Thursday, November 25, 2010

ಚಿತ್ರ ಕೃಪೆ: http://www.funlogg.com/
ಚಂಚಲ ನಯನೆ
(ಚಂದನ್ ಸಾ ಬದನ್ ಚಂಚಲ್ ಚಿತವನ್...ಧಾಟಿ)

ಚಂದನದ ಮನ ಚಂಚಲ ನಯನ
ಮೆಲ್ಲಮೆಲ್ಲನೆ ಮೆರೆವ ಹುಸಿನಗುವು
ಎನ್ನ ದೂಷಿಸಬೇಡಿ ಓ ಜನರೇ
ಮರುಳಾದರೆ ಕಂಡು ಆ ವದನ... II ಚಂದನದ ಮನ II
ಆ ಕಾಮನ ಬಿಲ್ಲು ಈ ಹುಬ್ಬು
ಕೆಣ್ ಎವೆಯ ಅಂಚಿನ ಕಡುಗಪ್ಪು
ಹಣೆಯ ಸಿರಿ ಈ ಸಿಂಧೂರ
ತುಟಿಯಾಗಿವೆ ಸುಡುವ ಕೆಂಡಗಳು
ಸೋಕಿದರೂ ಬರಿ ನಿನನೆರಳು
ಬೆಂಗಾಡಲೂ ಅರಳುವ  ಕುಸುಮಗಳು...II ಚಂದನದ ಮನ II
ತನುವೂ ಸುಂದರ ಮನವೂ ಸುಂದರ
ಸುಂದರತೆಯ ಮೂರುತಿ ಈ ಚೆಲುವೆ
ಬೇರಾರಿಗೋ ಹೇಗೋ ನಾನರಿಯೆ
ನನಗಂತೂ ನಿನ್ನದೇ ಸವಿ ನೆನಪು
ಈಗಾಗಲೇ ಬಹಳ ಕಾದಿರುವೆ
ಇನ್ನೂ ನನ್ನನ್ನು ನೀ ಕಾಡದಿರು...II ಚಂದನದ ಮನII

ಮೂರುದಿನದ ಚೂರು-ಪಾರು
ಹುಟ್ಟು ಸಾವು ಎರಡರ ಮಧ್ಯೆ
ಇವೆಯೆಂದರು ಕೇವಲ ದಿನ ಮೂರು
ಆಗಲೂ ಬಹುದು ಎಂದವರು ಅವು ನೂರು
ಪಡೆದರು ಜೀವನದಿ ಚೂರು-ಪಾರು
ಮೂರೇ ಎಂದವರಿಗೆ ಸಿಕ್ಕಿದ್ದು, ಅನಿಸಿದ್ದು
ಅಲ್ಪ ಸ್ವಲ್ಪ ಚೂರು ಮತ್ತೆ ಸಿಕ್ಕಂತೆ ಪಾರು
ಒಂದೇ ಎಂದವರಿಗೆ ಎಲ್ಲಿಯ ಚೂರು?
ಯಾರದೋ ಪಾಲು ಆಗಿರುವಳು, ಪಾರು

Monday, November 8, 2010

ನಗು ನಗುತಾ ನಲೀ ನಲೀ.....

ನಗು ..ಯಾರಿಗೆ ಬೇಡ..? ಎಲ್ಲರಿಗೂ ಇಷ್ಟವೇ....ಇಲ್ಲ ಎಂದಿರಾ,,,,?? ಓಹ್ ನೀವು ತಮಾಶೆ ಮಾಡ್ತಿದ್ದೀರಾ..ಇಲ್ಲ ಅಲ್ವಾ?? ...ಏನೋ ತುಂಬಾ ಗಂಭೀರ ವಿಷಯ ತಲೆ ತಿನ್ತಾ ಇದೆ...!!!???

