Sunday, May 23, 2010

ಗೊತ್ತಿಲ್ಲ ಮಗು

ಅಪ್ಪಾ...


ಏನೊ ಪುಟ್ಟಾ...?


ಲೈಲಾ ಮಜನೂ


ಪ್ರೇಮಿಗಳು ಅಂದ್ರೆ ಹಾಗಿರ್ಬೇಕು ಅಂತಾರೆ ಹೌದಾ..?


ಹೌದು ಕಣೋ..ನಿನಗ್ಯಾಕದು ಈಗ..?


ಅಲ್ಲಪ್ಪಾ ಲೈಲಾಗೋಸ್ಕರ ಮಜನೂ ಹುಚ್ಚನಾದನಂತೆ?


ಹೌದು ಕಣೋ ಹಾಗೆ ಅಂತ ಕಥೆಯಿದೆ..


ಮತ್ತೆ ಈಗ...ಲೈಲಾ ಯಾಕೆ ಹುಚ್ಚಿ ಆಗಿರೋದು..?


ಏನು ಹೇಳ್ತಿದೀಯೋ..? ಯಾವ ಲೈಲಾ..?


ಅದೇನಪ್ಪಾ ಮೊನ್ನೆ ಆಂಧ್ರಕ್ಕೆ ಅಪ್ಪಳಿಸಿದ ಲೈಲಾ


ಅಂತ ಟೀವಿ..ನ್ಯೂಸಿನಲ್ಲಿ ಬಂತಲ್ಲಾ...


ಹಹಹ..ನಂಗೊತ್ತಿಲ್ಲ ಮಗು.






ಅಪ್ಪಾ...


ಏನೋ ಮತ್ತೆ ನಿಂದು...?


ಬಿರುಗಾಳಿ..ಮಳೆ..ಚಂಡಮಾರುತ


ಹೀಗಂದ್ರೆ ನಮಗೆ ಅರ್ಥ ಆಗುತ್ತಲ್ಲಾ..?


ಹೌದು..ಯಾಕೆ ನಿನಗೆ ಅರ್ಥ ಆಗೊಲ್ಲವಾ?


ನನಗೆ ಅರ್ಥ ಆಗುತ್ತಪ್ಪ..ಆದ್ರೂ


ಲೈಲಾ, ಕತ್ರಿನಾ ಅಂತ ನಟಿಯರ ಹೆಸರಿಂದ ಕರೀತಾರಲ್ಲ


ಬಿರುಗಾಳಿ ತರಹ ಎಲ್ಲ ನಟರನ್ನೂ


ಗುಡಿಸಿಬಿಡ್ತಾರಂತಲ್ಲಾ ಅದಕ್ಕಾ....??


ಏಯ್ ಸುಮ್ನೆ ಓದ್ಕೊಳ್ಳೋದ್ ನೋಡೋ


ನಂಗೊತ್ತಿಲ್ಲ...

