Saturday, December 18, 2010

ಇತಿಹಾಸದ ಪುಟದಿಂದ ಮಾನವತೆಗೆ ಒಂದು ಪಾಠ

ಮೊಹರಂ ಬಗ್ಗೆ ಓದುವಾಗ ಒಂದು ಸೈಧ್ದಾಂತಿಕ ವಿಷಯ ತಿಳಿಯಿತು...
(ಇಲ್ಲಿ ಧರ್ಮದ ಬಗ್ಗೆ ಯೋಚಿಸುವುದು ಬೇಡ..).



ಆಗ ಪೈಗಂಬರ್ ಮೊಹಮ್ಮದರ ನಂತರದ ಮುಂದಾಳತ್ವದ ಪ್ರಶ್ನೆ ಬಂತು, ಸ್ವತಃ ಮೊಹಮ್ಮದರ ಪ್ರಕಾರ ಆಗಿನ ಧರ್ಮ ಮತ್ತು ಸರ್ವಮಾನ್ಯರಲ್ಲಿ ಇಮಾಮ್ಅಬೂಬಕ್ರ್ (ಧರ್ಮ ಮುಂದಾಳತ್ವಕ್ಕೆ ಖಲೀಫಾ ಅನ್ನೋ ಪದವಿ ಸಿಕ್ಕಿದ್ದು ಬೇರೆ ವಿಷಯ), ನಂತರ ಇಮಾಮ್ ಉಮರ್, ಆ ನಂತರ ಇಮಾಮ್ ಉತ್ಮಾನ್ ಮತ್ತೆ ನಾಲ್ಕನೆಯವರು ಸ್ವತಃ ಪೈಗಂಬರರ ಅಳಿಯ ಹಜ್ರತ್ ಇಮಾಮ್ ಆಲಿ. ಹಾಗಾಗಿ ಉಮರ್ (ಆ ವೇಳೆಗೆ ಖಲಿಫಾ ಎಂಬ ಪ್ರಭಾವಿ ಒಡೆತನ ಸಿಕ್ಕಿತ್ತು) ನಂತರದ ಖಲೀಫಾ ಪಟ್ಟ ಹಜ್ರತ್ ಆಲಿ ಗೆ ಸಿಕ್ಕಬೇಕಿತ್ತು ಆದ್ರೆ ಅಧಿಕಾರ, ಧನ ಮತ್ತು ಸ್ವಾಭಾವಿಕವಾಗಿ ಧನದ ಹಿಂದೆ ಹೋಗುವ ಜನ ಬೆಂಬಲವಿದ್ದ ಉತ್ಮಾನರ ದಾಯಾದಿ “ಮುಹಾವಿಯಾ” ಖಲಿಫತ್ವ ಕಿತ್ತುಕೊಂಡ.....ಆಗಲೇ ಜಗಳಗಳು ಪ್ರಾರಂಭವಾಗುವ ಲಕ್ಷಣಗಳು ಕಂಡದ್ದು!! ಶಿಯಾ ಮತ್ತು ಸುನ್ನಿ ನಂಬಿಕೆಯ ಶಾಖೆಗಳು ಒಡೆಯಲು ಪ್ರಾರಂಭವಾಗಿದ್ದು ಎನ್ನಬಹುದು. ಹಜ್ರತ್ ಆಲಿಯವರ ಬೆಂಬಲಿಗರು ಅವರ ಬೆಂಬಲಕ್ಕೆ ನಿಂತರು. ಆದರೆ ಎಲ್ಲ ಪ್ರವಾದಿಗಳ ನಂತರ ಆ ಧರ್ಮದ ಮೂಲ ಸಿದ್ಧಾಂತ ಮತ್ತು ವಿಧೇಯತೆ ಕ್ರಮೇಣ ಮಾಯವಾಗಿ ..ಮೋಹ ಮಾಯೆಗಳು ಧರ್ಮದ ತೊಡಕುಗಳಾಗುತ್ತವಂತೆ ಹಾಗೆಯೇ ಅಂದಿನ ಖಲೀಫನ ಧನ, ಜನ ಬಲದ ಮಧ್ಯೆ ಹಜ್ರತ್ ಆಲಿಯರ ಬೆಂಬಲಿಗರು ಮತ್ತು ನಿಜ ಅನುಯಾಯಿಗಳು ಪ್ರಾಣ ಕಳೆದುಕೊಳ್ಳಲಾರಂಭಿಸಿದರು. ಇಂತಹ ಘಳಿಗೆಯೇ ನಿಜ ಮಾನವತೆ ಧರ್ಮ ಸಾರುವ ಪ್ರವಾದಿಗಳ ಸತ್ವ ಪರೀಕ್ಷೆಯ ಸಮಯ. ತನ್ನ ಅನುಯಾಯಿಗಳ ಮತ್ತು ಅಮಾಯಕರ ಮಾರಣಹೋಮ ತಡೆಯಲು ಹಜ್ರತ್ ಆಲಿಯವರು ಮುಹಾವಿಯಾ ಜೊತೆ ಒಪ್ಪಂದಕ್ಕೆ ಬರುತ್ತಾರೆ. ತಾನು ಅವರ ಖಲೀಫತ್ವಕ್ಕೆ ಸವಾಲನ್ನು ಒಡ್ಡದೇ ಇರಬೇಕಾದರೆ ಮುಹಾವಿಯಾ ತನ್ನವರಿಗೆ ಕಿರುಕುಳ ಕೊಡಬಾರದು ಮತ್ತು ರಕ್ತ ಪಾತ ಮಾಡಬಾರದು, ಹಾಗೂ ತನಗೆ ಧರ್ಮರಕ್ಷಣೆಯ ಹೊಣೆಗಾರಿಕೆ ಕೊಡಬೇಕು ಎಂಬ ಶರತ್ತು ವಿಧಿಸುತ್ತಾರೆ. ಮುಹಾವಿಯಾ ಪೈಗಂಬರರ ಮೇಲಿನ ಗೌರವ ಮತ್ತು ಹಜ್ರತ್ ಆಲಿ ಪೈಗಂಬರರ ಅಳಿಯ ಎನ್ನುವ ಕಾರಣದ ಜೊತೆಗೆ ಅವರ ಬೆಳೆಯುತ್ತಿದ್ದ ಬೆಂಬಲದ ಶಕ್ತಿ ಕುಗ್ಗಿಸಲು ಈ ಶರತ್ತಿಗೆ ಒಪ್ಪುತ್ತಾನೆ. ಇದು ಒಂದು ನಿಜ ಮಾನವತೆ ಮೆರೆದ ಪ್ರವಾದಿಯ ಅಳಿಯ ಹಜ್ರತ್ ಆಲಿಯವರ ವಿವೇಚನೆಯ ನಿದರ್ಶನ.



