Friday, July 19, 2013

ಕರ್ ಭಲಾ ತೋ ಹೋ ಭಲಾ....


ಸುಮಾರಾಗೇ ಇಂಗ್ಲೀಷ್ ಬಲ್ಲ ಪೋಲೀಸ್ ಠಾಣಾಧಿಕಾರಿ ತನ್ನ ಚೇಂಬರಿನಲ್ಲಿ ನನ್ನನ್ನು ಸಾವಕಾಶವಾಗಿ ಕುಳಿತುಕೊಳ್ಳಲು ಹೇಳಿ ಬರೆಯಲಾರಂಭಿಸಿದ... ನನ್ನನ್ನು ವಿವರಣೆ ಕೇಳುತ್ತಾ...
“ಹೇಳಿ...ಹೇಗಾಯ್ತು ಎಲ್ಲಾ.....” ನಾನು ವಿವರಣೆ ಕೊಡಲಾರಂಭಿಸಿದೆ.
“ನಾನು ಡಾ. ಆಜಾದ್ ಅಂತ, ಭಾರತೀಯ ಮೂಲದವನು ಈಗ ಕುವೈತಲ್ಲಿ ವಿಜ್ಞಾನಿಯಾಗಿ ಕೆಲ್ಸ ಮಾಡುತ್ತಿದ್ದೇನೆ....”
......!! ಸ್ವಲ್ಪ ಮಟ್ಟಿಗೆ ಕಾಟಾಚಾರ ಎದ್ದು ಕಾಣುತ್ತಿದ್ದ ಆತನ ವರ್ತನೆಯಲ್ಲಿ ನನ್ನ ಮಾತು ಕೇಳಿ ಗಂಭೀರತೆ ಮನೆ ಮಾಡಿತು ಎನಿಸುತ್ತೆ... ಆತನೆಂದ..
“ಓಹ್..!! ಹೌದೇ..?? ಸರಿ ಹೇಳಿ” ಆಸಕ್ತಿ ತೋರುತ್ತಾ ..
“ಇಲ್ಲಿ ಆಂಟ್ವೆರ್ಪ್ ಯೂನಿವರ್ಸಿಟಿಲಿ ಬಯೋಟೆಕ್ ಕಾನ್ಫರೆನ್ಸಿಗೆ ಬಂದೆ, ಈ ದಿನ ಗೆಂಟ್ ಯೂನಿವರ್ಸಿಟಿಯ ನನ್ನ ಸ್ನೇಹಿತನೊಬ್ಬ ನನ್ನು ನೋಡಲು ಹೊರಟು ಟಿಕೆಟ್ ತೆಗೆದುಕೊಂಡು ಇಲ್ಲಿಗೆ ಬಂದೆ, ತಿಂಡಿ ತಿನ್ನುವಾಗ ಒಬ್ಬನನ್ನು ಟ್ರೈನ್ ಬಗ್ಗೆ ಖಚಿತಪಡಿಸಿಕೊಳ್ಳಲು ಕೇಳಿದೆ, ಆತ ಹೌದು ಇದೇ ಟ್ರೈನು ಎಂದು ಎರಡನೇ ಪ್ಲಾಟ್ ಫಾರ್ಮ್ ನ ಟ್ರೈನನ್ನು ತೋರಿದ, ನಾನೂ ವೇಳಾಪಟ್ಟಿಯಲ್ಲಿ ಸಮಯ ಖಚಿತಪಡಿಸಿಕೊಂಡೆ. ತಿಂಡಿ ತಿಂದು ಇನ್ನೇನು ೮-೧೦ ನಿಮಿಷದಲ್ಲಿ ಟ್ರೈನು ಹೊರಡುತ್ತೆ ಎನ್ನುವಾಗ ನೀರಿನ ಬಾಟಲ್ ಕೊಂಡು ಕೆಲ ಫೋಟೋ ತೆಗೆದು ಹೆಗಲಿಗೆ ನನ್ನ ಲ್ಯಾಪ್ ಟಾಪ್ ಬ್ಯಾಗ್, ಕ್ಯಾಮರಾ ಬ್ಯಾಗ್ ಮತ್ತು ಕಾನ್ಫರೆನ್ಸ್ ಬ್ಯಾಗ್ ಏರಿಸಿ, ಛಾಯಾಗ್ರಹಣ ಮಾಡುತ್ತಿದ್ದರಿಂದ ಕೊರಳಲ್ಲಿ ಕ್ಯಾಮರಾ ತೂಗಿ ಬಿಟ್ಟು, ನನ್ನ ಲಗೇಜ್ ಬ್ಯಾಗಿನ ಟ್ರಾಲಿ ಹ್ಯಾಂದಲ್ ಹಿಡಿದು ಬ್ಯಾಗ್ ಅನ್ನು ಉರುಳಿಸಿಕೊಂಡು ಟ್ರೈನಿನ ನಾಲ್ಕನೇ ಡಬ್ಬಕ್ಕೆ ಹತ್ತಿದೆ. ಹತ್ತುವುದಕ್ಕೆ ಮುಂಚೆ ಟ್ರಾಲಿ ಹ್ಯಾಂಡಲನ್ನು ತಳ್ಳಿ ಒಳ ಸೇರಿಸಿ, ಮೇಲಿನ ಹಿಡಿಯನ್ನು