Saturday, October 9, 2010

ತೋರು ನಾಡು ದೇಶ ಏನೆಂದು

ಚಿತ್ರ ಕೃಪೆ: http://www.tailoredtanning.co.uk/vitamind.htm


ನೇಸರನೇರುವತ್ತ ಕತ್ತಲು ಸರಿಯುತಿದೆ
ಎಲ್ಲೋ ಯಾರೋ ಮಲಗಿ ಏಳುವಂತಿದೆ
ಘೋರವರಿತ ಬೆಚ್ಚಿಕನಸ ಕರಗುವಂತಿದೆ
ಎತ್ತಲೆತ್ತಲೋ ಇತ್ತು ಕತ್ತಲುರುಳುವಂತಿದೆ

ಸೂರ್ಯಹೊರಳಲು ಸಾಕು ನರಿ ಊಳಿಡಲು
ತೋಳಗಳ ಹಿಂಡು ಕುರಿದೊಡ್ಡಿಗೆ ನುಸುಳಲು
ನಾಯಿಗಳು ಮಲಗಿವೆ ತಿಂದು ಕವಿದು ಅಮಲು
ತಿಂದ ಧಣಿಗಳು ಮತ್ತೆ ತಿನ್ನಲೆಂದೇ ಬಿಟ್ಟು ಬಿಳಲು

ಕೊಟ್ಟು ಮತ ಆಸೆ ಆಮಿಶವೆಲ್ಲಕೆ ಬಲಿಯಾಗಿ ಅಂದು
ನಿಮ್ಮ ನಿಂತ ನೆಲಕುಸಿಯೆ ಸರಿಯಿಲ್ಲವೇ ಇಂದು?
ವಿದ್ಯೆವಿವೇಕವಿದ್ದೂ ಅವಿವೇಕಿಯ ಗೆಲಲು ಬಿಟ್ಟದ್ದು
ರೈತನ ಕೊಲುವರು ಗಣಿ ಅರಣ್ಯ ದೋಚುವರೆನ್ನುವುದು
ಹೊಣೆಗೇಡಿತನಕ್ಕೆಡೆಯಿಲ್ಲ ಅಳುವುದು ಸಲ್ಲ, ಬಿದ್ದರೆ ಗುದ್ದು

ಏನಿಲ್ಲ ನಮ್ಮಲ್ಲಿ, ಬುದ್ಧಿ, ಶಕ್ತಿ, ನಿಸರ್ಗ ಸಂಪತ್ತು?
ಎಂತಹ ವಿಪತ್ತಿಗೂ ಇದೆ ಎದೆಯೊಡ್ಡುವ ತಾಕತ್ತು
ಎಲ್ಲ ಶಕ್ತಿ ಒಟ್ಟುಗೂಡಿಸುವ ಯೋಜನೆಯೊಂದು ಸಾಕು
ಕತ್ತಲಜೊತೆ ಗುದ್ದಾಟ, ಸಾಕು ನಿರಂತರ ಕಸರತ್ತು
ತಡಬೇಡ ತಿಳಿಯಲಿ ನಾಡು ದೇಶ ಏನೆಂದು ಜಗತ್ತು

Sunday, October 3, 2010

ಆಕಾಶ ಗಂಗೆಯಲ್ಲಿ ಮತ್ತೊಂದು ಭೂಮಿ!!

ಚಿತ್ರ ಕೃಪೆ:ಅಂತರ್ಜಾಲ

“ಗ್ಲೀಜಿ-581 G” ಎಂಬ ಭೂಮಿಯಂತಹ ಗ್ರಹ ಸೌರವ್ಯೂಹದಿಂದ ಸುಮಾರು 20 ಪ್ರಕಾಶವರ್ಷ (ಲೈಟಿಯರ್ಸ್) ದೂರದಲ್ಲಿ ಇದೆಯೆಂದು ದಿನಾಂಕ 29 ಸೆಪ್ಟಂಬರ್ ನ ವಾಶಿಂಗ್ಟನ್ ಪೋಸ್ಟ್ ವರದಿ ಮಾಡಿದೆ. ನಾಶನಲ್ ಸೈನ್ಸ್ ಫೌಂಡೇಶನ್ ನ ಎಡ್ವರ್ಡ್ ಸೀಡೆಲ್ ಪ್ರಕಾರ ಈ ಗ್ರಹ ಜೀವಿಗಳನ್ನು ಹೊಂದಿದೆ ಎನ್ನುವುದು ತಿಳಿದು ಬಂದರೆ ಮಾನವ ಕಂಡು ಹಿಡಿದ ವೈಜ್ಞಾನಿಕ ವಿಸ್ಮಯಗಳಲ್ಲಿ ಇದು ಪ್ರಮುಖವಾಗುತ್ತದೆ. ಈ ಗ್ರಹ ಭೂಮಿಗಿಂತ ಮೂರು ಅಥವಾ ನಾಲ್ಕು ಪಟ್ಟು ಹೆಚ್ಚು ತೂಕವಿದ್ದು ತನ್ನ ಕಕ್ಷೆಯ ಮೇಲೆ ತಿರುಗುವುದು ಬಹುಶಃ ಅನುಮಾನವಾಗಿದೆ ಹಾಗಾಗಿ ಈ ಗ್ರಹದ ಒಂದು ಭಾಗ ಯಾವಾಗಲೂ ಸೂರ್ಯ (ಅಲ್ಲಿನ ಸೂರ್ಯ..ನಮ್ಮ ಸನ್ ಅಲ್ಲ..ಹಹಹ!!!) ನ ಕಡೆ ಇದ್ದು ಬೆಳಕಿರುತ್ತೆ ಮತ್ತೊಂದು ಪಾರ್ಶ್ವ ಕತ್ತಲಲ್ಲಿ...!! ಇದರಿಂದ ಸೂರ್ಯನೆಡೆಯ ಭಾಗದ ಶಾಖ ಸುಮಾರು 160 ಡಿಗ್ರಿ ಸೆಲ್ಸಿಯಸ್ ಇದ್ದು ಕತ್ತಲ ಭಾಗದಲ್ಲಿ -12 ರಿಂದ 21ಡಿ.ಸೆ. ಇರಬಹುದೆಂದು ಅಂದಾಜಿಸಲಾಗಿದೆ. ಗುರುತ್ವಾಕರ್ಷಣ ಶಕ್ತಿಯಿರುವ ಗ್ರಹವಾಗಿದ್ದು ಇಲ್ಲಿ ಘನಭಾಗವಿದ್ದು ಭೂಮಿಯಂತಿರಬಹುದು ಮತ್ತು ನೀರೂ ಇರಬಹುದು ಎಂದು ಅಂದಾಜಿಸಲಾಗಿದೆ. ಇನ್ನೊಂದು ಅಂಶ ಗೊತ್ತೆ...ಈ ಭೂಮಿ ತನ್ನ ಸೂರ್ಯನಿಂದ ಬಹು ಹತ್ತಿರವಿದ್ದು ಅದರ ಸುತ್ತ ಪ್ರದಕ್ಷಿಣೆಗೆ ಕೇವಲ 37 ದಿನ ಬೇಕಾಗುತ್ತೆ..!!! ಅಂದರೆ ಆ ಭೂಮಿಯ ಒಂದು ವರ್ಷ ನಮ್ಮ 37 ದಿನಕ್ಕೆ ಸಮ....!!!!



