Wednesday, June 27, 2012

ಪುಸ್ತಕವಿದೆ ನೋಡಿರೋ ಅಣ್ಣಗಳಿರಾ.......... ಎನುತಿಹ ಅಪೂರ್ವ ಪುಸ್ತಕ ಪ್ರೇಮಿ ಮಂಡ್ಯ ಜಿಲ್ಲೆಯ ಅಂಕೇಗೌಡರು


ಅಂಕೆಯಿಲ್ಲ ಜ್ಞಾನದಾಹಕೆ
ಸಂಖ್ಯೆಯಿಲ್ಲ ಪುಸ್ತಕವಿಧಕೆ
ಅಂಕೇಗೌಡರಿಗೆ ಸಾಟಿಯಿಲ್ಲ
ಪುಸ್ತಕ ಪ್ರೇಮಿಗೆ ಎದುರಿಲ್ಲ.

ಅಂಕೇಗೌಡರ ಪುಸ್ತಕ ಸಂಗ್ರಹ ಮತ್ತು ಅವರ ಪುಸ್ತಕ ಸಂಗ್ರಹದ ಅಮಿತದಾಹ ನೋಡಿ ನನ್ನ ಮನ ಒಡನೇ ಹೇಳಿದ್ದು ಹೀಗೆ.



“ಭೂಮಿಯೆಂದರೆ ಬಾಯ್ಬಿಡುವ ಮಂತ್ರಿ, ಶಾಸಕರೇ ತುಂಬಿರುವ ದೇಶದ ಮತ್ತು ಮಣ್ಣನ್ನೇ ಮಾರಿದವರ ಕಂಡ ಕನ್ನಡನಾಡಲ್ಲಿ ಅದರಲ್ಲೂ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಎಂತಹವರೂ ಕಾಪಾಡಿಕೊಳ್ಳುವ ತನ್ನದೇ ಆದ ೬೦x೪೦ ಸೈಟನ್ನು ಮಾರಿ ಪುಸ್ತಕ ಕೊಂಡವರ ಕಂಡಿರುವಿರಾ?? ಪುಸ್ತಕ ಸಂಗ್ರಹ ದಾಹ ಅಂಕೇಗೌಡರ ಇಂದಿನ “ಪುಸ್ತಕ ಮನೆ” ಯ ಸ್ಥಾಪನೆಗೆ ಕಾರಣ. ಎಲ್ಲ ರಾಜಕಾರಣಿಗಳು ಕೆಟ್ಟವರಲ್ಲ ಎನ್ನುವುದು ನಿಜ, ಅದರಲ್ಲೂ ಸಜ್ಜನಿಕೆ ಮೆರೆವವರೂ ಇದ್ದಾರೆನ್ನುವುದು ಎಲ್ಲವೂ ನಿರಾಶಾದಾಯಕವಲ್ಲ ಎನ್ನುವುದನ್ನು ತೋರಿಸಿ, ಸಕಾರಾತ್ಮಕ ನಿಲುವು ಜನಸಾಮಾನ್ಯರಲ್ಲಿ ಬೇರೂರುವಂತೆ ಮಾಡುತ್ತದೆ.  ಅಂಕೇಗೌಡರ ಆಸಕ್ತಿ, ಜನ-ಜ್ಞಾನದಾನ ಪರ ನಿಲುವಿಗೆ ಮಾರುಹೋದ ಸ್ಥಳೀಯ ಶಾಸಕರು ಮತ್ತು ಖೋಡೇ ಔದ್ಯಮಿಕ ಸಂಸ್ಥೆಯ ಸಹಾಯದಿಂದ ಒಂದು ಟಾಕೀಸಿನ ಛಾವಣಿಯಡಿ ಪುಸ್ತಕಗಳ ವರ್ಗೀಕರಣ ಪ್ರಾರಂಭವಾಗಿದೆ.

ಇಲ್ಲಿಗೆ ನಮ್ಮ ಭೇಟಿ ಆಗಿದ್ದು ನಿಜಕ್ಕೂ ಒಂದು ಮರೆಯಲಾಗದ ಮತ್ತು ಧನ್ಯ ಅನುಭವ. ಇದಕ್ಕೆ “ನಮ್ಮೊಳಗೊಬ್ಬ ’ಬಾಲು’” ಹಾಗೂ ಪ್ರಕಾಶ್ ಹೆಗ್ಗಡೆ (ಇಟ್ಟಿಗೆ ಸಿಮೆಂಟ್) ಕಾರಣೀಭೂತರು, ನಮ್ಮ ಹೃದಯಪೂರ್ವಕ ಧನ್ಯವಾದ ಈ ಮಿತ್ರರಿಗೆ.


