Friday, October 1, 2010

ನನ್ನದೊಂದು ವಿನಂತಿ


ಜಗದ ಜನಕೆ ತೋರಿತೊಂದು ಭಾರತ

ಇತಿಹಾಸವೀಗ ಕನಸಾಗಿತ್ತು ಅವಿರತ

ನಿಸರ್ಗ-ಸಗ್ಗ ಜನಮನವೆನಿಸಿ ಬಹುಹಿತ

ವಿಶ್ವ ಸಕಲಕೆ ಮಾದರಿ ಅಂದು ಭಾರತ



ದಂಡು ಹೊರಟವಂದು ಕಂಡುಕೊಳ್ಳಲು ಮಾರ್ಗ

ಹಿಂಡು ಹಿಂಡಾಯ್ತು ಬಂಡುಕೋರರಿಗೂ ಸ್ವರ್ಗ

ಸಾಗರದಾಟಿ ಬಂದು ಮಾರ್ಗ ಹುಡುಕಲು ಹುಮ್ಮಸ್ಸು

ಅಲೆಯಮೇಲಲೆದು ದಾರಿತಪ್ಪಿದನಂದು ಕೊಲಂಬಸ್ಸು



ಸಿಂಧೂ ಕಣಿವೆಯಲ್ಲಿ ಮೆರೆದಿತ್ತು ನಾಗರೀಕತೆ

ಗಂಗಾತೀರ, ಗೋದಾವರಿ ಕೃಷ್ಣೆ ಕಾವೇರಿ ಗೀತೆ

ಎಲ್ಲೆಲ್ಲೂ ನಾಡರಸರು ತುಂಬಿತ್ತೆಲ್ಲೆಡೆ ಮಂದಹಾಸ

ಜನಮನ ಜೀವನದಲ್ಲಿತ್ತು ಕಂಡರಿಯದ ಸಂತಸ



ಹಿಮಾಲ ಮೆಟ್ಟಿಬಂದ ದಾಳಿಕೋರರು ಹಲವರು

ಬಂದು ನೆಲಸಿ ನಾಡಲೊಂದಾದ ಕೆಲ ಅರಸರು

ಬಂದನಾಗ ದಾರಿತೋರಿ ದಕ್ಕನಿಗೆ ವಾಸ್ಕೋಡಗಾಮ

ವೈಮನಸ್ಯ ಬೀಜ ಬಿತ್ತಿ ನಡೆಸಲು ಮಾರಣಹೋಮ


ನಮ್ಮ-ನಮ್ಮಲ್ಲೇ ಕಿತ್ತಾಟ ತಕ್ಕಡಿ ಹಿಡಿದವಗೆ ಜುಟ್ಟು

ಎತ್ತಿ ಕಟ್ಟಿದವ, ಆಮಿಶಗೊಂಡು ಕೊಟ್ಟೆವವಗೆ ಜುಟ್ಟು

ಐನೂರು ವರ್ಷ ಸತತ ಕೊಳ್ಳೆ, ಬರಿದಾಯ್ತು ತುಂಬು ಕಣಜ

ಸ್ವಾತಂತ್ರ್ಯಕೊಟ್ಟರು ಕಂಡು ಎಲ್ಲೆಡೆ ತಹತಹಿಸುವ ಮನುಜ


ಈಗ ಹಿಡಿದಿಹರು ನಮ್ಮವರೇ ನಮ್ಮ ಜುಟ್ಟು

ನಾಡ ಸಂಪದ ಮಾಡಿ ಸ್ವಂತ ಉಳಿಸಿ ಹೊಟ್ಟು

ಪರಕೀಯರಿಗಿಂತ ಕೀಳು ತಂದಿಡುವರು ನಮ್ಮಲ್ಲೇ

ಮತ-ಜಾತಿ ಗಲಭೆ ಅವರ ಬೇಳೆ ಬೇಯುವುದೂ ಇಲ್ಲೇ



ನ್ಯಾಯಾಲಯ ತೂಗಿಹುದು ಎಲ್ಲರ ಬೇಳೆಯ ಈ ಬಗೆ

ಕೊಟ್ಟು ಬೇಳೆ ಒಬ್ಬಗೆ ಬೇಯಿಸಲು ಇಂಧನ ಮತ್ತೊಬ್ಬಗೆ

ಯುವಜನ-ಜನ ಮೆರೆದಿಹರು ಅಪೂರ್ವ ವಿವೇಚನೆ

ಸೊಪ್ಪು ಹಾಕದೆ ಮನಮುರಿವರ ಮತ್ತೊಂದು ಅಲೋಚನೆ



ಆಶಯ ನನ್ನದು, ಜಗದಲಿ ಮೆರೆವ ಶಕ್ತಿಯ ದೇಶ

ವಿವೇಚನೆ ಮತ್ತೂ ಪ್ರಖರಗೊಳ್ಳಲಿ ಬೆಳಗುಪ್ರಕಾಶ

ಆಗಲೊಂದೇ ಧ್ಯೇಯ ದೇಶದ ಬಹುಮುಖ ಪ್ರಗತಿ

ನಡೆಯಲೊಂದೇ ನ್ಯಾಯ, ಎಲ್ಲರ ಸುಖದ ಭಾರತಿ