Monday, May 17, 2010

ಬ್ಲಾಗಿಗರ ಸಂತೋಷ ಕೂಟ

ಬ್ಲಾಗಿಗರ ಸಂತೋಷ ಕೂಟ



ಮಿತ್ರರೇ ಈಗಾಗಲೇ ಪ್ರಕಾಶ್ ಮತ್ತು ಶಿವು ತಮಗೆಲ್ಲ ಬ್ಲಾಗಿಗರ ಕೂಟದ ಬಗ್ಗೆ ತಿಳಿಸಿದ್ದಾರೆ. ಹೀಗೊಂದು ಕೂಟದ ಆಯೋಜನೆಗೆ ನಾವೆಲ್ಲಾ ಮುಂದಾಗುತ್ತಿರುವುದು ಕನ್ನಡದ ಬ್ಲಾಗಿಗಳು ಯಾರಿಗೂ ಕಡಿಮೆಯಿಲ್ಲ ಎನ್ನುವುದನ್ನು ತೋರಿಸುತ್ತದೆ. ಎಲ್ಲ ಸ್ನೇಹಿತರೂ ನನ್ನ ಮೊದಲ ಪ್ರಸ್ತಾಪದಲ್ಲೇ ಬಹಳ ಹುಮ್ಮಸ್ಸಿನ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಿರಿ. ಅದರಂತೆ ಪ್ರಕಾಶ್, ಶಿವು, ತೇಜಸ್ವಿನಿ, ದಿನಕರ್, ...ಹೀಗೆ ಹಲವರೊಂದಿಗೆ ಚರ್ಚಿಸಿ ಪ್ರಾರಂಭವಾಗಿಬಿಡಲಿ ಎಂದು ಮುಂಬರುವ ಆಗಸ್ಟ್ 22 ಕ್ಕೆ ಈ ಬ್ಲಾಗಿಗರ ಕೂಟದ ಆಯೋಜನೆಯನ್ನು ಹಮ್ಮಿಕೊಂಡಿದ್ದೇವೆ.


ಈ ಸಂದರ್ಭದಲ್ಲಿ ಬ್ಲಾಗಿಗರ ಆಯ್ದ ಲೇಖನಗಳ ಪುಸ್ತಕದ ಬಗ್ಗೆಯೂ ಸಕಾರಾತ್ಮಕ ಪ್ರತಿಕ್ರಿಯೆ ಬಂದಿದ್ದರಿಂದ, ಇಂತಹ ಪುಸ್ತಕದ ಬಿಡುಗಡೆಯನ್ನೂ ಮಾಡುವುದೆಂದು ಯೋಚಿಸಿ ಎಲ್ಲ ಸ್ನೇಹಿತರಿಗೆ ಸಂದೇಶವನ್ನು ನಮ್ಮ ಸ್ನೇಹಿತರಾದ ಶಿವು, ದಿನಕರ್, ಶಿವಶಂಕರ್ ಎಳವತ್ತಿ, ಈಶ್ ಮತ್ತು ಹೊರನಾಡ ಕನ್ನಡಿಗರ ಸಂಚಾಲಕರಾಗಿ ಡಾ. ಗುರು ಹಾಗೂ ಶ್ರೀ ಉದಯ್ ಇಟ್ಟಿಗಿ ಯವರು ತಿಳಿಸಿರುತ್ತಾರೆ ಅಥವಾ ತಿಳಿಸಲಿದ್ದಾರೆ.


ಬ್ಲಾಗ್ ಕೂಟದ ಆಯೊಜನೆ ಮತ್ತು ಇತರ ವೆಚ್ಚ ಭರಿಸಲು ಬ್ಲಾಗಿಗಳ ಪುಸ್ತಕ ಪ್ರಕಟಣೆಯಲ್ಲಿ ಲೇಖನ ಪ್ರಕಟಿಸುವ ಬ್ಲಾಗು ಮಿತ್ರರಿಂದ ತಮ್ಮ ಲೇಖನದ 1 ಪುಟಕ್ಕೆ ರೂ 150/- ಅಥವಾ 2 ಪುಟದ ಲೇಖನವಾದರೆ ರೂ 250/- ಸಂಗ್ರಹಿಸುವುದೆಂದು ಯೋಚಿಸಿದ್ದೇವೆ. ಇದರ ಜೊತೆಗೆ ನಮ್ಮ ಕೆಲ ಬ್ಲಾಗು ಮಿತ್ರರು ಸ್ವಪ್ರೇರಿತ ದೇಣಿಗೆಯನ್ನೂ ಈ ಕಾರ್ಯಕ್ರಮಕ್ಕಾಗಿ ನೀಡಲಿದ್ದಾರೆ.