ಈ ಗಾಗಲೇ ನಮ್ಮ ರಾಜ್ಯದ ಹಲವಾರು ಸಹೋದರರು ಅಪ್ಪ-ಮಕ್ಕಳು ತಮ್ಮ ಅಸ್ಟ್ರೋನಾಟ್ ಸೂಟುಗಳನ್ನ ರೆಡಿಮಾಡಿಸ್ಕೋತಾ ಇದ್ದಾರಂತೆ...ಯಾವುದೇ ಭೂ ಕಾಯಿದೆ ಇಲ್ಲ...ಗಣಿ ಕಾಯಿದೆ ಇಲ್ಲ ಎಲ್ಲಾ ಫ್ರೆಶ್ ಫ್ರೆಶ್...ಯಾರಿಗುಂಟು..ಯಾರಿಗಿಲ್ಲ.....ಜೈ-ಗ್ಲೀಜಿ,,,,,

Friday, October 1, 2010

ನನ್ನದೊಂದು ವಿನಂತಿ


ಜಗದ ಜನಕೆ ತೋರಿತೊಂದು ಭಾರತ

ಇತಿಹಾಸವೀಗ ಕನಸಾಗಿತ್ತು ಅವಿರತ

ನಿಸರ್ಗ-ಸಗ್ಗ ಜನಮನವೆನಿಸಿ ಬಹುಹಿತ

ವಿಶ್ವ ಸಕಲಕೆ ಮಾದರಿ ಅಂದು ಭಾರತ



ದಂಡು ಹೊರಟವಂದು ಕಂಡುಕೊಳ್ಳಲು ಮಾರ್ಗ

ಹಿಂಡು ಹಿಂಡಾಯ್ತು ಬಂಡುಕೋರರಿಗೂ ಸ್ವರ್ಗ

ಸಾಗರದಾಟಿ ಬಂದು ಮಾರ್ಗ ಹುಡುಕಲು ಹುಮ್ಮಸ್ಸು

ಅಲೆಯಮೇಲಲೆದು ದಾರಿತಪ್ಪಿದನಂದು ಕೊಲಂಬಸ್ಸು



ಸಿಂಧೂ ಕಣಿವೆಯಲ್ಲಿ ಮೆರೆದಿತ್ತು ನಾಗರೀಕತೆ

ಗಂಗಾತೀರ, ಗೋದಾವರಿ ಕೃಷ್ಣೆ ಕಾವೇರಿ ಗೀತೆ

ಎಲ್ಲೆಲ್ಲೂ ನಾಡರಸರು ತುಂಬಿತ್ತೆಲ್ಲೆಡೆ ಮಂದಹಾಸ

ಜನಮನ ಜೀವನದಲ್ಲಿತ್ತು ಕಂಡರಿಯದ ಸಂತಸ



ಹಿಮಾಲ ಮೆಟ್ಟಿಬಂದ ದಾಳಿಕೋರರು ಹಲವರು

ಬಂದು ನೆಲಸಿ ನಾಡಲೊಂದಾದ ಕೆಲ ಅರಸರು

ಬಂದನಾಗ ದಾರಿತೋರಿ ದಕ್ಕನಿಗೆ ವಾಸ್ಕೋಡಗಾಮ

ವೈಮನಸ್ಯ ಬೀಜ ಬಿತ್ತಿ ನಡೆಸಲು ಮಾರಣಹೋಮ


ನಮ್ಮ-ನಮ್ಮಲ್ಲೇ ಕಿತ್ತಾಟ ತಕ್ಕಡಿ ಹಿಡಿದವಗೆ ಜುಟ್ಟು

ಎತ್ತಿ ಕಟ್ಟಿದವ, ಆಮಿಶಗೊಂಡು ಕೊಟ್ಟೆವವಗೆ ಜುಟ್ಟು

ಐನೂರು ವರ್ಷ ಸತತ ಕೊಳ್ಳೆ, ಬರಿದಾಯ್ತು ತುಂಬು ಕಣಜ

ಸ್ವಾತಂತ್ರ್ಯಕೊಟ್ಟರು ಕಂಡು ಎಲ್ಲೆಡೆ ತಹತಹಿಸುವ ಮನುಜ


ಈಗ ಹಿಡಿದಿಹರು ನಮ್ಮವರೇ ನಮ್ಮ ಜುಟ್ಟು

ನಾಡ ಸಂಪದ ಮಾಡಿ ಸ್ವಂತ ಉಳಿಸಿ ಹೊಟ್ಟು

