Sunday, November 6, 2011

ಈದ್ ಅಲ್- ಅದ್ಹಾ


ಮುಸ್ಲಿಂ ಜನಾಂಗದ ಹಿರಿ ಹಬ್ಬ: ಈದ್ ಅಲ್- ಅದ್ಹಾ 

ಇಸ್ಲಾಮ್ ಪಂಚಾಂಗ ಚಂದ್ರಮಾನ ಮೂಲದ್ದಾಗಿದ್ದು ಗ್ರಿಗರಿಯನ್ ಅಥವಾ ಸೂರ್ಯಮಾನ ಪಂಚಾಂಗದಿಂದ ಸ್ವಲ್ಪ ವಿಭಿನ್ನ. ಅಂದರೆ ಪ್ರತಿವರ್ಷ ಸುಮಾರು ೧೨ ದಿನದ ವ್ಯತ್ಯಯ ಕಂಡು ಬರುತ್ತದೆ. ಸೌರ್ಯಮಾನದಲ್ಲಿ ಒಂದು ವರ್ಷಕ್ಕೆ ೩೬೫.೨೫ ದಿನ ಆಗಿರುವ ಕಾರಣ ಅದನ್ನು ೩೬೫ ದಿನಕ್ಕೆ ಸೀಮಿತಗೊಳಿಸಿ, ನಾಲ್ಕನೇ ವರ್ಷದಲ್ಲಿ ಹೆಚ್ಚುವರಿ ೦.೨೫ ದಿನಗಳನ್ನು ಸೇರಿಸಿ ಒಂದು ದಿನ ಅಧಿಕಮಾಡಿ, ಅದನ್ನು ಫೆಬ್ರವರಿ (ಅತಿ ಕಡಿಮೆ ದಿನ ಇರುವ ತಿಂಗಳು) ಗೆ ಸೇರಿಸಿ ಅಧಿಕ ಮಾಸ (ಅಧಿಕ ವರ್ಷ) ಮಾಡಲಾಗುತ್ತೆ. ಆದರೆ ಇಸ್ಲಾಂ ಪ್ರಕಾರ ೩೫೪ ಅಥವಾ ೩೫೫ ದಿನಗಳ ವರ್ಷ, ಹಾಗಾಗಿ ೧೦-೧೨ ದಿನದ ವ್ಯತ್ಯಯ ಬರುತ್ತದೆ. ಇಂತಹ ಚಂದ್ರಮಾನ ಪಂಚಾಂಗದ ಜಿಲ್-ಹಜ್ (ಹನ್ನೆರಡನೇ) ತಿಂಗಳ ೧೦ ನೇ ದಿವಸ ಮತ್ತು ಹಜ್-ಪವಿತ್ರ ಯಾತ್ರೆಯ ಕಡೆಯ ದಿವಸ ಈದ್ ಅಲ್ ಅಧ್ಹಾ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬವನ್ನು ಹಿರಿ ಹಬ್ಬ ಎನ್ನಲಾಗುತ್ತದೆ. ಈ ಹಬ್ಬದ ವಿಶೇಷತೆಯೆಂದರೆ ಹಜ್ ಯಾತ್ರೆ ಮಾಡುವುದು, ಇದನ್ನು ಆಚರಿಸಲು ಸಾಧ್ಯವಾಗದವರು ಅದೇ ಕ್ರಿಯೆಯ ಪ್ರತಿರೂಪದಂತೆ ಈದ್-ಪ್ರಾರ್ಥನೆ ಜೊತೆಗೆ ಮಾಂಸ ದಾನ (ಖುರ್ಬಾನಿ) ನೀಡುವುದು ನಡೆಯುತ್ತದೆ. ಈ ಹಬ್ಬಕ್ಕೆ ಸುಮಾರು ನಾಲ್ಕು ಸಾವಿರ ವರ್ಷದ ಹಿನ್ನೆಲೆಯಿದೆ. 


