Wednesday, July 26, 2017

ಕುವೈತಿಗಳಲ್ಲಿ ವಿವಾಹ – ರಿವಾಜುಗಳು

ಕುವೈತಿಗಳಲ್ಲಿ ವಿವಾಹ – ರಿವಾಜುಗಳು
(ಚಿತ್ರಗಳು: ಅಂತರ್ಜಾಲದ ಒಂದು ಬ್ಲಾಗ್ ನಿಂದ, Fotos from a Blog on internet) 









ಸಾಮಾಜಿಕ ನಡೆ ಪದ್ಧತಿಗಳು ಬಹುಶಃ ಧರ್ಮದ ಕಟ್ಟಳೆಗಳಿಗೆ ಬದ್ಧವಾಗಿರುವುದಿಲ್ಲ ಎನ್ನುವುದು ನನ್ನ ಊಹೆ, ಇದೇ ಕಾರಣಕ್ಕೆ ಹಿಂದೂ ಮತ್ತು ಮುಸ್ಲಿಂ ವಿವಾಹ ಪದ್ಧತಿಗಳಲ್ಲಿ ಸ್ಥಳೀಯ ಪರಂಪರೆ ಮತ್ತು ಪದ್ಧತಿಗಳು ಹೆಚ್ಚು ಪ್ರಭಾವ ಬೀರುತ್ತವೆ. ಈ ಅನಿಸಿಕೆ ಬಹುಶಃ ನಾನು ಈಗ ನೆಲೆನಿಂತ ನಾಡು “ಕುವೈತ್”ಗೂ ಅನ್ವಯಿಸುತ್ತದೆ. ಕುವೈತ್ ತನ್ನ ಇತರ ನೆರೆಯ ಮುಸ್ಲಿಂ ಸಂಪ್ರದಾಯದ ರಾಷ್ಟ್ರಗಳಷ್ಟು ಕಟ್ಟಾ ಇಸ್ಲಾಮ್ ಪದ್ಧತಿಗಳಿಗಿಂತಾ ಸ್ವಲ್ಪ ಸಡಿಲ ಸಮಾಜಿಕ ನಡೆಯಿಂದ ಕೂಡಿದ್ದು ಎನ್ನುವುದು ನನ್ನಂತೆ ಎಲ್ಲಾ ಇತರ ಅನಿವಾಸಿಗಳ ಅನಿಸಿಕೆ. ಇದು ಅವರ ವಿವಾಹ ಪದ್ಧತಿಯಲ್ಲೂ ಕಾಣಸಿಗುತ್ತದೆ. ಆಧುನಿಕ ಜಗತ್ತಿನ ಆಡಂಬರ, ಸಡಗರದ ಮೋಜು ಕುವೈತಿಗಳಲ್ಲಿ ಕಂಡುಬಂದರೂ ಕೆಲವು ಪಾರಂಪರಿಕ ’ರಿವಾಜು’ಗಳು ಇವರ ವಿವಾಹ ಪದ್ಧತಿಗಳಲ್ಲಿ ಉಳಿದುಕೊಂಡಿವೆ.
          ಮದುವೆಗೆ ಸೂಕ್ತ ಎನಿಸುವ ಹುಡುಗಿ (ವಧು)ಯನ್ನು ಗುರುತಿಸುವ ಕ್ರಿಯೆ (ಈಗೀಗ ಹುಡುಗ ನೋಡಿ ಒಪ್ಪಿ ತಿಳಿಸಿ ಮುಂದಿನ ಪ್ರಕ್ರಿಯೆಗೆ ನಾಂದಿ ಹಾಡುವುದೂ, ನಮ್ಮಲ್ಲಿರುವಂತೆ, ನಡೆದಿದೆ) ನಡೆಯುತ್ತದೆ. ಇದನ್ನು ನಮ್ಮಲ್ಲಿ ನಿಶ್ಚಿತಾರ್ಥ ಎಂದರೆ ಇಲ್ಲಿ “ಅಲ್-ಖಿತ್ಬಾಹ್” ಎನ್ನುತ್ತಾರೆ. ನಂತರ ಎರಡೂ ಕಡೆಯವರಿಂದ ಮದುವೆ ಮಾತುಕತೆ ನಡೆಯುತ್ತದೆ. ವಧುವಿಗೆ ವರನ ಕಡೆಯಿಂದ ವಧುದಕ್ಷಿಣೆ ಎನ್ನುವಂತೆ ಕೊಡಲಾಗುವ “ಅಲ್-ಮೆಹರ್” ಮೊಬಲಗಿನ ಬಗ್ಗೆ ನಿರ್ಧಾರವಾಗುತ್ತದೆ. ಅದನ್ನು ಸಲ್ಲಿಸುವ ಮತ್ತು ಮದುವೆಯ ದಿನವನ್ನು ಗೊತ್ತುಪಡಿಸುವ ವಿಧಾನವನ್ನು ಒಂದು ಪುಟ್ಟ ಸಮಾವೇಶವನ್ನು “ಅಲ್-ಮಲ್ಚಾ” ಎನ್ನುತ್ತಾರೆ. ಅಲ್ಲಿಗೆ ವಧೂ-ವರರನ್ನು ಮದುವೆಗೆ ಅಣಿಮಾಡುವ ಎಲ್ಲಾ ಸಿದ್ಧತೆಗಳಿಗೆ ಅಂಕಿತ ಬಿದ್ದಂತೆಯೇ. ಇದೇ ಸಂದರ್ಭದಲ್ಲಿ ವಧುವಿಗೆ ವರ ಕೊಡುವ ಆಭರಣಗಳನ್ನೂ ನೀಡಲಾಗುತ್ತದೆ. ಉಂಗುರ “ಅಲ್-ದೆಬ್ಲ” ಮತ್ತು ಕಂಠಿಹಾರ (ನೆಕ್ಲೆಸ್) “ಅಲ್-ಷೆಬ್ಕಾ” ಮುಂತಾದುವುಗಳ ಸಲ್ಲಿಕೆಯಾಗುತ್ತದೆ. ಹಾಗೆಯೇ ಕೆಲವೆಡೆ ವರನ ಕಡೆಯಿಂದ ವಧುವಿಗೆ “ಅಲ್-ದಜಾಹ್” ಅಥವಾ ವಧುಸರಂಜಾಮು ನೀಡಲಾಗುತ್ತದೆ. ಇದರಲ್ಲಿ ಸಾಮಾನ್ಯವಾಗಿ ಎರಡು ಜೋಡಿ ವಧುವಿನ ಉಡುವ ಬಟ್ಟೆ, ಪಲ್ಲಂಗ ಅಥವಾ ಮಂಚದ ಹಾಸುಗೆಯ ಹೊದಿಕೆ (ಬೆಡ್ ಶೀಟ್) ಮತ್ತು ಹೊದಿಕೆ (ಬ್ಲಾಂಕೆಟ್) ಇರುತ್ತವೆ.
          ಇಸ್ಲಾಂ ಮದುವೆಗಳಲ್ಲಿ ಸಾಮಾನ್ಯವಾಗಿ ವಧುವಿನ ಮನೆಯಲ್ಲಿ ಮದುವೆಯ (ನಿಕಾಹ್) ಪ್ರಮುಖ ಸಮಾರಂಭ ನಡೆಯುವುದು ಬಹುಪಾಲು ಎಲ್ಲೆಡೆ ಪಾಲಿಸಲಾಗುವ ಏಕಪ್ರಕಾರದ ಪದ್ಧತಿ ಎನಿಸುತ್ತದೆ. ನಮ್ಮಲ್ಲಿಯೂ ಈ ಪದ್ಧತಿ ಇದೆ ಎನ್ನುವುದು ನನ್ನ ಬಾಲ್ಯದಿಂದಲೂ ನೋಡಿರುವ ಹಲವಾರು ಮದುವೆಗಳಲ್ಲಿ ನಡೆದಿರುವುದರಿಂದ ನನಗೆ ಖಾತರಿಯಾಗಿದೆ. ಆದರೆ ಇತ್ತೀಚೆಗೆ ಶಾದಿಮಹಲ್ ಅಥವಾ ಮದೆವೆ ಛತ್ರಗಳಲ್ಲಿ ವಧು-ವರರ ಸೌಕರ್ಯ ನೋಡಿಕೊಂಡು ಮದುವೆ ಸಮಾರಂಭ ನಡೆಯುವುದು ಸಂಪ್ರದಾಯವಾಗುತ್ತಿದೆ. ಇದೇ ವಿಧಾನ ಕುವೈತಿ ಮದುವೆಗಳಲ್ಲೂ ಕಂಡುಬರುತ್ತದೆ.