ಅಂಕೇಗೌಡರ ಜ್ಞಾನದೇಗುಲದ ವಿಳಾಸ:
ಅಂಕೇಗೌಡ ಜ್ಞಾನ ಪ್ರತಿಷ್ಠಾನ
ಪುಸ್ತಕ ಮನೆ, ಹರಳಹಳ್ಳಿ,
ಪಾಂಡವಪುರ ತಾಲುಕ್, ಮಂಡ್ಯ ಜಿಲ್ಲೆ
ದೂರವಾಣಿ: 9242822934. 


ಮಾನವನಾಗಿ ಹುಟ್ಟಿ ಪ್ರಾಣಿ ಪಕ್ಷಿಗಳಂತೆ ಜೀವಿಸದೇ, ಹೆತ್ತವರ, ಹೊತ್ತನೆಲದ ಮತ್ತು ಸಮಾಜದ ಹಿತಕಾಗಿ ಏನಾದರೂ ಮಾಡಲೇಬೇಕಾಗಿರುವುದನ್ನು ಎಲ್ಲರೂ ಮನಗಾಣಬೇಕು, ಮಾನವ ಜನ್ಮವನ್ನು ಸಾರ್ಥಕಗೊಳಿಸಿಕೊಳ್ಳಬೇಕು ಎನ್ನುವ ಉತ್ಕಟಾಕಾಂಕ್ಷೆಯ ಅಂಕೇಗೌಡರ ವ್ಯಕ್ತಿತ್ವ ನಿಜಕ್ಕೂ ಅನುಕರಣೀಯ, ನಮನೀಯ, ಶ್ಲಾಘನೀಯ.


ಪುಸ್ತಕಾಲಯಕ್ಕೆ ಭೇಟಿ ನೀಡಿದ ಸರ್ವೋಚ್ಛ ನ್ಯಾಯಾಲಯದ ನಿವೃತ್ತ ನ್ಯಾಯಾಧೀಶರಾದ ಎಮ್.ಎನ್ ವೆಂಕಟಾಚಲಯ್ಯನವರು "ಪುಸ್ತಕ ಪ್ರೇಮಿ ಅಂಕೇಗೌಡರು ಸುಮಾರು ೧.೫ ಲಕ್ಷಕ್ಕೂ ಹೆಚ್ಚಿನ ಪುಸ್ತಕ ಸಂಗ್ರಹ ಮಾಡಿರುವುದು ನಿಜಕ್ಕೂ ಅದ್ಭುತವಾದುದು. ಈ ಪುಸ್ತಕಾಲಯವು ಭೂಮಿಯ ಮೇಲಿನ ಸಾರಸ್ವತ ಜ್ಞಾನಲೋಕವೆನಿಸಿದೆ" ಎಂದು ಮೆಚ್ಚುಗೆ ವ್ಯಕ್ತಪಡಿಸಿದರಂತೆ.


ಒಡಿಶಾದ ಉನ್ನತ ನ್ಯಾಯಾಲಯದ ನ್ಯಾಯಮೂರ್ತಿಗಳಾದ ನ್ಯಾ.ಮೂ. ವಿ. ಗೋಪಾಲ ಗೌಡರು ಅಂಕೇಗೌಡರ ಪುಸ್ತಕಾಲಯ ಕಂಡು ನಿಬ್ಬೆರಗಾಗಿ "ಅಂಕೇಗೌಡರ ಪುಸ್ತಕ ಸಂಗ್ರಹದ ಸಾಧನೆ ಅಮೋಘವಾದುದು, ಇಂಥ ಅಮೂಲ್ಯವಾದ ಜ್ಞಾನ ಭಂಡಾರಕ್ಕೆ ಸರ್ಕಾರ ಸಕಲ ಸೌಲಭ್ಯಗಳನ್ನು ಒದಗಿಸಬೇಕಿದೆ. ಈ ಜ್ಞಾನ ಸಂಪತ್ತು ಸಮಾಜದ ಎಲ್ಲ ವರ್ಗದ ಜನರಿಗೂ ಸದುಪಯೋಗವಾಗುವಂತೆ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಸರ್ಕಾರ ಚಿಂತನೆ ನಡೆಸಲಿ" ಎಂದು ಹೇಳಿದ್ದಾರೆ.


ಗೌಡರ ಜ್ಞಾನದಾನದ ಈ ಅಭೂತಪೂರ್ವ ಮಾರ್ಗವನ್ನು, ಅವರ ಆಸಕ್ತಿಯನ್ನು ಗಮನಿಸಿ ಕರ್ನಾಟಕ ಸರ್ಕಾರ ೫೦ ಲಕ್ಷ ರೂಪಾಯಿ ಅನುದಾನ ನೀಡಲು ಮುಂದಾಗಿರುವುದು ಸ್ವಾಗತಾರ್ಹ.