ಈ ಕೂಟದ ಕಾರ್ಯಕ್ರಮಗಳಲ್ಲಿ ಏನನ್ನು ನೀವು ಅಪೇಕ್ಷಿಸುತ್ತೀರಿ ಎನ್ನುವುದನ್ನೂ ತಿಳಿಸಿ...ನಿಮ್ಮ ಸಲಹೆ ಮತ್ತು ಹುಮ್ಮಸ್ಸಿನ ಸಹಕಾರ ನಮ್ಮ ಮುಂದಿನ ಹೆಜ್ಜೆಗೆ ಪ್ರೋತ್ಸಾಹ ನೀಡುವುದಂತೂ ಖಂಡಿತ.

ಲೇಖನ ಕಳುಹಿಸುವ ವಿಷಯದಿಂದ ಮೊದಲುಗೊಂಡು ಈ ಬ್ಲಾಗಿಗರ ಕೂಟದ ಯಶಸ್ಸಿಗೆ ನೀವೆಲ್ಲಾ ಕೈಜೋಡಿಸಬೇಕೆಂದು ವಿನಂತಿ..ನಿಮ್ಮ ನಿಮ್ಮ ಸ್ನೇಹಿತರ ವರ್ತು ಲದಲ್ಲಿ ಇದಕ್ಕೆ ಹೆಚ್ಚು ಪ್ರಚಾರ ಸಿಗಬೇಕು.. ..ಇದು ಒಂದು ಉತ್ತಮ ಪ್ರಾರಂಭವಾಗಬೇಕು..ಮುಂದಿನ ಅಮೋಘ ಕಾರ್ಯಕ್ರಮಗಳಿಗೆ.


ಈಗ ನನ್ನ ವಿನಂತಿಯೂ ಇಷ್ಟೇ..ತಮ್ಮ ಕೆಲಸದ ನಡುವೆಯೇ ಬ್ಲಾಗಿಗರ ನಮ್ಮ ಆಗಸ್ಟ್ 22 ರ ಕೂಟಕ್ಕೆ ಶಿವು (ಪ್ರಕಾಶ್ ಸಂಪೂರ್ಣ ಸಹಕಾರ ಸಿಗುತ್ತೆ ಎಂದಿದ್ದಾರೆ ತಮ್ಮ ಕಾರ್ಯವ್ಯಸ್ತತೆಯ ಕಾರಣ..ಹಾಗೆ ಹೇಳಿದ್ರೂ ಹಲವಾರು ಬಾರಿ ಅವರೇ ನಮ್ಮೊಂದಿಗೆ ಚರ್ಚಿಸಿದ್ದಾರೆ..) ಜೊತೆಗೆ ಶಿವಪ್ರಕಾಶ್ ತಮ್ಮ ಸಹಕಾರ ನೀಡುವ ಭರವಸೆ ನೀಡಿದ್ದಾರೆ..ಹಾಗೆಯೇ ವಿವಿಧ ಪ್ರದೇಶಗಳಿಂದ ಲೇಖನಗಳನ್ನು ಸಂಗ್ರಹಿಸಿ ಅವುಗಳ ಪೂರ್ವಭಾವಿ ಪರಿಶೀಲನೆ ಮಾಡಿ ಶಿವು ಗೆ ರವಾನಿಸಲು ಹಲವು ಬ್ಲಾಗು ಮಿತ್ರರು ಸಹಾಯಕ್ಕೆ ಮುಂದಾಗಿದ್ದಾರೆ..

ಕೆಳಕಂಡ ಮೈಲ್ ವಿಳಾಸಕ್ಕೆ ನಿಮ್ಮ ನಿಮ್ಮ ಪ್ರತಿಕ್ರಿಯೆ, ಕಾದಿರಸಬೇಕಾದ ಪುಟಗಳ ಸಂಖ್ಯೆ ಮತ್ತು ನಿಮ್ಮ ಲೇಖನಗಳನ್ನು ಕಳುಹಿಸಿಕೊಡಿ



