Thursday, September 15, 2011
Saturday, September 10, 2011
ಅದರ ಬದಲು....
ನನ್ನ ಚಿಕ್ಕತಮ್ಮನಂತಹ ಗೆಳೆಯನೆಂದ
2011 ರ ಕ್ಯಾಲಂಡರ್ ಇಲ್ಲವೇ ಅಣ್ಣ?
ಯಾಕೆ ವರೀ..?? ಅದರಲ್ಲೂ ಅದೇ ಬಣ್ಣ
2005 ರ ಕ್ಯಾಲಂಡರ್ 2011 ರ ತದ್ರೂಪು
ಹಿಂತಿರುವಿ ಹಾಕು ಪುಟಗಳ, ಮಾಡು ಟೆಬಲ್ ಟಾಪು.
ತೊಡೆಯಲು ನಿನ್ನ ಕ್ಯಾಲಂಡರ್ ಬೇಕುಗಳ
ಕಟ್ ಮಾಡು ಹೊಸ ವರ್ಷದ ಕೇಕುಗಳ.
ನಿನ್ನ ಬೆಳ್ಳಿಯಾಗಹೊರಟೆ ತಲೆ ಕೂದಲಿಗೆ
ಡೈ ಹಚ್ಚಲು ಪ್ರಾರಂಭಿಸಲಿಲ್ಲವೇ 2008 ಮೊದಲಿಗೆ
ನಿನ್ನ ಮನದಲ್ಲಿನ ತುಯ್ದಾಟಕ್ಕೆ ಸೋತು
ಟೀ ಶರ್ಟು ಜೀನ್ಸು ನಿನ್ನ ಮೈಗೆ ಬೀಳಲಿಲ್ಲವೇ ಜೋತು?
ಡಯಟಿಂಗು ಬಂತು, ಹೆಚಾದ್ವು ನಿನ್ನ ಬೆಳಗಿನ ವಾಕುಗಳು
ಯುವ ಲುಕ್ಕಿನ ಬಗ್ಗೆ ಸಮವಯಸ್ಕರೊಡನೆ ಟಾಕುಗಳು..?
ಹಾರಿದ್ದು ಆರು..ವರುಷ, ಅಲ್ಲಲ್ಲಿ ತಂದದದ್ದು ಹರುಷ
ದಾರಿಗುಂಟಾ ಓಡ್ತಿದ್ದೆ.. ನಡಿಗೆ ಆಯ್ತು
ನಡಿಗೆ ಬಿಡ್ತು ಕಾರ್ ಬಂತು, ನೋಡ್ತಿದ್ದೆ ಕನ್ನಡಿ..ಆಗ,
ನೋಡಿದ್ರೆ ಮನ ಚೀರುತ್ತೆ ಈಗ.., ಕನ್ನಡಕ...
ಕಣ್ಣು ನೋಡೊಲ್ಲ ಅನ್ನುತ್ತೆ..
ತಮ್ಮನ ಮಾತನ್ನ ಪಾಲಿಸ್ದೆ..ತಿರುವಿದೆ ಕ್ಯಾಲೆಂಡರ್
2005 ನ್ನು ತಿದ್ದಿ 2011 ಮಾಡಿದೆ, ಡೈ ತಲೆಗೆ, ಮೀಸೆಗೆ..
ಯಾಕೋ ..ಹೊಸತನ ಅನ್ನಿಸ್ತು..ಯುವಕನಾಗೋ ಆಸೆಗೆ
ಹಾಗೆ ಓಡೋಕೆ ಆಗೊಲ್ಲ ಆದ್ರೂ ಮಾಡ್ತೀನಿ..ಪ್ರಯತ್ನ
ಅದೇ ನೆಪದಲ್ಲಿ ಕ್ರಮ್ಸಿದೀನಿ ಬಹಳ ದೂರಾನ
ಅನ್ನಿಸುತ್ತೆ, ಯಾವ್ದೂ ಅಸಾಧ್ಯ ಅಲ್ಲ ಅನ್ನೋದು
Friday, August 12, 2011
Tuesday, August 2, 2011
ಮತ್ತೊಂದು ಶತವಿಕ್ರಮನ ಪ್ರಯತ್ನ.....