          ಮದುವೆಗೆ ಸಜ್ಜಾಗುವ ವಧು ಮತ್ತು ವರ ವಿಶೇಷ ಪೋಷಾಕಿನಲ್ಲಿ ಕಂಡುಬರುತ್ತಾರೆ. ವಧು ಹಸಿರು ಬಣ್ಣದ ಸ್ವರ್ಣರಂಜಿತ ಮೇಲುಡುಗೆಯನ್ನು ತೊಟ್ಟು ವಧು ಉಡುಗೊರೆಯಾಗಿ ಬಂದ ಆಭರಣಗಳನ್ನು ಧರಿಸಿ, ಕೈ-ಕಾಲುಗಳಲ್ಲಿ ಮೆಹಂದಿ ಬಣ್ಣದಿಂದ ಅಲಂಕೃತಳಾಗಿರುತ್ತಾಳೆ. ಅವಳನ್ನು ಕರೆತರಲು ಲಘುವಾಗಿ ಹಾಡಿಕೊಂಡು ಸಾಂಪ್ರದಾಯಿಕ ಡೋಲು ಮೇಳಗಳ ಹೆಂಗಳೆಯರ ದಿಬ್ಬಣ ಒಂದು ಹಸಿರು ಬಣ್ಣದ ಚಾಮರಚೌಕವನ್ನು ವಧುವಿನ ಮೇಲೆ ನಾಲ್ಕೂ ದಿಶೆಯಲ್ಲಿ ಎತ್ತಿ ಹಿಡಿದು ಲಯಬದ್ಧವಾಗಿ ಮೇಲೆ ಕೆಳಗೆ ಮಾಡುತ್ತಾ ಕರೆತರುತ್ತಾರೆ. ವರನೂ ಸಾಂಪ್ರದಾಯಿಕ ಅರಬಿ ಪೋಷಾಕು ಧರಿಸಿ ಮೇಲುಹೊದಿಕೆಯಾದ ಉಣ್ಣೆಯ ಕಪ್ಪುಬಣ್ಣದ “ಬಿಶ್ತ್” ಅನ್ನು ಧರಿಸಿ ಅಣಿಯಾಗುತ್ತಾನೆ.
          ನಂತರದ ಸಮಾರಂಭವೇ ಮದುವೆಯ ಸಮಾರಂಭ. ಸಾಮಾನ್ಯವಾಗಿ ಮಹೂರ್ತ ಅಥವಾ “ನಿಕಾಹ್” ಸಂಜೆಯ ಆಸ್ರ್ ನಮಾಜಿನ ನಂತರ ನಡೆಯುತ್ತದೆ. ಬೇರೆ ಬೇರೆ ತಂಡಗಳಾಗಿ ಆಗಮಿಸುವ ವಧು ಮತ್ತು ವರನ ಕಡೆಯ ದಿಬ್ಬಣಗಳು ಸಾಮಾನ್ಯವಾಗಿ ಒಂದು ಮದುವೆಯ ಛತ್ರ ಅಥವಾ ಅದಕ್ಕಾಗಿಯೇ ಸಜ್ಜುಗೊಳಿಸಿದ ಮರುಭೂಮಿಯ ಬಯಲಿನಲ್ಲಿ ಅಣಿಯಾದ ಬಿಡಾರಗಳಲ್ಲಿ ಸೇರುತ್ತವೆ. ದಿಬ್ಬಣಾರ್ಥಿಗಳು ಅಥವಾ ಆಹ್ವಾನಿತರನ್ನು “ಮಾಜೀಮ್” ಎನ್ನುತ್ತಾರೆ. ಅವರನ್ನು ಕುವೈತಿ ಸಿಹಿ ಖಾದ್ಯಗಳನ್ನು ನೀಡುವ ಮೂಲಕ ಸ್ವಾಗತಿಸಲಾಗುತ್ತದೆ. ದಿಬ್ಬಣಾರ್ಥಿಗಳು ಪುರುಷ ಮಹಿಳಾ ತಂಡಗಳಾಗಿ ಪ್ರತ್ಯೇಕವಾಗಿ ವಾದ್ಯಗಳಿಂದ ಕೂಡಿದ ಹಾಡು ಮತ್ತು ನೃತ್ಯದ ಮೂಲಕ ಇತರ ದಿಬ್ಬಣಾರ್ಥಿಗಳ ಮನರಂಜನೆಗೆ ಅನುವುಮಾಡಿಕೊಡುವುದು ಇಲ್ಲಿನ ಪದ್ಧತಿ. ನಿಕಾಹ್ ಸಂಪನ್ನವಾಗಬೇಕಾದರೆ ಮದುವೆಯ ಕರಾರು ಪತ್ರದ ಒಪ್ಪಿಗೆಯ ಸಹಿ ಅತ್ಯಗತ್ಯ. ಇಲ್ಲಿ ವಧುವಿನ ತಂದೆತಾಯಿ ಅಥವಾ ಪೋಷಕರು ಮತ್ತು ವರನ ಒಪ್ಪಿಗೆಯ ನಂತರ ವಧೂವರರಿಬ್ಬರೂ ಒಪ್ಪಿಗೆಯನ್ನು ಎಲ್ಲರ ಸಮಕ್ಷಮದಲ್ಲಿ ಸೂಚಿಸಿ ಒಪ್ಪಿ ಸಹಿಹಾಕಬೇಕಾಗಿರುತ್ತದೆ. ಇದಕ್ಕೆ ಇಬ್ಬರು ವಧುವಿನ ಮತ್ತು ವರನ ಕಡೆಯ ಸಂಬಂಧಿಗಳು ಸಾಕ್ಷಿಯಾಗಿರುತ್ತಾರೆ. ಈ ಸಂಪ್ರದಾಯ ಭಾರತದಲ್ಲೂ ಮುಸ್ಲಿಂ ಮದುವೆಗಳಲ್ಲಿ ಕಂಡುಬರುತ್ತದೆ. 

