Wednesday, April 28, 2010

ಆತಂಕ....

ನಮ್ಮದು ಒಂದು ಹೆಸರಾಂತ ಕುಟುಂಬ ಎಲ್ಲ ಸದಸ್ಯರೂ ಒಂದಲ್ಲೊಂದು ಸಾಧನೆ ಮಾಡಿದವರು..ಹತ್ತು ಕುಟುಂಬಗಳಲ್ಲಿ ನಮ್ಮ ಕುಟುಂಬ ಅದರಲ್ಲಿ ನಾನು ಅಂದ್ರೆ ನನ್ನ ಸುತ್ತ ಮುತ್ತಣ ಮತ್ತೆ ಕಾಲೇಜಿನ ಹುಡ್ಗೀರೆಲ್ಲಾ ನನ್ನ ಹೃತಿಕ್ ರೋಶನ್ ನೋಡೋ ಹಾಗೆ ಕಣ್ಣಲ್ಲೇ ಆರಾಧಿಸೊರು...ನಮ್ಮ ಕಸಿನ್ ಗಳಿಗೆ ನನ್ನ ಕಂಡ್ರೆ ಹೊಟ್ಟೆ ಕಿಚ್ಚು...ನನ್ನದೂ ಕಟ್ಟುಮಸ್ತು ದೇಹ ನನ್ನ ಸ್ವಿಮ್ಮಿಂಗ ಸ್ಟೈಲಿಗೂ ಮಾರುಹೋಗ್ದೇ ಇರೋರೇ ಇಲ್ಲ...ಅದಕ್ಕೆ ನನ್ನ ಕಟ್ಟುಮಸ್ತು ದೇಹ ಸಾಥ್ ನೀಡಿತ್ತು ಅಂದ್ರೆ ತಪ್ಪಲ್ಲ....



ಆ ದಿನ ಪ್ರತಿವರ್ಷ ದಂತೆ ನಡೆಯೋ ಈಜು ಸ್ಪರ್ಧೆಯ ಫೈನಲ್ ನಡೆಯುವ ದಿನ...ಪೂರ್ತಿ ಕೊಳ ಸಜ್ಜುಗೊಳಿಸಲಾಗಿತ್ತು ...ಹಲವಾರು ಸಹ ಈಜುಗಾರ್ತಿಯರೂ ಇದ್ದರು..ಪಕ್ಕದ ಕೊಳದಲ್ಲಿ.. (ಕೆಲವರಂತೂ ನನ್ನ ಮೆಚ್ಚಿಸಲೆಂದೇ..ಮೈಮಾಟ ಎದ್ದು ಕಾಣೋ ಹಾಗೇ ಕೊಳದಲ್ಲೇ ಇಜಾಡ್ತಾ..ನನ್ನ ಗಮನ ಸೆಳೀತಿದ್ದುದು ಈಗ್ಲೂ ನೆನಪಿಸಿಕೊಂಡ್ರೆ...ಏಹ್..!! ಪರ್ವಾಯಿಲ್ಲ ಕಣಯ್ಯ ..ನೀನು..ಒಳ್ಳೆ ಫ್ಯಾನ್ ಫಾಲೋಯಿಂಗ್ ಇದೆ ನಿನಗೆ..ಅಂತ ನನ್ ಬೆನ್ನ ನಾನೇ ತಟ್ಕೊಂಡಿದ್ದೂ ಉಂಟು...ಹಹಹ).


ಅಂದಹಾಗೆ ಮರೆತಿದ್ದೆ ಹೇಳೋದು...ನನ್ನ ಸ್ನೇಹಿತರೇ ಏಕೆ..ಹುಡ್ಗೀರೂ..ನನ್ನ "ಲವ್ಲಿ ಬಾಸ್" ಅಂತಾನೇ ಕರೀತಿದ್ದುದು....


ಸರಿ ಸ್ಪರ್ಧೆ ಶುರು ಆಯ್ತು ...ಎಲ್ಲರಿಗೂ ಗೊತ್ತಿತ್ತು ಸ್ಪರ್ಧೆ ಹೆಸರಿಗೆ ಮಾತ್ರ...ಗೆಲುವು.."ಲವ್ಲಿ ಬಾಸ್" ದೇ.. ಅಂತ....ನನಗೆ ಯಾಕೋ ಇದು ಒಂದು ತರಹ ನಿರಾಸೆ ಮೂಡಿಸಿತ್ತು.."ಅಲ್ಲಾ..ಇದೊಂದು ಸ್ಪರ್ಧೆನಾ...? ಥ್ರಿಲ್ ಇಲ್ದೇ ಇರೋ ಸ್ಪರ್ಧೆ..ಸರ್ಧೆನೇ ಅಲ್ಲ.." ಅನ್ನಿಸಿತ್ತು...