ಪರಕೀಯರಿಗಿಂತ ಕೀಳು ತಂದಿಡುವರು ನಮ್ಮಲ್ಲೇ

ಮತ-ಜಾತಿ ಗಲಭೆ ಅವರ ಬೇಳೆ ಬೇಯುವುದೂ ಇಲ್ಲೇ



ನ್ಯಾಯಾಲಯ ತೂಗಿಹುದು ಎಲ್ಲರ ಬೇಳೆಯ ಈ ಬಗೆ

ಕೊಟ್ಟು ಬೇಳೆ ಒಬ್ಬಗೆ ಬೇಯಿಸಲು ಇಂಧನ ಮತ್ತೊಬ್ಬಗೆ

ಯುವಜನ-ಜನ ಮೆರೆದಿಹರು ಅಪೂರ್ವ ವಿವೇಚನೆ

ಸೊಪ್ಪು ಹಾಕದೆ ಮನಮುರಿವರ ಮತ್ತೊಂದು ಅಲೋಚನೆ



ಆಶಯ ನನ್ನದು, ಜಗದಲಿ ಮೆರೆವ ಶಕ್ತಿಯ ದೇಶ

ವಿವೇಚನೆ ಮತ್ತೂ ಪ್ರಖರಗೊಳ್ಳಲಿ ಬೆಳಗುಪ್ರಕಾಶ

ಆಗಲೊಂದೇ ಧ್ಯೇಯ ದೇಶದ ಬಹುಮುಖ ಪ್ರಗತಿ

ನಡೆಯಲೊಂದೇ ನ್ಯಾಯ, ಎಲ್ಲರ ಸುಖದ ಭಾರತಿ

Thursday, September 23, 2010

ಅಬ್ಬಬ್ಬಾ ಖಾರ.!!!...ಕಣ್ಣು ಮೂಗಲ್ಲಿ ನೀರು ಸುರಿಸೊಷ್ಟು...!!!!


ಚಿತ್ರ ಕೃಪೆ: 4.bp.blogspot.com

.








.ಸ್.ಸ್....ಅಸ್ಸೋ....ಅಬ್ಬಬ್ಬಾ...ಖಾರ..ಖಾರ.....!!!

ಯಾವುದಾದ್ರೂ ತಿಂಡಿ ಖಾರವಾಗಿದ್ರೆ ಅದು ಸಹಿಸೋಕೂ ಆಗದಷ್ಟು ಅಂದ್ರೆ.....ಮೇಲಿನ ಉದ್ಗಾರ ನಿಮಗೆ ಹೊಸದೇನಲ್ಲ...ನೀವೂ ಅನುಭವಿಸಿರ್ತೀರಾ, ಇಲ್ಲ ಅಪ್ಪಿ ತಪ್ಪಿ ಉಪ್ಪಿಟಿನಲ್ಲೋ ಮತ್ಯಾವುದೋ ತಿಂಡಿಯಲ್ಲೋ ಹಸಿರು ಬಟಾಣಿ ಅಥವಾ ಹಸಿರು ಹುರುಳಿಕಾಯಿ ಅಂತ ಅಂದ್ಕೊಂಡು ಹಚ್ಚಿದ ಮೆಣಸಿನಕಾಯಿಯನ ತಿಂದು ಬಾಯ್ಬಾಬಿ ಬಿಟ್ಟು ನೀರು ಕುಡಿದಿರ್ತೀರ...ಕಣ್ಣೊರೆಸಿರ್ತೀರ...ಮೂಗಲ್ಲಿನ ನೀರು ಬೀಳ್ಸಿರ್ತೀರ...ಅಲ್ವಾ...?!!

ಹೌದು.., ಖಾರ ಅಂದ್ರೆ ತಕ್ಷಣ ಕಣ್ಣಿನ ಮುಂದೆ ನಿಲ್ಲೋದು ಮೆಣಸಿನಕಾಯಿಯ ಚಿತ್ರ.

ಖಾರ...?? ಏನಿದು...?? ಇಂಗ್ಲೀಷರಿಗೆ ಇದನ್ನ ವರ್ಣಿಸೋಕೆ ಆಗದೆ ’ಹಾಟ್’ ಅಂತಾರೆ..!!