(ಚಿತ್ರ ಕೃಪೆ: ಅಂತರ್ಜಾಲ)
ಬಿದ್ದರೂ ಆಗಲಿಲ್ವೇ ಮೀಸೆ ಮಣ್ಣು...???
ಒಮ್ಮಿಂದೊಮ್ಮೆಗೇ ಶತವಿಕ್ರಮ ಜನಕಲ್ಯಾಣದ ತನ್ನ ದೀಕ್ಷೆ ಮತ್ತು ತನ್ನ ಹಿರಿಯರಿಗೆ ಕೊಟ್ಟ ಮಾತಿನ ನೆನಪಾಯಿತು. ನೆನೆಪಾಯಿತು ಅನ್ನೋದಕ್ಕಿಂತಾ ಆನಂದ್ ಜಗ್ಡೆ ಎನ್ನುವ ಸಾಮಾಜಿಕ ಕಾಳಜಿ ಕಳಕಳಿಯ ನ್ಯಾಯಮೂರ್ತಿ ಕಪಿಲಾಪುರಕ್ಕೆ ಅಂಟಿದ್ದ ಪಿಡುಗುರೂಪದ ಜಗಮೊಂಡ ಪ್ರಜಾಪತಿ ಕಿಡಿಕಾರಪ್ಪನನ್ನು ಮುಲಾಜಿಲ್ಲದೇ ಅಂಟಿಕೊಂಡಿದ್ದ ತನ್ನ ಪೀಠದಿಂದ ತಾನಾಗೇ ಅಳುತ್ತಾ ಬಿಡುವಂತೆ ಮಾಡಿದ ಮಹತ್ವಪೂರ್ಣ ವರದಿಯೇ ಶತವಿಕ್ರಮನನ್ನು ಜಾಗೃತಗೊಳ್ಳುವಂತೆ ಮಾಡಿತ್ತು ಎನ್ನಬಹುದು.
ಎಲ್ಲಾ ಪಿಡುಗಿಗೂ ಕಾರಣನಾದ ಕೇವಲ ಶತವಿಕ್ರಮನಿಗೇ ಪರಿಚಯವಿರುವ ಭೇತಾಳನನ್ನು ಸೋಲಿಸದೇ ಯಾವುದೇ ಪ್ರಯತ್ನ ಸಮಾಜ ಕಲ್ಯಾಣವನ್ನು ಶಾಶ್ವತಗೊಳಿಸದು ಎನ್ನುವುದೂ ಶತವಿಕ್ರಮನಿಗೆ ಬಹಳ ಚನ್ನಾಗಿ ತಿಳಿದಿರುವ ವಿಷಯವೇ. ಇನ್ನು ಆಲಸ್ಯ ಸಲ್ಲ ಎಂದು ತಲೆ ಕೊಡವಿ ಭೇತಾಳನ ಜಾಡು ಹುಡುಕಲು ತನ್ನ ಲ್ಯಾಪ್ ಟಾಪ್ ತೆಗೆದು ನೆಟ್ ಓಪನ್ ಮಾಡಿ ಗೂಗಲ್ ಮ್ಯಾಪಿಗೆ ಮೊರೆಹೋದ. ತಂತ್ರಜ್ಞಾನ ನಮ್ಮ ಪುಂಡ ರಾಜಕಾರಣಿಗಳಂತಲ್ಲ... ಬೇಕಾದಾಗ ಕೈ ಕೊಡುವುದಿಲ್ಲ...ಪ್ರಭಾವಿಗಳ ಕೈಗೊಂಬೆಯಾಗುವುದಿಲ್ಲ ..ಲಂಚಕ್ಕೂ ಸುತಾರಾಂ ಜಗ್ಗೊಲ್ಲ...ಬುದ್ಧಿವಂತಿಕೆಯಿದ್ದರೆ ವೈರಸ್ಗಳನ್ನ ಕೊಡವಿ ಮತ್ತೆ ಕಾರ್ಯನಿರತವಾಗುವಂತಹುದು. ಶತವಿಕ್ರಮನಿಗೆ ಸಿಕ್ಕೇ ಬಿಡ್ತು ಭೇತಾಳನ ಅಡ್ರೆಸ್...!!! ಅರೆರೆ ಇದೇನು...