ಆದ್ರೂ ಎಲ್ಲ ಹುಡ್ಗೀರನ್ನ ಇನ್ನಷ್ಟು 'ದಿವಾನ' ಮಾಡೋ ಚಾನ್ಸು ನಾನು ಬಿಡ್ತೀನಾ...ವೈಯಕ್ತಿಕ ದಾಖಲೆ ಮಾಡೋಣ ಅನ್ನಿಸಿ...ರೆಡಿಯಾದೆ.....


ಆಗ ಸ್ಪರ್ಧಿಗಳ ಹೆಸ್ರು ಕರೆದ್ರು.... ಸಿಲ್ವಸ್ಟರ್ ಉರ್ಫ್ "ಲವ್ಲಿ ಬಾಸ್" ಎಂದಾಗ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು...ಕಡೆಯ ಸ್ಪರ್ಧಿ ಬ್ರೇವ್ ಬ್ರೀಮ್ ಎಂದಾಗ ನನಗೆ ಸಿಕ್ಕಷ್ಟಲ್ಲದಿದ್ದರೂ ಒಳ್ಲೆಯ ಕರತಾಡನ ಗಿಟ್ಟಿಸಿದ ಆ ಕಡೆಯ ಲೇನಿನ ಸ್ಪರ್ಧಿ..ಯಾರಿದು..? ಎಂದು ನೋಡಿದಾಗ ಹದಿಹರೆಯದ "ಬ್ರೀಮ" ನ್ನು ನೋಡಿದ್ದೆ..... ’ಇವನೂ ಜೋರಿದ್ದಾನೆ’ ಎನಿಸಿತ್ತು ಮನದಲ್ಲೇ...


ನಾಲ್ಕು ಬಾರಿ ದಡ ತಲಪುವ ಇನ್ನೂರು ಮೀಟರ್ ಸ್ಪರ್ಧೆ...ಸರಿ...ಎಲ್ಲಾ ಅಣಿಯಾಯ್ತು...


ರೆಫರಿ..ಜೋರಾಗಿ...ಆನ್ ಯುವರ್ ಮಾರ್ಕ್ಸ್ ಗೆಟ್ ಸೆಟ್..ಎಂದು ಗನ್ ಶೂಟ್ ಮಾಡಿದ್ದೇ...ಜಿಗಿದಿದ್ದೆ ನೀರಿಗೆ...ಎಲ್ಲರೂ "ಉತ್ತಮ ಸ್ಟಾರ್ಟ್..ಉತ್ತಮ ಸ್ಟಾರ್ಟ್..ಕಮಾನ್ ಲವ್ಲಿಬಾಸ್" ಎನ್ನುತ್ತಾ ಹುರಿದುಂಬಿಸ್ತಾ ಇದ್ರು....ಇನ್ನೂ ಐದಾರು ಮೀಟರ್ ಅಂತರ ಇರುವಂತೆ ಮೊದಲ ಲ್ಯಾಪ್ ಮುಗಿಸಿ ಎರಡನೇ ಲ್ಯಾಪ್ ಗೆ ಹಿಂದಿರುಗಿದೆ....ಲೀಲಾಜಾಲವಾಗಿ..ಎರಡನೇದು...ಹಾಗೇ ಮೂರನೇದು ಮುಗಿಸಿ ತಿರುಗಿದಾಗಲೇ ಗೊತ್ತಾದದ್ದು ಬ್ರೀಮ್ ನನ್ನ ಸಮಕ್ಕೆ ಬಂದಿದ್ದ ಎಂದು..!!ಅರ್ಧ ದೂರ ಕ್ರಮಿಸಿದ್ದೆ..ಯಾಕೋ ..ವೀಕ್ ಆಗ್ತಾ ಇದ್ದೇನೆ ಎನಿಸಿತ್ತು...ಬ್ರೀಮ್ ಒಂದು ಕೈ ಅಳತೆ ನನ್ಗಿಂತ ಮುಂದಿದ್ದ..ಎಲ್ಲರೂ "ಕಮಾನ್ ಲವ್ಲಿ ಬಾಸ್..ಕಮಾನ್...ಏನಾಯ್ತು..??!! ..ಛೇ...ಹೋಯ್ತು..ಇಲ್ಲ ಆಗ್ತಿಲ್ಲ...ನನ್ನಿಂದ...ಸೋಲ್ತಾ ಇದೆ ಮೈಕೈ..ಕಡೆಗೆ ಅಂಚು ತಲುಪುವಾಗ..ಬ್ರೀಮ್ ಮೊದಲ ಸ್ಥಾನ ಮತ್ತು ಇಷ್ಟು ವರ್ಷ ಮೂರು ನಾಲ್ಕರ ಸ್ಥಾನ ಪಡೀತಿದ್ದ ಸಿಲ್ವಸ್...ಎರಡನೇ ಸ್ಥಾನ...ನನ್ನದು ಅವಮಾನ ತುಂಬುವ ಮೂರನೇ ಸ್ಥಾನ...!!!???