ಅಂಕೇಗೌಡರ ಮನದ ಎಲ್ಲಾ ಇಚ್ಛೆಗಳನ್ನೂ ಪೂರ್ಣಗೊಳಿಸಿ ನಾಡಿನಲ್ಲೇ ಏಕೆ ಇಡೀ ದೇಶದಲ್ಲೇ ವ್ಯಕ್ತಿಯೊಬ್ಬರ ಪ್ರಯತ್ನಫಲದ ಅಪೂರ್ವ ಪುಸ್ತಕಾಲಯವಾಗಿ ಅಂಕೇಗೌಡ ಪುಸ್ತಕ ಪ್ರತಿಷ್ಠಾನ ರೂಪುಗೊಳ್ಳಲಿ ಎಂದು ನಾವೆಲ್ಲಾ ಹಾರೈಸೋಣ ಮತ್ತು ಈ ನಿಟ್ಟಿನಲ್ಲಿ ನಮ್ಮಿಂದಾಗುವ ಸಹಾಯಕ್ಕೆ ಮುಂದಾಗೋಣ.. ಏನೆನ್ನುವಿರಿ ಸ್ನೇಹಿತರೇ..??





Saturday, June 2, 2012


ಸ್ನೇಹಿತರೇ, ಇದೊಂದು ಹೊಸ ಪ್ರಯೋಗ, ನಿಮ್ಮೆಲ್ಲರ ಬೆಂಬಲ ಮತ್ತು ಪ್ರೋತ್ಸಾಹ ಇದ್ದರೆ ಮುಂದುವರೆಸುವ ಯೋಚನೆಯಿದೆ. ಇದಕ್ಕೆ "ಬಟಾಣಿ-ಚಿಕ್ಕಿ" ಎಂದು ಹೆಸರಿಸಿದ್ದೇನೆ. ಇಲ್ಲಿ ಒಂದು ಮೂಲ ವಿಷಯ ಮತ್ತು ಅದರಲ್ಲಿ ಸಣ್ಣ ಸಣ್ಣ ಸ್ವತಂತ್ರ ಭಾವ ತುಣುಕುಗಳು. ಕವನ ಶೀರ್ಷಿಕೆ ಜತೆ-ಬಟಾಣಿ ಚಿಕ್ಕಿ 
ಇಲ್ಲಿ ಒಂದು ಮಾದರಿ ನಿಮ್ಮ ಮುಂದೆ
ನೋಡವಳಂದಾವ-ಬಟಾಣಿ ಚಿಕ್ಕಿ: ಕವನ ಹೆಣ್ಣಿನಂದವನ್ನು ಕುರಿತಾಗಿದ್ದು ಚೂರುಗಳಲ್ಲಿ ಸ್ವತಂತ್ರ ಭಾವ ಪ್ರಕಟಣೆ..."ಕಣ್ಣ ಹೊಳಪು", "ಖೆಡ್ಡಾ-ಗುಳಿ", ಇತ್ಯಾದಿ.....
ನಿಮ್ಮ ಪ್ರಾಮಾಣಿಕ ಅಭಿಪ್ರಾಯಕ್ಕೆ ಸ್ವಾಗತ.

ನೋಡವಳಂದಾವ ಬಟಾಣಿ ಚಿಕ್ಕಿ
ಕಣ್ಣ ಹೊಳಪು
ಕಣ್ಣು ಏಕೋ ಏನೋ ಎಂಥಾ ಹೊಳಪು
ಹೃದಯ ಚುಚ್ಚಿಬಿಡುವುದೀ ಬಾಣ ಎಂಥಾ ಚೂಪು

ಖೆಡ್ಡಾ-ಗುಳಿ
ನಕ್ಕರವಳು ಮುತ್ತಿನಂಥ ಮೋಹಕ ಕೆನ್ನೆಕುಳಿ
ಉರುಳಿಸಲು ಸಾಕು ಅದುವೇ ಖೆಡ್ದದ ಗುಳಿ

ಹುಬ್ಬು-ಗತ್ತಿ
ಹುಬ್ಬು ತೀಡಿ ತಂದು ಮುಖಕೆ ಮೆರುಗು
ಕೊಲ್ಲಲೆಂದೇ ಝಳಪು ಬಂತೇ ಕತ್ತಿಗಲಗು

ಬಳುಕು-ಛಳುಕು
ನಡೆ, ಜಡೆ ಸೊಂಟ ಬಳಕು ಉಫ್.. ಥಳುಕು
ಅದುರು ಛಳಿಯಲ್ಲೂ ಅದು ಬೆವರಿಳಿಸೋ ಛಳುಕು

ಕೋಗಿಲೆ-ಉಲಿಕೆ
ಕಣ್ಣ ಬಾಣ ಬಿಟ್ಟರವಳು..ಎಂಥ ಗುರಿಯೂ ನೆಲಕೆ
ಬಾಯಿತೆರೆದು ನುಡಿಯೆ ನಾಚೀತು ಕೋಗಿಲೆ ಉಲಿಕೆ