ಹೋಗಿ ಹೋಗಿ ವಿಧಾನಸೌಧದ ಮುಖ್ಯ ಸಭಾಂಗಣದಲ್ಲೇ ರಾಜಾರೋಶವಾಗಿ ಛಾವಣಿಯ ತೂಗುದೀಪಗೊಂಚಲಿಗೆ ಜೋತು ಬಿದ್ದಿದೆ...!!!!!, ಹೌದಲ್ಲಾ.. ಕಪಿಲಾಪುರದ ಜಗಮೊಂಡ ತನ್ನ ಪೀಠ ಬಿಟ್ಟಮೇಲೆ ಅವನ ಉತ್ತರಾಧಿಕಾರಿಗಾಗಿ ಕಸರತ್ತು ನಡೆಯುತ್ತಿರುವಾಗ ಬಣಗುಡುತ್ತಿದ್ದ ಸೌಧದ ಸಭಾಂಗಣ ತನಗೆ ಸೂಕ್ತ ಎಂದು ಅಲ್ಲಿ ಹೋಗಿದೆಯೋ ಅಥವಾ ಮುಂಬರುವ ಕಪಿಲಾಪುರಾಧೀಶನ ತಲೆಗೆ ಹುಳು ಬಿಟ್ಟು ತನ್ನ ಸಾಮ್ರಾಜ್ಯ ವಿಸ್ತರಣೆಗೆ ಹೊಂಚುತ್ತಿದೆಯೋ ??? ಭೇತಾಳನ ಈ ಪ್ರಯತ್ನವನ್ನ ತಡೆಯಲೇ ಬೇಕು ಎಂದು ಯೋಚಿಸಿದ ಶತವಿಕ್ರಮ ಕಾರ್ಯ ತತ್ಪರನಾದ. ಸೌಧದ ಸಭಾಗೃಹಕ್ಕೆ ಹೋಗಿ ನೇತಾಡುತಿದ್ದ ಶವವನ್ನು ತೂಗುದೀಪದಿಂದ ಇಳಿಸಿ ..ಹೆಗಲಿಗೇರಿಸಿ ಕಾರಿಡರ್ ಮೂಲಕ ಹೊರಬಾಗಿಲಲ್ಲಿ ಪಾರ್ಕ ಮಾಡಿದ್ದ ತನ್ನ ಟೋಯಾಟಾ ಇನೋವಾ ಕಡೆಗೆ ಹೆಜ್ಜೆ ಹಾಕತೊಡಗಿದ.
ಶವದೊಳಗಿನ ಭೇತಾಳ ಮಾತನಾಡತೊಡಗಿತು....ಎಲೈ. ಶತವಿಕ್ರಮ ನಿನ್ನ ಪರಿಶ್ರಮ ನೋಡಿದರೆ ಲೋಕಾಯುಕ್ತದ ಸಮಗ್ರ ಮೂಲವಾದಂತಹ ಲೋಕಪಾಲ ಮಸೂದೆಯ ವಿಧಿವತ್ ಅಂಗೀಕಾರಕ್ಕೆ ಹೆಣಗುವ ಅಣ್ಣಾ ಸಾವ್ರಾರೆ ಯ ಪ್ರಯತ್ನದ ನೆನಪಾಗುತ್ತದೆ. ತಮ್ಮ ಬೇಳೆ ಬೇಯಿಸಿಕೊಳ್ಳಲು ಲಂಚಕ್ಕೆ ಜೈ ಎನ್ನುವ ಮಧ್ಯಮವರ್ಗದ ಜನ, ಮತದಾನದ ಸಮಯದಲ್ಲಿ ಹೆಂಡ, ಸೀರೆ, ಅಲ್ಪ ಸ್ವಲ್ಪ ಹಣದ ಆಸೆಗೆ ತಮ್ಮ ಅಮೂಲ್ಯಮತವನ್ನು ಮಾರಿಕೊಳ್ಳುವ ಬಡವ-ದೀನಜನ, ತಮ್ಮ ಪೀಠ-ಭಡ್ತಿಗೆ ಹೆಚ್ಚು ಆದ್ಯತೆಕೊಡುವ ಮತ್ತು ಸಮಯ ಸಿಕ್ಕಾಗ ಲಂಚವೆನ್ನೋ ಮಂಚ ಏರುವ ಕನಸಲ್ಲೇ ತೇಲುವ ಅಧಿಕಾರಿವರ್ಗ ಇವರೆಲ್ಲಾ ಇರುವವರೆಗೆ ಆನಂದ ಜಗ್ಡೆಯಂಥವರ, ಅಣ್ಣಾ ಸಾವ್ರಾರೆಯಂಥವರ ಮನೋಭಿಲಾಶೆ ನೆರವೇರದು ಅಂತಹವರ ಮೂಲಕ ನನ್ನನ್ನು ಸದೆಬಡಿದು ಸಮಾಜ ಕಲ್ಯಾಣದ ಕನಸು ಕಾಣುವ ನಿನ್ನಂತಹವರ ಅಭಿಲಾಶೆ ನೆರವೇರದು...ಇರಲಿ...ನನ್ನ ಸಂದೇಹಕ್ಕೆ ಉತ್ತರ ಕೊಡು...ತಿಳಿದೂ ಹೇಳದೆ ಹೋದರೆ ನಿನ್ನ ತಲೆ ನಿದ್ದೆಯ ಮಂಪರಲ್ಲಿ ವಿಮಾನ ಹಾರಿಸಿ ಮಂಗಳಾಪುರದಲ್ಲಿ ಅಪಘಾತ ಮಾಡಿ ಸಿಡಿದ ಪೈಲಟ್ ನ ತಲೆಯತೆ ಸಿಡಿದೀತು...ಎಚ್ಚರ...
ಈಗ ಆನಂದ ಜಗ್ಡೆ ವರದಿ ಕಿಡಿಕಾರಪ್ಪನ ತಲೆದಂಡಕ್ಕೆ ಕಾರಣವಾಗಿದೆ...ತಾನು ಪೀಠ ಬಿಡುವಾಗ ..ದೀನಾತಿದೀನ ಅಳುಬುರುಕ ಮುಖ ತೋರಿದ ಕಿಡಿಕಾರಪ್ಪ ಎರಡೇ ದಿನದಲ್ಲಿ ಪುನರ್ಜನ್ಮ ಪಡೆದ ಭೂತದಂತೆ ತನ್ನ ವಿಕ್ಟರಿ ಸಂಕೇತ ತೋರುತ್ತಾ ಎಲ್ಲೆಡೆ ಮೆರೆದಿದ್ದು ಏಕೆ..?? ಸೋತರೂ ಸೋಲಲಿಲ್ಲವೆಂದೇ? ತನ್ನದೇ ಪಕ್ಷದ ಅರ್ಧ ಬಲದ ಬೆಂಬಲ ಇದ್ದರೂ ಆರು ಕೋಟಿ ಜನತೆ ತನ್ನ ಬೆಂಬಲಕ್ಕಿದೆ ಅನ್ನೋ ಭಂಡತನ ಏಕೆ?? ಇನ್ನು ಆರು ತಿಂಗಳಲ್ಲೇ ತಾನು ಮತ್ತೆ ಬರ್ತೇನೆ ಎಂದು ಧೀಟಾಗಿ ಘೋಷಿಸಿದ್ದು ಯಾರ ಬಲದಮೇಲೆ....??? ಈ ಎಲ್ಲಾ ಸಂದೇಹಗಳಿಗೆ ನಿನ್ನ ಉತ್ತರವೇನು...??
