Monday, March 3, 2014

ಪ್ರೇಮ



ಪ್ರೇಮ

ಇಳೆಗೂ, ಮಳೆಗೂ
ಆಯ್ತು ಪ್ರೇಮ
ನದಿಗೆ, ಬದಿಯ
ತುಂಬಾ ಪ್ರೇಮ
ಮಾತು ಮೂಕ
ನಿಂತ ಪ್ರೇಮ
ನೋಟ ಕಣ್ಣು
ಕುರುಡು ಪ್ರೇಮ
ತುಟಿಗೆ ತುಟಿಯ
ಅಂಟೋ ಪ್ರೇಮ
ನೆಂಟ ಇಷ್ಟ
ಗಂಟು ಪ್ರೇಮ
ಅಕ್ಕ ಪಕ್ಕ
ಲೆಕ್ಕ ಪ್ರೇಮ
ಅಮ್ಮ- ಮಗುವ
ಚೊಕ್ಕ ಪ್ರೇಮ
ಇನಿಯ ಸನಿಯ
ದನಿಯ ಪ್ರೇಮ
ಮುನಿಯೋ ಮುನಿಸೋ
ನಲ್ಲೆ ಪ್ರೇಮ
ಕೊಟ್ಟ ಕೋಡಂಗಿ
ಈಸ್ಕೊಂಡ ಪ್ರೇಮ
ದಟ್ಟ ದರಿದ್ರಂಗೂ
ಹೊಟ್ಟೇದೇ ಪ್ರೇಮ
ಸುಡುವ ಹೆಣಕ್ಕೆ
ಚಟ್ಟದ್ದೇ ಪ್ರೇಮ.

Sunday, December 22, 2013

ಚಿಂತನೆ


ಚಿಂತನೆ 

 ಮಿದುಳ ಬಳ್ಳಿ ಆಳಕಿಳಿದರೆ ಸಾಕು 

ಗೋಳ ನೀ ಕೆದಕುವುದು ಏಕೆ?

ಇಲ್ಲವೇ ಹಸಿ ನೆನಪುಗಳು ಹುಸಿಯಾಗಿ 

ಹೊತ್ತು ತಂದೆ ಮತ್ತೆ ಹಸಿರಾಗಲೇಕೆ ?

 

ಕಳೆದ ದಿನ ರಾತ್ರಿಗಳು ಲೆಕ್ಕವಿಲ್ಲ

ನೆನಪು ಮಾಸದ ಕನಸಿಗೆ ಪುಕ್ಕವಿಲ್ಲ 

ಹಾರಲದು ಹವಣಿಸಲು ದೇಹ ತೂಕ

ಹಾಡುತಿವೆ ಹಕ್ಕಿಗಳು ಸ್ವರ ಹೊರಡುತ್ತಿಲ್ಲ 

 

ಸ್ವಚ್ಛಂದ ಇದ್ದಾಗ ಇಚ್ಛೆಯಾ ಹಣ್ಣು

ಪಂಜರದಿ ಕೂಡಿಟ್ಟು ಕೊಟ್ಟಿದ್ದು ಹುಣ್ಣು 

ಮರಗಿಡವ ಬೋಳಿಸಿಹೆ ಏಕಯ್ಯಾ ಹೀಗೆ?

ನಿನ್ನಂತೆ ಜೀವಿಗಳು ಕುರುಡಾಯ್ತೆ ಕಣ್ಣು?

 

ಆ ಜಲ, ನೆಲ, ಬೆಟ್ಟ, ಆಕಾಶ ಗುಡ್ಡ

ಕೊಟ್ಟರು ನಿನ ಪೂರ್ವಜರು ನೀನಾದೆ ದಡ್ಡ

ಕೆಡಿಸಿ, ಕಡಿಸಿ, ಗಣಿಗಾಣಿಸಿ ಕುಲಗೆಡಿಸಿ

ಸ್ವಾರ್ಥ ಸಾಧನೆಗೆ ಬಿದ್ದೆ ಮಾಡಿಕೊಂಡೆ ದುಡ್ಡ

 

ಮರೆತೆ, ನಿನ್ನದೂ ಇದೆ ಸಂತಾನ ಇಲ್ಲಿ

ಕೊಡುವೆಯಾ ಕೊಳವೆಗಳು ಬತ್ತಿ ಹೋದ ನಲ್ಲಿ?