ಅಯ್ಯೋ..ಮೂದೇವಿ ಬಿಸಿ ಎಂತದ್ದು..??!! ಖಾರ ಅನ್ನೋಕಾಗಲ್ವಾ ಅಂತ ಊರಿಗೆ ಬಂದಿದ್ದ ನನ್ನ ವಿಲಾಯಿತಿ ಸ್ನೇಹಿತ ಚೋಟು ಮೆಣಸಿನ ಕಾಯಿ ಚೂರನ್ನು ತಪ್ಪಿ ತಿಂದು ಕೆಂಪು ಕೆಂಪು..ಆಗಿ ಬಾಯಿ..ಬಾಯಿ...ಆಂ...ಎನ್ನುತ್ತಾ ಹಾಟ್ ಹಾಟ್ ಎಂದಾಗ ಅಜ್ಜಿ ಎಂತ ಹೇಳುತ್ತೆ ಅದು ? ಎಂದಿದ್ದಕ್ಕೆ ಬಿಸಿ..ಬಿಸಿ ಅಂತ ಯಥಾವತ್ ತರ್ಜುಮೆ ಮಾಡಿದ್ದೆ ...ಆಗ ಹೇಳಿದ್ದು ಅಜ್ಜಿ...

ಹಾಂ ವಿಷಯಕ್ಕೆ ಬರೋಣ...,

ಖಾರ..ಎಲ್ಲಿಂದ ಬರುತ್ತೆ?

ಖಾರ, ಎಲ್ಲರೂ ತಿಳಿದ ಹಾಗೆ ಒಂದು ಸ್ವಾದವಲ್ಲ...ಇದನ್ನು ಟೇಸ್ಟ್ ಎನ್ನಲಾಗದು ...ಕಪ್ಪು ಹೇಗೆ ಒಂದು ವರ್ಣ ಅಲ್ಲವೋ ಹಾಗೆ. ಖಾರದಾಯಕ ಗುಣ “ಕ್ಯಾಪ್ಸಾಸಿನ್” ಎಂಬ ರಾಸಾಯನಿಕ ತತ್ವದಿಂದ ಬರುತ್ತದೆ. ಚರ್ಮ ಮತ್ತು ವಿಶೇಷತಃ ನಾಲಿಗೆಯ ಮೇಲಿನ ’ಶಾಖ’ಕ್ಕೆ ಸ್ಪಂದಿಸುವ ಕೋಶಿಕೆಗಳನ್ನು ಕೆಣಕುವ ಗುಣ ಈ ರಾಸಾಯನಿಕ ಅಂಶಕ್ಕೆ ಇರುತ್ತದೆ ಇದು ಅಂತಹ ಕೋಶಿಕೆ ಮತ್ತು ನರತಂತುಗಳ ಮೂಲಕ ಮಿದುಳಿಗೆ ತಪ್ಪು-ಕಲ್ಪಿತ ಸಂದೇಶವನ್ನು ರವಾನೆ ಮಾಡುವುದರಿಂದ “ಖಾರ” ದ ಸ್ವಾದಾನುಭವವಾಗುತ್ತದೆ. ಇದು ಬೆವರುವಿಕೆ (ಶಾಖದ ಪರಿಣಾಮ)ಯನ್ನು ಪ್ರಚೋದಿಸುತ್ತದೆ ಈ ಕ್ರಿಯೆಗೆ ’ಎಂಡಾರ್ಫಿನ್’ ಎಂಬ ಸ್ರಾವಕ ಕಾರಣವಾಗಿರುತ್ತದೆ. ಹಾಗಾಗಿ ಖಾರ ಉರಿಯನ್ನು ಉಂಟುಮಾಡುವುದಲ್ಲದೇ ಎಂಡಾರ್ಫಿನ್ ಉತ್ಪತ್ತಿ ಮತ್ತು ಬೆವರುವಿಕೆಗೆ ದಾರಿ ಮಾಡುತ್ತದೆ.

ಹಿಂದಿನ ದಿನಗಳಲ್ಲಿ ಖಾರತ್ವ ಅಳೆಯೋಕೆ ಆಸ್ವಾದಕರನ್ನು ಅಥವಾ ಸ್ವಾದ ವಿಶೇಷಜ್ಞರನ್ನ ನೇಮಿಸಿ ಅವರು ಸ್ವಾದ ನೋಡಿ ಎಷ್ಟು ಖಾರ ಎನ್ನುವುದನ್ನು ಅಳತೆಪಟ್ಟಿಯ ಆಧಾರದಲ್ಲಿ, ಅಂದರೆ ಹೋಲಿಕೆ ಆಧಾರ, ಖಾರವಿಲ್ಲ, ಕಡಿಮೆ ಖಾರ, ಸ್ವಲ್ಪ ಖಾರ, ಮಧ್ಯಮ ಖಾರ, ಹೆಚ್ಚು ಖಾರ ಅತಿ ಹೆಚ್ಚು ಖಾರ, ಅಸಹ್ಯ ಖಾರ ಹೀಗೆ ವರ್ಗೀಕರಣದ ಮೂಲಕ ಅಳತೆಪಟ್ಟಿ ತಯಾರಿಸಲಾಗುತ್ತಿತ್ತು. ಕ್ರಿ.ಶ.1912 ರಲ್ಲಿ ವಿಲ್ಬರ್ ಸ್ಕೋವಿಲೆ ಎಂಬ ಅಮೆರಿಕಾ ತಜ್ಞ ಖಾರದಾಯಕ ಗುಣ ’ಕ್ಯಾಪ್ಸಾಸಿನಾಯ್ಡ್ಸ’ ಎಂಬ ಅಂಶ/ಘಟಕದ ಪ್ರಮಾಣದ ಮೇಲೆ ಅವಲಂಬಿಸಿರುತ್ತದೆಂದು ಸಾಧಿಸಿದ. ಆ ನಂತರ ಯಾವುದೇ ಸಸ್ಯಜನ್ಯ ಅಥವಾ ’ಕ್ಯಾಪ್ಸಾಸಿನಾಯ್ಡ್ಸ’ ಅಂಶವುಳ್ಳ ತಿಂಡಿ, ಆಹಾರ ಪದಾರ್ಥ, ತರಕಾರಿ ಇತ್ಯಾದಿಗಳ ಖಾರತ್ವವನ್ನು ’ಕ್ಯಾಪ್ಸಾಸಿನಾಯ್ಡ್ಸ’ ಪ್ರಮಾಣದ ಅಧಾರದ ಮೇಲೆ ಸ್ಕೋವಿಲೆ ಖಾರಾಂಶ (ಸ್ಕೋವಿಲೆ ಹೀಟ್ ಯೂನಿಟ್ಸ್, SHU) ಗಳು ಎಂದು ಹೇಳಲಾಗುತ್ತದೆ.

