Monday, May 21, 2012

ನಂಗೊತ್ತಿಲ್ಲ ಮಗಾ




ನಂಗೊತ್ತಿಲ್ಲ ಮಗಾ
ಪುಟ್ಟಾ..ಏನ್ಲಾ ಮಾಡ್ತಿದ್ದಿಯಾ?
ಏನಿಲ್ಲಪ್ಪಾ.. ಒಸಿ ಟೀವಿ ನೋಡ್ತಾ ಇವ್ನಿ,,, ತೋಳ ಬಂತು ತೋಳ ಟೀವಿನಾಗೆ ಕತೆ ಬತ್ತಾ ಐತೆ
ಅಪ್ಪಾ..ಒಂದ್ಯಿಸ್ಯ..... ಅಲ್ಲಾ ಆ ಹೈದ ಸುಮ್ ಸುಮ್ನೆ ಯಾಕೆ ಆಟೊಂದ್ ಕಿತ ಅಳ್ಳಿ ಜನ್ಗೊಳ್ನ ’ತೋಳ ಬಂತಪ್ಪೋ ತೋಳ’ ಅಂತ ಎದಿರ್ಸಿದ್ದು.... ಅದ್ಕೇಯಾ ನಿಜ್ಕೂ ತ್ವಾಳ ಬಂದ್ರೂ ಯಾರೂ ಸಾಯಕ್ಬರ್ನಿಲ್ಲ
ಊಂ ಕಣ್ಮಗ, ಅದ್ಕೇ ಯೋಳೋದು ಒಂದಪ ಸುಳ್ ಯೋಳಿದ್ರೂ ಓಗ್ಲಿ ಬಿಡು ಏನೋ ತಪ್ಪಾಗ್ಯದೆ ಅಂತ ಮನ್ನಿಸ್ತಾರೆ...ಕಿತಾ ಕಿತಾ ಅಂಗೇ ಮಾಡಿದ್ರೆ..ಅದ್ನ ಜನ ಅಚ್ಕೊಳ್ಳೊಲ್ಲ...ಅಂತವ್ರನ್ನ ನಂಬಾಕೂ ಓಗಲ್ಲ...
ಊಂ... ನಮ್ಮಾಜಿ ಮುಮಂ ಗ್ಳೂ ಆಟೊಂದು ಒಳ್ಳೆ ಎಸ್ರ್ ಮಾಡಿದ್ರು, ಜನ ಆಸೀರ್ವಾದಾನೂ ಮಾಡಿದ್ರು..... ಈ ಪಾಟಿ ತಮಾಸಿ ಮಾಡಿ ಜನಾನ ಯಾಮರ್ಸಿ .. ಈವಾಗ ಅಯ್ಯೋ ತ್ವಾಳ ಬಂದೈತಿ ನನ್ಕಾಪಾಡ್ರಿ ಅಂದ್ರೆ...ಯಾರೂ ನಂಬಾಕಿಲ್ಲ ಅಲ್ವಾ???
ಅಲ್ವಾ ಮತ್ತೆ.. ಜನಾನೂ ಶ್ಯಾನೆ ಬುದ್ದಿ ಕಲ್ತ್ಕಂಡವ್ರೆ... ಶ್ಯಾಲೆ, ದುಡ್ಡು, ಎಂಡ, ಇಂತಾವೆಲ್ಲಾ ಈಸ್ಕೊಂಡೂ...ಒತ್ತೋ ಕಡೆ ಓಟ್ ಒತ್ತಾಕೋ ಮಟ್ಟಕ್ ಬಂದವ್ರೆ...  ತ್ವಾಳ ಅಂತ ಅಂದ್ಕಂಡು ಕುರಿ ಬಂಡ ಕತ್ತರ್ಸಿ ಮಾರ್ಕೊಂಡು, ಬಲ್ತ್ ಮ್ಯಾಲೆ ಕಟ್ಕನ್ಕೊಟ್ಟು  ದುಡ್ಮಾಡೋ ಕುರಿ ಕಾಯೊರ್ನ ನಂಬಾಕಿಲ್ಲ...
ಆದ್ರೆ...ಅವರು ನಾನು ಬೋ ಸಾಚಾ, ಬೇಕಾದ್ರೆ ಸ್ವಾಮಿಗಳ್ನ ಕೇಳಿ ಅಂತ ಯೋಳ್ತಾರಲ್ಲಾ... ಸ್ವಾಮ್ಗೋಳು ಶಾಮೀಲಾ ಅಂಗಾರೆ...?
ನಂಗೊತ್ತಿಲ್ಲ ಮಗ

