Sunday, January 3, 2010

ಹಾಗಾದ್ರೆ...ನಾರಾಯಣನ ಕಿವಿ ಹೋಯಿತಾ?

ನಾನು ಹೈಸ್ಕೂಲಿಗೆ ಹೋಗುತ್ತಿದ್ದ ದಿನಗಳು, ಹಳ್ಳಿಲಿ ಆರೇಳು ಅಂಗಡಿಗಳಲ್ಲಿ ನಮ್ಮ ಸೋದರಮಾವನದ್ದೂ ಒಂದು. ನನ್ನ ಸೋದರಮಾವ ಎರ್ಡನೇ ಸರ್ತಿಗೆ ಎಸ್ಸೆಸ್ಸೆಲ್ಸಿ ಮುಗಿಸಿದ್ದ..ಕಾಲೇಜಿಗೆ ಹೋಗೋಕೆ ಮನಸ್ಸಿರಲಿಲ್ಲ..ನಮ್ಮ ತಾತ.. "ನೀನು ಓದಿ ಮುಂಡಾಮೋಚಿದ್ದು ಸಾಕು, ಅಂಗಡಿ ಹಾಕ್ಕೊಡ್ತೀನಿ..ಕೂತು ಒಂಚೂರು ವ್ಯಾಪಾರ ಕುದುರಿಸಿಕೋ" ಅಂತ..ಒಂದು ದಿನಸಿ ಅಂಗಡಿ ಹಾಕಿ ಕೊಟ್ಟಿದ್ದರು. ನಮ್ಮ ಮಾವ ಇನ್ನೂ ಮದುವೆ ಆಗಿರಲಿಲ್ಲ. ಸಂಜೆ ಆರರ ನಂತರ ಹೊಲ ಗದ್ದೆಯಲ್ಲಿ ಕೆಲಸಮಾಡಿ ಬಂದ ನನ್ನ ಮಾವನ ಸ್ನೇಹಿತ ಮಿತ್ರರು, ರೈತಾಪಿಗಳು ನಮ್ಮ ಅಂಗಡಿಯ ಜಗುಲಿ ಮೇಲೆ ಕೂತು ಲೋಕಾಭಿರಾಮ ಮಾತಿಗೆ ಕೂತರೆ..ಅವರೆದ್ದು ಹೋಗುವ ಹೊತ್ತಿಗೆ ರಾತ್ರಿ ಹತ್ತು-ಹತ್ತೂವರೆ ಆಗ್ತಿತ್ತು. ಇವರ ಮಾತಿಗೆ ಅಂಗಡಿ ವ್ಯಾಪಾರ ನೊಡ್ಕೋತಾ ನಮ್ಮ ಮಾವ ಚರ್ಚೆಗೆ ಸ್ವಾರಸ್ಯಕರ ವಿಷಯಗಳನ್ನ ಹಾಗೇ ಪ್ರಾರಂಭಿಸಿ ಚರ್ಚೆ ಮುಂದುವರೆಯೋಕೆ ಬಿಡ್ತಿದ್ದ..ಮಧ್ಯೆ ಮಧ್ಯೆ ತನ್ನ expert comments ಹಾಕೋದನ್ನ ಮರೀತಿರಲಿಲ್ಲ...ರಾತ್ರಿಯ ಎಂಟೂವರೆ ನಂತರ ವ್ಯಾಪಾರ ಸ್ವಲ್ಪ ಕಡಿಮೆ ಇರ್ತಿತ್ತು..ಆಗ ನಮ್ಮ ಮಾವನ ಸ್ನೇಹಿತರು “ಲೇ ..ಅತಾವುಲ್ಲ..ಯಾವುದಾದ್ರೂ interesting story ಇದ್ರೆ ಹೇಳೋ..” ಅಂತ ಗೋಗರೆಯೋದು ಮಾಮೂಲಾಗಿರ್ತಿತ್ತು..ನಾನು ನನ್ನ ಸ್ಕೂಲಿನ ಮನೆಕೆಲಸ ಮುಗಿಸಿ ಮಾವನ್ನ ಊಟಕ್ಕೆ ಕಳುಹಿಸೋಕೆ ಅಂಗಡೀಗೆ ಬರ್ತಿದ್ದೆ...ಹಾಗನ್ನೋದಕ್ಕಿಂತಾ ಅವರ ಸ್ವಾರಸ್ಯಕರ ಮಾತುಕತೆ ಕೇಳೋಕೆ ಬರ್ತಿದ್ದುದು ಅಂದ್ರೆ ತಪ್ಪಾಗದು.