ಹೌದು ನಗು ಮುಖದಲ್ಲಿ ಒಂದು ರೀತಿಯ ಕಾಂತಿಯನ್ನು ತರುತ್ತದೆ. ಸ್ನೇಹಿತರನ್ನು ತರುತ್ತದೆ, ಮನೋಲ್ಲಾಸ ತರುತ್ತದೆ. ವ್ಯಕ್ತಿತ್ವ ಆಕರ್ಷಣೆಯಲ್ಲಿ ಹಾಸ್ಯ ಸ್ವಭಾವ ಅಥವಾ ನಗುಮುಖದ ವ್ಯಕ್ತಿತ್ವ ಎಲ್ಲಾ ಗುಣಗಳನ್ನೂ ಹಿಂದೆ ಹಾಕುತ್ತದೆಂದು ಸಮೀಕ್ಷೆಗಳು ತಿಳಿಸುತ್ತವೆ. ನಗು ಬಾಲ್ಯಾವಸ್ಥೆಯ ಬೌದ್ಧಿಕ ಮತ್ತು ತಾರ್ಕಿಕ ಬೆಳವಣಿಗೆಯಲ್ಲಿ ಮಹತ್ತರ ಪಾತ್ರವಹಿಸುತ್ತದೆಂದು ವೈದ್ಯಶಾಸ್ತ್ರ ಹೇಳುತ್ತದೆ. ಮನೆಯಲ್ಲಿ ಹಿರಿಯರು ಗಂಭೀರ ಸ್ವಭಾದವರು ಸ್ವಲ್ಪ ಹೆಚ್ಚು ಗಂಭೀರರಾದಾಗ ಮನೆಯ ಮಗುವೊಂದನ್ನು ಅವರ ಬಳಿ ಬಿಡುವುದು ಬಹು ಚಾಣಾಕ್ಷ ಉಪಾಯ. ವಾತಾವರಣ ತಿಳಿಯಾಗುವುದಲ್ಲದೇ ಆ ವ್ಯಕ್ತಿಯ ಸ್ವಭಾವದಲ್ಲೂ ಬೇಗನೆ ಬದಲಾವಣೆಯಾಗುವುದರಲ್ಲಿ ಸಂದೇಹವಿಲ್ಲ.

ಹಾಗಾದರೆ ಏನಿದು..? ನಗು,,? ಹಾಸ್ಯ?

