Sunday, June 30, 2019

ಮಾಗಿ


ವಿಷಯ: ಮಾಗಿ
ಮಾಗಿ ಅಂದಕ್ಷಣ – ಚಳಿ ನೆನಪಾಗುತ್ತೆ, ಚಳಿಗಾಲದ ಕುವೈತಿನಲ್ಲಿ ಇತ್ತೀಚೆಗೆ ಕಂಡ ಅನುಭವಿಸಿದ ಕಡುಚಳಿ ಬಗ್ಗೆಯಾದರೂ ಬರೆಯಬಹುದಲ್ವಾ? ಸಂಪದ ಸಂಪನ್ನರಲ್ಲಿ ಯಾಕೋ ಯೋಚನಾ ಲಹರಿಯೂ ಚಳಿಗೆ ನಡುಗಿತ್ತು,ವಿಷಯ ತಿಳಿದೊಡನೆ.
ಇರಲಿ
ಮಾಗಿ – ಮ,ನ. ಜವರಯ್ಯನವರ ಕಾದಂಬರಿ - ರಾಜ್ಯ ಸಾಹಿತ್ಯ ಆಕಾಡಮಿ ಪ್ರಶಸ್ತಿ ಪಡೆದ ಕೃತಿ.
ಮಾಗಿ – ಹಾಡೇ ಇದೆಯಲ್ಲಾ – ಮಾಗಿಯ ಚಳಿಯಲ್ಲಿ ಈ ಬಿಸಿಯೇಕೋ
ಸಂಕ್ರಮಣ ಬಂತೆಂದರೆ ಮಾಗಿ ತನ್ನ ಗಂಟು ಮೂಟೆ ಕಟ್ಟಬೇಕಾದ್ದೇ ಎನ್ನುವುದು ನಾಡಿನಲ್ಲಿ ಎಲ್ಲರ ಅಂಬೋಣ. ಆದರೆ ಇಲ್ಲಿ ಮರಳುನಾಡಿನಲ್ಲಿ ಮಾಗಿ ನಮ್ಮನ್ನು ಮಾಗಿಸುತ್ತಿದೆ ಚಳಿಯಲ್ಲಿ ಎಂದರೆ ತಪ್ಪಿಲ್ಲ. ಹೊರಗಡೆ ಬೆಚ್ಚಡಕ್ಕೆ ಹೀಟರ್ (ಈಗ ಕುವೈತ್ ಮಂತ್ರಾಲಯ ಇದಕ್ಕೆ ತಡೆಯಾಜ್ಞೆ ತಂದಿದೆಯಂತೆ), ಮಧ್ಯೆ ಕಂಬಳಿ, ರಜಾಯಿ, ಬ್ಲಾಂಕೆಟ್ ಇತ್ಯಾದಿ..ಅದಕ್ಕಿಂತ ಸ್ವಲ್ಪ ಒಳಗೆ -ಸ್ವೆಟರ್..ಬೆವರೊಸರುಗ. ತಲೆಗೆ ಮಂಗನಟೋಪಿ, ಇನ್ನೂ ಒಳಗಿನ ಮಾತೆಂದರೆ..ಬೇಡ ಬಿಡಿ..ಅದನ್ನ ಅನುಭವಿಸಬೇಕು, ಹೇಳುವ ಬರೆಯುವ ಮಾತಲ್ಲ.
ಬೆಳಗ್ಗೆ ಏಳುವುದು ಅನಿವಾರ್ಯ ಎಂದಾಗ ಮಾಗಿಯನ್ನ ಚನ್ನಾಗಿ ಬೈತೀವಿ, ಇಲ್ಲವೆಂದಾಗ ಅಹಾ..ಬೆಚ್ಚಗೆ ಹೊದ್ದು ಮಲಗ್ತೀವಿ. ಮಕ್ಕಳನ್ನು ಎಬ್ಬಿಸುವುದೂ ಯಾವ ಅಶ್ವಮೇಧಕ್ಕಿಂತ ಕಡಿಮೆ ಸಾಧನೆಯಲ್ಲ. ರಜೆಯಿದ್ದರಂತೂ..ಜಪ್ಪಯ್ಯ ಅಂದ್ರ ಏಳೊಲ್ಲ...ತಿಂಡಿ ಸಮಯ ಮುಗಿದು ಊಟದ ಸಮಯಕ್ಕೆ ಎದ್ದರೆ ಪುಣ್ಯ.