ಹಿಡಿದು ಟ್ರೈನಿನ ಬಾಗಿಲ ಮೆಟ್ಟಿಲು ಹತ್ತಿದೆ. ಇನ್ನೇನು ಒಳಗೆ ಲಗ್ಗೇಜ್ ಬ್ಯಾಗ್ ಇಡಬೇಕು ಎನ್ನುವಾಗ ಹ್ಯಾಂಡಲ್ ಕಿತ್ತು ಕೈಗೆ ಬಂತು (ವಿಮಾನ ಲಗ್ಗೇಜ್ ಸಾಗಣೆ ವ್ಯವಸ್ಥೆಯ ಕೃಪೆ ಅದು ಒಡೆದಿತ್ತು). ಸರಿ, ಲ್ಯಾಪ್ ಟಾಪ್, ಕ್ಯಾಮರಾ ಬ್ಯಾಗ್ ಮತ್ತು ಕಾನ್ಫರೆನ್ಸ್ ಬ್ಯಾಗ್ ಅನ್ನು ಸೀಟಿನ ಮೇಲಿಟ್ಟು ಲಗೇಜ್ ತೆಗೆಯೋಣ ಎಂದು ನಾಲ್ಕನೇ ಸಾಲಿನ ಸೀಟೊಂದರಲ್ಲಿ ಅವುಗಳನ್ನು ಇಟ್ಟು ಬ್ಯಾಗ್ ತರಲು ಬಂದೆ. ಬ್ಯಾಗ್ ತೆಗೆದುಕೊಳ್ಳುವಾಗ ಸ್ಟೇಶನ್ ನ  ಮೊದಲ ಮತ್ತು ಎರಡನೇ ಪ್ಲಾಟ್ ಫಾರಂ ನ ಪ್ರವೇಶ ದ್ವಾರದ ದೃಶ್ಯ ಮೋಹಕವಾಗಿ ಕಂಡಿತು ಅದನ್ನು ಕ್ಯಾಮರಾದಲ್ಲಿ ಸೆರೆ ಹಿಡಿದು ಬ್ಯಾಗ್ ತಳ್ಳಿಕೊಂಡು ಒಳಬಂದು ಲಗೇಜ್ ಸ್ಟಾಂಡಲ್ಲಿ ಬ್ಯಾಗ್ ಇಟ್ಟು ನನ್ನ ಸೀಟಿನತ್ತ ನೊಡ್ತೇನೆ... ಲ್ಯಾಪ್ ಟಾಪ್ ಬ್ಯಾಗ್ ಮಿಸ್ಸಿಂಗು...!!!! ಗಾಬರಿಯಲ್ಲಿ ಅಲ್ಲಿಂದ ಮುಂದಕ್ಕೆ ಎರಡನೇ ಸೀಟಲ್ಲಿದ್ದ ಪ್ರಯಾಣಿಕನನ್ನು ನಾನು ಇಲ್ಲಿಟ್ಟಿದ್ದ ಬ್ಯಾಗ್ ಕಾಣ್ತಿಲ್ಲ...ನೀವು...... ಎನ್ನುತ್ತಿರುವಂತೆಯೇ..ಆತ ನಾನು ಈ ಮುಂಚೆ ಟ್ರೈನ್ ಬಗ್ಗೆ ವಿಚಾರಿಸಿದಾತನೇ ಎಂದು ಮನದಟ್ಟಾಯಿತು, ಆತ ..ಹಿ ಹಿ..ಟುಕ್ ದಟ್..ಹಿ ರಾನ್ ಔಟ್ (ಅವನು ತಗೊಂಡು ಓಡಿ ಹೋದ) ಎಂದು ಮುಂದಿನ ಬಾಗಿಲು ತೋರಿದ.. ನನಗೆ ಕೋಪ ನೆತ್ತಿಗೇರಿತು.. ಯೂ ಬ್ಲಡಿ...ಹಿಡಿಯೋಕೆ ಆಗ್ತಿರ್ಲಿಲ್ವಾ ಅವನ್ನ... ನೋಡ್ಕೊಂಡು ಕೂತಿದ್ದೀಯಾ..?? ವೈ ಯು ಡಿಡ್ ನಾಟ್ ಶೌಟ್..ಅಂಡ್ ಕಾಲ್ ಮಿ.... ಅಂತ ರೇಗಿದೆ....”
ಮಧ್ಯೆ ಬಾಯಿ ಹಾಕಿದ ಅಧಿಕಾರಿ...
ನೀನು ಇಂಗ್ಲೀಷಲ್ಲಿ ಅವನ್ನ ಕೇಳಿದೆಯಾ...??
ಅರೆ ..ಹೌದಲ್ಲಾ ..!! ಆಗ ನೆನಪಾಯಿತು ನನಗೆ ನನ್ನ ಗಾಬರಿಯಲ್ಲಿ ಬೇಗ ಬಂದಿದ್ದು ಕನ್ನಡ ಬಾಯಿಗೆ... ’ಯೂ ಬ್ಲಡಿ...ಹಿಡಿಯೋಕೆ ಆಗ್ತಿರ್ಲಿಲ್ವಾ ಅವನ್ನ... ನೋಡ್ಕೊಂಡು ಕೂತಿದ್ದೀಯಾ..?  ಅಂದಿದ್ದೆ.... ಕನ್ನಡದಲ್ಲಿ....!!!!!