ಸುಮಾರು ಹತ್ತು ಸಾವಿರಕ್ಕೂ ಹೆಚ್ಚಿನ ಉದಾಹರಣೆಗಳ ಮೂಲಕ ಅಧ್ಯಯನ ಮಾಡಿ ಕೆಲವು ಮಹತ್ತರ ಅಂಶಗಳನ್ನು ಕಂಡುಕೊಳ್ಳಲಾಗಿದೆ. ಈ ಎಲ್ಲ ನಿದರ್ಶನಗಳು ಒಂದು ವಿಷಯವನ್ನು ಹೊರಗೆಡಹಿವೆ. ಮಾನವ ಮಿದುಳು ತರ್ಕಗಳಲ್ಲಿ ವಿನ್ಯಾಸಗಳನ್ನು ಗುರುತಿಸಬಲ್ಲುದು. ಈ ತರ್ಕಗಳು ಒಂದು ಗೊತ್ತಾದ ವಿನ್ಯಾಸಕ್ಕೊಳಪಟ್ಟಿರುತ್ತವೆ. ಬಹುಪಾಲು ಈ ತರ್ಕ ವಿನ್ಯಾಸಗಳು ಪರಿಚಿತವಾಗಿರುತ್ತವೆ. ಇದನ್ನು ಅರ್ಥೈಸಿಕೊಳ್ಳುವ ಶಕ್ತಿ ಅಥವಾ ಬುದ್ಧಿ ಮಿದುಳಿಗೆ ಇರುತ್ತದೆ ಆದರೆ ನಾವು ಊಹಿಸದ ತರ್ಕ ವಿನ್ಯಾಸ ಮಿದುಳಿಗೆ ಪರಿಚಯವಾದಾಗ ಮಿದುಳು ಉಲ್ಲಸಿತಗೊಳ್ಳುತ್ತದೆ. ಇದರ ಪುನರಾವರ್ತನೆ ಈ ಅಲೆಗಳು ಮತ್ತೆ ಮತ್ತೆ ಏಳುವಂತೆ ಮಾಡುತ್ತವೆ...ಇದರ ಬಹು ಸರಳ ಉದಾಹರಣೆ ಮಗುವಿಗೆ ..ಗಿಲಿ ಗಿಲಿ ಗಿಲಿ ಮಾಡಿದಾಗ ಮಗು ಕೇಕೆಹಾಕಿ ನಗುತ್ತದೆ. ಆದರೆ ತರ್ಕವಿನ್ಯಾಸಗಳು ಮಿದುಳಿಗೆ ಪರಿಚಿತವಾಗುವ ಕ್ರಿಯೆ ಬಹುಪಾಲು ಅನಿಯಂತ್ರಿತ ಕ್ರಿಯೆ. ಮಿದುಳಿನ ಪ್ರಿ-ಫ್ರಾಂಟಲ್ ಕಾರ್ಟೆಕ್ಸ್ ಭಾಗದಿಂದ ಸ್ರವಿತ ಎಂಡಾರ್ಫಿನ್ ಎಂಬ ಜೀವರಾಸಾಯನಿಕ ಸಂಯುಕ್ತ ಮನೋಲ್ಲಾಸಕ್ಕೆ ಕಾರಣವಾಗಿದೆ ಎಂದು ತಿಳಿದು ಬಂದಿದೆ. ಇದು ಪ್ರಾಣಿ ವಿಕಸನ ಸರಣಿಯ ಬಹು ಮುಖ್ಯ ಬೆಳವಣಿಗೆ. ಇದೇ ಕಾರಣಕ್ಕೆ ಕೇವಲ ಮಾನವ ಜಾತಿ (ಮಂಗ, ಚಿಂಪಾಂಜಿ ಇತ್ಯಾದಿ ಸಹಾ) ನಗುವನ್ನು ಗುರುತಿಸಬಲ್ಲುದು. ಇದೇ ಕಾರಣಕ್ಕೆ ಮಾನವನ ಬುದ್ಧಿ ಶಕ್ತಿ ಎಲ್ಲ ಪ್ರಾಣಿಗಳಿಗಿಂತ ಬಹುಪಾಲು ಹೆಚ್ಚು. ಮಗುವಿನಲ್ಲಿ ಮಾತಿಗೂ ಮುಂಚೆ ನಗು-ತರುವ ವಿಷಯವನ್ನು ಗುರುತಿಸುವ ಶಕ್ತಿ ಬರುತ್ತದೆ. ಅನಿರೀಕ್ಷಿತ ವಿನ್ಯಾಸವನ್ನು ಮಗು ಗಮನಿಸಿದರೆ ಉಲ್ಲಸಿತಗೊಳ್ಳುತ್ತೆ. ಬಹು ಸ್ವಾಭಾವಿಕ ಪ್ರತಿಕ್ರಿಯೆ ಎಂದರೆ ಮಗು ಚಪ್ಪಾಳೆ ಹೊಡೆಯುವುದು...ಅಥವಾ ಮುಖ ಅರಳಿಸುವುದು....ನಿರೀಕ್ಷಿತ ವಿನ್ಯಾಸಕ್ಕೆ ಮಗು ನಗುವುದಿಲ್ಲ ಎನ್ನುವುದನ್ನು ನೀವೂ ಗಮನಿಸಿರಬಹುದು.