          ಮದುವೆಯ ನಂತರ ಔತಣಕೂಟವೂ ಒಂದು ವಿಶೇಷ ಸಂಭ್ರಮವನ್ನೇ ಸೃಷ್ಟಿಸುತ್ತದೆ. ನಿಕಾಹ್ ನಂತರ ವಧುವಿನ ಕೈಯನ್ನು ವರನಿಗೆ ಕೊಡುವ ಮೂಲಕ ಪಾಣಿಗ್ರಹಣ ಪ್ರಕಾರದ ಶಾಸ್ತ್ರವನ್ನೂ ಪೂರೈಸಲಾಗುತ್ತದೆ. ಆ ನಂತರ ವಧೂ-ವರರು ವಧುವಿನ ಮನೆಗೆ ತೆರಳುತ್ತಾರೆ, ವಧುವಿನ ಮನೆಯಲ್ಲಿ ವಧೂವರರ ಮೊದಲ ಏಕಾಂತಕ್ಕೆ ಅನುವುಮಾಡಿಕೊಡಲಾಗುತ್ತದೆ. ಆಗ ಎರಡೂ ಕಡೆಯ ವಧೂವರರ ಸಂಬಂಧಿಗಳು ಸೇರಿ ನಡೆಸುವ ಪ್ರಕ್ರಿಯೆಯನ್ನು “ಜಲ್ವಾಹ್” ಎನ್ನುತ್ತಾರೆ. ಜಲ್ವಾಹ್ ಪದದ ಅರ್ಥ ಮುಖತೋರಿಸುವುದು ಅಥವಾ ದರ್ಶನ ಎಂದಷ್ಟೇ. ಮೂಲತಃ ಈ ಸಂಪ್ರದಾಯ ಇಲ್ಲಿ ನೆರೆದವರಿಗೆಲ್ಲಾ (ವಿಶೇಷವಾಗಿ ಗಂಡಿನ ಕಡೆಯವರಿಗೆ) ಮೊದಲಬಾರಿಗೆ ವಧುವಿನ ಮುಖ ದರ್ಶನ ಮಾಡಿಸುವ ಪ್ರಕ್ರಿಯೆಯೇ ಆಗಿದೆ. ವಧೂವರರು ನಿಕಾಹ್ ನಂತರ ಒಂದುವಾರಕಾಲ ವಧುವಿನ ಮನೆಯವರ ಆತಿಥ್ಯ ಪಡೆಯುತ್ತಾರೆ. ನಂತರ ವಧುವಿನ ಕಡೆಯಿಂದ ವಧುವನ್ನು ಬೀಳ್ಕೊಡುವ ಶಾಸ್ತ್ರ “ಅಲ್-ತೆಹವಾಲ್” ವನ್ನು ಪೂರ್ಣಗಿಳಿಸಿದ ನಂತರ ಅಂತಿಮವಾಗಿ ವಧು ಗಂಡನ ಮನೆಗೆ ತೆರಳುತ್ತಾಳೆ. ಗಂಡನ ಮನೆಯವರು ಸಾಮಾನ್ಯವಾಗಿ ನವ ವಧೂವರರನ್ನು ಸುತ್ತಾಡಿಬರಲು “ಮಧುಚಂದ್ರ” ಕ್ಕೆ..ಕಳುಹಿಸುವುದು ವಾಡಿಕೆ. ಈ ವಧೂವರರ ಏಕಾಂತ ರಸಿಕಪಯಣದ ರಿವಾಜನ್ನು ಕುವೈತಿನಲ್ಲಿ “ಶಹರ್ ಅಲ್ ಅಸಲ್” ಎನ್ನುತ್ತಾರೆ. ಅದನ್ನೇ ನಾವು ಮಧುಚಂದ್ರ ಅಥವಾ ಹನಿಮೂನ್ ಎನ್ನುವುದು.