ನಿಜಕ್ಕೂ ಅಡುಗೆಮನೆ ಜವಾಬ್ದಾರಿ ಹೊತ್ತ ಹೆಣ್ಣುಮಕ್ಕಳ ಸಾಹಸವನ್ನು ಒಪ್ಪಲೇಬೇಕು. ಅಷ್ಟುಬೆಳಗ್ಗೆ ನೀರಿಗೆ ಕೈ ಯಿಡುವುದು ಬೆಂಕಿಗೆ ಕೈಯಿಡುವುದಕ್ಕಿಂತ ಅಪಾಯಕಾರಿ, ಸುಟ್ಟೇಹೋಗುತ್ತೆ ಕೈ...ಉಸುಸುಸುಸು..ಅಂತ ಉಸುರೇ ಹೋಗುವಂತೆ ಆಗುತ್ತೆ. ಇದನ್ನ ನಾನು ಅನುಭವಿಸಿದ್ದರಿಂದ ಹೇಳ್ತಾ ಇದ್ದೇನೆ, ಪುಣ್ಯಕ್ಕೆ ನೀರಿನ ಹೀಟರ್ ಒಂದು ಬಕೆಟ್ ನೀರನ್ನು ಹೊರಬಿಟ್ಟಮೇಲೆ “ನಾನೂ ಇದ್ದೇನೆ, ಚಳಿಗೆ ನಡುಗುವವನಲ್ಲ” ಎನ್ನುವಂತೆ ಬಿಸಿನೀರನ್ನು ನಲ್ಲಿಯ ಮೂಲಕ ತಳ್ಳಿದ ಮೇಲೆ ಸ್ವಲ್ಪ ಉಸಿರಾಟ ಹದ್ದುಬಸ್ತಿಗೆ ಬರುತ್ತೆ.
ಸ್ನಾನಕ್ಕೆ ಹೋದರೆ ನನ್ನವಳು ಏನ್ರೀ ಅಷ್ಟು ಹೊತ್ತಿಂದ ಸದ್ದೇ ಇಲ್ಲ..ಬರೀ ನೀರು ಹೋಗುವ ಸದ್ದು..?? ಓಹ್..ಇನ್ನೂ ಬೆಚ್ಚಗಿನ ನೀರು ಬರ್ಲಿಲ್ವಾ..? ಅಂತ ತನ್ನ ಪ್ರಶ್ನೆಗೆ ತಾನೇ ಉತ್ತರ ಕೊಟ್ಕೊತಾಳೆ. ನಾನು ಆವಾಗಾವಾಗ ಶವರ್ ಜಲಪಾತಕ್ಕೆ ಕೈಯಿಡಲೋ ಬೇಡವೋ ಎನ್ನುತ್ತಾ ಕೈಯಿಟ್ಟು,, ಇದು ಚಳಿನೀರಿನ ಬಿಸಿಯೋ, ಬಿಸಿನೀರಿನ ಬಿಸಿಯೋ ಎನ್ನುವ ಗೊಂದಕ್ಕೆ ಬೀಳುವಂತೆ ಮಾಡಿದಾಗ ಹಿಂಜರಿಕೆಯಿಂದಲೇ ಮತ್ತೆ ಕೈಯಿಟ್ಟರೆ ಹಬೆಯಾಡುವ ನೀರು..ಅಂದಹಾಗೆ ಅತಿ ತಣ್ಣನೆಯ ನೀರೂ ಹಬೆಯಾಡುತ್ತೆ... ಮಾಗಿ ..ಇಲ್ಲೂ ಮೋಸ ಮಾಡುತ್ತೆ ನಮಗೆ..ಬಿಸಿನೋ ತಣ್ಣನೆ ನೀರೋ ನೀನೇ ನೋಡ್ಕೋ ಅಂತ..
ಅಂತೂ ಚಳಿಗಾಲ ನಮ್ಮ ದಿನನಿತ್ಯದ ಬದುಕನ್ನು ಮಾಗಿಸುತ್ತೆ, ಬಾಗಿಸುತ್ತೆ, ಬಳಕಿಸುತ್ತೆ ನಡುಗಿಸುತ್ತೆ..ಅಂದರೆ ತಪ್ಪಿಲ್ಲ. ಏನಂತೀರಿ?

