Thursday, March 25, 2010

ಒಂದ್ಗುಟ್ಕು ಆಕ್ಕೊಂಡ್ರೆ ಬ್ಲಾಗು

ನನ್ಪಾಡಿಗ್ ನಾನಿದ್ದೆ


ಸಂಸೋದ್ನೆ ಮಾಡ್ತಿದ್ದೆ


ಅದೂ ಇದೂ ಬರೀತಿದ್ದೆ


ಕವ್ನಾಂತ ಒಂದಿಷ್ಟು ಗೀಚ್ತಿದ್ದೆ


ನಾಟ್ಕದ್ದೂ ಗೀಳು ಇದ್ದದ್ದೇ


ಬಾಳ್ವೇಗೆ ಸಂಸೋದ್ನೆ


ಉಲ್ಲಾಸ್ಕೇ ಗೀಚೋದ್ನೆ


ಮಾಡ್ಕಂಡ್ ನನ್ಲೋಕ್ದಾಗೆ


ಅಕ್ಕಿಯಂಗೆ ಇರ್ತಿದ್ದೆ


ಗೀಚಿದ್ದು ಪೇಪರ್ನ್ನಾಗಿಡ್ತಿದ್ದೆ


ಆವಾಗಾವಾಗ ಬರ್ದಿದ್ದು ನಾನೇ ಓದ್ತಿದ್ದೆ


ನನ್ನ್ ಬೆನ್ನ ನಾನೇ ತಟ್ತಿದ್ದೆ.
ಒಂದ್ಸರ್ತಿ ‘ಮನ್ಸು' ಅಚ್ಬುಡ್ತು


ಬ್ಲಾಗ್ಲೋಕಕ್ಕೆ ನನ್ನ ತಂದ್ಬುಡ್ತು


ಮೊದ್ಮೊದ್ಲು ಒಂದೊಂದು


ಆಮೇಲಾಮ್ಯಾಕೆ ಹತ್ತೊಂದು


ಸ್ನೇಯಿತ್ರು ಅತ್ಸ್ ಬುಟ್ರು ಅಟ್ಟ..


ಬಲ್ ಬರೀತೀ ಅಂದ್ಬುಟ್ರು


ನಾನೂ ಅತ್ತೇ ಬುಟ್ಟೆ..ಅಟ್ಟ


ಮುಟ್ತಾ ಓದೆ ಒಂದೊಂದೇ ಘಟ್ಟ


ಈಗ ಬ್ಲಾಗ್ ಅಂದ್ರೆ ಒಂದ್ರೀತಿ


ಕುಡ್ಕಂಡoಗೆ ಕಂಠ್ಮಟ್ಟ


ಇಂಗೇ ಬಂದ್ಬುಟ್ರೆ ಮೂಡು


ಮೂಡ್ತಾದೆ ಬರಹ್ದಾಗೆ ಕೋಡು


ಪದ್ಗೋಳ್ ಹಿಡೀತಾವೆ ಜಾಡು


ಸೇರೇ ಬಿಡ್ತಾವೆ ಬ್ಲಾಗನ್ನೋ ಬೀಡು.


ಎಂಡ ಎಂಡ್ತಿ ಆಗೋಯ್ತು ಅಳ್ತು


ಬ್ಲಾಗ್ ಅನ್ನೋ ಚಟಕ್ಕೆ


ಜಲನಯನ ಬೀಳ್ತು.

Tuesday, March 16, 2010

ನಂಗೊತ್ತಿಲ್ಲ...ಹೋಗೋ ತರ್ಲೆ... ಓದ್ಕೋ ಹೋಗು


ಚಿತ್ರಗಳು ಅಂತರ್ಜಾಲ ಕೃಪೆ...
(ಒಂದು ಚಿತ್ರ ಅಚಾತುರ್ಯದಿಂದ ಕ್ಲಿಕ್ ಆಗಿತ್ತು ಕ್ಷಮೆ ಇರಲಿ)

ಅಂಕಲ್


ಏನು ಪುಟ್ಟಾ..?