ಇನ್ನು ಮೆಣಸಿನಕಾಯಿ, ಖಾರ ಅಂದ್ರೆ ಮೆಣಸಿನಕಾಯಿಯೇ ಅಲ್ಲವೇ...? ಇದರಲ್ಲಿ ಹಲವಾರು ವಿಧಗಳು, ಬಣ್ಣಗಳು, ರೂಪಗಳು,,,, ಹಸಿಕಾಯಿ, ಒಣಕಾಯಿ, ಬೀಜ, ಇತ್ಯಾದಿ.

ಪ್ರಪಂಚದಲ್ಲಿ ಅತಿ ಖಾರವಾದ ಮೆನಸಿನಕಾಯಿ ಭಾರತದಲ್ಲಿ ಸಿಗುತ್ತದೆಂದರೆ ನಂಬುತ್ತೀರಲ್ಲವೇ...ಆದ್ರೆ ಅದು ಬಿಸಿಲ ತಾಪದ ರಾಜಸ್ಥಾನದಲ್ಲಿಯೋ ಅಥವಾ ಖಾರ ತಿನ್ನೊದಕ್ಕೇ ಹೆಸರಾದ ಕರ್ನಾಟಕದ ಬಳ್ಳಾರಿ, ಬ್ಯಾಡಗಿಯಿಂದಲೋ ದೊರೆಯುವಂಥದಲ್ಲ....ಹಸಿರುಸಿರಾಡುವ ಪೂರ್ವೋತ್ತರ ರಾಜ್ಯಗಳಾದ ನಾಗಾಲ್ಯಾಂಡ್, ಮಣಿಪುರ, ಅಸ್ಸಾಂ ಗಳಲ್ಲಿ ದೊರೆಯುತ್ತವೆ. ಇವುಗಳನ್ನು “ನಾಗಾ ಜೋಲಾಕಿಯ” ಮೆಣಸಿನ ಕಾಯಿ ಎನ್ನುತ್ತಾರೆ. “ಗಿನ್ನೆಸ್ ದಾಖಲೆ ಪುಸ್ತಕ” ದಲ್ಲಿ ಈ ಮೆಣಸಿನಕಾಯನ್ನು ವಿಶ್ವದಲ್ಲೇ ಅತಿ ಹೆಚ್ಚು ಖಾರದ ಮೆಣಸಿನಕಾಯಿ ಎಂದು ಮಾನ್ಯತೆ ನೀಡಲಾಗಿದೆ. ಮಾರುಕಟ್ಟೆಯಲ್ಲಿ ತರಕಾರಿ ಮಾರುವ ’ಇಮಾ’ ಗಳು ಹಿಕ್ಕಳದ ಸಹಾಯದಿಂದ ಅವನ್ನು ಹಿಡಿದು ತೂಕಕ್ಕೆ ಹಾಕುತ್ತಾರೆ. ಅತಿ ಖಾರವನ್ನು ಇಷ್ಟಪಡದ ಮಂದಿ “ನಾಗಾ ಜೋಲಾಕಿಯ” ಮೆಣಸಿನ ಕಾಯಿತೊಟ್ಟಿಗೆ ದಾರಕಟ್ಟಿ ಒಲೆಯ ಮೇಲ್ಭಾಗದಲ್ಲಿ ತೂಗುಬಿಟ್ಟು ಸಾಂಬಾರೊಳಕ್ಕೆ ಕೇವಲ ಮುಳುಗಿಸಿ ಎತ್ತುವುದರಿಂದ ಸಾಕಷ್ಟು ಖಾರ ಸಾಂಬಾರಿಗೆ ಹಾಕಿದಂತಾಗುತ್ತದಂತೆ !!!

ಈಗ ನಮ್ಮ “ನಾಗಾ ಜೋಲಾಕಿಯಾ” ದ ಖಾರತ್ವದ ಸ್ಕೋರು ಎಷ್ಟು ನೋಡೋಣವೇ...???

ಕ್ಯಾಪ್ಸಾಸಿನ್ ಶುದ್ಧ ಪುಡಿ                                            15-16 ದಶ ಲಕ್ಷ ಎಸ್.ಎಚ್.ಯು.

ನಾಗಾ ಬಿಹು ಜೊಲೊಕಿಯಾ                                       0.85 – 1.07 ದಶ ಲಕ್ಷ ಎಸ್.ಎಚ್.ಯು.