Saturday, May 5, 2012

ಕಾಯ್ತಾ ಇವ್ನಿ ಬತ್ತದಾ ಮಳೆ...???

Foto: Internet

ಕಾಯ್ತಾ ಇವ್ನಿ ಬತ್ತದಾ ಮಳೆ...???

ಅಪ್ಪ ಯೋಳ್ತಿದ್ದ – ಯಪ್ಪಾ ಯಾ ಪಾಟಿ ಮಳೆ!!
ತೊಯ್ದು ತೊಯ್ದು ಬುರ್ದೆ ಆಗ್ಬುಟ್ಟೈತೆ ಇಳೆ
ಕೆರೆ ಕೋಡಿ ಓಯ್ತಿತ್ತಂತೆ, ಒಂದೇ ವಾರದಲ್ಲಿ
ದಾಟೋಕೋದ ಕುರಿ ದನ ಕೊಚ್ಚೋಗ್ನೀರಲ್ಲಿ.

ವಾರದಿಂದ ಮುದ್ಕ ಆಕಾಸ ನಿಟ್ಟಿಸ್ತಾ ಇರ್ತಾನೆ
ಯಪ್ಪೋ ಒಳೀಕ್ಬಾ, ಬೋ ಬಿಸ್ಲು ಸೂರ್ಯ ಸುಡ್ತಾನೆ
ನನ್ಮಾತು ಕೇಳಾಂಗಿಲ್ಲ ರೈತನ್ಮನ್ಸು ರೋಸಿದ್ರೆ ಇಂಗೆ
ಯೋಳ್ತಾನೆ ಮೂರ್ನೇ ವರ್ಸ ಬರ್ಗಾಲ ಬಂದ್ರೆ ಎಂಗೆ?

ಬೋ ..ಅಂತ ಅರ್ಚೋದು ದನ್ಗೋಳು ದನದಟ್ಟಿಲಿ
ಒಟ್ಟೆ ಬೆನ್ತಾಕೈತೆ ಕುರಿಗೋಳು ಬಡ್ವಾಗವೆ ಕುಂತಲ್ಲಿ
ಗೌಡಂಗೆ ಅಂಬ್ಲಿ ದಾಸೋವ ಮಾಡಾಕೆ ಯೋಸ್ನೆನಂತೆ
ಅಕ್ಪಕ್ಕದ್ ಅಳ್ಳಿ ಬಡ್ಮಕ್ಳು ಮಂದಿ ಬತ್ತಾರೆ ಸಂತೆ ಸಂತೆ

ಬಡ್ಕಲಾಗಿರೋ ನಾಗೇಸಾ ಮಂಡ್ರಾಯ್ನ್ ಎತ್ಕಂಬಂದ
ಸಿದ್ದೇಸ ಮಂಗ್ಳಾರ್ತಿ ಎತ್ತೋದು ಐಕ್ಳು ಕುಣ್ಯೊದ್ಚಂದ
ಉಯ್ಯೋ ಉಯ್ಯೋ ಮಂಡ್ರಾಯ ಬಾಳೆ ತ್ವಾಟಕ್ನೀರಿಲ್ಲ
ಉಯ್ಯೋ ಉಯ್ಯೋ ಮಂಡ್ರಾಯ ಬತ್ತ ಒಣ್ಗಿ ಓಯ್ತಲ್ಲಾ

ಇದ್ಕಿದ್ದಂಗೆ ಮಟ್ಮಟ ಮದ್ಯಾನ್ನ ಕವ್ಕಂಬತ್ತು ಕತ್ಲಾ
ಮಲ್ಗಿದ್ದಪ್ಪ ಎದ್ದ ಕುಸ್ಕುಸಿ, ಕೂಗ್ದ ಎಂಕ್ಟ ಮಳ್ಬತ್ಲಾ
ಅವ್ಮಾನ ಇಲಾಕೆವ್ರು ಅಂದವ್ರೆ ವಾರಪೂರಾ ಇಂಗೇ
ಅಪ್ಪಾಂದ ಬಾಲಾ ನನ್ಮೀಸೆಯೂ ಬೆಳ್ಗಾಗಿಲ್ಲ ಅಂಗೇ

ನೋಡ್ತಾ ನೋಡ್ತಾ ಕಪ್ಮೋಡ ಕವ್ಕೊಂಡ್ವು ಆಕಾಸಾ
ದಪ್ ದಪಾ ಬಿತ್ತು ಅನಿ ನೋಡೀ ಕುಸೀನಾ ಎಂಕ್ಟೇಸಾ?
ಬಿರ್ದಿದ್ ನೆಲ ಸೊಳ್ ಅಂತ ಈರ್ಕೊಳ್ತು ಬಿದ್ದಿದ್ದನಿ
ಘಮ್ ಅಂತು ಮಣ್ ವಾಸ್ನೆ, ಓಣಿತುಂಬಾ ಅಪ್ಪಂದನಿ

ಗುಡ್ಗು, ಸಿಡ್ಲು, ದೋ ಮಳೆ, ಕುಣೀತು ಅಪ್ಪನ್ಬಿಳಿ ಮೀಸೆ
ಅಂದ ಮಾಡಮ್ಮೀ ಮೆಣ್ಸಿನ್ ಕಾಯ್ ಬಜ್ಜಿಗಾಗೈತೆ ಆಸೆ
ಸಂಜೆ ಗಂಟ ಬುಡ್ನೇ ಇಲ್ಲ ಸುರೀತಾನೇ ಇತ್ತು ಮಳೆ
ಆಕಾಸ್ದಾಗೂ ಕಮ್ಮೀನೇ ಆಗ್ಲಿಲ್ಲ ಕವ್ದಿದ್ಮೋಡದ್ ಬೆಳೆ

Sunday, April 15, 2012

ಎದೆಯ ಮಿಡಿತ (ಮತ್ತೊಂದು ಕರವೋಕೆ)




ದಿಲ್ ತಡಪ್ ತಡಪ್ ಕೆ ಕೆಹ್ ರಹಾ ಹೈ...
ಚಿತ್ರ: ಮಧುಮತಿ, ಸಂಗೀತ: ಸಲೀಲ್ ಚೌಧರಿ, ಗಾಯಕರು: ಮುಖೇಶ್,
..........ಎದೆಯ ಮಿಡಿತದ ಹಿಡಿತ...........
ಎದೆಯ ಮಿಡಿತ ಹಿಡಿತ ತಪ್ಪಿ ಒಪ್ಪಿ ಕೂಗಿದೆ
ಬಾ ನಿನ್ನ ಸನಿಹ ಬಯಸಿದೆ, ಬಾ ಬಾರೆ ಬಾ ಎಂದಿದೆss.../೨/

ನೀನೇ ಇರದ ಮರದ ತಂಪ ಸೊಂಪು ಸೋತಿದೇss
ಸುಮದ ಮಧುರ ಸುಧೆಯ ಇಂದು ಬನವು ಬಯಸಿದೇss /ನೀನೇ ಇರದ/
                   ಇಂದು ಬನವು ಬಯಸಿದೆ /೨/                                           (ಗಂಡು ದನಿ)

ಎದೆಯ ಮಿಡಿತ ಹಿಡಿತದಲ್ಲೇ ತಾನು ನೆಲಸಿದೆ
ನಿನನ್ನೇ ನೆನೆದು ನಲಿದಿದೆ, ಓ ನಲ್ಲ ನೀನೇ ಎಂದಿದೇss ../೨/
ನೀನು ಬಂದು ನನ್ನ ಜೀವ ಹಿತವ ಕಂಡಿದೇ
ಜೀವಿಸಿಹೆನು ನಿನ್ನ ಪ್ರೀತಿ ಉಸಿರ ತುಂಬಿದೇ..ss /ನೀನು ಬಂದು/
                             ಪ್ರೀತಿ ಉಸಿರ ತುಂಬಿದೇ/೨/