Mail your responses to
shivuu.k@gmail.com (ಛಾಯಾಕನ್ನಡಿ) - ಬೆಂಗಳೂರು ಮತ್ತು ಸುತ್ತಮುತ್ತಲ ಬ್ಲಾಗಿಗಳು

dinakar.moger@gmail.com (ಮೂಕ ಮನದ ಮಾತು) - ಮಂಗಳೂರು, ಉಡುಪಿ, ಕುಂದಾಪುರ. ಇತ್ಯಾದಿ ಕರಾವಳಿ ಬ್ಲಾಗಿಗಳು.

hneshakumar@gmail.com (ಸಹಯಾತ್ರಿ) - ಮೈಸೂರು, ಹಾಸನ, ಚಿತ್ರದುರ್ಗ, ಮಂಡ್ಯ ಸುತ್ತ ಮುತ್ತಲ ಬ್ಲಾಗಿಗಳು
shivagadag@gmail.com (Shivashankar Elavatti) - ಧಾರವಾಡ, ಬೆಳಗಾವಿ, ಗುಲ್ಬರ್ಗ, ಬೀದರ್, ಗದಗ್ ಸುತ್ತಮುತ್ತಲ ಬ್ಲಾಗಿಗಳು

murthyhegde@gmail.com (ಸಾಗರದಾಚೆಯ ಇಂಚರ) ಮತ್ತು itagi.uday@gmail.com (ಉದಯ್)

- ಹೊರದೇಶದ ಬ್ಲಾಗಿಗಳು

Thursday, May 13, 2010

ಜೋಡಿ-ತೋಳಗಳು



ಕಣ್ಣಲಿ ಕುಳಿತಿರುವ ಸಂಚು
ಎರಗಲಿವೆ ಹೊಡೆದಂತೆ ಮಿಂಚು
ಕುರಿಗೇನು ಗೊತ್ತು ಪೊದೆಯ
ಒಳಕುಳಿತಿವೆ ತೋಳ-ದ್ವಯ

ನಡೆದೇ ಇದೆ ಕುರುಬ ಕಾಯುವುದು
ಆಗೊಮ್ಮೆ ಈಗೊಮ್ಮೆ ಮೈಮರೆವುದು
ಸಮಯಕಾದಿವೆ ಸದ್ದಿಲ್ಲದೆ ಎರಗಲು
ಜೋಡಿ ತೋಳಗಳು ಕೊಟ್ಟು ಹೆಗಲಿಗೆ-ಹೆಗಲು

ಅಧಿಕಾರದ ನಿಲ್ಲದ ದರ್ಪ
ಅಧಿಕ-ಬೇಕೆನ್ನುವ ವಿಷ ಸರ್ಪ
ಎರಡೂ ನೋಡವು ಬಡವ-ಬಲ್ಲಿದ
ಕೊಬ್ಬಿ ಬೆಳೆದಿವೆ ತುಂಬಿಕೊಂಡು ಮದ

ಕೇಳುವುದಿಲ್ಲ ನಿಮ್ಮ ಸಹಮತ
ಬೇಕಾಗಿಲ್ಲ ನಿಮ್ಮ ಅಭಿಮತ
ಕಾರಣವಿರದ ಆಳುವ ರಾಜ
ಹೂರಣ ನೋಡುವ ಅಧಿಕಾರಿ ಭೋಜ

ಅನ್ನದಾತನ ಸಾಲವೇ ನೆಪ
ಹಣದಾತ ಚರ್ಮ ಸುಲಿವ ಭೂಪ
ಒಂದೆಡೆ ಕಿತ್ತು ತಿನ್ನುವ ಮಧ್ಯವರ್ತಿಗಳ ವರ್ತನೆ
ಮಗದೆಡೆ ಕುಣಿಕೆ ಹಗ್ಗಗಳ ಬೆಂಬಿಡದ ನರ್ತನೆ

ಇದ್ದ ಬದ್ದದ ಮಾರಿ ಮದು-ಮಗಳಮಾಡಿ
ಕಣ್ಣೀರು ಕುಡಿದರು ಅಮ್ಮ-ಅಪ್ಪನ ಜೋಡಿ
ಅತ್ತೆ ಮಾವನ ವರದಕ್ಷಿಣೆಯ ಕಿರುಕುಳ
ಉರಿಸಿ ಹಿಂಡುವರು ಹೆತ್ತವರ ಕರುಳ