ಸಮಯವಿದೆ ಎಚ್ಚೆತ್ತುಕೋ ಓ ಮನುಜ
ಇಲ್ಲವಾದರೆ ಇರದು ನಿನಗೆ ಉಳಿಗಾಲವಿಲ್ಲಿ  

Friday, November 22, 2013

ಕನ(ನ)ಸಾದೀತು

Source: deviantART

ಕನ(ನ)ಸಾದೀತು
ನನ್ನ ಕನಸ ನೀ ಹಾಡಬೇಡ
ನಾ ಹಾಡುವುದು ಕನಸಾದೀತು
ನನ್ನ ನಿದ್ದೆಯಲಿ ನೀ ಬರಬೇಡ
ರೆಪ್ಪೆ ಮುಚ್ಚುವುದೂ ಕನಸಾದೀತು

ನನ್ನ ನೆನಪಿನಲಿ ನೀನಿರಬೇಡ
ಸ್ಮೃತಿ ಮಿದುಳಿನ ಕನಸಾದೀತು
ನಾಲಿಗೆ ಅಂಚಲಿ ನಲಿಯಬೇಡ
ಮಾತು ಗಂಟಲಿಗೆ ಕನಸಾದೀತು

ನನ್ನ ಲೇಖನಿ ಅಂಚಿಗೆ ಬರಬೇಡ
ಶಾಯಿಗೆ ಅಕ್ಷರವೇ ಕನಸಾದೀತು
ಕಾಮನಬಿಲ್ಲ ಬಣ್ಣ ನೀನಾಗಬೇಡ
ಮಳೆಯ ಹನಿಯೂ ಕನಸಾದೀತು

ಆಶ್ವಾಸನೆಗೆ ನೆಪ ನೀನಾಗಬೇಡ
ಶ್ವಾನಕೂ ನಿಯ್ಯತ್ತೇ ಕನಸಾದೀತು
ಐದು ವರ್ಷಕ್ಕೊಮ್ಮೆ ನೀ ಬರಬೇಡ
ನನ್ನಾಯ್ಕೆ ನನಗೇ ಕನಸಾದೀತು

ದೇವರಾಗಿ ನನ್ನಲಿ ನೀನಾಗಬೇಡ
ಧರ್ಮದ ಅಸ್ತಿತ್ವವೇ ಕನಸಾದೀತು
ಭೂಮಿಲೇ ಸ್ವರ್ಗ ನೀಹುಟ್ಟಿಸಬೇಡ
ನರಕದ ಕಲ್ಪನೆಯೂ ಕನಸಾದೀತು

ನನ್ನನು ನಾನಾಗಲು ಬಿಡುವೆಯಾ?
ನನ್ನಲಿ ನನಗೇ ನಂಬಿಕೆ ಬರಲು
ಉಸಿರಾಡುವ ತನಕ ಹಸಿರಾಗಿರುವೆ
ಸಾರ್ಥಕ ಮನುಜನ್ಮ ನನಸಾದೀತು

Saturday, October 26, 2013

ನೀಲಿಗನ-ಧರತಿ

http://bhava-manthana.blogspot.com/2013/10/blog-post.html
ಚಿತ್ರ: ಹಮ್ ರಾಜ್ (1967), ಗಾಯಕ: ಮಹೇಂದ್ರ ಕಪೂರ್

ನೀಲಿಗನ-ಧರತಿ
ಹೇ, ನೀಲಿಗಗನದ ಅಡಿ
ಧರತಿಯ ಪ್ರೀತಿ ಗಡಿ
ಹೀಗೆಯೇ ಜಗದಿ
ಬೆಳಗಾಗೋ ತರದಿ
ಸಂಜೆಯವರೆಗೂ ನಡೆ
II ಹೇ ನೀಲಿಗಗನದ ಅಡಿ II
ಇಬ್ಬನಿ ಮುತ್ತು
ಸುಮಗಳ ಸುತ್ತೂ
ಎರಡಕ್ಕೂ ಆಸೆ ಭಿಡೆ..
II ಹೇ ನೀಲಿಗಗನದ ಅಡಿ II
ಬಳಕುವ ಲತೆಯೂ
ಕುಲುಕುವ ಕಥೆಯೂ
ಹಾದಿಗೆ ಹರಡಿ ಜಡೆ....
II ಹೇ ನೀಲಿಗಗನದ ಅಡಿ II
ಝರಿಯಾ ಈ ನೀರು
ನದಿಯನು ಸೇರಿ
ಸಾಗರದಾ ಕಡೆಗೆ..

