Thursday, June 25, 2009

ಮೋಡಕ್ಕೆ ಏಣಿ


(With Permission from Shivu for using the photo)

ಮೋಡಕ್ಕೆ ಏಣಿ
ಹಾಕಿದ್ದಾರೆ ನೋಡಿ
ಪಾಪು ಪುಟ್ಟಿ ಪುಟಾಣಿ
ಮನ ಹಿರಿದು
ತನು ಕಿರಿದು
ಕನಸುಗಳಿಗೆ ಎಲ್ಲೆ-ಎಲ್ಲಿ?
ಅದಕೇ ಏರಿಸಿ
ಆಕಾಶಕ್ಕೇ ಏಣಿ
ರಾಮ, ಜೋಸೆಫ್ ರಹೀಮ
ಸುಳಿಯೋದೇ ಇಲ್ಲ ಇವರಲ್ಲಿ
ಧರ್ಮ-ತಲೆಹಿಡುಕ ಖದೀಮ
ಮರವಿಲ್ಲ್-ಮೇಲೆ ಮರಕೋತಿ
ಕುಂಟಾ ಬಿಲ್ಲೆ ಬುತ್ತಿ-ಆಟ ಚಪಾತಿ
ಮಡಿಯಿಲ್ಲ ಗಡಿಯಿಲ್ಲ
ಜತೆಗೂಡಿ ತಿನ್ನುವರಲ್ಲ
ಹೀಗೆ ಬೇಡ ಹಾಗೆ ಇರು
ಅದು ಸಲ್ಲ ಇಲ್ಲಿ ಸೇರು
ಮಕ್ಕಳಿಗೆ ಬೋಧಿಸುವ
ಪರಿ ಪರಿ ಪೀಡಿಸುವ
ನಮ್ಮ ಸಂಕುಚಿತತೆ ಹೇರುವ
ನಿಜ-ಜೀವನದ ಪಾಠಕ್ಕೆ
ಹೋಗಿ ಸೇರಬೇಕಲ್ಲವೇ
ನಾವೂ ಅವರ ಆಟಕ್ಕೆ??

Sunday, June 21, 2009

ಬಲು-ಸಹಜಾನ್ರಪ್ಪ ಈಜೋಡಿ


(ಚಿತ್ರದ ಬಳಕೆಗೆ ಧರಿತ್ರಿಯವರ ಅನುಮತಿಕೋರಿ)ಸುಬ್ಬು-ಸೀನು ಸೈಕಲ್ ಮ್ಯಾಲೆ
ಏರಿಗುಂಟ ಡಾಂಬರು ರಸ್ತೆ ಮ್ಯಾಲೆ
ಹಳ್ಳೀತುಂಬಾ ಎಸ್ರುವಾಸಿ
ಅದಕ್ಕೇ ಜನಾ ಹೇಳ್ತಾರೆ ನೋಡಿ
ಬಲು ಸಹಜಾನ್ರಪ್ಪ ಈ ಜೋಡಿ

ಸುಕ-ಇರ್ಲಿ ದುಃಕ ಬರ್ಲಿ
ಬರಾ ಆಗಲೀ ಕಣಜ ತುಂಬಲಿ
ಸುಬ್ಬಂಗೆ ಸೀನು ಸೀನಂಗೆ ಸುಬ್ಬ
ಅವನಿಗಿಲ್ಲದೇ ಇವನಿಗಿಲ್ಲ ಯಾವ್ದೇ ಹಬ್ಬ

ಬೆಳಗಾಗೆದ್ದು ಸೈಕಲ್ಲೇರಿ
ಎಗ್ಲಿಗೇರ್ಸಿ ಟವಲ್ಲು ಒಂಟಿತ್ತು ಜೋಡಿ
ಜಾತ್ರೆ ಸೇರಿತ್ತು ಹರಿದ
ಮ್ಯಾಲೆ ಹೊಸಳ್ಳಿ ಕೋಡಿ

ಸುಬ್ಬ ಒತ್ತೋದು ಎಬ್ಬೆರಳಿಗೆ ಓಟು
ಸೀನಂಗೆ ಮಲ್ಗೆ ಪಾರ್ಟಿಂದ್ರೆ ಸ್ವೀಟು
ಚುನಾವಣೆ ಮುಗುದ್ರೆ ಮತ್ತದೇ ಸೈಕಲ್ಲು
ರಾಜಕಾರಣೀಗಳೂ ಕಲೀಬೇಕು ಈ ಪ್ರಿನ್ಸಿಪಲ್ಲು

Tuesday, June 9, 2009

ಗೊತ್ತಿಲ್ಲ ಮಗು

ಅಪ್ಪಾ
ಏನು ಮಗು?
ದೊಡ್ಡ ದೊಡ್ಡ ಪದವೀಲಿ ಇರೋರ್ಗೆ
ಹಾಂ..ಇರೋರ್ಗೆ..??
ಮಾನ ಅನ್ನೋದು ತುಂಬಾ ಇರುತ್ತಾ??
ಹೌದಪ್ಪಾ..ಅದ್ಕೇ ಅಲ್ವ ಅವರು ಆ ಪದವೀಲಿರೋದು..
ಹಂಗಾರೆ..ಮಾನ ನಷ್ಟ ಮೊಕದ್ದಮೆ ಹಾಕಿದ್ರೆ
ಹೋದ ಮಾನ ವಾಪಸ್ ಬಂದ್ಬಿಡುತ್ತಾ..?
ಗೊತ್ತಿಲ್ಲ ಮಗು.