ನಾನು...
“ಯಾ ಯಾ... ಇನ್ ಇಂಗ್ಲೀಷ್ .” ಎಂದೆ
ಗೊತ್ತಿಲ್ಲ, ಸುಳ್ಳು ಯಾಕೆ ಹೇಳಿದೆ..?? ಅಥವಾ ಕನ್ನಡ ಎಂದಿದ್ದರೆ ಇಂಗ್ಲೀಷೇ ಸರಿಯಾಗಿ ಬಾರದ ಅವನು...’ಇದು ಯಾವ ಭಾಷೆ??’ ಎಂದೆಲ್ಲಾ ಸುಮ್ಮನೆ ಕಾಲಹರಣವಾಗುತ್ತೆ ಎಂದೋ.....ಅಂತೂ ಆತ
“ಓಕೆ...ದೆನ್ ವಾಟ್ ಹ್ಯಾಪನ್ಡ್...”(ಮತ್ತೇನಾಯಿತು) ಎಂದ
“ ನಾನು ಕೆಳಕ್ಕೆ ಓಡಿದೆ, ರೈಲ್ವೇ ಗಾರ್ಡ್ ನನ್ನ ಏನಾಯ್ತು ಅಂತ ಕೇಳಿ ಅವನೂ ಸಹಾಯಕ್ಕೆ ಬಂದ, ನೀನು ಆ ಕಡೆಯಿಂದ ಕೆಳಗಿಳಿದು ಬಾ, ನಾನು ಈ ಕಡೆಯಿಂದ ಬರ್ತೇನೆ ಎಂದ, ಕೆಳಗಿಳಿದು ನೋಡಿದ್ರೆ ಸುಮಾರು ಏಳೆಂಟು ಹೊರ ಬಾಗಿಲುಗಳಿವೆ, ತೋಚಲಿಲ್ಲ, ಯಾವುದರ ಮೂಲಕ ಹೋದ ಎಂದು.. ಅಲ್ಲೇ ಬೆಂಚಿನ ಮೇಲೆ ಹತ್ತು ಸೆಕೆಂಡ್ ಕೂತೆ... ಅಲ್ಲಿವರೆಗೆ ಏನಾಗುತ್ತಿದೆ ಎನ್ನುವ ಪರಿವೆಯೇ ನನಗಿರಲಿಲ್ಲ ಎಲ್ಲಾ ತನ್ನಷ್ಟಕ್ಕೆ ಆಗ್ತಿತ್ತು. ಅಲ್ಲಿ ಕೂತ ಮೇಲೆ ಯೋಚನೆ ಸ್ಥಿಮಿತಕ್ಕೆ ಬಂತು... ತಕ್ಷಣ ನೆನಪಾಗಿದ್ದು ಟ್ರೈನ್ ಹೊರಡಲು ಒಂದೆರಡು ನಿಮಿಷ ಇರಬಹುದು ಎಂದು ಹಿಂದೆಯೇ ನೆನಪಾದದ್ದು ಟ್ರೈನಲ್ಲಿರುವ ನನ್ನ ಲಗ್ಗೇಜ್ ಬ್ಯಾಗ್ ಮತ್ತಿತರ ಬ್ಯಾಗ್.....ಕ್ಯಾಮರಾ ಕೊರಳಲ್ಲೇ ಇತ್ತು..!!!!
ಮೇಲೆ ಬಂದೆ, ಗಾರ್ಡ್ ’ನಿಮ್ಮ ಲಗೇಜ್ ತೆಗೆದುಕೊಳ್ಳಿ, ಪೋಲಿಸ್ ಗೆ ತಿಳಿಸಿ ರಿಪೋರ್ಟ್ ತೆಗೆದುಕೊಳ್ಳಿ ನಿಮ್ಮ ಬೇರೆ ಪಾಸ್ಪೋರ್ಟ್ ಮಾಡಿಸಲು ಅನುಕೂಲ ಆಗಬಹುದು ಎಂದ. ಟ್ರೈನಿಗೆ ಹೋಗಿ ಲಗ್ಗೇಜ್ ಮತ್ತಿತರ ಬ್ಯಾಗ್ ತೆಗೆದುಕೊಂಡು ನಿಮ್ಮಲ್ಲಿಗೆ ಬಂದೆ.....”
ಅಂದು ಸುದೀರ್ಘ ವಿವರಣೆ ನೀಡಿದೆ...
ಪೋಲೀಸ್ ಕೇಳಿದ -“ನೀವು ಕಳ್ಳನ್ನ ನೋಡಿದ್ರಾ ? ಹೇಗಿದ್ದ ಅವ??”