ನಗು- ಈ ಕ್ಲಿಷ್ಟ ಸಂಬಂಧಗಳ ಕಾರಣ ವ್ಯಕ್ತಿಯ ಸ್ವಭಾವವನ್ನು ಅವಲಂಬಿಸಿರುತ್ತದೆ. ಒಬ್ಬರಿಗೆ ನಗು ತರಿಸುವುದು ಮತ್ತೊಬ್ಬರಿಗೆ ಗಂಭೀರವಾಗಬಹುದು...ಅದರೆ ಇದು ವಯಸ್ಸು ಮತ್ತು ಅನುಭವ ಹೆಚ್ಚಿದಂತೆ ಬದಲಾಗುತ್ತದೆ. ಹೆಂಗಸರ ನಗು ಸ್ವಾಭಾವಿಕವಾಗಿ ಹಾಡು-ಹಾಡಿದಂತಿದ್ದರೆ ಗಂಡಸರ ನಗು ವಿವಿಧ ಶಬ್ದದೊಂದಿಗೆ ಹೊರಹೊಮ್ಮಬಹುದು. ಹಾಸ್ಯಕ್ಕೆ ಹೆಣ್ಣು ಹೆಚ್ಚು ಪ್ರತಿಕ್ರಿಯಿಸುತ್ತಾಳಂತೆ ಗಂಡಿಗಿಂತ!!. ತಾನು ಮಾತನಾಡುವಾಗ ತನ್ನ ಮುಂದಿನವರು ನಗುವುದಕ್ಕಿಂತ ಹೆಚ್ಚು ಗಂಡು ತಾನೇ ನಗುತ್ತಾನಂತೆ...ಹಹಹ. ಹೆಣ್ಣು ಹೆಚ್ಚು ಪ್ರತಿಕ್ರಿಯಿಸುವ ನಗುವ ಕ್ರಿಯೆಗಳು ಎಂದರೆ ಚೇಷ್ಟೆ ಮತ್ತು ಪ್ರಾಣಿಗಳ ಅಥವಾ ಮಕ್ಕಳ ಹರಕತ್ತುಗಳು. ನಗು ಸರ್ವ ರೋಗ ನಿವಾರಕ ಎಂಬುದು ಅತಿಶಯೋಕ್ತಿ ಅಲ್ಲ. ಹದಿಹರೆಯದ ವರೆಗೆ ಸರಾಸರಿ ದಿನಕ್ಕೆ ೩೦೦ ಬಾರಿ ನಕ್ಕರೆ ವಯಸ್ಕರ ನಗುವ ಸಾಧ್ಯತೆ ಕೇವಲ ಇದರ ಹತ್ತರಷ್ಟು...!!! ನಮ್ಮನ್ನು ನಾವು ಯಾವ ಅತಿ ಪ್ರಯೋಜನಕಾರಿ ಕ್ರಿಯೆಯಿಂದ ದೂರವಿಡುತ್ತಿದ್ದೇವೆ ಗೊತ್ತೆ....??