ಛೇ..ಈ ಕೊಳ ಬಾಯ್ಬಿಟ್ಟು ನನ್ನ ನುಂಗಬಾರದೇ ..ಎನಿಸುವಷ್ಟು ನಾಚಿಕೆಯಾಗಿತ್ತು... ಕೊಳದಲ್ಲೇ..ನಿಂತು ಅಜ್ಜನ ಕಡೆಗೆ ನೋಡಿದೆ...ಅಜ್ಜ ಮುಗುಳ್ನಗ್ತಿದ್ದ...!!!


ನನಗೆ ..ಅವಮಾನ...ಆಶ್ಚರ್ಯ...ಎಲ್ಲ ಒಟ್ಟಿಗೆ...ನನ್ನ ಎಲ್ಲ ಗೆಲುವಲ್ಲೂ ಬೀಗುತ್ತಿದ್ದ ನನ್ನಜ್ಜ ನಗುವುದೇ...ಛೇ.....


ಈ ಹೊತ್ತಿಗಾಗ್ಲೇ...ಛಾಂಪಿಯನ್ "ಬ್ರೀಮ್" ಅನ್ನು ಚಲುವೆಯರೆಲ್ಲಾ ಸುತ್ತುವರೆದಿದ್ದರು.. ನಾನು ವಿಕ್ಟರಿ ಸ್ಟಾಂಡನ ಮೇಲೂ ಮನಸ್ಸಿಲ್ಲದ ಮನಸಿಂದ ನಿಂತೆ..ಕಾಟಾಚಾರದಂತೆ ಪದಕ ಪಡೆದು..ಅಜ್ಜನನ್ನ ತಬ್ಬಿಕೊಂಡು ಅತ್ತೆ...ಈಗ್ಲೂ ಅಜ್ಜನ ಮುಗುಳ್ನಗು ಮಾಯವಾಗಿರಲಿಲ್ಲ.....


ಮನೆಯ ಕಡೆ ಹೋಗ್ತಾ...ಅಜ್ಜನ್ನ ಪ್ರಶ್ನಾರ್ಥಕವಾಗಿ ನೋಡಿದಾಗ.." ಲವ್ಲಿ ಬಾಸ್" ನೀನು ಬಾಸ್ ಹೋಗಿ ಬರೀ "ಲವ್ಲಿ" ಆಗೋ ಕಾಲ ಬರ್ತಿದೆ...ಅಂದ..


ನಾನು "ಏನಜ್ಜ ನೀನು ಹೇಳ್ತಿರೋದು...?" ಅಂದೆ..


"ಹೌದು...ನಿನಗೆ ಐದು ವರ್ಷ ತುಂಬಿತಲ್ಲಾ....? .ಕೆಲ ಬಾಸ್ ಜಾತಿಯ ಮೀನುಗಳು ೫-೬ ವರ್ಷ ತುಂಬುತ್ತಿದ್ದಂತೆ ಗಂಡು ಬಾಸ್ ಹೆಣ್ಣಾಗಿ ಮಾರ್ಪಡುವ ಸಮಯ ..ಆಗ ಶರೀರ ಕ್ರಿಯೆಯಲ್ಲಿ ವಿಚಿತ್ರ ಬದಲಾವಣೆಗಳು ಆಗಿ ಗಂಡು-ಹೆಣ್ಣಾಗುವ ಮಹತ್ತರ ಘಟ್ಟಮುಟ್ಟುತ್ತೇವೆ, ಆಗ ಹೀಗಾಗುತ್ತದೆ...ಎಲ್ಲ ಬಾಸ್ ಗಳಂತೆ ನೀನೂ ಈಗ ಹೆಣ್ಣಾಗುವ ಸಮಯ ಹತ್ತಿರವಾಯ್ತು...ಪರವಾಗಿಲ್ಲ ಬಿಡು ಬ್ರೇವ್ ಬ್ರೀಮ್ ನಿನಗೆ ಒಳ್ಳೆಯ ಜೋಡಿ ಆಗ್ತಾನೆ",,,,ಎನ್ನುತ್ತಾ ನನ್ನನ್ನು ಕೀಟಲೆ ಮಾಡುವಾಗ ನನ್ಗಾದ ನಾಚಿಕೆ ..ಓಹ್..ನಾನಾಗಲೇ ಹೆಣ್ಣಾಗಿಬಿಟ್ಟೆ ..ಎನಿಸತೊಡಗಿತ್ತು....ಬ್ರೇವ್ ಬ್ರೀಮ್ ನ ಕನಸೂ ಕಾಣತೊಡಗಿದೆ....