“ಹೌದು ನಾನು ಬಾಗಿಲಿಂದ ಇಳಿದಾಗ ಅವನು ಮೆಟ್ಟಿಲಿಳಿಯಲು ಓಡುತ್ತಿದ್ದ ಕಂಕುಳಲ್ಲಿ ನನ್ನ ಬ್ಯಾಗ್ ಇತ್ತು, ನನ್ನ ಕೂಗಾಟದಿಂದ ವನ ವೇಗ ಹೆಚ್ಚಾಯ್ತು, ಸಪೂರ ದೇಹ, ನುಸುಗಪ್ಪು ಕೋಟು ಹಾಕಿದ್ದ ಕಡು ಬೂದು ಬಣ್ಣದ (ಇರಬಹುದು) ಪ್ಯಾಂಟ್ ಹಾಕಿದ್ದ, ಸುಮಾರು ೪೦ ರ ಆಸುಪಾಸಿನ ವಯಸ್ಸಿರಬಹುದು.” ಎಂದೆ.
ನನ್ನನ್ನು ದಿಟ್ಟಿಸಿ ನೋಡಿದ ಅಧಿಕಾರಿ ನಿಜಕ್ಕೂ ನಿಮ್ಮ ಬ್ಯಾಗ್ ಕಳುವಾಗಿದೆಯೇ ಎಂದ...??
ನನಗೆ ಆಶ್ಚರ್ಯ ಮತ್ತು ಕೋಪ ಒಟ್ಟಿಗೆ ಬಂತು... ಆದರೆ ತಕ್ಷಣ ಏಕಿರಬಹುದು ಎಂದು ಊಹಿಸಿದೆ...
ನಿಜಕ್ಕೂ ಆ ಎರಡು ನಿಮಿಷ ಬಿಟ್ಟರೆ ಗಾಬರಿ ಇರಲಿಲ್ಲ ನನ್ನ ಮುಖದಲ್ಲಿ. ಬೆಂಚಿನ ಮೇಲೆ ಕುಂತು ಮೇಲೆ ಬಂದಮೇಲೆ ನನಗೆ ಮುಂದೇನು ಮಾಡಬಹುದು ಎಂಬುದರ ಲೆಕ್ಕಾಚಾರ ತಲೆಯಲ್ಲಿ ಓಡುತ್ತಿತ್ತು...ಹಾಗಾಗಿ ಶಾಂತ ಕಂಡ ನನ್ನನ್ನು ನೋಡಿ ಆತನಿಗೆ ಹಾಗನ್ನಿಸಿರಬೇಕು..ಎಂದುಕೊಂಡು... ಆತನ ಮುಖ ನೋಡಿದೆ.. ಆತನೇ ಹೇಳಿದ
“ಸಾಮಾನ್ಯವಾಗಿ ಅಮೂಲ್ಯ ವಸ್ತು ಕಳಕೊಂಡವರು ದಿಕ್ಕು ತೋಚದೇ ಕುಳಿತುಕೊಳ್ಳುತ್ತಾರೆ..ನೀವು ಹೀಗೆ ಕೂಲ್ ಆಗಿರುವುದರಿಂದ ಹಾಗೆ ಕೇಳಿದೆ, ಕ್ಷಮಿಸಿ” ಎನ್ನುತ್ತಾ...
“ಬಂದೆ ಇರಿ, ಎಲ್ಲಾ ರಿಪೋರ್ಟ್ ಮಾಡಿದ್ದೇನೆ ನಿಮ್ಮ ವಿವರ ತುಂಬಬೇಕಷ್ಟೇ” ಎಂದು ಇನ್ನೊಂದು ಕೊಠಡಿಗೆ ಹೋದ...
ನಾನು ನನ್ನ ಲಗೇಜ್ ಬ್ಯಾಗನ್ನೊಮ್ಮೆ ಬಿಚ್ಚಿ ನೋಡಿಕೊಂಡೆ...ಒಂದು ವೇಳೆ ಪಾಸ್ ಪೋರ್ಟ್ ಮತ್ತು ಟಿಕೆಟ್ ಇದರಲ್ಲಿದೆಯಾ ?? ಎಂದು ಆಶಾಭಾವದೊಂದಿಗೆ... ಊಹೂಂ.... ಖಾಲಿ ಮೇಲಿನ ಪೌಚ್ ಅಣಕಿಸಿತು ನನ್ನ, ಯಾಕಂದ್ರೆ ಅಲ್ಲಿಯೇ ಇದ್ದ ಟಿಕೆಟ್, ಪಾಸ್ ಪೋರ್ಟ್ ಮತ್ತು ಇನ್ಶೂರೆನ್ಸ್ ದಾಖಲೆಗಳ ಕವರನ್ನು ಹೋಟೆಲಿಂದ ಹೊರಡುವಾಗ ಲ್ಯಾಪ್ ಟಾಪ್ ಬ್ಯಾಗಿಗೆ ಹಾಕಿದ್ದೆ....!!!!
