Thursday, May 13, 2010

ಜೋಡಿ-ತೋಳಗಳು



ಕಣ್ಣಲಿ ಕುಳಿತಿರುವ ಸಂಚು
ಎರಗಲಿವೆ ಹೊಡೆದಂತೆ ಮಿಂಚು
ಕುರಿಗೇನು ಗೊತ್ತು ಪೊದೆಯ
ಒಳಕುಳಿತಿವೆ ತೋಳ-ದ್ವಯ

ನಡೆದೇ ಇದೆ ಕುರುಬ ಕಾಯುವುದು
ಆಗೊಮ್ಮೆ ಈಗೊಮ್ಮೆ ಮೈಮರೆವುದು
ಸಮಯಕಾದಿವೆ ಸದ್ದಿಲ್ಲದೆ ಎರಗಲು
ಜೋಡಿ ತೋಳಗಳು ಕೊಟ್ಟು ಹೆಗಲಿಗೆ-ಹೆಗಲು

ಅಧಿಕಾರದ ನಿಲ್ಲದ ದರ್ಪ
ಅಧಿಕ-ಬೇಕೆನ್ನುವ ವಿಷ ಸರ್ಪ
ಎರಡೂ ನೋಡವು ಬಡವ-ಬಲ್ಲಿದ
ಕೊಬ್ಬಿ ಬೆಳೆದಿವೆ ತುಂಬಿಕೊಂಡು ಮದ

ಕೇಳುವುದಿಲ್ಲ ನಿಮ್ಮ ಸಹಮತ
ಬೇಕಾಗಿಲ್ಲ ನಿಮ್ಮ ಅಭಿಮತ
ಕಾರಣವಿರದ ಆಳುವ ರಾಜ
ಹೂರಣ ನೋಡುವ ಅಧಿಕಾರಿ ಭೋಜ

ಅನ್ನದಾತನ ಸಾಲವೇ ನೆಪ
ಹಣದಾತ ಚರ್ಮ ಸುಲಿವ ಭೂಪ
ಒಂದೆಡೆ ಕಿತ್ತು ತಿನ್ನುವ ಮಧ್ಯವರ್ತಿಗಳ ವರ್ತನೆ
ಮಗದೆಡೆ ಕುಣಿಕೆ ಹಗ್ಗಗಳ ಬೆಂಬಿಡದ ನರ್ತನೆ

ಇದ್ದ ಬದ್ದದ ಮಾರಿ ಮದು-ಮಗಳಮಾಡಿ
ಕಣ್ಣೀರು ಕುಡಿದರು ಅಮ್ಮ-ಅಪ್ಪನ ಜೋಡಿ
ಅತ್ತೆ ಮಾವನ ವರದಕ್ಷಿಣೆಯ ಕಿರುಕುಳ
ಉರಿಸಿ ಹಿಂಡುವರು ಹೆತ್ತವರ ಕರುಳ

ಕಛೇರಿಯಲ್ಲಿ ಹೇಳಿದ್ದೇ ವೇದ ಎನುವ ಬಾಸು
ಹೆಣ್ಣೆಂದರೆ ಏಕೆ ಎಲ್ಲಆಗುವರು ಪೀಪಾಸು ?
ತೋಳಗಳು ಅನ್ನಕಾಗಿ, ಉಳಿವಿಗಾಗಿ ಎರಗಿದರೆ
ತಮ್ಮರಕ್ಷಣೆಗೆ ಸರ್ಪಗಳು, ತಪ್ಪೇನು ಬುಸುಗುಟ್ಟಿದರೆ?

ತೃಷೆ, ಪೀಪಾಸೆ ಅಧಿಕಾರ ಹಣದಾಸೆ
ಕಾಡಿ-ಪೀಡಿಸುವುದೇ ಮಾನವನ ವರಸೆ
ಕೇಡ ಮಾಡಲು ಬೇಧವಿಲ್ಲ ಒಂದಾಗುವರು
ಅಪವಾದ ಜೋಡಿತೋಳ - ಇವರಾಗುವರು