ಕೆಲವು ಪದಕಟ್ಟು ಕವಗಳು
ಮಾಗಿಯು ಬಂತಲ್ಲ ಏನು ಮಾಡಲಿ?
ಮಡಿಲಿನ ಮಗುವನ್ನು ಬೆಚ್ಚಗಿಡಬೇಕು
ಬಡತನಕೆ ಇಲ್ಲ ಬೆಚ್ಚನೆ ಮನೆಸೂರು
ಮರೆಸುವುದೆಲ್ಲ ತಾಯ ಮಡಿಲು

ಮಾಡಲು ಕೆಲವಿಲ್ಲ ಚಳಿಗಾಲ
ಗಳಿಕೆಯಲಿ ಬರಲಿದೆ ಬರಗಾಲ
ಬರಿಗಾಲಲಿ ಹೇಗೆ ನಾ ನಡೆಯಲಿ?
ನಡುವಲಿ ಹೊಳೆಯ ಶೀತಲಜಲ

ಶೈಲಜೆಯ ನಲ್ಲಿಯ ನೀರು ಶೀತಲ
ಶಾಂತಲೆಗೆ ಸಿಗುವುದು ಬಿಸಿಜಲ
ಬಿಜಲಿಯ ಬಿಲ್ಲು ಅವಳಿಗೆ ಕೋಮಲ
ಕಾಲಮರೆಸುವುದು ಮಾಗಿಯ ಫಲ

3 comments:

  1. ಮಾಗಿಯ ಸಂಕಟಗಳನ್ನು ಪದಕಟ್ಟು ಕವನಗಳಲ್ಲಿ ಹೃದ್ಯವಾಗಿ ಬಣ್ಣಿಸಿರುವಿರಿ. ಈ ಸಂದರ್ಭದಲ್ಲಿ ಆನಂದಕಂದರು ಬರೆದ ‘ನೋಡು ಬರುವ ಸುಗ್ಗಿಯಾಟ’ ಕವನದ ಒಂದು ನುಡಿಯನ್ನು ಇಲ್ಲಿ ಕೊಡುವುದು ಅಪ್ರಸ್ತುತವಾಗಲಾರದು:
    ‘ಮಾಗಿಯ ಕೊರೆತಕೆ ಮೈ ಬರಲಾಗಿರೆ
    ಮರ-ಬಳ್ಳಿ ಮರಗಿ ಸಾಯುವುವೆ?
    ಸಾಗಿ ಬಹುದು ಸುಗ್ಗಿಯೆಂಬ ನಲವಿನಲಿ
    ಕಾಲವ ತುಳಿದು ಬಾಳುವುವೆ!’

    ReplyDelete
  2. ಧನ್ಯವಾದಗಳು ಸುನಾಥಣ್ಣ... ಪದಕಟ್ಟು ಕವನಗಳು ಫೇಸ್ಬುಕ್ಕಲ್ಲಿ ಸ್ನೇಹಿತರಿಗೆ ಹಿಡಿಸ್ತಿವೆ, ಪದಬಳಕೆಯ ಕಸರತ್ತಿನೊಡನೆ ಸೃಜನಶೀಲತೆಗೆ ನಾ ಇಟ್ಟ ಹೆಸರು "ಪದಕಟ್ಟು ಕವನ" ಧನ್ಯವಾದ ಅಣ್ಣ

    ReplyDelete
  3. We are urgently in need of Kidney donors with the sum of $500,000.00,
    Email: customercareunitplc@gmail.com

    ReplyDelete