾಡೋ ಮಟ್ಟಕ್ಕೆ ...ದೇವಸ್ಥಾನಗಳ ಸುತ್ತಿಬಿಟ್ಟೆ....??!! ಅಧಿಕಾರ ಹಣಕ್ಕೆ ಆಸೆಪಟ್ಟು ಮತ್ತೆ ಗೆಲ್ಲುವ ಲವಲೇಶವೂ ನಂಬಿಕೆಯೇ ಇರದ ಸದಸ್ಯರನ್ನು ನೀನು ಸೆಳೆದ್ದುದರಲ್ಲಿ ಘನತೆಯೇನೂ ಇಲ್ಲ ..ಆದರೆ ನಿನ್ನವರ ಗುಂಪೊಂದು ಸಿಡಿಯಿತು ಅಂದರೆ ನಿನ್ನ ಆಳ್ವಿಕೆಯಲ್ಲಿ ಏನೋ ಲೋಪವಿದೆಯೆಂದು ಅರಿತರೂ ಮತ್ತೆ ನಿನ್ನ ಹಳೆಯ ಚಾಳಿಗಿಳಿದು...ಈಗಲೇ ನೆಲಕಚ್ಚಿರುವ ನಿನ್ನ ನಾಡಿನ ಘನತೆ ಪ್ರಜೆಗಳ ಆಶಯವನ್ನು ಪಾತಾಳಕ್ಕೆ ತುಳಿಯುವುದು ನ್ಯಾಯವೇ..??......

ಇದನ್ನು ತಿಳಿದೂ ನೀನು ಹೇಳದೇ ಹೋದರೆ ನಿನ್ನ ಪಕ್ಷದವರೆಲ್ಲಾ ಗುಂಪು-ಗುಂಪು ಗುಂಪುಗಾರಿಕೆ ಮಾಡಿ ನಿನ್ನ ಆಸ್ಥಾನವನ್ನ ಅಲ್ಲಾಡಿಸಿಬಿಟ್ಟಾರು ಜೋಕೆ,,,,”

ಶತವಿಕ್ರಮನಿಗೆ ರೇಗಿತು...“ನೀನು ಕೇಳಿದ್ದಕ್ಕೆಲ್ಲಾ ಉತ್ತರಕೊಡೋಕೆ ಜವಾಬ್ದಾರಿಯುತ ಅಧಿಕಾರಿಯಲ್ಲ ...ನನ್ನ ರಾಜ್ಯಾಳ್ವಿಕೆಯನ್ನು ಕಾಪಾಡಿಕೊಳ್ಳೋದು ನನಗೆ ಮೊದಲ ಕರ್ತವ್ಯ ಉಳಿದ ಮಿಕ್ಕಿದ್ದೆಲ್ಲ ಗೌಣ,,,,” ಎಂದಾಗ ...

“ಮೂಢ, ನೀನು ಹೀಗೇ ವಿರೋಧಪಕ್ಷಕ್ಕೂ ಉತ್ತರಕೊಡದೇ ಪ್ರಜೆಗಳ ಸಮಸ್ಯೆಗಳನ್ನೂ ಪರಿಹರಿಸದೇ ಉಡಾಫೆಯಲ್ಲೇ ಕಾಲ ಕಳೆ...!! ಈಗ ನೀನು ಮೌನ ಮುರಿದೆ...ಅದಕ್ಕೆ ಇದೋ ನಾನು ಹೊರಟೆ...” ಎನ್ನುತ್ತಾ ಶತವಿಕ್ರಮನ ಹೆಗಲಿಂದ ಮಾಯವಾಯಿತು.

Monday, October 18, 2010

ವಂಡರ್-ಕಣಯ್ಯಾ...ವಂಡರ್ರು...!!!

.

ವಂಡರ್-ಕಣಯ್ಯಾ...ವಂಡರ್ರು...!!!
ಮಗ ಹೇಳ್ದ...”ಅಲ್ಲಪ್ಪ ವೆಂಡರ್ ಕಣ್ಣು...!! “ನಾನಂದೆ “ಹೌದಾ... ??”