ಗುಂಟೂರು, ಜಮೈಕನ್ ಹಾಟ್ ಮೆಣಸಿನಕಾಯಿ              0.10 – 0.35 ದಶ ಲಕ್ಷ ಎಸ್.ಎಚ್.ಯು

ಭಾರತದ ಮತ್ತು ಥಾಯ್ ಮೆಣಸಿನಕಾಯಿ                      0.05 – 0.10 ದಶ ಲಕ್ಷ ಎಸ್.ಎಚ್.ಯು

ಪೆಮಿಂಟೋ ಅಥವಾ ಚೆರ್ರಿ ಮೆಣಸಿನಕಾಯಿ                           100 – 500 ಎಸ್.ಎಚ್.ಯು.

ಕ್ಯಾಪ್ಸಿಕಂ ದಪ್ಪ (ಬೆಲ್) ಮೆಣಸಿನಕಾಯಿ                                  0  ಎಸ್.ಎಚ್.ಯು

Sunday, September 19, 2010

ಮಗು-ಕೊಡು ನಿನ್ನಗು ನಮಗೂ













(ಚಿತ್ರ ಕೃಪೆ : ಪ್ರಕಾಶ -ಇಟ್ಟಿಗೆ ಸಿಮೆಂಟು  

ಕೇವಲ ಒಮ್ಮೆ ನೀ ನಗು

ನೀನಾಗಿಯಲ್ಲ, ಆಗಿ ಮಗು

ತೊಡೆ ಗೆರೆ-ಮುಖದ ಬಿಗು

ಮನತುಂಬಿ ನೀನೊಮ್ಮೆ ನಗು.

ಮತ್ತೆ ಬಂದರೇನು? ಎರಗಿ ಆಪದ

ಗುನುಗುನಿಸು ನಗುವಿನಾಪದ

ಕಣ್ಣಲಿ ಮಿಂಚು ಸುಳಿವಿಗಾಸ್ಪದ

ನಕ್ಕರೆ ಅದೇ ನಿಜ ಸಂಪದ.


ನೀನಕ್ಕರೆ ಮಗು ನಗುವುದು
ಮನ ಅರಳಿ ಕೊಡುವುದಾಮುದು

ಸಂಕಟ ನೂರು ಬರಬಹುದು

ಮಾಡಿಕೋ ನಗು ಆಮದು.


ನಕ್ಕರೆಂದರು ಅದೇ ಸ್ವರ್ಗ
ಈ ನೀಮಕೆ ಬದ್ಧರೆಲ್ಲ ವರ್ಗ

ಮುದಗೊಂಡ ಮನದ ಮಾರ್ಗ

ಕೊಳ್ಳಬೇಕಿಲ್ಲ ದತ್ತ ನಿಸರ್ಗ.

Thursday, September 16, 2010

ಜಲನಯನ - ಗುಬ್ಬಿ ಎಂಜಲಿಗೆ














(ಚಿತ್ರ ನಮ್ಮೊಳಗೊಬ್ಬ ಬಾಲು ಕೃಪೆ)
ನಯನದಾಳಕ್ಕೆ ನಲಿವಿತ್ತ
ಮನದಾಳಕ್ಕೆ ಮುದವಿತ್ತ
ಬ್ಲಾಗ್-ಬ್ಲಾಗೇತರ ಮಿತ್ರರಿಗೆ ಸಲಾಂ.
ತುಂತುರಾಗಿ ಹನಿಸಿ
ಎಲ್ಲವನೂ ನಿರ್ವಹಿಸಿ
ಕನಸ ನನಸಾಗಿಸಿದ ಶಿವುಗೆ ಸಲಾಂ.
ಜೊತೆಬಂದು ಜೊತೆಯಾದ
ಹಿತಮಾತು ಸಹಕಾರ ಎಲ್ಲದಕೂ
ಪರ್ಯಾಯವಾದ
ಸುಗುಣ, ಮಹೇಶ್, ಪ್ರವೀಣ್
ನಿಮ್ಮೆಲ್ಲರಿಗೆ ಆತ್ಮೀಯ ಸಲಾಂ.
ಎಲ್ಲರ ನಗಿಸು ಪ್ರಕಾಶ
ಯುವಸ್ನೇಹಿ ಸಾವಕಾಶ
ಅನಿರಾಘುಶಿಪ್ರನವೀನ್ನಾಗ್ ಗೆ ಸಲಾಂ.
ದೂರದಿಂದ ಬಂದು ಪ್ರೋತ್ಸಾಹಿಸಿದ
ಉದಯ್, ಚೇತು, ಟಿ.ಡಿ.ಕೆ, ಸೀತಾರಾಂ.
ಎಳವತ್ತಿ, ಬಾಲು, ದಿನಕರ್ ಎಲ್ಲರಿಗೂ ಸಲಾಂ
ಪಕ್ಕು, ಶಶಿ, ಸುಮನ, ಶ್ಯಾಮಲ, ನಿಶ,
ಎಸ್ಸೆಸ್ಕೆ, ದಿವ್ಯಾ, ವಿಆರ್ಬಿ, ದಿಲೀಪ್ರಗತಿ
ಗುರು, ಪರಾಂಜಪೆ, ಉಮೇಶ್, ಜಯಕ್ಕ, ಸುಧಿ,
ಸುಘೋಶ್, ಗುಬ್ಬಚ್ಚಿ, ಅಶೋಕ್ ಮತ್ತೆಲ್ಲರ
ಮನದಾಳದ ಪ್ರೋತ್ಸಾಹಕೆ ಸಲಾಂ
ಎಲ್ಲರ ತುಂಬು ಪ್ರೋತ್ಸಾಹಕೆ
ಜಲನಯನದ ಜೊತೆ
ಗುಬ್ಬಿ ಎಂಜಲ ಕಥೆ..
ಮತ್ತೊಮ್ಮೆ ಮಗದೊಮ್ಮೆ
ಸಲಾಂ ...ಸಲಾಂ.