ನಗು ಮತ್ತು ಹಾಸ್ಯ ಎರಡು ವಿಭಿನ್ನ ಅಂಶಗಳು. ನಗು ಕೇವಲ ಭೌತಿಕ ಕ್ರಿಯೆ..ಶ್ವಾಸಕೋಶದಿಂದ ಜೋರಾಗಿ ಗಾಳಿಯನ್ನು ಹೊರದೂಡುವುದು...ಹ..ಹ..ಹಹಹ್ಹಹ್ಹಹ್ಹ ..ಹಾಹಹ್ಹಾಹಹಾ...ಹೀಗೆ...ಇದನ್ನು ನಾವು ವ್ಯಾಯಾಮದ ಮೂಲಕವು ಮಾಡಬಹುದು. ಆದರೆ ನಗುವೆಂಬ ಸ್ವಾಭಾವಿಕ ಕ್ರಿಯೆಯ ಮೂಲಕ ಮಾಡುವ ಈ ಬೌತಿಕ ಕ್ರಿಯೆ ಹಲವಾರು ಪ್ರಯೋಜನಕಾರಿ ಲಾಭಗಳನ್ನು ನಮ್ಮ ದೇಹಕ್ಕೆ ಮತ್ತು ಮನಸ್ಸಿಗೆ ನೀಡುತ್ತದೆ. ನಗು ಒಂದು ಸಾಂಕ್ರಾಮಿಕ ಅಂದರೆ ಒಬ್ಬರಿಂದ ಒಬ್ಬರಿಗೆ ಹರಡುವ ಉಪಯುಕ್ತ ಗುಣ. ಒಂದು ಹಾಸ್ಯ ಚಟಾಕಿ, ಲೇಖನ ಅಥವಾ ಸನ್ನಿವೇಶದ ವೀಡಿಯೋ ನಾವು ಒಬ್ಬರೇ ಓದುವಾಗ ಅಥವಾ ವೀಕ್ಷಿಸುವಾಗ ಹೆಚ್ಚೆಂದರೆ ಸುಮ್ಮನೆ ಮುಗುಳ್ನಗಬಹುದು ಅಥವಾ ಸ್ವಲ್ಪ ನಗಬಹುದು..ಅದೇ ನಮ್ಮ ಬಂಧು ಬಾಂಧವರ ಜೊತೆಗಿದ್ದಾಗ ಹೆಚ್ಚು ಅನುಭವಿಸಿ ನಗುತ್ತೇವೆ ಕಾರಣ ಇದು ನಿಯಂತ್ರಿತ ಸಾಂಕ್ರಾಮಿಕ ಕ್ರಿಯೆ. ಇನ್ನೊಂದು ಬಹು ಆಶ್ಚರ್ಯಕರ ಅಂಶ ನಾವು ಗಮನಿಸಿರುತ್ತೇವೆ...ಏನು ಗೊತ್ತೆ..?? ನಾವು ನಮ್ಮ ಸ್ನೇಹಿತ/ಸ್ನೇಹಿತೆಯರ ಜೊತೆ ಇದ್ದಾಗ ಅನುಭವಿಸಿ ನಗುವಷ್ಟು ಕೇಕೆ ಹಾಕಿ ನಗುವಷ್ಟು ಬೇರೆ ಸಾಂಗತ್ಯದಲ್ಲಿ ಇರಲ್ಲಿಕ್ಕಿಲ್ಲ ಅಲ್ಲವೇ...??

