Monday, May 21, 2012

ನಂಗೊತ್ತಿಲ್ಲ ಮಗಾ




ನಂಗೊತ್ತಿಲ್ಲ ಮಗಾ
ಪುಟ್ಟಾ..ಏನ್ಲಾ ಮಾಡ್ತಿದ್ದಿಯಾ?
ಏನಿಲ್ಲಪ್ಪಾ.. ಒಸಿ ಟೀವಿ ನೋಡ್ತಾ ಇವ್ನಿ,,, ತೋಳ ಬಂತು ತೋಳ ಟೀವಿನಾಗೆ ಕತೆ ಬತ್ತಾ ಐತೆ
ಅಪ್ಪಾ..ಒಂದ್ಯಿಸ್ಯ..... ಅಲ್ಲಾ ಆ ಹೈದ ಸುಮ್ ಸುಮ್ನೆ ಯಾಕೆ ಆಟೊಂದ್ ಕಿತ ಅಳ್ಳಿ ಜನ್ಗೊಳ್ನ ’ತೋಳ ಬಂತಪ್ಪೋ ತೋಳ’ ಅಂತ ಎದಿರ್ಸಿದ್ದು.... ಅದ್ಕೇಯಾ ನಿಜ್ಕೂ ತ್ವಾಳ ಬಂದ್ರೂ ಯಾರೂ ಸಾಯಕ್ಬರ್ನಿಲ್ಲ
ಊಂ ಕಣ್ಮಗ, ಅದ್ಕೇ ಯೋಳೋದು ಒಂದಪ ಸುಳ್ ಯೋಳಿದ್ರೂ ಓಗ್ಲಿ ಬಿಡು ಏನೋ ತಪ್ಪಾಗ್ಯದೆ ಅಂತ ಮನ್ನಿಸ್ತಾರೆ...ಕಿತಾ ಕಿತಾ ಅಂಗೇ ಮಾಡಿದ್ರೆ..ಅದ್ನ ಜನ ಅಚ್ಕೊಳ್ಳೊಲ್ಲ...ಅಂತವ್ರನ್ನ ನಂಬಾಕೂ ಓಗಲ್ಲ...
ಊಂ... ನಮ್ಮಾಜಿ ಮುಮಂ ಗ್ಳೂ ಆಟೊಂದು ಒಳ್ಳೆ ಎಸ್ರ್ ಮಾಡಿದ್ರು, ಜನ ಆಸೀರ್ವಾದಾನೂ ಮಾಡಿದ್ರು..... ಈ ಪಾಟಿ ತಮಾಸಿ ಮಾಡಿ ಜನಾನ ಯಾಮರ್ಸಿ .. ಈವಾಗ ಅಯ್ಯೋ ತ್ವಾಳ ಬಂದೈತಿ ನನ್ಕಾಪಾಡ್ರಿ ಅಂದ್ರೆ...ಯಾರೂ ನಂಬಾಕಿಲ್ಲ ಅಲ್ವಾ???
ಅಲ್ವಾ ಮತ್ತೆ.. ಜನಾನೂ ಶ್ಯಾನೆ ಬುದ್ದಿ ಕಲ್ತ್ಕಂಡವ್ರೆ... ಶ್ಯಾಲೆ, ದುಡ್ಡು, ಎಂಡ, ಇಂತಾವೆಲ್ಲಾ ಈಸ್ಕೊಂಡೂ...ಒತ್ತೋ ಕಡೆ ಓಟ್ ಒತ್ತಾಕೋ ಮಟ್ಟಕ್ ಬಂದವ್ರೆ...  ತ್ವಾಳ ಅಂತ ಅಂದ್ಕಂಡು ಕುರಿ ಬಂಡ ಕತ್ತರ್ಸಿ ಮಾರ್ಕೊಂಡು, ಬಲ್ತ್ ಮ್ಯಾಲೆ ಕಟ್ಕನ್ಕೊಟ್ಟು  ದುಡ್ಮಾಡೋ ಕುರಿ ಕಾಯೊರ್ನ ನಂಬಾಕಿಲ್ಲ...
ಆದ್ರೆ...ಅವರು ನಾನು ಬೋ ಸಾಚಾ, ಬೇಕಾದ್ರೆ ಸ್ವಾಮಿಗಳ್ನ ಕೇಳಿ ಅಂತ ಯೋಳ್ತಾರಲ್ಲಾ... ಸ್ವಾಮ್ಗೋಳು ಶಾಮೀಲಾ ಅಂಗಾರೆ...?
ನಂಗೊತ್ತಿಲ್ಲ ಮಗ

Saturday, May 5, 2012

ಕಾಯ್ತಾ ಇವ್ನಿ ಬತ್ತದಾ ಮಳೆ...???

Foto: Internet

ಕಾಯ್ತಾ ಇವ್ನಿ ಬತ್ತದಾ ಮಳೆ...???

