Wednesday, June 27, 2012

ಪುಸ್ತಕವಿದೆ ನೋಡಿರೋ ಅಣ್ಣಗಳಿರಾ.......... ಎನುತಿಹ ಅಪೂರ್ವ ಪುಸ್ತಕ ಪ್ರೇಮಿ ಮಂಡ್ಯ ಜಿಲ್ಲೆಯ ಅಂಕೇಗೌಡರು


ಅಂಕೆಯಿಲ್ಲ ಜ್ಞಾನದಾಹಕೆ
ಸಂಖ್ಯೆಯಿಲ್ಲ ಪುಸ್ತಕವಿಧಕೆ
ಅಂಕೇಗೌಡರಿಗೆ ಸಾಟಿಯಿಲ್ಲ
ಪುಸ್ತಕ ಪ್ರೇಮಿಗೆ ಎದುರಿಲ್ಲ.

ಅಂಕೇಗೌಡರ ಪುಸ್ತಕ ಸಂಗ್ರಹ ಮತ್ತು ಅವರ ಪುಸ್ತಕ ಸಂಗ್ರಹದ ಅಮಿತದಾಹ ನೋಡಿ ನನ್ನ ಮನ ಒಡನೇ ಹೇಳಿದ್ದು ಹೀಗೆ.“ಭೂಮಿಯೆಂದರೆ ಬಾಯ್ಬಿಡುವ ಮಂತ್ರಿ, ಶಾಸಕರೇ ತುಂಬಿರುವ ದೇಶದ ಮತ್ತು ಮಣ್ಣನ್ನೇ ಮಾರಿದವರ ಕಂಡ ಕನ್ನಡನಾಡಲ್ಲಿ ಅದರಲ್ಲೂ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಎಂತಹವರೂ ಕಾಪಾಡಿಕೊಳ್ಳುವ ತನ್ನದೇ ಆದ ೬೦x೪೦ ಸೈಟನ್ನು ಮಾರಿ ಪುಸ್ತಕ ಕೊಂಡವರ ಕಂಡಿರುವಿರಾ?? ಪುಸ್ತಕ ಸಂಗ್ರಹ ದಾಹ ಅಂಕೇಗೌಡರ ಇಂದಿನ “ಪುಸ್ತಕ ಮನೆ” ಯ ಸ್ಥಾಪನೆಗೆ ಕಾರಣ. ಎಲ್ಲ ರಾಜಕಾರಣಿಗಳು ಕೆಟ್ಟವರಲ್ಲ ಎನ್ನುವುದು ನಿಜ, ಅದರಲ್ಲೂ ಸಜ್ಜನಿಕೆ ಮೆರೆವವರೂ ಇದ್ದಾರೆನ್ನುವುದು ಎಲ್ಲವೂ ನಿರಾಶಾದಾಯಕವಲ್ಲ ಎನ್ನುವುದನ್ನು ತೋರಿಸಿ, ಸಕಾರಾತ್ಮಕ ನಿಲುವು ಜನಸಾಮಾನ್ಯರಲ್ಲಿ ಬೇರೂರುವಂತೆ ಮಾಡುತ್ತದೆ.  ಅಂಕೇಗೌಡರ ಆಸಕ್ತಿ, ಜನ-ಜ್ಞಾನದಾನ ಪರ ನಿಲುವಿಗೆ ಮಾರುಹೋದ ಸ್ಥಳೀಯ ಶಾಸಕರು ಮತ್ತು ಖೋಡೇ ಔದ್ಯಮಿಕ ಸಂಸ್ಥೆಯ ಸಹಾಯದಿಂದ ಒಂದು ಟಾಕೀಸಿನ ಛಾವಣಿಯಡಿ ಪುಸ್ತಕಗಳ ವರ್ಗೀಕರಣ ಪ್ರಾರಂಭವಾಗಿದೆ.

ಇಲ್ಲಿಗೆ ನಮ್ಮ ಭೇಟಿ ಆಗಿದ್ದು ನಿಜಕ್ಕೂ ಒಂದು ಮರೆಯಲಾಗದ ಮತ್ತು ಧನ್ಯ ಅನುಭವ. ಇದಕ್ಕೆ “ನಮ್ಮೊಳಗೊಬ್ಬ ’ಬಾಲು’” ಹಾಗೂ ಪ್ರಕಾಶ್ ಹೆಗ್ಗಡೆ (ಇಟ್ಟಿಗೆ ಸಿಮೆಂಟ್) ಕಾರಣೀಭೂತರು, ನಮ್ಮ ಹೃದಯಪೂರ್ವಕ ಧನ್ಯವಾದ ಈ ಮಿತ್ರರಿಗೆ.


ಅಂಕೇಗೌಡರ ಜ್ಞಾನದೇಗುಲದ ವಿಳಾಸ:
ಅಂಕೇಗೌಡ ಜ್ಞಾನ ಪ್ರತಿಷ್ಠಾನ
ಪುಸ್ತಕ ಮನೆ, ಹರಳಹಳ್ಳಿ,
ಪಾಂಡವಪುರ ತಾಲುಕ್, ಮಂಡ್ಯ ಜಿಲ್ಲೆ
ದೂರವಾಣಿ: 9242822934. 


