Thursday, March 19, 2009

ಬ್ಲಾಗಾಯಣ

ಬ್ಲಾಗಾಯಣ
ಈ- ಮೈಲು, ವೆಬ್ಬು, ಗಬ್ಬು..ಅಂತೆಲ್ಲಾ ಅನ್ನೋರಿಗೆ..ಬ್ಲಾಗು ಅನ್ನೋ ಇನ್ನೊಂದು ವ್ಯವಸ್ಥೆ ಐತೆ ಅನ್ಸಿದ್ದು..ಅಥ್ವಾ ನೋಡಿದ್ದು..ಆ ನಂತರ ಅದರ ದಾಸರಾಗಿದ್ದು ..ಈಗ ಚರಿತ್ರೆ ಆಗ್ತಾ ಇದೆ.
ಪಿ.ಬಿ.ಎಸ್ ರಿಗೆ ಈಗ ಹಳೇ ಹಾಡು ಹಾಡೋಕೆ ಹೇಳಿದ್ರೆ...
"ಬ್ಲಾಗೊಂದ ತೋರ್ಸುವೇ
ಪುಟಾಣಿ ಮಕ್ಕಳೇ..ಬ್ಲಾಗಿದ್ದು ತನಗೆ
ಬ್ಲಾಗಾಗದ್ದು ಪರರಿಗೆ" ಅಂತಿದ್ರೋ..ಏನೋ..!!
ಬ್ಲಾಗಿದ್ದಿದ್ರೆ..ಸೀತೆ ಸ್ವಯಂವರದ ಅನೌನ್ಸ್ ಮೆಂಟು ಪ್ರೆಸಿಡೆಂಟ್ ಜನಕ್ಸ್ ಬ್ಲಾಗಿಸ್ತಿದ್ದ್ರೋ ಏನೋ..??
ಬ್ಲಾಗುಗಳ ಇಂಟರಾಕ್ಷನ್ ಫಾಲೋಗಳ ಮೂಲಕ ದುರ್ಯೋಧನ್ಸ್ ಪಾಂಡವ್ಸ್ ನ ಫ್ಯಾಂನ್ಸಿಡ್ರೆಸ್ನಲ್ಲೇ ಪರ್ಮನೆಂಟಾಗಿ ಇರೋ ಹಂಗೆ ಮಾಡ್ತಿದ್ದನೋ ಏನೋ..?
ಬ್ಲಾಗು ಅನ್ನೋದು..ಈಗ್ಗೂ ನನ್ ತಲೇಗೆ ಸರಿಯಾಗಿ ಹೋಗಿಲ್ಲ, ಯಾರ್ಯಾರೋ ಬ್ಲಾಗ್ ಮಾಡ್ತಾರೆ ಅಂತ ನಾನೂ ಬ್ಲಾಗನ್ನ ಕೂಡಿ, ಕಳೆದು, ಗುಣಿಸಿ ಈಗ ಬ್ಲಾಗಿಸ್ತಿದ್ದೀನಿ.
ಅಜ್ಜಿ ಮಕ್ಕಳಿಗೆ ಕಥೆ ಹೇಳೋವಾಗ..."ಒಂದಾನೊಂದು ಬ್ಲಾಗ್ ರಾಜ್ಯದಲ್ಲಿ ಒಬ್ಬ ಬ್ಲಾಗ್ ರಾಜ, ಇಬ್ಬರು ಬ್ಲಾಗ್ ರಾಣಿಯರಿದ್ದರು. ಅವರಿಗೆ ..." ಅಂತೆಲ್ಲಾ ಹೇಳೋ ಕಾಲ ದೂರಾ ಏನಿಲ್ಲ.
ಈವಾಗ ಈ ಬ್ಲಾಗು ಎಷ್ಟೊಂದು ಪಾಪುಲರ್ ಆಗ್ತಾ ಐತೆ ಅಂದ್ರೆ...ರಾಜಕಾರಣಿಗಳು..ತಮ್ಮ ಚುನಾವಣಾ ಪ್ರಚಾರಾನ ಬ್ಲಾಗಿಸೋಕೆ ಶುರು ಹಚ್ಚೌವ್ರೆ, ನಮ್ಮ ಚುನಾವಣಾಧಿಕಾರಿ ತಾನೂ ಏನ್ ಕಡಿಮೆ ಇಲ್ಲ ಅನ್ನೋ ಹಂಗೆ ಇವ್ರ ಅಂಥ ಬ್ಲಾಗನ್ನ ಬ್ಯಾನ್ ಮಾಡಿ ಇನ್ನೊಂದು ಬ್ಲಾಗು ಹಚ್ಚೇಬಿಟ್ಟವ್ರೆ.
ನಮ್ಮ ಪೂರ್ವ ರಾಷ್ಟ್ರಪತಿಗಳು (ಕಲಾಂ ಸಾಹೇಬ್ರು) ಬ್ಲಾಗ್ ಮಾಡಿಯೇ ಸ್ಕೂಲ್ ಮಕ್ಕಳಲ್ಲಿ ದೇಶಾಭಿಮಾನ, ದೇಶದ ಬಗ್ಗೆ ಸಾಮಾನ್ಯ ಅರಿವಳಿಕೆ (general awareness) ತರೋದಕ್ಕೆ ಪ್ರಯತ್ನಿಸಿದ್ದು ಎಲ್ಲಾ ತಿಳಿದಿರೋದೇ..
ಅಮಿತಾಬ್ ಬಚ್ಚನ್ ತನ್ನ ಬ್ಲಾಗ್ ಮೂಲಕ ಮತ್ತೊಬ್ಬರ ಕೆಂಗಣ್ಣಿಗೆ ಗುರಿಯಾದದ್ದು ನೋಡಿದ್ರೆ ಬೆಳೀತಿರೋ ಬ್ಲಾಗಾಭಿಮಾನ, ಬ್ಲಾಗಪಾರಂಗತಿ, ಇತ್ಯಾದಿ ಬಗ್ಗೆ ಯೋಚಿಸ್ಬೇಕಾಗುತ್ತೆ.
ಟ್ಯೂಶನ್ ಪರಿಪಾಠ ಬೆಳೆಸಿಕೊಳ್ತಾ ಇರೋ ಟೀಚರ್ ಗಳಿಗೆ ಬ್ಲಾಗಿನ ಮೂಲಕ ಸರ್ಕಾರದ, ಆಡಳಿತ ಮಂಡಳಿಯ ಕಣ್ಣಿಗೆ ಮಣ್ಣೆರೆಚೋದು ಸುಲಭ ಆಗ್ತಾ ಇದೆ. ಜೋಡಿಗಳು ಮೈಲ್ ಗಳ ಮೂಲಕ ಪರಸ್ಪರ ವಿಷಯ ವಿನಿಮಯ ಮಾಡ್ಕೋತಾ ಇದ್ದದ್ದು ಹೋಗಿ ಈವಾಗ...ಬ್ಲಾಗುಗಳನ್ನ ಸೃಷ್ಠಿಸಿಕೊಂಡು ತಮ್ಮ ಕೆಲಸಾನ ಇನ್ನೂ ಪರಿಣಾಮಕಾರಿ ಮಾಡ್ಕೋತಾ ಇದ್ದಾರೆ.
ಸಾಹಿತ್ಯ ಕ್ಷೇತ್ರದಲ್ಲಿ ಬ್ಲಾಗಾಯಣದ ಪರಿಣಾಮ ಬಹಳವಾಗಿಯೇ ಆಗಿದೆ ಎಂದರೆ ತಪ್ಪಿಲ್ಲ. ಕವಿಗಳು ತಮ್ಮ ಕವನಗಳನ್ನ, ಲೇಖನಗಳನ್ನ ಬ್ಲಾಗಿನ ಮೂಲಕ ಪರಿಚಯಿಸುತ್ತಿದ್ದಾರೆ. ಇದು ಒಂದು ಹಿತಕರ ಬೆಳವಣಿಗೆ ಯೇ ಸರಿ. ಇದೇ ತರಹ ವಿಷಯ ವಿನಿಮಯಕ್ಕೂ ತಮ್ಮಲ್ಲಿನ ಶೇಖರಿತ ಮಾಹಿತಿಗಳನ್ನು ವಿನಿಮಯಿಸಿಕೊಳ್ಳಲು ಬ್ಲಾಗ್ ಬಹಳ ಸಹಕಾರಿಯಾಗುತ್ತಿದೆ.