ಸ್ನೇಹಿತರೇ...ಮೀನುಗಳ ಕೆಲ ಜಾತಿಯಲ್ಲಿ ತಮ್ಮ ಜೀವನದ ಮೊದಲ ಘಟ್ಟ ಹೆಣ್ಣಾಗಿ ನಂತರ ಗಂಡಾಗಿ ಮಾರ್ಪಡುವುದು ಕಂಡುಬರುತ್ತದೆ ಇವುಗಳನ್ನು ದ್ವಿಲಿಂಗತೆ-ಅಥವಾ ಹರ್ಮಾಫ್ರೊಡೈಟಿಸಂ ಎನ್ನುತ್ತಾರೆ.. ಮತ್ತೆ ಕೆಲವು ಮೊದಲಿಗೆ ಗಂಡಾಗಿದ್ದು ನಂತರ ಹೆಣ್ಣಾಗುವ ಸ್ವಭಾವವನ್ನು ಹೊಂದಿರುತ್ತವೆ...ನಮ್ಮ ಕಥಾ ನಾಯಕ...ಏನು?..ನಾಯಕ ..ಅಂದೆನೇ...ಅಲ್ಲಲ್ಲ....ನಾಯಕಿ....ಛೇ...ಏನೋ ..ಒಂದು...,,ಲವ್ಲಿ ಬಾಸ್ ನಂತೆ...


ಎರಡೂ ಲಿಂಗಗಳು ಒಮ್ಮೆಲೇ ಒಂದೇ ಜೀವಿಯಲ್ಲಿ ಕಂಡುಬಂದರೆ ಅದನ್ನು ಏಕಕಾಲಿಕ ದ್ವಿಲಿಂಗಿಗಳು (simultaneous or synchronous hermophrodites) ಎಂದೂ...ಸರದಿಯ ಮೇಲೆ ಅಂದರ ಒಂದರ ನಂತರ ಒಂದು ಬಂದರೆ ಅದಕ್ಕೆ ಸರದಿ ದ್ವಿಲಿಂಗಿ (alternate hermophrodiism) ಎನ್ನಲಾಗುತ್ತೆ........


ಹೇಗಿತ್ತು...ಈ science information ..ಸೇರಿದ ಕಥೆ..ಆತಂಕಥೆ....???

Wednesday, April 21, 2010

ಹುಚ್ಮುಂಡೆ ಮದ್ವೆ..ಉಂಡವನೇ....