ಅಪ್ಪಾ
ಹೇಳು ಮಗು
ಜೊoಡ್ ಬೆಳೆದ ಬೆಂಗ್ಳೂರ್ ಕೆರೆ ಅಸಹ್ಯ ಅಲ್ವಾ..?
ಹೌದಪ್ಪ..ಉದ್ಯಾನ ನಗರೀಗೆ ದೃಷ್ಠಿ-ಬೊಟ್ಟು..
ಬಿ.ಬಿ.ಎಮ್.ಪಿ. ಗೆ ಇದನ್ನ ಕ್ಲೀನ್ ಮಾಡೋಕೆ
ಅಭಿಶೇಕ್ ನಂತಹ ಕಂದಮ್ಮಗಳ ಬಲಿಬೇಕಾ?
ಗೊತ್ತಿಲ್ಲ ಮಗು

ಅಪ್ಪಾ
ಏನಪ್ಪಾ ರಾಜ?
ರಾಜ ಅಂತೀಯ ಮತ್ತೆ ಏನ್ಕೇಳಿದ್ರೂ
ಅದುಬೇಡ..ಇದು ಆಮೇಲೆ ಅಂತೀಯಾ..
ನೀನು ದೊಡ್ದವನಾಗು ಆಮೇಲೆ ನೀನೇ ರಾಜ
ಅದ್ಕೇನಾ ರಾಜಕಾರಣಿ ಮಂತ್ರಿ ಆದ್ಮೇಲೆ
ಇದು ಈಗಲ್ಲ..ಅದು ಆಗೊಲ್ಲ ಅನ್ನೋದು..?
ನಂಗೊತ್ತಿಲ್ಲ ಮಗು

ಅಪ್ಪಾ
ಇನ್ನೂ ಏನೋ ನಿಂದು ತರಲೆ?
ನೋಡ್ದ್ಯಾ ಮಕ್ಕಳ ಪ್ರಶ್ನೆಗೆ ಉತ್ತರಿಸೋದು
ದೊಡ್ದವರ ಕರ್ತವ್ಯ ಅಂತಾರಲ್ಲವಾ?
ಹೌದಪ್ಪ..ಕೇಳು..ಅದೇನ್ಕೇಳ್ತೀಯೋ..
ಸ್ಕೂಲಲ್ಲಿ ಹುಡುಗ ಚೇಸ್ಟೆ ಮಾಡ್ದ ಅಂತ
ಮೇಸ್ಟ್ರು ಅವನ್ನ ಹೊಡ್ದಿದ್ದಕ್ಕೆ ಮೇಸ್ಟ್ರನ್ನ ಕೆಲ್ಸದಿಂದ
suspend ಮಾಡ್ಸಿ ಬಿಟ್ರಲ್ಲಾ ಅವನ ಪೋಷಕರು?
ಹೌದಪ್ಪಾ..ತೀರಾ ಅತಿಯಾಯ್ತು ಬಿಡು..
ಮತ್ತೆ ಬೇರೆ ದೇಶದಲ್ಲಿದ್ದು ಓದ್ತಾಯಿರೋ ಭಾರತೀಯರ್ನ
ಯಾರೋ ದಾರಿಹೋಕರು ಹಿಗ್ಗಾ-ಮುಗ್ಗಾ ಹೊಡ್ದ್ರೂ
ಸುಮ್ಮನಿದ್ದೀವಲ್ಲಾ ನಾವು..ಇದು ಅತಿ ಅಲ್ವಾ?
ನಂಗೊತ್ತಿಲ್ಲ ಮಗು

Sunday, June 7, 2009

ರನ್- ಅಂದ್ರ‍ೇನು..??

ದೃಶ್ಯ-1

ಮೋಹನ್: ಹಲೋ..ಹಲೋ..ರುಕ್ಮಣಿಯಮ್ಮನೋರೆ...ಆಗ್ಲೆ ರನ್ ಶುರು ಆಗ್ಬಿಟ್ಟಿದೇರೀ..ಎಲ್ಲಿದೀರಾ...?? ಹಲೋ..ನಿಮ್ಮ ಜೊತೆ..ರೋಸಿ ಮೇಡಂ ಬರ್ತೀನಿ ಅಂದಿದ್ರಲ್ಲಾ...ಅವ್ರನೂ ಕರ್ಕೊಂಡ್ ಬನ್ನಿ...ಆಯ್ತಾ...ಹಲೋ...ಹಲೋ...ಮರೀಬೇಡ್ರಿ..ನೀವ್ ಬರೋಕೆ ಆಗೊಲ್ಲ ಅನ್ನೋಂಗಿದ್ರೆ...ರೋಸಿ ಅವ್ರಿಗೆ ಹೇಳಿ..ಮೋಹನ್ ಪಾರ್ಕಿನತ್ರ ಕಾಯ್ತಾ ನಿದಾನಕ್ಕೆ ಓಡ್ತಿರ್ತಾರೆ ಜಾಯಿನ್ ಆಗು ಅಂತ...ಓಕೆ...ಮರೀಬೇಡಿ...