ಬಿಡದಿಗೆ ಹೋಗಿದ್ರಾ...?


ಇಲ್ಲಲ್ಲಪ್ಪಾ..ಯಾಕೋ..ಹಾಗೆ ಕೇಳ್ದೆ..?


ಅಲ್ಲ ಯಾರೋ ಎಳೆ ವಯಸಿನ ಸ್ವಾಮಿಗಳು ಅವ್ರಂತೆ ಅಲ್ಲಿ...!!


ಏನೋ ಗೊತ್ತಿಲ್ಲ ಪುಟ್ಟ...ಹೂಂ..ಯಾರೋ ಹೇಳಿದ್ದು ನೆನಪೈತೆ...


ಅಲ್ಲ ಅಂಕಲ್ ಟಿವಿ, ಪೇಪರ್ ಎಲ್ಲದ್ರಲ್ಲೂ ಅದೇ ಸುದ್ದಿ ನೀವು ನೋಡಿಲ್ಲ್ವಾ..?


ಇಲ್ಕಣ್ ಪುಟ್ಟ...ಕಬ್ಬು ಕೊಯ್ಲಾಗೈತೆ ..ಗಾಣ ಆಡಿಸ್ಬೇಕು...ಪುರ್ಸತ್ತಿಲ್ಲ


ಅದೇ ಅಂಕಲ್ ಅಲ್ಲಿ ಉಗಾದಿ ಸಮಯದಲ್ಲಿ ರಾಸಲೀಲೆ ಯಾಕಾಯ್ತು ನಿಮ್ಮನ್ನ ಕೇಳೋಕೆ..


ಜನ್ಮಾಷ್ಠಮೀಲೀ..ರಾಸಲೀಲೆ ಓಕೆ...ಉಗಾದಿ ಸಮಯದಲ್ಲಿ ಯಾಕೆ...?


ಅಯ್ಯೋ ಅಂಕಲ್ ನಿಮಗೆ ಬೇಸಾಯ..ನೈಸ್ ರೋಡು ಹೊಲ ಗದ್ದೆ ಕಬಳಿಕೆ ಇದೇ ಚಿಂತೆ


ಅಯ್ಯೋ ದೊಡ್ಡ ಕತೇನೇ ಆಗಿದೆ ಅಲ್ಲಿ ....ಗೊತ್ತಿಲ್ಲವಾ...?


ನಮ್ಗೊತ್ತಿಲ್ಲ ಮಗು... ಅಗೋ ನಿಮ್ಮಪ್ಪ ಬಂದ ಅವ್ರನ್ನೇ ಕೇಳು...


ಅಯ್ಯೋ ನಮ್ಮಪ್ಪಂಗೆ ಇವೆಲ್ಲಾ ಗೊತ್ತಾಗೊಲ್ಲ..ನಂಗೊತ್ತಿಲ್ಲ ಮಗು ಅಂತಾರೆ..


ಏನೋ ಅದು ತರ್ಲೆ ನಿಂದು....ಏನು ಶಂಕರೇಗೌಡ್ರ ತಲೆ ತಿನ್ತಾ ಇದ್ದಾನೆ ,,?


ಅಯ್ಯೋ ಅದೇನೋ ಸ್ವಾಮಿ ಅಂತೆ ಯುಗಾದಿ ಸಮಯದಾಗೆ ರಾಸಲೀಲೆ ಅಂತೆ...


ನನಗೇನೂ ಗೊತ್ತಿಲ್ಲ ಅಂದೆ.......
ಏನದು...ಮೇಷ್ಟ್ರೆ...?


ಅಯ್ಯೋ ಅದೊಂದು ಅವಾಂತರ ಬಿಡಿ ವಾಕ್ ಹೋಗ್ತೀವಲ್ಲ ಆಗ ಹೇಳ್ತೀನಿ..


ಅದಲ್ಲಪ್ಪಾ.....!!!