ಭಸ್ಮಾಸುರನ ಪವರ್ರು ಶಿವನಿಗೇ ಗೊತ್ತು

ಏನೋ..ಪಾಪ ಭಕ್ತ ಅಂದಿದ್ದೇ ವಿಪತ್ತು

ವರ ಕೊಟ್ಟ, ಬಂತು ಶಿವನ ಅಸ್ತಿತ್ವಕ್ಕೇ ಆಪತ್ತು

ಅದಕ್ಕೇ ನೋಡಿ ಬಿ.ಸಿ.ಸಿ.ಐಗೇ ಬಂದಿದೆ ಕುತ್ತು

ಐಪಿಎಲ್ ಅನ್ನೋ ಅಸುರ ಹುಟ್ಕೊಂಡ

ಹಣ, ಹೆಂಡ ಹುಡ್ಗೀರು, ಬೆಟ್ಟಿಂಗು ಉಂಡ

ಬೆಳೆದ ಅಗಾಧ..ಆಗಿ ಟೆಸ್ಟು-ಒಂಡೇಗೇ ಗಂಡ

ಜನಕ್ಕೆ, ಆಟ ಆಡೋರ್ಗೆ ಅನ್ನಿಸ್ತು ಬೇರೆಲ್ಲಾ ದಂಡ

ನಿಜವಾದ ಆಟ, ನಟರ ನಟನೆ ತೂರಿತ್ತು ಗಾಳಿಗೆ

ಸಿಕ್ಕಿಬಿದ್ರು, ಬೇರೇನೂ ಕಾಣ್ಲಿಲ್ಲ ಐಪಿಎಲ್ ದಾಳಿಗೆ

ಭಾವಿ ಇಂಜನೀಯರೊಬ್ಬ ಬಲಿಯಾದ ಆಸೆಗೆ

ಸಿಡಿಸಿದ್ರು ಬಾಂಬು.. ಸೆಮಿಫೈನಲ್ಲು ಬಾಂಬೆಗೆ

ಈಗ ನೋಡಿ ಮೋದಿ-ಐಪಿಎಲ್ ದೇ ಎಲ್ಲೆಲ್ಲೂ ಮೋಡಿ

ಬರ್ತಾರೆ ದುಡ್ಮಾಡೋಕೆ ವಿದೇಶದಿಂದ ಆಟ್ಗಾರ್ರು ಓಡಿ

ಟಿಕೆಟ್ ದುಡ್ಡು, ಪ್ರೇಕ್ಷಕರ ರಕ್ತ ಹರಿದೈತೆ ಕೋಡಿ

ಹುಚ್ಮುಂಡೆ ಮದ್ವೇಲಿ ಉಂಡವನೇ ಜಾಣ.. ಅದ್ಕೇ ಹೇಳೋದು ನೋಡಿ

Monday, April 12, 2010

ತಿಳಿ ನೀರು - ನಿರ್ಮಲ ಕೊಳ



ತಿಳಿ ನೀರು- ನಿರ್ಮಲ ಕೊಳ


ಮುಳುಗಿ ಏಳ್ತಾನೆ ಸೂರ್ಯಾನೂ


ತಾಳಲಾರದೆ ಬಿಸಿಲ ಝಳ


ಕೊಳದಲ್ಲಿ ಹತ್ತು ಹಲವು ಜಾತಿ


ಕೆಂಪು, ಹಳದಿ, ಹಸಿರು, ಕಪ್ಪು ಮೀನು



ದೊಡ್ಡದು ಚಿಕ್ಕದಕ್ಕೆ ಹೇಳ್ತು ಮೆದುವಾಗಿ


ನನ್ಪಾಡ್ಗೆ ನಾನಿರ್ತೀನಿ ಇರ್ಬೌದಲ್ಲ ನೀನೂ


ಆಮೆನೂ ಇತ್ತು ಅಲ್ಲೇ ವಾಸವಾಗಿ


ಮೊಸಳೇನೂ ಬರ್ತಿತ್ತು, ಹೋಗ್ತಿತ್ತು


ತಂಟೆಯಿಲ್ಲ ತಕರಾರಿಲ್ಲ ಎಲ್ಲಾ ಇದ್ವು ಹಾಯಾಗಿ



ಕೆಂಪು ಕಪ್ಪಿಗೆ ಹಲೋ ಅಂದ್ರೆ


ಹಳದಿ ಹಸಿರಿಗೆ ಚಲೋ ಅನ್ತಿತ್ತು ಆಟಕ್ಕೆ


ಅವರವರ ಲೋಕದಲ್ಲಿ ಹಾಯಾಗಿದ್ವು


ಗುರಿಯಾಗದೇ ಯಾವುದೇ ಕಾಟಕ್ಕೆ



ಆಗೊಮ್ಮೆ ಆಗ್ಬಾರ್ದು ಆಗೇ ಹೋಯ್ತು


ಸೂರ್ಯ ತನ್ನ ಬಿಸಿಲಲ್ಲಿ ತಾನೇ ಸುಡ್ತು


ಕಪ್ಪು ಮೋಡ ಆಕಾಶದಲ್ಲಿ ಗುಡುಗು ಸಿಡ್ಲು


ಗಾಳಿ ಮಳೆಗೆ ಹಾರಿದ್ವು ಎಷ್ಟೋ ಗುಡ್ಲು


ಅಲ್ಲೆಲ್ಲಿಂದ್ಲೋ ಹರ್ದು ಬಂತು ಅಪಾರ ನೀರು


ಬಗ್ಗಡ ಆಯ್ತು ತಿಳಿಯಾಗಿದ್ದ ಕೊಳದ ನೀರು

Thursday, March 25, 2010

ಒಂದ್ಗುಟ್ಕು ಆಕ್ಕೊಂಡ್ರೆ ಬ್ಲಾಗು

ನನ್ಪಾಡಿಗ್ ನಾನಿದ್ದೆ


ಸಂಸೋದ್ನೆ ಮಾಡ್ತಿದ್ದೆ


ಅದೂ ಇದೂ ಬರೀತಿದ್ದೆ


ಕವ್ನಾಂತ ಒಂದಿಷ್ಟು ಗೀಚ್ತಿದ್ದೆ


ನಾಟ್ಕದ್ದೂ ಗೀಳು ಇದ್ದದ್ದೇ


ಬಾಳ್ವೇಗೆ ಸಂಸೋದ್ನೆ


ಉಲ್ಲಾಸ್ಕೇ ಗೀಚೋದ್ನೆ


ಮಾಡ್ಕಂಡ್ ನನ್ಲೋಕ್ದಾಗೆ


ಅಕ್ಕಿಯಂಗೆ ಇರ್ತಿದ್ದೆ


ಗೀಚಿದ್ದು ಪೇಪರ್ನ್ನಾಗಿಡ್ತಿದ್ದೆ


ಆವಾಗಾವಾಗ ಬರ್ದಿದ್ದು ನಾನೇ ಓದ್ತಿದ್ದೆ


ನನ್ನ್ ಬೆನ್ನ ನಾನೇ ತಟ್ತಿದ್ದೆ.




ಒಂದ್ಸರ್ತಿ ‘ಮನ್ಸು' ಅಚ್ಬುಡ್ತು


ಬ್ಲಾಗ್ಲೋಕಕ್ಕೆ ನನ್ನ ತಂದ್ಬುಡ್ತು


ಮೊದ್ಮೊದ್ಲು ಒಂದೊಂದು


ಆಮೇಲಾಮ್ಯಾಕೆ ಹತ್ತೊಂದು


ಸ್ನೇಯಿತ್ರು ಅತ್ಸ್ ಬುಟ್ರು ಅಟ್ಟ..