ಇಬ್ರಾಹಿಂ (ಅಬ್ರಹಾಂ) ಇಂದಿನ ಸೌದಿ ಅರೇಬಿಯಾದ ಮೆಕ್ಕಾ ಬಳಿ ವಾಸವಾಗಿದ್ದ ಒಬ್ಬ ದೈವ ಭಕ್ತ. ಆತನಿಗೆ ಹಾಜರಾ (ಈಗಿನ ಈಜಿಪ್ತ್ ದೇಶದವಳು) ಎಂಬಾಕೆ ಹೆಂಡತಿ. ಇವರ ಒಬ್ಬನೇ ಮಗ ಇಸ್ಮಾಯಿಲ್. ಇವರ ಜೀವನದಲ್ಲಿ ದೈವ ಭಕ್ತರಿಗೆ ಸಾಮಾನ್ಯ ಎನ್ನುವಂತಹ ಸತ್ವ ಪರೀಕ್ಷೆಗಳು ಬಹಳ ಆದವು. ಅವುಗಳಲ್ಲಿ ಒಂದರ ಪ್ರಕಾರ ಇಬ್ರಾಹಿಮರಿಗೆ ತನ್ನ ಹೆಂಡತಿ ಮಕ್ಕಳನ್ನು ಮರಳು ಬೆಂಗಾಡಿನಲ್ಲಿ ಬಿಡುವ ದೈವಾಣತಿಯಾಗುತ್ತದೆ. ಅವರನ್ನು ಬಿಡಲು ನಿರ್ಧರಿಸಿದಾಗ ಅವರಿಗೆ ಮೋಹ ಮಾಯೆಯ ಜಾಲಕ್ಕೆ ಸಿಕ್ಕಿಸಲು ದಾನವ (ಸೈತಾನ್) ಪ್ರಯತ್ನಿಸಿತ್ತಾನೆ, ಅವನನ್ನು ಹಿಮ್ಮೆಟ್ಟಿಸುವ ಇಬ್ರಾಹಿಮರ ಕ್ರಿಯೆಯನ್ನು ಪ್ರತಿನಿಧಿಸುವುದೇ ಈಗಿನ “ಹಜ್” ಯಾತ್ರೆಯಲ್ಲಿ ಯಾತ್ರಾರ್ಥಿಗಳು ಸಣ್ಣ ಕಲ್ಲು ಹೊಡೆಯುವ ಪ್ರಚಲನೆಯಲ್ಲಿರುವ ಶಾಸ್ತ್ರ. ಆ ನಂತರ ಇಬ್ರಾಹಿಮರು ಹೆಂಡತಿ ಮತ್ತು ಹಸುಗೂಸು ಇಸ್ಮಾಯಿಲರನ್ನು ಬೆಂಗಾಡಲ್ಲಿ (ಈಗಿರುವ ಕಾಬಾ ಸ್ಥಾನದಲ್ಲಿ) ಬಿಟ್ಟು ಹೊರಟು ಹೋಗುತ್ತಾರೆ. ಹೆಂಡತಿಯು ತನ್ನವರಿಗೆ ದೈವಾಣತಿಯಾಗಿದೆಯೆಂದು ತಿಳಿದು ಸುಮ್ಮನಾಗುತ್ತಾಳೆ. ಮಗುವಿಗೆ ನೀರಡಿಕೆಯಾಗಿ ದಾಹದಿಂದ ವಿಲವಿಲಿಸುವಾಗ ತಾಯಿ “ಹಾಜರಾ” ಮಗುವಿನ ಸುತ್ತ ಮುತ್ತ ಏಳೆಂಟು ಬಾರಿ ನೀರಿಗಾಗಿ ಸುತ್ತಿ ಪರದಾಡುತ್ತಾಳೆ, ನಂತರ ಮಗುವನ್ನು ಒಂದೆಡೆ ಬಿಟ್ಟು ಪಕ್ಕದಲ್ಲಿದ್ದ “ಸಫಾ” ಮತ್ತು “ಮರ್ವಾ” ಗುಡ್ಡಗಳನ್ನು ದಿಕ್ಕುಕಾಣದೇ ಹತಾಶಳಾಗಿ ನೀರಿಗಾಗಿ ಏಳು ಬಾರಿ ಹತ್ತಿಳಿಯುತ್ತಾಳೆ. ಆಗ ದೈವಾನುಗ್ರಹವಾಗಿ ಮಗು ಒದ್ದಾಟದಲ್ಲಿ ಕಾಲು ಬಡಿದಾಗ ಅದರ ಪಾದದ ಬಳಿ ಸಿಹಿ ನೀರಿನ ಚಿಲುಮೆ ಉಕ್ಕುತ್ತದೆ. ಅದೇ ಈಗಿನ “ಜಮ್ ಜಮ್” ಪವಿತ್ರ ನೀರಿನ ಕೊಳ.  