ಎಲೈ ಭೇತಾಳನೇ,,,ನಿನ್ನ ಬರಿ ಬುರುಡೆ ತಲೆಗೇ ಇಷ್ಟೆಲ್ಲಾ ಯೋಚನೆ ಬಂದರೆ ಇನ್ನು ತಲೆತಲಾಂದರದಿಂದ ಚಾಣಾಕ್ಷ ಪರಂಪರೆಯ ನನಗೆ ಹೇಗಿರಬೇಡ..?? ಕಿಡಿಕಾರಪ್ಪ ತನ್ನ ಹಿಂದಿರುವ ಬಾಯಿಬಡುಕ ಬೆಂಬ್ಲಿಗರೆಂದರೆ ಇಡೀ ಕಪಿಲಾಪುರದ ಬೆಂಬಲಕ್ಕಿದೆ ಎನ್ನುವ ತಪ್ಪು ಕಲ್ಪನೆಯಿಂದ ಹಾಗೆ ಹೇಳಿರಬೇಕು,,,ಇನ್ನು ವಿಕ್ಟರಿ ಸಂಕೇತ ಆತನ ಅಭ್ಯಾಸ ಬಲ...ಅದು ತಪ್ಪು ಕಲ್ಪನೆಯ ಫಲವೂ ಆಗಿರಬಹುದು...ಮತ್ತೆ ಆರು ತಿಂಗಳಲ್ಲಿ ವಾಪಸಾಗುತ್ತೇನೆಂಬ ಆತನ ಹೇಳಿಕೆ...ನಿನ್ನಂತಹ ಕುಲಗೇಡಿಗಳ ಸಹಾಯ ಸಿಗಬಹುದೆಂಬ ಆಶಾವಾದದಿಂದ.....
ಹಹಹ ಶತವಿಕ್ರಮ ನೀನು ಹೇಳಿದ್ದು ಸರಿ ಆದರೆ ನೀನು ನಿನ್ನ ಮೌನ ಮುರಿದೆ,,,,ಆದ್ದರಿಂದ ಸೋತೆ...ಇದೋ ನಾನು ಮತ್ತೆ ಹೊರಟೆ...ಎನ್ನುತ್ತಾ ...ಶತವಿಕ್ರಮನ ಹೆಗಲಿಂದ ಹಾರಿ ಕತ್ತಲಿಲೊಳಕ್ಕೆ ಕರಗಿ ಹೋಯಿತು.
ಛೇ ..ಮತ್ತೆ ಈ ಬಾಯಿ ಬಡುಕನ ಮಾತಿಗೆ ಮೋಸಹೋದೆ,,,ತಲೆಕೆಟ್ಟವರ ಸಂದೇಹ ನಿವಾರಣೆ ಮಾಡಲು ಹೋಗಲೇಬಾರದು...ಸರಿ ..ಹೋದ್ರೆ ಹೋಗಲಿ...ಈ ಭೇತಾಳನನ್ನು ಕಿಡಿಕಾರಪ್ಪನ ಉತ್ತರಾಧಿಕಾರಿಯ ತಲೆಕೆಡಿಸಲು ಬಿಡಬಾರದು,,,ಇವನನ್ನು ಹಿಡಿದು ಮಟ್ಟಹಾಕಲೇಬೇಕು..ಎಂದುಕೊಂಡ ಶತವಿಕ್ರಮ ಮತ್ತೆ ಭೇತಾಳನನ್ನು ಹುಡುಕುತ್ತಾ ಹೊರಟ.
Wednesday, July 13, 2011
ಮಾದ್ಯ್ಮಾ ಮಾದ್ಯ್ಮಾಅಂತ್ವಟ್ಗುಟ್ಟವ್ರೆ
ಇಂಗ್ಲೀಸೋರೋದ್ರೂ ಕನ್ಡ ಮರ್ತ್ಬುಟ್ಟವ್ರೆ
ಕನ್ನಡ್ದಾಗೆ ಕಲ್ಯೋಕೂ ಕಲ್ಸಾಕೂ
ಆಗಾಣಿಲ್ಲ ಅಂತಾರ್ಯ್ಯಾಕೋ..?
ಪಂಪ, ರನ್ನ, ಪುರಂದರಕನ್ಕ ಕುಮಾರ್ವ್ಯಾಸ
ಇಂಗ್ಲೇಂಡ್ನಾಗ್ ಕುಣುದ್ರಾ ಆಕ್ಕೊಂಡು ಯಾಸ..?
ಆಡ್ಮುಟ್ದೇಯಿರೋ ಸೊಪ್ಪಿಲ್ಲಾಂತಾರೆ
ಎಲ್ಲಾ ಇಸ್ಯ ನನ್ನಂತೋನ್ಗೂ ತಿಳ್ಯಂಗ್
ಮೆದ್ಲಿಗೇ ಕೈ ಆಕಿ ಯೋಳಿಲ್ವಾ ಸರ್ವಜ್ಞ ?