“ಹೌದು ವೆಂಡರ್ ಅಂದ್ರೆ ಮಾರಾಟಗಾರ ಅಂತಲ್ಲವಾ..?? ಹಂಗಂದ್ರೆ...??!!”


ಅದೇ ಕಣಯ್ಯ ನಮ್ಮ ಮನೆಗೆ ಪೇಪರ್ ಹಾಕೋ ಶಿವು “ಏನೋ ಬರ್ದಿದ್ದೀನಿ..ಒಂದು ಬುಕ್ಕು....ಓದಿ ಸಾ...ಅದನ್ನೇಯ್ಯಾ ಮೊನ್ನೆ ಬಿಡುಗಡೆ ಮಾಡ್ಸಿದ್ದು..ನಿಮ್ಮನ್ನ ಇನ್ವೈಟ್ ಮಾಡಿದ್ದು...” ಅಂತ ಹೇಳಿದ್ದನಲ್ಲಾ...ಆ ಪುಸ್ತಕಾನೇ...ಹೂಂ ಮತ್ತೆ...


ನಾನು ಯೋಚನೆಮಾಡತೊಡಗಿದೆ......


ಅಲೆ ಇವನಾ..ಅಲ್ಲ ಕಣ್ ಕಣ್ ಬಿಟ್ಕೊಂಡ್ ತಿಂಗಳಾ ತಿಂಗಳಾ ಪೇಪರ್ ದುಡ್ಗೆ ಮನೆ ಹತ್ರ ಬರ್ತಿದ್ದೋನಿಗೆ,,,ಫೋಟೋಗ್ರಫಿ ಪ್ರಶಸ್ತಿ ಬಂದೈತೆ ಅಂದಾಗ .”ಏಯ್..ಏನೋ ಬಿಡು ಯಾರೂ ಇರ್ಲಿಲ್ಲವೇನೋ ಒಳ್ಲೆ ಫೋಟೋಗ್ರಾಫರ್ಸು ಕಾಂಪಿಟೆಶನಲ್ಲಿ” ಅಂದ್ಕೊಂಡೆ...ಆವೊತ್ತು...ಮತ್ತೆ ಅದೇ ಶಿವು..ಇಂಗ್ಲೀಷೋರ್ನೂ ಮೆಚ್ಚಿಸೋ ಹಾಗೆ ಫೋಟೋ ತೆಗ್ದು ಮತ್ತೆ ತಗೊಂಡಾಗ ಪ್ರಶಸ್ತೀನಾ..


ಊಂ...ಏನೋ ಐತಪ್ಪ ಈ ಹುಡ್ಗನ ಹತ್ರ ಪ್ರತಿಭೆ ಥರದ್ದು ಅನ್ಸಿತ್ತು...ಮತ್ತೆ ಮತ್ತೆ ಸುಮಾರು ಪ್ರಶಸ್ತಿ ಬಂದಿದ್ದು ..ನೋಡಿ ಹೌದಪ್ಪ ..!! ಒಪ್ಕೋ ಬೇಕಾದ್ದೇ ಅನ್ನಿಸ್ತು....


ಅದೆಲ್ಲ ಸರಿ ಮೊನ್ನೆ ಮೊನ್ನೆ ಬರಿಯೋಕೆ ಶುರು ಮಾಡಿದ್ದಿನಿ ಅಂದಂಗಿತ್ತು...ಮತ್ತೆ ನೋಡಿದ್ರೆ......... ???


ಡಾ.ದ.ರಾ.ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್[ರಿ], ಧಾರವಾಡ ಇವರು ನೀಡುವ ಬೇಂದ್ರೆ ಗ್ರಂಥ ಬಹುಮಾನ-೨೦೧೦, ಕ್ಕೆ ಕೆ.ಶಿವು ರವರ “ವೆಂಡರ್ ಕಣ್ಣು” ಆಯ್ಕೆಯಾಗಿದೆ


ಅಂತ ಸುದ್ದಿ..ಓದಿ....ಓ...!!!! ತಕಳಪ್ಪಾ...ಇಲ್ಲೂ ಬಾರಿಸ್ಬಿಟ್ಟ ಸಿಕ್ಸರಾ....!!! ಅನ್ಸಿ...ಫೋನಾಯಿಸಿಯೇ ಬಿಟ್ಟೆ...