ಹೀಗೇ ಒಮ್ಮೆ, ಎಂಟೂವರೆ ಸಮಯಕ್ಕೆ ಮಾವ ಊಟ ಮುಗಿಸಿಬಂದ..ಸರಿ ಸೇರಿದ್ದ ಅವರ ಸ್ನೇಹಿತರು ಎಂದಿನಂತೆ ದಂಬಾಲು ಬಿದ್ದಾಗ...ಮನೆ ಕೆಲಸದಿಂದ ಬೇಸತ್ತ ನಾರಾಯಣ ಎನ್ನುವ ರೈತನೊಬ್ಬನ ಕಥೆ ಹೇಳತೊಡಗಿದ.
“ನಾರಾಯಣ ಮದುವೆ ಯಾಗಿ ಮನೆಗೆ ಹೆಂಡತೀನೇನು ತಂದ..ಮನೆಗೆ ಮಾರೀನೇ ತಂದುಕೊಂಡ...ಮನೆ ಕೆಲಸ ಎಲ್ಲ ನಾರಾಯಣನಿಗೆ ಮಾಡ್ಬೇಕಾಗ್ತಿತ್ತು..ಸರಿ ದಿನವೆಲ್ಲಾ ಹೊಲ ಗದ್ದೆ ಕೆಲಸ ಮಾಡಿ ದಣಿದು ಬಂದರೆ ಮನೆ ಕೆಲಸಕ್ಕೆ ಹೆಂಡತಿ ಪೀಡಿಸ್ತಿದ್ದಳು...ಬೇಸತ್ತ ನಾರಾಯಣ.. ಗುಡ್ದದಮೇಲಿನ ಬಾಬಾನ ಬಳಿ ಪರಿಹಾರ ಕೇಳೋಕೆ ಹೋದ. ಬಾಬಾ ಅವನಿಗೆ ಒಂದು ಮಂತ್ರ ಹೇಳಿಕೊಟ್ಟು “ಅದನ್ನು ಪ್ರಯೋಗಿಸಿ ಕೆಲಸ ಮಾಡೋ ದೆವ್ವಾನ ಹುಟ್ಟುಹಾಕಬಹುದು..ಆದರೆ ಅದರ ಎಲ್ಲಾ ಶರತ್ತುಗಳನ್ನು ಪಾಲಿಸಬೇಕು, ತಪ್ಪಿದರೆ ಅದು ತನ್ನ ಶರತ್ ಪೂರೈಕೆಮಾಡಿ ಮಾಯವಾಗಿಬಿಡುತ್ತೆ.. “ ಎಂದ ಬಾಬ. ನಾರಾಯಣ ಮಂತ್ರದಿಂದ ದೆವ್ವವನ್ನು ತರಿಸಿದ..ಅದು..ನಾರಾಯಣ ಏನೇ ಕೆಲಸ ಹೇಳಿದರೂ ಮಾಡುವುದಕ್ಕೆ ಒಪ್ಪಿತು, ಆದ್ರೆ ನಾರಾಯಣ ಕೆಲಸ ಹೇಳಲು ಅಸಮರ್ಥನಾದರೆ ದೆವ್ವ ಅವನ ಕಿವಿಯನ್ನು ಕಚ್ಚಿ ತಿನ್ನುವ ಶರತ್ ಹಾಕಿತು. ಸರಿ.. ಅಂತ ಒಪ್ಪಿಕೊಂಡ ನಾರಾಯಣ. ಅವನ ಎಲ್ಲ ಕೆಲಸ ಮಾಡುತ್ತಾ ಬಂತು ದೆವ್ವ...ಕೊನೆಗೆ ಒಮ್ಮೆ ನಾರಾಯನನಿಗೆ ಕೆಲಸ ಹೇಳಲಾಗಲಿಲ್ಲ. ದೆವ್ವ ನಾರಾಯನ ಕಿವಿಯನ್ನು ಕತ್ತರಿಸಿ ಕಚ್ಚಿತಿಂದು ಮಾಯವಾಯಿತು.