ಕಛೇರಿಯಲ್ಲಿ ಹೇಳಿದ್ದೇ ವೇದ ಎನುವ ಬಾಸು
ಹೆಣ್ಣೆಂದರೆ ಏಕೆ ಎಲ್ಲಆಗುವರು ಪೀಪಾಸು ?
ತೋಳಗಳು ಅನ್ನಕಾಗಿ, ಉಳಿವಿಗಾಗಿ ಎರಗಿದರೆ
ತಮ್ಮರಕ್ಷಣೆಗೆ ಸರ್ಪಗಳು, ತಪ್ಪೇನು ಬುಸುಗುಟ್ಟಿದರೆ?

ತೃಷೆ, ಪೀಪಾಸೆ ಅಧಿಕಾರ ಹಣದಾಸೆ
ಕಾಡಿ-ಪೀಡಿಸುವುದೇ ಮಾನವನ ವರಸೆ
ಕೇಡ ಮಾಡಲು ಬೇಧವಿಲ್ಲ ಒಂದಾಗುವರು
ಅಪವಾದ ಜೋಡಿತೋಳ - ಇವರಾಗುವರು

Tuesday, May 4, 2010

ಸುರ-ಸುಂದರ ರಂಗೋಲಿ
















“ನಮಸ್ಕಾರ...ಸುರೇಸಣ್ಣ...ಹೆಂಗಿದ್ದೀಯಾ...?”



ಮನೆ ಬಾಗಿಲು ಅಗುಳಿ ತೆರೆದೇ ಇತ್ತು, ಬಾಗಿಲನು ತಳ್ಳುತ್ತಾ ಒಳಕ್ಕೆ ಬಂದ- ಸಲೀಂ....!! ಗಾಬರಿಯಾಗಿ ನಿಂತು ಬಿಟ್ಟ...


ಅರೆರೆ ಏನಿದು ಹೋಳಿ ಹಬ್ಬ ಹೋಗಿ ಜಮಾನಾ ಆಯ್ತು..


“ಸರ್..ನೀವು..ಚಾಟ್ ನಲ್ಲಿ ಹೇಗಾದ್ರೂ ಕರೀರಿ..ಇಲ್ಲಿ ಬಂದು... ನನಗಿಂತ 10-15 ವರ್ಷ ದೊಡ್ಡೋರು ನೀವು..ಹಿಂಗ್ ನನ್ನ ಸುರೇಸಣ್ಣ ಅಂತ ಅಣ್ಣ ಅನ್ನಬಾರ್ದು...... ನಿಮಗೆ ಪಾನಿನೀನೂ ಪರ್ಮಿಶನ್ ಕೊಡೊಲ್ಲಾ...ಕನ್ನಡ ಪಂಡಿತರೂ ಅನುಮತಿ ಕೊಡೊಲ್ಲಾ....”


ತಲೆಮೇಲೆ...ಬಿಳಿ, ಹಳದಿ, ಕೆಂಪು ಬಣ್ಣ ಹಾರಿಸಿಕೊಂಡಿದ್ದ..ಸುರೇಶ್ ಸಲೀಂ ನ ಸ್ವಾಗತಿಸಿದ್ದು ಹೀಗೆ...


“ಅಲ್ಲ ಸುರೇಶ್ ಹೋಳೀ ಹೋಗಿ ಕಾಲ ಆಯ್ತು..., ಇದೇನು ಬಣ್ಬಣ್ಣ ತಲೇ ಮೇಲೆ...ಅಂದಹಾಗೆ ...ಪಾಂಡುರಂಗ ವಿಠಲನ್ನ ಹೆಚ್ಚುನೋಡ್ಬೇಡಿ...ಆಮೇಲೆ...ಭಾಭಿನ ಸುಂದಲಿ..ಸುಂದಲಿ ಅಂತ...ಅಂದ್ರೆ ಕಷ್ಟ....”


