Monday, May 18, 2009

ಗರ್ಭಧಾರಿ ಗಂಡುಗಳು..!!!!








ಗೆಳೆಯರೇ,
ಈ ಬ್ಲಾಗಿನ ಮೂಲಕ ನನ್ನ ಅಧ್ಯಯನ ಕ್ಷೇತ್ರದ ಒಂದು ವಿಸ್ಮಯಕಾರಿ ವಿಷಯವನ್ನು ಹಂಚಿಕೊಳ್ಳಲು ಇಷ್ಟಪಡುತ್ತೇನೆ.
ಈ ಚಿತ್ರ ನೋಡ್ತಿದ್ದೀರಲ್ಲಾ..ಇದು ಸಮುದ್ರ ಕುದುರೆಯದು...ಅರೆ..ಸಮುದ್ರದಲ್ಲಿ ಕುದುರೇನೆ..?? ಸೋಜಿಗ ಅನ್ನಿಸೊಲ್ಲವೇ..? ಹೌದು..ಆದ್ರೂ ನಿಜ...ಆದ್ರೆ ಇದು ಕುದುರೆ ಅಲ್ಲ ..ಒಂದು ಜಾತಿಯ ಮೀನು. ಇದೇ ರೀತಿಯ ಸ್ವಲ್ಪ...ಸ್ವಲ್ಪ ಏನು..ಹೆಚ್ಚೇ ವಿಚಿತ್ರ ಅನ್ನಿಸೋ ಇನ್ನೊಂoದು ಸಮುದ್ರ ಕುದುರೆಯ ಸಂಬಂಧಿ..ಸಮುದ್ರ ದೈತ್ಯ ಅಥವಾ ಸೀ ಡ್ರಾಗನ್. ಇದಕ್ಕೋ ಸಮುದ್ರ ತಲದ ಗಿಡ, ಎಲೆಗಳ ಹಿನ್ನೆಲೆಗೆ ಅನುಗುಣವಾಗಿ ಹೊಂದಿಕೊಂಡು ಗುರುತಿಸಲದಳ ಮೈ ಬಣ್ಣ ಮತ್ತು ವಿನ್ಯಾಸದ ನಿಸರ್ಗದತ್ತ ವರದಾನವಿದೆ. ಈ ಎರಡೂ ಜೀವಿಗಳು ಒಂದೇ ರೀತಿಯ ಜೀವ ಮತ್ತು ಜೀವನ ಶೈಲಿಯನ್ನು ಹೊಂದಿರುತ್ತವೆ.
ಸಮುದ್ರ ಕುದುರೆ ಕಿವಿರುಮೂಲಕ ಕರಗಿದ ಆಮ್ಲಜನಕವನ್ನು ಉಸಿರಾಡುವ ಜೀವಿ. ಇದೇ ರೀತಿಯ ಉಸಿರಾಟ ಮೀನಿನದೂ ಸಹಾ. ಸಮುದ್ರ ಕುದುರೆಗಳಲ್ಲಿ ಸುಮಾರು ೪೦-೫೦ ವಿಧಗಳಿರುತ್ತವೆ. ಸಮುದ್ರ ಕುದುರೆಗಳೂ ಸುಮಾರು ೨ ರಿಂದ ೩೦ ಸೆಂ.ಮೀ. ಎತ್ತರವಿದ್ದು ಸುಮಾರು ೧ ರಿಂದ ೫ ವರ್ಷ ಆಯಸ್ಸನ್ನು ಹೊಂದಿರುತ್ತವೆ.
ಸಮುದ್ರ ಕುದುರೆಯಲ್ಲಿನ ವಿಸ್ಮಯಕಾರಿ ಅಂಶವೆಂದರೆ...ಗರ್ಭಧರಿಸುವ ಗಂಡುಗಳು..!!!!
ಹೌದು, ಗಂಡು ಸಮುದ್ರ ಕುದುರೆ ಹೊಟ್ಟೆಯಭಾಗ ಚೀಲದಂತಹ ಗರ್ಭಕೋಶವನ್ನು ಹೊಂದಿರುತ್ತದೆ. ಹೆಣ್ಣು ಸಮುದ್ರ ಕುದುರೆ ಗಂಡಿನೊಡನೆ ರಸಕ್ರೀಡೆಯಾಡುವಾಗ ತನ್ನ ಅಂಡಕೋಶವನ್ನು ಗಂಡಿನ ಗರ್ಭಚೀಲಕ್ಕೆ ವರ್ಗಾಯಿಸುತ್ತದೆ. ಇಲ್ಲಿ ಗಂಡು ತನ್ನ ರೇತ್ರಾಣುಗಳ ಮೂಲಕ ಅಂಡಗಳನ್ನು ಫಲಗೊಳಿಸಿ ಅಂಡದೊಳಗಿನ ಭ್ರೂಣದ ಬೆಳವಣಿಗೆಗೆ ಬೇಕಾದ ಎಲ್ಲ ಜೀವಸತ್ವ-ರಸಗಳನ್ನು ಪೂರೈಸಿ ಪೂರ್ಣರೂಪದಲ್ಲಿ ಬೆಳವಣಿಗೆಯಾದ ಮರಿ ಸಮುದ್ರ ಕುದುರೆಯನ್ನು ಗಂಡು ಸಮುದ್ರ ಕುದುರೆ ಪ್ರಸವಿಸುತ್ತದೆ.