ಆ ಗೌರವಯುತ ಕುಟುಂಬದ ಮೊಮ್ಮಗ ಹಜ್ರತ್ ಆಲಿಯವರ ಮಗ ಹಜ್ರತ್ ಇಮಾಮ್ ಹಸನ್ ಸಮಯದಲ್ಲೂ ಇಂತಹುದೇ ವಿಷಘಳಿಗೆ ಎದುರಾಗುತ್ತದೆ. ’ಮುಹಾವಿಯಾ’ ತೀರಿಕೊಂಡ ಮೇಲೆ ಇಸ್ಲಾಂ ಅನುಯಾಯಿಗಳು ಇಮಾಮ್ ಹುಸೇನರನ್ನು ಖಲೀಫಾ ಮಾಡಲು ಯೋಚಿಸುತ್ತಾರೆ. ಆದರೆ ಆ ವೇಳೆಗಾಗಲೇ ಮದೋನ್ಮತ್ತ, ಸ್ತ್ರೀ ಲೋಲ, ಐಷರಾಮಿ ಮತ್ತು ಮದಿರಾಪ್ರಿಯ ’ಯಜಿದ್’ ಮುಹಾವಿಯಾ ಗದ್ದುಗೆಯನ್ನು ಕಬಳಿಸಿ ಮುಹಾವಿಯಾ ಸತ್ತ ಸುದ್ದಿ ತಿಳಿಯುವುದಕ್ಕೆ ಮುಂಚೆಯೇ ಎಲ್ಲರನ್ನೂ ಧನ-ಜನ ಬಲದಿಂದ ತನ್ನೆಡೆಗೆ ಸೆಳೆದು ಕೊಳ್ಳುತ್ತಾನೆ. ಆದರೆ ಹಿಂದೊಮ್ಮೆ ವಂಚಿತರಾದ ಧರ್ಮ ಸಹಿಷ್ಣು ಮತ್ತು ಹಜ್ರತ್ ಆಲಿಯವರ ಅನುಯಾಯಿಗಳು ಇದನ್ನು ಒಪ್ಪದೇ ಹಜ್ರತ್ ಇಮಾಮ್ ಹಸನ್ ರನ್ನು ಖಲೀಫತ್ವದ ದಾವೇದಾರನೆಂದು ಬಿಂಬಿಸುತ್ತಾರೆ.. ಮೊದಲೇ ಕ್ರೂರಿಯಾದ ಯಜಿದ್ ಎಲ್ಲ ನಂಬಿಕಸ್ಥರ ಮತ್ತು ಆಲಿ-ಹಸನ್ ಪರ ಸಮುದಾಯದ ಮಾರಣ ಹೋಮಕ್ಕೆ ಕೈಹಾಕುತ್ತಾನೆ. ಆಗ ಮತ್ತೊಮ್ಮೆ ಹಜ್ರತ್ ಹಸನ್ ತನ್ನ ತಂದೆಯವರ ಮಾರ್ಗ ಅನುಸರಿಸಿ ತನ್ನವರ ತಂಟೆಗೆ ಬರದೇ ತನ್ನ ಪಾಡಿಗೆ ತನ್ನನ್ನು ಬಿಟ್ಟು ಧರ್ಮದ ಪ್ರಚಾರಕ್ಕೆ ಅಡ್ಡಿಮಾಡದಿದ್ದರೆ ಖಲೀಫತ್ವದ ದಾವೆಯನ್ನು ಹಿಂಪಡೆಯುತ್ತೇನೆ ಎಂದು ರಕ್ತ ಪಾತಕ್ಕೆ ಇತಿಶ್ರೀ ಹಾಡುತ್ತಾರೆ. ಹಜ್ರತ್ ಹಸನ್ ರ ನಂತರ ಅವರ ತಮ್ಮ ಹಜ್ರತ್ ಹುಸೇನರ ಮತ್ತು ಅವರ ಕುಟುಂಬ ಸಹವರ್ತಿಗಳ ಮೇಲೆ ಯಜಿದ್ ನಡೆಸಿದ್ದು ಅತಿ ಕ್ರೂರ ಅಮಾನವೀಯ ನಡವಳಿಕೆ.. ಅದೇ ಕಾರಣಕ್ಕೆ ತೀವ್ರವಾದ ರೂಪದಂತೆ ಶಿಯಾ ಪಂಗಡ ಪ್ರಭಲವಾಗಿದ್ದು,