Friday, August 13, 2010

ಜಲನಯನ – ಸಾಫ್ಟಿಂದ ಹಾರ್ಡಿಗೆ,


ಮೀನು - ಜಲಜಾಕ್ಷಿ, ಮೀನಾಕ್ಷಿ ಚಂಚಲಾಕ್ಷಿ ಎಲ್ಲಾ...ಅದರ ಜೊತೆಗೆ ಪ್ರವೃತ್ತಿ ಜೊತೆ ವೃತ್ತಿಯ ಬೆಸುಗೆ..ಇದಕೆ ಸೂಕ್ತ ವೆನಿಸಿದ ಹೆಸರೇ – ಜಲನಯನ. ಮೊದಲಿಗೆ ಬ್ಲಾಗಿನಲ್ಲಿ ಹಲವರು “ಜಲಾನಯನ” ಎಂದೇ ಕಾಮೆಂತಿಸಿದರು...ಕೆಲವರು "ಜಲನಯನ” ಮೇಡಂ ಎಂದರು..ಒಂದು ರೀತಿ ಲಿಂಗ ಪರಿವರ್ತನೆಯನ್ನೂ ಮಾಡಿದರು ಎಂದರೂ ತಪ್ಪಲ್ಲ...!!!



ಕವನ – ನೀಳ್ಗವನ, ಇಡಿಗವನ, ಮಿಡಿಗವನ, ಹನಿಗವನ, ಚುಟುಕ, ನ್ಯಾನೋ ಹೀಗೆ..ಏನೇನೊ ತರ್ಲೆ ಸಹಾ ಮಾಡಿದ್ದುಂಟು ಈ –ಜಲನಯನ. ಅದನ್ನು ಸಾಫ್ಟಲ್ಲಿ ನೋಡಿ..ಬೆನ್ನು ತಟ್ಟಿ ಈಜು ಇನ್ನೂ ದೂರ ದೂರಕೆ ಬೆಳೆಯಲಿ ನಿನ್ನ ಪಯಣ ಎಂದಿರಿ, ಬೆನ್ತಟ್ಟಿದಿರಿ...ಪ್ರೋತ್ಸಾಹಿಸಿದಿರಿ...ಅನಿಸಿದ್ದೂ ಉಂಟು “ಓಹ್ ಕಂಡಿಲ್ಲ ನೋಡಿಲ್ಲ ..ಏನಿದು ನಂಟು..?”



ನನ್ನ ಬ್ಲಾಗ್ ಲೋಕಕ್ಕೆ ವಸ್ತುತಃ ಕೊಂಡು ಬಂದ ಶ್ರೇಯ ಸುಗುಣಾ ಮಹೇಶ್ ಗೆ ಸೇರಬೇಕು.. ಇದು ಒಬ್ಬರೇ..ಇಬ್ಬರೇ..ಇಬ್ಬರಾದ ಒಬ್ಬರೇ..? ಒಬ್ಬರಾದ ಇಬ್ಬರೇ...ಓಫ್ ..ಏನಿದು ಕಂಫ್ಯೂಶನ್?!! ಎನ್ನಬೇಡಿ..ನನಗೂ ಹಾಗೇ ಅನಿಸಿತ್ತು ಆಗ. ಬ್ಲಾಗಲ್ಲಿ ಬ್ಲಾಗಿಸುತ್ತಾ ಸಾಗಿದ ಜಲನಯನಕ್ಕೆ ಜೊತೆಯಾದದ್ದು “ಭಾವಮಂಥನ” ಮತ್ತು “Science & share” ಬ್ಲಾಗ್ ಸೋದರಿಯರು. ಬ್ಲಾಗ್ ಪೋಸ್ಟ್ ಗಳ ಶತಕ ಬಾರಿಸಿದ ’ಜಲನಯನ’ ವನ್ನು ಸಾಫ್ಟ್ ನಿಂದ ಹಾರ್ಡ್ ಗೆ ತರುವ ಯೋಚನೆ ನನಗೆ ಬರಲು ಕಾರಣ ನಮ್ಮ ಮಿತ್ರರಾದ ಪ್ರಕಾಶ್ ಮತ್ತು ಶಿವು. ಅವರ ಪುಸ್ತಕಗಳ ಬಿಡುಗಡೆಯಿಂದ ಪ್ರೇರಿತನಾಗಿ...ಅವರ ಮಟ್ಟದ ಲೇಖಕ-ಬ್ಲಾಗಿ ಅಲ್ಲದಿದ್ದರೂ ಅವರ ಪ್ರೋತ್ಸಾಹದಿಂದ ಜಲನಯನದ ಕವನಗಳ ಸಂಕಲನವನ್ನು ಮುದ್ರಿತ ರೂಪದಲ್ಲಿ ತರಬೇಕೆಂಬ ಹಂಬಲ ಬಲಿಯಿತು. ಪರಿಣಾಮ....ಇದೇ ಆಗಸ್ಟ್ ೨೨ ರಂದು ಕನ್ನಡ ಭವನ (ರವೀಂದ್ರ ಕಲಾಕ್ಷೇತ್ರದ ಬಳಿ) ದಲ್ಲಿ ನನ್ನ ಚೊಚ್ಚಲ ಕವನ ಸಂಕಲನ “ಜಲನಯನ” ಹೆಸರಾಂತ ಸಾಹಿತಿ ಚುಟುಕ ಸಾಮ್ರಾಟ್, ಕೃಷಿ ತಜ್ಞ (ಬೆಂಗಳೂರು ಕೃ.ವಿ.ವಿ. ಯಲ್ಲಿ ೩-೪ ವರ್ಷ ನನಗಿಂತ ಹಿರಿಯ ವಿದ್ಯಾರ್ಥಿಯಾಗಿದ್ದವರು) ಎಚ್.ಡುಂಡಿರಾಜ್ ರವರ ಅಮೃತಹಸ್ತದಿಂದ ಬಿಡುಗಡೆಗೊಳ್ಳುತ್ತಿದೆ. ಈ ಮೂಲಕ ನಾನು ಶ್ರೀಎಚ್.ಡುಂಡಿಯವರಿಗೆ ನನ್ನ ಆಭಾರಗಳನ್ನು ವ್ಯಕ್ತಪಡಿಸಿ.. ತಮ್ಮೆಲ್ಲರನ್ನೂ ಈ ಸಮಾರಂಭಕ್ಕೆ ಆಮಂತ್ರಿಸುತ್ತೇನೆ. ನನ್ನ ಜೊತೆಗೆ ನಮ್ಮೆಲ್ಲರ ಮಿತ್ರ ಕೆ.ಶಿವು ಸಹಾ ತಮ್ಮ “ಗುಬ್ಬಿ-ಎಂಜಲು” ಪುಸ್ತಕವನ್ನೂ ಬಿಡುಗಡೆ ಮಾಡುತ್ತಿದ್ದಾರೆ..ಹಾಗಾಗಿ ಜೋಡಿ ಕಾರ್ಯಕ್ರಮಕ್ಕೆ ನಿಮ್ಮೆಲ್ಲರ ಹಾಜರಿ ಮತ್ತು ಪ್ರೋತ್ಸಾಹದ ಬೆಂಬಲ ಕೋರುತ್ತೇವೆ.