ನಮಸ್ಕಾರ ಶಿವು (ನನಗೇ ಗೊತ್ತಿಲ್ಲದೇ..ಸ್ವಲ್ಪ ಗಾಂಭೀರ್ಯ ಮತ್ತೆ ಗೌರವ ತುಂಬಿತ್ತು ನನ್ನ ದನಿಯಲ್ಲಿ..!!)..ಅಭಿನಂದನೆಗಳು..ಕಣಪ್ಪಾ.....


ನಮಸ್ಕಾರ ಸಾ...(ಅದೇ ಮುಗ್ಧ ಮುಖ ಕಣ್ಣಮುಂದೆ ಬಂದಿತ್ತು) ಸೈಂಟಿಸ್ಟ್ ರಾಮಣ್ಣನೋರು ಅಲ್ವಾ.. ಎಲ್ಲಾ ನಿಮ್ಮ ಆಶೀರ್ವಾದ ಸಾ...ಏನೋ,, ಬರ್ದೆ..ಅವರಿಗೆ ಇಷ್ಟ ಆಯ್ತು...ಎಲ್ಲಾ ಹಿರಿಯರ ಆಶೀರ್ವಾದ...... ತುಂಬಾ ಥ್ಯಾಂಕ್ಸು ಸಾ ಫೋನ್ ಮಾಡಿದ್ದಕ್ಕೆ ...ನಿಮ್ಮಂತೋರ ಆಶೀರ್ವಾದ ಹೀಗೇ ನಮ್ಮ ಮೇಲೆ ಇರ್ಲಿ ಸಾ...


ಹೌದು..ಸಂಶಯವೇ ಬೇಡ...ಅದೇ..ಶಿವು..ಹಾಗೇ ಇದ್ದಾನೆ...ಅದೇ ವಿನಯ..ಮುಗ್ಧತೆ...ಅನ್ನಿಸಿತು ನನಗೆ ..ಇಲ್ಲಾಂದ್ರೆ..ಒಂದು ಮಾಮೂಲಿ ಬಹುಮಾನ ಬಂದ್ರೆ ಸಾಕು ಈಗಿನ ಯುವಕರ ತಲೆ ಒಂದು ಕಡೆ ನಿಲ್ಲೊಲ್ಲ....


ಆಯ್ತಪ್ಪ..ಶುಭವಾಗಲಿ...ನಿನ್ನ ಕೃಷಿ ಹೀಗೇ ಫಲ ನಿಡ್ತಾ ಇರ್ಲಿ....


ಫೋನಿಟ್ಟೆ.....ಟೇಬಲ್ ಮೇಲೆ ಇಟ್ಟಿದ್ದ ಶಿವು ನ “ವೆಂಡರ್ ಕಣ್ಣು” ಕೈಗೆತ್ತಿಕೊಂಡೆ......


Saturday, October 9, 2010

ತೋರು ನಾಡು ದೇಶ ಏನೆಂದು

ಚಿತ್ರ ಕೃಪೆ: http://www.tailoredtanning.co.uk/vitamind.htm


ನೇಸರನೇರುವತ್ತ ಕತ್ತಲು ಸರಿಯುತಿದೆ
ಎಲ್ಲೋ ಯಾರೋ ಮಲಗಿ ಏಳುವಂತಿದೆ
ಘೋರವರಿತ ಬೆಚ್ಚಿಕನಸ ಕರಗುವಂತಿದೆ
ಎತ್ತಲೆತ್ತಲೋ ಇತ್ತು ಕತ್ತಲುರುಳುವಂತಿದೆ

ಸೂರ್ಯಹೊರಳಲು ಸಾಕು ನರಿ ಊಳಿಡಲು
ತೋಳಗಳ ಹಿಂಡು ಕುರಿದೊಡ್ಡಿಗೆ ನುಸುಳಲು
ನಾಯಿಗಳು ಮಲಗಿವೆ ತಿಂದು ಕವಿದು ಅಮಲು
ತಿಂದ ಧಣಿಗಳು ಮತ್ತೆ ತಿನ್ನಲೆಂದೇ ಬಿಟ್ಟು ಬಿಳಲು