II ಹೇ ನೀಲಿಗಗನದ ಅಡಿ II

Saturday, October 19, 2013

ಶ್ರಾವಣ-ಕಾರಣ

ಮತ್ತೊಂದು..ಹಿಂದಿ ಕರವೋಕೆ ಪ್ರಿಯರಿಗಾಗಿ 1967 ರ "ಮಿಲನ್" ಚಿತ್ರದ ಮುಕೇಶ್ ಮತ್ತು ಲತಾ ಮಂಗೇಶ್ಕರ್ ಗೀತೆ
ಸಾವನ್ ಕಾ ಮಹಿನಾ ಪವನ್ ಕರೆ ಸೋರ್.... 



ಶ್ರಾವಣ-ಕಾರಣ
***********
ಆತ: ಶ್ರಾವಣ ಮಾಸ ನೋಡು
sವನ ಬಲು ಗೋರ
ಆಕೆ: ಶ್ರಾವಣ ಮಾಸ ನೋಡು
sವನ ಬಲು ಘೋರ
ಆತ: sವನ ಬಲು ಗೋರ...
ಆಕೆ: sವನ ಬಲು ಘೋರ
ಆತ: ಅರೆ ಬಾಬ ಘೋರ ಅಲ್ಲ ಗೋರ.. ಗೋರ...ಗೋರ
ಆಕೆ: sವನ ಬಲು ಗೋರ
ಆತ: ಹಾಂ.... ಮರಗಿಡ ಓಲಾಡಿದರೆ
ಕಂಡಂತೆ ಮೋಡ ಮಯೂರ
ಶ್ರಾವಣ ಮಾಸ ನೋಡು
sವನ ಬಲು ಗೋರ
ಮರಗಿಡ ಓಲಾಡಿದರೆ
ಕಂಡಂತೆ ಮೋಡ ಮಯೂರ
ಆಕೆ: ಶ್ರಾವಣ ಮಾಸ ನೋಡು
sವನ ಬಲು ಗೋರ
ಮರಗಿಡ ಓಲಾಡಿದರೆ
ಕಂಡಂತೆ ಮೋಡ ಮಯೂರ
ಆತ: ರಾಮಾ ಯಾಕಪ್ಪಾ ಹೀಗೆ
        ಗಾಳಿ ಬೀಸುತಿರುವೆ
ಆಕೆ: ಹಡಗ ನೀನು ನಡೆಸು ಗೆಳೆಯಾ
        ಮಾತು ನಿನಗೆ ತರವೆ..
ಆತ: ರಾಮಾ ಯಾಕಪ್ಪಾ ಹೀಗೆ
        ಗಾಳಿ ಬೀಸುತಿರುವೆ
ಆಕೆ: ಹಡಗ ನೀನು ನಡೆಸು ಗೆಳೆಯಾ
        ಮಾತು ನಿನಗೆ ತರವೆ..
ಆತ: ಓಯ್,.ಮೋಡ ಚದುರಿ ಹೋಗೆ
ಬಾನೆಲ್ಲಾ ಚಲ್ಲಿತು ಶಾಯಿ
        ಗಾಳಿಗೆ ಹಾರಾಡಿದರೆ
        ನಿನ್ನ ಸೆರಗೇ ದೋಣಿಗೆ ಹಾಯಿ
ಆಕೆ: ಓ.ಓಓ
ಆಕೆ, ಆತ: ಶ್ರಾವಣ ಮಾಸ ನೋಡು
sವನ ಬಲು ಗೋರ
ಮರಗಿಡ ಓಲಾಡಿದರೆ
ಕಂಡಂತೆ ಮೋಡ ಮಯೂರ
ಆಕೆ: ನೀನೇ ನನ್ನಯಾ ದಡವು
        ದಾಟಿ ಬರಲಿ ಹೇಗೆ
ಆತ: ದಾಟಲೇಕೆ ಹುಡುಗಿ ನೀನು
        ಪ್ರೀತಿ ಗುಣವೇ ಹಾಗೆ
ಆಕೆ: ನೀನೇ ನನ್ನಯಾ ದಡವು
        ದಾಟಿ ಬರಲಿ ಹೇಗೆ
ಆತ: ದಾಟಲೇಕೆ ಹುಡುಗಿ ನೀನು
        ಪ್ರೀತಿ ಗುಣವೇ ಹಾಗೆ
ಆಕೆ: ನಿನ್ನ ಕಣ್ಣೇ ನದಿಯೂ
        ಇಲ್ಲಿ ಮುಳುಗಿದರೇನು ಹಾನಿ
ನಿನ್ನನೇ ನೋಡುತಲಿದ್ದರೆ
ಮಾತು ಹೊರಡದೇ ನಾನು ಮೌನಿ
ಆತ: ಓ ಓ ಓ..
ಆಕೆ, ಆತ: ಶ್ರಾವಣ ಮಾಸ ನೋಡು
sವನ ಬಲು ಗೋರ
ಮರಗಿಡ ಓಲಾಡಿದರೆ
ಕಂಡಂತೆ ಮೋಡ ಮಯೂರ
ಆಕೆ: ಸಖ ನೀನು ದೂರ ಹೋಗಿ
        ಸುಖ ಕಿತ್ತು ಕೊಂಡೆ
        ಅಂದಿನ ನಿನ್ನಯ ಮಾತ
ಎದೆಯಲಿಟ್ಟುಕೊಂಡೆ            II 2 II
ನಿನ್ನಯನೆನಪಲೇ ನನ್ನ
ರಾತ್ರಿ ಹಗಲು ಒಂದೇ
        ಬಂದುಬಿಡು ನೀ ಬೇಗ
        ಒಂದಾಗುವ ನಾವು ಅಂದೇ.
ಆಕೆ: ಶ್ರಾವಣ ಮಾಸ ನೋಡು
sವನ ಬಲು ಗೋರ
ಮರಗಿಡ ಓಲಾಡಿದರೆ