ಮಾತ್ನಾಗೆ ಲೇಕನ್ದಾಗೆ ಲೋಕಾನ ತಿದ್ದುದ್ರು
ಇಂಗ್ಲೀಸ್ಗಂದಾನೆ ಇರ್ನಿಲ್ಲ ಅವ್ರಿರ್ಗೆಲ್ಬಂತು ಇಜ್ಞ??
ಬುಡ್ಬಿಡಿ, ಮನೆಮಾತ್ನೇ ನೆಟ್ಗ್ ಅಡಾಣಿಲ್ಲ
ಪರ್ದೇಸಿ ಬಾಸೆ ಏರಿ ಅತ್ತಾಣಿಲ್ಲ
ಕುಣೀಲಾರ್ದ್ಸೂಳೆ ಡೊಂಕಂತಾಳೆ ನೆಲಾವ
ನೆಟ್ಗೋದ್ಬರ್ದು ಮಾತಾಡಾದ್ಕಲೀರಿ ಕನ್ಡಾವ
Thursday, June 30, 2011
ಬೆಳಕು - ಕತ್ತಲಿನಾಟ
(ಚಿತ್ರ: ಪ್ರಕಾಶ್ ನ ಬ್ಲಾಗ್ ಛಾಯಾ ಚಿತ್ತಾರ)
ಬೆಳಗು ಮಿಣುಕು ದೀಪ ಆವರಿಸಿದಂತೆ ಕತ್ತಲು
ಜಗಮಗಿಸುತ್ತವೆ ತುಂಬಿಸಿ ಬೆಳಕ ಸುತ್ತಲೂ
ಮುಳುಗುವ ಸೂರ್ಯ ಮರಳಿಬರಲು ನಾಂದಿ
ಸಂಜೆಯ ದಿಗಂತದಲಿ ಚೆಲ್ಲಿ ಸೋನಾ ಚಾಂದಿ
ಬೆಳಕು ರಾತ್ರಿಯಲಿ ನಿರಂತರ ಕತ್ತಲಿನಾಟ
ಕತ್ತಲಲಿ ಆದದ್ದು ಸೂರ್ಯನಡಿಗೆಯಲೂ ಕಾಟ
ಝೊಪಡಿಗಳು ಯುಗಕಳೆದರೂ ಕಾಣುತ್ತಿಲ್ಲ ಬೆಳಕು
ಖೋಪಡಿಗಳು ಉರುಳಿದವು ಹೋಗುತ್ತಿಲ್ಲ ಕೊಳಕು
ಅಮಲಲಿ ಓಲಾಡುವರು ಉಳ್ಳವರು ತೆವಲಿನಲಿ
ರಾತ್ರಿಯಲೂ ಗೇಯ್ವರು ಇಲ್ಲದವರು ಬೆವರಿರಲಿ
ಕಂಠಕ್ಕೂ ತುಳುಕುವ ಮದಿರೆ ಚೆಲ್ಲಾಡುವರು ಅವರು ಅನ್ನ
ಬಾಸುಂಡೆ ಬಿದ್ದರೂ ದುಡಿಮೆ ಅನಿವಾರ್ಯ ಇವರೊಡ್ಡಿ ಬೆನ್ನ
Monday, June 20, 2011
ಮತ್ತೆರಡು ಹಾಡುಗಳು
ಮನ-ಮಂದಿರ
(ಪಲ್ ಪಲ್ ದಿಲ್ ಕೆ ಪಾಸ್ ತುಮ್ ರೆಹತೀ ಹೋ..)