ಎದೆಯ ಮಿಡಿತ ಹಿಡಿತ ತಪ್ಪಿ ಒಪ್ಪಿ ಕೂಗಿದೆ
ಬಾ ನಿನ್ನ ಸನಿಹ ಬಯಸಿದೆ, ಬಾ ಬಾರೆ ಬಾ ಎಂದಿದೆss...                                    (ಗಂಡು ದನಿ)
ಎದೆಯ ಮಿಡಿತ ಹಿಡಿತದಲ್ಲೇ ತಾನು ನೆಲಸಿದೆ                                                (ಹೆಣ್ಣು ದನಿ)
ನಿನನ್ನೇ ನೆನೆದು ನಲಿದಿದೆ, ಓ ನಲ್ಲ ನೀನೇ ಎಂದಿದೇss ..


ಮುಗುಳು ನಗೆಯ ಬೀರೋ ನಿನ್ನ ಸೊಬಗು ಇಲ್ಲಿದೇ..
ನಾನು ಎಲ್ಲೋ ಹೃದಯವೆಲ್ಲೋ ಒಂದೂ ತಿಳಿಯದೇ ss.../೨/          (ಗಂಡು ನಂತರ ಹೆಣ್ಣು ದನಿ)
                   ಎಲ್ಲೋ ಒಂದೂ ತಿಳಿಯದೇ../೨/
ಎದೆಯ ಮಿಡಿತ ಹಿಡಿತ ತಪ್ಪಿ ಒಪ್ಪಿ ಕೂಗಿದೆ
ಬಾ ನಿನ್ನ ಸನಿಹ ಬಯಸಿದೆ, ಬಾ ಬಾರೆ ಬಾ ಎಂದಿದೆss...                                         (ಗಂಡು)
ಎದೆಯ ಮಿಡಿತ ಹಿಡಿತದಲ್ಲೇ ತಾನು ನೆಲಸಿದೆ
ನಿನನ್ನೇ ನೆನೆದು ನಲಿದಿದೆ, ಓ ನಲ್ಲ ನೀನೇ ಎಂದಿದೇss ..                                         (ಹೆಣ್ಣು)                         
                         

Wednesday, April 11, 2012

ಅಮ್ಮಾ ನಾ -ನಿನಾದದ್ದು ತಪ್ಪಾ...??


ಚಿತ್ರ: ದಿ ಹಿಂದು ದಿನಪತ್ರಿಕೆ (ಕೃಪೆ)


ಹೆತ್ತ ಕರುಳಿನ ಆಕ್ರಂದನ

ಹೆತ್ತ ಕರುಳಲ್ಲಿ ಬಿದ್ದಿತೇ ಬೆಂಕಿ..!!
ನವಮಾಸ ರಕ್ತ ಮಾಂಸ ಹಂಚಿ
ಉಸಿರ್ತುಂಬಿ ಜೀವ ಕೊಟ್ಟು..
ಪ್ರಾಣ ಹಿಂಡೋ ಪ್ರಸವ ವೇದನೆ
ಹಸುಗೂಸು ಕಂದಮ್ಮನ ಅಳಲಿಗೆ
ಹೇಗೆ ಇಲ್ಲವಾಯಿತೋ ನಾನರಿಯೆ

ಪುಟ್ಟ ಪುಟ್ಟ ಕೈಗಳು ದೇಹ ಸೋಕಿ
ನವಿರು ಮೃದು ಸ್ಪರ್ಶದ ಬಿಸಿ ತಾಕಿ
ದೇಹದಣಿವಿನ ಬಿಗುವಿನ ಆ ಮನ
ಕಂದನಾಗಮನ ಅಳು ನಗುವಿನ
ಬಂಜೆಯೆಂಜರಿದ ಜಗಕೆ ಕೂಗಿ
ಹೇಳಿದ್ದೆ ಅಂದು, ಅಮ್ಮನಾ ಬೀಗಿ