ಮಾನವನಾಗಿ ಹುಟ್ಟಿ ಪ್ರಾಣಿ ಪಕ್ಷಿಗಳಂತೆ ಜೀವಿಸದೇ, ಹೆತ್ತವರ, ಹೊತ್ತನೆಲದ ಮತ್ತು ಸಮಾಜದ ಹಿತಕಾಗಿ ಏನಾದರೂ ಮಾಡಲೇಬೇಕಾಗಿರುವುದನ್ನು ಎಲ್ಲರೂ ಮನಗಾಣಬೇಕು, ಮಾನವ ಜನ್ಮವನ್ನು ಸಾರ್ಥಕಗೊಳಿಸಿಕೊಳ್ಳಬೇಕು ಎನ್ನುವ ಉತ್ಕಟಾಕಾಂಕ್ಷೆಯ ಅಂಕೇಗೌಡರ ವ್ಯಕ್ತಿತ್ವ ನಿಜಕ್ಕೂ ಅನುಕರಣೀಯ, ನಮನೀಯ, ಶ್ಲಾಘನೀಯ.


ಪುಸ್ತಕಾಲಯಕ್ಕೆ ಭೇಟಿ ನೀಡಿದ ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಎಮ್.ಎನ್ ವೆಂಕಟಾಚಲಯ್ಯನವರು "ಪುಸ್ತಕ ಪ್ರೇಮಿ ಅಂಕೇಗೌಡರು ಸುಮಾರು ೧.೫ ಲಕ್ಷಕ್ಕೂ ಹೆಚ್ಚಿನ ಪುಸ್ತಕ ಸಂಗ್ರಹ ಮಾಡಿರುವುದು ನಿಜಕ್ಕೂ ಅದ್ಭುತವಾದುದು. ಈ ಪುಸ್ತಕಾಲಯವು ಭೂಮಿಯ ಮೇಲಿನ ಸಾರಸ್ವತ ಜ್ಞಾನಲೋಕವೆನಿಸಿದೆ" ಎಂದು ಮೆಚ್ಚುಗೆ ವ್ಯಕ್ತಪಡಿಸಿದರಂತೆ.


ಒಡಿಶಾದ ಉನ್ನತ ನ್ಯಾಯಾಲಯದ ನ್ಯಾಯಮೂರ್ತಿಗಳಾದ ನ್ಯಾ.ಮೂ. ವಿ. ಗೋಪಾಲ ಗೌಡರು ಅಂಕೇಗೌಡರ ಪುಸ್ತಕಾಲಯ ಕಂಡು ನಿಬ್ಬೆರಗಾಗಿ "ಅಂಕೇಗೌಡರ ಪುಸ್ತಕ ಸಂಗ್ರಹದ ಸಾಧನೆ ಅಮೋಘವಾದುದು, ಇಂಥ ಅಮೂಲ್ಯವಾದ ಜ್ಞಾನ ಭಂಡಾರಕ್ಕೆ ಸರ್ಕಾರ ಸಕಲ ಸೌಲಭ್ಯಗಳನ್ನು ಒದಗಿಸಬೇಕಿದೆ. ಈ ಜ್ಞಾನ ಸಂಪತ್ತು ಸಮಾಜದ ಎಲ್ಲ ವರ್ಗದ ಜನರಿಗೂ ಸದುಪಯೋಗವಾಗುವಂತೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸಲಿ" ಎಂದು ಹೇಳಿದ್ದಾರೆ.


ಗೌಡರ ಜ್ಞಾನದಾನದ ಈ ಅಭೂತಪೂರ್ವ ಮಾರ್ಗವನ್ನು, ಅವರ ಆಸಕ್ತಿಯನ್ನು ಗಮನಿಸಿ ಕರ್ನಾಟಕ ಸರ್ಕಾರ ೫೦ ಲಕ್ಷ ರೂಪಾಯಿ ಅನುದಾನ ನೀಡಲು ಮುಂದಾಗಿರುವುದು ಸ್ವಾಗತಾರ್ಹ.

ಅಂಕೇಗೌಡರ ಮನದ ಎಲ್ಲಾ ಇಚ್ಛೆಗಳನ್ನೂ ಪೂರ್ಣಗೊಳಿಸಿ ನಾಡಿನಲ್ಲೇ ಏಕೆ ಇಡೀ ದೇಶದಲ್ಲೇ ವ್ಯಕ್ತಿಯೊಬ್ಬರ ಪ್ರಯತ್ನಫಲದ ಅಪೂರ್ವ ಪುಸ್ತಕಾಲಯವಾಗಿ ಅಂಕೇಗೌಡ ಪುಸ್ತಕ ಪ್ರತಿಷ್ಠಾನ ರೂಪುಗೊಳ್ಳಲಿ ಎಂದು ನಾವೆಲ್ಲಾ ಹಾರೈಸೋಣ ಮತ್ತು ಈ ನಿಟ್ಟಿನಲ್ಲಿ ನಮ್ಮಿಂದಾಗುವ ಸಹಾಯಕ್ಕೆ ಮುಂದಾಗೋಣ.. ಏನೆನ್ನುವಿರಿ ಸ್ನೇಹಿತರೇ..??