ಕೊಟ್ಟು ಮತ ಆಸೆ ಆಮಿಶವೆಲ್ಲಕೆ ಬಲಿಯಾಗಿ ಅಂದು
ನಿಮ್ಮ ನಿಂತ ನೆಲಕುಸಿಯೆ ಸರಿಯಿಲ್ಲವೇ ಇಂದು?
ವಿದ್ಯೆವಿವೇಕವಿದ್ದೂ ಅವಿವೇಕಿಯ ಗೆಲಲು ಬಿಟ್ಟದ್ದು
ರೈತನ ಕೊಲುವರು ಗಣಿ ಅರಣ್ಯ ದೋಚುವರೆನ್ನುವುದು
ಹೊಣೆಗೇಡಿತನಕ್ಕೆಡೆಯಿಲ್ಲ ಅಳುವುದು ಸಲ್ಲ, ಬಿದ್ದರೆ ಗುದ್ದು

ಏನಿಲ್ಲ ನಮ್ಮಲ್ಲಿ, ಬುದ್ಧಿ, ಶಕ್ತಿ, ನಿಸರ್ಗ ಸಂಪತ್ತು?
ಎಂತಹ ವಿಪತ್ತಿಗೂ ಇದೆ ಎದೆಯೊಡ್ಡುವ ತಾಕತ್ತು
ಎಲ್ಲ ಶಕ್ತಿ ಒಟ್ಟುಗೂಡಿಸುವ ಯೋಜನೆಯೊಂದು ಸಾಕು
ಕತ್ತಲಜೊತೆ ಗುದ್ದಾಟ, ಸಾಕು ನಿರಂತರ ಕಸರತ್ತು
ತಡಬೇಡ ತಿಳಿಯಲಿ ನಾಡು ದೇಶ ಏನೆಂದು ಜಗತ್ತು

Sunday, October 3, 2010

ಆಕಾಶ ಗಂಗೆಯಲ್ಲಿ ಮತ್ತೊಂದು ಭೂಮಿ!!