ಬಂಜೆಯೆಂದರೂ ಜಗ ಪರವಿಲ್ಲ
ನನ್ನ ಕೂಸ ಹೆಣ್ಣೆಂದವಗೆ ತರವಲ್ಲ
ಅವನಲ್ಲವೇ ಕಾರಣ ಹೆಣ್ಣಿನ ಹುಟ್ಟಿಗೆ?
ಎರಡರ ಶಕ್ತಿ ತನ್ನದೆಂದು ಬೀಗುವವಗೆ
ಕೊಡಲಾಗಲಿಲ್ಲದವನು ಕೊಲುವುದೇ?
ನನ್ನ ತಾಯ್ತನವ ಹೀಗೆ ಹೀಗಳೆವುದೇ?

ಆಫ್ರೀನ್ ಹೆಸರು ನನ್ನಪ್ಪ ಆಮ್ಮ ಇಟ್ಟದ್ದು
ಕೆನ್ನೆ ಗುಳಿ, ಅರೆ! ಏನಿದು? ಗಾಯ ಸುಟ್ಟದ್ದು?
ಅಳು ಬಂತು, ಮುಲಾಮು ಹಚ್ಚಿ, ಮುದ್ದಿಸ್ದೆ
ನೋವನ್ನ ಹೇಗೆ ಸಹಿಸಿರ್ಬೇಡ ಯೋಚಿಸ್ದೆ
ಮತ್ತೆರಡು ದಿನ, ಮಗು ಏಕೋ ಅಳ್ತಿತ್ತು
ಸ್ನಾನ ಆದ್ಮೇಲೆ ಕೈಮೇಲೆ ಕೆರೆದ ಗುರ್ತಿತ್ತು

ಇವರಿಗೋ ಆಫ್ರೀನ್ನೋಡಿದ್ರೆನೇ ಬರೀ ಸಿಡ್ಕು 
ಎತ್ಕೊಳ್ರೀ ಅಂದ್ರೆ ಆಗೋರು ಬಾಲ ತುಳುದ್ಬೆಕ್ಕು
ಅಫ್ರೀನ್ ಹೆದ್ರೋಳು ಇವರ ಹತ್ರ ಹೋಗೋಕೆ
ಕಡೇಗೂ ರಾಕ್ಷಸ ಆಗಿ ಯತ್ನಿಸೋದೇ ಸಾಯ್ಸೋಕೆ?

ಆ ದಿನ ಏನೋ ಕೆಲ್ಸಕ್ಕೆ ಹೊರ ಹೋಗಿದ್ದೇ ತಪ್ಪಾಯ್ತು
ಕಂದಮ್ಮ ಆಫ್ರೀನ್ಗೆ, ಅವಳಪ್ಪನಿಂದಲೇ ಕುತ್ತಾಯ್ತು
ರಕ್ತ ಪೀಪಾಸು ಮೃಗವೂ ಕೂಸನ್ನು ಪರಚಲಿಕ್ಕಿಲ್ಲ
ಪರರ ಮಗುವನ್ನ ಭೀಕರ ಹುಚ್ಚನೂ ಚಚ್ಚಲಿಕ್ಕಿಲ್ಲ
ಅಯ್ಯೋ ವಿಧಿಯೇ..!! ಎಂತಹ ಪಾಪಿ ಅಪ್ಪನಿವನು??
ತನ್ನ ಕರಳ ಕುಡಿಯ ರಕ್ತ ಸಿಕ್ತಗೊಳಿಸಿ ಬಡಿದಿಹನು

ಸುಕೋಮಲ ತ್ವಚೆ ಪರಚಿದ ಇವನು ಮಾನವನೇ?
ಹೆಣ್ಣಾದರೇನು ತನ್ನ ಕೂಸಲ್ಲವೇ? ಕ್ರೂರ ದಾನವನೇ?
ಮಾತೂ ಬಾರದ ಕೂಸು ಎಷ್ಟು ಬಿಕ್ಕಿ ಅತ್ತಿರಬೇಡ?
ನೋವ ತಾಳಲಾರದೆ ಅತ್ತು ಅತ್ತು ಸೋತಿರಬೇಡ?
ಕ್ರೂರಿ ಅಪ್ಪನ ಮಗಳಾಗಿರಲು ಒಲ್ಲದೆ ಹೋದೆಯಾ?
ನೀನಿಲ್ಲದೇ ಬದುಕಿರಲಾರೆ ನಾನೂ ಬರುವೆ, ಬರುವೆಯಾ?