ಅದೇನೋ ನಿನ ರಾಗ....?


ಮತ್ತೆ ಟಿವಿ ಸಂದರ್ಶನ ಕೊಟ್ಟು ಸ್ವಾಮಿಗಳು ಎರಡೇ ಮಾತು ಕನ್ನಡದಲ್ಲಿ ಹೇಳಿದ್ದು


ಆಮೇಲೆ ಪೂರ್ತಿ ಇಲಿ ತಿಂದಹಾಗೆ ಇಂಗ್ಲೀಷು..ಯಾಕಪ್ಪಾ ಬಿಡದಿ ಕರ್ನಾಟಕದಲ್ಲೇ ಅಲ್ವಾ ಇರೋದು..?


ಹೌದು ಕಣೋ...


ಮತ್ತೆ ಅವ್ರಿಗೆ  ಸರಿಯಾಗಿ ಕನ್ನಡಾನೇ ಬರೋಲ್ಲ ಇನ್ನು ಭಕ್ತರಿಗೆ ಏನು ಉಪದೇಶ ಮಾಡ್ತಾರೆ..?


ಗೊತ್ತಿಲ್ಲ ಕಣೋ...


ಮತ್ತೆ..ಯಾಕೆ ಹೀಂಗಾಯ್ತು ಅಂತ ಟಿ.ವಿ.ಯವರು ಕೇಳಿದ್ರೆ...ಇನ್ನುಮುಂದೆ ಕೇರ್ಫುಲ್ ಆಗಿ ಇರ್ತೀನಿ..


ಎಲ್ಲಾ ಕೇರ್ ಫುಲ್ ಆಗಿ ಮಾಡ್ತೀನಿ ಅಂದ್ರಲ್ಲಾ...??


ಅಂದ್ರೆ..ವೀಡಿಯೋ ..ಫೋಟೋ ತೆಗೆಯೋಕೆ ಆಗದ ಹಾಗೆ ಅಂತಾನಾ...?


ಲೇ...ತರ್ಲೆ ಕಣೋ ನೀನು,..ಹೋಗು ಓದ್ಕೋ.......................ನಿಜಕ್ಕೂ ಆಗ್ತಾ ಇರೋದು ಏನು...ಯಾರನ್ನ ಕೇಳಿದ್ರೂ ನಮಗೆ ಗೊತ್ತಿಲ್ಲ ಅಂತಾರಲ್ಲಾ ಈ ವಿಷಯದಲ್ಲಿ.....ಹಾಂ....??!!

Monday, March 15, 2010

ಆತ್ಮೀಯರೇ ನಿಮಗೆಲ್ಲ ಯುಗಾದಿಯ ಮನಃಪೂರ್ವಕ ಹಾರ್ದಿಕ ಶುಭಾಷಯಗಳು


ಆದಿ ಅಂತ್ಯಕಾಗುವ ಗಾದಿ
ಗಾದಿಯೇರಲಿದೆ ಉಗಾದಿ
ಕಹಿಗಣಿಮಾಡೋ ಗಾದಿ
ವರುಷ ಹರುಷಕಿದು ಗಾದಿ
ಅಂದಿತ್ತು ಇಂದಿದೆ ಮುಂದಾಗುವುದು
ಬಲಿತು ನೆರೆತು ಬಂದರೂ ಸಾವು
ಮಳೆಯಿರಲಿ ಬರಬರಲಿ
ಚಿಗುರೊಡೆವುದು ಮಾವು
ಗರಿಗರಿಯಾಗಿ ಆಲೆಮನೆ ಬೆಲ್ಲ
ನೋವುಂಡವಗೆ ಬೇವೇನು..?
ತಾಳಿದವಗೆ ಬೆಲ್ಲದ ಜೇನು
ಬಿರಿದನೆಲ ಮತ್ತೆಜೀಗುಡುವುದು
ಕಾಲುವೆಗದ್ದೆ ನೀರುಣುವುದು
ಮಾವಿನ ತಳಿರು, ಬಾಳೆಯ ಹಸಿರು
ಕೆಸರುಂಡ ಕೈ, ಕೆನೆಹಾಲು ಮೊಸರು
ಮನವರಳಲಿ, ತನು ಚಿಗುರಲಿ
ನಮ್ಮನಿಮ್ಮಲ್ಲಿಗೆ ಚೈತ್ರ ಶುಭತರಲಿ
ನವ ವರ್ಷದ ಸೊಗಡಿನಂದಕೆ
ಸಾಕ್ಷಿಯಾಗಲಿ ಈ ಉಗಾದಿ
ಆದಿ ಅಂತ್ಯಕಾಗುವ ಗಾದಿ