೫ ನಿಮಿಷದ ನಂತರ ಅಧಿಕಾರಿ ಎರಡು ಹಾಳೆಗಳ ರಿಪೋರ್ಟ್ ನೊಂದಿಗೆ ಹಾಜರಾದ. ನನ್ನ ಹೆಸರು, ಪಾಸ್ಪೋರ್ಟ್ ನಂಬರ್, ಲ್ಯಾಪ್ ಟಾಪ್ ಬ್ರಾಂಡ್ ಎಲ್ಲಾ ವಿವರ ಪೆನ್ನಿನ ಮೂಲಕ ಅದರಲ್ಲಿ ನಮೂದಿಸಿ ನನಗೆ ಸಹಿ ಮಾಡಲು ಹೇಳಿ ಸಹಿ ಮಾಡಿಸಿಕೊಂಡು ತನ್ನ ಸಹಿ ಹಾಕಿ ಸೀಲ್ ಒತ್ತಿ, ಒಂದು ಪ್ರತಿ ತನ್ನ ಬಳಿ ಇಟ್ಟುಕೊಂಡು ಮೂಲ ನನಗೆ ಕೊಟ್ಟು... ಸಾರಿ ಫಾರ್ ದಿ ಅನ್ ಫಾರ್ಚುನೇಟ್ (ನಿಮಗೆ ಘಟಿಸಿದ ಈ ದುರದೃಷ್ಟಕರ ಘಟನೆಗೆ ನನ್ನ ವಿಷಾದವಿದೆ) ಎಂದು ಹೇಳಿ..ಗುಡ್ ಲಕ್ ಹೇಳಿ, ಬ್ರಸೆಲ್ಸ್ ಭಾರತೀಯ ರಾಯಭಾರಿ ಕಛೇರಿಯ ವಿಳಾಸ ಕೊಟ್ಟು ಪಾಸ್ಪೋರ್ಟ್ ಗೆ ಪ್ರಯತ್ನಿಸಿ ಎಂದು ಹೇಳಿ ಬೀಳ್ಕೊಟ್ಟ.
ಪಾಸ್ಪೋರ್ಟ್ ಪ್ರತಿಗಳೂ ಅದೇ ಬ್ಯಾಗಿನಲ್ಲಿದ್ದವು, ಹೋಟೆಲಿನ ನೆನಪಾಯ್ತು, ಬಹುಶಃ ಅವರು ನನ್ನ ಪಾಸ್ಪೋರ್ಟ್ ಪ್ರತಿ ಇಟ್ಟಿರಬಹುದಾ..?? ಇನ್ನೊಂದು ಆಸೆ ಕಿರಣ...!!!!
ಹೋಟೆಲ್ ಗೆ ಬಂದೆ (ಸ್ಟೇಶನ್ ಪಕ್ಕದಲ್ಲೇ ಇದ್ದಿದ್ದರಿಂದ, ಎರಡೇ ನಿಮಿಷದಲ್ಲಿ ಅಲ್ಲಿಗೆ ಬಂದೆ).
ಸ್ವಾಗತಕಟ್ಟೆ (ರಿಸೆಪ್ಶನ್ ಕೌಂಟರ್ನ ಚನ್ನಾಗಿ ಇಂಗ್ಲೀಷ್ ಬಲ್ಲವಳು ಮತ್ತು ಸಂಭಾವಿತ ನಡೆ ನುಡಿಯ) ಹುಡುಗಿ
“ಯೆಸ್ ಸರ್ ಏನಾಯ್ತು” ಎಂದಳು
ಎಲ್ಲಾ ವಿವರಿಸಿದೆ, ಓಹ್ ಮೈ ಗಾಡ್ ಎಂದು ತನ್ನ ಅನುಕಂಪ ತೋರಿ..ಪ್ಲೀಸ್ ಹ್ಯಾವ್ ಸೀಟ್ ಅಂತ ನನ್ನ ಕುಳ್ಳಿರಿಸಿ.. ವಾಟ್ ವುಡ್ ಯು ಲೈಕ್ ಟು ಹ್ಯಾವ್ (ಏನು ತಗೋತೀರಿ), ಕಾಫಿ, ಟೀ, ಜ್ಯೂಸ್..ಎಂದಳು
ದಾಕ್ಷಿಣ್ಯ..ಸಂಕೋಚ ತೋರದೇ “ಜ್ಯೂಸ್” ಎಂದೆ
ಜ್ಯೂಸ್ ಕೊಟ್ಟಳು ಕುಡಿಯುತ್ತಾ, ನಿಮ್ಮಲ್ಲಿ ನನ್ನ ಪಾಸ್ಪೋರ್ಟ್ ಕಾಪಿ ಇದೆಯೇ ಎಂದೆ
ಇಲ್ಲ ವೀಸಾ ಪುಟ ಮಾತ್ರ ತಗೋತೀವಿ ಅದರ ಪ್ರತಿ ಒಂದೆರಡು ಕೊಡುತ್ತೇನೆ ಎಂದು, ಎರಡು ಪ್ರತಿ ಮಾಡಿಕೊಟ್ಟು..ಮತ್ತೇನಾದರೂ ಸಹಾಯ ಬೇಕಿದ್ದರೆ ತಿಳಿಸಿ ಎಂದಳು...
ಆಕೆಗೆ ಧನ್ಯವಾದ ಹೇಳಿ, ಬ್ರಸಲ್ಸ್ ಭಾರತೀಯ ಎಂಬಸಿ ಗೆ ಫೋನ್ ಮಾಡಲಾಗುತ್ತದೆಯೇ..?? ಎನ್ನುತ್ತಿರುವಂತೆಯೇ..