Monday, April 2, 2012

ಹನಿಯಬೇಡ - ನಿಲ್ಲು


(ಚಿತ್ರ ಕೃಪೆ: ವಿಜಯಶ್ರೀ ನಟರಾಜ್ ರವರ ಫೇಸ್ ಬುಕ್)

ಹನಿಯಬೇಡ - ನಿಲ್ಲು
ನಿಲ್ಲು ನೀ ನಿಲ್ಲು ನೀ ಜಾರ ಬೇಡ...
ಹನಿಯಲಿಲ್ಲಿ ಹನಿಸಿಬಿಟ್ಟು ಕಾಡಬೇಡ
ದೂರ ಹೊಲದಿ ರೈತ ಕುಳಿತ
ಸೋತ ಭಾರ ಮನದಿ ತುಡಿತ
ಹನಿದು ಮುನಿದು ಹೀಗೆ ಇಳಿದು
ಸುರುಟು ಸಸಿಯ ಬರಿದೇ ನೋಡಬೇಡ

ಹೂವ ಮೇಲೆ ನಿನ್ನ ಮನಸು
ನಮ್ಮ ಮೇಲೆ ಏಕೆ ಮುನಿಸು
ಚಿತ್ರ ಗ್ರಹಣ ಅವರ ಶೋಕಿ
ಮೊಳಕೆ ಸಹಜ ನೀನು ತಾಕಿ
ಗಗನ ತೊರೆದು ಇಲ್ಲೇ ಇಳಿದು
ಕರಟು ಮೊಳಕೆ ಅರಿತೇ ದೂಡಬೇಡ

ಎಲ್ಲೋ ಸುರಿವೆ ಹೇಳು ಬೇಕೆ?
ನಿಲದೇ ಹರಿವೆ ತಾಳು, ಏಕೆ?
ಒಪ್ಪು ನಮಗೆ ನಮದೇ ತಪ್ಪು
ಹಸಿರ ತೆಗೆದು ತರಿಸಿ ಮುಪ್ಪು
ಮನ್ನಿಸೆಮ್ಮ ಹೀಗೆ ಮುನಿಯ ಬೇಡ
ನಿಲ್ಲು ನೀ ನಿಲ್ಲು ನಿ ಜಾರ ಬೇಡ...

Sunday, March 18, 2012

ಮನದ ವೀಣೆ....



