Wednesday, July 28, 2010

ಗೊತ್ತಿಲ್ಲ ಮಗು

(ಚಿತ್ರ ಕೃಪೆ : ಅಂತರ್ಜಾಲ)

ಅಪ್ಪಾ..



ಏನು ಮಗು..?


ಮಳೆಗಾಲ..ಕೆಲವುಕಡೆ ಎಡೆಬಿಡದ ಮಳೆ ಅಂತೆ...


ಹೌದು ಕಣೋ ರೈತರಿಗೆ ನಿರಾಳ..


ಆದ್ರೆ ಅಪ್ಪ?


ಏನು ನಿನ್ನ ರಾಗ?


ಪ್ರತಿ ಸಲವೂ ಗೊಬ್ಬರಗಳಿಗೆ ಪರದಾಟ ತಪ್ಪಿದ್ದಲ್ಲ


ಹೌದು ಕಣೋ ಸರ್ಕಾರ ವ್ಯವಸ್ಥೆ ಮಾಡುತ್ತಲ್ಲಾ..


ಅಲ್ಲಪ್ಪ ಅವರ ತಿಪ್ಪೆ ಇವರು ಇವರ ತಿಪ್ಪೆ ಅವರು ಅಗೆಯುತ್ತಿದ್ದಾರಲ್ಲ


ಸರ್ಕಾರದಲ್ಲಿರೋರಿಗೆ ಇದಕ್ಕೆ ಸಮಯ ಸಿಗುತ್ತಾಪ್ಪಾ..?


ಗೊತ್ತಿಲ್ಲ ಮಗು.






ಅಪ್ಪಾ..


ಮತ್ತಿನ್ನೇನೋ..


ದಂಡಿ ಯಾತ್ರೆ ಅಂದ್ರೆ ಏನಪ್ಪಾ..?


ದಂಡಿ ಅಲ್ಲವೋ ದಾಂಡಿ...ಮಹಾತ್ಮ ಗಾಂಧಿ


ಉಪ್ಪಿಗೆ ಹಾಕಿದ್ದ ಶುಲ್ಕ ವಿರೋಧಿಸಿ ಬ್ರಿಟೀಶರ ವಿರುದ್ಧ ನಡೆಸಿದ್ದ ಪಾದ ಯಾತ್ರೆ


ಹಾಗಾದ್ರೆ ಈಗ ನಮ್ಮ ರಾಜಕಾರಣಿಗಳು ಮಾಡ್ತಿರೋದು


ದಂಡ ಯಾತ್ರೆನಾ ಅಪ್ಪಾ..?


ಗೊತ್ತಿಲ್ಲ ಮಗು






ಅಪ್ಪಾ..ಇನ್ನೊಂದೇ..ಡೌಟು...


ಏನಪ್ಪಾ ಅದು, ಕೇಳು...


ತಿರುಪತಿಗೆ ಹೋದವರು ಬುಂಡೆ ಹೊಡಿಸ್ಕೋತಾರಲ್ಲಾ ಯಾಕೆ?


ಅದು ಅವರ ಹರಕೆ ಆಗಿರುತ್ತೆ ನಮ್ಮ ಪಾಪ ತೊಳಿ ದೇವರೇ ಅಂತ


ಮತ್ತೆ ನಮ್ಮ ಮಂತ್ರಿಗಳೊಬ್ಬರ ಪಾಪ ಹೆಚ್ಚಾಗಿತ್ತ


ಟೀವಿಯಲ್ಲಿ ಬುಂಡೆ ತೋರಿಸ್ಕೊಂಡು ಇದ್ರಲ್ಲಾ..?


ನಂಗೊತ್ತಿಲ್ಲ ಮಗು..






ಇದು ನಿಜವಾಗ್ಲೂ ಕಡೇದು


ಹೇಳು...ಯಾಕಂದ್ರೆ ನೀನು ಕೇಳೋದಕ್ಕಿಂತಾ ಹೇಳೋದೇ ಹೆಚ್ಚು


ಅಲ್ಲಪ್ಪ..ಪಾದ ಯಾತ್ರೆ ಪ್ರತಿಭಟನೆ ರೂಪ ಅಂತಾರಲ್ಲಾ?