ಬ್ಲಾಗೆಂಬ ಮಹತ್ವಪೂರ್ಣ ಮಾಧ್ಯಮವನ್ನು ಸಮರ್ಪಕವಾಗಿ, ಪರಿಣಾಮಕಾರಿಯಾಗಿ ಮತ್ತು ಅರೋಗ್ಯಕರ ಸಮಾಜದ ಬೆಳವಣಿಗೆಗೆ ಪ್ರಯೋಗಿಸಬೇಕು. ನಮ್ಮ ಭಾವನೆಗಳ ಬಿತ್ತರಕ್ಕೆ ಇದು ಬಹು ಅಮೂಲ್ಯ ಮಾಧ್ಯಮ...ಬ್ಲಾಗನ್ನು ಸಂಧಿಸಿ..ಓದಿ..ತಮ್ಮ ಅನಿಸಿಕೆಗಳನ್ನು ಹಂಚಿ ಕೊಳ್ಳುವ ಬ್ಲಾಗುಮಿತ್ರರು ನಮ್ಮ ವಿಚಾರಧಾರೆಯನ್ನು ಚುರುಕುಗೊಳಿಸುತ್ತಾರೆ ಹಾಗೇ..ನಮ್ಮಲ್ಲಿ ನಮಗೇ ಅರಿವಿಲ್ಲದಂತೆ ವಿಷಯ ಪ್ರಸ್ತಾವನೆಯ ಹೊಸ ಮತ್ತು ಪರಿಣಾಮಕಾರೀ ಸೃಜನಶೀಲತೆ ಬೆಳಕುಕಾಣಲಾರಂಭಿಸುತ್ತದೆ.
ನನಗಂತೂ ಈ ಮೂಲಕ ಲಾಭವೇ ಆಗಿದೆ ಎಂದರೆ ತಪ್ಪಿಲ್ಲ.

