Saturday, December 26, 2009

ಬ್ಲಾಗು-ಬಂಧಮಂಗಳೂರಿಗೆ ಕಾರ್ಯನಿಮಿತ್ತ ಡಿಸೆಂಬರ್ ೨೨ಕ್ಕೆ ಹೋಗಿದ್ದಾಗ ದಿನಕರ್ ಮೊಗೇರ್ ನನಗಾಗಿ ಕಾಯುತ್ತಿರುವಂತೆ ಫೋನ್ ಮಾಡಿದರು, ಭೇಟಿಗೆಂದೇ ನಮ್ಮ ಮೀನುಗಾರಿಕಾ ಮಹಾವಿದ್ಯಾಲಯದ ಆವರಣಕ್ಕೆ ಬಂದು ಕಾದಿದ್ದರು. ತಮ್ಮ ಶ್ರೀಮತಿಯವರೊಂದಿಗೆ ಬಂದಿದ್ದ ಅವರ ಆತ್ಮೀಯತೆಗೆ ನಾನು ಮೂಕನಾಗಿದ್ದೆ. ಯಾವುದೋ ಸಂದರ್ಭದಲ್ಲಿ "ನಿಮ್ಮ ಊರಿಗೆ ಬರುವೆ" ಎಂದು ತಾರೀಖು ತಿಳಿಸಿದ್ದೆ ಅಷ್ಟೇ. ಇದನ್ನು ಯಾವ ರೀತಿಯ ಬಾಂಧವ್ಯ ಎನ್ನಬೇಕು? ಕಾಲೇಜಿನಲ್ಲಿ ನನ್ನ ಸ್ನೇಹಿತರಂತೂ ಈ ರೀತಿಯ ಉತ್ಕಟ ಬಂಧ-ಬಾಂಧವ್ಯ ಬ್ಲಾಗಿನ ಮೂಲಕ ಬರಲು ಸಾಧ್ಯವೇ ಎಂದು ಆಶ್ಚರ್ಯ ಪಟ್ಟರು. ನನ್ನ ಘನಿಷ್ಟ ಮಿತ್ರ ಡಾ.ಶಿವಪ್ರಕಾಶ್ ಅಂತೂ ಮೂಕನಾಗಿದ್ದ ಅವರ ಆತ್ಮೀಯತೆ ಕಂಡು..ಅವನು ಆಗಲೇ ನಿರ್ಧರಿಸಿದ ತಾನೂ ಬ್ಲಾಗ್ ರಚಿಸಬೇಕೆಂದು. ಈ ಚಿತ್ರದಲ್ಲಿ ನಾನು, ದಿನಕರ್, ವನಿತಾ (ಶ್ರೀಮತಿ ದಿನಕರ್) ಮತ್ತು ನನ್ನ ಮಿತ್ರ ಡಾ. ಶಿವಪ್ರಕಾಶ್, ಎಸ್.ಎಮ್.


ಚಾಟ್ನಲ್ಲಿ ಡಿ.೨೪ಕ್ಕೆ ತನ್ನ ಹುಟ್ಟುಹಬ್ಬ ನೀವು ಬಂದಾಗ ಖಂಡಿತಾ ಮನೆಗೆ ಬರಬೇಕು ಎಂದು ಒತ್ತಾಯಿಸಿದ್ದ ಶಿವುವನ್ನು ಕಾಣಲು ಅವರ ಮನೆಗೆ ಹೊರಟೆ. ಮಲ್ಲೇಶ್ವರಂ ಸರ್ಕಲ್ ನಿಂದ ಹೊರಟು ನವರಂಗ ಟಾಕೀಸಿನ ದಾರಿಯಲ್ಲಿ ಪಾರ್ಕಿನ ಬಳಿ ಬಸ್ಸಿನಿಂದಿಳಿದೆ. ಶಿವುಗೆ ಫೋನ ಮಾಡಿದೆ..ತಮ್ಮ ಸ್ಕೂಟಿಯಲ್ಲಿ ಬಂದೇ ಬಿಟ್ತರು ಶಿವು ನನ್ನ ಪಿಕ್-ಅಪ್ ಮಾಡಲು...ಅವರ ಮತ್ತು ಹೇಮಾಶ್ರೀ (ಶ್ರೀಮತಿ ಶಿವು) ಅವರ ಸಂಭ್ರಮ ನನ್ನನ್ನು ಮೂಕನ್ನನ್ನಾಗಿಸಿದವು. ಅವರ ಮನೆಯಲ್ಲಿ ಒಪ್ಪವಾಗಿ ಜೋಡಿಸಿದ್ದ ಶಿವುಗೆ ಸಂದಿದ್ದ ಪ್ರಶಸ್ತಿಗಳ ಮತ್ತು ಮನೆಯ ವೀಡಿಯೋ ಕ್ಲಿಪ್ ತೆಗೆದೆ.. ನನ್ನ, ಶಿವು ಮತ್ತು ಅವರ ಶ್ರೀಮತಿಯರ ಜೊತೆ ಫೋಟೋ ತೆಗೆದರು. ಬಿಸಿ ಬಿಸಿ ದೋಸೆಯ ಸೇವೆ, ಹಬೆಯಾಡುವ ಕಾಫಿ..ನನ್ನ ಹೊಟ್ಟೆ ತುಂಬಿಸಿದರೆ ನನ್ನ ಮನದಾಳಕ್ಕೆ ಅವರ ಅತ್ಮೀಯತೆ ಹೊಕ್ಕಿತ್ತು..