ಬಲ್ ಬರೀತೀ ಅಂದ್ಬುಟ್ರು


ನಾನೂ ಅತ್ತೇ ಬುಟ್ಟೆ..ಅಟ್ಟ


ಮುಟ್ತಾ ಓದೆ ಒಂದೊಂದೇ ಘಟ್ಟ


ಈಗ ಬ್ಲಾಗ್ ಅಂದ್ರೆ ಒಂದ್ರೀತಿ


ಕುಡ್ಕಂಡoಗೆ ಕಂಠ್ಮಟ್ಟ


ಇಂಗೇ ಬಂದ್ಬುಟ್ರೆ ಮೂಡು


ಮೂಡ್ತಾದೆ ಬರಹ್ದಾಗೆ ಕೋಡು


ಪದ್ಗೋಳ್ ಹಿಡೀತಾವೆ ಜಾಡು


ಸೇರೇ ಬಿಡ್ತಾವೆ ಬ್ಲಾಗನ್ನೋ ಬೀಡು.


ಎಂಡ ಎಂಡ್ತಿ ಆಗೋಯ್ತು ಅಳ್ತು


ಬ್ಲಾಗ್ ಅನ್ನೋ ಚಟಕ್ಕೆ


ಜಲನಯನ ಬೀಳ್ತು.

Tuesday, March 16, 2010

ನಂಗೊತ್ತಿಲ್ಲ...ಹೋಗೋ ತರ್ಲೆ... ಓದ್ಕೋ ಹೋಗು










ಚಿತ್ರಗಳು ಅಂತರ್ಜಾಲ ಕೃಪೆ...
(ಒಂದು ಚಿತ್ರ ಅಚಾತುರ್ಯದಿಂದ ಕ್ಲಿಕ್ ಆಗಿತ್ತು ಕ್ಷಮೆ ಇರಲಿ)

ಅಂಕಲ್


ಏನು ಪುಟ್ಟಾ..?


ಬಿಡದಿಗೆ ಹೋಗಿದ್ರಾ...?


ಇಲ್ಲಲ್ಲಪ್ಪಾ..ಯಾಕೋ..ಹಾಗೆ ಕೇಳ್ದೆ..?


ಅಲ್ಲ ಯಾರೋ ಎಳೆ ವಯಸಿನ ಸ್ವಾಮಿಗಳು ಅವ್ರಂತೆ ಅಲ್ಲಿ...!!


ಏನೋ ಗೊತ್ತಿಲ್ಲ ಪುಟ್ಟ...ಹೂಂ..ಯಾರೋ ಹೇಳಿದ್ದು ನೆನಪೈತೆ...


ಅಲ್ಲ ಅಂಕಲ್ ಟಿವಿ, ಪೇಪರ್ ಎಲ್ಲದ್ರಲ್ಲೂ ಅದೇ ಸುದ್ದಿ ನೀವು ನೋಡಿಲ್ಲ್ವಾ..?


ಇಲ್ಕಣ್ ಪುಟ್ಟ...ಕಬ್ಬು ಕೊಯ್ಲಾಗೈತೆ ..ಗಾಣ ಆಡಿಸ್ಬೇಕು...ಪುರ್ಸತ್ತಿಲ್ಲ


ಅದೇ ಅಂಕಲ್ ಅಲ್ಲಿ ಉಗಾದಿ ಸಮಯದಲ್ಲಿ ರಾಸಲೀಲೆ ಯಾಕಾಯ್ತು ನಿಮ್ಮನ್ನ ಕೇಳೋಕೆ..


ಜನ್ಮಾಷ್ಠಮೀಲೀ..ರಾಸಲೀಲೆ ಓಕೆ...ಉಗಾದಿ ಸಮಯದಲ್ಲಿ ಯಾಕೆ...?


ಅಯ್ಯೋ ಅಂಕಲ್ ನಿಮಗೆ ಬೇಸಾಯ..ನೈಸ್ ರೋಡು ಹೊಲ ಗದ್ದೆ ಕಬಳಿಕೆ ಇದೇ ಚಿಂತೆ


ಅಯ್ಯೋ ದೊಡ್ಡ ಕತೇನೇ ಆಗಿದೆ ಅಲ್ಲಿ ....ಗೊತ್ತಿಲ್ಲವಾ...?


ನಮ್ಗೊತ್ತಿಲ್ಲ ಮಗು... ಅಗೋ ನಿಮ್ಮಪ್ಪ ಬಂದ ಅವ್ರನ್ನೇ ಕೇಳು...