ಅಪ್ಪ ಯೋಳ್ತಿದ್ದ – ಯಪ್ಪಾ ಯಾ ಪಾಟಿ ಮಳೆ!!
ತೊಯ್ದು ತೊಯ್ದು ಬುರ್ದೆ ಆಗ್ಬುಟ್ಟೈತೆ ಇಳೆ
ಕೆರೆ ಕೋಡಿ ಓಯ್ತಿತ್ತಂತೆ, ಒಂದೇ ವಾರದಲ್ಲಿ
ದಾಟೋಕೋದ ಕುರಿ ದನ ಕೊಚ್ಚೋಗ್ನೀರಲ್ಲಿ.

ವಾರದಿಂದ ಮುದ್ಕ ಆಕಾಸ ನಿಟ್ಟಿಸ್ತಾ ಇರ್ತಾನೆ
ಯಪ್ಪೋ ಒಳೀಕ್ಬಾ, ಬೋ ಬಿಸ್ಲು ಸೂರ್ಯ ಸುಡ್ತಾನೆ
ನನ್ಮಾತು ಕೇಳಾಂಗಿಲ್ಲ ರೈತನ್ಮನ್ಸು ರೋಸಿದ್ರೆ ಇಂಗೆ
ಯೋಳ್ತಾನೆ ಮೂರ್ನೇ ವರ್ಸ ಬರ್ಗಾಲ ಬಂದ್ರೆ ಎಂಗೆ?

ಬೋ ..ಅಂತ ಅರ್ಚೋದು ದನ್ಗೋಳು ದನದಟ್ಟಿಲಿ
ಒಟ್ಟೆ ಬೆನ್ತಾಕೈತೆ ಕುರಿಗೋಳು ಬಡ್ವಾಗವೆ ಕುಂತಲ್ಲಿ
ಗೌಡಂಗೆ ಅಂಬ್ಲಿ ದಾಸೋವ ಮಾಡಾಕೆ ಯೋಸ್ನೆನಂತೆ
ಅಕ್ಪಕ್ಕದ್ ಅಳ್ಳಿ ಬಡ್ಮಕ್ಳು ಮಂದಿ ಬತ್ತಾರೆ ಸಂತೆ ಸಂತೆ

ಬಡ್ಕಲಾಗಿರೋ ನಾಗೇಸಾ ಮಂಡ್ರಾಯ್ನ್ ಎತ್ಕಂಬಂದ
ಸಿದ್ದೇಸ ಮಂಗ್ಳಾರ್ತಿ ಎತ್ತೋದು ಐಕ್ಳು ಕುಣ್ಯೊದ್ಚಂದ
ಉಯ್ಯೋ ಉಯ್ಯೋ ಮಂಡ್ರಾಯ ಬಾಳೆ ತ್ವಾಟಕ್ನೀರಿಲ್ಲ
ಉಯ್ಯೋ ಉಯ್ಯೋ ಮಂಡ್ರಾಯ ಬತ್ತ ಒಣ್ಗಿ ಓಯ್ತಲ್ಲಾ

ಇದ್ಕಿದ್ದಂಗೆ ಮಟ್ಮಟ ಮದ್ಯಾನ್ನ ಕವ್ಕಂಬತ್ತು ಕತ್ಲಾ
ಮಲ್ಗಿದ್ದಪ್ಪ ಎದ್ದ ಕುಸ್ಕುಸಿ, ಕೂಗ್ದ ಎಂಕ್ಟ ಮಳ್ಬತ್ಲಾ
ಅವ್ಮಾನ ಇಲಾಕೆವ್ರು ಅಂದವ್ರೆ ವಾರಪೂರಾ ಇಂಗೇ
ಅಪ್ಪಾಂದ ಬಾಲಾ ನನ್ಮೀಸೆಯೂ ಬೆಳ್ಗಾಗಿಲ್ಲ ಅಂಗೇ

ನೋಡ್ತಾ ನೋಡ್ತಾ ಕಪ್ಮೋಡ ಕವ್ಕೊಂಡ್ವು ಆಕಾಸಾ
ದಪ್ ದಪಾ ಬಿತ್ತು ಅನಿ ನೋಡೀ ಕುಸೀನಾ ಎಂಕ್ಟೇಸಾ?
ಬಿರ್ದಿದ್ ನೆಲ ಸೊಳ್ ಅಂತ ಈರ್ಕೊಳ್ತು ಬಿದ್ದಿದ್ದನಿ
ಘಮ್ ಅಂತು ಮಣ್ ವಾಸ್ನೆ, ಓಣಿತುಂಬಾ ಅಪ್ಪಂದನಿ

ಗುಡ್ಗು, ಸಿಡ್ಲು, ದೋ ಮಳೆ, ಕುಣೀತು ಅಪ್ಪನ್ಬಿಳಿ ಮೀಸೆ
ಅಂದ ಮಾಡಮ್ಮೀ ಮೆಣ್ಸಿನ್ ಕಾಯ್ ಬಜ್ಜಿಗಾಗೈತೆ ಆಸೆ
ಸಂಜೆ ಗಂಟ ಬುಡ್ನೇ ಇಲ್ಲ ಸುರೀತಾನೇ ಇತ್ತು ಮಳೆ
ಆಕಾಸ್ದಾಗೂ ಕಮ್ಮೀನೇ ಆಗ್ಲಿಲ್ಲ ಕವ್ದಿದ್ಮೋಡದ್ ಬೆಳೆ