ನಗ್ತಾ ಮತ್ತೆ ಕೇಳಿದ ಸಲೀಂ ...


“ಅಲ್ಲಾ..ಇದೇನು ಬಣ್ಣ ಅಂತೀನಿ...?!!”


“ಅಯ್ಯೋ ಸಲೀಂ ಸರ್...ನಮ್ಮ ಸಂಘ ಮಾಡೋ ರಂಗೋಲಿ ಕಾಂಪಿಟೇಶನ್ ಗೆ ಸುಂದರೀನೂ ಭಾಗವಹಿಸ್ತೀನಿ ಅಂದ್ಲು...ಸರಿ ಮಾರಾಯ್ತಿ ..ಮಾಡು..ಅಂದೆ...


ಅಲ್ಲ ಸರ್...ನೀವೇ ಹೇಳಿ..., ಅಭ್ಯಾಸಾನೇ ಇಲ್ದೇ ಇದ್ರೆ ರಂಗೋಲಿ ಹಾಕಿ ಗೆಲ್ಲೋಕಾಗ್ತದಾ...?”


ತನ್ನ ಪ್ರಶ್ನೆ ಸಲೀಂ ಮುಂದೆ ಇಟ್ಟ ಸುರೇಶ ...ತನ್ನ ಕಥೆ ಮುದುವರೆಸಿದ


“ನಿಮಗ್ಯಾಕೆ ನಾನು ಪ್ರಾಕ್ಟೀಸ್ ಮಾಡ್ತೀನಿ, ತಂದುಕೊಡಿ ಬಣ್ಣದ ಪುಡಿ.. ಅಂತ ಹಠ ಇವಳದ್ದು....ಹೇಳಿ ಕೇಳಿ..ಕುವೈಟ್ನಂಥಾ ದೇಶದಲ್ಲಿ ಎಲ್ಲಿಂದ ತರೋದು ರಂಗೋಲಿ ರಂಗಿನ ಪುಡಿ...?? ಹುಡ್ಕಾಡ್ದೆ ಎಲ್ಲೂ ಸಿಗ್ಲಿಲ್ಲ.....!!”


ಆಶ್ಚರ್ಯದಿಂದ ಸಲೀಂ ಕೇಳಿದ..


“ಮತ್ತೆ ...ಈ ಬಣ್ಣ ಎಲ್ಲಿಯದು ?”


ಸುರೇಶ ಹೇಳ್ದ “ಅದೇ ಸರ್...ಕಲರ್ ಕಲರ್ ಚಾಕ್ ತಂದಿದ್ನಲ್ಲ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸೋಕೆ...ಅದನ್ನೇ ಒಂದೊಂದು ಬಣ್ಣದ್ದೂ ಹತ್ತು ಹನ್ನೆರಡು ಚಾಕ್ ನ ಮಿಕ್ಸರ್ ಗೆ ಹಾಕಿ ಪುಡಿ ಮಾಡಿದ್ದು ...”


“ಅದು ಸರಿ ಪುಡಿಮಾಡಿದ್ರೆ..ಮುಖ.. ತಲೆಗೆಲ್ಲಾ ಯಾಕೆ ಮೆತ್ತಿಕೊಂಡ್ರಿ?” ಸಲೀಂ ಅರ್ಥವಾಗದೆ ಪ್ರಶ್ನಿಸಿದ..


“ಅಯ್ಯೋ..ಮಿಕ್ಸೀಗೆ ಹಾಕಿ ..ತಿರುವುತ್ತಾ ಇದ್ನಾ..ಇವ್ಳು ಸ್ವಿಚ್ ಆಫ್ ಮಾಡಿದ್ದು ನೋಡ್ಲಿಲ್ಲ ..ಅರೆ..!! ಯಾಕೋ ಮಿಕ್ಸಿ ನಿಲ್ತಲ್ಲಾ ಅಂತ ಲಿಡ್ ತೆಗೆದು ನೊಡೋಕೆ ಹೋದೆ.......”