ಫೋನಾಯಿಸುತ್ತಾ.. ನಂಬರ್ ಹೇಳಿ ಎಂದಳು..
ಎಂತಹ..ವಿಲೋಮಗಳು..ವಿಪರೀತಗಳು...!!! ನನಗೆ ಆಶ್ಚರ್ಯ ಎನಿಸಿತು.. ಎಲ್ಲಾ ದಿಕ್ಕೆಡುವಿಕೆಗೆ ದೂಡಿದ ನಿರ್ದಯಿ ಕಳ್ಳ ಒಂದೆಡೆ, ನನಗೆ ಮಾರ್ಗ (ಗೊತ್ತಿಲ್ಲ) ತೋರಿ ರೈಲಿಬ ಬಗ್ಗೆ ಹೇಳಿಯೂ ಕಳ್ಳನನ್ನು ಕಂಡೂ ಸುಮ್ಮನಿದ್ದ ಸಹಪ್ರಯಾಣಿಕ ಇನ್ನೊಂದೆಡೆ, ತನ್ನ ಕೈಲಾದ ಸಹಾಯ ಮಾಡಿದ ರೈಲ್ವೇ ಗಾರ್ಡ್, ಸೌಹಾರ್ದವಾಗಿ ವರ್ತಿಸಿದ ಪೋಲೀಸ್ ಅಧಿಕಾರಿ, ಬಲು ಸಂಭಾವಿತ ನಡೆ ತೋರಿ ಸಹಕರಿಸಿದ ಹೋಟೆಲ್ ರಿಸೆಪ್ಶನಿಷ್ಟ್ ಮಗದೊಂದೆಡೆ..!!! ಎಂತಹ ವಿಚಿತ್ರ?? ಏನು ತಿರುವುಗಳು...??? ವಿಧಿ, ಜೀವನ ಎಂದರೆ ಇದೇ...!!!
ರಿಸೆಪ್ಶನಿಷ್ಟ್ ನಿಂದ ಎಂಬಸಿಯ ವಿವರ ಪಡೆದು ಮತ್ತೆ ಅದೇ ಸ್ಟೇಷನ್ನಿಗೆ ಬಂದೆ... ಟಿಕೆಟ್ ಗೆ ಹೋದಾಗ ನನ್ನ ಮುಖ ಕಂಡು ಮುಂಗಟ್ಟಿನ (ಕೌಂಟರಿನ) ವ್ಯಕ್ತಿ.. ಹುಬ್ಬೇರಿಸಿದ... “ಏಕೆ ಗೆಂಟ್ ಗೆ ಹೋಗಲಿಲ್ಲವಾ ಎನ್ನುವಂತೆ...
ಆತ ಕೇಳುವುದಕ್ಕೆ ಮುಂಚೆಯೇ ಸ್ಥೂಲವಾಗಿ ವಿವರಿಸಿ, ಗೆಂಟ್ ಟಿಕೆಟ್ ವಾಪಸ್ ಪಡೆದು ಬ್ರಸೆಲ್ಸ್ ಟಿಕೆಟ್ ಕೊಡುವಿರಾ ಎಂದಾಗ... ನೋ ಪ್ರಾಬ್ಲಂ... ಅದೇ ಟಿಕೆಟ್ ಮೌಲ್ಯದ್ದೇ ಬ್ರಸಲ್ಸ್ ಟಿಕೆಟ್ ಎಂದು ನನ್ನ ಟಿಕೆಟ್ ಪಡೆದು ಬ್ರಸೆಲ್ಸ್ ಟಿಕೆಟ್ ಕೊಟ್ಟು “ಗುಡ್ ಲಕ್” ಎಂದು ಶುಭಕೋರಿದ... !!! ಹೀಗೂ ಇರ್ತಾರೆ..ಎನಿಸಿತು, ಬಹುಶಃ ನಕಾರಾತ್ಮಕ ಛಾಪು ಕಡಿಮೆಯಾಗತೊಡಗಿತ್ತು ಮನದಲ್ಲಿ ಬೆಲ್ಜಿಯಂ ಬಗ್ಗೆ.
ಪುಣ್ಯಕ್ಕೆ ಈ ಸಲದ ಟ್ರೈನ್ ಕೆಳಗಿನ ಪ್ಲಾಟ್ ಫಾರಂ...!!! ಟ್ರೈನಿಗಾಗಿ ಕಾದೆ, ಐದು ನಿಮಿಷದಲ್ಲಿ ಟ್ರೈನ್ ಬಂತು, ಹತ್ತಿ ಕುಳಿತೆ... ಒಂದು ಬ್ಯಾಗ್ ಕಡಿಮೆ ಆಗಿತ್ತು ...!!! ಹಾಗಾಗಿ ಎಣಿಕೆ ತಪ್ಪಲಿಲ್ಲ....
೪೦ ನಿಮಿಶದಲ್ಲಿ ಬ್ರಸೆಲ್ಸ್ ಸೆಂಟ್ರಲ್ ನಲ್ಲಿಳಿದೆ.