Tuesday, March 17, 2009

ನಮ್ಮ ನಾಯಕರು, ರಾಜಕಾರಣಿಗಳು ಜನಸಾಮಾನ್ಯರನ್ನು ದಾಳಗಳಂತೆ ಉಪಯೋಗಿಸಿಕೊಂಡುತಮ್ಮ ರಾಜಕೀಯಬೇಳೆ ಬೇಯಿಸಿಕೊಳ್ಳುತ್ತಿರುವದನ್ನು ನೋಡಿದರೆ ಬೇಸರವಾಗುತ್ತದೆ...ಎಲ್ಲರ ಬಗ್ಗೆ ಕಾಳಜಿ ಇವರಿಗೆ ಚುನಾವಣೆಯ ಸಂದರ್ಭದಲ್ಲೇ ಏಕೆ ಬರುತ್ತೆ?? ದೇವರಮೇಲೆ ಪ್ರಮಾಣಮಾಡಿ ಮತ್ತೆ ನೆನೆಪು ಹಸಿರಾಗಿರುವಾಗಲೇ ಅದಕ್ಕೆ ವಿರುದ್ಧವಾಗಿರುತ್ತವೆ ಇವರ ನಡವಳಿಕೆ...ಏಕೆ..?? ಜನಸಾಮಾನ್ಯ..ಮೂರ್ಖನೆಂದೇ..? ಇವರ ಅನ್ನಿಸಿಕೆ...ನಮ್ಮ ಬೆಳವಣಿಗೆ, ನಾಡಿನ ಏಳಿಗೆ ಯಾವಾಗ ಇವರ ಪ್ರಥಮ ಆದ್ಯತೆಯಾಗುವುದೋ...ಕಾಯಬೇಕಾದ ಅನಿವಾರ್ಯತೆ ನಮ್ಮದಾಗಿದೆ...
ಒಂದು ಸಣ್ಣ ಪ್ರಹಸನ...ಓದಿ..ವಸ್ತುಸ್ಥಿತಿಯ ನಿಮ್ಮ ವಿಶ್ಲೇಷಣೆ ಕೊಡಿ....


ಆಜಾದ್..