Monday, March 8, 2010

ಮಾ ತುಝೆ ಸಲಾಂ
(ಪ್ರಕಾಶ್ ನ ಇಟ್ಟಿಗೆ ಸಿಮೆಂಟಿಗೂ ಸಲಾಂ)


ಅಣುವಾಗಿ, ಕಣವಾಗಿ ಬೆಳೆವೆ ಜೀವವಾಗಿ
ಅವಳೊಡಲಲಿ ಅವಳ ಕರುಳ ಕುಡಿಯಾಗಿ
ಮಮ್ಮಲತೆಯ ಮರುಗುಡಿಯ ಮರಿಯಾಗಿ
ತಾಯಋಣಕೆಣೆಯಿಲ್ಲ ತೀರಿಸಲಾದೀತೇ
ಪಡೆದು ಬಂದರೂ ಎಷ್ಟೇ ಮರುಜನ್ಮ?

 

ಅಲ್ಲಿ ಅವಳ ರಕ್ತವೇ ಜೀವ - ನನಗೆ ಜನ್ಮ
ನೋವಿನಲೂ ನಲಿವಳು ಪಡೆದು ಮರುಜನ್ಮ
ಬಸಿರಲಿ ರಕ್ತ ಉಸಿರಲಿ ಮೊಲೆಯೂಡುವಳು
ತಾಯಋಣಕೆಣೆಯಿಲ್ಲ ತೀರಿಸಲಾದೀತೇ
ಪಡೆದು ಬಂದರೂ ಎಷ್ಟೇ ಮರುಜನ್ಮ?

 

ನೀಡಿ ಸೆರಗಾಸರೆ ತಾ ನೆನೆದರೂ ಮಳೆಯಲಿ
ಮಡಿಲ ಬಿಸಿ ತಾ ಸೊರಗಿದರೂ ಛಳಿಯಲಿ
ಮೊಲೆಯುಣಿಕೆಗೆ ದಣಿವಿಲ್ಲ ಹಸಿವಿದ್ದರೂ ಒಡಲಲಿ
ತಾಯಋಣಕೆಣೆಯಿಲ್ಲ ತೀರಿಸಲಾದೀತೇ
ಪಡೆದು ಬಂದರೂ ಎಷ್ಟೇ ಮರುಜನ್ಮ?

 

ಕೇಳುವಳು ಕಂದಾ ಹಸಿವೆಯೇ ಹೇಳು?
ಬಿದ್ದೆಯಾ ಪುಟ್ಟಾ ಆಯಿತೇ ಗಾಯ ಹೇಳು?
ಅಲ್ಲಿ ಗಾಜಿನ ಚೂರಿದೆ ನಾ ಬರುವೆ ತಾಳು
ತಾಯಋಣಕೆಣೆಯಿಲ್ಲ ತೀರಿಸಲಾದೀತೇ
ಪಡೆದು ಬಂದರೂ ಎಷ್ಟೇ ಮರುಜನ್ಮ?