ರುಕ್ಮಣಮ್ಮ: ಹಲೋ..ಮೋಹನ್ ಸರ್..ಹಲೋ.. ಹಾಂ ಕೇಳ್ಸ್ತಾ ಇದೆ..ಹಾಂ...ಬರ್ತೀನಿ....ಹಲೋ..ಯಾರು ರೋಸೀನಾ...ಓಕೆ..(ಸ್ವಗತ-ಬಿಳಿ ಚರ್ಮ ಅಂದ್ರೆ ಹಲ್ಗಿಂಜ್ತಾನೆ...ಈ ಬಾಸ್ ಗಳೇ ಹಿಂಗೆ....)..ಹಾಂ...ಹಲೋ ಸರ್..ಇಲ್ಲ..ಇಲ್ಲ...ನಾನೂ ಬರ್ತೀನಿ...ಏನಂದ್ರಿ...ಇಲ್ಲ ಸರ್ ಅವ್ಳನ್ನೂ ಕರ್ಕೊಂಡ್ಬರ್ತೀನಿ....ಓಕೆ...

ರೋಸಿ: (ತನ್ನ ಮೊಬೈಲ್ ಮೆಸೇಜ್ ನೋಡ್ತಾ..ಸ್ವಗತ) what a silly fellow..why he is calling this old lady ,??...Oh...he wants me to be precise...for me business is more important..let me run with him....to please.
ದೃಶ್ಯ-2


ಮೊದಲ್ನೇ ಮೇಡಂ: (ಜೋರಾಗಿ..) ಮೂರ್ತಿ ಸರ್..ನಿಲ್ಲಿ ನಾವೂ ಬರ್ತೀವಿ...ಹಲೋ..ಸರ್...
ಎರಡ್ನೇ ಮೇಡಂ: ಮೂರ್ತಿ ಸರ್ ..ಸರಸೂ ಮೇಡಂ ಒಂದೆರಡ್ದ್ಮೊಳ ಮಲ್ಲಿಗೆ ಪಾರ್ಕ್ ಹತ್ರ ಕೊಂಡ್ಕೊಂಡು ಬರೋಕೆ ನಮ್ಮನೇವ್ರಿಗೆ ಹೇಳಿ ಅಂದ್ರು..ನೀವು ಕಾಣ್ಲಿಲ್ಲ ಅದ್ಕೇ ನಾನೇ ಕೊಡ್ಕೊಂಡೆ..ನೀವು ಕೊಟ್ಟ್ಬಿಡಿ ಸರ್....
ಮೂರ್ತಿ: ರೀ..ಶೇಖರ್..ಬನ್ನಿ ಬೇಗ ಬೇಗ ಹೋಗೋಣ ಇವರ ಇಬ್ರ ಕೈಗೆ ಸಿಕ್ಕರೆ..ಉಳ್ದಿರೋ ಒಂದೆರಡು ಕೂದ್ಲೂ ತಳೇಲಿ ಉಳಿಯೊಲ್ಲ ಅವರ ಕುಯ್ದಾಟಕ್ಕೆ ಪರಚ್ಕೋತೀವಿ,...ನಮ್ಮ ಆಫೀಸ್ ಗೆಸ್ಟ್ ರೋಸಿ ಬರ್ತಾಳೆ ಅಂದ್ಕೊಂಡ್ರೆ ಇವ್ರು ಗಂಟು ಬೀಳ್ತಾ ಇದ್ದಾರೆ...
ಶೇಖರ್: ಹೌದ್ರಿ ಮೂರ್ತಿ...ನಮ್ ಬಾಸ್ ಬಿಡ್ಕೊಡ್ತಾನೆಯೇ ರೋಸೀನಾ...ಅಲ್ನೋಡಿ..ಅಲ್ಲೇ ಪಾರ್ಕ ಹತ್ರ waiting ಕಾಯ್ಕೊಂಡು.ದೃಶ್ಯ-3

ರವಿ: ಲೇ ರಮೇಶ ನಿಂತ್ಕೊಳ್ಳೋ...ಬಾ ಅಂತ ಹೇಳಿ..ಒಬ್ಬನೇ ಹೊರಬಿಟ್ಯಾ...?? (ಸ್ವಗತ....ಬಡ್ಡಿ ಮಗ...ಬಾ ಅಂತ ಹೇಳಿ ಡೌಗಳು ಸಿಕ್ಕಿದ್ವು ಅಂತ ತಪ್ಪಿಸ್ಕೊಂಡ್ ಹೋಗೋದು ನೋಡು).
ರಮೇಶ: ಶಮಾ..ಸುಮಾ...ಬೇಗ ಬೇಗ ಹೆಜ್ಜೆ ಹಾಕಿ...ಇದೇನು ವಾಕಿಂಗ್ ರೇಸಾ..ಜಾಗ್ ಮಾಡಿ...(ಸ್ವಗತ...ಬೇಗ ಹೋಗ್ಬೇಕು... ಆನನ್ಮಗ ರವಿ ನೋಡ್ಬಿಟ್ಟ)ದೃಶ್ಯ-4