“ಅಯ್ಯೋ ಸಲೀಮಣ್ಣ ...ನಾನು ಹೀಟರ್ ಆಫ್ ಮಾಡೋದ್ರ ಬದ್ಲು ಮಿಕ್ಸಿ ಸ್ವಿಚ್ ಆಫ್ ಮಾಡಿದ್ದೆ...ಆಮೇಲೆ ..ಗೊತ್ತಾಗಿ ಮತ್ತೆ ಸ್ವಿಚ್ ಆನ್ ಮಾಡಿದೆ...ಇವರು ಜೋರಾಗಿ ’ಥತ್ ತೇರಿ’..ಅಂತ ಅಂದಾಗ ಹಾಲ್ ಗೆ ಬಂದು ನೋಡಿದ್ರೆ ಈ ಅವ್ತಾರ ಮಾಡ್ಕೊಂಡಿದ್ರು...”


ಇವರ ಸಂಭಾಷಣೇನ ಕೇಳಿದ ಸುಂದರಿ ನಗ್ತಾ ಹಾಲ್ ಗೆ ಬರುತ್ತಾ...ಸಲೀಂ ಗೆ ಏನಾಯ್ತು ಎನ್ನುವುದರ ವಿವರ ಕೊಡ್ತಾ.. “ನಮಸ್ಕಾರ...ಬನ್ನಿ ಸಲೀಮಣ್ಣ” ಎಂದಳು.


“ಸುಂದರಮ್ಮನವರೇ...ನೀವು ಸಲೀಂ ಅನ್ನಿ ಇಲ್ಲ ಸಲೀಮ್ ಸರ್ ಅನ್ನಿ...ಸಲೀಮಣ್ಣ ಅನ್ಬೇಡಿ...ಜೇಡಿ ಮಣ್ಣ...ಕೆಂಪು ಮಣ್ಣ ಅಂದಂಗಿರುತ್ತೆ.....” ಎಂದ ಸಲೀಮ ನಗ್ತಾ....


“ನೋಡಿದ್ರಾ...? ನಿಮ್ಮ ತಂಗಿ ತರ ನಾನು, ನನ್ನ ಸುಂದರ ಅಮ್ಮ ಅಂತ ಕರೀತೀರಲ್ಲಾ...ಇದು ಸರೀನಾ...?”


ಎಂದಳು ಸುಂದರಿ ನುಸು ಮುನಿಸಿಂದ.


“ಸರಿ ಬಿಡಿ ಸುಂದರಿದೇವಿ ಅನ್ತೀನಿ ಇನ್ಮೇಲೆ....ಹಹಹ...” ರೇಗಿಸೋ ಹಾಗೆ ಸಲೀಮ್ ಹೇಳಿದಾಗ..


ಹುಸಿಕೋಪದಿಂದ ಹುಬ್ಬು ಮೇಲೇರಿಸಿ ಸಲೀಮನನ್ನು ನೋಡುತ್ತಿದ್ದ ತನ್ನ ಅರ್ಧಾಂಗಿಯನ್ನು ನೋಡಿದ ಸುರೇಶ...ಹೌದಲ್ಲಾ ..ನಾನೂ ಹಾಗೇ ಕರೀಬಹುದು ಇನ್ಮೇಲೆ... ಎನ್ನುವಾಗ ..”ಏನ್ರೀ ನೀವೂ ..???!!” ಎನ್ನುತ್ತ ಗಂಡನ ಬೆನ್ನಮೇಲೆ ಹುಸಿಮುನಿಸಿನ ಗುದ್ದು ಕೊಡಲು ಹೋದಾಗ ಸುರೇಶ ನಕ್ಕುಬಿಟ್ಟ.


“ಅಂದಹಾಗೆ ರಂಗೋಲಿಸ್ಪರ್ಧೆಲಿ .ಯಾರು ಭಗವಹಿಸೋದು? ..” ಸಲೀಂ ಕೇಳಿದ್ದಕ್ಕೆ...