ಚಿತ್ರ ಕೃಪೆ:ಅಂತರ್ಜಾಲ

“ಗ್ಲೀಜಿ-581 G” ಎಂಬ ಭೂಮಿಯಂತಹ ಗ್ರಹ ಸೌರವ್ಯೂಹದಿಂದ ಸುಮಾರು 20 ಪ್ರಕಾಶವರ್ಷ (ಲೈಟಿಯರ್ಸ್) ದೂರದಲ್ಲಿ ಇದೆಯೆಂದು ದಿನಾಂಕ 29 ಸೆಪ್ಟಂಬರ್ ನ ವಾಶಿಂಗ್ಟನ್ ಪೋಸ್ಟ್ ವರದಿ ಮಾಡಿದೆ. ನಾಶನಲ್ ಸೈನ್ಸ್ ಫೌಂಡೇಶನ್ ನ ಎಡ್ವರ್ಡ್ ಸೀಡೆಲ್ ಪ್ರಕಾರ ಈ ಗ್ರಹ ಜೀವಿಗಳನ್ನು ಹೊಂದಿದೆ ಎನ್ನುವುದು ತಿಳಿದು ಬಂದರೆ ಮಾನವ ಕಂಡು ಹಿಡಿದ ವೈಜ್ಞಾನಿಕ ವಿಸ್ಮಯಗಳಲ್ಲಿ ಇದು ಪ್ರಮುಖವಾಗುತ್ತದೆ. ಈ ಗ್ರಹ ಭೂಮಿಗಿಂತ ಮೂರು ಅಥವಾ ನಾಲ್ಕು ಪಟ್ಟು ಹೆಚ್ಚು ತೂಕವಿದ್ದು ತನ್ನ ಕಕ್ಷೆಯ ಮೇಲೆ ತಿರುಗುವುದು ಬಹುಶಃ ಅನುಮಾನವಾಗಿದೆ ಹಾಗಾಗಿ ಈ ಗ್ರಹದ ಒಂದು ಭಾಗ ಯಾವಾಗಲೂ ಸೂರ್ಯ (ಅಲ್ಲಿನ ಸೂರ್ಯ..ನಮ್ಮ ಸನ್ ಅಲ್ಲ..ಹಹಹ!!!) ನ ಕಡೆ ಇದ್ದು ಬೆಳಕಿರುತ್ತೆ ಮತ್ತೊಂದು ಪಾರ್ಶ್ವ ಕತ್ತಲಲ್ಲಿ...!! ಇದರಿಂದ ಸೂರ್ಯನೆಡೆಯ ಭಾಗದ ಶಾಖ ಸುಮಾರು 160 ಡಿಗ್ರಿ ಸೆಲ್ಸಿಯಸ್ ಇದ್ದು ಕತ್ತಲ ಭಾಗದಲ್ಲಿ -12 ರಿಂದ 21ಡಿ.ಸೆ. ಇರಬಹುದೆಂದು ಅಂದಾಜಿಸಲಾಗಿದೆ. ಗುರುತ್ವಾಕರ್ಷಣ ಶಕ್ತಿಯಿರುವ ಗ್ರಹವಾಗಿದ್ದು ಇಲ್ಲಿ ಘನಭಾಗವಿದ್ದು ಭೂಮಿಯಂತಿರಬಹುದು ಮತ್ತು ನೀರೂ ಇರಬಹುದು ಎಂದು ಅಂದಾಜಿಸಲಾಗಿದೆ. ಇನ್ನೊಂದು ಅಂಶ ಗೊತ್ತೆ...ಈ ಭೂಮಿ ತನ್ನ ಸೂರ್ಯನಿಂದ ಬಹು ಹತ್ತಿರವಿದ್ದು ಅದರ ಸುತ್ತ ಪ್ರದಕ್ಷಿಣೆಗೆ ಕೇವಲ 37 ದಿನ ಬೇಕಾಗುತ್ತೆ..!!! ಅಂದರೆ ಆ ಭೂಮಿಯ ಒಂದು ವರ್ಷ ನಮ್ಮ 37 ದಿನಕ್ಕೆ ಸಮ....!!!!ಈ ಗಾಗಲೇ ನಮ್ಮ ರಾಜ್ಯದ ಹಲವಾರು ಸಹೋದರರು ಅಪ್ಪ-ಮಕ್ಕಳು ತಮ್ಮ ಅಸ್ಟ್ರೋನಾಟ್ ಸೂಟುಗಳನ್ನ ರೆಡಿಮಾಡಿಸ್ಕೋತಾ ಇದ್ದಾರಂತೆ...ಯಾವುದೇ ಭೂ ಕಾಯಿದೆ ಇಲ್ಲ...ಗಣಿ ಕಾಯಿದೆ ಇಲ್ಲ ಎಲ್ಲಾ ಫ್ರೆಶ್ ಫ್ರೆಶ್...ಯಾರಿಗುಂಟು..ಯಾರಿಗಿಲ್ಲ.....ಜೈ-ಗ್ಲೀಜಿ,,,,,