ಪತ್ರ ಕರ್ತೆ: ನಮಸ್ಕಾರ ಸರ್ ಈ ವಯಸ್ಸಿನಲ್ಲಿ ನಿಮಗೆ ರನ್ ನಲ್ಲಿ paricipate ಮಾಡ್ಬೇಕು ಅಂತ ಅನ್ಸಿದ್ದು ಯಾಕೆ ನಿಮಗೆ??....
VeteRUN: ನನಗೆ ರನ್ ಮಾಡೂದು ಅಂದ್ರೆ ಬಹಳ ಇಷ್ಟ..ಯಾಕಂದ್ರೆ ನಾನು ನೌಕರಿ ಪ್ರಾರಂಭಿಸಿದ್ದು ‘ರನ್ನರ್‘ ಆಗಿಯೇ....
ಪತ್ರಕರ್ತೆ: ಅಂದ್ರೆ ನೀವು ಅಥ್ಲೆಟ್ ಆಗಿದ್ರಾ...?
VeteRUN: ಅಲ್ಲಮ್ಮಾ...‘ಬ್ರಿಟೀಶರ ಕಾಲ್ದಲ್ಲಿ ರನ್ನರ್ ಅಂದ್ರೆ...postman ಕೆಲಸ...ಹಹಹಹ
ಪಕ್ಕದಾತ: (ನಗುತ್ತಾ..ಯಜಮಾನ್ರು ಜೋಕ್ ಮಾಡ್ತಿದ್ದಾರೆ...) ಹಹಹಹ
VeteRUN: (ಕೋಪದಿಂದ)..ನಿಮ್ಮ ತಲೆ...ಸುಮ್ಮನಿರ್ರೀ..ಗೊತ್ತಿಲ್ಲ ಅಂದ್ರೆ ಮಾತ್ನಾಬಾರ್ದು....Runner = Postman ಗೊತ್ತಾ...
ಪತ್ರಕರ್ತೆ: ಅಂದ್ರೆ...ಇಷ್ಟೊಂದು ಜನ ಪೋಸ್ಟ್ ಮ್ಯಾನ್ (ಉಮನ್) ಗಳು ಓಡ್ತಾ ಇದ್ದಾರಲ್ಲಾ ಯಾಕೆ...??
VeteRUN: (ಹಹಹ) ಇದು..ಜೋಕು...ಇವಾಗ ನಗ್ರೀ...(ಪಕ್ಕದವರಿಗೆ)...ಎಸ್ ಮೇಡಂ ಇದು ಜೋಕೂ ಆಗ್ಬಹುದು...ಸೀರಿಯಸ್ಸೂ ಆಗ್ಬಹುದು...


ನಮ್ಮ ಪರಿಸರ ನಿಸರ್ಗ ಇದರ ಬಗ್ಗೆ ಕಾಳಜಿ ಜನಸಾಮಾನ್ಯರಲ್ಲಿ ಜಾಗೃತಿ ತರಲಿ ಎನ್ನೋ ಉದ್ದೇಶಕ್ಕೆ ಈ ರನ್ ನಿಯೋಜಿಸಿರುವುದು...ಅದನ್ನ ಹಾಗೇ ಗಂಭೀರವಾಗಿ ತಗಂಡು.. ಜನ ಕಾರ್ಯ ತತ್ಪರರಾದ್ರೆ...ಸೀರಿಯಸ್ಸು...ಇಲ್ಲ..ಇವರತರಹ..(ಪಕ್ಕದವರನ್ನು ತೋರಿಸಿ) ಜೋಕು ಅಂದ್ಕಂಡ್ರೆ ಜೋಕು....ಇಷ್ಟು ಜನ postman..postwomen ಅಂದ್ರಲ್ಲಾ..ನಿಜ..ಇವರೆಲ್ಲಾ ಈ ಸಂದೇಶವನ್ನ ಜನಕ್ಕೆ ತಲಪಿಸೋಕೆ ರನ್ ಮಾಡೋದು..ಇನ್ನು ಇವರು (ಪಕ್ಕದವರನ್ನು ನೋಡಿ..ವ್ಯಂಗದಿಂದ) ಎಷ್ಟು ಸೀರಿಯಸ್ಸಾಗಿ ಇದನ್ನು ತಗೋತಾರೆ ಅನ್ನೋದರ ಮೇಲೆ ನಿಮ್ಮ ಟಿಪ್ಪಣಿಗೆ ಅರ್ಥ ಕೊಡಬಹುದು.
ಪತ್ರಕರ್ತೆ: ಧನ್ಯವಾದ ಸರ್.
[ಶಿವು ಅವರ ಬ್ಲಾಗ್ ನಿಂದ (ಅವರ ಅಪ್ಪಣೆಯಿದೆ ಅಂದ್ಕೋತೀನಿ) ತೆಗೆದು ಬ್ಲಾಗಿಸಿದ್ದೀನಿ]