ಹೌದು... ಅದೇ ಅಲ್ವಾ ಈಗ ನಡೆದಿರೋದು..


ಮತ್ತೆ ಅದನ್ನ ಪ್ರತಿಭಟಿಸೋಕೆ ಸಮಾರಂಭ ಮಾಡ್ತೀವಿ ಅಂತಾರಲ್ಲ


ಗೊತ್ತಿಲ್ಲ ಮಗು.

Wednesday, July 14, 2010

ಎರಡುಸಾಲು-ನ್ಯಾನೋಗಳು

(ಚಿತ್ರ: ಅಂತರ್ಜಾಲ ಕೃಪೆ)

ಸ್ನೇಹಿತರೇ, ನಿಮ್ಮೆಲ್ಲರ ಅಭಿಮಾನ, ಸ್ನೇಹ ಮತ್ತು ವಿಶ್ವಾಸಕ್ಕೆ ಮಾರುಹೋಗಿರುವ "ಜಲನಯನ" ತನ್ನ ಬ್ಲಾಗ್ ಪೋಸ್ಟ್ ಗಳ ಶತಕವನ್ನು ಈ ಲೇಖನದ (ಹೊಸ ಪ್ರಯೋಗ) ಮೂಲಕ ಪೂರೈಸುತ್ತಿದೆ.



ನೀಳಗವನ, ಇಡಿಗವನ, ಮಿಡಿಗವನ, ಮಿನಿಗವನ, ಚುಟುಕು ಇವೆಲ್ಲದರಂತೆ ...ಎರಡುಸಾಲು-ನ್ಯಾನೋಗಳು ಎಂಬ ಹೊಸ ಪ್ರಯೋಗ (ಗೊತ್ತಿಲ್ಲ ಹೊಸದೋ ಅಥವಾ ನನಗೆ ಹೊಸದೋ ಎಂದು...ಹಹಹ). ಇದರಲ್ಲಿ ಪ್ರತಿಯೊಂದು ನ್ಯಾನೋಗವನದ ಎರಡು ಸಾಲು ಸ್ವತಂತ್ರವಾಗಿದ್ದರೂ ಪೂರ್ಣ ಅರ್ಥ ನೀಡುತ್ತವೆ ಎನ್ನುವುದು ನನ್ನ ಅನಿಸಿಕೆ....ಪ್ರೋತ್ಸಾಹ ..ಮುಂದುವರೆಯುತ್ತದೆಂದು ಆಶಿಸುತ್ತೇನೆ.


ನಿಮ್ಮ ಮುಕ್ತ..(ಚನ್ನಾಗಿಲ್ಲ ಎಂದು ಮುಖದ ಮೇಲೆಯೇ ಹೇಳಿದರೂ ಒಳ್ಳೆಯದೇ...ಯಾಕಂದ್ರೆ ಮತ್ತೆ ಮುಖ ಭಂಗ ಆಗೋ ಸಾಧ್ಯತೆಗಳು ಕಡಿಮೆ ಅಲ್ಲವೇ...?)


ನಿಮ್ಮ - ಜಲನಯನ




ಎರಡುಸಾಲು-ನ್ಯಾನೋಗಳು


ನೋಡವಳಂದಾವ


ಆ ಕಣ್ಣು ಏಕೋ ಏನೋ ಎಂಥಾ ಹೊಳಪು

ಹೃದಯ ಚುಚ್ಚಿಬಿಡುವುದೀ ಬಾಣ ಎಂಥಾ ಚೂಪು




ನಕ್ಕರವಳು ಮುತ್ತಿನಂಥ ಮೋಹಕ ಕೆನ್ನೆಕುಳಿ

ಉರುಳಿಸಲು ಸಾಕು ಅದುವೇ ಖೆಡ್ದದ ಗುಳಿ




ಹುಬ್ಬು ತೀಡಿ ತಂದು ಮುಖಕೆ ಮೆರುಗು

ಕೊಲ್ಲಲೆಂದೇ ಝಳಪು ಬಂತೇ ಆ ಕತ್ತಿಗಲಗು




ನಡೆ, ಜಡೆ ಸೊಂಟ ಬಳಕು ಉಫ್..ಆ ಥಳುಕು

ಅದುರು ಛಳಿಯಲ್ಲೂ ಅದು ಬೆವರಿಳಿಸೋ ಛಳುಕು




ಕಣ್ಣ ಬಾಣ ಬಿಟ್ಟರವಳು..ಎಂಥ ಗುರಿಯೂ ನೆಲಕೆ

ಬಾಯಿತೆರೆದು ನುಡಿಯೆ ನಾಚೀತು ಕೋಗಿಲೆ ಉಲಿಕೆ




ನೀಳಗಪ್ಪು ಬೆನ್ನ ಹಿಂದೆ ಜಾರಿ ಬಿದ್ದ ಹಾವಿನಂಥ ಜಡೆ
ಕೇಶರಾಶಿ ಹರಡಿಕೊಂಡ್ರೆ ಆದೀತು ಅದುವೇ ಕೊಡೆ




ನಾಚಿ ನೀರು ಕೆನ್ನೆಗೆಂಪು ನೆಲವ ಕೆರೆವ ಬೆರಳು

ನನಗಿದು ನಿತ್ಯಸತ್ಯ ನೀನಾಗಬೇಡ ಬೆಪ್ಪೆ ಮರಳು

Thursday, July 8, 2010

ಎಲ್ಲಾ ಮಾಯವೋ

ಕಾಡು..ಕಾಡಿದ್ದು ನಾಡು
ನಾಡು ನೋಡಿದ್ದು ಬೀಡು
ಬೀಡು ಈಗಾಯ್ತು ಮತ್ತೆ ಕಾಡು
ಇಲ್ಲ ಮರ ಗಿಡ, ಹಸಿರು
ತೋರಿ ಎತ್ತರಗಳ ಕಾಂಕ್ರೀಟು ಜಾಡು.

ಕಾಡು, ಎಲ್ಲಿವೆ ನೋಡು
ನೋಡುತ್ತಿರುವಂತೆ ಮಾಯ
ಮರ, ಬಂದವು ಗಿಡ, ಕೃಷಿಗೆ
ಸಾಯೋ ಸ್ಥಿತಿಗೆ ವ್ಯವಸಾಯ.

ಕೆರೆಯಾದವು ಮರೆ,
ತೊರೆ ನೆಲಬಿರಿದಿರೆ
ಒತ್ತುವರಿಕೆ ಸುತ್ತುವರಿದು
ಮಾಫಿಯಾ ಕೊಳ್ಳೆ ಸುಲಿದು.

ಹೊಲ-ಗದ್ದೆ ಮಾರಿ ಮೆದ್ದೆ
ಹಣದಾಸೆ, ಈಗ- ಇಲ್ಲ ಆಹಾರ ನಿದ್ದೆ
ಆಗ ನಿನ್ನ ಕೂಲಿ
ಈಗಾಗಿರುವ ನಿನ್ನದೇ ಸಿರಿಯ ಮಾಲಿ.

ಬಿಡುತ್ತಿಲ್ಲ ಭೂ ಗರ್ಭವನೂ
ಅಗೆದು ಹೊರಹಾಕಿ ಕರುಳನೂ
ಅಯ್ಯೋ ಮರುಳೇ..ಏಕೆ ತೋಡುತಿರುವೆ
ನಿನ್ನವನತಿ ಗೋರಿಯ ಕುಳಿಯನ್ನು ನೀನೇ?

ಈಗಲೂ ಕಾಲ ಮಿಂಚಿಲ್ಲ
ತಾಯವಳು ಮನ್ನಿಸುವಳು ಎಲ್ಲ
ನೆಡು - ಬೆಳೆಯಲಿ ಕಾಡು
ರೈತ-ಕಾರ್ಮಿಕ ಬೆಳಗಲು ನಾಡು
ಅನ್ನ, ಗಾಳಿ, ನೀರಿಗೆ ಬೇಕು ಎಲ್ಲ
ಸತ್ತಾಗ ಕೊಂಡುಹೋಗುವುದೇನಿಲ್ಲ
ದಡಿಮಣ್ಣು ಹಿಡಿ ಬೂದಿ ಕಡೆಗಷ್ಟೇ ಎಲ್ಲಾ