ಹೇಳೋದೊಂದು-ಮಾಡೋದೊಂದು

"ಏನ್ರಿ ವನಜಮ್ಮ ಪುರಸೊತ್ತಾಗಿ ..ಕೂತ್ಬಿಟ್ರಿ ಜಗ್ಲಿಮೇಲೆ..??"
"ಹೌದ್ರಿ ಸರಸಮ್ಮ ನಮ್ಮೆಜಮಾನ್ರು ಟೂರ್ ಅಂತ.. ಡೆಲ್ಲಿಗೆ ಹೋಗಿದ್ದಾರೆ..ಮಗಳನ್ನ ಅವಳ ಅಕ್ಕ-ಭಾವ ಬಂದು ಕರ್ಕೊಂಡೋದ್ರು..ಏನೋ ಒಂದ್ಸೊಲ್ಪ ಅಡ್ಗೆ ಅಂತ ಬೇಯ್ಸ್ಕೊಂಡ್ರೆ...ದಿನಾಯಿಡೀ ಆಗುತ್ತೆ.... ಟೀವಿ ನೋಡೋಣ ಅಂದ್ರೆ ಘಳಿಗೇಗೊಂದ್ಸರ್ತಿ ಕರೆಂಟು ಪುಸ್ ಅನ್ನುತ್ತೆ..."
ಎಂದಿನಂತೆ...ಶತಾಬ್ದಿ-ಬೃಂದಾವನ ಎಕ್ಸ್ ಪ್ರೆಸ್ ಕೂಡುವ ಸಮಯ ಅದು...ಅಂದ್ರೆ...ಈ ಇಬ್ಬರು ಮಹಿಳಾಮಣಿಗಳ ಭೇಟಿಯ ಸಮಯ!!! ಶತಾಬ್ದಿ ಹೆಸರಿಗೆ ಮಾತ್ರ ಶತಾಬ್ದಿ...ಅದೇ ನಾಲ್ಕುವರೆ ಐದು ಘಂಟೆ ತಗೋಳುತ್ತೆ ಅದೂ..ಬೆಂಗಳೂರಿಂದ ಮದ್ರಾಸ್ ಗೆ ತಲುಪೋಕೆ.
ವಠಾರದ ಸ್ತ್ರೀ ಮಣಿಗಳಿಬ್ಬರು (ಅದರಲ್ಲೂ ಈ ಇಬ್ಬರು) ಸೇರಿದ್ರೆ ಏನು ಆಗಬೇಕೋ ಅದೇ ಆಗ್ತಾ ಇತ್ತು.ವಠಾರದ ಹೆಂಗಸರೆಲ್ಲಾ ಹೇಳೋ ಪ್ರಕಾರ.. ವನಜಮ್ಮ ಬೃಂದಾವನ್ ಆದ್ರೆ...ಸರಸಮ್ಮ ಶತಾಬ್ದಿ!!...ರೈಲು ಬಿಡೋದ್ರಲ್ಲಿ ಅಂತೆ!!!. ಅಷ್ಟರಲ್ಲಿ .."ಒಂದ್ ಬಟ್ಲು ಸಕ್ಕರೆ ಇದ್ರೆ ಕೊಡ್ರಿ..ಸರಸಮ್ಮ...ಶನಿವಾರ ಸಂತೆಯಿಂದ ನಮ್ಮೆಜಮಾನ್ರು ಸರಕು ತಂದಮೇಲೆ ಕೊಟ್ ಬಿಡ್ತೀನಿ" ಎನ್ನುತ್ತಾ ರುಕ್ಮಣಮ್ಮ ಸೇರಿಕೊಂಡರು ಸಂಭಾಷಣೇಗೆ....
(ಇವರನ್ನ..ಕೆ,ಕೆ, ಎಕ್ಸ್ ಪ್ರೆಸ್ ಅಂತಾನೇ ವಠಾರದ ಮಹಿಳಾಮಣೀಗಳು ಚುಡಾಯಿಸುವುದು). ಅಂದಹಾಗೆ...ರುಕ್ಮಣಮ್ಮನವರ ಎಜಮಾನ್ರು ..ಅಂದ್ರೆ..ಲಕ್ಷ್ಮಣಪ್ಪ ..ಮೊನ್ನೆ ಮೊನ್ನೆನೇ ಸಬ್-ರೆಗಿಸ್ಟ್ರಾರ್ ಆಫೀಸಿನಲ್ಲಿ ಹಿರಿಯ ಗುಮಾಸ್ತನ ಕಿರಿಯ ಸಹಾಯಕನಾಗಿ ಸೇರಿದ್ದು, ಮೂಲೆ ಮನೆ Dr. ಮಸ್ತಾನ್ ಸಾಯೇಬ್ರ ಬೇಗಂ ಮಮ್ತಾಜಳ ಪ್ರಕಾರ ಇವರಿಬ್ಬರ ಮದುವೆ ಆಗಿ ಹಪ್ತ-ಹಪ್ತ ಹತ್ತು ತಿಂಗಳೇ ಅಗಿದ್ದು.. ಮಮ್ತಾಜ್ ವಠಾರದ ರೇಡಿಯೋ ಸ್ಟೇಶನ್ ಎಂದೇ ಸುಪರಿಚಿತಳು. ವಠಾರ ಮಾತ್ರವಲ್ಲದೇ ಮೊಹಲ್ಲಾದ ಸುದ್ದಿ, ಸಮಾಚಾರ ಬೇಕು ಅಂದ್ರೆ ಮಮ್ತಾಜಳನ್ನೇ ಭೇಟಿಮಾಡಬೇಕು. ಮಮ್ತಾಜ್ ಕನ್ನಡದಲ್ಲಿ ಎಮ್. ಎ. ಮಾಡಿ ಮನೆ ಹೆಂಡತಿ...ಯಾಗಿದ್ದು...(ಏನು,,?? ಇನ್ನೇನು ಬೀದಿ ಹೆಂಡ್ತಿ ಬೇರೆ ಇರ್ತಾರೇನು..?? ಅಂತ ಕೇಳ್ತೀರ..?..ಅಲ್ಲಾ ಸ್ವಾಮಿ..house wife ಅನ್ನೋದನ್ನ ಕನ್ನಡೀಕರಿಸಿ ಹೇಳಿದೆ ಅಷ್ಠೆ!!..ನಿಮಗೆ ಮುಜುಗರ ಆಗೋದಾದ್ರೆ..house wife ಅಂತಾನೇ ಅನ್ನಿ).. ಮಮ್ತಾಜ್ ಎಲ್ಲಾ ಸಮಾಚಾರವನ್ನು ಸಾಭಿನಯ ಸಾದರ ಪಡಿಸುತ್ತಿದ್ದುದರಿಂದಲೇ..