ಅಯ್ಯೋ ನಮ್ಮಪ್ಪಂಗೆ ಇವೆಲ್ಲಾ ಗೊತ್ತಾಗೊಲ್ಲ..ನಂಗೊತ್ತಿಲ್ಲ ಮಗು ಅಂತಾರೆ..


ಏನೋ ಅದು ತರ್ಲೆ ನಿಂದು....ಏನು ಶಂಕರೇಗೌಡ್ರ ತಲೆ ತಿನ್ತಾ ಇದ್ದಾನೆ ,,?


ಅಯ್ಯೋ ಅದೇನೋ ಸ್ವಾಮಿ ಅಂತೆ ಯುಗಾದಿ ಸಮಯದಾಗೆ ರಾಸಲೀಲೆ ಅಂತೆ...


ನನಗೇನೂ ಗೊತ್ತಿಲ್ಲ ಅಂದೆ.......
ಏನದು...ಮೇಷ್ಟ್ರೆ...?


ಅಯ್ಯೋ ಅದೊಂದು ಅವಾಂತರ ಬಿಡಿ ವಾಕ್ ಹೋಗ್ತೀವಲ್ಲ ಆಗ ಹೇಳ್ತೀನಿ..


ಅದಲ್ಲಪ್ಪಾ.....!!!


ಅದೇನೋ ನಿನ ರಾಗ....?


ಮತ್ತೆ ಟಿವಿ ಸಂದರ್ಶನ ಕೊಟ್ಟು ಸ್ವಾಮಿಗಳು ಎರಡೇ ಮಾತು ಕನ್ನಡದಲ್ಲಿ ಹೇಳಿದ್ದು


ಆಮೇಲೆ ಪೂರ್ತಿ ಇಲಿ ತಿಂದಹಾಗೆ ಇಂಗ್ಲೀಷು..ಯಾಕಪ್ಪಾ ಬಿಡದಿ ಕರ್ನಾಟಕದಲ್ಲೇ ಅಲ್ವಾ ಇರೋದು..?


ಹೌದು ಕಣೋ...


ಮತ್ತೆ ಅವ್ರಿಗೆ  ಸರಿಯಾಗಿ ಕನ್ನಡಾನೇ ಬರೋಲ್ಲ ಇನ್ನು ಭಕ್ತರಿಗೆ ಏನು ಉಪದೇಶ ಮಾಡ್ತಾರೆ..?


ಗೊತ್ತಿಲ್ಲ ಕಣೋ...


ಮತ್ತೆ..ಯಾಕೆ ಹೀಂಗಾಯ್ತು ಅಂತ ಟಿ.ವಿ.ಯವರು ಕೇಳಿದ್ರೆ...ಇನ್ನುಮುಂದೆ ಕೇರ್ಫುಲ್ ಆಗಿ ಇರ್ತೀನಿ..


ಎಲ್ಲಾ ಕೇರ್ ಫುಲ್ ಆಗಿ ಮಾಡ್ತೀನಿ ಅಂದ್ರಲ್ಲಾ...??


ಅಂದ್ರೆ..ವೀಡಿಯೋ ..ಫೋಟೋ ತೆಗೆಯೋಕೆ ಆಗದ ಹಾಗೆ ಅಂತಾನಾ...?


ಲೇ...ತರ್ಲೆ ಕಣೋ ನೀನು,..ಹೋಗು ಓದ್ಕೋ....



...................ನಿಜಕ್ಕೂ ಆಗ್ತಾ ಇರೋದು ಏನು...ಯಾರನ್ನ ಕೇಳಿದ್ರೂ ನಮಗೆ ಗೊತ್ತಿಲ್ಲ ಅಂತಾರಲ್ಲಾ ಈ ವಿಷಯದಲ್ಲಿ.....ಹಾಂ....??!!