ಜಡೆ-ಹೆಡೆ-ಕೊಡೆ
ನೀಳಗಪ್ಪು ಬೆನ್ನ ಹಿಂದೆ ಜಾರಿ ಬಿದ್ದ ಹಾವಿನಂಥ ಜಡೆ
ಕೇಶರಾಶಿ ಹರಡಿಕೊಂಡ್ರೆ ಆದೀತು ಅದುವೇ ಕೊಡೆ

ಕೆಂಪು ನೀರೆ
ನಾಚಿ ನೀರು ಕೆನ್ನೆಗೆಂಪು ನೆಲವ ಕೆರೆವ ಬೆರಳು
ನನಗಿದು ನಿತ್ಯಸತ್ಯ ನೀನಾಗಬೇಡ ಬೆಪ್ಪೆ ಮರಳು

Monday, May 21, 2012

ನಂಗೊತ್ತಿಲ್ಲ ಮಗಾ




ನಂಗೊತ್ತಿಲ್ಲ ಮಗಾ
ಪುಟ್ಟಾ..ಏನ್ಲಾ ಮಾಡ್ತಿದ್ದಿಯಾ?
ಏನಿಲ್ಲಪ್ಪಾ.. ಒಸಿ ಟೀವಿ ನೋಡ್ತಾ ಇವ್ನಿ,,, ತೋಳ ಬಂತು ತೋಳ ಟೀವಿನಾಗೆ ಕತೆ ಬತ್ತಾ ಐತೆ
ಅಪ್ಪಾ..ಒಂದ್ಯಿಸ್ಯ..... ಅಲ್ಲಾ ಆ ಹೈದ ಸುಮ್ ಸುಮ್ನೆ ಯಾಕೆ ಆಟೊಂದ್ ಕಿತ ಅಳ್ಳಿ ಜನ್ಗೊಳ್ನ ’ತೋಳ ಬಂತಪ್ಪೋ ತೋಳ’ ಅಂತ ಎದಿರ್ಸಿದ್ದು.... ಅದ್ಕೇಯಾ ನಿಜ್ಕೂ ತ್ವಾಳ ಬಂದ್ರೂ ಯಾರೂ ಸಾಯಕ್ಬರ್ನಿಲ್ಲ
ಊಂ ಕಣ್ಮಗ, ಅದ್ಕೇ ಯೋಳೋದು ಒಂದಪ ಸುಳ್ ಯೋಳಿದ್ರೂ ಓಗ್ಲಿ ಬಿಡು ಏನೋ ತಪ್ಪಾಗ್ಯದೆ ಅಂತ ಮನ್ನಿಸ್ತಾರೆ...ಕಿತಾ ಕಿತಾ ಅಂಗೇ ಮಾಡಿದ್ರೆ..ಅದ್ನ ಜನ ಅಚ್ಕೊಳ್ಳೊಲ್ಲ...ಅಂತವ್ರನ್ನ ನಂಬಾಕೂ ಓಗಲ್ಲ...
ಊಂ... ನಮ್ಮಾಜಿ ಮುಮಂ ಗ್ಳೂ ಆಟೊಂದು ಒಳ್ಳೆ ಎಸ್ರ್ ಮಾಡಿದ್ರು, ಜನ ಆಸೀರ್ವಾದಾನೂ ಮಾಡಿದ್ರು..... ಈ ಪಾಟಿ ತಮಾಸಿ ಮಾಡಿ ಜನಾನ ಯಾಮರ್ಸಿ .. ಈವಾಗ ಅಯ್ಯೋ ತ್ವಾಳ ಬಂದೈತಿ ನನ್ಕಾಪಾಡ್ರಿ ಅಂದ್ರೆ...ಯಾರೂ ನಂಬಾಕಿಲ್ಲ ಅಲ್ವಾ???
ಅಲ್ವಾ ಮತ್ತೆ.. ಜನಾನೂ ಶ್ಯಾನೆ ಬುದ್ದಿ ಕಲ್ತ್ಕಂಡವ್ರೆ... ಶ್ಯಾಲೆ, ದುಡ್ಡು, ಎಂಡ, ಇಂತಾವೆಲ್ಲಾ ಈಸ್ಕೊಂಡೂ...ಒತ್ತೋ ಕಡೆ ಓಟ್ ಒತ್ತಾಕೋ ಮಟ್ಟಕ್ ಬಂದವ್ರೆ...  ತ್ವಾಳ ಅಂತ ಅಂದ್ಕಂಡು ಕುರಿ ಬಂಡ ಕತ್ತರ್ಸಿ ಮಾರ್ಕೊಂಡು, ಬಲ್ತ್ ಮ್ಯಾಲೆ ಕಟ್ಕನ್ಕೊಟ್ಟು  ದುಡ್ಮಾಡೋ ಕುರಿ ಕಾಯೊರ್ನ ನಂಬಾಕಿಲ್ಲ...
ಆದ್ರೆ...ಅವರು ನಾನು ಬೋ ಸಾಚಾ, ಬೇಕಾದ್ರೆ ಸ್ವಾಮಿಗಳ್ನ ಕೇಳಿ ಅಂತ ಯೋಳ್ತಾರಲ್ಲಾ... ಸ್ವಾಮ್ಗೋಳು ಶಾಮೀಲಾ ಅಂಗಾರೆ...?
ನಂಗೊತ್ತಿಲ್ಲ ಮಗ