ಕಂಡಂತೆ ಮೋಡ ಮಯೂರ

Friday, September 13, 2013

ಅಖಿಯೋಂಕೆ ಝರೋಕೋಂಸೆ....

ಸ್ನೇಹಿತರೇ, ನಲ್ಮೆಯ ಬ್ಲಾಗ್ ಗೆಳೆಯ ಮತ್ತು ಮುಖಪುಸ್ತಕ ಸಹ ಓದುಗ ಶ್ರೀಕಾಂತ್ ಮಂಜುನಾಥ್ ಎಸೆದ ಒಂದು ಸವಾಲನ್ನು ಸ್ವೀಕರಿಸಿ "ಅಖಿಯೋಂಕೆ ಝರೋಕೋಂಸೆ" ಗೀತೆಯೊಂದರ ಭಾವಾನುವಾದ (ಲಯಕ್ಕೆ ತಕ್ಕಹಾಗೆ) ಪ್ರಯತ್ನಿಸಿದ್ದೇನೆ. ದಯವಿಟ್ಟು ನಿಮ್ಮ ಅನಿಸಿಕೆಯನ್ನು ಹಂಚಿಕೊಳ್ಳಿ. 


ಕಣ್ಣ ಕುಡಿನೋಟದಿ....

ಕಣ್ಣ ಕುಡಿ ನೋಟದಿ ನಿನ್ನ, ಕಂಡೆನಲ್ಲಾ ನಾ ಹೀಗೆಯೇ
ಬಲು ದೂರ ನೀ ಕಂಡೆ, ಬಲು ದೂರಾ ನಾನಿನ ಕಂಡೆ [೨]
ಕಣ್ಣ ಮುಚ್ಚಿದೆ ಕ್ಷಣ ಹೀಗೇ, ಒಮ್ಮೆ ಮನದಲೇ ನಿನ ನೆನೆದೇ
ನೀನು ಮನಸಲೇ ನಗುತಿದ್ದೆ, ಮನ ಮುದಗೊಂಡು ನಗುತಿದ್ದೆ [೨]
                   ಕಣ್ಣ ಕುಡಿ ನೋಟದಿ ನಿನ್ನ, ಕಂಡೆನಲ್ಲಾ ನಾ ಹೀಗೆಯೇ {ಪ}