ನಿರೀಕ್ಷಿತ ಹಾಸ್ಯ ನಗು ತರಲು ವಿಫಲವಾಗುತ್ತೆ ಎನ್ನುವುದಕ್ಕೆ ಪದೇ ಪದೇ ಕೇಳಿದ ಜೋಕ್ ಗಳಿಗೆ ನಮ್ಮ ಪ್ರತಿಕ್ರಿಯೆಯನ್ನು ಉದಹರಿಸಬಹುದು. ಕೆಲವರು ಕಚಗುಳಿ ಇಡುವುದರಿಂದ ಹಾಸ್ಯ ಅಥವಾ ನಗು ಬರುತ್ತೆ ಎನ್ನಬಹುದು...ಆದ್ರೆ ಇದೂ ಪೂರ್ತಿ ನಿಜವಲ್ಲ..ಏಕೆ..?? ನಮಗೆ ನಾವೇ ಕಚಗುಳಿಯಿಟ್ಟುಕೊಂಡರೆ ನಗು ಬರುವುದಿಲ್ಲ,,,,!!! ಬೇರೆಯವರು ಇಟ್ಟಾಗ ಅದು ಅನಿರೀಕ್ಷಿತವಾಗುತ್ತೆ ಹಾಗಾಗಿ ನಗು ಬರುತ್ತೆ. ನಗು ತರುವ ಕಾರಣ ಯಾವ ಪ್ರಕಾರದ್ದೇ ಆದರೂ ನಗುತರುವ ಅಥವಾ ಉಂಟುಮಾಡುವ ಪರಿಣಾಮ ಒಂದೇ ಆಗಿರುತ್ತೆ. ನಾವು ನಕ್ಕಾಗ ಶರೀರಕ್ರಿಯಾ ಸ್ರಾವಕಗಳು ರಕ್ತದೊಳಕ್ಕೆ ಹರಿದುಬರುತ್ತವೆ. ರಕ್ತಪರಿಚಲನೆ ಹೆಚ್ಚಾಗುತ್ತೆ ..ಅದೇ ಕಾರಣಕ್ಕೆ ಕೇಕೆ ಹಾಕಿ ನಕ್ಕಾಗ ಮುಖ ಕೆಂಪಾಗುವುದು...ಮೂಗು, ಕಿವಿ ಕೆಂಪು ಮತ್ತು ಬಿಸಿಯಾಗುತ್ತವೆ. ಶ್ವಾಸ ದೀರ್ಘವಾಗುತ್ತದೆ, ಶ್ವಾಸಕೋಶದ ಆಳದಿಂದ ಗಾಳಿ ಹೊರಬರುತ್ತದೆ ಅಲ್ಲಿನ ಜೀವಕೋಶಗಳಿಗೆ ಪರಿಶುದ್ಧ ಆಮ್ಲಜನಕ ಸಿಗುತ್ತದೆ, ಮಿದುಳಿಗೆ ರಕ್ತ ಮತ್ತು ಆಮ್ಲಜನಕದ ಪೂರೈಕೆಯಾಗುತ್ತದೆ. ಮನೋಲ್ಲಾಸ ಮತ್ತು ಆಹ್ಲಾದಕರ ಸ್ಥಿತಿಗೆ ಕಾರಣವಾದ ಶರೀರಸ್ರಾವಕ “ಎಂಡಾರ್ಫಿನ್” ಪ್ರಮಾಣ ಹೆಚ್ಚಾಗುತ್ತದೆ, ಮ್ಲಾನತೆ (ಸ್ಯಾಡ್ ನೆಸ್) ನಿವಾರಕ ಶರೀರಕಿಯಾಸ್ರಾವಕ “ಸೆರಟೋನಿನ” ಹೆಚ್ಚು ಕ್ರಿಯಾಶೀಲವಾಗುತ್ತದೆ. ಈ ಮೂಲಕ ನೂರಾರು ಶರೀರ ಕ್ರಿಯೆಗಳು ನವಚೈತನ್ಯಕ್ಕೆ ಒಳಗಾಗುತ್ತವೆ. ಇದು ದೇಹದ ರೋಗನಿರೋಧಕ ಶಕ್ತಿಯನ್ನೂ ವೃದ್ಧಿಸುತ್ತದೆ.

ಸಹಿದಯಿ ಸದಭಿರುಚಿಯ ನಡವಳಿಕೆ ಹೇಗಿರಬೇಕು ಎನ್ನುವುದಕ್ಕೆ ಕೆಲವು ಸೂತ್ರಗಳನ್ನು ಗುರುತಿಸಲಾಗಿದೆ.

 ಇನ್ನೊಬ್ಬರನ್ನು ಅಭಿನಂದಿಸುವುದು ಮೊದಲಾಗಬೇಕು...ನಂತರ ಸಕ್ಕರೆಯಲ್ಲಿ ಬೆರೆತ ಔಷಧಿಯಂತೆ ಸಲಹೆಯನ್ನು ನೀಡಬಹುದು (ಹಾಗೊಂದು ವೇಳೆ ಆ ವ್ಯಕ್ತಿಯ ಒಳಿತಿಗೆ ಬೇಕೆನಿಸಿದರೆ). ಯಾರನ್ನೇ ಆಗಲಿ ಮೊದಲಿಗೇ ಟೀಕೆ ಮಾಡುವುದು ಸಹಿದಯಿಯ ಲಕ್ಷಣವಲ್ಲ.