Friday, June 5, 2009

ಎಚ್ಚೆತ್ಕೋಳಿ ಮುಂಚೇಯ


ಗೆಳೆಯರೇ ಇದು ಚಿತ್ರ ಕವನ ಬ್ಲಾಗ್ ನಲ್ಲಿನ ಚಿತ್ರಕ್ಕೆ ಬರೆದ ಕವಿತೆ

ಎಚ್ಚೆತ್ಕೋಳಿ ಮುಂಚೇಯ
ಇಳಿವಯಸ್ನಾಗ್ ಇವ್ನಿ
ದುಡ್ಯಾಕಾಯ್ತದಾ ನಿಮ್ಮಂಗೆ ?
ನಾನಲ್ಲೇಯವ್ವಾ ಜವ್ನಿ
ಒಟ್ಟೆ-ಬಟ್ಟೆ ಕಟ್ಟೀ ಸಾಕ್ದೆ
ದುಡ್ದು ಮದ್ವಿ ಆಗೋಗಂಟ
ಅಗ್ಲು-ರಾತ್ರೆ ಅನ್ದೇ ತಂದಾಕ್ದೆ
ಸಾಲನೋವಾಲನೋ ಮಾಡಿ
ನೂರ್ ಸುಳ್ಳೇಳಿ ನಿನ್ಮದ್ವೆ ಮಾಡ್ದೆ
ಗಂಡ ಓದ್ಮ್ಯಾಲೆ ನಿನ್ನಣ್ಣನ್ ಓದ್ಗೆ
ಅಡ ಇಟ್ಟ ಬೂಮಿ ಬುಡ್ಸ್ಕಳ್ಳಾಕಾಗ್ದೆ
ಅವನ್ಮದ್ವೇಗೆ ಅಂತ ಮಾರಾಕ್ದೆ
ಅವ್ನೋ ಇದ್ ಮನೆ ಬರ್ಸ್ಕಂಡ
ಇದ್ಬದ್ದ ವಡ್ವೆ ಹೆಂಡ್ತಿಗಂತ ಕಸ್ಕೊಂಡ
ಇಳೀವಯಸ್ನಾಗೆ ಕಲ್ಲೊರ್ತೀನಿ
ಮರ ಚೆಕ್ಕೆ ಮಾರಿ ಒಟ್ಟೆ ಒರ್ಕೋತಿವ್ನಿ
ಕಡೀತಾ ಇಲ್ವೇ ನೀವೂ
ಅಣ್ಣೂ ಅಂಪ್ಲೂ ಕೊಡೋ ಮರಾವ
ಬಗೀತಾ ಇಲ್ವಾ ಅನ್ನಾಕೊಡೋ
ತಾಯಿ ಒಟ್ಟೇಯ....
ಜ್ವಾಕೆ ಕಣ್ರಪ್ಪಾ ಜ್ವಾಕೆ..!!
ಉರಿಸ್ಬ್ಯಾಡಿ ಅಡ್ದ್ ಒಟ್ಟೇಯಾ
ಏನ್ ಆಕ್ಕಂಡೀರಿ ಕಡ್ದ್ ಕಟ್ಟೇಯಾ?
ಅದ್ಕೇ ಏಳ್ತಿವ್ನಿ ಎಚ್ಚೆತ್ಕೊಳ್ಳಿ
ನೀವು ಎತ್ತೋರ್ಗೆ ಬೂತಾಯ್ಗೆ
ಮಾಡ್ದಂಗೆ ನಿಮ್ಮಕ್ಕ್ಳೂ ನಿಮಗೆ
ಮಾಡೋದಕ್ಕೆ ಮುಂಚೇಯಾ

