Monday, October 1, 2018

ಒಬ್ಬ ಸಾಲದು -ಬೇಕು ನೂರಾರು



ಒಬ್ಬ ಸಾಲದು -ಬೇಕು ನೂರಾರು

ಬಂದೆ ನೀನಂದು ಒಬ್ಬನೇ, ಅರ್ಧಶತಕೋಟಿಯಿಂದ
ಕೆಂಪುಮುಖಗಳು ಕಪ್ಪಿಟ್ಟವುಗಳ ಮಧ್ಯೆ ಸೂತ್ರಧಾರಿ
ಭರತ ಮಾತೆಯ ಮಕ್ಕಳ ಸಂಸಾರ ಬೆಳೆದಿರಲಿಲ್ಲ,
ನಮ್ಮದೇ ಮನೆಯಲಿ ಅನ್ನವನುಣ್ಣಲು ಇರಲಿಲ್ಲ ದಾರಿ.
ನಮ್ಮಂತೆಯೇ ರಕುತ,ಮಾಂಸ, ಎಲುಬು ಹಂದರ
ಕದಿವ, ಉಣ್ಣುವ ಹೊಗೆಯಾಟದಾಸೆ ನಿನನೂ ಬಿಡಲಿಲ್ಲ
ಬಾಲ್ಯದಿ ಬಲಿತೆ ಬುದ್ಧಿಯ ಕಲಿತೆ ದಾರಿ ತೋರಲು
ನಿನಗೆ ರಂಭಳಂಥ ಆಯಾ ತಾಯಿ-ಗುರು ಸಿಕ್ಕಳಲ್ಲ.
ಸತ್ಯ ಧರ್ಮ, ನ್ಯಾಯ ನೀತಿಗಳೇ ಮೊದಲಕ್ಕರಗಳು
ಈಶ್ವರ ಅಲ್ಲಾ ವೈಷ್ಣವ ಜನತೋ, ನಂಬಿದೆ ಮನುಧರ್ಮ
ಬರಡುನಾಡಲಿ ಬಿತ್ತಿದೆ ಅಸಹಕಾರದ ವಜ್ರಾದಪಿ ಮಂತ್ರ
ಜಡಗಟ್ಟಿದ ಭರತಭೂಮಿಗೂ ಕೊಟ್ಟೆ ಹೋರಾಟದ ಮರ್ಮ
          ಬಿಡಿಸಿ ದಾಸ್ಯಸಂಕೋಲೆ, ತಾಯಿಗೆ ವಿಜಯಮಾಲೆ
          ಬೆಳೆಸಲೋಸುಗ ದೇಶ, ನೀಡಿ ಮರ್ಕಟಗಳಿಗೆ ಮತ
          ಕಾರ್ಕೋಟಕವ ಬೆಳೆದರು ನಿನ್ನೆತ್ತರ ಹರಿಸಿ ನಿನ್ನವರೇ
          ಸ್ವಾರ್ಥಸಾಧನೆಗೆ ಮತ, ಮಾರಿಕೊಳ್ಳಲು ದೇಶದ ಹಿತ
ಈಗ ಮೀರಿದೆ ಮೂರರ್ಧ ಶತಕೋಟಿ ಜನಸಂಖ್ಯೆ
ಒಬ್ಬ ಮೋಹನದಾಸ ಸಾಲದು ಬರಬೇಕು ನೂರಾರು
ಸರ್ವಧರ್ಮ ಸೋದರಭಾವ ಬಿತ್ತಬೇಕಿದೆ ಬರಡಲ್ಲಿ
ನಾಡು-ನುಡಿ, ದೇಶ-ಪ್ರೇಮ ನಳನಳಿಸುವ ಮುಂಗಾರು