Saturday, May 5, 2012

ಕಾಯ್ತಾ ಇವ್ನಿ ಬತ್ತದಾ ಮಳೆ...???

Foto: Internet

ಕಾಯ್ತಾ ಇವ್ನಿ ಬತ್ತದಾ ಮಳೆ...???

ಅಪ್ಪ ಯೋಳ್ತಿದ್ದ – ಯಪ್ಪಾ ಯಾ ಪಾಟಿ ಮಳೆ!!
ತೊಯ್ದು ತೊಯ್ದು ಬುರ್ದೆ ಆಗ್ಬುಟ್ಟೈತೆ ಇಳೆ
ಕೆರೆ ಕೋಡಿ ಓಯ್ತಿತ್ತಂತೆ, ಒಂದೇ ವಾರದಲ್ಲಿ
ದಾಟೋಕೋದ ಕುರಿ ದನ ಕೊಚ್ಚೋಗ್ನೀರಲ್ಲಿ.

ವಾರದಿಂದ ಮುದ್ಕ ಆಕಾಸ ನಿಟ್ಟಿಸ್ತಾ ಇರ್ತಾನೆ
ಯಪ್ಪೋ ಒಳೀಕ್ಬಾ, ಬೋ ಬಿಸ್ಲು ಸೂರ್ಯ ಸುಡ್ತಾನೆ
ನನ್ಮಾತು ಕೇಳಾಂಗಿಲ್ಲ ರೈತನ್ಮನ್ಸು ರೋಸಿದ್ರೆ ಇಂಗೆ
ಯೋಳ್ತಾನೆ ಮೂರ್ನೇ ವರ್ಸ ಬರ್ಗಾಲ ಬಂದ್ರೆ ಎಂಗೆ?

ಬೋ ..ಅಂತ ಅರ್ಚೋದು ದನ್ಗೋಳು ದನದಟ್ಟಿಲಿ
ಒಟ್ಟೆ ಬೆನ್ತಾಕೈತೆ ಕುರಿಗೋಳು ಬಡ್ವಾಗವೆ ಕುಂತಲ್ಲಿ
ಗೌಡಂಗೆ ಅಂಬ್ಲಿ ದಾಸೋವ ಮಾಡಾಕೆ ಯೋಸ್ನೆನಂತೆ
ಅಕ್ಪಕ್ಕದ್ ಅಳ್ಳಿ ಬಡ್ಮಕ್ಳು ಮಂದಿ ಬತ್ತಾರೆ ಸಂತೆ ಸಂತೆ

ಬಡ್ಕಲಾಗಿರೋ ನಾಗೇಸಾ ಮಂಡ್ರಾಯ್ನ್ ಎತ್ಕಂಬಂದ
ಸಿದ್ದೇಸ ಮಂಗ್ಳಾರ್ತಿ ಎತ್ತೋದು ಐಕ್ಳು ಕುಣ್ಯೊದ್ಚಂದ
ಉಯ್ಯೋ ಉಯ್ಯೋ ಮಂಡ್ರಾಯ ಬಾಳೆ ತ್ವಾಟಕ್ನೀರಿಲ್ಲ
ಉಯ್ಯೋ ಉಯ್ಯೋ ಮಂಡ್ರಾಯ ಬತ್ತ ಒಣ್ಗಿ ಓಯ್ತಲ್ಲಾ

ಇದ್ಕಿದ್ದಂಗೆ ಮಟ್ಮಟ ಮದ್ಯಾನ್ನ ಕವ್ಕಂಬತ್ತು ಕತ್ಲಾ
ಮಲ್ಗಿದ್ದಪ್ಪ ಎದ್ದ ಕುಸ್ಕುಸಿ, ಕೂಗ್ದ ಎಂಕ್ಟ ಮಳ್ಬತ್ಲಾ
ಅವ್ಮಾನ ಇಲಾಕೆವ್ರು ಅಂದವ್ರೆ ವಾರಪೂರಾ ಇಂಗೇ
ಅಪ್ಪಾಂದ ಬಾಲಾ ನನ್ಮೀಸೆಯೂ ಬೆಳ್ಗಾಗಿಲ್ಲ ಅಂಗೇ