ಆ ವೇಳೆಗೆ ಸಂಜೆಯ ನಾಲ್ಕು ಗಂಟೆಗೆ ಐದು ನಿಮಿಷ ಬಾಕಿ. ತಡ ಮಾದದೇ ಟ್ಯಾಕ್ಸಿ ಹಿಡಿದು ಅಡ್ರೆಸ್ ತೋರಿಸಿದೆ, ೧೨ ಯೂರೋ ತೆಗೆದುಕೊಂಡು ಭಾರತೀಯ ಎಂಬಾಸಿ ಬಳಿ ಇಳಿಸಿದ. ೪೫-೫೦ ಕಿಮೀ ಗೆ ೭ ಯೂರೋ, ಎರಡು ಕಿಮೀ ದೂರದ ಭಾರತೀಯ ಎಂಬಾಸಿಗೆ ೧೨ ಯೂರೋ..!!! ವಾಹ್ ಬೆಲ್ಜಿಯಂ ಟ್ಯಾಕ್ಸಿಯೇ...!!!
ನಾಲ್ಕಕ್ಕೆ ಎಂಬಸಿ ಬಾಗಿಲು ತೆರೆಯಿತು, ದೇಶದ ಹತ್ತಾರು ಮಂದಿ, ಹಿಂದಿ ಇಂಗ್ಲೀಷ್ ಪರಿಚಿತ ಮಾತುಗಳು...!! ಅಬ್ಬಾ...!!!
ಒಳಗಡೆ ಹೋಗಿ ನನ್ನ ಸರದಿಗಾಗಿ ೫ ನಿಮಿಷ ಕಾದೆ. ಮುಂಗಟ್ಟೆಯ ಮಹಿಳೆ (ಬಹುಶಃ ದಕ್ಷಿಣ ಭಾರತದವಳು ಎನಿಸುತ್ತೆ) ಸಾವಕಾಶವಾಗಿ ನನ್ನ ಅಹ್ವಾಲು ಕೇಳಿ ಕೆಲವು ಫಾರ್ಮ್ ಕೊಟ್ಟು ತುಂಬಲು ಹೇಳಿದಳು. ಈ ದಿನದ ವಹಿವಾಟು ಮುಗಿದೆ, ಯಾವುದಕ್ಕೂ ಈ ದಿನ ನೀವು ಅರ್ಜಿ ಸಲ್ಲಿಸಿ ನಾಳೆ ಬೆಳಿಗ್ಗೆ ನಿಮಗೆ ನಮ್ಮ ಕೈಲಾದ ಎಲ್ಲಾ ಸಹಾಯ ಮಾಡುತ್ತೇವೆ ಎಂದು ನನ್ನ ಧೈರ್ಯ ಹೆಚ್ಚಿದಳು. ನಮ್ಮ ಸಾಹೇಬ್ರು ಅಜಯ್ ಅಗರ್ವಾಲ್ ಅಂತ ಅವರನ್ನು ಭೇಟಿ ಮಾಡಿ ಹೇಳಿ ಎಮ್ದೂ ಸಲಹೆ ಕೊಟ್ಟಳು...!!! ಕಳ್ಳ, ಕಳ್ಳನ ಸಹಾಯಕ ಈ ಇಬ್ಬರನ್ನು ಬಿಟ್ಟರೆ...!!!??? ನೆನಪಿಸಿಕೊಂಡು ಮುಗುಳ್ನಕ್ಕೆ, ಏನು? ಏನಾಯ್ತು ಎಂದು ಕೇಳಿದಳು ಆಕೆ...ಕುತೂಹಲದಿಂದ... ಏನಿಲ್ಲ .. ಕಳ್ಳನ ಬಗ್ಗೆ ಯೋಚಿಸಿ ನಗು ಬಂತು ಎಂದೆ... ಈಗ ಆಕೆಯ ಮುಖದಲ್ಲಿ ಆಶ್ಚರ್ಯ ಮತ್ತು ಸಂಶಯ ಸಹಾ ಕಂಡಿತು...ಬಹುಶಃ ಪೋಲೀಸ್ ಅಧಿಕಾರಿಯ ಮನಸ್ಥಿತಿಯೇ ಇಲ್ಲಿಯೂ...!!!!



ಸ್ವಲ್ಪ ಸಮಯದಲ್ಲಿ, ಸರ್... ಸಾಹೇಬ್ರು ಕರೀತಿದ್ದಾರೆ..ಬನ್ನಿ ಎಂದು ಒಳ ಕರೆದಳು. ಒಳ ಹೋದೆ, ಸುಮಾರು ೩೦-೩೨ ವಯಸಿನ ನೀಟಾಗಿ ಬಾಚಿದ ಗೋಧಿ ಮೈಬಣ್ಣದ ೫.೫-೫.೬ ಅಡಿ ಎತ್ತರದ ಮತ್ತು ಸೌಮ್ಯ ಎನಿಸುವ ಮುಖಭಾವದ ಅಧಿಕಾರಿ ಪ್ಲೀಸ್ ಕಮ್ ಇನ್ ಎಂದಾಗ... ನನ್ನ ಆತನ ಬಗ್ಗೆ ಏಕೋ ಒಳ್ಳೆಯ ಮನುಷ್ಯ ಎನಿಸಿತ್ತು.