ದಿಲ್ ಕಾ ಭವರ್ ಕರೆ ಪುಕಾರ್  
ತೆರೆ ದಿಲ್ ಕೆ ಸಾಮ್ನೆ ಚಿತ್ರ೧೯೬೩ ಮೊಹಮದ್ ರಫಿಯವರ   ಹಾಡು


ಮನದ ವೀಣೆ ಮಿಡಿಯುತಿದೆ

ಮನದ ವೀಣೆ ಮಿಡಿಯುತಿದೆ
ಮನ ತುಂಬಿ ಹಾಡುತಿದೆ
ಹೃದಯದ ರಾಗ ಕೇಳಿರಿ.....II ಹೃದಯದ ರಾಗ ಕೇಳಿರಿ II
            ನೋಡು ನಿನ್ನ ಮನಸಿನ
          ಅಂತರಾಳ ಅರಿತೆ ನಾ
          ಗೆಳತಿಯಾಗಿ ನಿನ್ನ ಮೆಚ್ಚಿದೇ
ನನ್ನ ನೋಡಿ ನಿನ್ನಲೂ
ಹೀಗೇ ಭಾವ ಬೆಳೆದಿದೆ
ಎಂದೇ ನಾನು ಗೀತೆ ಬರೆದೆನೂ..
ಹಾಡ ಹೀಗೇ ನಾ ಹಾಡಿದೇ...
ಹೃದಯದ ರಾಗ ಕೇಳಿರಿ....II ಮನದ ವೀಣೆ ಮಿಡಿಯುತಿದೆ II
            ಹಾಡು ನನ್ನ ಜೊತೆಯಲಿ
          ನೀಡು ಪಾಲು ಕಥೆಯಲಿ
          ನಮ್ಮದಾಗಿ ಕಾಲ ಉಳಿಯಲೀ...
ಕೈಯ ಹಿಡಿದು ಕೈಯಲಿ
ಭರವಸೆಯ ಸುಖದಲಿ
ಜೀವನವೂ ಹೀಗೇ ಸಾಗಲೀ...
ದಿನ ಹೀಗೇ ಕಳೆಯಲೀ....
ಹೃದಯದ ರಾಗ ಕೇಳಿರಿ....II ಮನದ ವೀಣೆ ಮಿಡಿಯುತಿದೆ II


Sunday, March 4, 2012

ಕಪ್ಪು ಸುಂದರಿ..


ಕಪ್ಪು ಸುಂದರಿ..
ಕಪ್ಪು ಸುಂದರಿ..
ನನ್ನ ಒಲವಿನ ಕಿನ್ನರಿ..
ಕಪ್ಪು ಕಪ್ಪು ಎಂದೇಕೆ
ಮುಖವ ಹಿಂಡುವಿರಿ...??
ಆಹಾ ಆ ಮೊದಲ ನೋಟ..
ಆ ವೈಯ್ಯಾರದ ಮೈಮಾಟ..!!
ಮಿರುಗುವ ಮುದ್ದು ಬರುವ ಮೊಗ
ಹೊಳಪಲಿ ಕಳೆದಳೆದ ಅಂಗಾಂಗ..
ಕೈ ಇಟ್ಟರೆ ಜಾರುವ ನುಣುಪು
ನಿಂತರೂ ನಡೆದರೂ ಎಂಥ ಒನಪು?!!
ಏಕೋ ಏನೋ ಮೈಮರೆತೆ
ನೋಡ ನೋಡುತ್ತಲೇ ನಿಂತೆ
ಚಿವುಟಿದಳು ನನ್ನವಳು ಪಕ್ಕೆ..
ನನ್ನ ಕಣ್ಣಿಗೆ ಕಟ್ಟಿತ್ತು ಆ ಕಪ್ಪು ಚುಕ್ಕೆ
ಹೊರಟೆ ನನ್ನವಳ ಬಿಟ್ಟು ಅವಳ ಜೊತೆ
ಮೊಡದ ಮೇಲೆ, ಆಗಸದಲಿ ತೇಲಿದಂತೆ
ನನ್ನ ಕಪ್ಪು ಸುಂದರಿಯ ಜೊತೆ ನನ್ನ ನೋಡಿ
ದಾರಿಹೋಕರಿಗೂ ಈರ್ಷೆ, ಮಾಡಿದಳು ಮೋಡಿ
ಒಮ್ಮೆ ಒಂದು ಸುತ್ತಾಡಿ ಬಂದೆ ಜೊತೆ
ಈಗ ನನ್ನವಳಿಗೂ ನಮ್ಮಗಳಿಗೂ ಹಿತೆ
ಒಂದೇ ದಿನದಲ್ಲಿ ನನಗೆ ಬಹುಪ್ರಿಯೆ
ನಮ್ಮನೆಯವರೂ ತೋರಿದ್ದಾರೆ ದಯೆ
ಎಲ್ಲಾ ಹೋಗ್ತೀವಿ ಜೊತೆಯಾಗಿ ಒಟ್ಟಿಗೆ
ಕಪ್ಪು ಸುಂದರಿ ಬಹುಪ್ರಿಯೆ ನಮ್ಮ ಮಟ್ಟಿಗೆ  
.........??????...........
ಉತ್ತರಕ್ಕೆ... ಈ ಲಿಂಕನ್ನು ಕ್ಲಿಕ್ ಮಾಡಿ....