Friday, October 1, 2010

ನನ್ನದೊಂದು ವಿನಂತಿ


ಜಗದ ಜನಕೆ ತೋರಿತೊಂದು ಭಾರತ

ಇತಿಹಾಸವೀಗ ಕನಸಾಗಿತ್ತು ಅವಿರತ

ನಿಸರ್ಗ-ಸಗ್ಗ ಜನಮನವೆನಿಸಿ ಬಹುಹಿತ

ವಿಶ್ವ ಸಕಲಕೆ ಮಾದರಿ ಅಂದು ಭಾರತದಂಡು ಹೊರಟವಂದು ಕಂಡುಕೊಳ್ಳಲು ಮಾರ್ಗ

ಹಿಂಡು ಹಿಂಡಾಯ್ತು ಬಂಡುಕೋರರಿಗೂ ಸ್ವರ್ಗ

ಸಾಗರದಾಟಿ ಬಂದು ಮಾರ್ಗ ಹುಡುಕಲು ಹುಮ್ಮಸ್ಸು

ಅಲೆಯಮೇಲಲೆದು ದಾರಿತಪ್ಪಿದನಂದು ಕೊಲಂಬಸ್ಸುಸಿಂಧೂ ಕಣಿವೆಯಲ್ಲಿ ಮೆರೆದಿತ್ತು ನಾಗರೀಕತೆ

ಗಂಗಾತೀರ, ಗೋದಾವರಿ ಕೃಷ್ಣೆ ಕಾವೇರಿ ಗೀತೆ

ಎಲ್ಲೆಲ್ಲೂ ನಾಡರಸರು ತುಂಬಿತ್ತೆಲ್ಲೆಡೆ ಮಂದಹಾಸ

ಜನಮನ ಜೀವನದಲ್ಲಿತ್ತು ಕಂಡರಿಯದ ಸಂತಸಹಿಮಾಲ ಮೆಟ್ಟಿಬಂದ ದಾಳಿಕೋರರು ಹಲವರು

ಬಂದು ನೆಲಸಿ ನಾಡಲೊಂದಾದ ಕೆಲ ಅರಸರು

ಬಂದನಾಗ ದಾರಿತೋರಿ ದಕ್ಕನಿಗೆ ವಾಸ್ಕೋಡಗಾಮ

ವೈಮನಸ್ಯ ಬೀಜ ಬಿತ್ತಿ ನಡೆಸಲು ಮಾರಣಹೋಮ


ನಮ್ಮ-ನಮ್ಮಲ್ಲೇ ಕಿತ್ತಾಟ ತಕ್ಕಡಿ ಹಿಡಿದವಗೆ ಜುಟ್ಟು

ಎತ್ತಿ ಕಟ್ಟಿದವ, ಆಮಿಶಗೊಂಡು ಕೊಟ್ಟೆವವಗೆ ಜುಟ್ಟು

ಐನೂರು ವರ್ಷ ಸತತ ಕೊಳ್ಳೆ, ಬರಿದಾಯ್ತು ತುಂಬು ಕಣಜ

ಸ್ವಾತಂತ್ರ್ಯಕೊಟ್ಟರು ಕಂಡು ಎಲ್ಲೆಡೆ ತಹತಹಿಸುವ ಮನುಜ


ಈಗ ಹಿಡಿದಿಹರು ನಮ್ಮವರೇ ನಮ್ಮ ಜುಟ್ಟು

ನಾಡ ಸಂಪದ ಮಾಡಿ ಸ್ವಂತ ಉಳಿಸಿ ಹೊಟ್ಟು

ಪರಕೀಯರಿಗಿಂತ ಕೀಳು ತಂದಿಡುವರು ನಮ್ಮಲ್ಲೇ

ಮತ-ಜಾತಿ ಗಲಭೆ ಅವರ ಬೇಳೆ ಬೇಯುವುದೂ ಇಲ್ಲೇನ್ಯಾಯಾಲಯ ತೂಗಿಹುದು ಎಲ್ಲರ ಬೇಳೆಯ ಈ ಬಗೆ

ಕೊಟ್ಟು ಬೇಳೆ ಒಬ್ಬಗೆ ಬೇಯಿಸಲು ಇಂಧನ ಮತ್ತೊಬ್ಬಗೆ

ಯುವಜನ-ಜನ ಮೆರೆದಿಹರು ಅಪೂರ್ವ ವಿವೇಚನೆ

ಸೊಪ್ಪು ಹಾಕದೆ ಮನಮುರಿವರ ಮತ್ತೊಂದು ಅಲೋಚನೆಆಶಯ ನನ್ನದು, ಜಗದಲಿ ಮೆರೆವ ಶಕ್ತಿಯ ದೇಶ

ವಿವೇಚನೆ ಮತ್ತೂ ಪ್ರಖರಗೊಳ್ಳಲಿ ಬೆಳಗುಪ್ರಕಾಶ

ಆಗಲೊಂದೇ ಧ್ಯೇಯ ದೇಶದ ಬಹುಮುಖ ಪ್ರಗತಿ

ನಡೆಯಲೊಂದೇ ನ್ಯಾಯ, ಎಲ್ಲರ ಸುಖದ ಭಾರತಿ