ಇಲ್ಲಿ ಧರ್ಮ ಸಂಸ್ಥಾಪಕರ ಮತ್ತು ನಿಜ ಮಾನವತೆ ಮೆರವವರ ಆದರ್ಶಗಳು ಇಂದಿನ ಸಮಾಜಕ್ಕೆ ಒಂದು ಪಾಠ. ಅಂದು ನಡೆದದ್ದು ಎದುರು-ಬದುರು ಯುದ್ಧ (ಅತೀವ ಸಂಖ್ಯೆಯ ಯಜಿದ್ ಸೈನ್ಯ ಮಾಡಿದ್ದು ಮಾರಣ ಹೋಮ..) ಆದರೆ ಈಗ ಧರ್ಮದ ಹೆಸರಲ್ಲಿ ನಿರಾಯುಧ, ಅಸಹಾಯಕ, ಅಮಾಯಕ ಮತ್ತು ಮುಗ್ಧರನ್ನು ನಿದ್ದೆಯಲ್ಲಿ ಕೊಲ್ಲುವಂತಹ ಹೇಯ ಕಾರ್ಯ. ಮಾನವತೆ ಮತ್ತು ಮಾನವ ಧರ್ಮದ ಮುಂದೆ ನಾವು ಮಾಡಿಕೊಳ್ಳುವ ಧರ್ಮದ ಕಟ್ಟಳೆಗಳು ಗೌಣ ಅಲ್ಲವೇ...?