Monday, March 15, 2010

ಆತ್ಮೀಯರೇ ನಿಮಗೆಲ್ಲ ಯುಗಾದಿಯ ಮನಃಪೂರ್ವಕ ಹಾರ್ದಿಕ ಶುಭಾಷಯಗಳು


ಆದಿ ಅಂತ್ಯಕಾಗುವ ಗಾದಿ
ಗಾದಿಯೇರಲಿದೆ ಉಗಾದಿ
ಕಹಿಗಣಿಮಾಡೋ ಗಾದಿ
ವರುಷ ಹರುಷಕಿದು ಗಾದಿ
ಅಂದಿತ್ತು ಇಂದಿದೆ ಮುಂದಾಗುವುದು
ಬಲಿತು ನೆರೆತು ಬಂದರೂ ಸಾವು
ಮಳೆಯಿರಲಿ ಬರಬರಲಿ
ಚಿಗುರೊಡೆವುದು ಮಾವು
ಗರಿಗರಿಯಾಗಿ ಆಲೆಮನೆ ಬೆಲ್ಲ
ನೋವುಂಡವಗೆ ಬೇವೇನು..?
ತಾಳಿದವಗೆ ಬೆಲ್ಲದ ಜೇನು
ಬಿರಿದನೆಲ ಮತ್ತೆಜೀಗುಡುವುದು
ಕಾಲುವೆಗದ್ದೆ ನೀರುಣುವುದು
ಮಾವಿನ ತಳಿರು, ಬಾಳೆಯ ಹಸಿರು
ಕೆಸರುಂಡ ಕೈ, ಕೆನೆಹಾಲು ಮೊಸರು
ಮನವರಳಲಿ, ತನು ಚಿಗುರಲಿ
ನಮ್ಮನಿಮ್ಮಲ್ಲಿಗೆ ಚೈತ್ರ ಶುಭತರಲಿ
ನವ ವರ್ಷದ ಸೊಗಡಿನಂದಕೆ
ಸಾಕ್ಷಿಯಾಗಲಿ ಈ ಉಗಾದಿ
ಆದಿ ಅಂತ್ಯಕಾಗುವ ಗಾದಿ

Monday, March 8, 2010

ಮಾ ತುಝೆ ಸಲಾಂ
(ಪ್ರಕಾಶ್ ನ ಇಟ್ಟಿಗೆ ಸಿಮೆಂಟಿಗೂ ಸಲಾಂ)


ಅಣುವಾಗಿ, ಕಣವಾಗಿ ಬೆಳೆವೆ ಜೀವವಾಗಿ
ಅವಳೊಡಲಲಿ ಅವಳ ಕರುಳ ಕುಡಿಯಾಗಿ
ಮಮ್ಮಲತೆಯ ಮರುಗುಡಿಯ ಮರಿಯಾಗಿ
ತಾಯಋಣಕೆಣೆಯಿಲ್ಲ ತೀರಿಸಲಾದೀತೇ
ಪಡೆದು ಬಂದರೂ ಎಷ್ಟೇ ಮರುಜನ್ಮ?

 

ಅಲ್ಲಿ ಅವಳ ರಕ್ತವೇ ಜೀವ - ನನಗೆ ಜನ್ಮ
ನೋವಿನಲೂ ನಲಿವಳು ಪಡೆದು ಮರುಜನ್ಮ
ಬಸಿರಲಿ ರಕ್ತ ಉಸಿರಲಿ ಮೊಲೆಯೂಡುವಳು
ತಾಯಋಣಕೆಣೆಯಿಲ್ಲ ತೀರಿಸಲಾದೀತೇ
ಪಡೆದು ಬಂದರೂ ಎಷ್ಟೇ ಮರುಜನ್ಮ?

 

ನೀಡಿ ಸೆರಗಾಸರೆ ತಾ ನೆನೆದರೂ ಮಳೆಯಲಿ
ಮಡಿಲ ಬಿಸಿ ತಾ ಸೊರಗಿದರೂ ಛಳಿಯಲಿ
ಮೊಲೆಯುಣಿಕೆಗೆ ದಣಿವಿಲ್ಲ ಹಸಿವಿದ್ದರೂ ಒಡಲಲಿ
ತಾಯಋಣಕೆಣೆಯಿಲ್ಲ ತೀರಿಸಲಾದೀತೇ
ಪಡೆದು ಬಂದರೂ ಎಷ್ಟೇ ಮರುಜನ್ಮ?

 

ಕೇಳುವಳು ಕಂದಾ ಹಸಿವೆಯೇ ಹೇಳು?
ಬಿದ್ದೆಯಾ ಪುಟ್ಟಾ ಆಯಿತೇ ಗಾಯ ಹೇಳು?
ಅಲ್ಲಿ ಗಾಜಿನ ಚೂರಿದೆ ನಾ ಬರುವೆ ತಾಳು
ತಾಯಋಣಕೆಣೆಯಿಲ್ಲ ತೀರಿಸಲಾದೀತೇ
ಪಡೆದು ಬಂದರೂ ಎಷ್ಟೇ ಮರುಜನ್ಮ?

 

ನೋಯಿಸಿದರೂ ಅವಳ ಮನ ಹಲವೊಮ್ಮೆ
ಅಮ್ಮ ಎಂದೊಡನೆ ನಕ್ಕು ಬಿಡುವಳು ಎಲ್ಲಮರೆತು
ಮುತ್ತಿಗಾಗಿ ಹೆತ್ತವಳ ರಕ್ತ ಕಣ್ಣೀರಿಗೆ ಕಾರಣವಾದರೂ
ಅಮ್ಮಾ ತಪ್ಪಾಯ್ತು ಎಂದೊಡನೆ ಅಪ್ಪಿಕೊಂಡುಬಿಡುವಳು
ತಾಯಋಣಕೆಣೆಯಿಲ್ಲ ತೀರಿಸಲಾದೀತೇ
ಪಡೆದು ಬಂದರೂ ಎಷ್ಟೇ ಮರುಜನ್ಮ?