ಇಡೀ ವಠಾರದಲ್ಲೇ..world famous. ಇನ್ನು ಮಮ್ತಾಜ್ಳ "ಉನೋ" (ತನ್ನ ಗಂಡನ ಬಗ್ಗೆ ಪ್ರಸ್ತಾಪ ಬಂದಾಗ ಮಹಿಳಾ ಮಂಡಳಿಯಲ್ಲಿ ಮಮ್ತಾಜ್..ನಮ್ಮ "ಉನೋ" ಕ್ಲಿನಿಕ್ಕಿಗೆ ಹೋಗಿದ್ದಾರೆ..ನಮ್ಮ "ಉನೋ" ಪೇಶೆಂಟ್ ನ ನೋಡ್ತಿದ್ದಾರೆ..ಅಂತೇ ಹೇಳುತ್ತಿದ್ದುದು). ಡಾ. ಮಸ್ತಾನ್ (ಹೆಸರು ಅಷ್ಟೇ ಆದರೂ...ಮುಸ್ಲಿಮರಾದ್ದರಿಂದ ಎಲ್ಲ ಮುಸ್ಲಿಮರಿಗೆ ಅನಾಯಾಸವಾಗಿ ನಮ್ಮ ಹಿಂದೂ ಸ್ನೇಹಿತರು ಕೊಡೋ ಉಪಾಧಿ ಅಂದರೆ.. . "ಸಾಹೇಬ್" ಅನ್ನೋದು...ಅದಕ್ಕೇ ಸುಮಾರು ಎಲ್ಲ ಮುಸ್ಲಿಮರ ಹೆಸರು ಸಾಬ್ ಅಥವಾ ಸಾಯೇಬ್ ಇಲ್ಲವೇ ಸಾಹೆಬ್ ಅನ್ನೊ ಕೊನೆಯ ಹೆಸರನ್ನು ಹೊಂದಿರುತ್ತದೆ.. ನಮ್ಮ ಕರ್ನಾಟಕದ ಪೂರ್ವ ಸಚಿವರಾದ ನಜೀರ್ ಸಾಹೇಬರನ್ನು ನೀರ್ ಸಾಹೇಬ್ರು ಅಂತ ಕರೀತಿದ್ದುದು ಎಲ್ಲರಿಗೂ ತಿಳಿದದ್ದೇ.
"ಅಲ್ರೀ ವನಜಮ್ಮನವರೇ..ನಿಮ್ಮೆಜಮಾನ್ರು..ಬಾಲಕಲ್ಯಾಣ ಮಂಡಳಿ ಅಧ್ಯಕ್ಷರಾದಮೇಲೆ ಮೊದಲನೇ ಸರ್ತಿ ಅಲ್ಲ್ವಾ ಡೆಲ್ಲಿಗೆ ಹೋಗ್ತಿರೋದು..?? ಒಳ್ಳೆ timeನಲ್ಲಿ ರೂಲಿಂಗ್ ಪಾರ್ಟಿಗೆ ಸೇರ್ಕೊಂಡ್ರು ಬಿಡಿ ನಿಮ್ಮೆಜಮಾನ್ರು..!!" ಎನ್ನುತ್ತಾ ...ಹೊಗಳೋ ಹಾಗೂ ಇರ್ಬೇಕು..ರಾಜಕಾರಣಿಗಳು ಪಕ್ಷಗಳಿಗಿಂತ powerಗೇ ಹೆಚ್ಚು ನಿಷ್ಠೆ ತೋರಿಸುತ್ತಾರೆ ಅಂತ ಹೇಳೋ ಹಾಗೂ ಇರ್ಬೇಕು ಅನ್ನೋ ಹಾಗೆ..ಒಂದು daialogue ಹೊಡೆದೇ ಬಿಟ್ರು...
“ಹೌದ್ರೀ..ಇವ್ರಿಗೆ ಮಿನಿಸ್ಟರ್ ಹುದ್ದೇನೇ ಕೊಡ್ತಿದ್ದರು..ಆದರೆ ಇವರೇ ಬೇಡ.. ತಕ್ಷಣ ಮಿನಿಸ್ಟರ್ ಆದ್ರೆ..ಪದವಿ ಆಸೆಗೆ ಪಕ್ಷ ಸೇರಿದ್ದು ಇವನು ಅನ್ನೋ ಅಪವಾದ ಬರುತ್ತೆ ಅಂತ ಹೇಳಿ ಈ ಮಂಡಳಿ ಅಧ್ಯಕ್ಷಗಿರಿಗೆ ಒಪ್ಕೊಂಡರು” ಎಂದರು ವನಜಮ್ಮ ಬೀಗುತ್ತಾ. “ಅಮ್ಮಾ...ಮುಸುರೆ ತಿಕ್ಕಿ ಆಯಿತು ಬಟ್ಟೆ ನೆನೆಹಾಕಿದ್ದೀನಿ....ಇಷ್ಟರೊಳಗೆ ಮನೆ ಕಸ ತೆಗೆದು ಒರೆಸಿಬಿಡ್ಲಾ??” ಎನ್ನುತ್ತಾ ಸುಮಾರು 12-13 ವರ್ಷದ ಹೆಣ್ಣುಮಗಳೊಂದು ಬಂದು ವನಜಮ್ಮ ನವರನ್ನು ಕೇಳಿತು. “ಆಂ..ಹಾಗೇ ಮಾಡು..ನಂತರ ಬಟ್ಟೆ ಒಗೆದು ಮಹಡೀ ಮೇಲೆ ಒಣಹಾಕು” ಎಂದರು ವನಜಮ್ಮ. "ಲೇ ರಾಮಿ..ಹಾಗೇ..ಆಡಿಗೆ ಮನೆಯಿಂದ ಒಂದು ಬಟ್ಟಲು ಸಕ್ರೆ ತಂದು ರುಕ್ಮಣಮ್ಮನವರಿಗೆ ಕೊಡು" ಎಂದರು ವನಜಮ್ಮ ಒಳಹೋಗುತ್ತಿದ್ದ ರಾಮಿಯನ್ನು ಕರೆದು. ರಾಮಿ...ಅರ್ಥಾತ್...ರಮ..ಹೊಸದಾಗಿ ವನಜಮ್ಮನವರ ಮನೆ ಕೆಲಸಕ್ಕೆ ಬಂದಿದ್ದಳು. ಅವಳ ಅಪ್ಪ ಚಿನ್ನಪ್ಪ ವನಜಮ್ಮನವರ ಪತಿರಾಯ ಪ್ರಸಾದಪ್ಪನವರಲ್ಲಿ ರಮಾಳ ಅಕ್ಕನ ಮದುವೆಗೆ ಅಂತ 10 ಸಾವಿರ ಸಾಲ ಅಂತ ತೆಗೆದುಕೊಂಡಿದ್ದ, ಸಾಲ ತೀರಿಸಲು ತಡ ಮಾಡಿದ ಅಂತ ಪ್ರಸಾದಪ್ಪ ಪೀಡಿಸಿ..