ಈ ಘಟನೆಯಿಂದ ಪ್ರೇರಿತವಾದುದೇ ಈಗ ಮಾಡುವ “ಹಜ್ ಯಾತ್ರಾ ಪರಿಕ್ರಮ (ತವಾಫ್)”. ಮತ್ತೆ ತಾಯಿ-ಮಗು ಇಬ್ರಾಹಿಮರ ಪುನಃ ಮಿಲನವಾಗುತ್ತದೆ. ಹೀಗೇ ಇರುವಾಗ ಇಸ್ಮಾಯಿಲ್ ಸುಮಾರು ೧೩ ವರ್ಷದ ಬಾಲಕನಾಗಿರುವಾಗ ಸತ್ವ ಪರೀಕ್ಷೆಯ ಮಹತ್ವಪೂರ್ಣ ಘಟ್ಟ ಬರುತ್ತದೆ. ಪ್ರತಿ ರಾತ್ರಿ ಪದೇ ಪದೇ ಇಬ್ರಾಹಿಂ ತನ್ನ ಮಗ ಇಸ್ಮಾಯಿಲರನ್ನು ದೇವಾಣತಿಯ ಪ್ರಕಾರ ಬಲಿ ಕೊಡುವ ಕನಸು ಬೀಳುತ್ತದೆ. ಇದನ್ನು ದೇವರ ಇಚ್ಛೆಯೆಂದರಿತ ಇಬ್ರಾಹಿಂ ತನ್ನ ಮಗನಿಗೆ ವಿಷಯ ತಿಳಿಸುತ್ತಾರೆ, ಇಸ್ಮಾಯಿಲ್ ತಂದೆಗೆ ತಕ್ಕ ಮಗನಾಗಿದ್ದು “ಅಪ್ಪ ದೇವರ ಇಚ್ಛೆಯಂತೆ ನೀವು ನಡೆದುಕೊಳ್ಳಿ ನನ್ನ ಅಭ್ಯಂತರವಿಲ್ಲ” ಎನ್ನುತ್ತಾನೆ, ಇಬ್ರಾಹಿಂ ತನ್ನ ಮಗನ ಕೊರಳನ್ನು ಕಡಿಯಲು ಪ್ರಯತ್ನಿಸಿದಾಗ ಕತ್ತಿ ಮಾಯವಾಗಿ ದೇವರ ಅನುಗ್ರಹವಾಗುತ್ತದೆ. ಈ ಅಪ್ರತಿಮ ಬಲಿದಾನದ ಪ್ರತೀಕವೇ ಕುರಿ, ಒಂಟೆ, ದನ ಇತ್ಯಾದಿಯ ಬಲಿದಾನ ಅಥವಾ ಖುರ್ಬಾನಿ ನೀಡುವ ಪರಂಪರೆ. “ಜಮ್-ಜಮ್” ಚಿಲುಮೆಯ ಬಳಿಯ ಸ್ಥಾನವನ್ನು ದೈವಾನುಗ್ರವಾದ ಸ್ಥಾನವೆಂದು ಪರಿಗಣಿಸಿ ಅಲ್ಲಿಗೆ ಬಂದು ಪ್ರಾರ್ಥನೆ ಸಲ್ಲಿಸಿದರೆ ಸನ್ಮಂಗಳವಾಗುತ್ತದೆಂಬ ಪ್ರತೀತಿಯ ಹಿನ್ನೆಲೆಯಲ್ಲಿ “ಹಜ್” ಯಾತ್ರೆಯ ಸಂಪ್ರದಾಯ ಪ್ರಾರಂಭವಾಯಿತು. ಈ ಜಾಗದಲ್ಲಿ ಘನಾಕೃತಿಯ ಕೇಂದ್ರ ಗೃಹವನ್ನು ಕಟ್ಟಲಾಯಿತು, ಅಲ್ಲಿ ಕಪ್ಪು ಕಲ್ಲು- ಅಥವಾ “ಹಜ್ರ್ ಅಲ್ ಅಸ್ವದ್” ಒಂದೆಡೆ ಪ್ರತಿಷ್ಠಾಪಿಸಿ ಪರಿಕ್ರಮದ ಪ್ರಾರಂಭಕ್ಕೆ ಒಂದು ಗುರುತಾಗಿ ಇಡಲಾಯಿತು, ಆ ಕಾರಣಕ್ಕೆ ಕಪ್ಪು ಕಲ್ಲಿಗೆ ಒಂದು ಮಹತ್ವ ದೊರೆಯಿತು. ಇದನ್ನೂ ಮುಸ್ಲಿಮರು ಆರಾಧಿಸುತ್ತಾರೆನ್ನುವ ತಪ್ಪು ಕಲ್ಪನೆ ಹಲವರಲ್ಲಿದೆ, ಆದರೆ ಇದು ಕೇವಲ ಪರಿಕ್ರಮದ ಗುರುತಾಗಿ ಅಂದು ಇಟ್ಟ ಕಲ್ಲಾಗಿದೆ. ಅಂದು “ಹಾಜರಾ” ಮಗುವಿನ ನೀರಿಗಾಗಿ ಏಳು ಬಾರಿ “ಸಫಾ” ಮತ್ತು “ಮರ್ವಾ” ಗುಡ್ಡಗಳನ್ನು ಹತ್ತಿ ಇಳಿದ ಕಾರಣ ಈಗಲೂ ಯಾತ್ರಾರ್ಥಿಗಳು ಸಫಾ ಮರ್ವಾ ಮಧ್ಯೆ ಏಳುಬಾರಿ ಪರಿಕ್ರಮಿಸುವುದು ಕಡ್ಡಾಯ. 
ಚಿತ್ರ ಪವಿತ್ರ ಕಾಬಾ (ಮಕ್ಕಾ ಪಟ್ಟಣ) (ಕೃಪೆ: ಅಂತರ್ಜಾಲ)

ಎಲ್ಲ ಧರ್ಮಗಳ ಸಾರ ಒಂದೇ, ಒಬ್ಬ ಸಕಲಮಾನ್ಯನು ಅರಾಧ್ಯನೂ ಇರುವನು ಅವನ ನಾಮ ಹಲವಿರಬಹುದು, ಅವನು ನಮ್ಮಲ್ಲಿನ ಒಳ್ಳೆತನವನ್ನು ಒರೆಹಚ್ಚುತ್ತಾನೆ, ನಮ್ಮ ಬಲಹೀನತೆಯನ್ನು ತೊಡೆಯಲು ಪ್ರಯತ್ನಿಸುತ್ತಾನೆ, ಅದಕ್ಕೆ ದೈವಾನುಗ್ರಹವಾದವರು, ಪ್ರವಾದಿಗಳೂ ಹೊರತಲ್ಲ. ತಮ್ಮ ಮಕ್ಕಳನ್ನು ಬಲಿಕೊಟ್ಟ ಸತ್ವ ಪರೀಕ್ಷೆಯ ಘಟನೆಗಳ ಪುರಾಣ ಕಥೆಗಳೂ ಹಿಂದೂ ಧರ್ಮದಲ್ಲಿ ಹಲವಾರಿವೆ. ಖುರ್ಬಾನಿ  ತಮ್ಮಲ್ಲಿನ ಅಮೂಲ್ಯವನ್ನು ಹೇಗೆ ಸಮಾಜದ ಒಳಿತಿಗೆ ಧಾರೆಯೆರೆಯುವ ನಿಸ್ವಾರ್ಥತೆಯನ್ನು ಕಲಿಸುತ್ತದೆಯೋ ಹಾಗೆಯೇ “ಹಜ್” ಯಾತ್ರೆ ಧರ್ಮಾವಲಂಬಿಗಳಲ್ಲಿ ದೇವರ ಮೇಲಿನ ವಿಶ್ವಾಸ ಮತ್ತು ಭಕ್ತಿಗೆ ಪೂರಕವಾಗಿ ಸಮನ್ವಯತೆ ಮತ್ತು ಮಾನವತೆಯನ್ನು ಕಾಯ್ದುಕೊಳ್ಳಬೇಕಾದ ಪರಂಪರೆಯಾಗಬೇಕಿದೆ.