ನೋಡ್ತಾ ನೋಡ್ತಾ ಕಪ್ಮೋಡ ಕವ್ಕೊಂಡ್ವು ಆಕಾಸಾ
ದಪ್ ದಪಾ ಬಿತ್ತು ಅನಿ ನೋಡೀ ಕುಸೀನಾ ಎಂಕ್ಟೇಸಾ?
ಬಿರ್ದಿದ್ ನೆಲ ಸೊಳ್ ಅಂತ ಈರ್ಕೊಳ್ತು ಬಿದ್ದಿದ್ದನಿ
ಘಮ್ ಅಂತು ಮಣ್ ವಾಸ್ನೆ, ಓಣಿತುಂಬಾ ಅಪ್ಪಂದನಿ

ಗುಡ್ಗು, ಸಿಡ್ಲು, ದೋ ಮಳೆ, ಕುಣೀತು ಅಪ್ಪನ್ಬಿಳಿ ಮೀಸೆ
ಅಂದ ಮಾಡಮ್ಮೀ ಮೆಣ್ಸಿನ್ ಕಾಯ್ ಬಜ್ಜಿಗಾಗೈತೆ ಆಸೆ
ಸಂಜೆ ಗಂಟ ಬುಡ್ನೇ ಇಲ್ಲ ಸುರೀತಾನೇ ಇತ್ತು ಮಳೆ
ಆಕಾಸ್ದಾಗೂ ಕಮ್ಮೀನೇ ಆಗ್ಲಿಲ್ಲ ಕವ್ದಿದ್ಮೋಡದ್ ಬೆಳೆ

Sunday, April 15, 2012

ಎದೆಯ ಮಿಡಿತ (ಮತ್ತೊಂದು ಕರವೋಕೆ)




ದಿಲ್ ತಡಪ್ ತಡಪ್ ಕೆ ಕೆಹ್ ರಹಾ ಹೈ...
ಚಿತ್ರ: ಮಧುಮತಿ, ಸಂಗೀತ: ಸಲೀಲ್ ಚೌಧರಿ, ಗಾಯಕರು: ಮುಖೇಶ್,
..........ಎದೆಯ ಮಿಡಿತದ ಹಿಡಿತ...........
ಎದೆಯ ಮಿಡಿತ ಹಿಡಿತ ತಪ್ಪಿ ಒಪ್ಪಿ ಕೂಗಿದೆ
ಬಾ ನಿನ್ನ ಸನಿಹ ಬಯಸಿದೆ, ಬಾ ಬಾರೆ ಬಾ ಎಂದಿದೆss.../೨/

ನೀನೇ ಇರದ ಮರದ ತಂಪ ಸೊಂಪು ಸೋತಿದೇss
ಸುಮದ ಮಧುರ ಸುಧೆಯ ಇಂದು ಬನವು ಬಯಸಿದೇss /ನೀನೇ ಇರದ/
                   ಇಂದು ಬನವು ಬಯಸಿದೆ /೨/                                           (ಗಂಡು ದನಿ)

ಎದೆಯ ಮಿಡಿತ ಹಿಡಿತದಲ್ಲೇ ತಾನು ನೆಲಸಿದೆ
ನಿನನ್ನೇ ನೆನೆದು ನಲಿದಿದೆ, ಓ ನಲ್ಲ ನೀನೇ ಎಂದಿದೇss ../೨/
ನೀನು ಬಂದು ನನ್ನ ಜೀವ ಹಿತವ ಕಂಡಿದೇ
ಜೀವಿಸಿಹೆನು ನಿನ್ನ ಪ್ರೀತಿ ಉಸಿರ ತುಂಬಿದೇ..ss /ನೀನು ಬಂದು/
                             ಪ್ರೀತಿ ಉಸಿರ ತುಂಬಿದೇ/೨/

ಎದೆಯ ಮಿಡಿತ ಹಿಡಿತ ತಪ್ಪಿ ಒಪ್ಪಿ ಕೂಗಿದೆ
ಬಾ ನಿನ್ನ ಸನಿಹ ಬಯಸಿದೆ, ಬಾ ಬಾರೆ ಬಾ ಎಂದಿದೆss...                                    (ಗಂಡು ದನಿ)
ಎದೆಯ ಮಿಡಿತ ಹಿಡಿತದಲ್ಲೇ ತಾನು ನೆಲಸಿದೆ                                                (ಹೆಣ್ಣು ದನಿ)
ನಿನನ್ನೇ ನೆನೆದು ನಲಿದಿದೆ, ಓ ನಲ್ಲ ನೀನೇ ಎಂದಿದೇss ..