Monday, June 1, 2009

ಹಾಡು..ವಿತ್ ಮ್ಯೂಜ಼ಿಕ್

ತರಬೇತಿ ಶಿಬಿರದ ಕ್ಲಾಸಿನ ಎರಡು ಪಿರಿಯಡ್ ನಂತರ practicalsನ ಒಂದು experiemntಗೆ ತಯಾರಿಯಾಯ್ತು ಸತತ ಮೂರು ಘಂಟೆಯ ಕಾರ್ಯಕ್ರಮದ ನಂತರ ಚಹಾ ಬಂತು lab ಗೆ. ಎಲ್ಲರೂ ಚಹಾ ಮತ್ತು ಬಿಸ್ಕತ್ ಸವಿಯನ್ನು ಸವಿಯುತ್ತಾ ಹರಟೆಗೆ ಕುಂತೆವು. ಶಶಿ, ರಾಜ್, ಮುನೀರ್, ಜೋಸೆಫ್, ಸುಧಾ, ರಮ್ಯಾ, ಶರ್ಮಿಲಾ ಎಲ್ಲ ಉದ್ದನೆಯ lab ಟೇಬಲ್ಲಿನ ಎರಡೂ ಬದಿಯಲ್ಲಿ ಹರಟಲು ಕುಂತೆವು.
“ರಮ್ಯಾ, ರೋಸಿ ಎಲ್ಲೇ..?? ಆಮೇಲೆ ಬಂದು practicals ನಲ್ಲಿ ಏನ್ಮಾಡಿದ್ರಿ?? ಅಂತ ತಲೆ ತಿನ್ತಾಳೆ..ಅವಳಿದ್ದಳಲ್ಲಾ.. ನಮ್ಮ experiemnt preparatory ಯಲ್ಲಿ ??” ಸುಧಾ ಕೇಳಿದಳು ತನ್ನ ರೂಂ ಮೇಟ್ ಬಗ್ಗೆ ರಮ್ಯಾನ ವಿಚಾರಿಸುತ್ತಾ.
“ಇಲ್ಲೇ ಇದ್ದಳಲ್ಲಾ...ಏನೋ ಲಿಬ್ರರೀಲಿ ಕೆಲಸ ಇದೆ ಅಂತ ಹೇಳ್ತಿದ್ದಳು..ಹೋಗಿದ್ದಾಳೆ ಅನ್ಸುತ್ತೆ..”.ಎಂದಳು.
“ಲೋ ಮುನೀರ್ ಸಂಗೀತದ ಜೋಕ್ ಹೇಳ್ದಂತಲ್ಲಾ ರಾತ್ರಿ ರೂಂನಲ್ಲಿ...ಆ ಜೋಕು ಹೇಳೋ..” ಗೋಗರೆದ ಶಶಿ.
ಸುಧಾ, ಶರ್ಮಿಲಾ, ರಾಜ್, ಜೋಸೆಫ್ ಎಲ್ಲ...”ಹೇಳೋ..ಹೇಳೋ..please “ ಅಂತ ಗೋಗರೆದರು.
“ಸ್ವಲ್ಪ ಇರ್ರೋ..ರೋಸೀನೂ ಬರ್ಲಿ...” ಸ್ನೇಹಿತೆ ಪರ ರಮ್ಯಾ ಕೇಳಿಕೊಂಡಳು.
“ನೋಡ್ರೋ..ಜೋಕೊಳಗೆ ಜೋಕು ಬೇಕಂದ್ರೆ...ಅವಳು ಬರೋದಕ್ಕೆ ಮುಂಚೇನೇ ಹೇಳ್ತೀನಿ...ನೀವೇ ನೋಡೀರಂತೆ ಮಜಾನ...” ಅಂತ ಮುನೀರ್ ಜೋಕ್ ಹೇಳೋಕೆ ಶುರು ಮಾಡ್ದ
(ಅವನು ಹೇಳಿದ್ದು ಹೀಗೆ)
ಯಾವುದೋ important ವಿಷಯವನ್ನು ತನ್ನ ಅಣ್ಣನ ಹತ್ರ ಚರ್ಚಿಸೋವಾಗ, ಪಾಪು ತನ್ನ ಅಮ್ಮನಿಗೆ- “ಅಮ್ಮ ನಾನು ಸುಸು ಮಾಡ್ಬೇಕು...ಅಮ್ಮ ನಾನು ಸುಸು ಮಾಡ್ಬೇಕು” ಅಂತ ಒಂದೇ ರಂಪ ಶುರು ಹಚ್ಕೊಂಡ...
“ಲೋ..ಬಂಟಿ ಎಸ್ಟು ಸಲ ಹೇಳಿಲ್ಲ? ನೀನು ದೊಡ್ಡವನಾಗ್ತ ಇದ್ದೀಯ..ಎಲ್ಲರ ಮುಂದೆ ಹಾಗೆ ಸುಸು..ಸುಸು ಅಂತ ಹೇಳ್ಬಾರ್ದು ಅಂತ...” ಗದರಿದಳು ಬಂಟಿ ಅಮ್ಮ
“ಥೂ ಹೋಗಮ್ಮ...ನನಗೆ ಅವಸ್ರ ಆಗಿದೆ..ನೀನು..ನೋಡಿದ್ರೆ ಹಾಗೆ ಹೇಳ್ಬೇಡ ಹೀಗೆ ಹೇಳ್ಬೇಡ ಅಂತೀಯ..ಮೊದಲು ಈ ಚಡ್ಡಿ ಬಿಚ್ಚು ನಾನು ಸುಸು ಮಾಡಿ ಬರ್ತೀನಿ” ಅಂದ..
ಅವನ ಅಮ್ಮ ಚಡ್ಡಿ ಹುಕ್ಸ್ ತೆಗೆದು – “ಹೋಗೋ.ಅವಸ್ರ ಇವನಿಗೆ ..ಎನ್ನುತ್ತಾ ಅವನ ಕುಂಡಿಗೆ ಪ್ರೀತಿಯಿಂದ ತಟ್ಟಿ..”
ಸುಸು ಮಾಡಿ ಬಂದ ಬಂಟಿ “ಈಗ ಹೇಳಮ್ಮಾ” ಎಂದ ವಿಧೇಯನಂತೆ..
“ನೋಡು..ಸುಸು..ಸುಸು ಅಂತ ಎಲ್ಲರ ಎದುರು ಹೇಳ್ಬಾರ್ದು..”
“ಮತ್ತೆ ನನ್ಗೆ ಅವಸ್ರ ಆದ್ರೆ...” ಹುಬ್ಬೇರಿಸಿದ ತನ್ನ ಆತಂಕ ತೋಡಿಕೊಳ್ತಾ..
“ಆಗ ನನಗೆ ಮಾತ್ರ ಗೊತ್ತಗೋ ಹಾಗೆ...’ನಾನು ಹಾಡ್ಬೇಕು..ನಾನು ಹಾಡ್ಬೇಕು’ ಅಂತ ಹೇಳು..” ಎಂದಳು.