ಜಲನಯನಕ್ಕೆ ನಯನ ಮನೋಹರ ಮುಖಪುಟದ ವಿನ್ಯಾಸ ಮಾಡಿಕೊಟ್ಟ ಶ್ರೀಮತಿ ಸುಗುಣಾ ಮಹೇಶ್ (ಕುವೈತ್ ನ ನಮ್ಮ ಕನ್ನಡ ಕೂಟದ ಸಹ ಸದಸ್ಯರು) ರವರಿಗೆ ನನ್ನ ಕೃತಜ್ಞತೆಗಳು. ನಮ್ಮ ಹಸ್ತ ಪ್ರತಿಯನ್ನು ಹಸನುಗೊಳಿಸಿ ಭಾಷೆಯನ್ನು ಸರಿಪಡಿಸಿ..ಕರಡು ಮತ್ತು ಮದ್ರಣ-ಸಿದ್ಧಗೊಳಿಸಿದ್ದೇ ಅಲ್ಲದೇ ಆಕರ್ಷಕ ಬೆನ್ನುಡಿಯನ್ನೂ ಬರೆದ ನಮ್ಮೆಲ್ಲರ ಬ್ಲಾಗ್ ಮಿತ್ರ ಬೆಂಗಳೂರಿನ ಡಾ. ಬಿ.ಆರ್.ಸತ್ಯನಾರಾಣರವರ ಸಹಾಯ ಸಹಕಾರಗಳು ಸ್ತುತ್ಯಾರ್ಹ. ಈ ಪುಸ್ತಕಗಳು ಕೆ.ಶಿವುರವರ “ತುಂತುರು” ಪ್ರಕಾಶನದಡಿ ಪ್ರಕಾಶಿತಗೊಳ್ಳುತ್ತಿರುವಿದು ಇನ್ನೊಂದು ವಿಶೇಷ. ಮುಂದೆ ತಮ್ಮ ಕೃತಿಗಳನ್ನು ಮುದ್ರಿಸಿ ಪ್ರಕಾಶಿಸಲು ಇಚ್ಛಿಸುವ ನಮ್ಮ ಮಿತ್ರರಿಗೆ ಶಿವುರವರ ತುಂತುರು ಪ್ರಕಾಶನ ಸಹಾಯಕವಾಗುವುದರಲ್ಲಿ ಸಂಶಯವಿಲ್ಲ.

ವಿಶೇಷ ಸೂಚನೆ: ನಮ್ಮ ಕಾರ್ಯಕ್ರಮದ ನಂತರ ನಾವು ಕೈಗೊಳ್ಳಬೇಕೆಂದುಕೊಂಡಿದ್ದ ಬ್ಲಾಗಿಗರ ಸಮಾವೇಶದ ಬಗ್ಗೆ ಹಿರಿಯ ಬ್ಲಾಗಿಗರ ಜೊತೆ ನಾವೆಲ್ಲ ಸೇರಿ ಒಂದು ವಿಚಾರ ಮಂಥನದ ಕಾರ್ಯಕ್ರಮದ ಯೋಚನೆಯನ್ನೂ ನಮ್ಮ ಹಿರಿಯ ಬ್ಲಾಗಿಗಳು ಹೊಂದಿದ್ದಾರೆ. ಇದನ್ನು ಗಮನದಲ್ಲಿಟ್ಟು ಹೆಚ್ಚು ಹೆಚ್ಚು ಬ್ಲಾಗಿಗರು ಕಾರ್ಯಕ್ರಮಕ್ಕೆ ಆಗಮಿಸಬೇಕಾಗಿ ಕೋರಿಕೆ.