 ನಮ್ಮ ನಿಲುವಿನಲ್ಲಿ ಮೃದು ಧೋರಣೆ ತೋರುವುದು, ಅಥವಾ ಕಠಿಣತೆಯ ಅವಶ್ಯಕತೆಯಿದ್ದಾಗ ಅದಕ್ಕೆ ಮೃದು ಪೀಠಿಕೆ ಹಾಕುವುದು...ಇದು ಮುಂದಿನ ಕ್ರಮ ಕಠಿಣವಾದರೂ ಪ್ರತಿರೋಧ ಹೆಚ್ಚಿರುವುದಿಲ್ಲ

 ಆಭಾರ ವ್ಯಕ್ತಪಡಿಸುವಲ್ಲಿ ಜಿಪುಣತೆ ತೋರಬಾರದು ಏಕೆಂದರೆ ಎದ್ದು ತೋರುವ ಇಂತಹ ಘಟನೆಗಳು ಪರಸ್ಪರ ಸಂಬಂಧಗಳನ್ನು ಹೆಚ್ಚು ಸಧೃಡಗೊಳಿಸುತ್ತವೆ.

 ಉದಾರತೆ ಸಾಧ್ಯವಾದಲ್ಲಿ ವ್ಯಕ್ತಪಡಿಸುವುದು ಒಂದು ಐಛ್ಚಿಕ ಗುಣ

 ಕ್ಷಮೆ ಒಂದು ಗುಣವಾಗಲಿ ಏಕೆಂದರೆ ಕ್ಷಮಿಸುವ ಮೂಲಕ ನಿಮ್ಮ ವೈರತ್ವದ ಅಂತ್ಯವಾಗುತ್ತದೆ ಮನ ಶಾಂತವಿರುತ್ತದೆ.

 ಈ ಎಲ್ಲಾ ಗುಣಗಳನ್ನು ಬೆಳೆಸಿಕೊಳ್ಲಬೇಕೆಂದರೆ ಮನೋಲ್ಲಾಸಿತಗೊಂಡಿರಬೇಕು...ಅಂದರೆ ’ಎಂಡಾರ್ಫಿನ್’ ರಕ್ತದಲ್ಲಿ ತುಂಬಿರಬೇಕು,,,ಅಂದರೆ ಮನಸು ನಗುತಿರಬೇಕು....ಬಹುಸುಲಭದ ದೇಹಾರೋಗ್ಯದ ಈ ಮಾರ್ಗ ಅನುಸರಿಸೋಣ....ನಗೋಣ ನಗುತಾ ಬಾಳೋಣ....
ಇಲ್ಲಿ ಡಿ.ವಿ.ಜಿ.ಯವರ ಒಂದು ಕವಿತೆಯ ಸಾಲುಗಳು (ಮನಮುಕ್ತಾ ರ ಸಹಾಯದಿಂದ) ನಿಮ್ಮೆಲ್ಲರಿಗೆ....ನಗುವಿನ ಮಹತ್ವ ಸಾರೋದಕ್ಕೆ..
ನಗುವನ್ನು ಕುರಿತು ಡಿ. ವಿ. ಜಿ.ಯವರ ಕವನ.
ನಗುವು ಸಹಜದ ಧರ್ಮ, ನಗಿಸುವುದು ಪರಧರ್ಮ,
ನಗುವ ಕೇಳುತ ನಗುವುದತಿಶಯದ ಧರ್ಮ,
ನಗುವ ನಗಿಸುವ ನಗಿಸಿ ನಗುತ ಬಾಳುವ ವರವ
ಮಿಗೆ ನೀನು ಬೇಡಿಕೊಳ್ಳೊ- ಮ೦ಕುತಿಮ್ಮ

http://www.youtube.com/watch?v=Fv7CVQ5077Q