ಹೀಗಿರಬೇಕಾದರೆ ಒಂದ್ಸರ್ತಿ ಬಂಟಿಯ ದೂರದ ಚಿಕ್ಕಪ್ಪ ಚಿಕ್ಕಮ್ಮ ಅಜ್ಜ ಅಜ್ಜಿ ಎಲ್ಲರೂ ಮನೆಗೆ ಬಂದಿದ್ದರು. ಎಲ್ಲ ಗಹನವಾದ ವಿಷಯವೊಂದರ ಬಗ್ಗೆ ಮಾತು-ಕತೆಯಲ್ಲಿದ್ದಾಗ ಶುರುವಾಯ್ತು ಬಂಟಿ ಬಡ-ಬಡಿಕೆ...”ಅಮ್ಮಾ..ನಾನು ಹಾಡ್ಬೇಕು..ಅಮ್ಮಾ ನಾನು ಹಾಡ್ಬೇಕು..” ಅಂತ..
“ಲೋ ಸ್ವಲ್ಪ ಇರೋ ಏನೋ ಮಾತ್ನಾಡ್ತಾ ಇದ್ದೀವಿ ನಾವು..” ಅವನ ಅಮ್ಮ ಗದರಿದಳು..
ಬಂಟಿ.. “ಥೂ ಹೋಗಮ್ಮ ನಾನು ಹಾಡ್ಲೇ ಬೇಕು...” ಎನ್ನತೊಡಗಿದ
ಇದನ್ನೇ ಗಮನಿಸುತ್ತಿದ್ದ ಅಜ್ಜ... “ಬಾರಪ್ಪಾ ಪುಟ್ಟ..ನೀನು ನಿಧಾನವಾಗಿ..ನನ್ನ ಕಿವೀಲಿ ಹೇಳು ಬಾ ಹಾಡು...” ಎಲ್ಲ ನಗತೊಡಗಿದಾಗ ರಮ್ಯಾ ನಗುತ್ತಾ..ಹೇಳಿದಳು.. “ಬಂಟಿ ಹಾಡು ಅಜ್ಜನಿಗೆ ಹೇಗನ್ನಿಸ್ತಂತೆ..??”
ಜೋಕನ್ನು ಬೇಕಂತಲೇ ನಿಧಾನವಾಗಿ ಹೇಳಿದ ಮುನೀರ್..ಅದು ಮುಗಿಯುವ ಹೊತ್ತಿಗೆ ರೋಸಿ ಲ್ಯಾಬಿನೊಳಕ್ಕೆ ಬಂದಳು..
ಎಲ್ಲರೂ ನಕ್ಕರು...ನಗುತ್ತಾ ಸುಧಾ ಕೇಳಿದಳು.. “ಲೇ ರೋಸಿ ಎಲ್ಲೇ ಹೋಗಿದ್ದೇ ??”