ಒಂದು ಮನವಿತ್ತು ನನ್ನಾ ಬಳಿಯಲಿ, ಈಗ ಕಾಣದೇ ಹೋಗುತಿದೆ
ಪಡೆದೇ ನಿನ್ನ ಹಾಯೇ ನನ್ನ , ಈ ಮನವೂ ಸೋಲುತಿದೆ [೨]
ನಿನ್ನ ಭರವಸೆ ಆಸೆಯಲಿ, ಕುಂತೆ ನನ್ನನೇ ನಾ ಮರೆತು
ಹೀಗೇ ಕಳೆದು ಹೋಗಲಿ, ನಮ್ಮ ಆಯಸ್ಸು ಜತೆ ಜತೆಗೆ.. [೨]
                    ಕಣ್ಣ ಕುಡಿ ನೋಟದಿ ನಿನ್ನ, ಕಂಡೆನಲ್ಲಾ ನಾ ಹೀಗೆಯೇ {ಪ}

ಬದುಕಿರುವೆ ನಿನ್ನಾ ನೋಡಿಯೇ, ಸತ್ತರೂ ನಿನ್ನಿದುರೇ
ನೀನೆಲ್ಲಿಯೋ ನಾನಲ್ಲಿಯೇ ಜಗವನೇ ಕಂಡಿರುವೆ [೨]
ಹಗಲಿರುಳೂ ಪೂಜಿಸುವೇ, ನಿನ್ನ ಒಳಿತನೇ ನಾ ಬಯಸಿ
ಎಂದೂ ನಮ್ಮ ಈ ನಂಬಿಕೆಯಾ, ಸುಮ ಬಾಡದೇ ಅರಳಲಿ [೨]
                   ಕಣ್ಣ ಕುಡಿ ನೋಟದಿ ನಿನ್ನ, ಕಂಡೆನಲ್ಲಾ ನಾ ಹೀಗೆಯೇ {ಪ}

ಎಂದಿನಿಂದ ನಿನ್ನ ಒಲವಿನ ಬಣ್ಣದೀ ಮಿಂದಿರುವೆ
ಎದ್ದೇ ಇದ್ದು ಮಲಗೇ ಇದ್ದೆ ನಿದ್ದೆಯಲೂ ಎಚ್ಚರದಿ [೨]
ನನ್ನ ಪ್ರೀತಿಯ ಕನಸುಗಳ, ಯಾರಾದರೂ ಕದಿಯುವರೇ
ಮನ ಯೋಚಿಸಿ ಭಯವಾಯ್ತು, ಹೀಗೇ ಯೋಚಿಸಿ ದಿಗಿಲಾಯ್ತು[೨]
                   ಕಣ್ಣ ಕುಡಿ ನೋಟದಿ ನಿನ್ನ, ಕಂಡೆನಲ್ಲಾ ನಾ ಹೀಗೆಯೇ {ಪ}