ಮುಗುಳು ನಗೆಯ ಬೀರೋ ನಿನ್ನ ಸೊಬಗು ಇಲ್ಲಿದೇ..
ನಾನು ಎಲ್ಲೋ ಹೃದಯವೆಲ್ಲೋ ಒಂದೂ ತಿಳಿಯದೇ ss.../೨/          (ಗಂಡು ನಂತರ ಹೆಣ್ಣು ದನಿ)
                   ಎಲ್ಲೋ ಒಂದೂ ತಿಳಿಯದೇ../೨/
ಎದೆಯ ಮಿಡಿತ ಹಿಡಿತ ತಪ್ಪಿ ಒಪ್ಪಿ ಕೂಗಿದೆ
ಬಾ ನಿನ್ನ ಸನಿಹ ಬಯಸಿದೆ, ಬಾ ಬಾರೆ ಬಾ ಎಂದಿದೆss...                                         (ಗಂಡು)
ಎದೆಯ ಮಿಡಿತ ಹಿಡಿತದಲ್ಲೇ ತಾನು ನೆಲಸಿದೆ
ನಿನನ್ನೇ ನೆನೆದು ನಲಿದಿದೆ, ಓ ನಲ್ಲ ನೀನೇ ಎಂದಿದೇss ..                                         (ಹೆಣ್ಣು)                         
                         

Wednesday, April 11, 2012

ಅಮ್ಮಾ ನಾ -ನಿನಾದದ್ದು ತಪ್ಪಾ...??


ಚಿತ್ರ: ದಿ ಹಿಂದು ದಿನಪತ್ರಿಕೆ (ಕೃಪೆ)


ಹೆತ್ತ ಕರುಳಿನ ಆಕ್ರಂದನ

ಹೆತ್ತ ಕರುಳಲ್ಲಿ ಬಿದ್ದಿತೇ ಬೆಂಕಿ..!!
ನವಮಾಸ ರಕ್ತ ಮಾಂಸ ಹಂಚಿ
ಉಸಿರ್ತುಂಬಿ ಜೀವ ಕೊಟ್ಟು..
ಪ್ರಾಣ ಹಿಂಡೋ ಪ್ರಸವ ವೇದನೆ
ಹಸುಗೂಸು ಕಂದಮ್ಮನ ಅಳಲಿಗೆ
ಹೇಗೆ ಇಲ್ಲವಾಯಿತೋ ನಾನರಿಯೆ

ಪುಟ್ಟ ಪುಟ್ಟ ಕೈಗಳು ದೇಹ ಸೋಕಿ
ನವಿರು ಮೃದು ಸ್ಪರ್ಶದ ಬಿಸಿ ತಾಕಿ
ದೇಹದಣಿವಿನ ಬಿಗುವಿನ ಆ ಮನ
ಕಂದನಾಗಮನ ಅಳು ನಗುವಿನ
ಬಂಜೆಯೆಂಜರಿದ ಜಗಕೆ ಕೂಗಿ
ಹೇಳಿದ್ದೆ ಅಂದು, ಅಮ್ಮನಾ ಬೀಗಿ

ಬಂಜೆಯೆಂದರೂ ಜಗ ಪರವಿಲ್ಲ
ನನ್ನ ಕೂಸ ಹೆಣ್ಣೆಂದವಗೆ ತರವಲ್ಲ
ಅವನಲ್ಲವೇ ಕಾರಣ ಹೆಣ್ಣಿನ ಹುಟ್ಟಿಗೆ?
ಎರಡರ ಶಕ್ತಿ ತನ್ನದೆಂದು ಬೀಗುವವಗೆ
ಕೊಡಲಾಗಲಿಲ್ಲದವನು ಕೊಲುವುದೇ?
ನನ್ನ ತಾಯ್ತನವ ಹೀಗೆ ಹೀಗಳೆವುದೇ?

ಆಫ್ರೀನ್ ಹೆಸರು ನನ್ನಪ್ಪ ಆಮ್ಮ ಇಟ್ಟದ್ದು
ಕೆನ್ನೆ ಗುಳಿ, ಅರೆ! ಏನಿದು? ಗಾಯ ಸುಟ್ಟದ್ದು?
ಅಳು ಬಂತು, ಮುಲಾಮು ಹಚ್ಚಿ, ಮುದ್ದಿಸ್ದೆ
ನೋವನ್ನ ಹೇಗೆ ಸಹಿಸಿರ್ಬೇಡ ಯೋಚಿಸ್ದೆ
ಮತ್ತೆರಡು ದಿನ, ಮಗು ಏಕೋ ಅಳ್ತಿತ್ತು
ಸ್ನಾನ ಆದ್ಮೇಲೆ ಕೈಮೇಲೆ ಕೆರೆದ ಗುರ್ತಿತ್ತು

ಇವರಿಗೋ ಆಫ್ರೀನ್ನೋಡಿದ್ರೆನೇ ಬರೀ ಸಿಡ್ಕು 
ಎತ್ಕೊಳ್ರೀ ಅಂದ್ರೆ ಆಗೋರು ಬಾಲ ತುಳುದ್ಬೆಕ್ಕು
ಅಫ್ರೀನ್ ಹೆದ್ರೋಳು ಇವರ ಹತ್ರ ಹೋಗೋಕೆ
ಕಡೇಗೂ ರಾಕ್ಷಸ ಆಗಿ ಯತ್ನಿಸೋದೇ ಸಾಯ್ಸೋಕೆ?