ಕಥೆ ಪೂರ್ಣವಾಗುತ್ತಿದ್ದಂತೆ..ಸ್ವಲ್ಪ ಹೆಡ್ದನಂತಹ..ರೈತ ಗೋವಿಂದ.... “ಹಂಗಾದ್ರೆ ನಾರಾಯಣನ ಕಿವಿ ಕಚ್ಚಿತಾ?...ಅವನ ಕಿವಿ ಹೋಯಿತಾ..? ” ಎಂದ. ಅವನು ಹಾಗೆ ಕೇಳುತ್ತಿರುವಂತೇ.. ಅಂಗಡಿಗೆ ಒಳಬರುತ್ತಿದ್ದಾತ ಜಗುಲಿ ಮೇಲೆ ಕುಳಿತಿದ್ದ ಗೋವಿಂದನ್ನ ಎಳೆದು ಬೀಳಿಸಿ... ಬೋ..ಮಗನೆ...ನಿನಗೇನೋ...?? ನನ್ನ ಕಿವೀನಾದ್ರೂ ಕಚ್ಚತಾನೆ...ತಲೇನಾದ್ರೂ ಹೊಡಿತಾನೆ...ನಮ್ಮ್ ಸಂಸಾರದ ಇಷ್ಯ ನಿನಗ್ಯಾಕೋ..??” ಎನ್ನುತ್ತಾ ಗೋವಿಂದನ್ನ ಗುದ್ದಿ ಹಲ್ಲೆ ಮಾಡಿದ... ನಮ್ಮಾವ ಮತ್ತೆ ಇತರರು ಗೋವಿಂದನ್ನ ಬಿಡಿಸುವಾಗ... "ನೋಡು ಅತ್ತಾವುಲ್ಲ..ಇವನಿಗ್ಯಾಕೆ ನಮ್ಮ ಮನೆ ಸಮಾಚಾರ..?" ಎನ್ನುತ್ತ ನ್ಯಾಯ ಒಪ್ಪಿಸತೊಡಗಿದ. ಎಲ್ಲರೂ ಆಶ್ಚರ್ಯ ಗಾಬರಿಯಿಂದ ಮೂಕರಾಗಿ ನೋಡುವುದೇ ಆಯಿತು. ನಮ್ಮ ಮಾವ ಮತ್ತೆ ಇನ್ನೊಂದಿಬ್ಬರಿಗೆ ಕ್ಷಣ ಕಾಲ ಆಶ್ಚರ್ಯ, ಹೀಗೇಕೆ ಎನ್ನುವುದರ ಕಾರಣ ತಿಳಿದದ್ದು ಹಿಂದಿನ ದಿನದ ಘಟನೆ ನೆನಪಾದಾಗಲೇ.
'ನಾರಾಯಣ'...ಒಳಕ್ಕೆ ಬಂದಾತನ ಹೆಸರು; ಅವನು ಮತ್ತು ಅವನ ತಮ್ಮ ಹಿಂದಿನ ದಿನವಷ್ಟೇ ಮನೆಯ ಒಂದು ಯಾವುದೋ ಸಮಸ್ಯೆಯ ಕುರಿತು ಜೋರು ಜಗಳಾನೇ ಆಡಿದ್ರು ...ಆ ಜಗಳದಲ್ಲಿ..ನಾರಾಯಣನ ತಮ್ಮ ತನ್ನ ಅಣ್ಣನ ಕಿವಿಯನ್ನು ಕಚ್ಚಿಬಿಟ್ಟಿದ್ದ. ಇದು ಎಲ್ಲಾ ಕಡೆ ಗುಲ್ಲಾಗಿತ್ತು. ಆತ ಅಂಗಡಿಯೊಳಕ್ಕೆ ಬಂದಾಗ ಗೋವಿಂದ ಕೇಳಿದ್ದ ಮಾತು..ನಾರಾಯಣನು ರೇಗುವಂತೆ ಮಾಡಿತ್ತು... ಅದೇ ಕಾರಣಕ್ಕೆ ನಾರಾಯಣ ಗೋವಿಂದನ್ನ ಹೊಡೆದಿದ್ದು. ವಿಷಯ ತಿಳಿಸಿ ನಾರಾಯಣನನ್ನು ಸಮಾಧಾನ ಮಾಡುವ ಹೊತ್ತಿಗೆ ಸಾಕುಸಾಕಾಗಿ ಹೋಯಿತು ಎಲ್ಲರಿಗೂ...ಆಮೇಲೆ ..ನಾರಾಯಣ ಗೋವಿಂದನಲ್ಲಿ ಕ್ಷಮೆ ಕೇಳಿದ್ದ ಅದು ಬೇರೆ ವಿಷಯ.