ಮನೆ ಕೆಲಸಕ್ಕೆ ಒಂದು ಆಳನ್ನು ಕಳುಹಿಸಿದರೆ ಸ್ವಲ್ಪ ಕಾಲಾವಧಿ ಕೊಡಬಹುದು ಅಂತ ಹೇಳಿದಾಗ.. ಈ ವರ್ಷ ಏಳನೇ ಕ್ಲಾಸಿಗೆ ಹೋಗಿದ್ದ ರಮಾಳನ್ನು ಸ್ಕೂಲಿಂದ ಬಿಡಿಸಿ ಮನೆ ಕೆಲಸಕ್ಕೆ ಹಚ್ಚಿದ್ದರು ಚಿನ್ನಪ್ಪ. ಮಮ್ತಾಜ್ ಳಿಗೆ ಇದು ಒಂದು ಒಳ್ಳೆಯ ಸಮಾಚಾರ ಆಗಿತ್ತು ಪ್ರಸಾರ ಮಾಡೋದಿಕ್ಕೆ. ಮೊಹಲ್ಲಾದಲ್ಲೆಲ್ಲ ಗುಲ್ಲೋ-ಗುಲ್ಲು, ಬಾಲಕಲ್ಯಾಣ ಮಂಡಳಿ ಅಧ್ಯಕ್ಷರ ಮನೆ ಕೆಲಸಕ್ಕೆ ಸ್ಕೂಲಿಗೆ ಹೋಗುತ್ತಿದ್ದ ಹೆಣ್ಣುಮಗುವೊಂದನ್ನು ನೇಮಕವಾಗಿದೆ ಅಂತ. ಆಡಿಗೆ ಮನೆಕಡೆ ಹೋಗುತ್ತಿದ್ದ ರಮಾಳನ್ನು ನೋಡುತ್ತಾ ಸರಸಮ್ಮ ಹೇಳೇಬಿಟ್ರು.."ಅಲ್ರೀ ..ವನಜಮ್ಮ..ರಮಾಳು ಏಳನೇ ಕ್ಲಾಸಿನಲ್ಲಿದ್ದಳಲ್ಲವೇ..ಬಾಲಕಾರ್ಮಿಕ ತಡೆ ಕಾಯಿದೆ ಪ್ರಕಾರ ಇಷ್ಟು ಚಿಕ್ಕ ವಯಸ್ಸಿನ ಮಕ್ಕಳು ಅದರಲ್ಲೂ ಹೆಣ್ಣು ಮಕ್ಕಳನ್ನು ಕೆಲಸಕ್ಕೆ ಇಟ್ಟುಕೊಳ್ಳೋದು ಅಪರಾಧ ಅಲ್ಲವೇ?"
"ಅಯ್ಯೋ ರೀ ಸರಸಮ್ಮ ...ಇವಳು ಐದು-ಆರನೇ ಕ್ಲಾಸಿನಲ್ಲೇ ಎರಡು-ಮೂರು ಸರ್ತಿ ಡುಮ್ಕಿಹೊಡ್ದಿದ್ದಾಳೆ..ಹಾಗೆ ನೋಡಿದ್ರೆ.. ಎಸ್ಸೆಸ್ಸೆಲ್ಸಿಯಲ್ಲಿರಬೇಕಾಗಿತ್ತು ಈ ಹೊತ್ತಿಗೆ ಇವಳು" ಅಂತ ತಮ್ಮದೇ ಸಮಜಾಯಿಷಿ ಕೊಟ್ರು ವನಜಮ್ಮ. ನಿಜ ಸಂಗತಿಯೆಂದರೆ ರಮಾ ತನ್ನ ಆರನೇ ಕ್ಲಾಸಿನಲ್ಲಿ ಮೊದಲ ಸ್ಥಾನ ಪಡೆದಾಗ ಸ್ಕೂಲಿನ ಸಮಾರಂಭದಲ್ಲಿ ಪ್ರಸಾದಪ್ಪನ ಕೈಲೇ ಪ್ರಶಸ್ತಿ ಸಿಕ್ಕಿತ್ತು. ಇದು ಎಲ್ಲರಿಗೂ ಗೊತ್ತಿತ್ತು...ವನಜಮ್ಮನವರ ಬಾಯಿಗೆ ಹೆದರಿ..ಎಲ್ಲಾ ವಿಷಯವನ್ನ ಅಲ್ಲಿಗೇ ಮುಕ್ತಾಯ ಮಾಡಿದರು. ಮಮ್ತಾಜ್ ಳ ಪ್ರಚಾರವೇ ಬೇರೆ ಆಗಿತ್ತು. "ಬಾಲಕಲ್ಯಾಣ ಮಂಡಳಿ ಅಧ್ಯಕ್ಷರ ಮನೆಯಲ್ಲಿಯೇ ಬಾಲಕಾರ್ಮಿಕ - ಹೇಳೋದು ಶಾಸ್ತ್ರಕ್ಕೆ, ಬದನೇ ಕಾಯಿ ತಿನ್ನೋಕೆ" ಅಂತ ಮೊಹಲ್ಲಾದ ಪ್ರಸಿದ್ಧ ಪತ್ರಿಕೆ "ಕಹಳೆ-ರಗಳೆ" ಯಲ್ಲಿ ಬಂದೇ ಬಿಡ್ತು ಮಮ್ತಾಜಳ ಲೇಖನ!!. ಮೊಹಲ್ಲಾದಲ್ಲಿ ಮಾತ್ರವಲ್ಲ ಈಗ..ಮಂತ್ರಿಮಂಡಲ..ವಿರೋಧಪಕ್ಷ ಎಲ್ಲಾ ಕಡೆ...ಅಧ್ಯಕ್ಷ ಪ್ರಸಾದಪ್ಪನವರ ಸಮಾಜದ ಬಗ್ಗೆ ಅವರಿಗಿರುವ ಕಳಕಳಿಯ ಬಗ್ಗೆ ಚ-ಕಾರ ಶುರುವಾದವು. "ಕಹಳೆ-ರಗಳೆ"ಯ "ಎಲ್ಲೆಲ್ಲೂ ಗುಲ್ಲು" ಅಂಕಣದಲ್ಲಿ -ತನ್ನ ಚರ್ಮ-ಉಳಿಸಿಕೊಳ್ಳಲು ಮು.ಮಂ. ಗಳು ಪ್ರಸಾದಪ್ಪನನ್ನು ಬಾ.ಕ.ಮಂ. ದಿಂದ ಎತ್ತಂಗಡಿ ಮಾಡಿದರು ಅಂತ ಪ್ರಕಟ ಆಯ್ತು, ಇದಾದ ಮೂರನೇ ದಿನವೇ ಅದೇ ಪತ್ರಿಕೆಯ ಇನ್ನೊಂದು ಅಂಕಣ "ಅಲ್ಲೋಯ್ತು ಇಲ್ಬಂತು" ನಲ್ಲಿ ಬಂದ ಸುದ್ದಿ -ಪ್ರಸಾದಪ್ಪನಿಗೆ ಚರ್ಮ ನಿಗಮದ ಅಧ್ಯಕ್ಷರನ್ನಾಗಿ ನೇಮಕ ಮಾಡಿ ಮು.ಮಂ. ಕಾರ್ಯಾಲಯದ ಪ್ರಕಟಣೆ.