ಬೆಂಗಳೂರಿನ ಸಿಟಿ ಟ್ಯಾಕ್ಸಿಯಲ್ಲಿ ಕುಳಿತು ಸಹಕಾರನಗರಕ್ಕೆಂದು ಹೇಳಿದಾಗ ಹರೀಶ್ (ಟ್ಯಾಕ್ಸಿ ಚಾಲಕ) ಕೇಳಿದ್ದು "ಸ್ಥಳದ ಪರಿಚಯ ನಿಮಗಿದೆಯಾ ಎಂದು. ಇಲ್ಲ ಎಂದಾಗ "ಸಹಕಾರ ನಗರ ಗೊತ್ತು ಅಲ್ಲಿ ಯಾವ ನಿಗದಿತ ಜಾಗ ಎಂದು ತಿಳಿದುಕೊಳ್ಳಿ" ಎಂದಾಗ ಪ್ರಕಾಶ್ ಗೆ ಫೋನಾಯಿಸಿದೆ. ಪಾರ್ಕಿನ ಬಳಿ ಎಂದಾಗ "ಆ ಜಾಗ ಗೊತ್ತು ಅಲ್ಲಿಗೆ ಹೋಗೋಣ ನಂತರ ನಿಮ್ಮ ಸ್ನೇಹಿತರಿಗೆ ಫೋನು ಮಾಡಿ" ಎಂದು ಟ್ಯಾಕ್ಸಿ ಹೊರಡಿಸಿದ ಹರೀಶ. ಅ ಜಾಗಕ್ಕೆ ಬಂದಾಗ..ಕಾರಿನಲ್ಲಿ ಕುಳಿತಲ್ಲಿಂದಲೇ ನಮ್ಮೆಡೆ ಕೈಬೀಸಿದ್ದರು ಪ್ರಕಾಶ್...!!! ಹರೀಶನಿಗೆ ನಾವು ಒಬ್ಬರನ್ನೊಬ್ಬರು ನೋಡುತ್ತಿರುವುದು ಇದೇ ಮೊದಲಿಗೆ ಎಂದಾಗ ನಂಬಲಿಲ್ಲ...ಅದುಹೇಗೆ..ಈ ರೀತಿಯ ಸ್ನೇಹ-ಬಂಧ ಹೇಗೆ ತಿಳಿಯಿತು ಇವರೇ ಎಂದು? ಎಂದೆಲ್ಲಾ ಅವನಿಗೆ ಪ್ರಶ್ನೆ ಕಾಡತೊಡಗಿದುವಂತೆ.

ಮೀನು, ಮತ್ಸ್ಯಶಾಸ್ತ್ರ ಮತ್ತು ಮತ್ಸ್ಯಕೃಷಿಗಳಲ್ಲಿ ಮುಳುಗಿದ್ದ ನನಗೆ ... ಇಷ್ಟೇ ಅಲ್ಲ ಪ್ರಪಂಚ ಎನ್ನುವುದನ್ನು ಸಾದರಪಡಿಸುವಂತೆ ಪರಿಚಯಿಸಿದ ಶ್ರೇಯ -ಮೃದುಮನಸು- ಗೆ ಸಲ್ಲಬೇಕು. ಬಹುಶಃ ಒಂದು ವರ್ಷದ ನನ್ನ ಗಳಿಕೆ... ಆತ್ಮೀಯರ, ನನ್ನ ಲೇಖನ ಅದು ಹೇಗೇ ಇದ್ದರೂ ಮೆಚ್ಚಿ ಪ್ರೋತ್ಸಾಹಿಸುವ ಬ್ಲಾಗು-ಮಿತ್ರರ ಸ್ನೇಹ. ತುಂಬು ಮನಸ್ಸಿನಿಂದ ಅಣ್ಣ ಎನ್ನುವ ತಂಗಿಯರು, ತಮ್ಮಂದಿರು, ಅಲ್ಪಸ್ವಲ್ಪ ಹತ್ತಿರ ವಯಸ್ಕರು, ಹೀಗೆ ಹಲವಾರು ಸ್ನೇಹಿತರು...ಜೊತೆಗಿದ್ದು ಹುಟ್ಟಿನಿಂದ ಪರಿಚಿತ ಬಂಧುಗಳಿಗಿಲ್ಲದ ಆಪ್ಯಾಯತೆ ಇವರಲ್ಲಿ ಕಂಡೆ...

ಬ್ಲಾಗು ಬ್ರಹ್ಮ ಬ್ಲಾಗು ವಿಷ್ಣು ಬ್ಲಾಗುದೇವೋ ಮಹೇಶ್ವರಃ ಬ್ಲಾಗೇ ಸಾಕ್ಶಾತ್ ಪರ ಬ್ರಹ್ಮ ತಸ್ಮೈಶ್ರೀ ಬ್ಲಾಗುವೇ ನಮಃ...........ಅಲ್ಲವೇ...??.