Wednesday, September 4, 2013

ಹಳ್ಳಿ-ದಿಲ್ಲಿ





ಹಳ್ಳಿ-ದಿಲ್ಲಿ

ಹಳ್ಳಿಯಲೀಗ
ಆ ಕಸುವಿಲ್ಲ
ಬಾವಿ ಕಟ್ಟೆಯೇ
ಬತ್ತಿದೆ, ನೀರಿಲ್ಲ..
ನೀರಿಗೆ ಬರುವ
ನೀರೆಯರ ಆ
ಮನ ಮೋಹಕ
ಸಾಲುಗಳಿಲ್ಲ..
ಗಿಲ್ಲಿಗೆ ಸಿಗುವ
ಮಣ್ಕೊಡವಿಲ್ಲ
ಕೊಡವಲು ಧೂಳಿಲ್ಲ
ಚಾವಡಿಗಳಿಲ್ಲ
ಕಳ್ಳಿ ಬೇಲಿಗಳಿಲ್ಲ
ಕದ್ದೋಡಲು
ಹಿತ್ತಲ ಸೀಬೆಯಿಲ್ಲ
ಕಿತ್ತಳೆ ಮಾವಿಲ್ಲ
ಚಡ್ಡಿಗಳಿಲ್ಲ
ಜೋಬಿಗೆ ಅಂಟು
ಜಾಮೂನು ನಂಟು
ಬೆಲ್ಲದ ಜಿಗಟಿಲ್ಲ
ಬೀದಿ ಜಗುಲಿಗಳಿಲ್ಲ
ಓಣಿ ಗುಂಟಗಳಿಲ್ಲ
ಕೆಸರಾಗುವ
ಎರಚಾಡುವ
ಎಮ್ಮೆಗಳಿಲ್ಲ
ಹೆಮ್ಮೆ ತೋಟಗಳಿಲ್ಲ
ಭಜನೆ ಜಾಗಟೆಯಿಲ್ಲ
ಮಂಡ್ರಾಯನೆತ್ತೋ
ಗೊಣ್ಣೆಸಿರ್ಕನಿಲ್ಲ
ಎಲ್ಲರೊಂದಾಗಿ
ಈದ್-ಗಣೇಶನೆತ್ತುವ
ಸಾಬಿ-ತುರ್ಕನಿಲ್ಲ
ಹರ್ಕು ಕೇರಿಯಿಲ್ಲ
ಮುರ್ಕು ಮೋರಿಯಿಲ್ಲ
ತಿರುಕನಿಲ್ಲ
ಶಾನುಭೋಗ
ತೋಟಿ-ತಳವಾರ
ಗೌಡ-ಗೌಡ್ತಿಯರ
ಗರಿ ಗರಿ ದೌಲತ್ತಿಲ್ಲ
ನವಮಿ ರಥವಿಲ್ಲ
ಬಾಬಯ್ಯನ
ಅಬ್ಬರವಿಲ್ಲ.....
ಏನೆಲ್ಲಾ ಇತ್ತು..!!
ಈಗ ಏನೇನೂ ಇಲ್ಲ
ಕೋಟಿಗೆ ಮಾರಿದ
ತೋಟಿ ತನ್ನೆಲವ
ಅಲ್ಲೇ ನಿರ್ಮಿತ
ಫ್ಯಾಕ್ಟರಿಯಲಿ
ದಿನಗೂಲಿಯಲ್ಲಾ...!!
ಕೆರೆಬತ್ತಿ ಅಲ್ಲೇ
ಅಗರ ಬತ್ತಿ
ಉತ್ಪತ್ತಿ, ತ್ಯಾಜ್ಯ
ಬಣ್ಣದ ಕೆಸರ ಕುಂಟೆ
ಕೇರಿ ಹೈಕಳು
ಸಂಜೆಯಾದರೆ
ಒಪ್ಪೊತ್ತು ತಿಂದು
ಮೂರೊತ್ತು ಕುಡ್ದು
ತೂರಾಡುವರಲ್ಲಾ..!!
ಕಾಲ್ ಸೆಂಟರ್ಗೆ 
ಹುಡ್ಗೀರ ದಂಡು
ಸೊಂಟಕೆ ವ್ಯಾನಿಟಿ
ಕೊಡವೇನು..?
ಸೊಂಟವೇ ಇಲ್ಲಾ..
ಅಕ್ಕಂದಿರೀಗ 
ಶೋಕಿ ಆಂಟಿಯರು
ಕಿಟ್ಟಿ ಪಾರ್ಟಿಗಂಟಿ
ಸೋಬಾನೆ ಗೀಗಿ
ಟೀವಿಗೆ ಮೀಸಲು
ನವಮಿ ನಾಟಕ
ಬಯಲಾಟ ಮೋಹಕ
ಉಳಿದಿಲ್ಲ ಈಗ ಇಲ್ಲಿ..
ಅದಕೇ ಏನೋ..
ಮಳೆಯೂ ಅತಿಥಿ
ಬಂದು ಹೋಗುತ್ತೆ
ಬಂದದ್ದೂ ಮರೆಯುತ್ತೆ
ಹಸಿರು ಗದ್ದೆ-ಹೊಲ?
ಅವರೇ ಕೇಳ್ತಾರೆ
ಏನಿವುಗಳೆಲ್ಲಾ??
ಹಳ್ಳಿ- ಹಳ್ಳಿ-ಹಳ್ಳಿ
ಎಲ್ಲಿವೆ ಎಲ್ಲಾ ಆಗಿವೆ
ದಿಲ್ಲಿ ದಿಲ್ಲಿ ದಿಲ್ಲಿ