ಒಮ್ಮೆ ಗರ್ಭ ಧರಿಸಿದ ಗಂಡು ಸುಮಾರು ಸರಾಸರಿ ೫೦-೧೦೦ ಮರಿಗಳನ್ನು ಪ್ರಸವಿಸುತ್ತದೆ. ಗಾತ್ರದಲ್ಲಿ ಚಿಕ್ಕ ಪ್ರಬೇಧಗಳು ೫-೧೦ ಮರಿಕೊಟ್ಟರೆ, ಗಾತ್ರದಲ್ಲಿ ದೊಡ್ದ ಪ್ರಬೇಧಗಳು ೫೦೦ ರ ವರೆಗೂ ಮರಿಗಳನ್ನು ನೀಡುತ್ತವೆ.
ಸಮುದ್ರ ಕುದುರೆ ನೀರಿನಲ್ಲಿನ ಜಲಸಸಿಗಳಿಗೆ ತಮ್ಮ ಬಾಲವನ್ನು ಹೆಣೆದುಕೊಂಡು ಕಾದು ಬೇಟೆಯಾಡುತ್ತವೆ. ಸಣ್ಣ ಹುಳುಗಳು, ಸಿಗಡಿ ಮರಿ ಅಲ್ಲದೇ ಮೀನುಮರಿಗಳನ್ನೂ ತಿನ್ನುತ್ತದೆ. ತನ್ನ ಬೇಟೆ ಹತ್ತಿರ ಬರುತ್ತಿದ್ದಂತೆಯೇ ತನ್ನ ಕೊಳವೆ ರೋಪದ ಬಾಯಿ ಮೂಲಕ ನೀರನ್ನು ಮತ್ತು ಬೇಟೆಯನ್ನು ಹೀರಿಕೊಂಡು ಬಿಡುತ್ತದೆ.
ಸಮುದ್ರ ಕುದುರೆಯನ್ನು ಗಾಜಿನ ಅಂದತೊಟ್ಟಿಗಳಲ್ಲಿ ಅಲಂಕಾರಕ್ಕೆ ಅಕ್ವೇರಿಯಂ ಮೀನನ್ನು ಸಾಕುವಂತೆ ಸಾಕಲಗುತ್ತದೆ. ವಿಶ್ವದ ಕೆಲ ರಾಷ್ಟ್ರಗಳಲ್ಲಿ ಇವುಗಳನ್ನು ಮೀನು ಸಾಕುವಂತೆ ಸಾಕಲಾಗುತ್ತದೆ. ಈ ಸಮುದ್ರ ಜೀವಿಗಳು ವಿಶೇಷ ಔಷಧೀಯ ಗುಣಗಳನ್ನು ಹೊಂದಿವೆಯೆಂದು ತಿಳಿದುಬಂದಿದೆ. ಚೀನಾ ಮತ್ತು ಜಪಾನ್ ರಾಷ್ಟ್ರಗಳಲ್ಲಿ ವಿಶೇಷ ಬೇಡಿಕೆಯಲ್ಲಿರುವ ಸಮುದ್ರ ಜೀವಿಯಿದು.

ಈ ಕೆಳಗಡೆ ಕೊಟ್ಟಿರುವ ಅಂತರಜಾಲದ ಲಿಂಕ್ ಸಮುದ್ರ ಕುದುರೆಯ ಮರಿಹಾಕುವ ಚಲನಚಿತ್ರ-ತುಣುಕಿಗೆ ಕೊಂಡೊಯ್ಯುತ್ತದೆ

http://www.youtube.com/watch?v=iaoLxR9FTwk&eurl=http%3A%2F%2Fvideo%2Egoogle%2Eco%2Euk%2Fvideosearch%3Fq%3Dseahorse%2520giving%2520birth%26hl%3Den%26rlz%3D1R2GGLL%5Fen%26um%3D1%26ie%3DUTF%2D8&feature=player_embedded