Monday, March 16, 2009

ನಮ್ಮ ಕರುನಾಡು - ನಮ್ಮ ಮುಂದಿನ ದಶಕದ ಕನಸು





















ಮೈಸೂರು ಅರಸರ, ಭಾಗ್ಯಶಿಲ್ಪಿ ವಿಶ್ವೇಶ್ವರಯ್ಯನವರ ಸುಯೋಜಿತ ಯೋಜನೆಗಳು, ಕೆಂಗಲ್ ಹನುಮಂತರಾಯರ ಧೀಮಂತಿಕೆ, ನಿಜಲಿಂಗಪ್ಪನವರ ಚಾಣಾಕ್ಷ ಬುದ್ಧಿ, ಅರಸು ತಂದ ಕರ್ನಾಟಕ, ಹೆಗ್ಗಡೆ ಗೌಡರಿಂದಾದ ಬೆಳವಣಿಗೆ, ಕೃಷ್ಣರ ಐಟಿ-ಬಿಟಿಗೆ ಉತ್ತು, ಕನ್ನಡಿಗರ ಪ್ರತೀಕವೆಂಬಂತೆ ಬೆಳೆದ ನಾರಾಯಣ ಮೂರ್ತಿಗಳು, ಹೀಗೆ...ನಮ್ಮ ನಾಡಿನ ಬೆಳವಣಿಗೆ ಇತರರಿಗೆ ಈರ್ಷೆಯಾಗುವ ಮಟ್ಟಿಗೆ ಮುನ್ನಡೆದಿದೆ. ಕ್ಷುಲ್ಲಕ-ಸಂಕುಚಿತ ವಿಚಾರಧಾರೆಗಳಿಗೆ ಬಲಿಯಾಗದೆ ನಾಡ ಜನತೆ ವಿವೇಚಿತ ಯೋಜನೆಗಳನ್ನು ಸಾಕಾರ ಮಾಡುವಲ್ಲಿ ಸಹಕರಿಸಿದರೆ .......ಮುಂಬರುವ ಹತ್ತು ವರ್ಷಗಳಲ್ಲಿ....ಹೀಗೆ ಕಾಣಬಹುದೇ...??






Monday, March 9, 2009



ಗತ ವೈಭವ
ತುಂಗಭದ್ರೆಯ ಮಡಿಲು
ಉತ್ತುಂಗಗಳ ಕಂಡ ಒಡಲು
ಬೀದಿಯಲಿ ಮಾರಿದರು
ಮುತ್ತು-ರತ್ನ ನಾಡ ಸುತರು
ಹಕ್ಕ-ಬುಕ್ಕರು ವೈಭವಕೆ ನಾಂದಿ
ಬೆರಗಾಗಲಿಲ್ಲವೇ ವಿದೇಶೀ ಮಂದಿ
ಬಂದೆರಗಿತು ವಿಧಿ
ಕರಗಿಹೋಯಿತು ನಿಧಿ
ಅಳಿದುಳಿದದ್ದು
ಹದ್ದುಗಳ ಪಾಲು
ಹತಾಶರಾಗಿ ಹೋದರು
ಇದ್ದವರೂ ದಿಕ್ಕಾಪಾಲು
ಕಳೆದುಕೊಂಡ ನರ-ಸಿಂಹ
ತಡೆಯದಾದ ಇದ ಪರಬ್ರಹ್ಮ
ಒಮ್ಮೆ ಮಿಡಿದಿದ್ದವು
ಆಗಿದ್ದರೂ ಕಲ್ಲು ವೀಣೆಗಳು
ನುಡಿದಾವೇ ಒಮ್ಮೆ ಬಂಡೆಗಳು?
ಚಾಲನೆ ಕಂಡಾವೇ ಕಲ್ಲು ರಥಗಳು?