ಶರ್ಮಿಲಾ ಹೇಳಿದಳು - “ಲೇ..ಅವಳು ಹಾಡು ಹೇಳಿ ಬರ್ತಿದ್ದಾಳೆ....” ಘೊಳ್ ಎಂದು ಎಲ್ಲ ನಗತೊಡಗಿದಾಗ ರೋಸಿಗೆ ರೇಗಿತ್ತು..
“ಯಾಕ್ರೇ..ನನಗೆ ಹಾಡೋಕೆ ಬರೊಲ್ಲ ಅಂದ್ಕೊಂಡಿದ್ದೀರಾ...??”
ಮತ್ತೆ ಜೋರಾಗಿ ನಕ್ಕರು ಎಲ್ಲ...
“ಯಾಕ್ರೋ ..? ಇದ್ರಲ್ಲಿ ನಗೋದೇನಿದೆ..?? ಹಾಡಿ ತೋರಿಸಲಾ ನಾನು...ಎಷ್ಟು ಇಂಪಾಗಿ ಹಾಡ್ತೀನಿ ಗೊತ್ತಾ..ನಮ್ಮೂರ್ನಲ್ಲಿ ಗಣೇಶನ ಹಬ್ಬದಲ್ಲಿ ಸ್ಕೂಲಿನ ಎಲ್ಲ ಸಮಾರಂಭದಲ್ಲಿ ಹಾಡೀದೀನಿ ಗೊತ್ತಾ...??”
ಮತ್ತೆ ಜೋರಾಗಿ ನಗು..
ಮುನೀರ್ ಕೇಳ್ದ ನಗ್ತಾನೇ.. “ರೋಸೀ..ನೀನು ಸೋಲೋ ಹಾಡ್ತಿಯೋ..ಡ್ಯೂಯೆಟ್ಟೋ..??” ಎಲ್ಲರೂ ಮತ್ತೆ ನಗಲಾರಂಭಿಸಿದರು..
“ಯಾಕ್ರೋ ನಗ್ತೀರ ..ನನಗೆ ಸೋಲೋನೇ ಇಷ್ಟ.. ಆದ್ರೆ ಡೂಯೆಟ್ಟ್ಗೆ ಒಳ್ಳೆ ಪಾರ್ಟ್ನರ್ ಸಿಕ್ರೆ ..ಖಂಡಿತಾ ಹಾಡ್ತೇನೆ...” ಮತ್ತೆ ಎಲ್ಲರೂ ಜೋರಾಗಿ ನಗಲಾರಂಭಿಸಿದರು..
“..ಆಗೊಲ್ಲ ಅಂದ್ಕೊಂಡಿದ್ದೀರಾ..?? ನೀವೆಲ್ಲಾ ಬನ್ನಿ ಬೇಕಾದ್ರೆ..ಎಲ್ಲರ ಒಟ್ಟಿಗೂ ಹಾಡಿ ತೋರಿಸ್ತೀನಿ...”
ಹೊಟ್ಟೆ ಹಿಡಿದು ಎಲ್ಲರೂ ನಗಲಾರಂಭಿಸಿದರು...
ಶಶಿ ಹೇಳ್ದ..ನಗ್ತಾ.. “ರೋಸಿ..ಸ್ಟೇಜ್ ಮೇಲೆ ಹಾಡ್ತೀಯಾ..?? Training course closing functionನಲ್ಲಿ ಚಾನ್ಸ್ ಕೊಡ್ಸೋಣ...” ಎಲ್ಲರ ನಗು ನಿಲ್ಲಲೇ ಇಲ್ಲ..ರೋಸಿ ಏನು ಹೇಳಬಹುದೆಂದು ಯೋಚಿಸುತ್ತಾ..
ರೋಸಿ ಹೇಳಿದಳು.. “ಕೊಡ್ಸಿ ಚಾನ್ಸ್ ಹಾಗಾದ್ರೆ..ಆರ್ಕೆಸ್ಟ್ರಾ ..ಮ್ಯೂಜಿಕ್ ಜೊತೆಗೇ ಹಾಡ್ತೀನಿ.. ನಾನು ಹಾಡೊದನ್ನ ನೋಡ್ತಾ ಎಲ್ಲಾ ದಂಗಾಗಬೇಕು..ಹಾಗೆ ಹಾಡ್ತೇನೆ...”.
ಅವಳ ಮಾತು ಸರಿಯಾಗಿ ಕೇಳಿಸಲೂ ಇಲ್ಲ ಅಷ್ಟೊಂದು ನಗು ತುಂಬಿ ಹೋಯ್ತು ಲ್ಯಾಬ್ ತುಂಬಾ...
ರೋಸಿಗೆ ..ಅರ್ಥವಾಗಲಿಲ್ಲ ಎಲ್ಲರೂ ಏಕೆ ಇಷ್ಟೊಂದು ನಗ್ತಾ ಇದ್ದಾರೆ ಅನ್ನೋದು. ಕಡೆಗೆ ಕೋರ್ಸ್ ಮುಗಿದು ಎಲ್ಲ ಹೊರಡುವ ಸಮಯ ಹತ್ತಿರವಾದಾಗ ರೋಸಿಗೆ ರಮ್ಯಾನೇ ಹೇಳಿರಬೇಕು..ಮುನೀರ್ ಹತ್ರ ಬಂದು ರೋಸಿ ಹೇಳಿದಳು ಹುಸಿ ಮುನಿಸು ತೋರಿಸುತ್ತಾ.. ಮುನೀರ್ ಬೆನ್ನಿಗೆ ಗುದ್ದುತ್ತಾ.... “ಮುನೀರ್ ತುಂಬಾ ಘಾಟಿ ಕಣೋ ನೀನು..ಎಲ್ಲ ಸೇರಿ ಫೂಲ್ ಮಾಡಿದ್ರಲ್ಲ ನನ್ನ..ಇರ್ಲಿ ನನಗೂ ಸಿಗುತ್ತೆ ಚಾನ್ಸು...”
“ಖಂಡಿತಾ ಕೊಡಿಸ್ತೀವಮ್ಮಾ ನಿನಗೆ ಹಾಡೋಕೆ ..” ಎಂದ ಮುನೀರ್ ಈಗ ಎಲ್ಲರ ಜೊತೆ ರೋಸೀನೂ ಮನತುಂಬಿ ನಕ್ಕಳು.