“ಹೇಳಿ..ಏನಾಯ್ತು... “
ಪೂರ್ತಿ ಕಥೆಯನ್ನು ವಿವರಿಸಿದೆ... ನನ್ನ ಆಶ್ಚರ್ಯಕ್ಕೆ ಆತ ಚಕಿತಗೊಳ್ಲಲಿಲ್ಲ...
“ಡೋಂಟ್ ವರಿ, ಇಂತಹ ಕೇಸುಗಳು ನನಗೆ ವಾರಕ್ಕೆ ಎರಡು ಮೂರಾದ್ರೂ ಸಿಗುತ್ತವೆ” ಎಂದ
ಆತನ ಮಾತು, ಏನೇ ಆಗಬೇಕಿದ್ದರೂ ಒಳ್ಲೆಯ ದಿಶೆಯಲ್ಲೇ ಆಗುತ್ತೆ ಎನ್ನುವ ಭರವಸೆ ಮೂಡತೊಡಗಿತು. ನನ್ನ ಹಿನ್ನೆಲೆ ಮತ್ತು ನನ್ನ ಗೊಂದಲಗಳ ಬಗ್ಗೆ ಹೇಳಿದಾಗ ನನ್ನ ಸ್ಥೈರ್ಯ ಹೆಚ್ಚಿಸುವ ಆತನ ಮಾತು ಇನ್ನೂ ನನ್ನ ಕಿವಿಯಲ್ಲಿ ಮಾರ್ದನಿಸುತ್ತಿದೆ.
“ಲುಕ್ ಡಾಕ್ಟರ್ ಆಜಾದ್, ಮೈಂ ಆಪ್ಕೆ ಲಿಯೇ ಜೋ ಭೀ ಬನ್ ಪಡೆಗಾ ಕರೇಂಗೆ, ಟೇಕ್ ಇಟ್ ಫ್ರಂ ಮಿ, ಯೂ ವಿಲ್ ಟ್ರಾವೆಲ್ ಅಸ್ ಪರ್ ಯುವರ್ ಶೆಡ್ಯೂಲ್, ಕಲ್ ಆಪ್ ಸುಬಹ್ ೯.೩೦ ಕೊ ಆಜಾಯಿಯೆ, ಕ್ಯೂ ಜೋ ಭೀ ಹೋ, ಆಪ್ಕಾ ಕೇಸ್ ಪ್ರಯಾರಿಟಿ ಮೆ ಲೇಂಗೆ, ಕುವೈತ್ ಸೆ ಆಪ್ಕೆ ಪಾಸ್ಪೋರ್ಟ್ ಕೆ ಬಾರೆ ಮೆ ಕಂಫ್ಹರ್ಮೇಶನ್ ಮಿಲ್ತೇ ಹೀ ಆಪ್ಕೋ ದೋ ಸಾಲ್ ಕೆ ವ್ಯಾಲಿಡಿಟಿ ಕೆ ಸಾಥ್ ಪಾಸ್ಪೋರ್ಟ್ ಇಶ್ಯೂ ಕರ್ ಕೆ ದೇಂಗೆ”
ನನಗೆ ಈಗಂತೂ ನನ್ನ ಹಣೆಬರಹ ಮತ್ತು ಸಿಗುತ್ತಿದ್ದ ಉತ್ತಮ ಸಹಕಾರೀ ವ್ಯಕ್ತಿತ್ವಗಳ ಕಾರಣ ಭರವಸೆ ಮೂದತೊಡಗಿತ್ತು... ನನ್ನ ಆತಂಕ ಉಳಿದಿದ್ದು..ಒಂದೇ....ಪಾಸ್ಪೋರ್ಟ್ ಸಿಗುತ್ತೆ ಆದರೆ ಕುವೈತಿಗೆ ಪ್ರವೇಶ ಹೇಗೆ...?? ಒಂದು ಕಪ್ಪು ಮೋಡದ ರಜತರೇಖೆ (silver lining in a dark cloud) ಎಂದರೆ ನನ್ನಲ್ಲಿ ಕ್ಷೇಮವಾಗಿದ್ದ ಎಲ್ಲಾ ಕ್ರೆಡಿಟ್ ಕಾರ್ಡ್ಗಳು, ಕುವೈತ್ ನ ಸಿವಿಲ್ ಐಡಿ, ಡ್ರೈವಿಂಗ್ ಲೈಸೆನ್ಸ್ ಮತ್ತು ಎಲ್ಲ ಹೃದಯವಂತರು ತುಂಬಿದ್ದ ಭರವಸೆ.

ಒಳಿತನ್ನು ಎದುರುನೋಡಬೇಕಿದ್ದರೆ ಒಳಿತು ಮಾಡುವ ಮನೋಭಾವ ಮೊದಲಿರಬೇಕು....!! ನನ್ನಮ್ಮ ಹೇಳುತ್ತಿದ್ದ ಮಾತುಗಳು ನೆನಪಾದವು. “ಕರ್ ಭಲಾ ತೋ ಹೋ ಭಲಾ”