Tuesday, December 29, 2009

ಬಾಷ್ಪಾಂಜಲಿ-ವಿಷ್ಣುಗೆ



ವಿಷ್ಣುವಾಗಿ ನಟನೆಯಲ್ಲಿ ಮೇರು ಸಂಪತ್
ಭಾವಕ್ಕೆ ಗೀತೆಕೊಟ್ಟು ಅವಿಸ್ಮರಣೀಯ ಅಶ್ವಥ್
ಒಂದೇ ದಿನದಂತರದಲ್ಲಿ ಎಂತಹ ನೋವು ಕಲೆಗೆ
ಎರಡು ಅಮೂಲ್ಯ ಪುತ್ರರತ್ನಗಳ ನಷ್ಟ ನಾಡಿಗೆ.

ಛಲ ತೋರಿ ಮಿಂಚಿ ನಟನೆಯಲಿ ಪುಟ್ಟಣ್ಣನ ನಾಗರಹಾವಾಗಿದ್ದು
ದಾರಿತಪ್ಪಿದ ಪಾತ್ರದ ಗಂಧದಗುಡಿಯಲ್ಲಿ ಅಣ್ಣನ ತಮ್ಮನಾಗಿದ್ದು
ಅಮೋಘ ನಟನೆ ದುರಂತ ಕಥೆಗೆ ಜೀವಾಳದ ಬಂಧನವಾದದ್ದು
ಕನ್ನಡ ಕುಲಕೋಟಿಗೆ ಸಾಹಸಿಂಹನಾಗಿ ಆಪ್ತಮಿತ್ರನಾದದ್ದು.

ಅಂದು ಮಾರ್ಪಟ್ಟ ಸಂಪತ್ ಇಂದು ಇಲ್ಲವಾದ ವಿಷ್ಣು
ಮಿತ ನುಡಿ ಹಿತ ನಡೆಯಿಂದ ಟೀಕೆಗೆ ಉತ್ತರಿಸಿದ ವಿಷ್ಣು
ನಾಡ-ನುಡಿಯ ರಕ್ಷಣೆಗೆ ಅಣ್ಣನಜತೆಗೂಡಿದ ವಿನಯಿ ವಿಷ್ಣು
ಎಂತಹ ನೋವು ನಾಡಿಗೆ ಅಶ್ವಥ್ ಹಿಂದೆಯೇ ಹೋದರು ವಿಷ್ಣು.

ಚಿತ್ರರಂಗ ಒಬ್ಬ ಮೇರು ನಟನನ್ನು ಕಳೆದುಕೊಂಡಿರಬಹುದು
ರಂಗದ ನಟರು ಆಪ್ತಮಿತ್ರನನ್ನು ಕಳೆದುಕೊಂಡಿರಬಹುದು
ಆದರೆ ವಿಷ್ಣು ಒಂದು ಗುರುತಾಗಿ ವ್ಯಕ್ತಿ ನಮ್ಮಲ್ಲಿ ಇಲ್ಲ
ನಟನಾಗಿ, ಯಜಮಾನನಾಗಿ ಸಿಂಹದ ಹೂಂಕಾರ ಇನ್ನಿಲ್ಲ.

ಚೇತನ ಹೊರಟಿದೆ ದೇಹ ಬಿಟ್ಟು ಇಹ ಲೋಕವ ತ್ಯಜಿಸಿ
ನೂತನ ಚಿರಂತನವಾಗಲಿ ಜನಿಸಿ ಮತ್ತೊಮ್ಮೆ ಪ್ರವೇಶಿಸಿ
ಕನ್ನಡ ಲೋಕವ, ಸಾರಸ್ವತವ ನಟನಾ ಪ್ರಪಂಚವ
ದೈವನೀಡಲಿ ಕುಟುಂಬಕೆ ಸಾಂತ್ವನ, ಆತ್ಮಕೆ ಸ್ವರ್ಗವ.


ಗಾಯನ ಗಾರುಡಿಗ ಅಶ್ವಥ್ - ಹೃದಯಪೂರ್ವಕ ಶ್ರದ್ಧಾಂಜಲಿ



ನೇಗಿಲಯೋಗಿ - ಕುವೆಂಪು - ಸಿ. ಅಶ್ವಥ್
ನೆಡೆದರೇ ಒಂದು ಚಂದ ಸಾಥ್ -ಸಾಥ್
ಗಾಯನ ಗಾರುಡಿ ಹೊರಡಲು ಕಂಠದಿ
ಸಿ. ಅಶ್ವಥ್ ಬರುವರು ಮನಃ ಪಟಲದಿ
ಕೆ.ಎಸ್.ನ. ಜೀ.ಎಸ್ಸೆಸ್,ಶಿಶುನಾಳ ರಚನೆಗೆ
ಕೋಡಗನ ಕೋಳಿ, ಮೈಸೂರು ಮಲ್ಲಿಗೆ
ಮುಕ್ತ ಕಂಠದಿ ಮನ್ವಂತರಕ್ಕೂ ಹೆಜ್ಜೆ
ಗಾಯನ ಮನದಾಳದಿ ಮಿಡಿವ ಗೆಜ್ಜೆ
ತಪ್ಪು ಮಾಡದವ್ರು ಯಾರವ್ರೇ ? ಹಾಡು
ಬೆಪ್ಪುಗೊಳಿಸಿದ್ದು ತೆರೆದು ನವ ಅಲೆಯ ಜಾಡು
ಅಣ್ಣನಾಗಿ ರೈತ, ಉಳುವಾ ಜೋಗಿಯ ತೋರಿ
ಕಣ್ಣ ತೆರೆಸಿದಾತ ಹಾಡುಗಾರಿಕೆ ಕನ್ನಡಿಗನ ಸಿರಿ
ಸಂಗೀತ ರಚನೆ ಗಾಯನಕೆ ಕೊಟ್ಟರೊಂದು ದಿಶೆ
ಕಲಿಸಿ ನಮ್ಮವರಿಗೇ ಗಾನ ಗಾರುಡಿಯ ನಶೆ
ಹುಟ್ಟುದಿನದಂದೇ ಇಲ್ಲವಾದರು ಅಶ್ವಥ್ ಹೀಗೆ
ಹಾಡಿ ಹೋದರು ಒಂದೇ ಹಾಡು ಹುಟ್ಟುಹಬ್ಬ ಪುಣ್ಯ ತಿಥಿಗೆ