 

ನೋಯಿಸಿದರೂ ಅವಳ ಮನ ಹಲವೊಮ್ಮೆ
ಅಮ್ಮ ಎಂದೊಡನೆ ನಕ್ಕು ಬಿಡುವಳು ಎಲ್ಲಮರೆತು
ಮುತ್ತಿಗಾಗಿ ಹೆತ್ತವಳ ರಕ್ತ ಕಣ್ಣೀರಿಗೆ ಕಾರಣವಾದರೂ
ಅಮ್ಮಾ ತಪ್ಪಾಯ್ತು ಎಂದೊಡನೆ ಅಪ್ಪಿಕೊಂಡುಬಿಡುವಳು
ತಾಯಋಣಕೆಣೆಯಿಲ್ಲ ತೀರಿಸಲಾದೀತೇ
ಪಡೆದು ಬಂದರೂ ಎಷ್ಟೇ ಮರುಜನ್ಮ?

Thursday, March 4, 2010

ನಿಜವಾಗ್ಲೂ ಗೊತ್ತಿಲ್ಲ ಮಗು
ಅಪ್ಪಾ...
ಏನ್ ಮಗಾ?

ನಿತ್ಯಾನಂದ ಅಂದರೆ ಏನಪ್ಪಾ?

ಯಾವಾಗಲೂ ಆನಂದವಾಗಿರೋದು

ಸ್ವಾಮಿ ನಿತ್ಯಾನಂದವಾಗಿರೋದು ಅಂದ್ರೆ

ರಾಸಲೀಲೆಯಲ್ಲಿರೋದು ಅಂತಾರಲ್ಲಪ್ಪಾ?

ನಂಗೊತ್ತಿಲ್ಲ ಮಗು.ಅಪ್ಪಾ...

ಏನೋ ಮಗಾ?

ನನ್ನನ್ನ ಸ್ಕೂಲಿನಲ್ಲಿ ಬಿ.ಟಿ. ಅಂತಾರಲ್ಲಪ್ಪ..

ಯಾಕೋ..? ನೀನೇನ್ಮಾಡ್ದೆ..??

ಕ್ಲಾಸ್ನಲ್ಲೂ ಹೀಗೇ ಪ್ರಶ್ನೆ ಕೇಳ್ತೀನಿ ಅಂತ ಹಾಗಂತಾರೆ..

ಅಂದ್ರೆ ಬಲು ತರಲೆ...ಅಂತ ಕಣೋ...

ಅದಕ್ಕೇನಾ ರೈತರು ಬಿ.ಟಿ. ಬದನೆ ಬೇಡ ಅಂತ ಪ್ರತಿಭಟಿಸಿದ್ದು

ನಂಗೊತ್ತಿಲ್ಲ ಮಗು.ಅಪ್ಪಾ ...

ಇನ್ನೂ ಏನೋ ತರಲೆ ನಿಂದು...?

ನೋಡಿದ್ಯಾ ನೀನೂ ನನ್ನ ಬಿ.ಟಿ. ಅನ್ತೀಯ..!

ಸಾರಿ ಕಣೋ..ಪುಟ್ಟ..ಹೇಳು ಏನು ಪ್ರಶ್ನೆ ನಿಂದು..?

ಒಬ್ಬ ಮಿನಿಸ್ಟ್ರು ಬಿ.ಟಿ. ಬದನೆ ಬೇಕು ಅಂತಾರೆ ಇನ್ನೊಬ್ರು ಬೇಡ ಅಂತಾರೆ

ಹೌದು ಕಣೋ ರೈತರಿಗೆ ಬೇಡ ಆದ್ರೆ ವ್ಯಾಪಾರಿಗೆ ಬೇಕು..

ಹಾಗದ್ರೆ ಈರುಳ್ಳಿ ಒಂದು ರಾಜ್ಯ ಸರ್ಕಾರಾನ ಬೀಳಿಸ್ತು
ಹಾಗೇನೆ..ಈ ಬದನೆಕಾಯಿ ಕೇಂದ್ರ ಸರ್ಕಾರಾನ ಬೀಳ್ಸುತ್ತಾ..?
ನಂಗೊತ್ತಿಲ್ಲ ಮಗು.