ಭಗ್ನ-ಕನಸು
ಗತ ವೈಭದಲ್ಲಿ ಎಷ್ಟೊಂದು ಆನಂದವಿದ್ದಿರಬಹುದು?!! ನನಗೆ ಹಳೇಬೀಡನು ಕಂಡಾಗ ಒಡನೆ ನೆನಪಿಗೆ ಬಂದದ್ದು ನಮ್ಮ ಹಳ್ಳಿಗಳಲ್ಲಿ ಮನೆ ಕಟ್ಟುವ ಜಾಗಗಳಲ್ಲಿ ಮರಳಿನ ರಾಶಿಯ ಮೇಲೆ ಆಟವಾಡಿದ ದಿನಗಳು, ನನ್ನ ಸ್ನೇಹಿತನ ಪುಟ್ಟ ತಮ್ಮ ತನ್ನ ಕಾಲಿನ ಸುತ್ತ ಅರೆನೆನೆದ ಮರಳನ್ನು ತಟ್ಟಿ.. ಮತ್ತ ಅದರ ಸುತ್ತ ಇನ್ನಷ್ಟು ಮರಳನ್ನು ಪೇರಿಸಿ ಪುಟ್ಟ ಪುಟ್ಟಗುಬ್ಬಿ ಗೂಡನು ಮಾಡಿದ್ದು ಕಾಲನ್ನು ನಿಧಾನವಾಗಿ ಹೊರಗೆಳೆದು ಗೂಡಿನ ಬಾಗಿಲನು ಮಾಡಿ ಸಂಭ್ರಮಿಸಿದ್ದು, ನನ್ನ ಸ್ನೇಹಿತನ ಕೆಟ್ಟ ಗೆಳೆಯನೊಬ್ಬ ಆ ಪುಟ್ಟನ ಗೂಡನ್ನು ಒಮ್ಮೆಗೇ ಕಾಲಿಂದ ಒದ್ದು ಒಂದುರೀತಿಯ ವಿಕೃತ ನಗೆ ಬೀರಿದ್ದು ಪುಟ್ಟ ತನ್ನ ಗೂಡು ಪಾಳುಬಿದ್ದದ್ದು ಕಂಡು..ದಪ್ಪ ದಪ್ಪ ಕಣ್ಣಿನಲ್ಲಿ ಅಷ್ಟೇ ದಪ್ಪನೆಯ ಹನಿಯಾಡಿದ್ದು.. ಒಂದು ಕ್ಷಣದ ಆಟದ ಮರಳಿನ ಮನೆ ಹಾಳಾದೊಡನೆ ಸಂಕಟ ಪಟ್ಟ ಪುಟ್ಟ ಬ್ರುಹತ್ ಕಲ್ಲು ಶಿಲ್ಪಗಳ ಮಹಾನ ಶಿಲ್ಪಿಗಳ ಅವಿರತ ಶ್ರಮ ಕೆಲವೇ ದಿನಗಳಲ್ಲಿ ಧರೆಗುರುಳಿದಾಗ.. ಶ್ರಮಿಕರು, ಶಿಲ್ಪಿಗಳು ಸೃಜನಶೀಲರು.. ಇವರೆಲ್ಲರನು ಪ್ರೋತ್ಸಾಹಿಸಿ ಕನಸುಕಂಡ ಅರಸರ ಕಣ್ಣಲ್ಲಿ ರಕ್ತ ಕಣ್ಣೀರು ಹರಿದಿರಲಿಕ್ಕಿಲ್ಲವೇ..?

Thursday, February 26, 2009

ಕವನಗಳು


ಜಲಪಾತ

ಹನಿಯಾಯಿತು ದನಿ
ಧೋ-ಗುಡುವುದು ಹನಿ
ಗುಡು-ಗುಡಿಸುವ
ಕೋರೈಸುವ
ಸಿಡಿಲ್ಮಿಂಚು ಗುಡುಗು
ಕರಗಿ ಮೋಡದ ಹಡಗು
ತುಂಬಿ ಹರಿದು ಬೊಗಸೆ
ಬೀದಿ ಹೊಲ ತೊರೆನೆರೆ
ಕಾಲುವೆಯಾದ ವರಸೆ
ಬೀಡನ್ನು ಕೊರೆದು
ಕಾಡಲ್ಲಿ ಹರಿದು
ಬಂಡೆಗಳಮೇಲಿಂದ ಹರಿಯುತ
ಮೂಡಿದುದೊಂದು ಪುಟ್ಟ ಜಲಪಾತ
ತೊರೆಕಾಲುವೆ ಕೂಡಿ ನದಿ
ಹರಿದು ರಭಸದಿ ಆಗಿ ಮಹಾನದಿ
ಬೆಟ್ಟದಮೇಲಿಂದ ಜಿಗಿಯುತ
ಬೀಳುವುದು ಲೆಕ್ಕವೇ ಅದಕೆ
ಆದರೂ ಅದು ಅಗಾಧ ಪ್ರಪಾತ
ಅದಕಲ್ಲವೇ ಆದುದು ರಮಣಿಯ ನಯನಕೆ
ವಿಶ್ವವಿಖ್ಯಾತ ಕರುನಾಡ ಹೆಮ್ಮೆ
ಧುಮುಗುಡುತ ಧುಮುಕುವ
ಶರಾವತರಿತ ಜೋಗ ಜಲಪಾತ

Tuesday, February 24, 2009

ಜಾಣ ಮೀನು
ಅಲೆಮೇಲೆ ಅಲೆ
ಅಲೆಮಾರಿ ಮೀನು
ನೆಲೆ ಕಂಡ ಸೆಲೆ
ಮೆಲ್ಲನೆ ನುಸುಳಿತು ಬೋನು
ಅದು ಕಂಡರಿಯದ ಬಲೆ
ಇದ ತಿಳಿದವು ಕೆಲ ಮೀನು
ಅರಿಯದೆ ಸಿಕ್ಕಿಕೊಂಡವು ಹಲವು
ಅಡಗಿ ಕುಳಿತಿತ್ತು ಅಲ್ಲೇ ಸಾವು
ಜಾಣ ಮೀನು ಉಂಡೂ ಹೋದವು
ಕೊಂಡೂ ಹೋದವು
ಇನ್ನೂ ಹಲವು ಒಟ್ಟುಗೂಡಿ
ಬಲೆಯ ಗೂಟದಿಂದ ಕಿತ್ತು ದೂಡಿ
ಚೂಪುಹಲ್ಲು ಬಲೆಯ ಹರಿದವು
ಛಾಪೂ ಉಳಿಸದೆ
ಜಿಗಿದು ಹೋದವು