ಆ ದಿನ ಏನೋ ಕೆಲ್ಸಕ್ಕೆ ಹೊರ ಹೋಗಿದ್ದೇ ತಪ್ಪಾಯ್ತು
ಕಂದಮ್ಮ ಆಫ್ರೀನ್ಗೆ, ಅವಳಪ್ಪನಿಂದಲೇ ಕುತ್ತಾಯ್ತು
ರಕ್ತ ಪೀಪಾಸು ಮೃಗವೂ ಕೂಸನ್ನು ಪರಚಲಿಕ್ಕಿಲ್ಲ
ಪರರ ಮಗುವನ್ನ ಭೀಕರ ಹುಚ್ಚನೂ ಚಚ್ಚಲಿಕ್ಕಿಲ್ಲ
ಅಯ್ಯೋ ವಿಧಿಯೇ..!! ಎಂತಹ ಪಾಪಿ ಅಪ್ಪನಿವನು??
ತನ್ನ ಕರಳ ಕುಡಿಯ ರಕ್ತ ಸಿಕ್ತಗೊಳಿಸಿ ಬಡಿದಿಹನು

ಸುಕೋಮಲ ತ್ವಚೆ ಪರಚಿದ ಇವನು ಮಾನವನೇ?
ಹೆಣ್ಣಾದರೇನು ತನ್ನ ಕೂಸಲ್ಲವೇ? ಕ್ರೂರ ದಾನವನೇ?
ಮಾತೂ ಬಾರದ ಕೂಸು ಎಷ್ಟು ಬಿಕ್ಕಿ ಅತ್ತಿರಬೇಡ?
ನೋವ ತಾಳಲಾರದೆ ಅತ್ತು ಅತ್ತು ಸೋತಿರಬೇಡ?
ಕ್ರೂರಿ ಅಪ್ಪನ ಮಗಳಾಗಿರಲು ಒಲ್ಲದೆ ಹೋದೆಯಾ?
ನೀನಿಲ್ಲದೇ ಬದುಕಿರಲಾರೆ ನಾನೂ ಬರುವೆ, ಬರುವೆಯಾ?








Monday, April 2, 2012

ಹನಿಯಬೇಡ - ನಿಲ್ಲು


(ಚಿತ್ರ ಕೃಪೆ: ವಿಜಯಶ್ರೀ ನಟರಾಜ್ ರವರ ಫೇಸ್ ಬುಕ್)

ಹನಿಯಬೇಡ - ನಿಲ್ಲು
ನಿಲ್ಲು ನೀ ನಿಲ್ಲು ನೀ ಜಾರ ಬೇಡ...
ಹನಿಯಲಿಲ್ಲಿ ಹನಿಸಿಬಿಟ್ಟು ಕಾಡಬೇಡ
ದೂರ ಹೊಲದಿ ರೈತ ಕುಳಿತ
ಸೋತ ಭಾರ ಮನದಿ ತುಡಿತ
ಹನಿದು ಮುನಿದು ಹೀಗೆ ಇಳಿದು
ಸುರುಟು ಸಸಿಯ ಬರಿದೇ ನೋಡಬೇಡ

ಹೂವ ಮೇಲೆ ನಿನ್ನ ಮನಸು
ನಮ್ಮ ಮೇಲೆ ಏಕೆ ಮುನಿಸು
ಚಿತ್ರ ಗ್ರಹಣ ಅವರ ಶೋಕಿ
ಮೊಳಕೆ ಸಹಜ ನೀನು ತಾಕಿ
ಗಗನ ತೊರೆದು ಇಲ್ಲೇ ಇಳಿದು
ಕರಟು ಮೊಳಕೆ ಅರಿತೇ ದೂಡಬೇಡ

ಎಲ್ಲೋ ಸುರಿವೆ ಹೇಳು ಬೇಕೆ?
ನಿಲದೇ ಹರಿವೆ ತಾಳು, ಏಕೆ?
ಒಪ್ಪು ನಮಗೆ ನಮದೇ ತಪ್ಪು
ಹಸಿರ ತೆಗೆದು ತರಿಸಿ ಮುಪ್ಪು
ಮನ್ನಿಸೆಮ್ಮ ಹೀಗೆ ಮುನಿಯ ಬೇಡ
ನಿಲ್ಲು ನೀ ನಿಲ್ಲು ನಿ ಜಾರ ಬೇಡ...