ನನ್ನೀ ಮನದಲ್ಲೇ ನೀ ಮನೆಮಾಡಿರುವೆ
ಜೀವನ ಸುಖದಾಹ ನೀನೆಂದಿರುವೆ...ssss //೨//
ಪ್ರತಿ ಸಂಜೆ ಕಣ್ಣಿನಲಿ, ನಿನ್ನ ಸೆರಗಿನ ಹಾರಾಟ
ಪ್ರತಿ ರಾತ್ರಿ ಕನಸುಗಳ, ಸವಿ ನೆನಪಿನ ಚಲ್ಲಾಟ
ನನ ಉಸುರಿನ ಸೆಳೆತದಲಿ, ನಿನ ಮಧುರ ಸುವಾಸನೆಯು
ಮೈನವಿರೇಳಿಸುವಾ ಆವಾಹಕ ಭಾವನೆಯು
ನಿನ್ನೆದೆಯಾ ಬಡಿತದಲಿ ಪ್ರೇಮಾಂಕುರ ಗೀತೆಯಿದೇ..sssss
ನನ್ನೀ ಮನದಲ್ಲೇ ನೀ ಮನೆಮಾಡಿರುವೆ //ಪ//
ನಿನ್ನೆ ನಿನ್ನ ಕಂಡಿದ್ದೆ, ನನ್ನ ಮನಸಿನ ಅಂಗಳದಿ
ಅನಿಸಿತು ನೀನಂದಂತೆ, ನನ ಬಂಧಿಸು ತೋಳಿನಲಿ
ಇವು ಎಂಥಾ ಕನಸುಗಳು, ಇದು ಎಂಥಾ ಬಂಧನವು
ಬಲು ದೂರವೆನಿಸಿದರೂ ಬಹು ಹತ್ತಿರ ಭಾವನೆಯೂ
ನಾ ಯೋಚಿಸುತ್ತಲೆ ಇರುವೆ, ಭಯಭಯದಿ ಹೇಳಿರುವೆ ..ssss
ನನ್ನೀ ಮನದಲ್ಲೇ ನೀ ಮನೆಮಾಡಿರುವೆ //ಪ//
ನಿನಗನಿಸುತಲಿರಬಹುದು, ನನದೇಕೀಪರಿ ಪ್ರೇಮ
ಅಥವಾ ಹುಚ್ಚನೋ ಇವನು, ನನಗಿದು ಸಮ್ಮತವೇ
ಮರುಳಾದವನಾ ಮಾತ, ಮರುಳಾದವನೇ ಬಲ್ಲ
ಜ್ವಾಲೆಯ ದಹಿಸುವ ಸುಖವ ಅರಿತಿದೆ ಈ ಪತಂಗ
ನೀ ಹೀಗೆ ಸುಡುತಿಲಿರು ನನ್ನ ಮತ್ತೆ ಮತ್ತೆ ಕನಸಿನಲಿ..ssss
ನನ್ನೀ ಮನದಲ್ಲೇ ನೀ ಮನೆಮಾಡಿರುವೆ //ಪ//
ಸನಿಹ
(ರಿಮ್ ಝುಮ್ ಗಿರೆ ಸಾವನ್ - ಧಾಟಿ)
ಚುಮುಚುಮುಚುಮು ಛಳಿಯಲಿ
ಬಿಸಿಯುಸಿರಿರೆ ಬಳಿಯಲಿ...
ಹೇಗೆ ನಾನು ಮರೆಯಲೀ...
ಇರುತಿರೆ ನೀ ಸನಿಹದಲಿ...//ಚುಮು ಚುಮುಚುಮು//
ನಿನ ಬಳೆಯ ಕಲಕಲನಾದ
ಮುಂಗುರುಳ ಲಾಸ್ಯವಿನೋದ
ಮನದಾಳದಾಸೆಯನಿಂದು
ಮುದಗೊಳಿಸಿವೆ ಬಳಿ ಬಂದು
ಮರೆಯಾಗಿದೆ ಮುಖ ಸೆರಗಲಿ
ಮಂದಸ್ಮಿತೆ ನಗುವಲಿ
ಹೇಗೆ ನಾನು ಮರೆಯಲಿ...
ಇರುತಿರೆ ನೀ ಸನಿಹದಲಿ...//ಚುಮುಚುಮುಚುಮು//
ಮೀಟಿದೆ ಮನವೀಣೆಯನಂದು
ನವಿರಾದ ನಿನ ಬೆರಳಲ್ಲಿ
ಮರುದನಿಸಿದೆ ಸನಿಹವು ಇಂದು
ಸುಮಧುರ ಇನಿಗಾನವು
ನಿನ ನೆನಪು ಮನದಲಿ
ಒನಪು ಸದಾ ಕಣ್ಣಲಿ
ಹೇಗೆ ನಾನು ಮರೆಯಲಿ...
ಇರುತಿರೆ ನೀ ಸನಿಹದಲಿ...//ಚುಮುಚುಮುಚುಮು//
Subscribe to:
Posts (Atom)


