Tuesday, February 16, 2010

ಕನಸಿನರಸಿಯನರಸಿ


(ಚಿತ್ರ ಕೃಪೆ: ಅಂತರ್ಜಾಲ)

ಮಿತ್ರರೇ, ನನ್ನ ಆತ್ಮೀಯರು ಕೆಲವರು ನನ್ನಿಂದ ಅಪೇಕ್ಷಿಸಿದಂತಹ ಹೊಸ ಅಲೆ ಇಲ್ಲಿ ಎದ್ದುಬರುವಂತಾಗಿದೆಯೋ ಇಲ್ಲವೋ ತಿಳಿಯದು...ಪ್ರಯತ್ನ ನನ್ನದು..ಪ್ರತಿಕ್ರಿಯೆ ನಿಮ್ಮದು...


ಕನಸಿನರಸಿಯನರಸಿ
ನಿನ್ನೊಲವಿನಲಿವಿನಲಿ
ವಿಲವಿಲವಾಯಿತೆನ್ನೆದೆ
ಲವಲವಿಕೆಯನೆಡಹಿ ಕೆಡಹಿದೆ
ಹುಸಿಮುನಿಸಿನಂದ
ಚಂದವದನವನಾವರಿಸಿ- ಹೆಚ್ಚಿಸಿ
ನಿನ್ನವದನಾರವಿಂದದಂದ
ಚೆಲುವೆ ಸೋಲಿಸಿ ನೋಟದಿ
ಗೆಲುವಿನೋಟದೋರೆಗಣ್ಣು
ಹುಬ್ಬಿನಂಬಿಗೆ ನೋಟ-ಬಾಣ
ಕೆನ್ನೆಯಂಗಳದ ಕುಳಿ
ಚಂದುಟಿ ರಕ್ತದೋಕುಳಿ
ಸಾಕಲ್ಲವೇ ಬೀಳಲು ಜಾರಿ
ನಿನ್ನಂದದ ಮತ್ತೇರಿರಲು...
ಅರಿತಿರುವೆ ಆದರೂ ಕಾಡಿರುವೆ
ತಿಳಿದೂ ...
ಮೊದಲೇ ಮರ್ಕಟ ಮೇಲೆ
ಮದ್ಯದ ಅಮಲೇರಿರಲು
ಮೈಮಾಟದ ಚೇಳನು
ಕುಟುಕಬಿಟ್ಟೇಕೆ ಕಟುವಾದೆ
ತರವಲ್ಲ ನಿನಗೆ, ಕೊಡುವರೇ
ಯಮಯಾತನೆ ಈತರದಿ ?
ಕನಸಿನರಸಿಯನರಸಿ ಬಂದವನಿಗೆ
ಬಂದುಬಿಡು ನನಸಲಿ- ಅಸಲಿ
ಬೇಗೆಯಲಿ ಬೆಂದು ಬಿರಿದಿದೆ ಮನ
ತೊರೆದುಬಿಡು ಗಗನ ಸಂಗ
ಹರಿದುಬಿಡು ಹನಿಯಾಗಿ
ತೊಯ್ದುಬಿಡು ಝರಿಯಾಗಿ
ಬೆಟ್ಟ-ಗುಡ್ಡ ನಿನಗಡ್ಡವೇ?
ನಾನಣಿಯಾಗಿರುವೆ
ತೊಯ್ದು, ಹರಿದು, ಹಂಚಿಹೋಗಲು
ನಿನ್ನೊಡನೆ ಹನಿಯಾಗಿ -ಇನಿದನಿಯಾಗಿ.