ಸುರೇಶ-ಸುಂದರಿ ಇಬ್ಬರೂ ನಕ್ಕುಬಿಟ್ರು...


“ಏನ್ ಸರ್ ಈ ಅವತಾರ ನೊಡೀನೂ ಕೇಳಿದ್ದೀರಲ್ಲಾ...? ಎಲ್ಲ ರಂಗೋಲಿ ಹಿಟ್ಟೂ ಅಭಿಷೇಕ ಆಗೋಯ್ತು...ಇವ್ರನ್ನೇ ಅಲ್ಲಿ ಕೂತ್ಕೋಳೋಕೆ ಹೇಳ್ಬೇಕು ಅಷ್ಟೇ ಇದೇ ಅವತಾರದಲ್ಲಿ...ಹಹಹ...ಇವ್ರೇ ಕೂತ್ರೆ ಬಹುಮಾನ ಗ್ಯಾರಂಟಿ”


ಗಂಡನ ಅವತಾರದತ್ತ ನೋಡ್ತಾ ಹೆಂಡತಿ ನಕ್ಕು ...ಆ ಬಣ್ಣವನ್ನು ಕೊಡಹಿ...


“ಹೋಗ್ರಿ ನೀವು, ಮುಖ ತೊಳ್ಕೊಂಡು ಬನ್ನಿ ..ತಿಂಡಿ-ಕಾಫಿ ತರ್ತೀನಿ...ಸಲೀಮ್ ಸರ್ ಜೊತೆ ಮಾತನಾಡ್ತಾ ನಮ್ಮ ಪತ್ರಿಕೆ ಬರಹಗಳನ್ನ ಫೈನಲ್ ಮಾಡೋಣ” ಎನ್ನುತ್ತಾ.. “ಕೂತ್ಕೋಳಿ ಸರ್ ನೀವು...ಈ ಫೈಲ್ ನೋಡ್ತಾ ಇರಿ, ಇವ್ರೂ ಫ್ರೆಶ್ ಆಗಿ ಬರ್ತಾರೆ, ಅಷ್ಟೊತ್ತಿಗೆ ರಂಜನಾ, ವಿನಯ್ ಸರ್ ಮತ್ತೆ ಸಂಜಯ ಸರ್ ಬರ್ತಾರೆ ಎಲ್ಲ ಕುಳಿತು ತಿಂಡಿ-ಕಾಫಿ ತಗೊಳ್ತಾ ಫೈನಲ್ ಮಾಡೋಣ ನಮ್ಮ ಪತ್ರಿಕೇನಾ”


ಎನ್ನುತ್ತ ಅಡುಗೆಮನೆಯತ್ತ ಸುಂದರಿ ಹೋದರು..ಸಲೀಂ ಸೋಫಾದ ಮೇಲೆ ಆಸೀನನಾದ..ಸುರೇಶ ಮುಖ ತೊಳೆಯಲು ಬಾತ್ ರೂಮಿನತ್ತ ನಡೆದ. ಎಲ್ಲ ಬಣ್ಣಗಳ ಹಿತ ಮಿತ ಮಿಶ್ರಣದ ಹೋಳಿಯಂತೆ ಸಮರಸ ತುಂಬಿದ ಸಂಸಾರ ಎಲ್ಲ ಜಂಜಾಟವನ್ನೂ ಮರೆಸಿದರೆ, ಪರಸ್ಪರ ಹೊಂದಾಣಿಕೆ ಸಹಬಾಳ್ವೆಗಳು ಮತಭೇದವನ್ನು ಇಲ್ಲದಂತಾಗಿಸುತ್ತವಲ್ಲ ..??!! ಎಂದು ಯೋಚಿಸುತ್ತಾ ಸಲೀಂ ಫೈಲ್ ನ ಪುಟಗಳನ್ನು ತಿರುವಿದ.